ಪ್ರಧಾನ ಮಂತ್ರಿಯವರ ಕಛೇರಿ

ಭಾರತದಲ್ಲಿ ಬ್ರಿಕ್ಸ್ ಜಲ ಸಚಿವರುಗಳ ಪ್ರಥಮ ಸಭೆ ಆಯೋಜಿಸಲು ಪ್ರಧಾನಮಂತ್ರಿ ಪ್ರಸ್ತಾಪ

Posted On: 14 NOV 2019 8:53PM by PIB Bengaluru

ಭಾರತದಲ್ಲಿ ಬ್ರಿಕ್ಸ್ ಜಲ ಸಚಿವರುಗಳ ಪ್ರಥಮ ಸಭೆ ಆಯೋಜಿಸಲು ಪ್ರಧಾನಮಂತ್ರಿ ಪ್ರಸ್ತಾಪ

ನಾವಿನ್ಯತೆ ನಮ್ಮ ಅಭಿವೃದ್ಧಿಯ ಆಧಾರವಾಗಿದೆ: ಪ್ರಧಾನಮಂತ್ರಿ, 11ನೇ ಬ್ರಿಕ್ಸ್ ಶೃಂಗಸಭೆಯ ಮಹಾಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಿಜಿಲ್ ನಲ್ಲಿಂದು 11ನೇ ಬ್ರಿಕ್ಸ್ ಶೃಂಗಸಭೆಯ ಮಹಾಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಬ್ರಿಕ್ಸ್ ಇತರ ರಾಷ್ಟ್ರಗಳ ಮುಖ್ಯಸ್ಥರುಗಳು ಕೂಡ ಈ ಮಹಾಧಿವೇಶನದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಶೃಂಗಸಭೆಯ ಧ್ಯೇಯವಾಕ್ಯ “ನಾವಿನ್ಯತೆಯ ಭವಿಷ್ಯಕ್ಕೆ ಆರ್ಥಿಕ ಪ್ರಗತಿ’’ ಎಂಬುದಾಗಿದ್ದು ಇದು ಅತ್ಯಂತ ಸೂಕ್ತವಾಗಿದೆ ಎಂದರು. ನಾವಿನ್ಯತೆ ನಮ್ಮ ಅಭಿವೃದ್ಧಿಯ ಆಧಾರವಾಗಿದೆ ಎಂದೂ ಹೇಳಿದರು. ನಾವಿನ್ಯತೆಗಾಗಿ ಬ್ರಿಕ್ಸ್ ಅಡಿ ಸಹಕಾರ ಬಲಪಡಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಬ್ರಿಕ್ಸ್ ನ ನಿರ್ದೇಶಗಳನ್ನು ನಾವು ಪರಿಗಣಿಸಬೇಕು ಎಂದು ಹೇಳಿದ ಪ್ರಧಾನಮಂತ್ರಿಯವರು, ಮುಂದಿನ ಹತ್ತು ವರ್ಷಗಳಲ್ಲಿ ಪರಸ್ಪರ ಸಹಕಾರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರಬೇಕು ಎಂದರು. ಹಲವು ಕ್ಷೇತ್ರಗಳಲ್ಲಿನ ಯಶಸ್ಸಿನ ನಡುವೆಯೂ ಮತ್ತೆ ಕೆಲವು ಕ್ಷೇತ್ರಗಳಲ್ಲಿ ಪ್ರಯತ್ನವನ್ನು ಹೆಚ್ಚಿಸಲು ಅವಕಾಶಗಳಿವೆ ಎಂದು ಅವರು ಒತ್ತಿ ಹೇಳಿದರು. ಬ್ರಿಕ್ಸ್ ರಾಷ್ಟ್ರಗಳ ಒಟ್ಟು ಜನಸಂಖ್ಯೆ ವಿಶ್ವ ಜನಸಂಖ್ಯೆಯ ಶೇಕಡ 40ಕ್ಕೂ ಹೆಚ್ಚು ಇದ್ದರೂ, ಅಂತರ ಬ್ರಿಕ್ಸ್ ವಾಣಿಜ್ಯ ವಿಶ್ವ ವಾಣಿಜ್ಯದ ಶೇಕಡ 15ರಷ್ಟು ಮಾತ್ರವಿದ್ದು, ಪರಸ್ಪರ ವಾಣಿಜ್ಯ ಮತ್ತು ಹೂಡಿಕೆಗೆ ವಿಶೇಷ ಗಮನ ಹರಿಸಬೇಕೆಂದು ಪ್ರಧಾನಮಂತ್ರಿ ಕರೆ ನೀಡಿದರು.
ಇತ್ತೀಚೆಗಷ್ಟೇ ಭಾರತದಲ್ಲಿ ಆರಂಭಿಸಲಾಗಿರುವ ಫಿಟ್ ಇಂಡಿಯಾ ಚಳವಳಿಯನ್ನು ಸ್ಮರಿಸಿದ ಅವರು, ಬ್ರಿಕ್ಸ್ ರಾಷ್ಟ್ರಗಳ ನಡುವೆ ಸದೃಢತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ವಿನಿಮಯ ಮತ್ತು ಸಂಪರ್ಕ ಹೆಚ್ಚಿಸಲು ತಾವು ಬಯಸುವುದಾಗಿ ಹೇಳಿದರು. ಸುಸ್ಥಿರ ಜಲ ನಿರ್ವಹಣೆ ಮತ್ತು ನೈರ್ಮಲ್ಯ ನಗರ ಪ್ರದೇಶಗಳಿಗೆ ಪ್ರಮುಖ ಸವಾಲಾಗಿದ್ದು, ಭಾರತದಲ್ಲಿ ಬ್ರಿಕ್ಸ್ ಜಲ ಸಚಿವರುಗಳ ಪ್ರಥಮ ಸಭೆಯನ್ನು ನಡೆಸುವ ಪ್ರಸ್ತಾಪ ಮಂಡಿಸಿದರು.
ಬ್ರಿಕ್ಸ್ ನ ಪ್ರಥಮ ವಿಚಾರ ಸಂಕಿರಣ ಭಯೋತ್ಪಾದನೆ ನಿಗ್ರಹ ವ್ಯೂಹಗಳ ಕುರಿತಾಗಿದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ಐದು ಕಾರ್ಯ ಗುಂಪುಗಳ ಇಂಥ ಪ್ರಯತ್ನಗಳು ಮತ್ತು ಚಟುವಟಿಕೆಗಳು ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ವಿರುದ್ಧ ಬ್ರಿಕ್ಸ್ ನ ಬಲವಾದ ಸಹಕಾರವನ್ನು ಹೆಚ್ಚಿಸುತ್ತದೆ ಎಂದರು.
ವೀಸಾಗಳು, ಸಾಮಾಜಿಕ ಭದ್ರತೆ ಒಪ್ಪಂದ ಮತ್ತು ವಿದ್ಯಾರ್ಹತೆಯ ಪರಸ್ಪರ ಮಾನ್ಯತೆಯೊಂದಿಗೆ ನಾವು ಐದು ದೇಶಗಳ ಜನರಿಗೆ ಪರಸ್ಪರ ಪ್ರಯಾಣ ಮತ್ತು ಕೆಲಸಕ್ಕೆ ಹೆಚ್ಚು ಅನುಕೂಲಕರ ವಾತಾವರಣವನ್ನು ನೀಡುತ್ತೇವೆ ಎಂದು ಪ್ರಧಾನಮಂತ್ರಿ ಪರಿಸಮಾಪ್ತಿಗೊಳಿಸಿದರು.



(Release ID: 1592717) Visitor Counter : 109