ಪ್ರಧಾನ ಮಂತ್ರಿಯವರ ಕಛೇರಿ
ಜಂಟಿ ಹೇಳಿಕೆ: ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕುರಿತ ದೃಷ್ಟಿ ಮತ್ತು ಸಿದ್ಧಾಂತಗಳು
Posted On:
25 FEB 2020 6:30PM by PIB Bengaluru
ಜಂಟಿ ಹೇಳಿಕೆ: ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕುರಿತ ದೃಷ್ಟಿ ಮತ್ತು ಸಿದ್ಧಾಂತಗಳು
ಅಮೆರಿಕ ಅಧ್ಯಕ್ಷ ಶ್ರೀ ಡೊನಾಲ್ಡ್ ಜೆ. ಟ್ರಂಪ್ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಫೆಬ್ರವರಿ 24-25ರಂದು ಭಾರತಕ್ಕೆ ಭೇಟಿ ನೀಡಿದರು.
ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ
ಸ್ವಾತಂತ್ರ್ಯದ ಮಹತ್ವ, ಎಲ್ಲಾ ನಾಗರಿಕರಿಗೆ ಸಮಾನ ಗೌರವ, ಮಾನವ ಹಕ್ಕುಗಳು ಮತ್ತು ಕಾನೂನಿಗೆ ಬದ್ಧತೆಯನ್ನು ತೋರಿಸುವ ಸಾರ್ವಭೌಮ ಮತ್ತು ಶಕ್ತಿಶಾಲಿ ಪ್ರಜಾಪ್ರಭುತ್ವಗಳ ನಾಯಕರಾದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಪರಸ್ಪರ ನಂಬಿಕೆ, ಆಸಕ್ತಿ, ಸದ್ಭಾವನೆ ಮತ್ತು ನಾಗರಿಕರನ್ನು ತೊಡಗಿಸಿಕೊಳ್ಳುವ ಉದ್ದೇಶ ಹೊಂದಿರುವ ಭಾರತ-ಅಮೆರಿಕದ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದಾಗಿ ಪಣ ತೊಟ್ಟಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವುದಾಗಿ ವಾಗ್ದಾನ ಮಾಡಿದ್ದಾರೆ. ವಿಶೇಷವಾಗಿ ಕಡಲ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿನ ಜಾಗೃತಿ ಮತ್ತು ಮಾಹಿತಿ ಹಂಚಿಕೆ; ಜಂಟಿ ಸಹಕಾರ; ಮಿಲಿಟರಿ ಸಂಪರ್ಕ ಸಿಬ್ಬಂದಿ ವಿನಿಮಯ; ಎಲ್ಲಾ ರಕ್ಷಣಾ ಸೇವೆಗಳು ಮತ್ತು ವಿಶೇಷ ಪಡೆಗಳ ನಡುವೆ ಸುಧಾರಿತ ತರಬೇತಿ ಮತ್ತು ವಿಸ್ತೃತ ಅಭ್ಯಾಸ; ಸುಧಾರಿತ ರಕ್ಷಣಾ ಬಿಡಿಭಾಗಗಳು, ಉಪಕರಣಗಳು ಮತ್ತು ವೇದಿಕೆಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಬಗ್ಗೆ ನಿಕಟ ಸಹಯೋಗ; ಮತ್ತು ರಕ್ಷಣಾ ಉದ್ಯಮಗಳ ನಡುವಿನ ಪಾಲುದಾರಿಕೆಯ ಮೂಲಕ ಸಹಕಾರಕ್ಕೆ ಉಭಯ ನಾಯಕರು ವಾಗ್ದಾನ ಮಾಡಿದ್ದಾರೆ.
