ಪ್ರಧಾನ ಮಂತ್ರಿಯವರ ಕಛೇರಿ

ವ್ಲಾಡಿವೋಸ್ತೋಕ್ಗೆ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಭಾರತ - ರಷ್ಯಾ ಜಂಟಿ ಹೇಳಿಕೆ

Posted On: 04 SEP 2019 7:59PM by PIB Bengaluru

ವ್ಲಾಡಿವೋಸ್ತೋಕ್ಗೆ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಭಾರತ - ರಷ್ಯಾ ಜಂಟಿ ಹೇಳಿಕೆ

 

"ನಂಬಿಕೆ ಮತ್ತು ಸಹಭಾಗಿತ್ವದ ಮೂಲಕ ಸಹಕಾರದ ಹೊಸ ಎತ್ತರವನ್ನು ತಲುಪುವುದು"

1. ಭಾರತ ಗಣರಾಜ್ಯದ ಪ್ರಧಾನಿ ಶ್ರೀ  ನರೇಂದ್ರ ಮೋದಿ ಅವರು ರಷ್ಯಾದ ಒಕ್ಕೂಟದ ಅಧ್ಯಕ್ಷ  ಶ್ರೀ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಸೆಪ್ಟೆಂಬರ್ 4-5, 2019 ರಂದು ರಷ್ಯಾ ಒಕ್ಕೂಟಕ್ಕೆ ಅಧಿಕೃತ ಭೇಟಿ ನೀಡಿದರು. ವ್ಲಾಡಿವೋಸ್ತೋಕ್ನಲ್ಲಿ 20 ನೇ ಭಾರತ - ರಷ್ಯಾ ವಾರ್ಷಿಕ ಶೃಂಗಸಭೆ ನಡೆಯಿತು. ಶ್ರೀ ನರೇಂದ್ರ ಮೋದಿ ಅವರು 5 ನೇ ಪೌರಾತ್ಯ ಆರ್ಥಿಕ ವೇದಿಕೆಯ ಸಭೆಯಲ್ಲಿಯೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

2. 20 ನೇ ವಾರ್ಷಿಕ ಶೃಂಗಸಭೆಯಲ್ಲಿ, ಉಭಯ ನಾಯಕರು ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಕಾರ್ಯತಂತ್ರ ಸಹಭಾಗಿತ್ವದ ಪ್ರಗತಿಪರ ಬೆಳವಣಿಗೆಯನ್ನು ಗಮನಿಸಿದರು. ಈ ಸಂಬಂಧಗಳು ಅನನ್ಯ, ವಿಶ್ವಾಸಾರ್ಹ ಮತ್ತು ಪರಸ್ಪರ ಲಾಭದಾಯಕವಾಗಿದ್ದು, ಸಹಕಾರದ ಎಲ್ಲ ಕ್ಷೇತ್ರಗಳನ್ನು ಒಳಗೊಂಡಿವೆ. ಅವು ಏಕರೂಪದ ನಾಗರಿಕ ಮೌಲ್ಯಗಳು, ಸಮಯ-ಪರೀಕ್ಷಿತ ಸ್ನೇಹ, ಪರಸ್ಪರ ತಿಳುವಳಿಕೆ, ವಿಶ್ವಾಸ, ಸಾಮಾನ್ಯ ಹಿತಾಸಕ್ತಿಗಳು ಮತ್ತು ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯ ಮೂಲಭೂತ ಸಮಸ್ಯೆಗಳ ವಿಧಾನಗಳ ಸಾಮೀಪ್ಯವನ್ನು ಆಧರಿಸಿವೆ. ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳ ಹೊರತಾಗಿಯೂ ಮತ್ತು ಎಲ್ಲಾ ಹಂತಗಳಲ್ಲಿ ದ್ವಿಪಕ್ಷೀಯ ಸಂಪರ್ಕಗಳ ಆವೇಗವನ್ನು ಒಳಗೊಂಡಂತೆ ರಾಷ್ಟ್ರಗಳ ನಾಯಕರ ಆಗಿಂದಾಗಿನ ಸಭೆಗಳು ಈ ಸಹಭಾಗಿತ್ವದ ಎದ್ದುಕಾಣುವ ಸಾಕ್ಷಿಗಳಾಗಿವೆ.

3. ಭಾರತ-ರಷ್ಯಾ ಸಂಬಂಧಗಳು ಸಮಕಾಲೀನ ಪ್ರಪಂಚದ ಪ್ರಕ್ಷುಬ್ಧ ವಾಸ್ತವಗಳನ್ನು ಯಶಸ್ವಿಯಾಗಿ ನಿಭಾಯಿಸಿವೆ. ಅವು ಹಿಂದೆಯೂ ಮತ್ತು ಮುಂದೆಯೂ ಹೊರಗಿನ ಪ್ರಭಾವಕ್ಕೆ ಒಳಗಾಗುವುದಿಲ್ಲ. ಭಾರತ-ರಷ್ಯಾ ಸಂಬಂಧಗಳ ಸಂಪೂರ್ಣ ಪ್ರಗತಿ ಎರಡೂ ದೇಶಗಳಿಗೆ ವಿದೇಶಾಂಗ ನೀತಿಯ ಆದ್ಯತೆಯಾಗಿದೆ. ನಮ್ಮ ಕಾರ್ಯತಂತ್ರದ ಸಹಭಾಗಿತ್ವದ ಪ್ರಭಾವಶಾಲಿ ಸಾಮರ್ಥ್ಯವನ್ನು ಪೂರ್ಣವಾಗಿ ಅನ್ವೇಷಿಸಲು, ಸಂಕೀರ್ಣವಾದ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಸ್ಥಿರತೆಯ ಆಧಾರವಾಗಿ ಹೊರಹೊಮ್ಮಿರುವ ಅದರ ವಿಶೇಷ ಮತ್ತು ಸವಲತ್ತು ಸ್ವರೂಪವನ್ನು ಪ್ರದರ್ಶಿಸಲು ಎಲ್ಲ ರೀತಿಯಲ್ಲೂ ಅನುಕೂಲ ಮಾಡಿಕೊಡಲು ಉಭಯ ನಾಯಕರು ಒಪ್ಪಿದರು.

4. ತಮ್ಮ ಸಂಸತ್ತುಗಳ ನಡುವಿನ ಸಹಕಾರವನ್ನು ಎರಡೂ ಕಡೆಯವರು ಸ್ವಾಗತಿಸಿದರು ಮತ್ತು ಪರಸ್ಪರ ಸಂಬಂಧದ ಮಾತುಕತೆಯ ಮಹತ್ವವನ್ನು ತಮ್ಮ ದ್ವಿಪಕ್ಷೀಯ ಸಂಬಂಧಗಳ ಅಮೂಲ್ಯವಾದ ಅಂಶವೆಂದು ಗಮನಿಸಿದರು. 2018 ರ ಡಿಸೆಂಬರ್ನಲ್ಲಿ ಡುಮಾ ಅಧ್ಯಕ್ಷರ ಭಾರತ ಭೇಟಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು 2019 ರಲ್ಲಿ ಲೋಕಸಭೆಯ ಅಧ್ಯಕ್ಷರ ರಷ್ಯಾ ಭೇಟಿಯನ್ನು ಎದುರು ನೋಡುತ್ತಿದ್ದಾರೆ.

5. ಭಾರತ-ರಷ್ಯಾ ಸಂಬಂಧಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಎರಡೂ ರಾಷ್ಟ್ರಗಳು ಬಲವಾದ, ಬಹುಮುಖಿಯಾದ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಆದ್ಯತೆ ನೀಡುತ್ತವೆ.

6. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿಪರ ಅಭಿವೃದ್ಧಿಯನ್ನು ಖಾತ್ರಿಪಡಿಸುವ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರ ಕುರಿತ ಭಾರತ-ರಷ್ಯಾ ಅಂತರ ಸರ್ಕಾರ ಆಯೋಗದ ಕಾರ್ಯವನ್ನು ನಾಯಕರು ಶ್ಲಾಘಿಸಿದರು.

