ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಮಾಸ್ಕ್ ಗಳ ಕೊರತೆ ನೀಗಿಸಲು ಮನೆಯಲ್ಲೇ  ಮಾಸ್ಕ್(ಮುಖಗವಸು) ತಯಾರಿಸಬಹುದು

Posted On: 02 APR 2020 12:40PM by PIB Bengaluru

ಮಾಸ್ಕ್ ಗಳ ಕೊರತೆ ನೀಗಿಸಲು ಮನೆಯಲ್ಲೇ  ಮಾಸ್ಕ್(ಮುಖಗವಸು) ತಯಾರಿಸಬಹುದು

ಸುಲಭವಾಗಿ ಸಿಗುವ ವಸ್ತುಗಳಿಂದ ವಿನ್ಯಾಸ, ಸರಳ ರೀತಿಯಲ್ಲಿ ಮನೆಯಲ್ಲೇ ಸಿದ್ಧಪಡಿಸಬಹುದು, ಸುಲಭ ಬಳಕೆ ಮತ್ತು ಮರು ಬಳಕೆ

 

ಸಾರ್ವಜನಿಕರು ನನಗೆ ಮುಖಗವಸು(ಮಾಸ್ಕ್) ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಅಲೆದಾಡುತ್ತಿದ್ದಾರೆಯೇ ? ಇದಕ್ಕೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ವಿನೂತನ ಪರಿಹಾರವನ್ನು ನೀಡಿದೆ; ಅದೆಂದರೆ ಮನೆಯಲ್ಲೇ ಸಿದ್ಧಪಡಿಸಿದ ಮುಖಗವಸು(ಮಾಸ್ಕ್) “ಇದು ಯಾರು ಮಾಸ್ಕ್ ಅನ್ನು ಧರಿಸಲು ಬಯಸುತ್ತಾರೋ ಮತ್ತು ಅಂತಹವುಗಳು ಸಿಗುತ್ತಿಲ್ಲವೋ ಅಂತಹವರನ್ನು ಪ್ರಾಥಮಿಕವಾಗಿ ಗುರಿಯಾಗಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಈ ಮಾಸ್ಕ್ ಗಳನ್ನು ಒಗೆಯಬಹುದು ಮತ್ತು ಅವುಗಳನ್ನು ಮರುಬಳಕೆ ಸಹ ಮಾಡಬಹುದು” ಎಂದು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಹಿರಿಯ ಸಲಹೆಗಾರ್ತಿ ಡಾ. ಶೈಲಜಾ ವೈದ್ಯ ಗುಪ್ತ ಹೇಳಿದ್ದಾರೆ.

ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳ ಕೊರತೆ ವಾಸ್ತವವಾಗಿ ಇದೆ. ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಸಾರ್ವಜನಿಕರು ಹೆಚ್ಚಾಗಿ ಶುಚಿತ್ವ ಕಾಪಾಡಿಕೊಳ್ಳಲು ಆತಂಕದಿಂದ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳ ಖರೀದಿಗೆ ಮುಂದಾಗಿದ್ದಾರೆ. ಈ ರೀತಿ ಇದ್ದಕ್ಕಿದ್ದಂತೆ ಭಾರಿ ಬೇಡಿಕೆ ಹೆಚ್ಚಾಗಿರುವುದರಿಂದ ಅಷ್ಟು ಪೂರೈಕೆಯಾಗದೆ ಸ್ವಲ್ಪಮಟ್ಟಿನ ಕೊರತೆ ಎದುರಾಗಿದೆ.

