ಪ್ರಧಾನ ಮಂತ್ರಿಯವರ ಕಛೇರಿ

“ಆರೋಗ್ಯ ಮಂಥನ’’ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ರೂಪಾಂತರ

ಪ್ರಕಟಣಾ ದಿನಾಂಕ: 01 OCT 2019 8:53PM by PIB Bengaluru

“ಆರೋಗ್ಯ ಮಂಥನ’’ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ರೂಪಾಂತರ

 

ವೇದಿಕೆಯ ಮೇಲಿರುವ ನನ್ನ ಸಂಪುಟ ಸಹೋದ್ಯೋಗಿ ಡಾ. ಹರ್ಷವರ್ಧನ್ ಮತ್ತು ಅಶ್ವಿನಿ ಕುಮಾರ್ ಚೌಬೆ ಅವರೇ, ವಿವಿಧ ರಾಜ್ಯಗಳ ಮತ್ತು ಸಂಸ್ಥೆಗಳ ಪ್ರತಿನಿಧಿಗಳೇ, ಆಯುಷ್ಮಾನ್ ಭಾರತ ನೊಂದಿಗೆ ತೊಡಗಿಕೊಂಡಿರುವ ಎಲ್ಲ ಸ್ನೇಹಿತರೆ ಮತ್ತು ಇಂದು ಇಲ್ಲಿ ಹಾಜರಿರುವ ಯೋಜನೆಯ ಫಲಾನುಭವಿಗಳೇ!

 

ಸಹೋದರ ಮತ್ತು ಸಹೋದರಿಯರೇ,

ಇಂದು ನವರಾತ್ರಿಯ ಮೂರನೇ ದಿನ. ಇಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತಿದೆ. ಹತ್ತು ಕೈಗಳ ಚಂದ್ರಘಂಟಾ ದೇವಿ ತನ್ನ ಸೌಮ್ಯತೆ ಮತ್ತು ಚಂದ್ರಮನ ತಂಪಿನಿಂದ ಇಡೀ ವಿಶ್ವದ ಸಂಕಷ್ಟ ಪರಿಹರಿಸಿದಳು ಎಂಬುದು ನಂಬಿಕೆ. ಭಾರತದ 50 ಕೋಟಿಗೂ ಹೆಚ್ಚು ಬಡಜನರ ಸಂಕಷ್ಟ ಪರಿಹರಿಸುತ್ತಿರುವ ಆಯುಷ್ಮಾನ್ ಭಾರತ ಯೋಜನೆಯ ಪ್ರಥಮ ವರ್ಷದ ಬಗ್ಗೆ ಚರ್ಚಿಸಲು ಬಂದಿರುವ ಈ ದಿನ ಕಾಕತಾಳೀಯವೇ ಸರಿ.

 

ಸ್ನೇಹಿತರೆ,

ಆಯುಷ್ಮಾನ್ ಭಾರತದ ಪ್ರಥಮ ವರ್ಷ ನಮ್ಮ ಸಂಕಲ್ಪ, ನಮ್ಮ ನಿಶ್ಚಯ ಮತ್ತು ಕಲಿಕೆಯ ಪ್ರಕ್ರಿಯೆಯಾಗಿತ್ತು. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ಆರೈಕೆ ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಭಾರತದ ಸಂಕಲ್ಪ ಶಕ್ತಿಯಾಗಿತ್ತು.  ಈ ಯಶಸ್ಸಿನ ಹಿಂದೆ ಸಮರ್ಪಣೆ ಮತ್ತು ಸದ್ಭಾವನೆಯಿದೆ. ಈ ಸಮರ್ಪಣೆ, ಯಶಸ್ಸು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು; ದೇಶದ ಸಾವಿರಾರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು; ಪ್ರತಿಯೊಬ್ಬ ಸಿಬ್ಬಂದಿ, ಎಲ್ಲ ವೈದ್ಯಕೀಯ ವೃತ್ತಿಪರರು, ಆಯುಷ್ಮಾನ್ ಮಿತ್ರ, ಆಶಾ ಕಾರ್ಯಕರ್ತೆಯರು, ಸಾಮಾಜಿಕ ಸಂಘಟನೆಗಳು, ಸಾರ್ವಜನಿಕ ಪ್ರತಿನಿಧಿಗಳು ಸೇರಿ ಎಲ್ಲರಿಗೂ ಸಲ್ಲುತ್ತದೆ. 