7. ವ್ಯಾಪಾರ ವಹಿವಾಟಿನ ಸ್ಥಿರವಾದ ಪರಸ್ಪರ ಬೆಳವಣಿಗೆಯ ಬಗ್ಗೆ ಎರಡೂ ಕಡೆಯಿಂದ ತೃಪ್ತಿ ವ್ಯಕ್ತವಾಯಿತು. 2025 ರ ವೇಳೆಗೆ ಇದನ್ನು 30 ಬಿಲಿಯನ್ ಡಾಲರ್ಗೆ ತರಲು, ಭಾರತ ಮತ್ತು ರಷ್ಯಾದ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಕೈಗಾರಿಕಾ ಸಹಕಾರವನ್ನು ಹೆಚ್ಚಿಸಲು, ಹೊಸ ತಾಂತ್ರಿಕ ಮತ್ತು ಹೂಡಿಕೆ ಸಹಭಾಗಿತ್ವವನ್ನು ಸೃಷ್ಟಿಸಲು, ವಿಶೇಷವಾಗಿ ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಅವರು ಒಪ್ಪಿಕೊಂಡರು. 

8. "ಮೇಕ್ ಇನ್ ಇಂಡಿಯಾ" ಕಾರ್ಯಕ್ರಮದಲ್ಲಿ ರಷ್ಯಾದ ವ್ಯವಹಾರದ ಭಾಗವಹಿಸುವಿಕೆಯನ್ನು ವಿಸ್ತರಿಸಲು ಮತ್ತು ರಷ್ಯಾದ ಹೂಡಿಕೆ ಯೋಜನೆಗಳಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆಯನ್ನು ವಿಸ್ತರಿಸಲು ಎರಡೂ ಕಡೆಯವರು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ಹೂಡಿಕೆಗಳ ಉತ್ತೇಜನ ಮತ್ತು ಪರಸ್ಪರ ಸಂರಕ್ಷಣೆ ಕುರಿತ ಭಾರತ-ರಷ್ಯಾ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕುವ ಸಿದ್ಧತೆಗಳನ್ನು ತ್ವರಿತಗೊಳಿಸಲು ಒಪ್ಪಿಗೆ ನೀಡಲಾಯಿತು..

9. ದ್ವಿಪಕ್ಷೀಯ ಮಾತುಕತೆಗಳ ಮೂಲಕ ನಿರ್ಬಂಧಿತ ಕ್ರಮಗಳನ್ನು ಕಡಿತಗೊಳಿಸುವುದನ್ನು ಮತ್ತಷ್ಟು ಪರಿಗಣಿಸಲು ರಕ್ಷಣಾತ್ಮಕ ಕ್ರಮಗಳು, ಪದ್ಧತಿಗಳು ಮತ್ತು ಆಡಳಿತಾತ್ಮಕ ಅಡೆತಡೆಗಳು ಸೇರಿದಂತೆ ಪರಸ್ಪರ ವ್ಯಾಪಾರದಲ್ಲಿನ ಅಡೆತಡೆಗಳನ್ನು ನಿವಾರಿಸುವ ಜಂಟಿ ಕಾರ್ಯವನ್ನು ತೀವ್ರಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡವು. ಯುರೇಷಿಯನ್ ಎಕನಾಮಿಕ್ ಯೂನಿಯನ್ (EAEU) ಮತ್ತು ಭಾರತದ ನಡುವಿನ ಉದ್ದೇಶಿತ ವ್ಯಾಪಾರ ಒಪ್ಪಂದದ ಮೂಲಕ ಇದನ್ನು ಸುಲಭಗೊಳಿಸಲಾಗುವುದು.

10. ಸರಕು ಮತ್ತು ಸೇವೆಗಳಲ್ಲಿನ ವ್ಯಾಪಾರದ ವ್ಯವಸ್ಥೆ, ಉದ್ಯಮಶೀಲತಾ ಚಟುವಟಿಕೆಗಳು ಮತ್ತು ಹೂಡಿಕೆಯ ಪರಿಸರ ಸುಧಾರಿಸುವುದು, ಸಂಬಂಧಿತ ಆಮದು ಮತ್ತು ರಫ್ತು ಕಾರ್ಯವಿಧಾನಗಳನ್ನು ಸಮನ್ವಯಗೊಳಿಸಲು ಮತ್ತು ಪರಿಷ್ಕರಿಸಲು, ತಾಂತ್ರಿಕ, ನೈರ್ಮಲ್ಯ ಮತ್ತು ಫೈಟೊಸಾನಿಟರಿ ಅವಶ್ಯಕತೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಪ್ರಮಾಣೀಕರಿಸಲು ಅವರು ಒಪ್ಪಿಕೊಂಡರು.

11. ರಾಷ್ಟ್ರೀಯ ಕರೆನ್ಸಿಗಳಲ್ಲಿ ಪಾವತಿಗಳನ್ನು ಉತ್ತೇಜಿಸುವ ಕೆಲಸವನ್ನು ಮುಂದುವರಿಸಲಾಗುವುದು.

12. ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸಲು ರಷ್ಯಾದ ರಫ್ತು ಕೇಂದ್ರದೊಂದಿಗೆ ಜಂಟಿಯಾಗಿ ಭಾರತಕ್ಕೆ ರಷ್ಯಾದ ವ್ಯಾಪಾರ ಕಾರ್ಯಾಚರಣೆಯ ವೇದಿಕೆಯಲ್ಲಿ ರಷ್ಯಾದ ರಫ್ತು ಬೆಂಬಲ ಗುಂಪಿನ ಕಚೇರಿಯನ್ನು (Russian export support group) ಮುಂಬೈನಲ್ಲಿ ಸ್ಥಾಪಿಸಲಾಗಿರುವುದನ್ನು ಸ್ವಾಗತಿಸಲಾಯಿತು. ಇನ್ವೆಸ್ಟ್ ಇಂಡಿಯಾದ ರಷ್ಯಾ ಪ್ಲಸ್ ಡೆಸ್ಕ್ ಭಾರತದಲ್ಲಿ ರಷ್ಯಾದ ಹೂಡಿಕೆಗಳಿಗೆ ನಿರಂತರ ಸೌಲಭ್ಯ ಕಲ್ಪಿಸುವುದನ್ನು ಎರಡೂ ಕಡೆಗಳು ಗಮನಿಸಿವೆ.

13. ಸೇಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ ಮತ್ತು ಇಂಡಿಯಾ-ರಷ್ಯಾ ಬಿಸಿನೆಸ್ ಡೈಲಾಗ್ ಗಳು ಈ ವರ್ಷದಲ್ಲಿ ನಡೆದ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಸಹಕಾರಕ್ಕೆ ನೀಡಿದ ಕೊಡುಗೆಯನ್ನು ಎರಡೂ ಕಡೆಯವರು ಗಮನಿಸಿದರು.

14. ಭಾರತ-ರಷ್ಯಾ ಕಾರ್ಯತಂತ್ರದ ಆರ್ಥಿಕ ಮಾತುಕತೆಯ 2 ನೇ ಆವೃತ್ತಿಯು 2019 ರ ಜುಲೈ 10 ರಂದು ನವದೆಹಲಿಯಲ್ಲಿ ನಡೆದಿದ್ದನ್ನು ಉಭಯ ನಾಯಕರು ಸ್ವಾಗತಿಸಿದರು. ನಮ್ಮ ಎರಡು ದೇಶಗಳ ನಡುವಿನ ರಚನಾತ್ಮಕ ಮತ್ತು ನಿರಂತರ ಮಾತುಕತೆಯ ಮೂಲಕ ಪ್ರಮುಖ ಕ್ಷೇತ್ರಗಳಲ್ಲಿ ಒಗ್ಗೂಡಿಸುವ ಮತ್ತು ಪರಸ್ಪರ ಲಾಭದಾಯಕ ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಕಾರ್ಯತಂತ್ರದ ಆರ್ಥಿಕ ಸಂವಾದವು ಒಂದು ಭರವಸೆಯ ಕಾರ್ಯವಿಧಾನವಾಗಿ ಹೊರಹೊಮ್ಮಿದೆ. ಮಾತುಕತೆಗಳ ಆಧಾರದ ಮೇಲೆ ದ್ವಿಪಕ್ಷೀಯ ವ್ಯಾಪಾರ-ಆರ್ಥಿಕ ಮತ್ತು ಹೂಡಿಕೆ ಸಹಕಾರವನ್ನು ಮುಂದುವರೆಸಲು ಸಮಗ್ರ ಕ್ರಿಯಾ ಕಾರ್ಯತಂತ್ರವನ್ನು 2018-2019ರಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಅಳವಡಿಸಿಕೊಳ್ಳಲಾಗಿದೆ.