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಮನೆಯಲ್ಲೇ ಸಿದ್ಧಪಡಿಸಬಹುದಾದ ಮಾಸ್ಕ್ ಗಳ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿದೆ. “ಕೊರೋನಾ ವೈರಸ್ ಸಾರ್ಸ್ – ಸಿಒವಿ – 2 ಹರಡದಂತೆ ನಿಯಂತ್ರಿಸುವ ಮಾಸ್ಕ್” ಇದನ್ನು ಮನೆಯಲ್ಲಿರುವ ಬಟ್ಟೆಯಲ್ಲಿಯೇ ತಯಾರಿಸಬಹುದು. ಈ ಉದ್ದೇಶಿತ ಮಾಸ್ಕ್ ತಯಾರಿಕೆ ವಿನ್ಯಾಸವೂ ಅತಿ ಸುಲಭ. ಸಾಮಗ್ರಿಗಳು ಕೂಡ ಮನೆಯಲ್ಲಿಯೇ ದೊರಕುತ್ತವೆ. ಮನೆಯಲ್ಲಿಯೇ ಸುಲಭವಾಗಿ ಅವುಗಳನ್ನು ಸಿದ್ಧಪಡಿಸಬಹುದು, ಸುಲಭವಾಗಿ ಬಳಸಬಹುದು ಮತ್ತು ಮರುಬಳಕೆಯನ್ನೂ ಸಹ ಮಾಡಬಹುದು.

ಮಳಿಗೆಗಳು ಮತ್ತು ಸೇವೆಗಳಲ್ಲಿ ಗ್ರಾಹಕರು ಮಾಸ್ಕ್ ಬಳಸಬೇಕೆಂದು ಸೂಚಿಸಲಾಗುತ್ತಿದೆ, ಕೆಲವು ಅಂಗಡಿಗಳಲ್ಲಿ ಮುಖಗವಸು ಧರಿಸದಿದ್ದರೆ ಕೆಲವು ಸೇವೆಗಳನ್ನು ನೀಡುತ್ತಿಲ್ಲ. ಅಂತಹ ಸಂದರ್ಭಗಳಲ್ಲಿ ಮನೆಯಲ್ಲೇ ಮಾಡಿದ ಮಾಸ್ಕ್ ಗಳು ಸಹಕಾರಿಯಾಗಲಿವೆ. ಹಲವು ಸಾರ್ವಜನಿಕ ಆರೋಗ್ಯ ತಜ್ಞರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದರಿಂದ ಸೋಂಕು ಹರಡುವುದನ್ನು ತಪ್ಪಿಸುತ್ತದೆ ಎಂದು ಸಲಹೆ ಮಾಡುತ್ತಿದ್ದಾರೆ. ಅದಕ್ಕಾಗಿ ಸರಳ ರೀತಿಯಲ್ಲಿ ಬಳಕೆ ಮತ್ತು ಮರುಬಳಕೆ ಮಾಡಬಹುದಾದ ಮಾಸ್ಕ ಮಾಡುವ ಮಾರ್ಗಸೂಚಿಯನ್ನು ನೀಡಲಾಗಿದೆ. ಈ ಮಾದರಿಯನ್ನು ಸರ್ಕಾರೇತರ ಸಂಸ್ಥೆಗಳು, ವ್ಯಕ್ತಿಗಳು ಸ್ವತಂತ್ರವಾಗಿ ಮಾಸ್ಕ್ ಗಳನ್ನು ಸಿದ್ಧಪಡಿಸಬಹುದು ಮತ್ತು ಭಾರತದಾದ್ಯಂತ ಮಾಸ್ಕ್ ಗೆ ಇರುವ ಬೇಡಿಕೆಯನ್ನೂ ಸಹ ಬಳಸಿಕೊಳ್ಳಬಹುದಾಗಿದೆ.

ಗಾಳಿಯಲ್ಲಿ ಇರಬಹುದಾದ ಸಣ್ಣಕಣಗಳು ನಮ್ಮ ಉಸಿರಾಟ ವ್ಯವಸ್ಥೆಯನ್ನು ಸೇರುವ ಮೂಲಕ ಕೊರೋನಾ ಸೋಂಕು ಹರಡುವ ಸಾಧ್ಯತೆಯ ವಿರುದ್ಧ ರಕ್ಷಣಾ ಮಾಸ್ಕ್ ಗಳು ಅವಶ್ಯಕ. ಪುಬ್ ಮೆಡ್ ಪ್ರಕಟಿಸಿರುವ ವಿಶ್ಲೇಷಣಾ ವರದಿಯೊಂದರ ಪ್ರಕಾರ ಶೇ.50ರಷ್ಟು ಜನಸಂಖ್ಯೆ ಮಾಸ್ಕ್ ಗಳನ್ನು ಬಳಸಿದರೆ ಮತ್ತು ಕೇವಲ 50ರಷ್ಟು ಜನಸಂಖ್ಯೆಗೆ ಸೋಂಕು ತಗಲುವ ಸಾಧ್ಯತೆ ಇದೆ. ಒಮ್ಮೆ ಶೇ.80ರಷ್ಟು ಜನಸಂಖ್ಯೆ ಮಾಸ್ಕ್ ಗಳನ್ನು ಧರಿಸಿದರೆ ಸೋಂಕು ಹರಡುವುದನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ. ಮಾಸ್ಕ್ ಗಳನ್ನು ಹೆಚ್ಚಾಗಿ ಜನದಟ್ಟಣೆ ಇರುವ ಪ್ರದೇಶದಲ್ಲಿ ನೆಲೆಸಿರುವವರು ಧರಿಸುವುದು ಸೂಕ್ತ ಎಂದು ಶಿಫಾರಸ್ಸು ಮಾಡಲಾಗಿದೆ.