ಬಲವಾದ ಮತ್ತು ಸಮರ್ಥವಾದ ಭಾರತೀಯ ಮಿಲಿಟರಿಯು ಇಂಡೋ-ಪೆಸಿಫಿಕ್ ನಲ್ಲಿ ಶಾಂತಿ, ಸ್ಥಿರತೆ ಯನ್ನು ಬೆಂಬಲಿಸುತ್ತದೆ ಎಂಬುದನ್ನು ಉಲ್ಲೇಖಿಸಿದ ಮತ್ತು ಭಾರತಕ್ಕೆ ಸುಧಾರಿತ ಅಮೆರಿಕ ಮಿಲಿಟರಿ ತಂತ್ರಜ್ಞಾನದ ವರ್ಗಾವಣೆಯನ್ನು ಪುನರುಚ್ಚರಿಸಿದ ಅಧ್ಯಕ್ಷ ಟ್ರಂಪ್ ಅವರು, ಎಂಎಚ್ -60 ಆರ್ ನೌಕಾಪಡೆ ಮತ್ತು ಎಹೆಚ್ -64 ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಭಾರತದ ನಿರ್ಧಾರವನ್ನು ಸ್ವಾಗತಿಸಿದರು. ಇದರಿಂದಾಗಿ ಭದ್ರತಾ ಆಸಕ್ತಿಗಳು, ಉದ್ಯೋಗ ಬೆಳವಣಿಗೆ ಮತ್ತು ಎರಡೂ ದೇಶಗಳ ನಡುವಿನ ಕೈಗಾರಿಕಾ ಸಹಕಾರ ವೃದ್ಧಿಸುತ್ತದೆ. ಭಾರತ ಹೊಸ ರಕ್ಷಣಾ ಸಾಮರ್ಥ್ಯಗಳನ್ನು ಪಡೆಯುವ ಪ್ರಯತ್ನದಲ್ಲಿರುವಾಗ, ಖರೀದಿ ಮತ್ತು ತಂತ್ರಜ್ಞಾನ ವರ್ಗಾವಣೆ ಉದ್ದೇಶಗಳಲ್ಲಿ ಪ್ರಮುಖ ರಕ್ಷಣಾ ಪಾಲುದಾರರಾಗಿ ಭಾರತದ ಸ್ಥಾನಮಾನವನ್ನು ಅಧ್ಯಕ್ಷ ಟ್ರಂಪ್ ಪುನರುಚ್ಚರಿಸಿದ್ದಾರೆ. ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ ಸೇರಿದಂತೆ ರಕ್ಷಣಾ ಸಹಕಾರದ ಒಪ್ಪಂದಗಳ ತ್ವರಿತ ತೀರ್ಮಾನಕ್ಕೆ ನಾಯಕರು ಎದುರು ನೋಡುತ್ತಿದ್ದರು.
ಪರಸ್ಪರ ಸಹಕಾರದ ಮೂಲಕ ತಮ್ಮ ದೇಶಗಳ ಭದ್ರತೆಯನ್ನು ಹೆಚ್ಚಿಸಲು ಮತ್ತು ಮಾನವ ಕಳ್ಳಸಾಗಣೆ, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಸೈಬರ್ ಅಪರಾಧಗಳ ವಿರುದ್ಧ ಜಂಟಿಯಾಗಿ ಹೋರಾಡಲು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಿರ್ಧರಿಸಿದರು. ದೇಶದ ಭದ್ರತಾ ಸಂವಾದವನ್ನು ಪುನರುಜ್ಜೀವನಗೊಳಿಸುವ ಅಮೆರಿಕ ಮತ್ತು ಭಾರತದ ಗೃಹ ಸಚಿವಾಲಗಳ ನಿರ್ಧಾರವನ್ನು ಅವರು ಸ್ವಾಗತಿಸಿದರು. ಅಕ್ರಮ ಮಾದಕ ವಸ್ತುಗಳಿಂದ ತಮ್ಮ ನಾಗರಿಕರಿಗೆ ಉಂಟಾಗಿರುವ ಬೆದರಿಕೆಯನ್ನು ಎದುರಿಸುವ ಬದ್ಧತೆಯ ಸಾಕ್ಷಿಯಾಗಿ ಪ್ರದರ್ಶನವಾಗಿ, ತಮ್ಮ ಕಾನೂನು ಜಾರಿ ಸಂಸ್ಥೆಗಳ ನಡುವೆ ಹೊಸ ಮಾದಕ ವಸ್ತು ಪ್ರತಿರೋಧ ಕಾರ್ಯಪಡೆಯನ್ನು ಸ್ಥಾಪಿಸುವುದಾಗಿ ಘೋಷಿಸಿದರು.