 

ಸೋದರಿಯರೇ ಮತ್ತು ಸೋದರರೇ,

ಇಂದು, ಈ ಸಮರ್ಪಣೆಯಿಂದಾಗಿ ದೇಶ ಹೆಮ್ಮೆಯಿಂದ ಮತ್ತು ವಿಶ್ವಾಸದಿಂದ ಹೇಳುತ್ತಿದೆ “ವರ್ಷ ಒಂದು – ಆಯುಷ್ಮಾನ್ ಹಲವು’’

ದೇಶದಾದ್ಯಂತದ 46 ಲಕ್ಷ ಕುಟುಂಬಗಳ ಬಡವರು ಕಾಯಿಲೆಗಳಿಂದ ನಿರಾಶರಾಗಿ ಬಾಳುತ್ತಿದ್ದರು, ಈಗ ಅವರಲ್ಲಿ ಆರೋಗ್ಯಪೂರ್ಣ ಜೀವನದ ವಿಶ್ವಾಸ ಮೂಡಿದೆ, ಇದು ನಿಜಕ್ಕೂ ಒಂದು ದೊಡ್ಡ ಸಾಧನೆ. ಈ ಒಂದು ವರ್ಷದಲ್ಲಿ, ಯಾವುದೇ ಬಡವರು ಕಾಯಿಲೆಯ ಚಿಕಿತ್ಸಾ ವೆಚ್ಚ ಭರಿಸಲು ತಮ್ಮ ಹೊಲ, ಮನೆ, ಆಭರಣ ಅಥವಾ ಇನ್ನಾವುದೇ ವಸ್ತುವನ್ನು ಮಾರಾಟ ಮಾಡದೆ, ಅಡ ಇಡದೆ ಉಳಿಸಿಕೊಂಡಿದ್ದಾರೆ ಎಂದರೆ, ಆಗ ಈ ಆಯುಷ್ಮಾನ್ ಭಾರತ ಯೋಜನೆ ಭಾರತದಲ್ಲಿ ದೊಡ್ಡ ಯಶಸ್ಸು ಸಾಧಿಸಿದೆ ಎಂದೇ ಅರ್ಥ.

 

ಸ್ನೇಹಿತರೆ,

ನನಗೆ ಕೆಲವೇ ನಿಮಿಷಗಳ ಹಿಂದೆ ಕೆಲವು ಫಲಾನುಭವಿಗಳೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ಕಳೆದ ಒಂದು ವರ್ಷದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಸಹ ನಾನು ದೇಶದಾದ್ಯಂತದ ಅಂಥ ಸ್ನೇಹಿತರೊಂದಿಗೆ ನಿರಂತರವಾಗಿ ಸಂವಹನ ನಡೆಸುವ ಪ್ರಯತ್ನ ಮಾಡಿದೆ. ಅವರೊಂದಿಗೆ ಮಾತನಾಡಿದರೆ, ಬಡವರ ಬದುಕಿನಲ್ಲಿ ಆಯುಷ್ಮಾನ್ ಭಾರತ-ಪಿಎಂಜೆಎವೈ ತಂದಿರುವ ಬದಲಾವಣೆ ಎಂಥಹದ್ದು ಎಂಬುದು ಅವರಿಗೆ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಪಿಎಂಜೆಎವೈ ಬಡವರಿಗೆ ಜೈ ಅಥವಾ ವಿಜಯದ ಸಂಕೇತವಾಗಿದೆ.ಬಡವರ ಮನೆಯ ಮಗು ಆರೋಗ್ಯವಾಗಿದ್ದರೆ, ಮನೆಯಲ್ಲಿ ದುಡಿಯುವ ಏಕೈಕ ವ್ಯಕ್ತಿ ಕೆಲಸಕ್ಕೆ ಆರೋಗ್ಯವಂತನಾಗಿ ಮರಳಿದರೆ, ಆಗ ಯಾರಿಗಾದರೂ ಆರೋಗ್ಯವಾಗಿರಬೇಕು ಎನ್ನುವುದರ ಅರ್ಥ ತಿಳಿಯುತ್ತದೆ.  ಹೀಗಾಗಿಯೇ ಆಯುಷ್ಮಾನ್ ಭಾರತ್ ಪಿಎಂಜೆಎವೈ ಯಶಸ್ಸಿಗೆ ಮುಡಿಪಾದ ಜನರು ಮತ್ತು ಸಂಸ್ಥೆಗಳ ಮೇಲೆ ದೇಶದ ಕೋಟ್ಯಂತರ ಬಡ ಜನರ ಶುಭ ಹಾರೈಕೆ ಇದ್ದೇ ಇರುತ್ತದೆ.  ಈ ಶ್ರೇಷ್ಠ ಕಾರ್ಯದಲ್ಲಿ ಸಹಭಾಗಿಗಳಾದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ.