15. ರಷ್ಯಾದ ದೂರ ಪ್ರಾಚ್ಯದ ಅಭಿವೃದ್ಧಿಯ ಕ್ಷೇತ್ರದಲ್ಲಿ ನವದೆಹಲಿ ಮತ್ತು ಮಾಸ್ಕೋ ನಡುವಿನ ಸಹಕಾರದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ದೂರ ಪ್ರಾಚ್ಯ ಪ್ರದೇಶದಲ್ಲಿ ಹಲವಾರು ಭಾರತೀಯ ಕಂಪನಿಗಳನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ, ಉದಾಹರಣೆಗೆ ವಜ್ರ ಕತ್ತರಿಸುವ ಕ್ಷೇತ್ರದಲ್ಲಿ ವ್ಲಾಡಿವೋಸ್ತೋಕ್ನಲ್ಲಿನ ಮೆಸಸ್ ಕೆಜಿಕೆ ಮತ್ತು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕಮ್ಚಟ್ಕಾದ ಕ್ರುಟೊಗೊರೊವೊದಲ್ಲಿ ಟಾಟಾ ಪವರ್. ದೂರ ಪ್ರಾಚ್ಯ ಮತ್ತು ಸೈಬೀರಿಯಾದಲ್ಲಿ ತನ್ನ ಆರ್ಥಿಕ ಮತ್ತು ಹೂಡಿಕೆಯ ಉಪಸ್ಥಿತಿಯನ್ನು ವಿಸ್ತರಿಸುವ ಭಾರತದ ಉದ್ದೇಶವನ್ನು ರಷ್ಯಾ ಸ್ವಾಗತಿಸಿದೆ.

16. ರಷ್ಯಾದ ದೂರ ಪ್ರಾಚ್ಯದೊಂದಿಗೆ ಸಹಕಾರವನ್ನು ಹೆಚ್ಚಿಸಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ಮೊದಲ ಹೆಜ್ಜೆಯಾಗಿ, ಮೊದಲ ಬಾರಿಗೆ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ನೇತೃತ್ವದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ನಿಯೋಗವು 2019 ರ ಆಗಸ್ಟ್ 12-13ರಂದು ವ್ಲಾಡಿವೋಸ್ತೋಕ್ಗೆ ಭೇಟಿ ನೀಡಿ ಉದ್ದೇಶಿತ ಕ್ಷೇತ್ರಗಳಲ್ಲಿ ಹೆಚ್ಚಿನ ದ್ವಿಪಕ್ಷೀಯ ಮಾರ್ಗಗಳನ್ನು ಹುಡುಕಿದೆ. ಭಾರತದಿಂದ ದೂರ ಪ್ರಾಚ್ಯ ರಷ್ಯಾಕ್ಕೆ ನುರಿತ ಮಾನವಶಕ್ತಿಯ ತಾತ್ಕಾಲಿಕ ನಿಯೋಜನೆಗಾಗಿ ಸಹಕಾರವನ್ನು ಅನ್ವೇಷಿಸಲು ಎರಡೂ ಕಡೆಯವರು ಎದುರು ನೋಡುತ್ತಿದ್ದಾರೆ.

17. ಆರ್ಕ್ಟಿಕ್ನಲ್ಲಿ ರಷ್ಯಾದೊಂದಿಗೆ ಸಹಕರಿಸಲು ಭಾರತ ಎದುರು ನೋಡುತ್ತಿದೆ. ಭಾರತವು ಆರ್ಕ್ಟಿಕ್ ಪ್ರದೇಶದ ಬೆಳವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದೆ ಮತ್ತು ಆರ್ಕ್ಟಿಕ್ ಕೌನ್ಸಿಲ್ನಲ್ಲಿ ಮಹತ್ವದ ಪಾತ್ರ ವಹಿಸಲು ಸಹ ಸಿದ್ಧವಾಗಿದೆ.

18. ಭಾರತದ ಪ್ರಮುಖ ಮೂಲಸೌಕರ್ಯ ಮತ್ತು ಇತರ ಯೋಜನೆಗಳಲ್ಲಿ ಭಾಗವಹಿಸುವ ಇಂಗಿತವನ್ನು ರಷ್ಯಾ ವ್ಯಕ್ತಪಡಿಸಿತು. ಇತ್ತೀಚೆಗೆ ಮುಂಬೈನಲ್ಲಿ ಪೌರ್ವಾತ್ಯ ಹೂಡಿಕೆ ಮತ್ತು ರಫ್ತು ಏಜೆನ್ಸಿಯ ಕಚೇರಿಯನ್ನು ತೆರೆದಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು ಮತ್ತು ರಷ್ಯಾದ ದೂರ ಪೂರ್ವಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಅಭಿವೃದ್ಧಿಗೆ ಇದರ ಕೊಡುಗೆಯನ್ನು ಎದುರು ನೋಡಲಾಗುತ್ತಿದೆ.

19. ಇಂಧನ ಉದ್ಯಮವು ಉಭಯ ದೇಶಗಳ ನಡುವಿನ ಸಾಂಪ್ರದಾಯಿಕ ಪ್ರಮುಖ ಕ್ಷೇತ್ರವಾಗಿದೆ. ಇದು ಭಾರತೀಯ ಮತ್ತು ರಷ್ಯಾದ ಆರ್ಥಿಕತೆಗಳಿಗೆ ಪರಸ್ಪರ ಪ್ರಯೋಜನಕಾರಿಯಾಗಿ ಪೂರಕವಾದ ಪ್ರದೇಶವಾಗಿದೆ. ಭಾರತ ಮತ್ತು ರಷ್ಯಾ ನಡುವಿನ ನಾಗರಿಕ ಪರಮಾಣು ಸಹಕಾರವು ಕಾರ್ಯತಂತ್ರದ ಸಹಭಾಗಿತ್ವದ ಪ್ರಮುಖ ಅಂಶವಾಗಿದೆ. ಕುಡಂಕುಲಂನಲ್ಲಿ ಆರು ಪರಮಾಣು ವಿದ್ಯುತ್ ಸ್ಥಾವರಗಳ ಪೈಕಿ ಉಳಿದ ನಾಲ್ಕು ಸ್ಥಾವರಗಳ ನಿರ್ಮಾಣದಲ್ಲಿ ಸಾಧಿಸಿದ ಪ್ರಗತಿಯ ವೇಗವನ್ನು ಎರಡೂ ಕಡೆಯವರು ಗಮನಿಸಿದರು. ರಷ್ಯಾ ವಿನ್ಯಾಸದ ವಿವಿಇಆರ್ 1200 ಮತ್ತು ಉಪಕರಣಗಳು ಮತ್ತು ಇಂಧನದ ಜಂಟಿ ಉತ್ಪಾದನೆ ಕುರಿತ ತಾಂತ್ರಿಕ ಚರ್ಚೆಗಳ ಮುಂದುವರಿಕೆಯನ್ನು ಎರಡೂ ರಾಷ್ಟ್ರಗಳು ಸ್ವಾಗತಿಸಿವೆ.

20. ಬಾಂಗ್ಲಾದೇಶದ ರೂಪೂರು ನಲ್ಲಿನ ಎನ್ಪಿಪಿ ನಿರ್ಮಾಣದಲ್ಲಿ ಯಶಸ್ವಿ ಸಹಕಾರವನ್ನು ಎರಡೂ ದೇಶಗಳು ಪ್ರಮುಖವಾಗಿ ಗುರುತಿಸಿದವು ಮತ್ತು ಮೂರನೇ ದೇಶಗಳಲ್ಲಿ ಇದೇ ರೀತಿಯ ಸಹಕಾರವನ್ನು ವಿಸ್ತರಿಸಲು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದವು.

21. ಪರಮಾಣು ರಹಿತ ಇಂಧನ ಮತ್ತು ಇಂಧನ ಕ್ಷೇತ್ರದಲ್ಲಿ ಸಹಕಾರದ ಅಪಾರ ಸಾಮರ್ಥ್ಯವನ್ನು ನಾಯಕರು ಗಮನಿಸಿದ್ದಾರೆ. ವ್ಯಾಂಕೋರ್ನೆಫ್ಟ್ ಮತ್ತು ಟಾಸ್-ಯುರಿಯಾಖ್ ನೆಫ್ಟೆಗಜೊಡೊಬೈಚಾ ಯೋಜನೆಗಳ ಅನುಷ್ಠಾನದಲ್ಲಿ ಜೆ ಎಸ್ ಸಿ ರೋಸ್ನೆಫ್ಟ್ ಆಯಿಲ್ ಕಂಪನಿ ಮತ್ತು ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಒಕ್ಕೂಟಗಳ ನಡುವಿನ ಪರಸ್ಪರ ಯಶಸ್ಸು, ನಯಾರಾ ಎನರ್ಜಿ ಲಿಮಿಟೆಡ್ ತೈಲ ಸಂಸ್ಕರಣಾಗಾರದ ಕೆಲಸ, ಕಳೆದ ಎರಡು ದಶಕಗಳಲ್ಲಿ ಹೈಡ್ರೋಕಾರ್ಬನ್ ಸಂಪನ್ಮೂಲಗಳನ್ನು ಹೊರತೆಗೆಯುವಲ್ಲಿ ಸಹಕಾರ ಜೊತೆಗೆ ಗ್ಯಾಜ್ಪ್ರೊಮ್ ಮತ್ತು ಗೇಲ್ ಇಂಡಿಯಾ ನಡುವಿನ ಒಪ್ಪಂದದ ಪ್ರಕಾರ ದ್ರವೀಕೃತ ನೈಸರ್ಗಿಕ ಅನಿಲವನ್ನು ಸಮಯೋಚಿತವಾಗಿ ವಿತರಣೆಯನ್ನು ಭಾರತ ಮತ್ತು ರಷ್ಯಾ ಸ್ವಾಗತಿಸಿದವು.. ರಷ್ಯಾದ ದೂರ ಪೂರ್ವದಿಂದ ಭಾರತಕ್ಕೆ ಕೋಕಿಂಗ್ ಕಲ್ಲಿದ್ದಲು ಸರಬರಾಜಿನಲ್ಲಿ ಸಹಕರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

22. ಕಡಲಾಚೆಯ ಕ್ಷೇತ್ರಗಳು ಸೇರಿದಂತೆ ರಷ್ಯಾ ಮತ್ತು ಭಾರತದಲ್ಲಿ ಭೂವೈಜ್ಞಾನಿಕ ಪರಿಶೋಧನೆ ಮತ್ತು ತೈಲ ಮತ್ತು ಅನಿಲ ಕ್ಷೇತ್ರಗಳ ಜಂಟಿ ಅಭಿವೃದ್ಧಿಯಲ್ಲಿ ಸಹಕಾರವನ್ನು ರೂಪಿಸಲು ನಾಯಕರು ನಿರ್ಧರಿಸಿದರು. ರಷ್ಯಾದ ಕಚ್ಚಾ ತೈಲವನ್ನು ಸೋರ್ಸಿಂಗ್ ಮಾಡಲು ದೀರ್ಘಕಾಲದ ಒಪ್ಪಂದ, ಉತ್ತರ ಸಮುದ್ರ ಮಾರ್ಗದ ಸಂಭಾವ್ಯ ಬಳಕೆ ಮತ್ತು ಪೈಪ್ಲೈನ್ ವ್ಯವಸ್ಥೆಯನ್ನು ಒಳಗೊಂಡಂತೆ ರಷ್ಯಾದಿಂದ ಭಾರತಕ್ಕೆ ಇಂಧನ ಸಂಪನ್ಮೂಲಗಳನ್ನು ತಲುಪಿಸುವ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಲಾಗುತ್ತದೆ. ನಯಾರಾ ಎನರ್ಜಿ ಲಿಮಿಟೆಡ್, ವಡಿನಾರ್ ತೈಲ ಸಂಸ್ಕರಣಾಗಾರದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆಯನ್ನು ಅವರು ಗಮನಿಸಿದರು. ಭಾರತ ಮತ್ತು ರಷ್ಯಾ ಜಲ ಮತ್ತು ಶಾಖೋತ್ಪನ್ನ ಇಂಧನ, ಇಂಧನ ದಕ್ಷತೆ ಮತ್ತು ಸಾಂಪ್ರದಾಯಿಕವಲ್ಲದ ಮೂಲಗಳಿಂದ ಇಂಧನವನ್ನು ಉತ್ಪಾದಿಸುವ ಸೌಲಭ್ಯಗಳನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಹಕಾರದ ವಿಸ್ತರಣೆಯನ್ನು ಪರಿಗಣಿಸಲು ಒಪ್ಪಿಕೊಂಡಿವೆ.

23. 2019-24ರ ಅವಧಿಯಲ್ಲಿ ಹೈಡ್ರೋಕಾರ್ಬನ್ಗಳಲ್ಲಿನ ಸಹಕಾರಕ್ಕಾಗಿ ಮಾರ್ಗಸೂಚಿಗೆ ಶೃಂಗಸಭೆಯಲ್ಲಿ ಸಹಿ ಹಾಕುವ ಮೂಲಕ, ಮುಂದಿನ ಐದು ವರ್ಷಗಳಲ್ಲಿ ಈ ವಲಯದಲ್ಲಿ ದ್ವಿಪಕ್ಷೀಯ ಸಹಕಾರವು ಹೊಸ ಎತ್ತರಕ್ಕೆ ತಲುಪುತ್ತದೆ ಎಂದು ಎರಡೂ ಕಡೆಯವರು ನಿರೀಕ್ಷಿಸಿದ್ದಾರೆ. 

24. ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಪ್ರಗತಿಯನ್ನು ಮತ್ತಷ್ಟು ಉತ್ತೇಜಿಸಲು, ಸಾರಿಗೆ ಮೂಲಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎರಡೂ ದೇಶಗಳು ಉದ್ದೇಶಿಸಿವೆ. ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್ಎಸ್ಟಿಸಿ) ಅಭಿವೃದ್ಧಿಗೆ ಅವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತವೆ. ಸರಕು ಪರಿಮಾಣವನ್ನು ಸುರಕ್ಷಿತಗೊಳಿಸುವುದು, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಸೇವೆಗಳನ್ನು ನವೀಕರಿಸುವುದು ಮತ್ತು ಸುಧಾರಿಸುವುದು, ಡಾಕ್ಯುಮೆಂಟ್ ವರ್ಕ್ಫ್ಲೋ ಅನ್ನು ಸರಳೀಕರಿಸುವುದು ಮತ್ತು ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ವರ್ಕ್ಫ್ಲೋಗೆ ಬದಲಾಯಿಸುವುದು, ಸಾರಿಗೆ ಪ್ರಕ್ರಿಯೆಯಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಉಪಗ್ರಹ ನ್ಯಾವಿಗೇಷನ್ ಪರಿಚಯಿಸುವುದು ಐಎನ್ಎಸ್ಟಿಸಿಯ ಪ್ರಮುಖ ಉದ್ದೇಶವಾಗಿವೆ.

