ಪ್ರಧಾನ ಮಂತ್ರಿಯವರ ಕಛೇರಿ

ಕತಾರ್ ದೊರೆ ಮತ್ತು ಪ್ರಧಾನಮಂತ್ರಿ ನಡುವೆ ದೂರವಾಣಿ ಸಮಾಲೋಚನೆ

Posted On: 26 MAR 2020 10:27PM by PIB Bengaluru

ಕತಾರ್ ದೊರೆ ಮತ್ತು ಪ್ರಧಾನಮಂತ್ರಿ ನಡುವೆ ದೂರವಾಣಿ ಸಮಾಲೋಚನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೂರವಾಣಿ ಮೂಲಕ ಕತಾರ್ ನ ದೊರೆ ಗೌರವಾನ್ವಿತ ಶೇಕ್ ತಮೀಮ್ ಬಿನ್ ಹಮದ್ ಅಲ್ ಥನಿ ಅವರೊಂದಿಗೆ ಸಮಾಲೋಚಿಸಿದರು.
ಉಭಯ ನಾಯಕರು ಕೋವಿಡ್ -19 ಜಾಗತಿಕ ಮಹಾಮಾರಿಯ ಕುರಿತಂತೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಅದರಿಂದಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದರು. ಸೋಂಕು ಹರಡುವುದನ್ನು ತಡೆಯಲು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿಯವರು ಇದಕ್ಕೂ ಮುನ್ನ ನಡೆಸಿದ ಜಿ-20 ನಾಯಕರ ವಸ್ತುಶಃ (ವರ್ಚ್ಯುಯಲ್ ) ಶೃಂಗಸಭೆ ಮತ್ತು ಸಾರ್ಕ್ ರಾಷ್ಟ್ರಗಳು ಕೈಗೊಂಡಿರುವ ಇತ್ತೀಚಿನ ಪ್ರಾದೇಶಿಕ ಉಪಕ್ರಮಗಳ ಬಗ್ಗೆ ಗೌರವಾನ್ವಿತ ದೊರೆಗೆ ಮಾಹಿತಿ ನೀಡಿದರು.
ಸೋಂಕು ಪೀಡಿತ ರಾಷ್ಟ್ರಗಳು ಅದನ್ನು ತಡೆಯಲು ಕೈಗೊಂಡಿರುವ ಎಲ್ಲ ಕ್ರಮಗಳು ಹಾಗೂ ಪ್ರಯತ್ನಗಳು ಶೀಘ್ರ ಹಾಗೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿ ಎಂದು ಉಭಯ ನಾಯಕರು ಭರವಸೆ ವ್ಯಕ್ತಪಡಿಸಿದರು. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಐಕ್ಯತೆ ಮತ್ತು ಮಾಹಿತಿ ವಿನಿಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ವಿಶೇಷವಾಗಿ ಕತಾರ್ ನಲ್ಲಿ ದುಡಿಯುತ್ತಿರುವ ಮತ್ತು ಅಲ್ಲಿಯೇ ನೆಲೆಸಿರುವವರ ಕಲ್ಯಾಣಕ್ಕೆ ವೈಯಕ್ತಿಕ ಗಮನ ಹರಿಸುತ್ತಿರುವ ಗೌರವಾನ್ವಿತ ದೊರೆ ಶೇಕ್ ತಮೀಮ್ ಬಿನ್ ಹಮೀದ್ ಅಲ್ ಥನಿ ಅವರಿಗೆ ಪ್ರಧಾನಮಂತ್ರಿಗಳು ಧನ್ಯವಾದಗಳನ್ನು ಹೇಳಿದರು. ಗೌರವಾನ್ವಿತ ದೊರೆ ಕತಾರ್ ನಲ್ಲಿ ನಲೆಸಿರುವ ಎಲ್ಲ ಭಾರತೀಯ ವಲಸಿಗರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಅವರಿಗೆ ಭರವಸೆ ನೀಡಿದರು.
ಪ್ರಧಾನಮಂತ್ರಿ ಮತ್ತು ಗೌರವಾನ್ವಿತ ದೊರೆ ಅವರು, ಪ್ರಸಕ್ತ ಸನ್ನಿವೇಶದಲ್ಲಿ ನಿರಂತರ ಸಂಪರ್ಕ ಮತ್ತು ಸಮಾಲೋಚನೆಗಳನ್ನು ಕಾಯ್ದುಕೊಳ್ಳಲು ಒಪ್ಪಿದರು.
 


***



(Release ID: 1608483) Visitor Counter : 135