 

ಸಹೋದರ ಮತ್ತು ಸಹೋದರಿಯರೇ,

ಮೊದಲ ವರ್ಷದಲ್ಲಿ, ಸಂಕಲ್ಪ ಮತ್ತು ಸಮರ್ಪಣೆಯಿಂದ ನಾವು ಅನುಭವದಿಂದ ಬಹಳಷ್ಟು ಕಲಿತಿದ್ದೇವೆ. ನಾನು ಇಲ್ಲಿಗೆ ಬರುವಾಗ ಒಂದು ವರ್ಷದ ಪಯಣದ ವಸ್ತು ಪ್ರದರ್ಶನವನ್ನು ವೀಕ್ಷಿಸಿದೆ. ನಾವು ಕಾಲಕಾಲಕ್ಕೆ ಎಲ್ಲ ಸವಾಲುಗಳನ್ನು ಹೇಗೆ ಎದುರಿಸಿ, ನಿರಂತರವಾಗಿ ತಾಂತ್ರಿಕ ವಿಸ್ತರಣೆ ಮಾಡಿ, ಪ್ರತಿಯೊಬ್ಬ ಬಾಧ್ಯಸ್ಥರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅನುಮಾನಗಳು ಮತ್ತು ಆತಂಕಗಳನ್ನು ದೂರು ಮಾಡಿ ಹೇಗೆ ಮೇಲೆ ಬಂದೆವು, ಎಂಬುದನ್ನು ಅದು ತೋರಿಸುತ್ತದೆ.

 

ಸ್ನೇಹಿತರೆ,

ಹೇಗೆ ಯೋಜನೆಯ ನಿಗಾ ಇಡಬೇಕು ಮತ್ತು ವಿಸ್ತಾರಿಸಬೇಕು ಎಂಬುದನ್ನು ಇನ್ನೂ ಸಮರ್ಥಗೊಳಿಬಹುದು; ಇದನ್ನು ಇನ್ನೂ ಸುಲಭವಾಗಿ ಫಲಾನುಭವಿಗಳಿಗೆ ಹೇಗೆ ತಲುಪಿಸಬಹುದು; ಆಸ್ಪತ್ರೆಗಳ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು – ಈ ಎಲ್ಲ ಅಂಶಗಳೂ ಇಲ್ಲಿ ಕಳೆದ ಎರಡು ದಿನಗಳಿಂದ ವಿವರವಾಗಿ ಚರ್ಚಿತವಾಗಿವೆ.  ಸಾಮರ್ಥ್ಯವರ್ಧನೆ ಮತ್ತು ಗುಣಮಟ್ಟದಿಂದ ಇಲ್ಲಿ ವ್ಯಕ್ತಿಗತ ಅಭಿಪ್ರಾಯಗಳನ್ನು ಮಂಡಿಸಲಾಗಿದೆ. ಕೆಲವು ರಾಜ್ಯಗಳು ಸಾರ್ವತ್ರಿಕ ಆರೋಗ್ಯ ಆರೈಕೆ ಸೇವೆ ಅಥವಾ ಎಲ್ಲ ಕುಟುಂಬಗಳಿಗೂ ಈ ಯೋಜನೆಯನ್ನು ಅನ್ವಯಿಸುವುದು ಹೇಗೆ ಎಂಬ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ, ಇವುಗಳ ಬಗ್ಗೆ ಹೆಚ್ಚಿನ ಪರಿಗಣನೆ ಅಗತ್ಯ. ಪ್ರತಿಯೊಬ್ಬ ಬಡವರಿಗೂ, ಪ್ರತಿ ಪ್ರಜೆಗೂ ಸಂಕಷ್ಟದ ಸಮಯದಲ್ಲಿ ಆಸ್ಪತ್ರೆಗಳ ಬಾಗಿಲು ಸದಾ ತೆರೆದಿರುವಂತೆ ಮತ್ತು ಗುಣಮಟ್ಟದ ಚಿಕಿತ್ಸೆಯ ಲಭಿಸುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

 