25. ರೈಲ್ವೆ ಕ್ಷೇತ್ರದಲ್ಲಿ ಸಹಕಾರದ ಉತ್ತಮ ಸಾಮರ್ಥ್ಯವನ್ನು ಎರಡೂ ಕಡೆಯವರು ಕಂಡುಕೊಂಡಿದ್ದಾರೆ. ನಾಗ್ಪುರ - ಸಿಕಂದರಾಬಾದ್ ವಿಭಾಗದ ವೇಗವನ್ನು ಹೆಚ್ಚಿಸುವ ಕಾರ್ಯಸಾಧ್ಯತೆಯ ಅಧ್ಯಯನದ ಪ್ರಗತಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಆ ಅಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಭಾಗವಹಿಸಲು ರಷ್ಯಾ ಸರ್ಕಾರದ ಆಸಕ್ತಿಯನ್ನು ಗಮನಿಸಿದರು. ಈ ವಿಷಯದಲ್ಲಿ ಎರಡೂ ದೇಶಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತವೆ.

26. ಎರಡೂ ದೇಶಗಳ ವಿವಿಧ ಪ್ರದೇಶಗಳ ನಡುವೆ ನೇರ ಪ್ರಯಾಣಿಕ ಮತ್ತು ಸರಕು ವಿಮಾನಗಳ ಸೇವೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸಲು ಎರಡೂ ದೇಶಗಳು ಒಪ್ಪಿಕೊಂಡವು.

27. ಸಾರಿಗೆ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ಮೂಲಸೌಕರ್ಯ ಸಾರಿಗೆ ಯೋಜನೆಗಳಿಗೆ ವೈಜ್ಞಾನಿಕ ನೆರವು ನೀಡುವಲ್ಲಿ ಮತ್ತಷ್ಟು ಸಹಕರಿಸುವ ಉದ್ದೇಶವನ್ನು ಹೊಂದಲಾಗಿದೆ.

28. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಂಟಿ ಸಂಶೋಧನೆಯ ಮಹತ್ವವನ್ನು ಎರಡೂ ದೇಶಗಳು ಒತ್ತಿಹೇಳಿದವು. ದೂರಸಂಪರ್ಕ, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ, ನ್ಯಾನೊತಂತ್ರಜ್ಞಾನ, ಫಾರ್ಮಸಿ ಮತ್ತು ಇತರ ಕ್ಷೇತ್ರಗಳಲ್ಲಿ ಹೈಟೆಕ್ ಉತ್ಪನ್ನಗಳ ಅಭಿವೃದ್ಧಿಯನ್ನು ತೀವ್ರಗೊಳಿಸಲು ಅವರು ಬದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ನಾವೀನ್ಯತೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ನಡುವಿನ ಒಪ್ಪಂದವನ್ನು ನಾಯಕರು ಶ್ಲಾಘಿಸಿದರು.  

29. 2018 ರ ಅಖಿಲ ಭಾರತ ಹುಲಿ ಅಂದಾಜಿನ ಫಲಿತಾಂಶಗಳನ್ನು ರಷ್ಯಾ ಶ್ಲಾಘಿಸಿತು. 2,967 ಹುಲಿಗಳನ್ನು ಹೊಂದಿರುವ ಭಾರತವು ಜಾಗತಿಕ ಹುಲಿ ಸಂಖ್ಯೆಯಲ್ಲಿ ಶೇ. 75ರಷ್ಟನ್ನು ಹೊಂದಿದೆ. 2022 ರಲ್ಲಿ ಎರಡನೇ ಅಂತರರಾಷ್ಟ್ರೀಯ ಹುಲಿ ಸಂರಕ್ಷಣಾ ವೇದಿಕೆಯನ್ನು ನಡೆಸಲು ರಷ್ಯಾದ ಪ್ರಯತ್ನವನ್ನು ಭಾರತ ಸ್ವಾಗತಿಸಿತು (ಇದನ್ನು ಎರಡನೇ ಹುಲಿ ಶೃಂಗಸಭೆ ಎಂದೂ ಕರೆಯುತ್ತಾರೆ, ಮೊದಲ ಶೃಂಗಸಭೆಯನ್ನು 2010 ರಲ್ಲಿ ಸೇಂಟ್-ಪೀಟರ್ಸ್ ಬರ್ಗ್ನಲ್ಲಿ ನಡೆಸಲಾಯಿತು). ಹುಲಿ ಸಂರಕ್ಷಣಾ ಪ್ರಯತ್ನಗಳಲ್ಲಿ ತಮ್ಮ ನಾಯಕತ್ವದ ಪಾತ್ರವನ್ನು ಒಪ್ಪಿಕೊಂಡ ಎರಡೂ ದೇಶಗಳು, 2020 ರಲ್ಲಿ ಹುಲಿಗಳ ದೇಶಗಳು, ಸಂರಕ್ಷಣಾ ಪಾಲುದಾರರು ಮತ್ತು ಇತರ ಮಧ್ಯಸ್ಥಗಾರರನ್ನು ಒಳಗೊಂಡ ಉನ್ನತ ಮಟ್ಟದ ಹುಲಿ ವೇದಿಕೆಯ ಸಭೆಯನ್ನು ಭಾರತದಲ್ಲಿ ನಡೆಸಲು ಒಪ್ಪಿಕೊಂಡವು.

30. ವಾಯುಯಾನ ಮತ್ತು ಬಾಹ್ಯಾಕಾಶ, ಸಹಕಾರದ ಭರವಸೆಯ ಕ್ಷೇತ್ರಗಳಾಗಿವೆ. ನಾಗರಿಕ ವಿಮಾನಗಳ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಭಾರತದಲ್ಲಿ ಜಂಟಿ ಉದ್ಯಮಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿದರು.

31. ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ಉಪಗ್ರಹ ನ್ಯಾವಿಗೇಷನ್ ಸೇರಿದಂತೆ ಬಾಹ್ಯಾಕಾಶ ನಿಗಮ "ರೋಸ್ಕೋಸ್ಮೋಸ್" ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡುವಿನ ಹೆಚ್ಚಿದ ಸಹಕಾರವನ್ನು ಎರಡೂ ದೇಶಗಳು ಸ್ವಾಗತಿಸಿದವು. ಉಡಾವಣಾ ವಾಹನಗಳ ಅಭಿವೃದ್ಧಿ, ವಿವಿಧ ಅನ್ವಯಿಕೆಗಳಿಗಾಗಿ ಬಾಹ್ಯಾಕಾಶ ನೌಕೆಯ ನಿರ್ಮಾಣ ಮತ್ತು ಬಳಕೆ, ಹಾಗೆಯೇ ಗ್ರಹಗಳ ಪರಿಶೋಧನೆ ಸೇರಿದಂತೆ ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಸಂಶೋಧನೆ ಮತ್ತು ಬಳಕೆಯನ್ನು ಭಾರತ ಮತ್ತು ರಷ್ಯಾ ಹೆಚ್ಚಿನ ಮಟ್ಟಿಗೆ ಬಳಸಿಕೊಳ್ಳುವ ಅವಶ್ಯಕತೆಯಿದೆ ಎಂದು ಎರಡೂ ದೇಶಗಳು ಒಪ್ಪಿಕೊಂಡವು.

32. ತಿಳುವಳಿಕೆ ಪತ್ರದ ಚೌಕಟ್ಟಿನಲ್ಲಿ ಭಾರತದ ಮೊದಲ ಮಾನವಸಹಿತ ಮಿಷನ್ "ಗಗನಯಾನ" ಕ್ಕಾಗಿ ರಷ್ಯಾ ಕೈಗೊಂಡ ಸಕ್ರಿಯ ಕಾರ್ಯವನ್ನು ಎರಡೂ ದೇಶಗಳು ಸ್ವಾಗತಿಸಿದವು.

33. ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಖಾತರಿಪಡಿಸುವುದು ಮತ್ತು "ಸ್ಪೇಸ್ 2030" ಕಾರ್ಯಸೂಚಿ ಮತ್ತು ಅನುಷ್ಠಾನ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಬಾಹ್ಯಾಕಾಶದ ಶಾಂತಿಯುತ ಉಪಯೋಗಗಳ ಕುರಿತ ವಿಶ್ವಸಂಸ್ಥೆ ಸಮಿತಿಯ (UN COPUS) ಸಹಕಾರವನ್ನು ಬಲಪಡಿಸಲು ಎರಡೂ ಕಡೆಯವರು ಉದ್ದೇಶಿಸಿದ್ದಾರೆ.

34. ವಜ್ರ ಉದ್ಯಮದಲ್ಲಿ ಸಹಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಭಾರತದ ಪಿಜೆಎಸ್ಸಿ ಅಲ್ರೋಸಾ ಕಚೇರಿಯ ಯಶಸ್ವಿ ಚಟುವಟಿಕೆಯನ್ನು ಎರಡೂ ದೇಶಗಳು ಗಮನಿಸಿವೆ. ನೈಸರ್ಗಿಕ ವಜ್ರಗಳ ಇಕ್ವಿಟಿಯನ್ನು ರಕ್ಷಿಸುವ ಉದ್ದೇಶದಿಂದ ಒರಟು ವಜ್ರಗಳ ವ್ಯಾಪಾರ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಈ ಕ್ಷೇತ್ರದಲ್ಲಿ ನಿಯಂತ್ರಕ ಪರಿಸರವನ್ನು ಇನ್ನಷ್ಟು ಸುಧಾರಿಸುವ ಮಾರ್ಗಗಳನ್ನು ಅನ್ವೇಷಿಸಲು ಇಬ್ಬರೂ ನಾಯಕರು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.

35. ಕೃಷಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಅವಕಾಶಗಳನ್ನು ಎರಡೂ ಕಡೆಯಿಂದ ಒಪ್ಪಿಕೊಳ್ಳಲಾಗಿದೆ. ಈ ವಲಯದಲ್ಲಿ ಕಾನೂನು ಚೌಕಟ್ಟನ್ನು ಹೆಚ್ಚಿಸಲು ಮತ್ತು ಫೈಟೊಸಾನಿಟರಿ ಮಾನದಂಡಗಳನ್ನು ಸಮನ್ವಯಗೊಳಿಸಲು, ಲಾಜಿಸ್ಟಿಕ್ಸ್ ಅನ್ನು ಅಭಿವೃದ್ಧಿಪಡಿಸಲು, ನಮ್ಮ ದೇಶಗಳ ಮಾರುಕಟ್ಟೆಗಳಲ್ಲಿ ಕೃಷಿ ಸರಕುಗಳನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಪರಸ್ಪರ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಹೆಚ್ಚು ಎಚ್ಚರಿಕೆಯಿಂದ ಅಧ್ಯಯನ ಮಾಡಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಲಾಯಿತು. ಗ್ರೀನ್ ಕಾರಿಡಾರ್ ವ್ಯವಸ್ಥೆಯು ಎರಡು ಕಸ್ಟಮ್ಸ್ ಆಡಳಿತಗಳ ನಡುವೆ ಆಗಮನ ಪೂರ್ವ ವಿನಿಮಯದ ಮಾಹಿತಿಯನ್ನು ರೂಪಿಸುತ್ತದೆ. ವರ್ಧಿತ ಅಪಾಯ ನಿರ್ವಹಣೆಯ ಮೂಲಕ ಸರಕುಗಳ ತ್ವರಿತ ತೆರವಿಗೆ ಇದು ಸಹಾಯ ಮಾಡುತ್ತದೆ. ಇದು ವ್ಯಾಪಾರ ಸೌಲಭ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

36. ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ನಡುವಿನ ನಿಕಟ ಸಹಕಾರವು ದ್ವಿಪಕ್ಷೀಯ ವಿಶೇಷ ಮತ್ತು ಕಾರ್ಯತಂತ್ರದ ಸಹಭಾಗಿತ್ವದ ಆಧಾರಸ್ತಂಭವಾಗಿದೆ. ನಿಯಮಿತ ಮಿಲಿಟರಿ ಸಂಪರ್ಕಗಳು ಮತ್ತು ಉಭಯ ದೇಶಗಳ ಸಶಸ್ತ್ರ ಪಡೆಗಳ ಜಂಟಿ ಅಭ್ಯಾಸಗಳ ಬಗ್ಗೆ ಎರಡೂ ಕಡೆಯಿಂದ ತೃಪ್ತಿ ವ್ಯಕ್ತವಾಯಿತು. ಮಿಲಿಟರಿ ಮತ್ತು ತಾಂತ್ರಿಕ ಸಹಕಾರಕ್ಕಾಗಿ 2011-2020ರ ದೀರ್ಘಾವಧಿ ಕಾರ್ಯಕ್ರಮದ ಯಶಸ್ವಿ ಅನುಷ್ಠಾನವನ್ನು ಅವರು ಸ್ವಾಗತಿಸಿದರು. ಈ ಕ್ಷೆತ್ರದಲ್ಲಿ ಹೊಸ ದೀರ್ಘಕಾಲೀನ ಸಂವಹನದ ಯೋಜನೆಯನ್ನು ವಿಸ್ತರಿಸಲು ಅವರು ಒಪ್ಪಿಕೊಂಡರು.

37. ಮಿಲಿಟರಿ ಉಪಕರಣಗಳು, ಘಟಕಗಳು ಮತ್ತು ಬಿಡಿಭಾಗಗಳ ಜಂಟಿ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಉತ್ತೇಜಿಸುವುದು, ಮಾರಾಟ ನಂತರದ ಸೇವಾ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಉಭಯ ದೇಶಗಳ ಸಶಸ್ತ್ರ ಪಡೆಗಳ ನಿಯಮಿತ ಜಂಟಿ ಅಭ್ಯಾಸವನ್ನು ಮುಂದುವರಿಸುವುದೂ ಸೇರಿದಂತೆ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಎರಡೂ ದೆಶಗಳು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದವು.

38. ತಂತ್ರಜ್ಞಾನದ ವರ್ಗಾವಣೆ ಮತ್ತು ಜಂಟಿ ಹೂಡಿಕೆಯ ಮೂಲಕ ಮೇಕ್-ಇನ್-ಇಂಡಿಯಾ ಕಾರ್ಯಕ್ರಮದಡಿಯಲ್ಲಿ ರಷ್ಯಾ ಮೂಲದ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಾಧನಗಳ ನಿರ್ವಹಣೆಗಾಗಿ ಬಿಡಿಭಾಗಗಳು, ಘಟಕಗಳು, ಸಮುಚ್ಚಯಗಳು ಮತ್ತು ಇತರ ಉತ್ಪನ್ನಗಳ ಜಂಟಿ ಉತ್ಪಾದನೆಯನ್ನು ಭಾರತದಲ್ಲಿ ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. 

39. ತಮ್ಮ ಸಶಸ್ತ್ರ ಪಡೆಗಳ ನಡುವೆ ದ್ವಿಪಕ್ಷೀಯ ಸಹಕಾರದ ಮತ್ತಷ್ಟು ಅಭಿವೃದ್ಧಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಲು ಎರಡೂ ಕಡೆಯವರು ಆಶಿಸಿದರು ಮತ್ತು ಸಶಸ್ತ್ರ ಪಡೆಗಳಿಗೆ ಲಾಜಿಸ್ಟಿಕ್ ಬೆಂಬಲ ಮತ್ತು ಸೇವೆಗಳನ್ನು ಪರಸ್ಪರ ಒದಗಿಸುವ ಸಾಂಸ್ಥಿಕ ವ್ಯವಸ್ಥೆಯ ಅಗತ್ಯವನ್ನು ಗುರುತಿಸಿದರು. ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲದ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸಿದ್ಧಪಡಿಸಲು ಒಪ್ಪಲಾಯಿತು.

