ರೈಲ್ವೇ ಸಚಿವಾಲಯ

COVID-19 ತಡೆಗಟ್ಟಲು ಭಾರತೀಯ ರೈಲ್ವೆಯಿಂದ ಹೆಚ್ಚುವರಿ ಕ್ರಮಗಳ ಘೋಷಣೆ

प्रविष्टि तिथि: 19 MAR 2020 3:42PM by PIB Bengaluru

COVID-19 ತಡೆಗಟ್ಟಲು ಭಾರತೀಯ ರೈಲ್ವೆಯಿಂದ ಹೆಚ್ಚುವರಿ ಕ್ರಮಗಳ ಘೋಷಣೆ

 

ಕೊರೊನಾ ವೈರಸ್ (COVID-19) ಹರಡುವಿಕೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆಯು ಹೆಚ್ಚುವರಿ ಕ್ರಮಗಳನ್ನು ಘೋಷಿಸಿದೆ:

  1. ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಅಪಾಯದ ಹಿರಿಯ ನಾಗರಿಕರ ಅನಗತ್ಯ ಪ್ರಯಾಣವನ್ನು ತಡೆಯುವ ಸಲುವಾಗಿ ರೋಗಿಗಳು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರನ್ನು ಹೊರತುಪಡಿಸಿ ಕಾಯ್ದಿರಿಸದ ಮತ್ತು ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳ ರಿಯಾಯಿತಿಯನ್ನು ಮಾರ್ಚ್ 20 ರಾತ್ರಿ 12 ಗಂಟೆಯಿಂದ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
  2. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಅನಗತ್ಯ ಪ್ರಯಾಣ ಮತ್ತು ರೈಲುಗಳ ದಟ್ಟಣೆಯನ್ನು ತಡೆಯಲು, ಕಡಿಮೆ ಸಂಖ್ಯೆಯ ಪ್ರಯಾಣಿಕರ ಒಟ್ಟು 155 ಜೋಡಿ ರೈಲುಗಳನ್ನು 31.03.2020 ರವರೆಗೆ ರದ್ದುಪಡಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ರೈಲುಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪ್ರಯಾಣಿಕರು ಪ್ರಯಾಣದ ಮಧ್ಯದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಂಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ರದ್ದಾದ ರೈಲುಗಳ ಎಲ್ಲ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಪೂರ್ಣ ಮರುಪಾವತಿ ಮಾಡಲಾಗುತ್ತಿದೆ.
  3. ಶಿಕ್ಷಣ ಸಂಸ್ಥೆಗಳನ್ನು ಹಠಾತ್ತನೆ ಮುಚ್ಚಿದ್ದರಿಂದ ದೇಶದ ಉತ್ತರ ಭಾಗದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಭಾರತದ ದಕ್ಷಿಣ, ಈಶಾನ್ಯ ಮತ್ತು ಪೂರ್ವ ಪ್ರದೇಶಗಳಲ್ಲಿನ ತಮ್ಮ ಮನೆಗಳಿಗೆ ಹಿಂದಿರುಗಲು ಭಾರತೀಯ ರೈಲ್ವೆ ವ್ಯವಸ್ಥೆ ಮಾಡಿದೆ.
  4. ಅನಿವಾರ್ಯವಲ್ಲದ ರೈಲು ಪ್ರಯಾಣವನ್ನು ತಪ್ಪಿಸುವಂತೆ ಮತ್ತು ಅವರು ಪ್ರಯಾಣವನ್ನು ಪ್ರಾರಂಭಿಸುವಾಗ ಅವರಿಗೆ ಜ್ವರ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆಗಳನ್ನು ನೀಡಲಾಗುತ್ತಿದೆ. ಪ್ರಯಾಣದ ಯಾವುದೇ ಹಂತದಲ್ಲಿ ತಮಗೆ ಜ್ವರ ಬಂದಿದೆ ಎನ್ನಿಸಿದರೆ ಪ್ರಯಾಣಿಕರು ವೈದ್ಯಕೀಯ ಚಿಕಿತ್ಸೆ ಮತ್ತು ಹೆಚ್ಚಿನ ಸಹಾಯಕ್ಕಾಗಿ ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಬಹುದು.
  5. COVID-19 ಹರಡಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಅನಗತ್ಯ ಜನಸಂದಣಿಯನ್ನು ತಪ್ಪಿಸಲು ರೈಲ್ವೆ ನಿಲ್ದಾಣಗಳ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆಯನ್ನು 50 ರೂ.ಗಳಿಗೆ ಹೆಚ್ಚಿಸುವಂತೆ DRM ಗಳಿಗೆ ಸೂಚನೆ ನೀಡಲಾಗಿದೆ.
  6. ಸಾರ್ವಜನಿಕರು ಮಾಡಬೇಕಾದ ಹಾಗೂ ಮಾಡಬಾರದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ನಿಯಮಿತವಾಗಿ ಪ್ರಕಟಣೆಗಳನ್ನು ಘೋಷಿಸಲಾಗುತ್ತಿದೆ. ಪ್ರಮುಖವಾಗಿ:

 

  • ಆಗಾಗ್ಗೆ ಕೈಗಳನ್ನು ತೊಳೆಯುವ ಮೂಲಕ ಸ್ವಚ್ಛವಾಗಿಟ್ಟುಕೊಳ್ಳುವುದು
  • ಸೀನುವಾಗ ಮತ್ತು ಕೆಮ್ಮುವಾಗ ಇತರರಿಂದ ದೂರವನ್ನು ಕಾಪಾಡಿಕೊಳ್ಳುವುದು ಮತ್ತು ಮೂಗು, ಬಾಯಿ ಮುಚ್ಚಿಕೊಳ್ಳುವುದು
  • ಯಾರಿಗಾದರೂ ಜ್ವರ ಬಂದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು- (ಪ್ರಯಾಣಿಸಬೇಡಿ ಮತ್ತು ತಕ್ಷಣ ವೈದ್ಯರಿಗೆ ತಿಳಿಸಿ)
  • ಸಾರ್ವಜನಿಕ ಸ್ಥಳ ಮತ್ತು ರೈಲ್ವೆ ಆವರಣದಲ್ಲಿ ಉಗುಳಬಾರದು
  • ಜನದಟ್ಟಣೆಯಿಂದ ದೂರವಿರುವುದು ಮತ್ತು ಉಪನಗರ ರೈಲುಗಳು ಸೇರಿದಂತೆ ರೈಲುಗಳಲ್ಲಿ ಪ್ರಯಾಣಿಕರ ನಡುವೆ ಆದಷ್ಟು ದೂರವಿರುವುದನ್ನು ಖಚಿತಪಡಿಸಿಕೊಳ್ಳುವುದು.

***


(रिलीज़ आईडी: 1607215) आगंतुक पटल : 139
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Tamil , Telugu