ಸಹೋದರ ಸಹೋದರಿಯರೇ,

ಆಯುಷ್ಮಾನ್ ಭಾರತ ನವ ಭಾರತದ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದು ದೇಶದ ಬಡವರು ಮತ್ತು ಶ್ರೀಸಾಮಾನ್ಯರ ಜೀವ ಉಳಿಸುವಲ್ಲಿ ಮಾತ್ರವೇ ಮಹತ್ವದ ಪಾತ್ರ ವಹಿಸುತ್ತಿಲ್ಲ, ಜೊತೆಗೆ ಇದು ಭಾರತವನ್ನು ಪ್ರತಿನಿಧಿಸುವ 130 ಜನರ ಸಂಘಟಿತ ಶಕ್ತಿ ಮತ್ತು ಸಂಕಲ್ಪದ ಪ್ರತೀಕವಾಗಿದೆ.  ಹೀಗಾಗಿಯೇ  ಅಗ್ಗದ ದರದಲ್ಲಿ ಮತ್ತು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ನಮ್ಮ ದೇಶದಲ್ಲಿ ಹಿಂದಿನಿಂದಲೂ ಪ್ರಯತ್ನಗಳು ನಡೆದಿವೆ ಎಂದು ನಾನು ಹೇಳುತ್ತಿದ್ದೇನೆ. ಪ್ರತಿಯೊಂದು ರಾಜ್ಯವೂ ಮತ್ತು ಪ್ರತಿಯೊಂದು ಕೇಂದ್ರಾಡಳಿತ ಪ್ರದೇಶವೂ ತನ್ನದೇ ಆದ ಮಟ್ಟದಲ್ಲಿ ಸಾಧ್ಯವಾದ ಎಲ್ಲವನ್ನೂ ಮಾಡಿವೆ. ರಾಜ್ಯಗಳ ಉತ್ತಮ ಉದ್ದೇಶದ ಹೊರತಾಗಿಯೂ ಬಡವರಿಗೆ ಪ್ರಯೋಜನ ದೊರಕುತ್ತಿರಲಿಲ್ಲ ಮತ್ತು ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರದಲ್ಲಿ ಸುಧಾರಣೆಯೂ ಆಗಿರಲಿಲ್ಲ.  ಆದರೆ, ಯಾವಾಗ ಭಾರತದ ಸಂಘಟಿತ ಬಲ ದೊರಕುತ್ತದೋ ಆಗ ಪ್ರಯೋಜನಗಳು ಮತ್ತು ಅಧಿಕಾರ ಎರಡೂ ಉತ್ತಮ ಪರಿಣಾಮ ಬೀರುತ್ತವೆ ಎಂಬುದನ್ನು ಆಯುಷ್ಮಾನ್ ಭಾರತ ಯೋಜನೆ,ಸಾಬೀತುಪಡಿಸಿದೆ. ದೇಶದ ಯಾವುದೇ ಭಾಗದ ರೋಗಿಗಳಿಗೂ ಆಯುಷ್ಮಾನ್ ಭಾರತ ಚಿಕಿತ್ಸೆಯ ಖಾತ್ರಿ ಒದಗಿಸುತ್ತದೆ, ಹಿಂದೆ ಇದು ಅಸಾಧ್ಯವಾಗಿತ್ತು. ಹೀಗಾಗಿಯೇ ಕಳೆದ ಒಂದು ವರ್ಷದಲ್ಲಿ 50 ಸಾವಿರ ಫಲಾನುಭವಿಗಳು ಹೊರರಾಜ್ಯಗಳಲ್ಲಿ ಅಂದರೆ ತಮ್ಮರಾಜ್ಯದ ಹೊರಗೆ ಉತ್ತಮ ಆಸ್ಪತ್ರೆಗಳಲ್ಲಿ ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ,

 

ಸೋದರ ಸೋದರಿಯರೇ,

ದೇಶದ ಯಾರೊಬ್ಬರೂ ಅನಿವಾರ್ಯ ಎನಿಸದಿದ್ದರೆ ಆತನ/ಆಕೆಯ ಮನೆಯಿಂದ, ಜಿಲ್ಲೆಯಿಂದ ಅಥವಾ ರಾಜ್ಯದಿಂದ ಚಿಕಿತ್ಸೆಗಾಗಿ ಹೊರಗೆ ಹೋಗಲು ಇಚ್ಛಿಸುವುದಿಲ್ಲ. ಪ್ರತಿಯೊಂದು ರಾಜ್ಯವೂ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಮನೆಯ ಬಳಿಯೇ ಉತ್ತಮ ಆರೋಗ್ಯ ಆರೈಕೆ ಸೌಲಭ್ಯ ಕಲ್ಪಿಸಲು ಯತ್ನಿಸುತ್ತಿವೆ. ಆರೋಗ್ಯ ಸೌಲಭ್ಯಗಳು ಉತ್ತಮವಾಗಿರುವ ದೇಶದ ಆ ಭಾಗಗಳಲ್ಲಿ ಹೆಚ್ಚಿನ ಒತ್ತಡವೂ ಇರುತ್ತದೆ; ಆದಾಗ್ಯೂ ದೇಶದ ಯಾವುದೇ ಒಬ್ಬ ಪ್ರಜೆಯೂ ಆಧುನಿಕ ಆರೋಗ್ಯ ಆರೈಕೆ ಸೇವೆಯ ಕೊರತೆಯಿಂದ ನರಳದಂತೆ ಮಾಡುವುದು ಜವಾಬ್ದಾರಿಯಾಗಿದೆ. ಆಯುಷ್ಮಾನ್ ಭಾರತ ಯೋಜನೆ ಈ ಭಾವನೆಯನ್ನು ಸಾಕಾರಗೊಳಿಸುತ್ತಿದೆ.

