ಬಾಹ್ಯಾಕಾಶ ವಿಭಾಗ
ಬಾಹ್ಯಾಕಾಶ ವಲಯದಲ್ಲಿ ಐತಿಹಾಸಿಕ ಸುಧಾರಣಾ ಕ್ರಮಗಳಿಗೆ ಚಾಲನೆ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಸಹಭಾಗಿತ್ವಕ್ಕೆ ಅನುಮೋದನೆ
Posted On:
24 JUN 2020 4:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಒಟ್ಟಾರೆ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಸಹಭಾಗಿತ್ವಕ್ಕೆ ಉತ್ತೇಜನ ನೀಡುವ ಗುರಿಯೊಂದಿಗೆ ಬಾಹ್ಯಾಕಾಶ ವಲಯದಲ್ಲಿ ಭಾರಿ ಸುಧಾರಣೆಗಳಿಗೆ ಅನುಮೋದನೆ ನೀಡಿತು. ಭಾರತವನ್ನು ಪರಿವರ್ತಿಸುವ ಹಾಗೂ ದೇಶವನ್ನು ಸ್ವಾವಲಂಬಿ ಮತ್ತು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಪ್ರಧಾನಮಂತ್ರಿಗಳ ದೂರದೃಷ್ಟಿಗೆ ಅನುಗುಣವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ಬಾಹ್ಯಾಕಾಶ ವಲಯದಲ್ಲಿ ಅತ್ಯಾಧುನಿಕ ಸಾಮರ್ಥ್ಯಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಈ ಸುಧಾರಣೆಗಳೊಂದಿಗೆ ವಲಯಕ್ಕೆ ಹೊಸ ಶಕ್ತಿ ಮತ್ತು ಆಯಾಮಗಳು ದೊರಕಲಿದ್ದು, ಅದರಿಂದ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ದೇಶ ಮುಂದಿನ ಹಂತದಲ್ಲಿ ಅಗ್ರಸ್ಥಾನಕ್ಕೇರಲು ಸಹಾಯಕವಾಗಲಿದೆ.
ಇದರಿಂದ ಈ ವಲಯದ ಬೆಳವಣಿಗೆ ಚುರುಕಾಗುವುದಲ್ಲದೆ, ಭಾರತೀಯ ಉದ್ಯಮ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಅಲ್ಲದೆ, ತಂತ್ರಜ್ಞಾನ ವಲಯದಲ್ಲಿ ಭಾರೀ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಭಾರತ ಜಾಗತಿಕ ತಾಂತ್ರಿಕ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಲಿದೆ.
ಪ್ರಮುಖ ಪ್ರಯೋಜನಗಳು:
ನಮ್ಮ ಕೈಗಾರಿಕಾ ಆಧುನೀಕರಣ ಮತ್ತು ಕೈಗಾರಿಕಾ ಮೂಲ ವಿಸ್ತರಣೆಯಲ್ಲಿ ಬಾಹ್ಯಾಕಾಶ ವಲಯ ಅತ್ಯಂತ ಪ್ರಮುಖ ವೇಗವರ್ಧಕ ಪಾತ್ರವನ್ನು ವಹಿಸುತ್ತವೆ. ಉದ್ದೇಶಿತ ಸುಧಾರಣೆಗಳಿಂದ ಬಾಹ್ಯಾಕಾಶ ಸ್ವತ್ತುಗಳನ್ನು ಹಾಗೂ ಸಾಮಾಜಿಕ ಆರ್ಥಿಕ ಬಳಕೆಗೆ ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಆ ಮೂಲಕ ಬಾಹ್ಯಾಕಾಶ ಸ್ವತ್ತು, ದತ್ತಾಂಶ ಮತ್ತು ಸೌಕರ್ಯಗಳ ಲಭ್ಯತೆಯನ್ನು ಸುಧಾರಿಸಲು ನೆರವಾಗಲಿದೆ.
ಹೊಸದಾಗಿ ಸೃಷ್ಟಿಸಿರುವ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಪ್ರಮಾಣೀಕರಣ ಕೇಂದ್ರ (ಐಎನ್-ಎಸ್ ಪಿಎಸಿಇ) ಭಾರತೀಯ ಬಾಹ್ಯಾಕಾಶ ಮೂಲಸೌಕರ್ಯ ಬಳಕೆಗೆ ಖಾಸಗಿ ಕಂಪನಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿ ಕೊಡಲಿದೆ. ಇದು ಉತ್ತೇಜನಕಾರಿ ನೀತಿಗಳು ಹಾಗೂ ಪರಿಸರ ನಿಯಂತ್ರಣ ಸ್ನೇಹಿ ಕ್ರಮಗಳ ಮೂಲಕ ಖಾಸಗಿ ಉದ್ಯಮಗಳಿಗೆ ಬಾಹ್ಯಾಕಾಶ ಚಟುವಟಿಕೆಗಳನ್ನು ಬಳಸಿಕೊಳ್ಳಲು ಬೆಂಬಲ, ಉತ್ತೇಜನ ಮತ್ತು ಮಾರ್ಗದರ್ಶನ ನೀಡಲಿದೆ.
ಸಾರ್ವಜನಿಕ ವಲಯದ ಉದ್ದಿಮೆ ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಲ್)’ ಬಾಹ್ಯಾಕಾಶ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿ, ‘ಪೂರೈಕೆ ಆಧಾರಿತ ಮಾದರಿ’ಯಿಂದ ‘ಬೇಡಿಕೆ ಆಧಾರಿತ ಮಾದರಿ’ಯ ಚಟುವಟಿಕೆಗಳನ್ನಾಗಿ ಪರಿವರ್ತಿಸಲಿದೆ. ಆ ಮೂಲಕ ನಮ್ಮ ಬಾಹ್ಯಾಕಾಶ ಸ್ವತ್ತುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಲಿದೆ.
ಈ ಸುಧಾರಣೆಗಳಿಂದ ಇಸ್ರೋ ಸಂಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲು ಅವಕಾಶ ದೊರಕಲಿದೆ. ಜೊತೆಗೆ ಹೊಸ ತಂತ್ರಜ್ಞಾನಗಳು, ಅನ್ವೇಷಣಾ ಯೋಜನೆಗಳು ಮತ್ತು ಮಾವನ ಬಾಹ್ಯಾಕಾಶ ಯಾತ್ರೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ. ‘ಅವಕಾಶಗಳ ಪ್ರಕಟಣೆ’ ಕಾರ್ಯತಂತ್ರದ ಮೂಲಕ ಖಾಸಗಿ ವಲಯಕ್ಕೆ ಕೆಲವು ಉಪಗ್ರಹಗಳ ಅನ್ವೇಷಣಾ ಯೋಜನೆಗಳನ್ನು ಕೈಗೊಳ್ಳಲು ಮುಕ್ತ ಅವಕಾಶ ದೊರಕಲಿದೆ.
***
(Release ID: 1634223)
Visitor Counter : 248
Read this release in:
English
,
Urdu
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu