ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ 2019ರ ಸಾಧನೆಗಳ ವರ್ಷಾಂತ್ಯದ ಪುನರಾವಲೋಕನ

Posted On: 18 DEC 2019 3:35PM by PIB Bengaluru

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ 2019ರ ಸಾಧನೆಗಳ ವರ್ಷಾಂತ್ಯದ ಪುನರಾವಲೋಕನ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇಂಧನ ಲಭ್ಯತೆ, ಪರಿಣಾಮಕಾರಿ ಇಂಧನ ಬಳಕೆ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆ ಸೇರಿದಂತೆ ಹಲವು ಆದ್ಯತೆಗಳನ್ನು ಪೂರೈಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ತೈಲ ಮತ್ತು ನೈಸರ್ಗಿಕ ಅನಿಲದ  ಉತ್ಪಾದನೆ ಮತ್ತು ಶೋಧನೆ, ಸಂಸ್ಕರಣೆ, ವಿತರಣೆ ಮತ್ತು ಮಾರುಕಟ್ಟೆ ಆಮದು ಹಾಗೂ ರಫ್ತು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ. ತೈಲ ಮತ್ತು ನೈಸರ್ಗಿಕ ಅನಿಲ ಆಮದು ನಮ್ಮ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಸಚಿವಾಲಯ ಇಂಧನ ಲಭ್ಯತೆ, ಪರಿಣಾಮಕಾರಿ ಇಂಧನ ಬಳಕೆ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆ ಸೇರಿದಂತೆ ಹಲವು ಆದ್ಯತೆಗಳನ್ನು ಪೂರೈಸಲು ಹಲವು ಆದ್ಯತಾ ಕ್ರಮಗಳನ್ನು ಕೈಗೊಂಡಿದೆ.

·        ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)

ಬಡ ಕುಟುಂಬಗಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಅಡುಗೆ ಇಂಧನ ಪೂರೈಸುವ ಉದ್ದೇಶದಿಂದ ದೇಶದಲ್ಲಿ ಎಲ್ ಪಿ ಜಿ ಅಡುಗೆ ಅನಿಲ ಬಳಕೆ ವ್ಯಾಪ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮೇ 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಆರಂಭಿಸಿತು. ಆರಂಭದಲ್ಲಿ 5 ಕೋಟಿ ಕುಟುಂಬಗಳಿಗೆ ಉಚಿತವಾಗಿ ಎಲ್ ಪಿ ಜಿ ಅಡುಗೆ ಅನಿಲ ವಿತರಿಸುವ ಗುರಿ ಹೊಂದಲಾಗಿತ್ತು. ನಂತರ ಮಾರ್ಚ್ 2020ರ ವೇಳೆಗೆ ಬಡ ಕುಟುಂಬಗಳ ವಯಸ್ಕ ಮಹಿಳೆಯರು ಸೇರಿದಂತೆ 8 ಕೋಟಿ ಜನರಿಗೆ ಎಲ್ ಪಿ ಜಿ ಅಡುಗೆ ಅನಿಲ ವಿತರಿಸುವ ಪರಿಷ್ಕೃತ ಗುರಿಯನ್ನು ಹೊಂದಲಾಗಿತ್ತು. ಆದರೆ 7 ತಿಂಗಳು ಮುಂಚಿತವಾಗಿಯೇ ಅಂದರೆ 2019ರ ಸೆಪ್ಟೆಂಬರ್ 7ಕ್ಕೆ ಆ ಗುರಿಯನ್ನು ಸಾಧಿಸಲಾಗಿದೆ.

ಈ ಯೋಜನೆ ಅನುಷ್ಠಾನದಿಂದ ಗ್ರಾಮೀಣ ಮಹಿಳೆಯರು ಮರಮುಟ್ಟು ಸಂಗ್ರಹ ಮಾಡುವ ಕಷ್ಟದಿಂದ ದೂರವಾಗಿ ಅವರು ಗುಣಮಟ್ಟದ ಜೀವನ ನಡೆಸುವಂತಾಗಿರುವುದಲ್ಲದೆ, ಆರ್ಥಿಕ ಉತ್ಪಾದನೆ ಹೆಚ್ಚಾಗಿದೆ. ಅವರಿಗೆ ಹೆಚ್ಚಿನ ಸಮಯ ದೊರಕುತ್ತಿದ್ದು, ಅವರು ಆ ಸಮಯವನ್ನು ತಮ್ಮ ಜೀವನಮಟ್ಟ ಸುಧಾರಿಸುವ ಬಹುಉಪಯೋಗಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

·        ಪಹಲ್

ಸರ್ಕಾರ ಉತ್ತಮ ಆಡಳಿತದ ಕ್ರಮವಾಗಿ ಪಹಲ್ ಮೂಲಕ ಎಲ್ ಪಿ ಜಿ ಗ್ರಾಹಕರಿಗೆ ಸಬ್ಸಿಡಿ ನೀಡುವ ನಿಗದಿತ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಸಬ್ಸಿಡಿಗಳನ್ನು ಏಕರೂಪಗೊಳಿಸುವ ಗುರಿಯನ್ನು ಹೊಂದಲಾಗಿದೆ. ಜೊತೆಗೆ ಸಬ್ಸಿಡಿ ಸೋರಿಕೆಯನ್ನು ತಡೆಗಟ್ಟುವ ವಿಧಾನವೂ ಆಗಿದೆ.

ಪಹಲ್ ಯೋಜನೆಯನ್ನು ಆರಂಭಿಕವಾಗಿ 54 ಜಿಲ್ಲೆಗಳಲ್ಲಿ 2014ರ ನವೆಂಬರ್ 15ರಂದು ಜಾರಿಗೊಳಿಸಲಾಗಿತ್ತು. ನಂತರ ಅದನ್ನು ಕ್ರಮವಾಗಿ 2015ರ ಜನವರಿ 1 ರಿಂದ ದೇಶಾದ್ಯಂತ ವಿಸ್ತರಿಸಲಾಯಿತು. ಅದರಿಂದಾಗಿ ಎಲ್ ಪಿ ಜಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಅಡುಗೆ ಅನಿಲ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾಯಿಸಲಾಗುತ್ತಿದೆ. 2019ರ ಡಿಸೆಂಬರ್ 13ರ ವೇಳೆಗೆ ಪಹಲ್ ಯೋಜನೆಗೆ 25.84 ಕೋಟಿ ಎಲ್ ಪಿ ಜಿ ಗ್ರಾಹಕರು ಸೇರ್ಪಡೆಗೊಂಡಿದ್ದು, ಎಲ್ ಪಿ ಜಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ 1,22,666.82 ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಲಾಗಿದೆ.

ನೈಜ ಸ್ಥಳೀಯ ಗ್ರಾಹಕರನ್ನು ನೇರವಾಗಿ ತಲುಪಲು ಪಹಲ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರಡಿ ಸಬ್ಸಿಡಿಯನ್ನು ಬೇರೆ ಉದ್ದೇಶಕ್ಕೆ ವರ್ಗಾಯಿಸುವುದಿಲ್ಲ. ಈ ಯೋಜನೆಯಿಂದಾಗಿ ‘ಅನಧಿಕೃತ’ ಸಂಪರ್ಕಗಳನ್ನು ಗುರುತಿಸಲು ಹಾಗೂ ಒಂದಕ್ಕಿಂತ ಹೆಚ್ಚು ಹೊಂದಿರುವ ಸಂಪರ್ಕಗಳನ್ನು ಪತ್ತೆ ಹಚ್ಚಲು ಮತ್ತು ಅಂತಹ ಸಂಪರ್ಕಗಳನ್ನು ಕಡಿತಗೊಳಿಸಲು ಸಹಾಯಕವಾಗಿದೆ. ಆ ಮೂಲಕ ಸಬ್ಸಿಡಿ ದರದಲ್ಲಿ ನೀಡಲಾಗುವ ಎಲ್ ಪಿ ಜಿ ಅನಿಲ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವುದಕ್ಕೆ ನಿರ್ಬಂಧ ವಿಧಿಸಿದಂತಾಗಿದೆ.

·        ಶೋಧ ಮತ್ತು ಪರವಾನಗಿ ನೀತಿಯಲ್ಲಿ ಸುಧಾರಣೆ

ಸರ್ಕಾರ ತೈಲ ಮತ್ತು ಅನಿಲದ ಉತ್ಪಾದನೆ ಮತ್ತು ದೇಶೀಯ ಶೋಧ ಕಾರ್ಯಗಳನ್ನು ಹೆಚ್ಚಿಸಲು 2019ರ ಫೆಬ್ರವರಿ 28ರಂದು ‘ಶೋಧ ಮತ್ತು ಪರವಾನಗಿ ನೀತಿಯಲ್ಲಿನ ಸುಧಾರಣೆಗಳನ್ನು’ ಪ್ರಕಟಿಸಿದೆ. ಇದರ ಉದ್ದೇಶ ಶೋಧನಾ ಚಟುವಟಿಕಗಳನ್ನು ಉತ್ತೇಜಿಸುವುದು, ದೇಶೀಯ ಉತ್ಪಾದನೆ ಹೆಚ್ಚಳಕ್ಕೆ ಸ್ವದೇಶಿ ಹಾಗೂ ವಿದೇಶಿ ಬಂಡವಾಳ ಆಕರ್ಷಿಸುವುದಾಗಿದೆ. ಸುಧಾರಣಾ ನೀತಿಯ ಕೆಲವು ಪ್ರಮುಖಾಂಶಗಳು ಈ ಕೆಳಗಿನಂತಿವೆ.

      i.        ‘ಆದಾಯ’ದಿಂದ ‘ಗರಿಷ್ಠ ಉತ್ಪಾದನೆ’ಯತ್ತ ಹೆಚ್ಚಿನ ಗಮನಹರಿಸುವುದು.

     ii.        ಎರಡು ಮತ್ತು ಮೂರನೇ ಸೆಡಿಮೆಂಟರಿ ಬೇಸಿನ್ ಗಳಲ್ಲಿ ಸರ್ಕಾರದೊಂದಿಗೆ ಯಾವುದೇ ಆದಾಯ ಹಂಚಿಕೆ ಇರುವುದಿಲ್ಲ.

    iii.        ಶೋಧನಾ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು.

ಎ) ಶೋಧನೆ ಕೈಗೊಳ್ಳದಿರುವ ಪ್ರದೇಶಗಳ ಕ್ಯಾಟಗರಿ 1 ನಿಕ್ಷೇಪಗಳ ಬೇಸಿನ್ ಗಳಲ್ಲಿ: ಕನಿಷ್ಠ ಕಾರ್ಯ ಚಟುವಟಿಕೆಯಲ್ಲಿ ಶೇ.70ರಷ್ಟು ಹೆಚ್ಚಿನ ಮೌಲ್ಯ  ಮತ್ತು ಆದಾಯ ಹಂಚಿಕೆ, ಶೇ.30ರಷ್ಟು ವೇಟ್ಹೇಜ್ ನಿಂದ ಶೇ.50ರ ಮಿತಿ ವರೆಗೆ ಗರಿಷ್ಠ ಆದಾಯ ಹಂಚಿಕೆ ಪ್ರಮಾಣ(ಎಚ್ ಆರ್ ಪಿ): ಮತ್ತು

ಬಿ) ಕ್ಯಾಟಗರಿ 2 ಮತ್ತು 3ರ ನಿಕ್ಷೇಪಗಳಲ್ಲಿ ಕನಿಷ್ಠ ಕಾರ್ಯ ಯೋಜನೆಯಲ್ಲಿ ಶೇ.100ರಷ್ಟು ಹೆಚ್ಚಿನ ಮೌಲ್ಯ ಹೊಂದಿರುತ್ತದೆ.

   iv.        ತ್ವರಿತ ಅಭಿವೃದ್ಧಿಗಾಗಿ ಅತ್ಯಲ್ಪ ಅವಧಿಯಲ್ಲಿ ಅನ್ವೇಷಣೆ.

    v.        ಶೀಘ್ರ ವಾಣಿಜ್ಯ ಉತ್ಪಾದನೆ ಮತ್ತು ನಗದೀಕರಣಕ್ಕಾಗಿ ಹಲವು ವಿನಾಯಿತಿಗಳು.

   vi.        ನೈಸರ್ಗಿಕ ಅನಿಲದ ಮಾರುಕಟ್ಟೆ ಮತ್ತು ದರ ನಿಗದಿ ಸ್ವಾತಂತ್ರ.

  vii.        ಈ ನೀತಿಯಿಂದಾಗಿ ರಾಷ್ಟ್ರೀಯ ತೈಲ ನಿಗಮ(ಎನ್ ಒ ಸಿ) ನೋಡಿಕೊಳ್ಳುತ್ತಿರುವ ನಿಯೋಜಿಸಿದ 66 ಸಣ್ಣ ಮತ್ತು ಮಧ್ಯಮ ತೈಲ ನಿಕ್ಷೇಪಗಳಲ್ಲಿ ಬಿಡ್ಡಿಂಗ್ ನಡೆಸಲು ಅವಕಾಶ ನೀಡಲಾಗುವುದು. ಜೊತೆಗೆ ಖಾಸಗಿ ಇ ಮತ್ತು ಪಿ ಉತ್ಪಾದಕರ ಸಹಾಯದಿಂದ ಹೊಸ ಮತ್ತು ಶೋಧನಾ ತಂತ್ರಜ್ಞಾನ, ಹೊಸ ಬಂಡವಾಳ ಹೂಡಿಕೆ ಮತ್ತು ತೈಲ ಹಾಗೂ ಅನಿಲ ಉತ್ಪಾದನೆ ಹೆಚ್ಚಳಕ್ಕೆ ಉತ್ತಮ ಪದ್ಧತಿಗಳ ಅಳವಡಿಕೆ ಮಾಡಿಕೊಳ್ಳಲು ಹೆಚ್ಚಿಸಿದ ತೈಲ ಪುನಃ ಸಂಪಾದನೆ/ ಸುಧಾರಿತ ತೈಲ ಮರು ಸಂಪಾದನೆ (ಇಒಆರ್/ಐಒಆರ್) ವಿಧಾನಗಳನ್ನು ಅಳವಡಿಸಿಕೊಳ್ಳುವುದು. ಎನ್ಐಒ 2019ರ ಜೂನ್ ಕೊನೆಯ ವಾರದಲ್ಲಿ ಒ ಎನ್ ಜಿ ಸಿ ಮತ್ತು ಒಐಎಲ್ ಮೂಲಕ 66 ನಿಕ್ಷೇಪಗಳಿಗೆ ಬಿಡ್ಡಿಂಗ್ ನಡೆಸಿತು.

 viii.        ಒ ಎನ್ ಜಿ ಸಿ ಮತ್ತು ಒಐಎಲ್ ನಡುವಿನ ಒಪ್ಪಂದವನ್ನು ಪರಿಷ್ಕರಿಸಿದ್ದು, ಭೌತಿಕ ಉತ್ಪಾದನೆಗೆ ಶೇ.50ರಷ್ಟು ಹೆಚ್ಚಿನ ಮೌಲ್ಯ ನೀಡಲಾಗುವುದು. ಇತರೆ ಭೌತಿಕ ಮಾನದಂಡಗಳಿಗೆ ಶೇ.30, ಆರ್ಥಿಕ ಸಾಧನೆ ಮಾನದಂಡಕ್ಕೆ ಶೇ.20 ನಿಗದಿಪಡಿಸಲಾಗಿದೆ.

   ix.        ಡಿಜಿಎಚ್ ನ ಪಾತ್ರವನ್ನು ಪುನರ್ ವ್ಯಾಖ್ಯಾನ ಮಾಡಲಾಗಿದ್ದು, ಹೆಚ್ಚುವರಿ ಅಧಿಕಾರ ಮತ್ತು ಕಾರ್ಯಗಳನ್ನು ಡಿಜಿಎಚ್ ಗೆ ನಿಯೋಜಿಸಲಾಗಿದ್ದು, ಆ ಮೂಲಕ ಡಿಜಿಎಚ್ ನ ಪಾತ್ರದಲ್ಲಿ ಪಾಲನೆ/ನಿಯಂತ್ರಣ, ಅಭಿವೃದ್ಧಿ ಮತ್ತು ಸಮನ್ವಯತೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಲಾಗುವುದು.

    x.        ಸರಳ ಮತ್ತು ಹೂಡಿಕೆದಾರರ ಸ್ನೇಹಿ ಬಿಡ್ ಮಾದರಿ ದಾಖಲೆಗಳನ್ನು ವ್ಯವಸ್ಥೆ ಮಾಡುವುದು ಅದರಲ್ಲಿ ಬಿಡ್ ಅವಧಿ ವರ್ಷದಲ್ಲಿ ಎರಡು ಬಾರಿಗೆ ಬದಲಿಗೆ ಮೂರು ಬಾರಿಗೆ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

   xi.        ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ

ಎ) ಸರಳೀಕೃತ ಒಪ್ಪಂದ ನಿಬಂಧನಗೆಳನ್ನು ಒಳಗೊಂಡಿದ್ದು, ಅದರಲ್ಲಿ ಸರ್ಕಾರ/ಡಿಜಿಎಚ್/ನಿರ್ವಹಣಾ ಸಮಿತಿಗಳು ಅನುಮೋದನೆಗಳನ್ನು ನೀಡುವುದನ್ನು ಚುರುಕುಗೊಳಿಸಲು ಒತ್ತು ನೀಡಲಾಗಿದೆ.

ಬಿ) ಸಚಿವ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮನ್ವಯ ಸಮಿತಿ (ಇಸಿಸಿ) ಸ್ಥಾಪಿಸುವ ಮೂಲಕ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು.

ಸಿ) ಒಪ್ಪಂದ ವ್ಯಾಜ್ಯಗಳ ಸೌಹಾರ್ದ ಮತ್ತು ಶೀಘ್ರ ವಿಲೇವಾರಿಗೆ ಹೊಸ ವ್ಯಾಜ್ಯ ಇತ್ಯರ್ಥ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ.

ಡಿ) ಮಾಹಿತಿ ತಂತ್ರಜ್ಞಾನ ಕೆಲಸ ಕಾರ್ಯ ಮತ್ತು ಅನುಮೋದನೆಗಳನ್ನು ನೀಡುವ ಪ್ರಕ್ರಿಯೆ ಆಧರಿಸಿ ವಿದ್ಯುನ್ಮಾನ ಏಕಗವಾಕ್ಷಿ ಕಾರ್ಯತಂತ್ರ ಪಾಲನೆ ಪಿ ಎಸ್ ಸಿ ಅಡಿಯಲ್ಲಿ ನಿರ್ದಿಷ್ಟ ಕಾರ್ಯತಂತ್ರ ಮಾನದಂಡ(ಎಸ್ ಒಪಿ) ಅಂತಿಮಗೊಳಿಸಲಾಗಿದೆ.

·        ಓಪನ್ ಎಕರೇಜ್ ಪರವಾನಗಿ ನೀತಿ(ಒಎಎಲ್ ಪಿ) ಬಿಡ್ಡಿಂಗ್ ಸುತ್ತುಗಳು

2019ನೇ ಸಾಲಿನಲ್ಲಿ ಅಂದಾಜು 59 ಸಾವಿರ ಚದರ ಕಿಲೋಮೀಟರ್ ಒಳಗೊಂಡಿರುವ 32 ಬ್ಲಾಕ್ ಗಳನ್ನು ಒಎಎಲ್ ಪಿ ಬಿಡ್ಡ ಎರಡು ಮತ್ತು ಮೂರನೇ ಸುತ್ತಿನ ಹರಾಜು ಮೂಲಕ ನೀಡಲಾಗಿದೆ. ಅಲ್ಲದೆ 18,500 ಚದರ ಕಿ.ಮೀ. ವ್ಯಾಪ್ತಿ ಪ್ರದೇಶದ 7 ನಿಕ್ಷೇಪಗಳನ್ನು ಒಎ ಎಲ್ ಪಿ ಬಿಡ್ ಆರನೇ ಸುತ್ತಿನ ಮೂಲಕ ನೀಡಲಾಗಿದೆ.

·        ಪೆಟ್ರೋಲಿಯಂ ಶೋಧನಾ  ಪರವಾನಗಿ

ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ನದಿ ತೀರದ ನಿಕ್ಷೇಪಗಳಿಗೆ ಪೆಟ್ರೋಲಿಯಂ ಶೋಧನಾ ಪರವಾನಗಿಗಳನ್ನು(ಪಿಇಎಲ್)ಗಳನ್ನು ನೀಡಲಾಗಿದೆ ಮತ್ತು ಹೈಡ್ರೋ ಕಾರ್ಬನ್ ಶೋಧನಾ ಮತ್ತು ಪರವಾನಗಿ ನೀತಿ(ಎಚ್ಇಎಲ್ ಪಿ) ಪದ್ಧತಿಯಲ್ಲಿ ಎಲ್ಲ ಭೂನಿಕ್ಷೇಪಗಳಿಗೆ ಸಂಬಂಧಿಸಿದ ರಾಜ್ಯ ಸರ್ಕಾರಗಳು ಪಿಇಎಲ್ ಗಳನ್ನು ನೀಡುವಂತೆ ಶಿಫಾರಸ್ಸು ಮಾಡಲಾಗಿದೆ.

·        ರಾಷ್ಟ್ರೀಯ ಸೆಸ್ಮಿಕ್ (ಕಂಪನ) ಕಾರ್ಯಕ್ರಮ

2019ರ ನವೆಂಬರ್ 30ರ ವೇಳೆಗೆ ಎನ್ಎಸ್ ಪಿ ಅಡಿಯಲ್ಲಿ 48,143 ಲೈನ್ ಕಿ.ಮೀ. ವ್ಯಾಪ್ತಿಯ ಪೈಕಿ 41,902 ಎಲ್ ಕೆ ಎಂ ಭೂ ವ್ಯಾಪ್ತಿಯನ್ನು ಹೊಂದಲಾಗಿದೆ.

·        ರಾಷ್ಟ್ರೀಯ ದತ್ತಾಂಶ ಭಂಡಾರ(ಎನ್ ಡಿ ಆರ್)

ಸರ್ಕಾರ ಎನ್ ಡಿ ಆರ್ ಅನ್ನು ಸ್ಥಾಪಿಸಿದ್ದು, ಆ ಮೂಲಕ ಭವಿಷ್ಯದಲ್ಲಿ ಶೋಧನಾ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಮತ್ತು ಸಂಘಟಿಸಲು ನೆರವಾಗುವ ಭಾರೀ ಪ್ರಮಾಣದ ದತ್ತಾಂಶವನ್ನು ಸಂರಕ್ಷಿಸಲು ಹಾಗೂ ವಿತರಿಸುವ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಲಾಗಿದೆ. ನೋಯ್ಡಾದ ಡಿಜಿಎಚ್ ಕಚೇರಿಯಲ್ಲಿ 2017ರ ಜೂನ್ 28ಕ್ಕೆ ಅಧಿಕೃತವಾಗಿ ಎನ್ ಡಿಆರ್ ಕಾರ್ಯಾಚರಣೆಯನ್ನು ಉದ್ಘಾಟಿಸಲಾಯಿತು. ಒಟ್ಟಾರೆ 2019ರ ನವೆಂಬರ್ 30ರ ವೇಳೆಗೆ 2.30 ಮಿಲಿಯನ್ ಲೈನ್ ಕಿ.ಮೀ. 2ಡಿ ಸೆಸ್ಮಿಕ್ ದತ್ತಾಂಶ, 0.78 ಮಿಲಿಯನ್ ಚದರ ಕಿ.ಮೀ. 3ಡಿ ಸೆಸ್ಮಿಕ್ ದತ್ತಾಂಶ ಮತ್ತು 17,588 ತೈಲ ಬಾವಿಗಳ ದತ್ತಾಂಶವನ್ನು ಅಪ್ ಲೋಡ್ ಮಾಡಲಾಗಿದೆ. ಎನ್ ಡಿ ಆರ್ ನಲ್ಲಿ ಲಭ್ಯವಿರುವ ದತ್ತಾಂಶದಿಂದಾಗಿ ಹೂಡಿಕೆದಾರರು ಯಾವ ನಿಕ್ಷೇಪಗಳಲ್ಲಿ ತೈಲ ಇದೆ ಎಂಬುದನ್ನು ಅರಿತು, ಒಎಎಲ್ ಪಿ ಅಡಿಯಲ್ಲಿ ಆಸಕ್ತಿ ವ್ಯಕ್ತಪಡಿಸಲು ಸಹಾಯಕವಾಗಲಿದೆ.

·        ಹೊಸ ಶೋಧನಾ ಪರವಾನಗಿ ನಗದೀಕರಣ ನೀತಿ(ಎನ್ಇಎಲ್ ಪಿ) ಸಂಶೋಧನೆಗಳು

2019ರ ಅಕ್ಟೋಬರ್ 31ರ ವೇಳೆಗೆ ಒಟ್ಟು 42 ಎನ್ಇಎಲ್ ಪಿ ಸಂಶೋಧನೆಗಳನ್ನು ನಗದೀಕರಣ ಮಾಡಲಾಗಿದೆ.

·        ಸಂಸ್ಕರಣೆ

ದೇಶದಲ್ಲಿನ 23 ಸಂಸ್ಕರಣಾ ಘಟಕಗಳ ಪೈಕಿ 18 ಸಾರ್ವಜನಿಕ ವಲಯ, 3 ಖಾಸಗಿ ವಲಯ ಮತ್ತು 2 ಜಂಟಿ ಸಹಭಾಗಿತ್ವ ಹೊಂದಿದ್ದು, ಇವುಗಳ ಒಟ್ಟು ತೈಲ ಸಂಸ್ಕರಣಾ ಸಾಮರ್ಥ್ಯ 249.366 ಎಂಎಂಟಿಪಿಎ. ಒಟ್ಟು 249.366 ಎಂಎಂಟಿ ಪೈಕಿ 142.066 ಎಂಎಂಟಿ ಸಾರ್ವಜನಿಕ ವಲಯದ್ದು, 19.10 ಎಂಎಂಟಿ ಜಂಟಿ ಸಹಭಾಗಿತ್ವದ್ದು ಮತ್ತು ಉಳಿದ 88.20 ಎಂಎಂಟಿ ಖಾಸಗಿ ವಲಯದ್ದು. ದೇಶ ತನ್ನ ಆಂತರಿಕ ಬಳಕೆಗೆ ಅಗತ್ಯ ತೈಲ ಸಂಸ್ಕರಣೆ ಸಾಮರ್ಥ್ಯದಲ್ಲಿ ಸ್ವಾವಲಂಬನೆ ಸಾಧಿಸಿರುವುದಲ್ಲದೆ, ಸಾಕಷ್ಟು ಸಾಮರ್ಥ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

·        ಆಟೋ ಇಂಧನ ದೂರದೃಷ್ಟಿ ಮತ್ತು ನೀತಿ

ದೇಶದಲ್ಲಿ ಬಿಎಸ್-4 ಮತ್ತು ಬಿಎಸ್-6 ಇಂಧನಗಳ ಪರಿಚಯ:

ಎ. ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವಾಲಯ 2015ರ ಜ.19ರ ತನ್ನ ಆದೇಶದಲ್ಲಿ ದೇಶಾದ್ಯಂತ ಬಿಎಸ್-4 ಆಟೋ ಇಂಧನ ಬಳಕೆಗೆ ಜಾರಿಗೆ ಅಧಿಸೂಚನೆ ಹೊರಡಿಸಿತ್ತು. ಅದರಂತೆ 2017ರ ಏ.1ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ಬಿಎಸ್ -4 ಆಟೋ ಇಂಧನಗಳನ್ನು ಜಾರಿಗೊಳಿಸಲಾಗಿದೆ.

ಬಿ. ದೇಶದಲ್ಲಿ ಬಿಎಸ್-4ರಿಂದ ನೇರವಾಗಿ ಬಿಎಸ್-6 ಮಾನದಂಡಗಳಿಗೆ ವರ್ಗಾವಣೆಗೊಳ್ಳಲು ನಿರ್ಧರಿಸಲಾಯಿತು ಮತ್ತು 2020ರ ಏ.1 ರಿಂದ ಬಿಎಸ್-6 ಮಾನದಂಡಗಳು ಜಾರಿಗೆ ಬರಲಿವೆ.

ಸಿ. ದೆಹಲಿಯಲ್ಲಿ ಗಂಭೀರ ಮಾಲಿನ್ಯ ಪ್ರಮಾಣವನ್ನು ಪರಿಗಣಿಸಿ, ಕೇಂದ್ರ ಸರ್ಕಾರ ಈಗಾಗಲೇ 2018ರ ಏ.1 ರಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್ ಸಿಟಿ)ಗೆ ಬಿಎಸ್ -6 ಇಂಧನವನ್ನು ಪೂರೈಕೆ ಮಾಡುತ್ತಿದೆ.

ಡಿ. ನವದೆಹಲಿಯ ಎನ್ ಸಿಟಿ ಪ್ರದೇಶಕ್ಕೆ ಹೊಂದಿಕೊಂಡಿರುವ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರದೇಶದ 20 ಜಿಲ್ಲೆಗಳಿಗೂ ಬಿಎಸ್-6 ಆಟೋ ಇಂಧನವನ್ನು ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ.

·        ಚಿಲ್ಲರೆ ವಲಯದಲ್ಲಿ ಖಾಸಗಿ ವಲಯದವರ ಪಾಲುದಾರಿಕೆಗೆ ನಿಯಮಗಳ ಸರಳೀಕರಣ

ಕೇಂದ್ರ ಸರ್ಕಾರ ಮೋಟಾರ್ ಸ್ಪಿರಿಟ್ಸ್ (ಎಂಎಸ್) ಹೈ ಸ್ಪೀಡ್ ಡೀಸೆಲ್ (ಎಚ್ ಎಸ್ ಡಿ) ಮತ್ತಿತರ ಸಾರಿಗೆ ಇಂಧನಗಳ ಮಾರುಕಟ್ಟೆಗೆ ಅಧಿಕೃತ ಮಾನ್ಯತೆ ನೀಡುವ ಮಾರ್ಗಸೂಚಿಗಳನ್ನು ಅನುಮೋದಿಸಿದೆ. ಆ ಕುರಿತು ಅಗತ್ಯ ಅಧಿಸೂಚನೆಯನ್ನು 2019ರ ನ.8ರಂದು ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.

·        ಡಿಪಿಐಐಟಿಗಳ ಸಾರ್ವಜನಿಕ ಖರೀದಿ( ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ) ವ್ಯವಸ್ಥೆ:

ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ, ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಸಾರ್ವಜನಿಕ ಖರೀದಿ (ಮೇಕ್ ಇನ್ ಇಂಡಿಯಾಗೆ ಆದ್ಯತೆ) ಆದೇಶ 2017ರಡಿ 2019ರ ಜೂ.25ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಲ್ಲಿ ಸ್ಥಳೀಯ ತೈಲ ಕನಿಷ್ಠ ಮಿಶ್ರಣ ನಿಗದಿಪಡಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ , ಖರೀದಿ ಆದ್ಯತೆ (ಸ್ಥಳೀಯ ಉತ್ಪನ್ನ ಸಂಯೋಜಿತ (ಪಿಪಿ-ಎಲ್ ಸಿ) ನೀತಿಯನ್ನು ಎಂಒಪಿ ಮತ್ತು ಎನ್ ಜಿ ನೀತಿ ಕುರಿತ ಸ್ಥಾಯಿ ಸಮಿತಿ ಪರಾಮರ್ಶೆ ನಡೆಸಿತು. ಸ್ಥಾಯಿ ಸಮಿತಿ ಶಿಫಾರಸುಗಳಂತೆ, ನೀತಿಯನ್ನು 2019ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ.

·        ರಾಷ್ಟ್ರೀಯ ಅನಿಲ ಗ್ರಿಡ್

ಕೇಂದ್ರ ಸರ್ಕಾರ ಅನಿಲ ಗ್ರಿಡ್ ಅನ್ನು ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ 15000 ಕಿಲೋಮೀಟರ್ ಅನಿಲ ಕೊಳವೆ ಮಾರ್ಗ ಮತ್ತು ಹಲವು ಕೊಳವೆ ಮಾರ್ಗಗಳನ್ನು ಅಭಿವೃದ್ಧಿಗೊಳಿಸಲು ಗುರುತಿಸಿದೆ. ಹೊಸ ಅನಿಲ ಕೊಳವೆ ಮಾರ್ಗಗಳನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ. ಈ ಕೆಳಗಿನ ರಾಷ್ಟ್ರೀಯ ಅನಿಲ ಗ್ರಿಡ್ ಯೋಜನೆಗಳಲ್ಲಿ ಪಿಎಸ್ ಯುಗಳೂ ಸಹ ಪಾಲುದಾರಿಕೆ ಹೊಂದಿವೆ.

1.     ಜದಗೀಶ್ ಪುರ-ಹಲ್ದಿಯಾ ಮತ್ತು ಬೊಕಾರೋ- ಧಾಮ್ರಾ ಕೊಳವೆ ಯೋಜನೆ( ಜೆಎಚ್ ಬಿಡಿಪಿಎಲ್ )- 2655 ಕಿಲೋಮೀಟರ್ ಉದ್ದದ ಅನಿಲ ಕೊಳವೆ ಮಾರ್ಗದ ಯೋಜನೆಯನ್ನು 12,940 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಜಿಎಐಎಲ್ ಕಾರ್ಯಗತಗೊಳಿಸುತ್ತಿದೆ, ಇದರಲ್ಲಿ ಭಾರತ ಸರ್ಕಾರ ಶೇ.40ರಷ್ಟು ಅನುದಾನ (ಅಂದರೆ 5,176 ಕೋಟಿ)ವನ್ನು ನೀಡಲಿದೆ ಮತ್ತು ಈ ಯೋಜನೆ 2020ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜೆಎಚ್ ಬಿಡಿಪಿಎಲ್ ಉತ್ತರ ಪ್ರದೇಶ, ಜಾರ್ಖಂಡ್ , ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳ ಇಂಧನ ಬೇಡಿಕೆಯನ್ನು ಪೂರೈಸಲಿದೆ.

2.    ಬರೂನಿಯಿಂದ ಗುವಾಹಟಿ ಕೊಳವೆಮಾರ್ಗ: ರಾಷ್ಟ್ರೀಯ ಅನಿಲ ಗ್ರಿಡ್ ನೊಂದಿಗೆ ಈಶಾನ್ಯ ಭಾಗದ ಪ್ರಾಂತ್ಯವನ್ನು (ಎನ್ ಇಆರ್ )  ಸಂಪರ್ಕಿಸಲು ಜೆಎಚ್ ಬಿಡಿಪಿಎಲ್ ಯೋಜನೆಯ ಆಂತರಿಕ ಭಾಗವಾಗಿ ಬರೂನಿಯಿಂದ ಗುವಾಹಟಿವರೆಗಿನ ಅನಿಲ ಕೊಳವೆ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು.  ಈ ಯೋಜನೆ ಅಂದಾಜು ಉದ್ದ 729 ಕಿಲೋಮೀಟರ್ ಆಗಿದ್ದು, ಅದರ ಸಾಮರ್ಥ್ಯ 2.5 ಎಂಎಂಎಸ್ ಸಿಎಂಡಿ ಆಗಿದ್ದು,ಒಟ್ಟು ಯೋಜನಾ ವೆಚ್ಚ 3308 ಕೋಟಿ. ಈ ಯೋಜನೆ 2021ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ನಿಗದಿಪಡಿಸಲಾಗಿದೆ.

3.    ಈಶಾನ್ಯ ಅನಿಲ ಗ್ರಿಡ್:  “ಈಶಾನ್ಯ ಭಾರತಕ್ಕಾಗಿ ಹೈಡ್ರೋಕಾರ್ಬನ್ ವಿಷನ್ 2030” (ಮುನ್ನೋಟ)ವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 2016ರ ಫೆಬ್ರವರಿ 9ರಂದು ಬಿಡುಗಡೆ ಮಾಡಿದೆ. ಅದರಲ್ಲಿ ಈಶಾನ್ಯ ಭಾಗದಲ್ಲಿ ರಾಷ್ಟ್ರೀಯ ಅನಿಲ ಗ್ರಿಡ್ ಕೊಳವೆ ಮಾರ್ಗ ಮತ್ತು ನೈಸರ್ಗಿಕ ಅನಿಲ ಮೂಲಸೌಕರ್ಯವೃದ್ಧಿ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ. ಹಾಗಾಗಿ ಕೇಂದ್ರ ಸರ್ಕಾರಿ ಒಡೆತನದ 5 ತೈಲ ಮತ್ತು ಅನಿಲ ಸಂಸ್ಥೆಗಳಾದ ಜಿಎಐಎಲ್, ಐಒಸಿಎಲ್, ಒಐಎಲ್, ಒಎನ್ ಜಿಸಿ ಮತ್ತು ಎನ್ ಆರ್ ಎಲ್ ಇವುಗಳು ಸೇರಿ “ಇಂದ್ರಧನುಷ್ ಅನಿಲ್ ಗ್ರಿಡ್ ಲಿಮಿಟೆಡ್”(ಐಜಿಜಿಎಲ್) ಹೆಸರಿನಲ್ಲಿ ಕಂಪನಿ ಸ್ಥಾಪಿಸಿ, ಅದರಡಿ ಈಶಾನ್ಯ ಭಾಗದಲ್ಲಿ ನೈಸರ್ಗಿಕ ಅನಿಲ ಕೊಳವೆಮಾರ್ಗ ಅಭಿವೃದ್ಧಿಗೊಳಿಸುವ ಕಾರ್ಯಯೋಜನೆ ಹೊಣೆ ವಹಿಸಲಾಗಿದೆ. ಅಂದರೆ ಈಶಾನ್ಯ ಅನಿಲ ಗ್ರಿಡ್ (ಎನ್ಇಜಿಜಿ) ಅಡಿಯಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಸಿಕ್ಕಿಂ, ಮಣಿಪುರ, ಅರುಣಾಚಲಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಹಂತ ಹಂತವಾಗಿ ಅಂದಾಜು 9,265 ಕೋಟಿ ರೂ. ವೆಚ್ಚದಲ್ಲಿ ಅನಿಲ ಕೊಳವೆ ಮಾರ್ಗ ಯೋಜನೆ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಸಿಸಿಇಎ, ಸಂಭಾವ್ಯ ಅಂತರ ನಿಧಿ – ವಿಜಿಎಫ್ ನಿಂದ ಇಂದ್ರಧನುಷ್ ಗ್ಯಾಸ್ ಗ್ರಿಡ್ ಲಿಮಿಟೆಡ್(ಐಜಿಜಿಎಲ್) ನಿಂದ ಈಶಾನ್ಯ ನೈಸರ್ಗಿಕ ಅನಿಲ ಕೊಳವೆ ಗ್ರಿಡ್(ಎನ್ಇಜಿಜಿ) ಸ್ಥಾಪಿಸುವ ವಿಷಯ ಪರಿಶೀಲನೆಯಲ್ಲಿದೆ.

4.     ಕೊಚ್ಚಿ-ಕೊಟ್ಟನಾಡ್- ಬೆಂಗಳೂರು-ಮಂಗಳೂರು(ಎರಡನೇ ಹಂತ)ದ ಕೊಳವೆ ಮಾರ್ಗ ಯೋಜನೆ(ಕೆಕೆಬಿಎಂಪಿಎಲ್ ): ಕೊಚ್ಚಿ-ಕೊಟ್ಟನಾಡ್-ಬೆಂಗಳೂರು-ಮಂಗಳೂರು ಕೊಳವೆ ಮಾರ್ಗ ಯೋಜನೆ(ಕೆಕೆಬಿಎಂಪಿಎಲ್) ಮತ್ತು ಎನ್ನೂರ್-ತಿರುವಳ್ಳೂರು-ಬೆಂಗಳೂರು-ಪುದುಚೆರಿ-ನಾಪಟ್ಟಣಂ-ಮಧುರೈ-ಟುಟಿಕಾರಿನ್ ಕೊಳವೆ ಯೋಜನೆ (ಇಬಿಟಿಪಿಎನ್ಎಂಟಿ) ಅನ್ನು ದೇಶದ ದಕ್ಷಿಣ ಭಾಗದಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕೊಳವೆ ಮಾರ್ಗ ಯೋಜನೆ ಅಭಿವೃದ್ಧಿ ಕಾರ್ಯದ ಪ್ರಯತ್ನಗಳು ನಡೆದಿದ್ದು, ಇದರಿಂದ ಹಾಲಿ ಇರುವ ಅನಿಲ್ ಗ್ರಿಡ್ ಜೊತೆ ದಕ್ಷಿಣ ಭಾರತದ ನಗರಗಳನ್ನು ಕೆಕೆಬಿಎಂಪಿಎಲ್ ಮತ್ತು ಇಬಿಟಿಪಿಎನ್ಎಂಟಿ ಯೋಜನೆಗಳ ಮೂಲಕ ನೈಸರ್ಗಿಕ ಅನಿಲ ಮೂಲ(ದೇಶೀಯ ಹಾಗೂ ಆಮದು ಮಾಡಿಕೊಂಡ) ಒದಗಿಸಲಾಗುವುದು.

·        ವಾಹನಗಳಿಗೆ ಎಲ್ಎನ್ ಜಿ /ಸಿಎನ್ ಜಿ ಬಳಕೆಗೆ ಉತ್ತೇಜನ

ಅಕ್ಟೋಬರ್ 2019ರ ವೇಳೆಗೆ ದೇಶದ 55.17 ಲಕ್ಷ ಕುಟುಂಬಗಳು ಪಿಎನ್ ಜಿ ರೂಪದಲ್ಲಿ ಅಡುಗೆ ಉದ್ದೇಶಕ್ಕೆ ದೇಶೀಯ ಅನಿಲವನ್ನು ಪಡೆಯುವ ಪ್ರಯೋಜನವನ್ನು ಹೊಂದಿವೆ. ತೈಲ ಮತ್ತು ಅನಿಲ ಕಂಪನಿಗಳು ಜಂಟಿ ಸಹಭಾಗಿತ್ವ ಮತ್ತು ಸಿಜಿಡಿ ಕಂಪನಿಗಳ ಅಡಿಯಲ್ಲಿ 2024ರ ವೇಳೆಗೆ ಪಿಎನ್ ಜಿ ಜಾಲದ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯಲ್ಲಿ ಹೆಚ್ಚುವರಿಯಾಗಿ ಒಂದು ಕೋಟಿ ಪಿಎನ್ ಜಿ ಇಂಧನ ಬಳಸುವ ಕುಟುಂಬಗಳ ಗುರಿ ಸಾಧನೆ ಮಾಡುವ ಉದ್ದೇಶ ಹೊಂದಿದೆ. ಸರ್ಕಾರ ದೇಶೀಯ ಅನಿಲದ ಹಂಚಿಕೆಗೆ(ದೇಶದಲ್ಲಿ ಲಭ್ಯವಿರುವ ಅತಿ ಕಡಿಮೆ ದರದ) ಇಂಧನವನ್ನು ಕೊಳವೆ ಮಾರ್ಗದ ನೈಸರ್ಗಿಕ ಅನಿಲ(ಪಿಎನ್ ಜಿ) (ಗೃಹ) ಅನಿಲವನ್ನು ಕುಟುಂಬಗಳಿಗೆ ಪೂರೈಸಲು ಆದ್ಯತೆ ನೀಡಿದೆ  ಮತ್ತು ಸಾರಿಗೆ ವಲಯದಲ್ಲಿ ಘನೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) (ಸಾರಿಗೆ) ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ನಗರ ಅನಿಲ ವಿತರಣೆ(ಸಿಜಿಡಿ) ಜಾಲದಲ್ಲಿ 1947ರ ಕೈಗಾರಿಕಾ ವ್ಯಾಜ್ಯ ಕಾಯ್ದೆ(ಐಡಿಎ) ಅಡಿಯಲ್ಲಿ ‘ಸಾರ್ವಜನಿಕ ಬಳಕೆ’ ಅನ್ನು ಘೋಷಿಸಲಾಗಿದೆ. ಪ್ರಸ್ತುತ(ಅಕ್ಟೋಬರ್ 2019ರ ವೇಳೆಗೆ) 1838 ಸಿಎನ್ ಜಿ ಕೇಂದ್ರಗಳನ್ನು ಹೊಂದಲಾಗಿದ್ದು, ಅವುಗಳ ಮೂಲಕ ದೇಶದಲ್ಲಿರುವ 34.54 ಲಕ್ಷ ಸಿಎನ್ ಜಿ ವಾಹನಗಳಿಗೆ ಇಂಧನದ ಅಗತ್ಯತೆಯನ್ನು ನೀಗಿಸಲಾಗುತ್ತಿದೆ.

ಸರ್ಕಾರ ದೇಶಾದ್ಯಂತ ನಗರ ಅನಿಲ ವಿತರಣೆ(ಸಿಜಿಡಿ) ಜಾಲದಡಿ ಪಿಎನ್ ಜಿ(ಗೃಹ) ಮತ್ತು ಸಿಎನ್ ಜಿ(ಸಾರಿಗೆ) ಬಳಕೆಗೆ ಶೇ.100ರಷ್ಟು ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದೆ.

·        ನಗರ ಅನಿಲ ವಿತರಣೆ (ಸಿಜಿಡಿ) ಹರಾಜು

2006ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಕಾಯ್ದೆ ಅಡಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ(ಪಿಎನ್ ಜಿ ಆರ್ ಬಿ) ಸ್ಥಾಪಿಸಲಾಗಿದ್ದು, ಅದರಡಿ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ದೇಶಾದ್ಯಂತ ನಗರಗಳಲ್ಲಿ ಮತ್ತು ಇತರ ಭೌಗೋಳಿಕ ಪ್ರದೇಶಗಳಲ್ಲಿ ನಗರ ಅನಿಲ ವಿತರಣೆ(ಸಿಜಿಡಿ) ಜಾಲಗಳನ್ನು ಸ್ಥಾಪಿಸಲು ಅಧಿಕೃತ ಅನುಮೋದನೆಗಳನ್ನು ನೀಡಲಾಗುವುದು. ಕುಟುಂಬಗಳಿಗೆ ದೇಶೀಯ ಪಿಎನ್ ಜಿ ಪೂರೈಕೆ, ವಾಹನಗಳಿಗೆ ಸಿ ಎನ್ ಜಿ ಇಂಧನ ಕೇಂದ್ರಗಳ ಸ್ಥಾಪನೆ, ಸಣ್ಣ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪಿಎನ್ ಜಿ ಪೂರೈಕೆಯನ್ನು ಅಧಿಕೃತ ಸಂಸ್ಥೆಗಳ ಮೂಲಕ ಮಾತ್ರವೇ ನಡೆಸಲಾಗುವುದು.

9 ಮತ್ತು 10ನೇ ಸಿಜಿಡಿ ಹರಾಜು ಪ್ರಕ್ರಿಯೆಯಲ್ಲಿ 86 ಮತ್ತು 50 ಭೌಗೋಳಿಕ ಪ್ರದೇಶಗಳ (ಜಿಎ)ಗಳಿಗೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ. 10ನೇ ಸಿಜಿಡಿ ಹರಾಜು ಪ್ರಕ್ರಿಯೆಯಲ್ಲಿ 50 ಭೌಗೋಳಿಕ ಪ್ರದೇಶಗಳಲ್ಲಿ ಹಲವು ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದದಂತೆ 2,02,92,760 ಗೃಹ ಬಳಕೆ ಪಿಎನ್ ಜಿ(ಕೊಳವೆ ನೈಸರ್ಗಿಕ ಅನಿಲ)ಸಂಪರ್ಕಗಳು ಮತ್ತು ಸಾರಿಗೆ ವಲಯಕ್ಕಾಗಿ 3,578 ಸಿಎನ್ ಜಿ(ಘನೀಕೃತ ನೈಸರ್ಗಿಕ ಅನಿಲ) ಕೇಂದ್ರಗಳನ್ನು ಮುಂದಿನ 8 ವರ್ಷಗಳಲ್ಲಿ ಅಂದರೆ ಮಾರ್ಚ್ 31, 2029ರೊಳಗೆ ಸ್ಥಾಪಿಸಲಾಗುವುದು. ಅದಕ್ಕಾಗಿ 58,177 ಅಡಿ – ಕಿ.ಮೀ. ಉಕ್ಕಿನ ಕೊಳವೆ ಮಾರ್ಗ ಅಳವಡಿಸಲಾಗುವುದು. 10ನೇ ಸುತ್ತಿನ ಸಿಜಿಡಿ ಹರಾಜು ಪ್ರಕ್ರಿಯೆ ನಂತರ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 407 ಜಿಲ್ಲೆಗಳನ್ನೊಳಗೊಂಡಿರುವ 229 ಭೌಗೋಳಿಕ ಪ್ರದೇಶಗಳಲ್ಲಿ ಸಿಜಿಡಿ ಲಭ್ಯವಾಗುತ್ತಿದ್ದು, ಇದರೊಂದಿಗೆ ಒಟ್ಟಾರೆ ಶೇ.70ರಷ್ಟು ಭಾರತದ ಜನಸಂಖ್ಯೆ ಮತ್ತು ಶೇ.53ರಷ್ಟು ಭೌಗೋಳಿಕ ಪ್ರದೇಶವನ್ನು ವ್ಯಾಪ್ತಿಯನ್ನು ತಲುಪಿದಂತಾಗಿದೆ.

·        ದ್ರವೀಕೃತ ನೈಸರ್ಗಿಕ ಅನಿಲ(ಎಲ್ ಎನ್ ಜಿ)  ಗ್ಯಾಸಿಫಿಕೇಶನ್

ಪ್ರಸ್ತುತ ದೇಶದಲ್ಲಿ ವಾರ್ಷಿಕ 39.2 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ (ಎಂಎಂಟಿಪಿಎ) ಇಂಧನ ರಿ ಗ್ಯಾಸಿಫಿಕೇಶನ್ ಇರುವ 6 ಎಲ್ ಎನ್ ಜಿ ಟರ್ಮಿನಲ್ ಗಳು ಇವೆ. ಆ ಆರು ಟರ್ಮಿನಲ್ ಗಳು ದಹೇಜ್ (17.5 ಎಂಎಂಟಿಪಿಎ), ಹಾಜಿರಾ(5 ಎಂಎಂಟಿಪಿಎ), ದಾಭೂಲ್(1.7 ಎಂಎಂಟಿಪಿಎ), ಕೊಚ್ಚಿ(5 ಎಂಎಂಟಿಪಿಎ), ಮುಂದ್ರಾ(5 ಎಂಎಂಟಿಪಿಎ) ಮತ್ತು ಎನ್ನೋರ್(5 ಎಂಎಂಟಿಪಿಎ). ದಾಭೂಲ್   ಟರ್ಮಿನಲ್ ನ ಸಾಮರ್ಥ್ಯವನ್ನು ಮುಂಬರುವ ದಿನಗಳಲ್ಲಿ ಮತ್ತೆ 5 ಎಂಎಂಟಿಪಿಎಗೆ ಹೆಚ್ಚಿಸಿ ಅದನ್ನು ಬಳಕೆ ಮಾಡಿಕೊಳ್ಳುವ ಉದ್ದೇಶವಿದೆ.

ಸ್ವಚ್ಛ ಭಾರತ ಅಭಿಯಾನ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 2019ರ ಸೆಪ್ಟೆಂಬರ್ 6ರಂದು ನಡೆದ ಸ್ವಚ್ಛ ಮಹೋತ್ಸವ – 2019ನಲ್ಲಿ ಸ್ವಚ್ಛ ಕ್ರಿಯಾ ಯೋಜನೆ ವಿಭಾಗದಲ್ಲಿ ಸ್ವಚ್ಛ ಭಾರತ ಪ್ರಶಸ್ತಿಯನ್ನು ಗಳಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 2018-19ನೇ ಸಾಲಿನಲ್ಲಿ 342.50 ಕೋಟಿ ರೂ.ಗಳ ಬಜೆಟ್ಅನ್ನು ಕಾಯ್ದಿರಿಸಿದೆ. ಸತತ ನಿಗಾ ಮತ್ತು ಉನ್ನತ ಮಟ್ಟದಲ್ಲಿ ಪರಿಶೀಲನಾ ಸಭೆಗಳ ಸಹಾಯದಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತೈಲ ಮತ್ತು ಅನಿಲ ಸಾರ್ವಜನಿಕ ವಲಯ ಉದ್ದಿಮೆಗಳ ನೆರವಿನಿಂದ ಒಟ್ಟು 473 ಕೋಟಿ ರೂ.ಗಳನ್ನು ವೆಚ್ಚ ಮಾಡಿದ ಸಾಧನೆಯೊಂದಿಗೆ ಸುಮಾರು ಶೇ.138ರಷ್ಟು ಸಾಧನೆಯನ್ನು ತೋರಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ(ಎಂಒಪಿಎನ್ ಜಿ) ಇದು ತೈಲ ಮತ್ತು ಅನಿಲ ಕೇಂದ್ರ ಸರ್ಕಾರಿ ಒಡೆತನದ ಸಂಸ್ಥೆಗಳ ಜೊತೆ ಕಾರ್ಯ ನಿರ್ವಹಿಸುತ್ತಿದ್ದು, ಅದರ ಆಡಳಿತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲಿ ಬಾರೀ ಉತ್ಸಾಹ ಹಾಗೂ ಉಮೇದಿನೊಂದಿಗೆ 2019ರ ಜುಲೈ 1ರಿಂದ 15ರ ವರೆಗೆ ಸ್ವಚ್ಛತಾ ಪಕ್ವಾಡ ಸಾಪ್ತಾಹವನ್ನು ಆಚರಿಸಲಾಯಿತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು, ಸ್ವಚ್ಛ ಪಕ್ವಾಡ – 2019ನಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು ಮತ್ತು 2018-19ನೇ ಸಾಲಿನ ಅಂತರ ರಿಫೈನರಿ ಸ್ವಚ್ಛತಾ ಶ್ರೇಯಾಂಕದಲ್ಲಿ ವಿಜೇತರಾದವರಿಗೂ ಬಹುಮಾನ ವಿತರಿಸಿದರು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನೇತೃತ್ವದ ಈ ಯೋಜನೆಯ ಪರಿಣಾಮ ದೇಶಾದ್ಯಂತ 60 ಸಾವಿರಕ್ಕೂ ಅಧಿಕ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು ಮತ್ತು 200,000 ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು. ಪಕ್ವಾಡ 2019 ಭಾಗವಾಗಿ ಸ್ವಚ್ಛತಾ ಆಂದೋಲನಗಳು(8,450), ಜಾಗೃತಿ ಅಭಿಯಾನಗಳು (5,844), ಶಾಲಾ ವಿದ್ಯಾರ್ಥಿಗಳು ಮತ್ತು ಸಮುದಾಯಗಳಿಗೆ ಸ್ಪರ್ಧೆಗಳು(1,750) ಸೇರಿದಂತೆ  ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಈ ವರ್ಷ ಸ್ವಚ್ಛತಾ ಪಕ್ವಾಡದಲ್ಲಿ ಹಿಂದೆಂದೂ ನಿರೀಕ್ಷಿಸದ ರೀತಿಯಲ್ಲಿ 25 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಗಾಂಧೀಜಿ ಅವರಿಗೆ ಗೌರವ ನಮನ ಸಲ್ಲಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 2019ರ ಸೆಪ್ಟೆಂಬರ್ 11ರಿಂದ 27ರ ವರೆಗೆ ‘ಬಿಡಿ ಪ್ಲಾಸ್ಟಿಕ್ ಬಳಕೆ ಬೇಡವೆನ್ನಿ’ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತೆಗಾಗಿ ‘ಜನಾಂದೋಲನ’ ಹಮ್ಮಿಕೊಳ್ಳಲಾಗಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಬರುವ ಎಲ್ಲಾ ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಇತರ ಸಂಸ್ಥೆಗಳ ಸಾಮೂಹಿಕ ಪ್ರಯತ್ನದೊಂದಿಗೆ ಸ್ವಚ್ಛ ಹಾಗೂ ಹಸಿರು ಭಾರತ ನಿರ್ಮಾಣಕ್ಕೆ ಕೈಜೋಡಿಸಲಾಯಿತು. ಸಚಿವಾಲಯ ತನ್ನ ವ್ಯಾಪ್ತಿಗೆ ಒಳಪಡುವ ತೈಲ ಮತ್ತು ಅನಿಲ ಕೇಂದ್ರ ಸರ್ಕಾರಿ ಒಡೆತನದ ಸಂಸ್ಥೆಗಳ ಮೂಲಕ ‘ಸ್ವಚ್ಛತೆಯೇ ಸೇವೆ – 2019’ ಮೂಲಕ ಭಾರೀ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಂಡಿತು ಮತ್ತು ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಬಿಡಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡಲು ಮಹತ್ವದ ಹೆಜ್ಜೆ ಇಡಲಾಯಿತು. ಆ ಮೂಲಕ ಸ್ವಚ್ಛ ಭಾರತ ನಿರ್ಮಾಣವನ್ನು ವಾಸ್ತವವಾಗಿ ಜಾರಿಗೆ ತರಲು ಶ್ರಮಿಸಲಾಯಿತು.

·        ಅಂತಾರಾಷ್ಟ್ರೀಯ ಸಹಕಾರ/ ಪ್ರಮುಖ ಒಪ್ಪಂದಗಳು/ ಗುತ್ತಿಗೆಗಳು

ಎ) ನವದೆಹಲಿಯಲ್ಲಿ 2019ರ ಫೆಬ್ರವರಿಯಲ್ಲಿ ಭಾರತೀಯ 13ನೇ ಮಹತ್ವಾಕಾಂಕ್ಷೆಯ ಹೈಡ್ರೋಕಾರ್ಬನ್ ಸಮಾವೇಶ – ಪೆಟ್ರೋಟೆಕ್-2019 ಆಯೋಜಿಸಲಾಗಿತ್ತು. ಈ ದ್ವೈವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾರತದ ಹೈಡ್ರೋಕಾರ್ಬನ್ ವಲಯದ ಸ್ಥಿತಿಯನ್ನು ಜಾಗತಿಕ ತೈಲ ಮತ್ತು ಅನಿಲ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು.

ಬಿ) 2019ರ ಸೆಪ್ಟೆಂಬರ್ 22ರಂದು ಗೌರವಾನ್ವಿತ ಪ್ರಧಾನಮಂತ್ರಿಗಳು ಹೂಸ್ಟನ್ ನಲ್ಲಿ ಅಮೆರಿಕದ ಇಂಧನ ವಲಯಕ್ಕೆ ಸಂಬಂಧಿಸಿದ ಸಿಇಒಗಳ ಜೊತೆ ದುಂಡುಮೇಜಿನ ಸಭೆ ನಡೆಸಿದರು. ಈ ವೇಳೆ ಪಿಎಲ್ಎಲ್ ಮತ್ತು ಟೆಲ್ಲೋರಿಯಾನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅದರಡಿ ಪಿಎಲ್ಎಲ್ ಮತ್ತು ಅದರ ಅಧೀನ ಸಂಸ್ಥೆಗಳು ಉದ್ದೇಶಿತ ಡ್ರಿಫ್ಟ ವುಡ್ ಎಲ್ ಎನ್ ಜಿ ಯೋಜನೆಯಿಂದ 5 ಎಂಎಂಟಿಪಿಎ ಎಲ್ ಎನ್ ಜಿಯನ್ನು ಖರೀದಿಸುವ ಉದ್ದೇಶವನ್ನು ಹೊಂದಿದೆ.

ಸಿ) ಭಾರತ 2019ರ ಸೆಪ್ಟೆಂಬರ್ ನಲ್ಲಿ ಅಬುದಾಬಿಯಲ್ಲಿ ನಡೆದ ಅಮೇರ್(ಏಷ್ಯಾದ ಇಂಧನ ಸಚಿವಾಲಯಗಳ 8ನೇ ದುಂಡುಮೇಜಿನ ಸಭೆ)ಯ ಸಹ ಆತಿಥ್ಯವನ್ನು ವಹಿಸಿತ್ತು. ಭಾರತ 2021ರಲ್ಲಿ ನಡೆಯಲಿರುವ ಅಮೇರ್-9ನ ಆತಿಥ್ಯ ವಹಿಸಲಿದೆ.

ಡಿ) 2019ರ ಸೆಪ್ಟೆಂಬರ್ 10ರಂದು ಗೌರವಾನ್ವಿತ ಪ್ರಧಾನಮಂತ್ರಿಗಳು ಮತ್ತು ನೇಪಾಳದ ಗೌರವಾನ್ವಿತ ಪ್ರಧಾನಮಂತ್ರಿಗಳು, ನೇಪಾಳದ ಅಮೇಲ್ಕಗುಂಜ್ ನಿಂದ ಭಾರತದ ಮೋತಿಹರಿ ವರೆಗಿನ ದಕ್ಷಿಣ ಏಷ್ಯಾದ ಮೊದಲ ಗಡಿ ಭಾಗದ ಪೆಟ್ರೋಲಿಯಂ ಉತ್ಪನ್ನಗಳ ಕೊಳವೆ ಮಾರ್ಗವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು.

ಇ) 2019ರ ಅಕ್ಟೋಬರ್ 5ರಂದು ಗೌರವಾನ್ವಿತ ಪ್ರಧಾನಮಂತ್ರಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಗೌರವಾನ್ವಿತ ಶೇಖ್ ಹಸೀನಾ ಅವರು, ಬಾಂಗ್ಲಾದೇಶದಿಂದ ಎಲ್ ಪಿ ಜಿಯನ್ನು ದೊಡ್ಡ ಮಟ್ಟದಲ್ಲಿ ಆಮದು ಮಾಡಿಕೊಳ್ಳುವ ಯೋಜನೆಯನ್ನು ಜಂಟಿಯಾಗಿ ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದರು.

ಎಫ್) 2019ರ ಅಕ್ಟೋಬರ್ 8 ಮತ್ತು 9ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮಂಗೋಲಿಯಾದ ಶಿಯಾನ್ ಸಂದ್ ತೈಲ ಸಂಸ್ಕರಣಾ ಘಟಕದಲ್ಲಿ ಪೂರ್ಣಗೊಂಡಿರುವ ಮೂಲಸೌಕರ್ಯವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದರು. ಎಲ್ಒಸಿ ಅಡಿಯಲ್ಲಿ ಭಾರತ ಈ ತೈಲ ಸಂಸ್ಕರಣಾ ಘಟಕ ಯೋಜನೆಗೆ ಆರ್ಥಿಕ ನೆರವು ಒದಗಿಸಿದೆ.

ಜಿ) 2019ರ ಅಕ್ಟೋಬರ್ 13ರಂದು ನವದೆಹಲಿಯಲ್ಲಿ 3ನೇ ಐಐಟಿ(ಅಂತಾರಾಷ್ಟ್ರೀಯ ಚಿಂತಕರ ಸಭೆ)ಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭವಿಷ್ಯದಲ್ಲಿ ಭಾರತದ ತೈಲ ಮತ್ತು ಅನಿಲ ವಲಯದ ಬೆಳವಣಿಗೆಯ ಮಾರ್ಗಸೂಚಿ ಮತ್ತು ಸವಾಲುಗಳ ಬಗ್ಗೆ ಚರ್ಚಿಸಲಾಯಿತು.

ಎಚ್) 2019ರ ಅಕ್ಟೋಬರ್ 14 ಮತ್ತು 15ರಂದು ನವದೆಹಲಿಯಲ್ಲಿ 3ನೇ ಆವೃತ್ತಿಯ ಭಾರತೀಯ ಇಂಧನ ವೇದಿಕೆಯ ಸಿ ಇ ಆರ್ ಎ ಸಪ್ತಾಹ ನಡೆಯಿತು. ಈ ವೇಳೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಜಾಗತಿಕ ತೈಲ ಮತ್ತು ಅನಿಲ ಉದ್ಯಮದ ಸಿಇಒಗಳ ಜೊತೆ ಸಭೆ ನಡೆಸಿದರು.

ಐ) ಭಾರತೀಯ ಕಾರ್ಯತಂತ್ರ ಪೆಟ್ರೋಲಿಯಂ ನಿಕ್ಷೇಪಗಳ ನಿಯಮಿತ(ಐಎಸ್ ಪಿಆರ್ ಎಲ್) ಮತ್ತು ಸೌದಿಯ ಅರ್ಮಕೊ  ಜೊತೆ ಪಡೂರಿನ ಎಸ್ ಪಿ ಆರ್ ನಲ್ಲಿ ಎರಡು ಕ್ಯಾವರಾನ್ ಟನ್ ಗಳನ್ನು ತುಂಬುವ ಅವಕಾಶ ಶೋಧನೆ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಜೆ) 2019ರ ಸೆಪ್ಟೆಂಬರ್ 5ರಂದು ಸಾರಿಗೆ ವಲಯದಲ್ಲಿ ನೈಸರ್ಗಿಕ ಅನಿಲ ಬಳಕೆ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ರಷ್ಯಾದ ಇಂಧನ ಸಚಿವಾಲಯಗಳು ಒಡಂಬಡಿಕೆಗೆ ಸಹಿ ಹಾಕಿದವು.

ಕೆ) ಗೌರವಾನ್ವಿತ ಪ್ರಧಾನಮಂತ್ರಿಗಳು ರಷ್ಯಾದ ಗೌರವಾನ್ವಿತ ಅಧ್ಯಕ್ಷರೊಂದಿಗೆ ವಾರ್ಷಿಕ ದ್ವಿಪಕ್ಷೀಯ ಸಭೆ ನಡೆಸಿದ ನಂತರ 2019ರ ಸೆಪ್ಟೆಂಬರ್ 4ರಂದು ರಷ್ಯಾದ ವ್ಲಾಡಿವೊ ಸ್ಟಾಕ್ ನಲ್ಲಿ 2019-2024ರ ಅವಧಿಯಲ್ಲಿ ಹೈಡ್ರೋ ಕಾರ್ಬನ್ ವಲಯದಲ್ಲಿ ಭಾರತ ಮತ್ತು ರಷ್ಯಾ ನಡುವೆ ಸಹಕಾರ ಕುರಿತು ಜಂಟಿ ಹೇಳಿಕೆಯನ್ನು ನೀಡಲಾಯಿತು. ಈ ಜಂಟಿ ಹೇಳಿಕೆಯಲ್ಲಿ ಆರ್ಕ್ ಟಿಕ್ ಸೇರಿದಂತೆ ಎಲ್ ಎನ್ ಜಿ ಯೋಜನೆಗಳಲ್ಲಿ ಭಾರತ ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳ ಜೊತೆಗೂಡಿ ಅವಕಾಶಗಳ ಶೋಧನೆಗೆ ಮಾರ್ಗಸೂಚಿ ಒದಗಿಸಿತು.