 

ಸ್ನೇಹಿತರೆ,

ಇಡೀ ಭಾರತಕ್ಕೆ ಮತ್ತು ಆರೋಗ್ಯಪೂರ್ಣ ಭಾರತಕ್ಕೆ ಆಯುಷ್ಮಾನ್ ಭಾರತ ಸಮಗ್ರ ಪರಿಹಾರವನ್ನು ಹೊಂದಿದೆ. ಇದು ಸರ್ಕಾರದ ಕಲ್ಪನೆಯ ಹಾದಿಯಲ್ಲೇ ಇದ್ದು, ಇದರಡಿಯಲ್ಲಿ ನಾವು ಭಾರತದ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಪ್ರತ್ಯೇಕವಾಗಿ ಚಿಂತಿಸುವ ಬದಲಾಗಿ, ಒಗ್ಗೂಡಿ ಶ್ರಮಿಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ, ವಿಶ್ವಸಂಸ್ಥೆಯಲ್ಲಿ ಸಾರ್ವತ್ರಿಕ ಆರೋಗ್ಯ ಆರೈಕೆ ಕುರಿತಂತೆ ಒಂದು ಕಾರ್ಯಕ್ರಮವಿತ್ತು, ಅದರಲ್ಲಿ ಭಾರತದ ಬಗ್ಗೆ ಮಾತನಾಡುವ ಅವಕಾಶ ನನಗೆ ದೊರೆಯಿತು. ಭಾರತದಲ್ಲಿ ಆರೋಗ್ಯ ಆರೈಕೆಯ ಬಗ್ಗೆ ಅನುಸರಿಸುತ್ತಿರುವ ಸಮಗ್ರ ದೃಷ್ಟಿಕೋನ ಮತ್ತು ಅದರಡಿ ಆಗಿರುವ ಕಾರ್ಯಗಳ ಬಗ್ಗೆ ಇಡೀ ವಿಶ್ವ ನಿಬ್ಬೆರಗಾಯಿತು ಮತ್ತು ಅಚ್ಚರಿ ವ್ಯಕ್ತಪಡಿಸಿತು.

 

ಸೋದರ ಸೋದರಿಯರೇ,

ಹೇಗೆ ನಾವು ನಾಲ್ಕು ಆಧಾರಸ್ತಂಭಗಳ ಮೇಲೆ ಆರೋಗ್ಯಪೂರ್ಣ ಭಾರತದ ನಿರ್ಮಾಣ ಮಾಡುತ್ತಿದ್ದೇವೆ ಎಂಬುದನ್ನು ವಿಶ್ವಾದ್ಯಂತದ ಗಣ್ಯರಿಗೆ ನಾನು ತಿಳಿಸಿದೆ. ಮೊದಲನೆಯದು: ರೋಗ ತಡೆ ಆರೋಗ್ಯ ಸೇವೆ, ಎರಡನೆಯದು : ಕೈಗೆಟಕುವ ದರದ ಆರೋಗ್ಯ ಸೇವೆ, ಮೂರನೆಯದು: ಪೂರೈಕೆಯ ಕಡೆಯ ಸುಧಾರಣೆ ಮತ್ತು ನಾಲ್ಕನೆಯದು: ಅಭಿಯಾನದೋಪಾದಿಯ ರಾಷ್ಟ್ರೀಯ ಪೌಷ್ಟಿಕ ಅಭಿಯಾನದಂಥ ಮಧ್ಯಸ್ಥಿಕೆ.

ನಾವು ಮೊದಲ ಸ್ತಂಭದ ಬಗ್ಗೆ ಮಾತನಾಡಿ, ಸ್ವಚ್ಛತೆ, ಯೋಗ, ಆಯುಷ್, ಲಸಿಕೆ ಮತ್ತು ಸದೃಢತೆಗೆ ಇಂದು ಒತ್ತು ನೀಡಲಾಗುತ್ತಿದೆ, ಇದರಿಂದಾಗಿ ಹಲವು ಕಾಯಿಲೆಗಳು ಕಡಿಮೆಯಾಗುತ್ತಿವೆ. ಮಿಗಿಲಾಗಿ ಪ್ರಾಣಿಗಳಿಂದ ಹರಡುವ ರೋಗಗಳೂ ಮಾನವನನ್ನು ಕಾಡುತ್ತವೆ. ಹೀಗಾಗಿ ನಾವು ಈ ಬಾರಿ, ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗ ಮುಕ್ತ ಮಾಡಲು ಅಭಿಯಾನೋಪಾದಿಯಲ್ಲಿ ಕ್ರಮ ಕೈಗೊಂಡಿದ್ದೇವೆ.  ನಾವು ಪ್ರಾಣಿಗಳ ಬಗ್ಗೆ ಕೂಡ ಕಾಳಜಿ ಹೊಂದಿದ್ದೇವೆ. ನಾವು ಅವುಗಳನ್ನೂ ಮರೆತಿಲ್ಲ.