40. ಮಿಲಿಟರಿ ರಾಜಕೀಯ ಮಾತುಕತೆಗಳು, ಜಂಟಿ ಸೈನಿಕ ಅಭ್ಯಾಸಗಳು, ಸಿಬ್ಬಂದಿ-ಮಾತುಕತೆಗಳು, ಪರಸ್ಪರ ಮಿಲಿಟರಿ ಸಂಸ್ಥೆಗಳಲ್ಲಿ ತರಬೇತಿ ಮತ್ತು ಪರಸ್ಪರ ಒಪ್ಪಿಗೆಯ ಇತರ ಸಹಕಾರ ಕ್ಷೇತ್ರಗಳ ಮೂಲಕ ಮಿಲಿಟರಿ-ಮಿಲಿಟರಿ ನಡುವಿನ ಸಹಕಾರರವನ್ನು ಹೆಚ್ಚಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದ್ದಾರೆ. ಈ ವರ್ಷ, ಎರಡನೆಯ ಮೂರೂ ಸೇವೆಗಳ ಜಂಟಿ ಅಭ್ಯಾಸಗಳ INDRA-2019 ಅನ್ನು ಭಾರತದಲ್ಲಿ ನಡೆಸಲಾಗುವುದು ಎಂದು ಎರಡೂ ಕಡೆಯವರು ಹೇಳಿದರು.

41. ದ್ವಿಪಕ್ಷೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅನುಷ್ಠಾನವನ್ನು ಎರಡೂ ಬದಿಯಿಂದ ಶ್ಲಾಘಿಸಲಾಯಿತು. ಇದು ಉಭಯ ದೇಶಗಳ ಜನರನ್ನು ಒಟ್ಟಿಗೆ ಸೇರಿಸಲು ನೇರವಾಗಿ ಸಹಾಯ ಮಾಡುತ್ತದೆ. ಭಾರತದಲ್ಲಿ ರಷ್ಯಾದ ಚಲನಚಿತ್ರೋತ್ಸವಗಳು ಮತ್ತು ರಷ್ಯಾದಲ್ಲಿ ಭಾರತೀಯ ಚಲನಚಿತ್ರೋತ್ಸವಗಳ ಜೊತೆಗೆ ಭಾರತದಲ್ಲಿ ರಷ್ಯಾದ ಸಂಸ್ಕೃತಿ ಮತ್ತು ರಷ್ಯಾದಲ್ಲಿ ಭಾರತೀಯ ಸಂಸ್ಕೃತಿಯ ಪರಸ್ಪರ ಹಬ್ಬಗಳನ್ನು ನಡೆಸುವ ಯಶಸ್ವಿ ಅಭ್ಯಾಸವನ್ನು ಮುಂದುವರಿಸಲು ಅವರು ಒಪ್ಪಿಕೊಂಡರು. ಜೊತೆಗೆ. ನವೆಂಬರ್ 20-28, 2019 ರಂದು ಗೋವಾದಲ್ಲಿ ನಡೆಯಲಿರುವ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಷ್ಯಾ ಪಾಲುದಾರ ರಾಷ್ಟ್ರವಾಗಲಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಸಾಂಸ್ಕೃತಿಕ ವಿನಿಮಯದ ಭೌಗೋಳಿಕ ವಿಸ್ತರಣೆ ಮತ್ತು ಯುವಕರ ಹೆಚ್ಚಿನ ಒಳಗೊಳ್ಳುವಿಕೆ ಅಗತ್ಯವೆಂದು ಒಪ್ಪಲಾಯಿತು. ಜಾನಪದ ಕಲಾ ಗುಂಪುಗಳು ಮತ್ತು ಸಂಬಂಧಿತ ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕಗಳನ್ನು ಬೆಳೆಸುವ ಮೂಲಕ ಭಾರತದಲ್ಲಿ ರಷ್ಯಾದ ಭಾಷೆಯನ್ನು ಮತ್ತು ರಷ್ಯಾದಲ್ಲಿ ಹಿಂದಿಯನ್ನು ಸಮಗ್ರವಾಗಿ ಉತ್ತೇಜಿಸಲು ಒಪ್ಪಲಾಯಿತು.

42. ಶಿಕ್ಷಣ ಕ್ಷೇತ್ರದಲ್ಲಿ ಸಹಕಾರದ ತೀವ್ರತೆಯನ್ನು ಎರಡೂ ದೇಶಗಳು ಸ್ವಾಗತಿಸಿವೆ. ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ನೇರ ಸಂಪರ್ಕಗಳನ್ನು ಮುಂದುವರಿಸಲಾಗುವುದು. ಶೈಕ್ಷಣಿಕ ರುಜುವಾತುಗಳನ್ನು ಪರಸ್ಪರ ಗುರುತಿಸುವ ಕುರಿತು ದ್ವಿಪಕ್ಷೀಯ ಅಂತರ್ ಸರ್ಕಾರಿ ಒಪ್ಪಂದಗಳು ಈ ಚಟುವಟಿಕೆಗಳಿಗೆ ಉತ್ತೇಜನವನ್ನು ನೀಡುತ್ತವೆ. ಒಪ್ಪಂದಗಳನ್ನು ಸಿದ್ಧಪಡಿಸುವ ಕೆಲಸವನ್ನು ತ್ವರಿತಗೊಳಿಸಲು ಉಭಯ ನಾಯಕರು ಒಪ್ಪಿದರು.

43. ಭಾರತದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ರಷ್ಯಾ ಒಕ್ಕೂಟದ ಘಟಕಗಳ ನಡುವೆ ಸಹಕಾರವನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿಹೇಳಲಾಯಿತು. ಆಯಾ ಸಚಿವಾಲಯಗಳ ಸಮನ್ವಯದಿಂದ ಅವುಗಳ ನಡುವೆ ವೇದಿಕೆಯನ್ನು ಆಯೋಜಿಸುವ ಉದ್ದೇಶವನ್ನು ತಿಳಿಸಲಾಯಿತು. ಭಾರತದ ರಾಜ್ಯಗಳು ಮತ್ತು ರಷ್ಯಾದ ಪ್ರದೇಶಗಳ ನಡುವೆ ಸಾಂಸ್ಕೃತಿಕ ಮತ್ತು ವ್ಯಾಪಾರ ಕಾರ್ಯಗಳ ವಿನಿಮಯವನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಯಿತು. ಅಸ್ತಿತ್ವದಲ್ಲಿರುವ ಸಂಬಂಧಗಳಿಗೆ ಉತ್ತೇಜನ ನೀಡಲು ಮತ್ತು ಹೊಸದನ್ನು ರಚಿಸಲು ಅವಳಿ ನಗರಗಳ ಸ್ವರೂಪವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅವರು ಒಪ್ಪಿಕೊಂಡರು.

44. ಭಾರತ-ರಷ್ಯಾ ಪ್ರವಾಸೋದ್ಯಮ ಸಂಬಂಧಗಳು ತೀವ್ರವಾಗಿ ಅಭಿವೃದ್ಧಿ ಹೊಂದುತ್ತಿವೆ ಹಾಗೂ ವಿಶೇಷ ಮತ್ತು ಕಾರ್ಯತಂತ್ರದ ಸಹಭಾಗಿತ್ವ ಮತ್ತು ಪರಸ್ಪರ ತಿಳುವಳಿಕೆಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತವೆ. ಈ ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿದರು.