·        ಎಥೆನಾಲ್ ಮಿಶ್ರಿತ ಪೆಟ್ರೋಲ್(ಇಬಿಪಿ) ಕಾರ್ಯಕ್ರಮ

      i.        ಎಥೆನಾಲ್ ಪೂರೈಕೆ ವರ್ಷ(ಇ ಎಸ್ ವೈ) 2018-19ರಲ್ಲಿ ಮಿಶ್ರಣ ಉದ್ದೇಶಕ್ಕಾಗಿ ತೈಲ ಮಾರುಕಟ್ಟೆ ಕಂಪನಿಗಳು 188.57 ಕೋಟಿ ಲೀಟರ್ ಎಥೆನಾಲ್ ಅನ್ನು ಖರೀದಿಸಿವೆ. 2019-20ನೇ ಸಾಲಿನ ಇ ಎಸ್ ವೈ ವರ್ಷದಲ್ಲಿ ಸರ್ಕಾರ ಕಚ್ಚಾ ಸಾಮಗ್ರಿಗಳನ್ನು ಪರಿಗಣಿಸಿ,  ಎಥೆನಾಲ್ ಖರೀದಿಗೆ ಪ್ರೋತ್ಸಾಹಕರ ದರ ಹೆಚ್ಚಳ ಮಾಡಿದೆ. ಅಂದರೆ ಸಿ-ಗುಣಮಟ್ಟದ ಮೊಲಾಸಿಸ್ ಗೆ  ಪ್ರತಿಲೀಟರ್ ಗೆ 43.75 ರೂ. ಬಿ-ಗುಣಮಟ್ಟದ ಮೊಲಾಸಿಸ್ ಗೆ ಪ್ರತಿ ಲೀಟರ್ ಗೆ 54.27 ರೂಪಾಯಿ, ಕಬ್ಬಿನ ಹಾಲು/ಸಕ್ಕರೆ/ ಸಕ್ಕರೆ ದ್ರವಕ್ಕೆ ಪ್ರತಿ ಲೀಟರ್ ಗೆ 59.48 ರೂಪಾಯಿ ಹಾಳಾದ ಆಹಾರ ಧಾನ್ಯಗಳಿಗೆ ಪ್ರತಿ ಲೀಟರ್ ಗೆ 47.63 ರೂಪಾಯಿ ನಿಗದಿ ಪಡಿಸಲಾಗಿದೆ. ಸಕ್ಕರೆ ಮತ್ತು ಸಕ್ಕರೆ ಸಿರಪ್  ಗಳನ್ನು ಇದೇ ಮೊದಲ ಬಾರಿಗೆ ಎಥೆನಾಲ್ ಮಿಶ್ರಣಕ್ಕೆ ಅವಕಾಶ ನೀಡಲಾಗಿದ್ದು, ಇದು ಉದ್ಯಮದಲ್ಲಿ ತನ್ನ ದಾಸ್ತಾನನ್ನು ಹೆಚ್ಚಿಸಿಕೊಳ್ಳಲು ನೆರವಾಗಿದೆ. ಅಲ್ಲದೆ ಸರ್ಕಾರ ಈ ವಲಯದಲ್ಲಿ ದೀರ್ಘಕಾಲದಲ್ಲಿ ಹೊಸ ಬಂಡವಾಳವನ್ನು ಆಕರ್ಷಿಸುವ ಉದ್ದೇಶದಿಂದ ದೀರ್ಘಕಾಲದ ಎಥೆನಾಲ್ ಖರೀದಿ ನೀತಿಯನ್ನು ಪ್ರಕಟಿಸಿದೆ. ಕೈಗಾರಿಕೆಗಳು(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ತಿದ್ದುಪಡಿ ಅಂಶಗಳಿಂದಾಗಿ ಕೇಂದ್ರ ಸರ್ಕಾರ ಎಥೆನಾಲ್ ಉತ್ಪಾದನೆ ಸಾಗಾಣೆ ಮತ್ತು ದಾಸ್ತಾನಿನ ಮೇಲೆ ನಿಯಂತ್ರಣ ಹೊಂದಲಿದ್ದು, ಆ ಕಾಯ್ದೆಯನ್ನು 13 ರಾಜ್ಯಗಳು ಜಾರಿಗೊಳಿಸಿವೆ.

 

·        ಜೀವಿಕ ಡೀಸಲ್ ಕಾರ್ಯಕ್ರಮ

ಬಳಕೆ ಮಾಡಿದ ಅಡುಗೆ ಅನಿಲ(ಯುಸಿಒ) ದಿಂದ ಜೈವಿಕ ಡೀಸಲ್ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ತೈಲ ಮಾರುಕಟ್ಟೆ ಕಂಪನಿಗಳು 2019ರ ಆಗಸ್ಟ್ 10ರಂದು ದೇಶಾದ್ಯಂತ ನೂರು ಸ್ಥಳಗಳಲ್ಲಿ ಯುಸಿಒದಿಂದ ಉತ್ಪಾದಿಸಿದ ಜೈವಿಕ ಡೀಸಲ್ ಪೂರೈಕೆಗೆ ಆಸಕ್ತಿ ವ್ಯಕ್ತಪಡಿಸುವಿಕೆ ಟೆಂಡರ್ ಅನ್ನು ಕರೆದಿದ್ದವು. ನಂತರ 2019ರ ಅಕ್ಟೋಬರ್ 10ರಂದು ಇದನ್ನು 200 ಸ್ಥಳಗಳಿಗೆ ವಿಸ್ತರಿಸಲಾಯಿತು. ಯುಸಿಒ ಆಧಾರಿತ ಜೈವಿಕ ಡೀಸಲ್ ಬೆಲೆಯನ್ನು ಮೂರು ವರ್ಷಗಳಿಗೆ ನಿಗದಿಪಡಿಸಲಾಗಿದೆ. ಮೊದಲ ವರ್ಷಕ್ಕೆ ಪ್ರತಿ ಲೀಟರ್ ಗೆ 51 ರೂಪಾಯಿ ನಿಗದಿಪಡಿಸಲಾಗಿದ್ದು, ಎರಡನೇ ವರ್ಷಕ್ಕೆ 52.7 ರೂ. ಮತ್ತು ಮೂರನೇ ವರ್ಷಕ್ಕೆ ಪ್ರತಿ ಲೀಟರ್ ಗೆ 54.5 ರೂ. ನಿಗದಿಪಡಿಸಲಾಗಿದೆ. ಈ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ ಜಿಎಸ್ ಟಿ ಮತ್ತು ಸಾರಿಗೆ ವೆಚ್ಚವನ್ನು ಭರಿಸಬೇಕಾಗುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 2019ರ ಏಪ್ರಿಲ್ 30ರಂದು ‘ಸಾರಿಗೆ ಉದ್ದೇಶಕ್ಕಾಗಿ ಹೈಸ್ಪೀಡ್ ಡೀಸಲ್ ಜೊತೆ ಜೈವಿಕ ಡೀಸಲ್ ಮಿಶ್ರಣ ಮಾರಾಟ ಮಾರ್ಗಸೂಚಿ – 2019’ ಅಧಿಸೂಚನೆ ಹೊರಡಿಸಿದೆ.

·        ಎರಡನೇ ತಲೆಮಾರಿನ ಎಥೆನಾಲ್

ಎರಡನೇ ತಲೆಮಾರಿನ(2ಜಿ) ಮಾರ್ಗದ ಮೂಲಕ ಎಥೆನಾಲ್ ಉತ್ಪಾದನೆಗೆ ಪರ್ಯಾಯ ಮಾರ್ಗವನ್ನು ತೆರೆಯುವ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹನ್ನೆರೆಡು 2ಜಿ ಜೈವಿಕ ಅನಿಲ ಸಂಸ್ಕರಣಾ ಘಟಕಗಳನ್ನು ತೆರೆಯುವ ಪ್ರಕ್ರಿಯೆ ಆರಂಭಿಸಿವೆ. 5 2ಜಿ ಬಯೋ ರಿಫೈನರಿ ಯೋಜನೆಗಳು ಭಟಿಂಡಾ, ಬರ್ಗಡ್, ನುಮಲೀಗಡ, ಪಾಣಿಪತ್ ಮತ್ತು ಗೋರಖ್ ಪುರ್ ನಲ್ಲಿ ನಿರ್ಮಾಣ ಹಂತದಲ್ಲಿವೆ.

ಎರಡನೇ ತಲೆಮಾರಿನ ಜೈವಿಕ ಇಂಧನ ಘಟಕಗಳ ಸ್ಥಾಪನೆಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ‘ಪ್ರಧಾನಮಂತ್ರಿ ಜಿ-1’(ಜೈವ್ ಇಂಧನ – ವಾತಾವರಣ ಅನುಕೂಲ ಫಸಲ್ ಅವಶೇಷ್ ನಿವಾರಣ್) ಯೋಜನೆಯನ್ನು ಆರಂಭಿಸಿದ್ದು, ಆ ಮೂಲಕ ಸ್ಥಳೀಯವಾಗಿ ದೊರಕುವ ಬಯೋಮಾಸ್ (ಜೀವಾನಿಲ) ಮತ್ತು ನವೀಕರಿಸಬಹುದಾದ ತ್ಯಾಜ್ಯಗಳನ್ನು ಬಳಸಿ ಜೈವಿಕ ಸಮಗ್ರ ಜೈವಿಕ ಎಥೆನಾಲ್ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸಲಾಗುವುದು. ಈ ಯೋಜನೆ ಅಡಿಯಲ್ಲಿ ಐಒಸಿಎಲ್ ನಿಂದ(ಪಾಣಿಪಟ್ ಘಟಕ), ಬಿಪಿಸಿಎಲ್ ನಿಂದ ಬರ್ಗಡ್, ಎಚ್ ಪಿ ಸಿ ಎಲ್ ನಿಂದ ಭಟಿಂಡಾ, ಎಂ ಆರ್ ಪಿ ಎಲ್ ನಿಂದ ದಾವಣಗೆರೆ ಮತ್ತು ಎನ್ಆರ್ ಎಲ್ ನಿಂದ ನುಮಾಲಿಗಢ ಅಲ್ಲದೆ ಭಾರತೀಯ ತೈಲ ನಿಗಮದ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದಿಂದ ಪಾಣಿಪತ್ ನಲ್ಲಿ  ಪ್ರದರ್ಶನ ಘಟಕವನ್ನು ಸ್ಥಾಪಿಸುವ ಪ್ರಸ್ತಾವಗಳು ಬಂದಿವೆ.

***********


(Release ID: 1597319) Visitor Counter : 1963