ನಾನು ಅಲ್ಲಿ ಎರಡನೇ ಸ್ತಂಭದ ಬಗ್ಗೆಯೂ ಮಾತನಾಡಿದೆ. ಎರಡನೇ ಸ್ತಂಭ ಶ್ರೀಸಾಮಾನ್ಯನಿಗೆ ಅಲ್ಪ ದರದಲ್ಲಿ ಉತ್ತಮ ಚಿಕಿತ್ಸೆ ದೊರಕಿಸುವುದಾಗಿದ್ದು, ಇದಕ್ಕೆ ನಿರಂತರ ಪ್ರಯತ್ನಗಳು ನಡೆದಿವೆ.

 

ಸಹೋದರ ಸಹೋದರಿಯರೇ,

ಆಯುಷ್ಮಾನ್ ಭಾರತ ಯೋಜನೆ ಈ ಎರಡೂ ಸ್ತಂಭಗಳಿಗೆ ಹೆಚ್ಚಿನ ಚೈತನ್ಯ ನೀಡಿದೆ. ಅದು ದೇಶದಾದ್ಯಂತ ಒಂದೂವರೆ ಲಕ್ಷ ಆರೋಗ್ಯ ಮತ್ತು ಕ್ಷೇಮ (ಸ್ವಾಸ್ಥ್ಯ) ಕೇಂದ್ರ ನಿರ್ಮಾಣವಿರಬಹುದು ಅಥವಾ ಪ್ರತಿ ವರ್ಷ 5 ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದಾಗಿರಬಹುದು. ಅದರಲ್ಲಿ ಆಯುಷ್ಮಾನ್ ಭಾರತದ ಪಾತ್ರ ಮಹತ್ವದ್ದು.

 

ಸ್ನೇಹಿತರೆ,

ಆಯುಷ್ಮಾನ್ ಭಾರತ್ ನಮ್ಮ ಪೂರೈಕೆ ಕಡೆಯ ಮೂರನೇ ಸ್ತಂಭವನ್ನೂ ಬಲಪಡಿಸುತ್ತಿದೆ. ಆಯುಷ್ಮಾನ್ ಭಾರತ್ ಪರಿಣಾಮವಾಗಿ ದೇಶದಲ್ಲಿ ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಹಿಂದೆ ಚಿಕಿತ್ಸೆಯ ಬಗ್ಗೆ ಚಿಂತಿಸಲೂ ಸಾಧ್ಯವಾಗದಿದ್ದ ಬಡವರೂ ಇಂದು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಅವರು ಎಂದಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದನ್ನು ಊಹಿಸಿಕೊಂಡಿರಲೂ ಇಲ್ಲ. ಇಂದು ಪಿ.ಎಂ.ಜೆಎವೈ ಸೇವೆ ಒದಗಿಸುತ್ತಿರುವ 18 ಸಾವಿರ ಆಸ್ಪತ್ರೆಗಳ ಪೈಕಿ ಸುಮಾರು 10000 ಅಂದರೆ ಅರ್ಧಕ್ಕೂ ಹೆಚ್ಚು ಅಂಥ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಾಗಿವೆ. ಭವಿಷ್ಯದಲ್ಲಿ ಈ ಪಾಲುದಾರಿಕೆ ಇನ್ನೂ ಹೆಚ್ಚಳವಾಗಲಿದೆ.

 

ಸ್ನೇಹಿತರೆ,

ಬೇಡಿಕೆ ಹೆಚ್ಚಾದಂತೆಲ್ಲಾ, ದೇಶದ ಸಣ್ಣ ನಗರಗಳಲ್ಲಿಯೂ ಆಧುನಿಕ ವೈದ್ಯಕೀಯ ಮೂಲಸೌಕರ್ಯ ಜಾಲ ಬೆಳೆಯುತ್ತಿದೆ. ಭವಿಷ್ಯದಲ್ಲಿ ಹಲವು ಹೊಸ ಆಸ್ಪತ್ರೆಗಳು ಬರಲಿವೆ. ಹೊಸ ಉದ್ಯೋಗಾವಕಾಶಗಳೂ ದೊರಕಲಿವೆ. ಒಂದು ಅಂದಾಜಿನ ಪ್ರಕಾರ, ಆಯುಷ್ಮಾನ್ ಭಾರತ್ ಸೃಷ್ಟಿಸಿರುವ ಬೇಡಿಕೆಯ ಪರಿಣಾಮವಾಗಿ 11 ಲಕ್ಷ ಹೊಸ ಉದ್ಯೋಗಗಳು ಮುಂದಿನ 5ರಿಂದ 7 ವರ್ಷಗಳಲ್ಲಿ ಸೃಷ್ಟಿಯಾಗಲಿವೆ. ಇದು ಅತಿ ದೊಡ್ಡ ಸಂಖ್ಯೆಯಾಗಿದ್ದು, ಕೇವಲ ರೈಲ್ವೆ ಮಾತ್ರವೇ ಇದಕ್ಕಿಂತ ಹೆಚ್ಚಿನ ಉದ್ಯೋಗ ಸೃಷ್ಟಿಸಬಲ್ಲದು ಎಂದು ಯಾರೂ ಬೇಕಾದರೂ ಊಹಿಸಬಹುದು.

