ಪ್ರಧಾನ ಮಂತ್ರಿಯವರ ಕಛೇರಿ
ದಸರಾ ಆಚರಣೆಯ ಸಂದರ್ಭದಲ್ಲಿ ದೆಹಲಿಯ ದ್ವಾರಕಾದ ಡಿಡಿಎ ಮೈದಾನದಲ್ಲಿ ಪ್ರಧಾನ ಮಂತ್ರಿಯವರ ಭಾಷಣ
प्रविष्टि तिथि:
08 OCT 2019 9:05PM by PIB Bengaluru
ದಸರಾ ಆಚರಣೆಯ ಸಂದರ್ಭದಲ್ಲಿ ದೆಹಲಿಯ ದ್ವಾರಕಾದ ಡಿಡಿಎ ಮೈದಾನದಲ್ಲಿ ಪ್ರಧಾನ ಮಂತ್ರಿಯವರ ಭಾಷಣ
ಜೈ ಶ್ರೀ ರಾಮ್! ಜೈ ಶ್ರೀ ರಾಮ್!
ಜೈ ಶ್ರೀ ರಾಮ್! ಜೈ ಶ್ರೀ ರಾಮ್!
ಜೈ ಶ್ರೀ ರಾಮ್! ಜೈ ಶ್ರೀ ರಾಮ್!
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ನನ್ನ ಪ್ರೀತಿಯ ಸಂಸ್ಕೃತಿ-ಪ್ರೇಮಿ ಸಹೋದರ ಸಹೋದರಿಯರೇ! ವಿಜಯದಶಮಿಯ ಶುಭ ಹಬ್ಬಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು.
ಭಾರತ ಹಬ್ಬಗಳ ನೆಲ. ಭಾರತದ ಯಾವುದೇ ಮೂಲೆಯಲ್ಲಿ 365 ದಿನಗಳಲ್ಲಿ ಹಬ್ಬವನ್ನು ಆಚರಿಸದ ಒಂದು ದಿನವೂ ಇಲ್ಲ.
ಸಾವಿರಾರು ವರ್ಷಗಳ ಸಾಂಸ್ಕೃತಿಕ ಸಂಪ್ರದಾಯದಿಂದಾಗಿ, ನಮ್ಮ ಜೀವನವು ಅನೇಕ ವೀರ ಪೌರಾಣಿಕ ಕಥೆಗಳೊಂದಿಗೆ ಸಂಬಂಧ ಹೊಂದಿದೆ. ಈ ಪರಂಪರೆ ನಮಗೆ ಬಲವಾದ ಸಾಂಸ್ಕೃತಿಕ ಇತಿಹಾಸವನ್ನು ನೀಡಿದೆ. ನಮ್ಮ ದೇಶವು ಹಬ್ಬಗಳನ್ನು ಸಂಸ್ಕೃತಿ, ಶಿಕ್ಷಣ ಮತ್ತು ಸಾಮೂಹಿಕ ಸಾಮಾಜಿಕ ಜೀವನದ ನಿರಂತರ ನವ ಯೌವ್ವನಗೊಳಿಸುವ ಮಾರ್ಗವನ್ನಾಗಿ ಮಾಡಿದೆ.
ಹಬ್ಬಗಳು ನಮ್ಮನ್ನು ಬೆಸೆಯುತ್ತವೆ; ಹಬ್ಬಗಳು ನಮಗೆ ಸ್ಫೂರ್ತಿ ನೀಡುತ್ತವೆ. ಹಬ್ಬಗಳು ನಮಗೆ ಉತ್ಸಾಹವನ್ನು ತುಂಬುತ್ತವೆ ಮತ್ತು ಹೊಸ ಕನಸುಗಳನ್ನು ಹೊಂದುವ ಸಾಮರ್ಥ್ಯವನ್ನೂ ನೀಡುತ್ತವೆ. ನಮ್ಮ ರಕ್ತದಲ್ಲೇ ಹಬ್ಬಗಳು ಇವೆ, ಆದ್ದರಿಂದ ಹಬ್ಬಗಳು ಭಾರತದ ಸಾಮಾಜಿಕ ಜೀವನದ ಆತ್ಮ. ಈ ಹಬ್ಬದ ಅಂಶದಿಂದಾಗಿ, ಈ ಸಾವಿರ ವರ್ಷಗಳ ಹಳೆಯ ಸಂಪ್ರದಾಯವು ಕ್ಲಬ್ ಸಂಸ್ಕೃತಿಯಾಗಿ ಬದಲಾಗಬೇಕಾಗಿಲ್ಲ. ಹಬ್ಬಗಳು ಒಬ್ಬರ ಭಾವನೆಗಳನ್ನು ವ್ಯಕ್ತಪಡಿಸುವ ಅತ್ಯುತ್ತಮ ಮಾಧ್ಯಮವಾಗಿವೆ ಮತ್ತು ಇದು ಹಬ್ಬಗಳ ಶಕ್ತಿಯೂ ಆಗಿದೆ.
ಹಬ್ಬಗಳ ಸಮಯದಲ್ಲಿ, ಪ್ರತಿಭೆಯನ್ನು ಉತ್ತಮಗೊಳಿಸಲು, ಪ್ರತಿಭೆಗೆ ಸಾಮಾಜಿಕ ಘನತೆಯನ್ನು ನೀಡಲು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಅದು ಕಲೆಯಾಗಿರಲಿ, ಅದು ಸಂಗೀತ ವಾದ್ಯಗಳು, ಹಾಡು ಅಥವಾ ನೃತ್ಯವಾಗಿರಲಿ; ಎಲ್ಲಾ ರೀತಿಯ ಕಲೆಗಳು ನಮ್ಮ ಹಬ್ಬಗಳೊಂದಿಗೆ ಬೇರ್ಪಡಿಸಲಾಗದಂತಹ ಸಂಬಂಧ ಹೊಂದಿವೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯಿಂದಾಗಿ, ಹಬ್ಬಗಳ ಮೂಲಕ ನಮ್ಮ ಜೀವನದಲ್ಲಿ ಕಲೆಯ ಉಪಸ್ಥಿತಿಯಿಂದಾಗಿ, ನಮ್ಮ ಸಮಾಜದಲ್ಲಿ ರೋಬೋಟ್ಗಳಾಗದೆ ನಾವು ನಿಜವಾದ ಅರ್ಥದಲ್ಲಿ ಮನುಷ್ಯರಾಗಿದ್ದೇವೆ. ಹಬ್ಬಗಳ ಮೂಲಕ ಮಾನವೀಯತೆ, ಭಾವನೆಗಳು, ಸಹಾನುಭೂತಿ ಮತ್ತು ದಯೆ ನಿರಂತರವಾಗಿ ಪುನಶ್ಚೇತನಗೊಳ್ಳುತ್ತಿದೆ.
ಅದೇ ರೀತಿ, ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ, ನವರಾತ್ರಿಯ ಹಬ್ಬವನ್ನು ಆಚರಿಸದ ಭಾರತದ ಯಾವುದೇ ಮೂಲೆಯೂ ಇಲ್ಲ. ಶಕ್ತಿ ಸಾಧನದ ಹಬ್ಬ, ಶಕ್ತಿ ಪೂಜೆಯ ಹಬ್ಬವು ಆಂತರಿಕ ಆತ್ಮದ ನ್ಯೂನತೆಗಳನ್ನು ಮತ್ತು ಅಭದ್ರತೆಗಳನ್ನು ಕಡಿಮೆ ಮಾಡುತ್ತದೆ. ಈ ಶಕ್ತಿಯನ್ನು ಒಳಗಿನಿಂದ ಹೊಸ ಶಕ್ತಿಯನ್ನು ರವಾನಿಸುವ ಮೂಲಕ ಹೊಸ ರೂಪದಲ್ಲಿ ಪೂಜಿಸಲಾಗುತ್ತದೆ.
ತಾಯಿಯನ್ನು ಪೂಜಿಸುವ ಈ ದೇಶದಲ್ಲಿ, ಶಕ್ತಿಯನ್ನು ಪೂಜಿಸುವ ಈ ದೇಶದಲ್ಲಿ, ಈ ಭೂಮಿಯಲ್ಲಿರುವ ಪ್ರತಿಯೊಬ್ಬ ತಾಯಿ ಮತ್ತು ಮಗಳ ಗೌರವ, ಹೆಮ್ಮೆ ಮತ್ತು ಘನತೆಯನ್ನು ಕಾಪಾಡುವುದು ಎಲ್ಲ ಜನರ ಮತ್ತು ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ.
