ಕೃಷಿ ಸಚಿವಾಲಯ
ಕೃಷಿ, ತೋಟಗಾರಿಕೆ ಮತ್ತು ಸಂಬಂಧಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ
Posted On:
28 MAR 2020 1:44PM by PIB Bengaluru
ಕೃಷಿ, ತೋಟಗಾರಿಕೆ ಮತ್ತು ಸಂಬಂಧಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ
ಆಹಾರಧಾನ್ಯಗಳ ಲಭ್ಯತೆ ಖಾತ್ರಿಪಡಿಸುವುದು, ಕಟಾವು ತಡೆ ರಹಿತ ಮುಂದುವರಿಕೆ
ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಕೇಂದ್ರ ಕೃಷಿ ಸಚಿವ ಶ್ರೀ ತೋಮರ್
ರೈತರ ಆತಂಕಗಳಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಿದ್ದ ಮಾರ್ಗಸೂಚಿಗೆ ತಿದ್ದುಪಡಿ ಆದೇಶ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ
ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ಲಾಕ್ ಡೌನ್ ಇದ್ದರೂ ಸಹ ಕೃಷಿ-ತೋಟಗಾರಿಕೆ ಮತ್ತು ಅದರ ಸಂಬಂಧಿ ಚಟುವಟಿಕೆಗಳಿಗೆ ವಿನಾಯಿತಿಯನ್ನು ಘೋಷಿಸಿದೆ. ಇದರಿಂದಾಗಿ ಬೆಳೆಗಳ ಕಟಾವು ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಲಿದೆ. ಈ ಸಂಬಂಧ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಶ್ರೀ ತೋಮರ್ ಅವರು, ಲಾಕ್ ಡೌನ್ ಜಾರಿಯಾದ ಕ್ಷಣದಿಂದ ರೈತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರಂತರ ನಿಗಾವಹಿಸಿದ್ದಾರೆ. ರೈತರು ತಮ್ಮ ಬೆಳೆಗಳ ಕಟಾವು ಮಾಡುವಲ್ಲಿ ಮತ್ತು ಆಹಾರ ಧಾನ್ಯಗಳನ್ನು ಮಂಡಿಗಳಿಗೆ ಸಾಗಾಣೆ ಮಾಡುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ್ದಾರೆ. ರೈತರು ಮತ್ತು ಸಂಬಂಧಿಸಿದ ಸಂಸ್ಥೆಗಳ ಬೇಡಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಮಂತ್ರಿಗಳ ನಿರ್ದೇಶನದಂತೆ ಕೇಂದ್ರ ಸರ್ಕಾರ ವಿಷಯದ ಬಗ್ಗೆ ಅನುಕಂಪದಿಂದ ಮತ್ತು ತ್ವರಿತವಾಗಿ ಪರಿಶೀಲಿಸಿ, ರೈತರು ಮತ್ತು ಸಂಬಂಧಿಸಿದ ಸಮುದಾಯಗಳ ಹಿತ ಕಾಯಲು ವಾಸ್ತವಿಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವಾಲಯ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 10(2)(I) ಅಡಿಯಲ್ಲಿ 2020ರ ಮಾರ್ಚ್ 24 ಮತ್ತು 25ನೇ ದಿನಾಂಕದಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿ ಹೊರಡಿಸಿದ್ದ ಆದೇಶ ಸಂಖ್ಯೆ. 40-3/2020-ಡಿಎಂ-I(ಎ) ಕ್ಕೆ ಎರಡನೇ ತಿದ್ದುಪಡಿಯನ್ನು ಪ್ರಕಟಿಸಿದೆ. ಈ ತಿದ್ದುಪಡಿಯಲ್ಲಿ 21 ದಿನಗಳ ಲಾಕ್ ಡೌನ್ ವೇಳೆ ಕೃಷಿ ಮತ್ತು ಅದರ ಸಂಬಂಧಿ ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ಇನ್ನಿತರ ಚಟುವಟಿಕೆಗಳನ್ನು ಹೊರಗಿಡಲಾಗಿದೆ. ಇದು ಬೆಳೆಗಳ ಕಟಾವಿಗೆ ಇದ್ದ ಅಡೆತಡೆಗಳನ್ನು ನಿವಾರಿಸಲಿದೆ. ಕೃಷಿ ಮತ್ತು ಅದರ ಸಂಬಂಧಿ ಚಟುವಟಿಕೆಗಳಿಗೆ ವಿನಾಯಿತಿ ನೀಡಿದ ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರನ್ನು, ಕೃಷಿ ಸಚಿವರು ಅಭಿನಂದಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಎರಡನೇ ತಿದ್ದುಪಡಿ ಆದೇಶದಲ್ಲಿ ಈ ಕೆಳಗಿನ ವಿಭಾಗಗಳನ್ನು ಲಾಕ್ ಡೌನ್ ನಿಂದ ಹೊರಗಿಡಲಾಗಿದೆ:
ಕನಿಷ್ಠ ಬೆಂಬಲ ಬೆಲೆ(ಎಂ ಎಸ್ ಪಿ) ಕಾರ್ಯನಿರ್ವಹಣೆದಾರರು ಸೇರಿದಂತೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ತೊಡಗಿರುವ ಸಂಸ್ಥೆಗಳು;
ರಾಜ್ಯ ಸರ್ಕಾರಗಳು ಹೊರಡಿಸಿರುವ ಅಧಿಸೂಚಿತ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ನಡೆಸುತ್ತಿರುವ ‘ಮಂಡಿಗಳು’;
ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿಕಾರರು ಮತ್ತು ರೈತರು ಹಾಗೂ ಕೃಷಿ-ತೋಟಗಾರಿಕಾ ಚಟುವಟಿಕೆಗಳು;
ಕೃಷಿ ಉಪಕರಣಗಳಿಗೆ ಸಂಬಂಧಿಸಿದ ಗ್ರಾಹಕ ಬಾಡಿಗೆ ಕೇಂದ್ರಗಳು(ಸಿ ಎಚ್ ಸಿ);
ಬೀಜ ಮತ್ತು ಕೀಟನಾಶಕ, ರಸಗೊಬ್ಬರ ಉತ್ಪಾದನಾ ಮತ್ತು ಪ್ಯಾಕಿಂಗ್ ಘಟಕಗಳು; ಮತ್ತು
ಅಂತರ ಹಾಗೂ ಅಂತರ ರಾಜ್ಯ ಕಟಾವು ಚಟುವಟಿಕೆಗಳು ಮತ್ತು ಬಿತ್ತನೆ ಮಾಡುವ ಯಂತ್ರಗಳು ಹಾಗೂ ಕಟಾವು ಯಂತ್ರಗಳು ಮತ್ತು ಕೃಷಿ/ತೋಟಗಾರಿಕಾ ಸಲಕರಣೆಗಳು
ಲಾಕ್ ಡೌನ್ ವೇಳೆ ರೈತರು ಮತ್ತು ಸಾಮಾನ್ಯ ಜನರು ಯಾವುದೇ ರೀತಿಯ ತೊಂದರೆಗೆ ಒಳಗಾಗಬಾರದು ಮತ್ತು ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸುವುದು ಹಾಗೂ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ತೊಂದರೆಯಾಗಬಾರದು ಎಂದು ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಭಾರತ ಸರ್ಕಾರ ಸಂಬಂಧಿಸಿದ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
*****
(Release ID: 1608906)
Visitor Counter : 277