 

ಸಹೋದರ ಸಹೋದರಿಯರೇ,

ಈ ಉದ್ಯೋಗಾವಕಾಶಗಳಿಗಾಗಿ ನಾವು ನಮ್ಮ ಯುವ ಸ್ನೇಹಿತರನ್ನು ಅಣಿಗೊಳಿಸುವುದು ಅತ್ಯಂತ ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಮೂಲಸೌಕರ್ಯ ವಿಸ್ತರಿಸಲಾಗಿದ್ದು, ನೀತಿಗಳನ್ನು ನಿರಂತರವಾಗಿ ಪರಿಷ್ಕರಿಸಲಾಗುತ್ತಿದೆ. ಒಂದೆಡೆ ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಳವಾಗಿದೆ, ಮತ್ತೊಂದೆಡೆ ಪ್ರವೇಶದಿಂದ ಹಿಡಿದು ನಿಯಂತ್ರಣದವರೆಗೆ ಪಾರದರ್ಶಕ ಮತ್ತು ತಡೆರಹಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದು ದೇಶದಾದ್ಯಂತ 75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಇರಬಹುದು ಅಥವಾ  ಹೊಸ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆ ಇರಬಹುದು. ಇದರಿಂದ ವೈದ್ಯಕೀಯ ವಲಯಕ್ಕೆ ಖಂಡಿತ ಪ್ರಯೋಜನವಾಗಲಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ, ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ತ್ವರಿತವಾಗಿ ವಿಸ್ತರಿಸುತ್ತಿದೆ ಮತ್ತು ಅದರ ಗುಣಮಟ್ಟ ಸುಧಾರಿಸುತ್ತಿದೆ ಹಾಗೂ ಭ್ರಷ್ಟಾಚಾರ ತೊಡೆದುಹಾಕುತ್ತಿದೆ.

 

ಸ್ನೇಹಿತರೆ,

ಆಯುಷ್ಮಾನ್ ಭಾರತ ಯೋಜನೆಯನ್ನು ಬಳಕೆದಾರ ಸ್ನೇಹಿ ಮಾಡುವ ನಿಟ್ಟಿನಲ್ಲಿ, ಲೋಪರಹಿತವಾದ ನಿರಂತರ ಪ್ರಯತ್ನಗಳು ಸಾಗಿವೆ. ಇದರೊಂದಿಗೆ ಸಂಪರ್ಕಿತವಾಗಿರುವ ಐಟಿ ವ್ಯವಸ್ಥೆಯನ್ನು ಪಿಎಂಜೆಎವೈ 2.0ಗೆ ಮೇಲ್ದರ್ಜೆಗೇರಿಸಲಾಗಿದೆ ಮತ್ತು ನಿರಂತರವಾಗಿ ಅದರ ಮೇಲ್ದರ್ಜೀಕರಣ ನಡೆಯುತ್ತಿದೆ. ಇಂದು ಚಾಲನೆ ನೀಡಲಾದ ಆಪ್, ಫಲಾನುಭವಿಗಳಿಗೆ ಹೆಚ್ಚಿನ ಪ್ರಯೋಜನ ತರಲಿದೆ. ಆದರೂ, ಈ ಯೋಜನೆಯನ್ನು ಇನ್ನೂ ಹೆಚ್ಚು ಸಮರ್ಥಗೊಳಿಸಲು ಮತ್ತು ಹೆಚ್ಚು ಸಮಗ್ರಗೊಳಿಸಲು ನಮಗೆ ಹೆಚ್ಚಿನ ತಾಂತ್ರಿಕ ಪರಿಹಾರಗಳ ಅಗತ್ಯವಿದೆ.  ಆಯುಷ್ಮಾನ್ ಭಾರತ ಒಂದು ವಿಶೇಷ ಅಂಶವಾಗಿದೆ ; ಈ ಎಲ್ಲ ಅಂಶಗಳನ್ನೂ ಒಗ್ಗೂಡಿಸಲು ಸಮರ್ಥ ಮತ್ತು ಲಭ್ಯವಾಗುವಂತ ವ್ಯವಸ್ಥೆಯ ಅಗತ್ಯವಿದೆ.  ನಾವು ತಂತ್ರಜ್ಞಾನ ಆಧಾರಿತ ರೋಗಪತ್ತೆ ವ್ಯವಸ್ಥೆ, ವೈದ್ಯಕೀಯ ಸಲಹೆ ಮತ್ತು ನಂತರದ ಚಿಕಿತ್ಸೆ ಅಭಿವೃದ್ಧಿಪಡಿಸಬೇಕು, ಅದು  ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಹಿಡಿದು ಪ್ರಮುಖ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ಕೊಠಡಿಯವರೆಗೆ ಇರಬೇಕು. ಹಳ್ಳಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ನೋಂದಾಯಿಸಲ್ಪಟ್ಟ ಯಾವುದೇ ವ್ಯಕ್ತಿಯ ಆರೋಗ್ಯ ದತ್ತಾಂಶವನ್ನು ಆ ವ್ಯಕ್ತಿಯ ಅನಾರೋಗ್ಯದ ರೋಗನಿರ್ಣಯಕ್ಕೆ ಬಳಸುವ ವ್ಯವಸ್ಥೆಯತ್ತ ನಾವು ಸಾಗಬೇಕಾಗಿದೆ. ದೊಡ್ಡ ಆಸ್ಪತ್ರೆಗಳಿಗೆ ಸೂಚಿಸುವ ಸಂದರ್ಭದಲ್ಲಿ ಮುಂದಿನ ಚಿಕಿತ್ಸೆಯಲ್ಲಿ ದತ್ತಾಂಶ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದಕ್ಕಾಗಿ ನಾವು ಎಲ್ಲರೂ ಚಿಂತಿಸಬೇಕು ಮತ್ತು ನವ ಪೀಳಿಗೆಯ ಜನರನ್ನು ಸೇರಿಸಬೇಕು.