ಹಾಗಾಗಿ ಈ ಬಾರಿ 'ಮನ್ ಕಿ ಬಾತ್' ನಲ್ಲಿ ನಮ್ಮ ದೇಶದಲ್ಲಿ ಹಬ್ಬಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿವೆ ಎಂದು ಹೇಳಿದ್ದೆ. ನಾವು ಹೆಮ್ಮೆಯಿಂದ ಬದಲಾವಣೆಯನ್ನು ಸ್ವೀಕರಿಸುವ ಸಮಾಜ. ನಾವೂ ಸಹ ಸವಾಲುಗಳನ್ನು ಸ್ವೀಕರಿಸುತ್ತೇವೆ ಮತ್ತು ಸವಾಲುಗಳನ್ನು ಎಸೆಯುತ್ತೇವೆ ಮತ್ತು ಅಗತ್ಯಕ್ಕೆ ತಕ್ಕಂತೆ ನಮ್ಮನ್ನು ಬದಲಾಯಿಸಿಕೊಳ್ಳಬಲ್ಲ ಜನರು ನಾವು.
ಇನ್ನೂ ಸಮಯವಿದ್ದಾಗಲೇ ಬದಲಾವಣೆಗಳನ್ನು ತರಬೇಕು. ನಾವು ಹೇಗೆ ತರುತ್ತೇವೆ ಎಂದು ಯಾರಾದರೂ ಕೇಳಿದಾಗ ನಾವು ಮುಂದುವರಿಯುತ್ತೇವೆ; ಕಾರಣ ಏನು? ಯಾಕೆಂದರೆ, ನಮ್ಮ ಸಮಾಜದಲ್ಲಿ ಕೆಟ್ಟದ್ದೊಂದು ಇದ್ದಾಗ, ಆ ದುಷ್ಕೃತ್ಯಗಳ ವಿರುದ್ಧ ಹೋರಾಡಲು ನಮ್ಮ ಸಮಾಜದೊಳಗೆ ಮಹಾನ್ ಪುರುಷರು ಜನಿಸುತ್ತಾರೆ. ನಮ್ಮ ಸಮಾಜದ ಆ ವ್ಯಕ್ತಿಯು ಸಮಾಜದಲ್ಲ್ಲಿರುವ ದುಷ್ಕೃತ್ಯಗಳ ವಿರುದ್ಧ ಹೋರಾಡಲು ಹೊರಟಾಗ, ಆರಂಭದಲ್ಲಿ ಸಂಘರ್ಷವಿರುತ್ತದೆ, ಆದರೆ ನಂತರ ಅದೇ ಮನುಷ್ಯನು ಪೂಜ್ಯ ತಪಸ್ವಿ ಶಿಕ್ಷಕನಾಗುತ್ತಾನೆ ಮತ್ತು ಸಮಾಜಕ್ಕೆ ಸ್ಫೂರ್ತಿಯಾಗುತ್ತಾನೆ.
ಆದ್ದರಿಂದ ನಾವು ಬದಲಾವಣೆಯನ್ನು ನಿರಂತರವಾಗಿ ಸ್ವೀಕರಿಸುವ ಜನರು. ಜನರು ಬದಲಾವಣೆಯನ್ನು ಸ್ವೀಕರಿಸುತ್ತಿರುವುದರಿಂದ, ದೀಪಾವಳಿಯ ಹಬ್ಬದಂದು ನಾವು ಮಹಾಲಕ್ಷ್ಮಿಯನ್ನು ಪೂಜಿಸುತ್ತೇವೆ ಎಂದು ನಾನು ಈ ಬಾರಿ 'ಮನ್ ಕಿ ಬಾತ್' ಸಂಚಿಕೆಯಲ್ಲಿ ಹೇಳಿದ್ದೆ. ನಾವು ಲಕ್ಷ್ಮಿಯನ್ನು ಬಹಳ ಉತ್ಸಾಹದಿಂದ ಸ್ವಾಗತಿಸುತ್ತೇವೆ. ಮುಂದಿನ ದೀಪಾವಳಿ ಅಥವಾ ಮುಂದಿನ ವರ್ಷದವರೆಗೆ ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ನಮ್ಮೊಂದಿಗೆ ಇರುತ್ತಾಳೆ ಎಂಬ ಕನಸು ನಮ್ಮಲ್ಲಿದೆ. ಲಕ್ಷ್ಮಿ ನಮ್ಮೊಂದಿಗೆ ಸದಾ ಇರಬೇಕೆಂದು ನಾವು ಬಯಸುತ್ತೇವೆ.
'ಮನ್ ಕಿ ಬಾತ್' ನಲ್ಲಿ ನಾನು ಹೇಳಿದ್ದು, ಲಕ್ಷ್ಮಿಯನ್ನು ಪೂಜಿಸುವ ದೇಶದಲ್ಲಿ, ನಮ್ಮ ಮನೆಗಳು, ಹಳ್ಳಿಗಳು, ನಮ್ಮ ನೆರೆಹೊರೆಗಳಲ್ಲಿ ಕೂಡ ಲಕ್ಷ್ಮಿ ಇದ್ದಾಳೆ, ಇಲ್ಲಿ ನಮ್ಮ ಹೆಣ್ಣುಮಕ್ಕಳನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ನಮ್ಮ ನಗರಗಳಲ್ಲಿ ನಮ್ಮ ಹಳ್ಳಿಗಳಲ್ಲಿ, ನೆರೆಹೊರೆಯಲ್ಲಿ, ನಮ್ಮ ವಾರ್ಡ್ಗಳಲ್ಲಿರುವ ಹೆಣ್ಣುಮಕ್ಕಳು, ತಮ್ಮ ಜೀವನದಲ್ಲಿ ಇತರರಿಗೆ ಸ್ಫೂರ್ತಿ ನೀಡುವ ಏನನ್ನಾದರೂ ಸಾಧಿಸಿದಾಗ ಈ ದೀಪಾವಳಿಯಂದು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ವರನ್ನು ಗೌರವಿಸಬೇಕು ಮತ್ತು ಅದು ನಮ್ಮ ಲಕ್ಷ್ಮಿ ಪೂಜೆ ಆಗಿರಬೇಕು; ಅದು ನಮ್ಮ ದೇಶದ ಗುರಿ. ಹಾಗಾಗಿ ಕಾಲ ಉರುಳಿದಂತೆ, ನಮ್ಮ ಹಬ್ಬಗಳಲ್ಲಿನ ಬದಲಾವಣೆಗಳನ್ನು ಸಹ ನಾವು ಸ್ವೀಕರಿಸಿದ್ದೇವೆ.
ಇಂದು ನಾವು ವಿಜಯದಶಮಿಯ ಪವಿತ್ರ ಹಬ್ಬವನ್ನು ಆಚರಿಸುತ್ತಿದ್ದೇವೆ ಮತ್ತು ಈ ದಿನ ನಮ್ಮ ವಾಯುಪಡೆಯ ಜನ್ಮದಿನವೂ ಹೌದು. ನಮ್ಮ ದೇಶದ ವಾಯುಪಡೆ ಹೊಸ ಎತ್ತರವನ್ನು ತಲುಪುತ್ತಿದೆ. ವಿಜಯದಶಮಿಯ ಶುಭ ಹಬ್ಬದ ಸಂದರ್ಭದಲ್ಲಿ ನಾವು ಹನುಮ ದೇವರನ್ನು ಪ್ರಾರ್ಥಿಸುತ್ತೇವೆ, ನಾವು ವಿಶೇಷವಾಗಿ ವಾಯುಪಡೆಗೆ ಮತ್ತು ನಮ್ಮ ವಾಯುಪಡೆಯ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸೋಣ ಮತ್ತು ನಮ್ಮ ಶುಭಾಶಯಗಳನ್ನು ತಿಳಿಸೋಣ.
ಇಂದು ವಿಜಯಶಮಿಯ ಹಬ್ಬ, ರಾಕ್ಷಸ ಶಕ್ತಿಯ ಮೇಲೆ ದೈವಿಕ ಶಕ್ತಿಯ ವಿಜಯದ ಹಬ್ಬ. ಪ್ರತಿ ಕ್ಷಣವೂ ನಮ್ಮೊಳಗಿನ ರಾಕ್ಷಸ ಶಕ್ತಿಯನ್ನು ಸೋಲಿಸುವುದು ಮುಖ್ಯ ಮತ್ತು ಆಗ ಮಾತ್ರ ನಾವು ರಾಮನನ್ನು ಅರಿತುಕೊಳ್ಳಬಹುದು. ಆದ್ದರಿಂದ ರಾಮನನ್ನು ಅನುಭವಿಸಲು ಮತ್ತು ನಮ್ಮ ಜೀವನದಲ್ಲಿ ಯಶಸ್ವಿಯಾಗಲು ನಾವು ನಮ್ಮ ಆಂತರಿಕ ದೌರ್ಬಲ್ಯಗಳನ್ನು ನಾಶಮಾಡುವ ಮೂಲಕ ನಮ್ಮ ಆಂತರಿಕ ಶಕ್ತಿಯನ್ನು ಸಬಲಗೊಳಿಸಬೇಕು. ನಮ್ಮ ಮೊದಲ ಜವಾಬ್ದಾರಿ ನಮ್ಮೊಳಗಿನ ಕೆಟ್ಟತನವನ್ನು ನಾಶಪಡಿಸುವುದು.