ಭಾರತ-ಅಮೆರಿಕ ಸಂಬಂಧದ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಗುರುತಿಸಿದ್ದಾರೆ. ಅಮೆರಿಕ ಮತ್ತು ಭಾರತೀಯ ಆರ್ಥಿಕತೆಗಳಿಗೆ ಅನುಕೂಲವಾಗುವಂತಹ ದೀರ್ಘಕಾಲೀನ ವ್ಯಾಪಾರ ಸ್ಥಿರತೆಯ ಅಗತ್ಯವನ್ನೂ ಅವರು ಗುರುತಿಸಿದ್ದಾರೆ. ಈ ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಅವರು ಒಪ್ಪಿಕೊಂಡರು, ಇದು ದ್ವಿಪಕ್ಷೀಯ ವಾಣಿಜ್ಯ ಸಂಬಂಧಗಳ ನೈಜ ಮಹತ್ವಾಕಾಂಕ್ಷೆ ಮತ್ತು ಸಂಪೂರ್ಣ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಸಮಗ್ರ ಉಭಯಪಕ್ಷೀಯ ವ್ಯಾಪಾರ ಒಪ್ಪಂದದ ಒಂದು ಹಂತವಾಗಿ ಪರಿಣಮಿಸಬಹುದು, ಎರಡೂ ದೇಶಗಳಲ್ಲಿ ಸಮೃದ್ಧಿ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಮುಂದಾಗಬಹುದು ಎಂದು ಅವರು ಆಶಿಸಿದ್ದಾರೆ.
ಹೈಡ್ರೋಕಾರ್ಬನ್‌ಗಳಲ್ಲಿನ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಸಂಪರ್ಕವನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಸ್ವಾಗತಿಸಿದರು. ತಮ್ಮ ಕಾರ್ಯತಂತ್ರದ ಇಂಧನ ಸಹಭಾಗಿತ್ವದ ಮೂಲಕ, ಭಾರತ ಮತ್ತು ಅಮೆರಿಕ ಇಂಧನ ಸುರಕ್ಷತೆಯನ್ನು ಹೆಚ್ಚಿಸಲು, ಆಯಾ ಇಂಧನ ಕ್ಷೇತ್ರಗಳಲ್ಲಿ ಶಕ್ತಿ ಮತ್ತು ನಾವೀನ್ಯತೆ ಸಂಪರ್ಕಗಳನ್ನು ವಿಸ್ತರಿಸಲು, ಕಾರ್ಯತಂತ್ರದ ಜೋಡಣೆಯನ್ನು ಹೆಚ್ಚಿಸಲು ಮತ್ತು ಉದ್ಯಮ ಮತ್ತು ಇತರ ಮಧ್ಯಸ್ಥಗಾರರ ನಡುವೆ ಹೆಚ್ಚಿನ ಸಹಭಾಗಿತ್ವವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕೋಕಿಂಗ್ / ಮೆಟಲರ್ಜಿಕಲ್ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲಕ್ಕಾಗಿ ತನ್ನ ಆಮದು ಮೂಲವನ್ನು ವೈವಿಧ್ಯಗೊಳಿಸುವ ಭಾರತದ ಗುರಿಯನ್ನು ಪೂರೈಸುವ ಅಮೆರಿಕ ಸಾಮರ್ಥ್ಯವನ್ನು ಗಮನಿಸಿದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್, ಭಾರತೀಯ ಮಾರುಕಟ್ಟೆಗೆ ಎಲ್ಎನ್ ಜಿ ಪ್ರವೇಶವನ್ನು ವೇಗಗೊಳಿಸುವ ಉದ್ದೇಶದ ಇತ್ತೀಚಿನ ವಾಣಿಜ್ಯ ವ್ಯವಸ್ಥೆಗಳನ್ನು ಸ್ವಾಗತಿಸಿದರು. ಭಾರತದಲ್ಲಿ ಆರು ಪರಮಾಣು ರಿಯಾಕ್ಟರ್‌ಗಳನ್ನು ನಿರ್ಮಿಸುವ ತಾಂತ್ರಿಕ-ವಾಣಿಜ್ಯ ಪ್ರಸ್ತಾಪವನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಕಂಪನಿಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಪ್ರೋತ್ಸಾಹಿಸಿದರು.