 

ಸ್ನೇಹಿತರೆ,

ಪಿಎಂಜೆಎವೈ ನವೋದ್ಯಮ ಗ್ರಾಂಡ್ ಚಾಲೆಂಜ್ ಅನ್ನು ಇಂದು ಆರಂಭಿಸಲಾಗಿದ್ದು, ಇದು ನಿರ್ಣಾಯಕ ಪಾತ್ರ ನಿರ್ವಹಿಸಲಿದೆ. ನಾನು ಈ ದೇಶದ ಯುವಶಕ್ತಿಗೆ ಅದರಲ್ಲೂ ಐಟಿ ವೃತ್ತಿಪರರಿಗೆ ಮನವಿ ಮಾಡುತ್ತೇನೆ, ಸವಾಲನ್ನು ಸ್ವೀಕರಿಸಿ, ಈ ಕೆಲಸವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕೈಗೆತ್ತಿಕೊಳ್ಳಿ, ಭವಿಷ್ಯದಲ್ಲಿ ಉತ್ತಮ ಪರಿಹಾರ ತನ್ನಿ. ಈ ಮೂಲಕ ಆರೋಗ್ಯ ವಲಯದಲ್ಲಿ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳನ್ನು ಆಯುಷ್ಮಾನ್ ಭಾರತದೊಂದಿಗೆ ಸಂಪರ್ಕಿಸಲಾಗುತ್ತಿದೆ. ನಾನು ದೇಶದ ಎಲ್ಲ ಯುವ ಉದ್ಯಮಶೀಲರಿಗೆ ಮತ್ತು ನಾವಿನ್ಯದಾರರಿಗೆ ಮನವಿ ಮಾಡುವುದೇನೆಂದರೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

 

ಸಹೋದರೆ ಸಹೋದರಿಯರೇ,

ನವ ಭಾರತದ ಆರೋಗ್ಯ ಆರೈಕೆ ವ್ಯವಸ್ಥೆ ಇಡೀ ವಿಶ್ವಕ್ಕೇ ಒಂದು ಮಾದರಿಯಾಗಲಿದೆ. ಆಯುಷ್ಮಾನ್ ಭಾರತ ಯೋಜನೆ ಇದಕ್ಕೆ ಅತಿ ದೊಡ್ಡ ಸಹಯೋಗ ನೀಡುತ್ತದೆ. ದೇಶಧ ಕೋಟ್ಯಂತರ ಜನರನ್ನು ಆರೋಗ್ಯವಂತರನ್ನಾಗಿ ಮಾಡುವ ನಮ್ಮ ಬದ್ಧತೆ ಮತ್ತಷ್ಟು ಬಲಿಷ್ಠವಾಗಲಿದೆ ಮತ್ತು ನಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ಈ ಆಶಯದೊಂದಿಗೆ ನಾನು ನನ್ನ ಹೃದಯದಿಂದ ನಿಮಗೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.

ನಿಮ್ಮೆಲ್ಲರಿಗೂ ಶುಭವಾಗಲಿ.

***


(ಪ್ರಕಟಣೆ ಐ.ಡಿ.: 1588582) ವಿಸಿಟರ್ ಕೌಂಟರ್ : 109
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , Punjabi , Bengali , Assamese , English , Marathi , Tamil