ಇಂದು, ವಿಜಯದಶಮಿಯ ಸಂದರ್ಭದಲ್ಲಿ ಮತ್ತು ನಾವು ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವಾಗ, ಎಲ್ಲಾ ದೇಶವಾಸಿಗಳು ಸಂಕಲ್ಪ ಮಾಡಬೇಕು -
ಈ ವರ್ಷ ದೇಶದ ಸುಧಾರಣೆಗಾಗಿ ಕನಿಷ್ಠ ಒಂದು ಸಂಕಲ್ಪವನ್ನಾದರೂ ನಾವು ಪೂರೈಸುತ್ತೇವೆ, ಇದರಿಂದಾಗಿ ದೇಶವು ಕೆಲವರು ಅಥವಾ ಹಲವರಿಂ ಸೇವೆ ಪಡೆಯುತ್ತದೆ. ನಾನು ನೀರನ್ನು ಉಳಿಸಿದರೆ, ಅದೂ ಸಂಕಲ್ಪ ಆಗಬಹುದು. ನಾನು ಎಂದಿಗೂ ಆಹಾರವನ್ನು ವ್ಯರ್ಥ ಮಾಡುವುದಿಲ್ಲ – ಅದೂ ಒಂದು ಸಂಕಲ್ಪ ಆಗಿರಬಹುದು. ನಾನು ವಿದ್ಯುತ್ ಉಳಿಸುತ್ತೇನೆ - ಸಹ ಸಂಕಲ್ಪ ಆಗಿರಬಹುದು. ದೇಶದ ಸಾರ್ವಜನಿಕ ಆಸ್ತಿಗೆ ನಾನು ಎಂದಿಗೂ ಹಾನಿ ಮಾಡುವುದಿಲ್ಲ – ಇದೂ ಸಹ ಒಂದು ಸಂಕಲ್ಪವಾಗಬಹುದು.
ವಿಜಯದಶಮಿಯ ಹಬ್ಬ, ಅಥವಾ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಮತ್ತು ಗುರುನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ವ್ ನಂತಹ ಕಾಕತಾಳೀಯವಾದ ಕೆಲವು ಶುಭ ಸಂದರ್ಭಗಳನ್ನು ನಾವು ಪಡೆಯುತ್ತೇವೆ. ಈ ಕಾಕತಾಳೀಯವನ್ನು ಬಳಸಿಕೊಂಡು, ಅದರಿಂದ ಸ್ಫೂರ್ತಿ ಪಡೆಯುವಾಗ, ನಾವು ನಮ್ಮ ಜೀವನದಲ್ಲಿಯೂ ಒಂದು ಸಂಕಲ್ಪವನ್ನು ಮಾಡಬೇಕು. ನಾವು ಖಂಡಿತವಾಗಿಯೂ ವ ಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ.
ಕೂಡಿ ಮಾಡುವ ಪ್ರಯತ್ನಗಳ ಶಕ್ತಿ ಏನು? ನಾವು ಶ್ರೀಕೃಷ್ಣನ ಬಗ್ಗೆ ಯೋಚಿಸಿದರೆ ಸಾಮೂಹಿಕ ಪ್ರಯತ್ನಗಳ ಶಕ್ತಿ ಗೋಚರಿಸುತ್ತದೆ. ಅವನು ಗೋವರ್ಧನ ಪರ್ವತವನ್ನು ಒಂದು ಬೆರಳಿನಲ್ಲಿ ಎತ್ತಿದ್ದನು, ಆದರೆ ಎಲ್ಲಾ ಕುರುಬರು ತಮ್ಮ ಕೋಲುಗಳ ಸಾಮೂಹಿಕ ಬಲದಿಂದ ಅದನ್ನು ಎತ್ತುವಲ್ಲಿ ಜತೆಯಾದರು.