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ತಮ್ಮ ದೀರ್ಘಕಾಲದ ಮತ್ತು ಪ್ರಾಯೋಗಿಕ ಸಹಯೋಗದ ಬಗ್ಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ತೃಪ್ತಿ ವ್ಯಕ್ತಪಡಿಸಿದರು. 2022 ರಲ್ಲಿ ವಿಶ್ವದ ಮೊದಲ ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹದ ಅಭಿವೃದ್ಧಿ ಮತ್ತು ಉಡಾವಣೆಯ ಜಂಟಿ ಕಾರ್ಯಾಚರಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಗಳ ಪ್ರಯತ್ನವನ್ನು ಅವರು ಸ್ವಾಗತಿಸಿದರು. ಭೂಮಿಯ ವೀಕ್ಷಣೆ, ಮಂಗಳ ಮತ್ತು ಗ್ರಹಗಳ ಪರಿಶೋಧನೆ, ಹೆಲಿಯೊಫಿಸಿಕ್ಸ್, ಮಾನವ ಸಹಿತ ಬಾಹ್ಯಾಕಾಶ ಹಾರಾಟ ಮತ್ತು ವಾಣಿಜ್ಯ ಬಾಹ್ಯಾಕಾಶ ಸಹಕಾರವನ್ನು ಮುನ್ನಡೆಸುವ ಮಾತುಕತೆಗಳನ್ನು ಅವರು ಶ್ಲಾಘಿಸಿದರು.
"ಯಂಗ್ ಇನ್ನೋವೇಟರ್ಸ್" ಇಂಟರ್ನ್‌ಶಿಪ್ ಸೇರಿದಂತೆ ಉನ್ನತ ಶಿಕ್ಷಣ ಸಹಯೋಗ ಮತ್ತು ಶೈಕ್ಷಣಿಕ ವಿನಿಮಯ ಅವಕಾಶಗಳನ್ನು ಹೆಚ್ಚಿಸುವ ಇಚ್ಛೆಯನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ವ್ಯಕ್ತಪಡಿಸಿದರು ಮತ್ತು ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಸ್ವಾಗತಿಸಿದರು.
COVID-19 ನಂತಹ ರೋಗವನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸಲು ಜಾಗತಿಕ ಪ್ರಯತ್ನಗಳಿಗೆ ಬೆಂಬಲವಾಗಿ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ತಡೆಗಟ್ಟುವಿಕೆ, ತ್ವರಿತ ಪತ್ತೆ ಹಚ್ಚುವಿಕೆ ಮತ್ತು ತ್ವರಿತ ಪ್ರತಿಕ್ರಿಯೆ ಕ್ಷೇತ್ರಗಳಲ್ಲಿ ತಮ್ಮ ಯಶಸ್ವಿ ಪ್ರಯತ್ನಗಳನ್ನು ಮುಂದುವರಿಸಲು ಬದ್ಧರಾಗಿದ್ದಾರೆ. ಭಾರತ ಮತ್ತು ಅಮೆರಿಕದ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಔಷಧಿಗಳ ಲಭ್ಯತೆಯನ್ನು ಉತ್ತೇಜಿಸುವ ದ್ವಿಪಕ್ಷೀಯ ತಿಳುವಳಿಕೆ ಒಪ್ಪಂದವನ್ನು (ಎಂಒಯು) ಅವರು ಶ್ಲಾಘಿಸಿದರು. ಎರಡೂ ದೇಶಗಳು ನೂತನ ವಿಧಾನಗಳ ಮೂಲಕ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಸಹಾಯ ಮಾಡುವ ಒಪ್ಪಂದದ ತೀರ್ಮಾನವನ್ನು ಅವರು ಸ್ವಾಗತಿಸಿದರು.