“ಭಾರತದಲ್ಲಿ ಹಲವು ಜನದಟ್ಟಣೆ ಪ್ರದೇಶಗಳು ಇವೆ, ಅಲ್ಲಿನ ಜನದಟ್ಟಣೆ ನಿಜಕ್ಕೂ ಗಾಬರಿ ಹುಟ್ಟಿಸುವಂತಹದು. ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಪ್ರತಿ ಚದರ ಕಿಲೋಮೀಟರ್ ಗೆ 36,155 ಜನದಟ್ಟಣೆ ಇದೆ. ಇಲ್ಲಿ ಮಾದರಿ ಮತ್ತು ನಿಯಂತ್ರಣಗಳನ್ನು ಮಾಡುವುದು ಅಗಾಧ ಕಷ್ಟಕರ. ಮಾಸ್ಕ್ ಮತ್ತು ಕೈಗಳನ್ನು ತೊಳೆಯುವುದು ಸಹಾಯಕವಾಗುತ್ತದೆ ಮತ್ತು ಆ ಕೆಲಸಗಳನ್ನು ಮನೆಯಲ್ಲೇ ಮಾಡಬಹುದಾಗಿದೆ” ಎಂದು ಡಾ. ಗುಪ್ತ ಭಾರತೀಯ ಸೈನ್ಸ್ ವೈರ್ ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತಾಧಿಕಾರ ಸಮಿತಿಯನ್ನು 2020ರ ಮಾರ್ಚ್ 19ರಂದು ಸ್ಥಾಪಿಸಲಾಯಿತು. ಈ ಸಮಿತಿಯ ಅಧ್ಯಕ್ಷತೆಯನ್ನು ಜಂಟಿಯಾಗಿ ನೀತಿ ಆಯೋಗದ ಸದಸ್ಯ ಪ್ರೊಫೆಸರ್ ವಿನೋದ್ ಪಾಲ್ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ|| ಕೆ. ವಿಜಯ ರಾಘವನ್ ವಹಿಸಿದ್ದಾರೆ. ಇದು ಕೋವಿಡ್-19 ರೋಗ ಮತ್ತು ಸಾರ್ಸ್ – ಸಿಒವಿ-2 ಸೋಂಕಿಗೆ ಸಂಬಂಧಿಸಿದ ಸಂಶೋಧನೆಗಳು ಮತ್ತು ಅಭಿವೃದ್ಧಿಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳುವುದು ಮತ್ತು ವಿಜ್ಞಾನ ಸಂಸ್ಥೆಗಳು, ವಿಜ್ಞಾನಿಗಳು, ಕೈಗಾರಿಕೆಗಳು ಮತ್ತು ನಿಯಂತ್ರಣ ಸಂಸ್ಥೆಗಳ ಜೊತೆ ಸಮನ್ವಯದ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಮನೆಯಲ್ಲಿ ತಯಾರಿಸಬಹುದಾದ  ಮಾಸ್ಕ್ ಗಳ ಕುರಿತು ವಿಸ್ತೃತವಾದ ಮ್ಯಾನ್ಯುಯಲ್ ಅನ್ನು ಈ http://bit.ly/DIYMasksCorona ಲಿಂಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು,



(Release ID: 1610380) Visitor Counter : 165