ಭಗವಾನ್ ರಾಮನ ಜೀವನವನ್ನೇ ನೋಡಿ! ಅವನು ಸಮುದ್ರವನ್ನು ದಾಟಲು ಸೇತುವೆಯನ್ನು ನಿರ್ಮಿಸಬೇಕಾಗಿತ್ತು. ಅವನು ಕಾಡಿನಲ್ಲಿ ಭೇಟಿಯಾದ ಸಹಚರರನ್ನು ಜೊತೆಗೆ ಕರೆದೊಯ್ಯುವ ಮೂಲಕ ಸಾಮೂಹಿಕ ಶಕ್ತಿಯನ್ನು ಸಹ ಚಿತ್ರಿಸುತ್ತದೆ. ರಾಮನು ಸಾಮೂಹಿಕ ಪ್ರಯತ್ನಗಳ ಮೂಲಕ ಸೇತುವೆಯನ್ನು ನಿರ್ಮಿಸಿದ. ಲಂಕಾವನ್ನು ಸಹ ತಲುಪಿದನು. ಈ ಸಂಭಾವ್ಯತೆಯು ಸಾಮೂಹಿಕತೆಯಲ್ಲಿದೆ. ಈ ಉತ್ಸವಗಳು ಸಂಘಟಿತ ಪ್ರಯತ್ನಗಳ ಶಕ್ತಿಯನ್ನು ಉತ್ಕೃಷ್ಟಗೊಳಿಸುತ್ತವೆ. ನಮ್ಮೆಲ್ಲ ಸಂಕಲ್ಪಗಳನ್ನು ಆ ಬಲದಿಂದ ಪೂರೈಸೋಣ.
ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ನಾವು ವೈಯಕ್ತಿಕ ಪ್ರಯತ್ನ ಮಾಡೋಣ. ಪ್ಲಾಸ್ಟಿಕ್ ಬಳಸಬೇಡಿ ಅಭಿಯಾನಕ್ಕೆ ನಮ್ಮ ಹಳ್ಳಿಗಳು, ಬೀದಿಗಳು, ನೆರೆಹೊರೆಗಳನ್ನು ಸೇರಿಸೋಣ ಮತ್ತು ಅದನ್ನು ಚಳುವಳಿಯಾಗಿ ಮುನ್ನಡೆಸೋಣ. ಈ ರೀತಿಯ ಆಲೋಚನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು, ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದುಹಾಕುವ ನಮ್ಮದೇ ಆದ ಸಂಕಲ್ಪವನ್ನು ನಾವು ಹೊಂದಿರಬೇಕು.
ಸಾವಿರಾರು ವರ್ಷಗಳಿಂದ, ಭಗವಾನ್ ರಾಮನ ವಿಜಯದ ಈ ಹಬ್ಬವನ್ನು ನಾವು 'ವಿಜಯ್ ಪರ್ವ್' ಎಂದು ಆಚರಿಸುತ್ತಿದ್ದೇವೆ. ರಾಮಾಯಣವನ್ನು ಪ್ರದರ್ಶಿಸುವ ಮೂಲಕ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಈ ಸಾಂಸ್ಕೃತಿಕ ಪರಂಪರೆಯು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಿದೆ.
ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ದ್ವಾರಕಾ ರಾಮಲೀಲಾ ಸಮಿತಿಯ ಈ ಪ್ರದರ್ಶನದ ಮೂಲಕ ಮಾಡಿರುವ ಪ್ರಯತ್ನವನ್ನು ಇಂದು ನಾನು ಅಭಿನಂದಿಸುತ್ತೇನೆ.
ವಿಜಯದಶಮಿಯ ಸಂದರ್ಭದಲ್ಲಿ ನಿಮಗೆ ಶುಭ ಹಾರೈಸುತ್ತೇನೆ. ನನ್ನೊಂದಿಗೆ ಮತ್ತೆ ಜೋರಾಗಿ ಹೇಳಿ-
ಜೈ ಶ್ರೀ ರಾಮ್ - ಜೈ ಶ್ರೀ ರಾಮ್!
ಜೈ ಶ್ರೀ ರಾಮ್ - ಜೈ ಶ್ರೀ ರಾಮ್!
ಜೈ ಶ್ರೀ ರಾಮ್ - ಜೈ ಶ್ರೀ ರಾಮ್!
ತುಂಬಾ ಧನ್ಯವಾದಗಳು.
(रिलीज़ आईडी: 1588586)
आगंतुक पटल : 187