ಇಂಡೋ-ಪೆಸಿಫಿಕ್ ನಲ್ಲಿ ಸಂಯೋಜಿತ ಕಾರ್ಯತಂತ್ರ
ಭಾರತ ಮತ್ತು ಅಮೆರಿಕ ನಡುವಿನ ನಿಕಟ ಸಹಭಾಗಿತ್ವವು ಮುಕ್ತ, ಅಂತರ್ಗತ, ಶಾಂತಿಯುತ ಮತ್ತು ಸಮೃದ್ಧವಾದ ಇಂಡೋ-ಪೆಸಿಫಿಕ್ ಪ್ರದೇಶವನ್ನು ಕೇಂದ್ರೀಕರಿಸಿದೆ. ಅಂತರರಾಷ್ಟ್ರೀಯ ಕಾನೂನು ಮತ್ತು ಉತ್ತಮ ಆಡಳಿತವನ್ನು ಅನುಸರಿಸುವುದು; ನ್ಯಾವಿಗೇಷನ್, ಓವರ್‌ಫ್ಲೈಟ್ ಮತ್ತು ಸಮುದ್ರಗಳ ಇತರ ಕಾನೂನುಬದ್ಧ ಬಳಕೆಗಳ ಸುರಕ್ಷತೆ ಮತ್ತು ಸ್ವಾತಂತ್ರ್ಯಕ್ಕೆ ಬೆಂಬಲ; ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ; ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಕಡಲ ವಿವಾದಗಳ ಶಾಂತಿಯುತ ಪರಿಹಾರಕ್ಕಾಗಿ ವಕಾಲತ್ತು ಇವುಗಳು ಆಸಿಯಾನ್ ಕೇಂದ್ರಿತ ಸಹಕಾರವನ್ನು ಆಧರಿಸಿವೆ.
ಭದ್ರತೆಯ ಪೂರೈಕೆದಾರನಾಗಿ ಹಾಗೂ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಅಭಿವೃದ್ಧಿ ಮತ್ತು ಮಾನವೀಯ ನೆರವಿನಲ್ಲಿ ಭಾರತದ ಪಾತ್ರವನ್ನು ಅಮೆರಿಕ ಶ್ಲಾಘಿಸುತ್ತದೆ. ಭಾರತ ಮತ್ತು ಅಮೆರಿಕ ಈ ಪ್ರದೇಶದಲ್ಲಿ ಸುಸ್ಥಿರ, ಪಾರದರ್ಶಕ, ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿಗೆ ಬದ್ಧವಾಗಿವೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ ಯು.ಎಸ್. ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್‌ಸಿ) ನ 600 ಮಿಲಿಯನ್ ಡಾಲರ್ ಹಣಕಾಸು ನೆರವಿನ ಘೋಷಣೆಯನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಸ್ವಾಗತಿಸಿದರು. ಈ ವರ್ಷ ಭಾರತದಲ್ಲಿ ಶಾಶ್ವತ ಉಪಸ್ಥಿತಿಯನ್ನು ಸ್ಥಾಪಿಸುವ ಡಿಎಫ್‌ಸಿಯ ನಿರ್ಧಾರವನ್ನು ಸ್ವಾಗತಿಸಿದರು.
ಇಂಡೋ-ಪೆಸಿಫಿಕ್ ಮತ್ತು ಜಾಗತಿಕವಾಗಿ ಪರಿಣಾಮಕಾರಿ ಅಭಿವೃದ್ಧಿ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ತಮ್ಮ ದೇಶಗಳ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಮೂರನೇ ರಾಷ್ಟ್ರಗಳಲ್ಲಿನ ಸಹಕಾರಕ್ಕಾಗಿ ಯುಎಸ್ಐಐಡಿ ಮತ್ತು ಭಾರತದ ಅಭಿವೃದ್ಧಿ ಸಹಭಾಗಿತ್ವ ಆಡಳಿತದ ನಡುವೆ ಹೊಸ ಸಹಭಾಗಿತ್ವವನ್ನು ಎದುರು ನೋಡುತ್ತಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಅರ್ಥಪೂರ್ಣವಾದ ನೀತಿ ಸಂಹಿತೆಯ ಪ್ರಯತ್ನಗಳನ್ನು ಭಾರತ ಮತ್ತು ಅಮೆರಿಕ ಗಮನಿಸಿವೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಎಲ್ಲಾ ರಾಷ್ಟ್ರಗಳ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಪೂರ್ವಾಗ್ರಹ ಮಾಡಬಾರದು ಎಂದು ಗಂಭೀರವಾಗಿ ಒತ್ತಾಯಿಸಿದವು.
ಭಾರತ-ಅಮೆರಿಕ-ಜಪಾನ್ ತ್ರಿಪಕ್ಷೀಯ ಶೃಂಗಸಭೆಗಳ ಮೂಲಕ ಸಮಾಲೋಚನೆಯನ್ನು ಬಲಪಡಿಸಲು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದಾರೆ. ಭಾರತ ಮತ್ತು ಅಮೆರಿಕ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ 2 + 2 ಮಂತ್ರಿಗಳ ಸಭೆ ಕಾರ್ಯವಿಧಾನ; ಮತ್ತು ಭಾರತ-ಯು.ಎಸ್-ಆಸ್ಟ್ರೇಲಿಯಾ-ಜಪಾನ್ ಚತುಷ್ಕೋನ ಸಮಾಲೋಚನೆಗಳು ಇವುಗಳಲ್ಲಿ ಸೇರಿವೆ.. ಅಮೆರಿಕ, ಭಾರತ ಮತ್ತು ಇತರ ಪಾಲುದಾರರಲ್ಲಿ ಕಡಲ ಜಾಗೃತಿ ಹಂಚಿಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಎದುರು ನೋಡುತ್ತಿದ್ದಾರೆ.
ಜಾಗತಿಕ ನಾಯಕತ್ವಕ್ಕಾಗಿ ಸಹಭಾಗಿತ್ವ
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್, ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಸುಧಾರಿಸಲು ಮತ್ತು ಅವುಗಳ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ. ಸುಧಾರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕಾಗಿ ಅಮೆರಿಕದ ಬೆಂಬಲವನ್ನು ಅಧ್ಯಕ್ಷ ಟ್ರಂಪ್ ಪುನರುಚ್ಚರಿಸಿದರು. ಪರಮಾಣು ಸರಬರಾಜುದಾರರ ಗುಂಪಿಗೆ ಭಾರತದ ಪ್ರವೇಶಕ್ಕೆ ಅಮೆರಿಕ ಬೆಂಬಲವನ್ನು ಅವರು ಪುನರುಚ್ಚರಿಸಿದರು.
ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ-ಆದಾಯದ ದೇಶಗಳಲ್ಲಿ ಸಾರ್ವಭೌಮ ಸಾಲವನ್ನು ನಿಯಂತ್ರಿಸಲು, ಸಾಲಗಾರರು ಮತ್ತು ಸಾಲನೀಡುವವರಿಗೆ ಜವಾಬ್ದಾರಿಯುತ, ಪಾರದರ್ಶಕ ಮತ್ತು ಸುಸ್ಥಿರ ಹಣಕಾಸು ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ಭಾರತ ಮತ್ತು ಅಮೆರಿಕ ಗುರುತಿಸುತ್ತವೆ. ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಗೆ ಉನ್ನತ-ಗುಣಮಟ್ಟದ ವಿಶ್ವಾಸಾರ್ಹ ಮಾನದಂಡಗಳನ್ನು ಉತ್ತೇಜಿಸಲು ಸರ್ಕಾರಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಒಟ್ಟುಗೂಡಿಸುವ ಬಹು-ಪಾಲುದಾರರ ಉಪಕ್ರಮವಾದ ಬ್ಲೂ ಡಾಟ್ ನೆಟ್‌ವರ್ಕ್ ಪರಿಕಲ್ಪನೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಆಸಕ್ತಿ ವ್ಯಕ್ತಪಡಿಸಿದರು.
ಹಣಕಾಸು, ತರಬೇತಿ ಮತ್ತು ಮಾರ್ಗದರ್ಶನ ಉಪಕ್ರಮಗಳ ಮೂಲಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಶಿಕ್ಷಣ, ಆರ್ಥಿಕ ಸಬಲೀಕರಣ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸುವ ಮಹತ್ವವನ್ನು ಪ್ರಧಾನ ಮಂತ್ರಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಗಮನಿಸಿದರು, ಜೊತೆಗೆ ಅಮೆರಿಕದ ಮಹಿಳಾ ಜಾಗತಿಕ ಅಭಿವೃದ್ಧಿ ಮತ್ತು ಸಮೃದ್ಧಿ (ಡಬ್ಲ್ಯು-ಜಿಡಿಪಿ) ಉಪಕ್ರಮ ಮತ್ತು ಭಾರತ ಸರ್ಕಾರದ 'ಬೇಟಿ ಬಚಾವೊ ಬೇಟಿ ಪದಾವೊ' ಕಾರ್ಯಕ್ರಮಕ್ಕೆ ಅನುಗುಣವಾಗಿ ಆರ್ಥಿಕತೆಯಲ್ಲಿ ಅವರ ಸಂಪೂರ್ಣ ಮತ್ತು ಮುಕ್ತ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಕ್ರಮಗಳ ಮಹತ್ವವನ್ನೂ ಅವರು ಗಮನಿಸಿದರು.
ಭಾರತ ಮತ್ತು ಅಮೆರಿಕ ರಾಷ್ಟ್ರಗಳು, ಸಾರ್ವಭೌಮ, ಪ್ರಜಾಪ್ರಭುತ್ವ, ಅಂತರ್ಗತ, ಸ್ಥಿರ ಮತ್ತು ಸಮೃದ್ಧ ಅಫ್ಘಾನಿಸ್ತಾನದಲ್ಲಿ ಆಸಕ್ತಿಯನ್ನು ಹೊಂದಿವೆ. ಸುಸ್ಥಿರ ಶಾಂತಿಗೆ ಕಾರಣವಾಗುವ, ಹಿಂಸಾಚಾರವನ್ನು ನಿಲ್ಲಿಸುವ; ಭಯೋತ್ಪಾದಕ ಸುರಕ್ಷಿತ ತಾಣಗಳ ನಿರ್ಮೂಲನೆ ಮಾಡಲು ಮತ್ತು ಕಳೆದ 18 ವರ್ಷಗಳ ಲಾಭಗಳ ಸಂರಕ್ಷಣೆ ಮಾಡಲು ಅಫಘಾನ್ ನೇತೃತ್ವದ ಮತ್ತು ಅಫಘಾನ್ ಒಡೆತನದ ಶಾಂತಿ ಮತ್ತು ಸಾಮರಸ್ಯ ಪ್ರಕ್ರಿಯೆಯನ್ನು ಇವು ಬೆಂಬಲಿಸುತ್ತವೆ, ಅಫ್ಘಾನಿಸ್ತಾನದಲ್ಲಿ ಸಂಪರ್ಕವನ್ನು ಸ್ಥಿರಗೊಳಿಸಲು ಭಾರತದ ನೆರವಿನ ಪಾತ್ರವನ್ನು ಅಧ್ಯಕ್ಷ ಟ್ರಂಪ್ ಸ್ವಾಗತಿಸಿದರು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಯಾವುದೇ ಭಯೋತ್ಪಾದಕ ಚಟುವಟಿಕೆ ಮತ್ತು ಎಲ್ಲ ಮಾದರಿಯ ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿದರು. ಭಯೋತ್ಪಾದಕ ದಾಳಿ ನಡೆಸಲು ತನ್ನ ಪ್ರದೇಶವನ್ನು ಬಳಸದಂತೆ ನೋಡಿಕೊಳ್ಳುವಂತೆ ಮತ್ತು 26/11 ರ ಮುಂಬೈ ದಾಳಿ ಮತ್ತು ಪಠಾಣ್‌ಕೋಟ್ ದಾಳಿ ಸೇರಿದಂತೆ ಇಂತಹ ದಾಳಿಯ ಹಿಂದಿರುವ ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮಕ್ಕೆ ಅವರು ಪಾಕಿಸ್ತಾನಕ್ಕೆ ಕರೆ ನೀಡಿದರು. ಅಲ್-ಖೈದಾ, ಐಸಿಸ್, ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತಯ್ಯೀಬಾ, ಹಿಜ್-ಉಲ್ ಮುಜಾಹಿದ್ದೀನ್, ಹಕ್ಕಾನಿ ನೆಟ್‌ವರ್ಕ್, ಟಿಟಿಪಿ, ಡಿ-ಕಂಪನಿ ಮತ್ತು ಅವುಗಳ ಎಲ್ಲಾ ಅಂಗಸಂಸ್ಥೆಗಳು ಸೇರಿದಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು.
ಭಾರತ ಮತ್ತು ಅಮೆರಿಕ ವ್ಯಾಪಾರ ಮತ್ತು ಸಂವಹನಕ್ಕೆ ಅನುಕೂಲವಾಗುವ ಮುಕ್ತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಇಂಟರ್‌ನೆಟ್‌ಗೆ ಬದ್ಧವಾಗಿವೆ. ಭಾರತ ಮತ್ತು ಅಮೆರಿಕ ಸುರಕ್ಷಿತ ಮತ್ತು ವಿಶ್ವಾಸಾರ್ಹವಾದ ನವೀನ ಡಿಜಿಟಲ್ ಪರಿಸರ ವ್ಯವಸ್ಥೆಯ ಅಗತ್ಯವನ್ನು ಗುರುತಿಸಿದವೆ ಮತ್ತು ಮಾಹಿತಿ ಮತ್ತು ಡೇಟಾದ ಹರಿವನ್ನು ಸುಗಮಗೊಳಿಸುತ್ತವೆ. ಕಾರ್ಯತಂತ್ರದ ಸಾಮಗ್ರಿಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳ ಮುಕ್ತ, ಸುರಕ್ಷಿತ ಮತ್ತು ಸ್ಥಿತಿಸ್ಥಾಪಕ ಪೂರೈಕೆಗಾಗಿ ತಮ್ಮ ಉದ್ಯಮ ಮತ್ತು ಅಕಾಡೆಮಿಗಳಲ್ಲಿ ಸಹಕಾರವನ್ನು ಬೆಳೆಸಲು ಮತ್ತು ನವೀನ ತಂತ್ರಜ್ಞಾನಗಳ ನೆರವಿನೊಂದಿಗೆ ಉಂಟಾಗುವ ಅಪಾಯವನ್ನು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಲು ನಾಯಕರು ಉದ್ದೇಶಿಸಿದ್ದಾರೆ.
***
(Release ID: 1604496)
Visitor Counter : 191