45. ವೀಸಾ ವಿಧಿವಿಧಾನಗಳ ಪ್ರಗತಿಪರ ಸರಳೀಕರಣವನ್ನು ಎರಡೂ ಕಡೆಯವರು ಸ್ವಾಗತಿಸಿದರು. ನಿರ್ದಿಷ್ಟವಾಗಿ, ರಷ್ಯಾದ ಪ್ರಜೆಗಳು ಸೇರಿದಂತೆ ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಇ-ವೀಸಾ ಸೌಲಭ್ಯದ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸುವುದು ಮತ್ತು ಕಲಿನಿನ್ಗ್ರಾಡ್ ಪ್ರದೇಶಕ್ಕೆ ಮತ್ತು ವ್ಲಾಡಿವೋಸ್ತೋಕ್ ಗೆ ಭೇಟಿ ನೀಡಲು ಭಾರತೀಯ ಪ್ರಜೆಗಳಿಗೆ ಉಚಿತ ಎಲೆಕ್ಟ್ರಾನಿಕ್ ವೀಸಾಗಳನ್ನು ಪರಿಚಯಿಸುವುದು. ಭವಿಷ್ಯದಲ್ಲಿ ವೀಸಾ ಸರಳೀಕರಣ ಕೆಲಸವನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.

46. ವಿಶ್ವಸಂಸ್ಥೆಯಲ್ಲಿ ಸೇರಿದಂತೆ ನಮ್ಮ ದೇಶಗಳ ನಡುವಿನ ಉನ್ನತ ಮಟ್ಟದ ರಾಜಕೀಯ ಮಾತುಕತೆ ಮತ್ತು ಸಹಕಾರವನ್ನು ಎರಡೂ ಕಡೆಯವರು ಗಮನಿಸಿದರು ಮತ್ತು ಅದನ್ನು ಇನ್ನಷ್ಟು ಆಳಗೊಳಿಸಲು ಒಪ್ಪಿದರು.

47. ಜಾಗತಿಕ ವಿದ್ಯಮಾನಗಳಲ್ಲಿ ವಿಶ್ವಸಂಸ್ಥೆಯ ಕೇಂದ್ರ ಸಮನ್ವಯದ ಪಾತ್ರವನ್ನು ಒಳಗೊಂಡಂತೆ ಬಹುಪಕ್ಷೀಯತೆಯನ್ನು ಮತ್ತಷ್ಟು ಬಲಪಡಿಸುವ ಅನಿವಾರ್ಯತೆಯನ್ನು ಎರಡೂ ಬದಿಗಳು ಒತ್ತಿಹೇಳಿದವು. ಅಂತರರಾಷ್ಟ್ರೀಯ ಕಾನೂನಿನ ಪ್ರಾಮುಖ್ಯತೆಯನ್ನು ಒತ್ತಿಹೇಳಿದವು ಮತ್ತು ವಿಶ್ವಸಂಸ್ಥೆ ಸನ್ನದಿನಲ್ಲಿ ಹೇಳಲಾದ ಸದಸ್ಯ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪಕ್ಕೆ ಅನುಮತಿ ಇಲ್ಲ ಎಂಬುದೂ ಸೇರಿದಂತೆ ಅದರ ಉದ್ದೇಶಗಳು ಮತ್ತು ತತ್ವಗಳಿಗೆ ತಮ್ಮ ಬದ್ಧತೆಯನ್ನು ಒತ್ತಿಹೇಳಿದವು. 

48. ದ್ವಿಮುಖ ನೀತಿ ಅಥವಾ ಕೆಲವು ದೇಶಗಳು ತಮ್ಮ ಇಚ್ಛಾಶಕ್ತಿಯನ್ನು ಇತರ ದೇಶಗಳ ಮೇಲೆ ಹೇರುವುದನ್ನು ಹೊರತುಪಡಿಸಿ ಪ್ರಾಮಾಣಿಕವಾಗಿ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ತತ್ವಗಳು, ಉತ್ತಮ ನಂಬಿಕೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ನಿಯಮಗಳ ಅನುಷ್ಠಾನದ ಬಗ್ಗೆ ಎರಡೂ ಕಡೆಯವರು ತಮ್ಮ ದೃಷ್ಟಿಕೋನ ಹಂಚಿಕೊಂಡರು. ಅಂತಹ ಏಕಪಕ್ಷೀಯವಾದ ದಬ್ಬಾಳಿಎಕೆಯ ಹೇರಿಕೆಯು ಅಂತಾರಾಷ್ಟ್ರೀಯ ಕಾನೂನಿನ ಆಧಾರದಲ್ಲಿರುವುದಿಲ್ಲ. ಅಂತಹ ಅಭ್ಯಾಸಕ್ಕೆ ಇದೊಮದು ಉದಾಹರಣೆ ಎಂದು ಪರಿಗಣಿಸಿದವು.

49. ಸಮಕಾಲೀನ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಗೆ ಮತ್ತು ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯ ಸಮಸ್ಯೆಗಳನ್ನು ಎದುರಿಸುವಲ್ಲಿ ಅದನ್ನು ಹೆಚ್ಚು ಪ್ರತಿನಿಧಿಯಾಗಿ, ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಎರಡೂ ಕಡೆಯವರು ಕರೆ ನೀಡಿದರು.

50. ಸುಧಾರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಗೆ ರಷ್ಯಾ ತನ್ನ ಬೆಂಬಲಿಸು ಮಂದುವರೆಉತ್ತದೆ. 

51. ಬ್ರಿಕ್ಸ್ ರಾಷ್ಟ್ರಗಳೊಳಗೆ ಬಹು-ವಲಯ ಪಾಲುದಾರಿಕೆಯನ್ನು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯಿಂದ ಪುನರುಚ್ಚರಿಸಲಾಯಿತು. 2019 ರ ನವೆಂಬರ್ನಲ್ಲಿ ಬ್ರೆಜಿಲ್ನಲ್ಲಿ ನಡೆಯಲಿರುವ 11 ನೇ ಬ್ರಿಕ್ಸ್ ಶೃಂಗಸಭೆಯ ಯಶಸ್ಸಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಒಪ್ಪಿಕೊಳ್ಳಲಾಯಿತು.

52. ಶಾಂಘೈ ಸಹಕಾರ ಸಂಘಟನೆ (SCO)ಯ ಪರಿಣಾಮಕಾರಿತ್ವ ಮತ್ತು ಉತ್ತಮ ಸಾಮರ್ಥ್ಯವನ್ನು ಭಾರತ ಮತ್ತು ರಷ್ಯಾ ಸರ್ವಾನುಮತದಿಂದ ಗುರುತಿಸಿವೆ. ಸಮಾನ ಮತ್ತು ಅವಿನಾಭಾವ ಭದ್ರತೆಯ ಆಧಾರದ ಮೇಲೆ ಉದಯೋನ್ಮುಖ ಬಹು-ಧ್ರುವೀಯ ವಿಶ್ವ ಕ್ರಮಾಂಕದ ಪ್ರಮುಖ ಆಧಾರಸ್ತಂಭವಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಭಾರತ ಮತ್ತು ರಷ್ಯಾ 2019-2020ರಲ್ಲಿ ರಷ್ಯಾದ ಎಸ್ಸಿಒ ಅಧ್ಯಕ್ಷತೆಯ ಚೌಕಟ್ಟಿನೊಳಗೆ ತಮ್ಮ ಸಂವಹನವನ್ನು ಹೆಚ್ಚಿಸುತ್ತವೆ.

53. ನಿರ್ದಿಷ್ಟವಾಗಿ ಎಸ್ಸಿಒ ಪ್ರಾದೇಶಿಕ ಭಯೋತ್ಪಾದನಾ-ವಿರೋಧಿ ರಚನೆಯ ಕಾರ್ಯವನ್ನು ಸುಧಾರಿಸುವ ಮೂಲಕ ಭಯೋತ್ಪಾದನೆ, ಉಗ್ರವಾದ, ಮಾದಕವಸ್ತು ಕಳ್ಳಸಾಗಣೆ, ಗಡಿಯಾಚೆಗಿನ ಸಂಘಟಿತ ಅಪರಾಧ ಮತ್ತು ಮಾಹಿತಿ ಭದ್ರತಾ ಬೆದರಿಕೆಗಳನ್ನು ಎದುರಿಸುವ ಪರಿಣಾಮಕಾರಿತ್ವವನ್ನು ಹೆಚ್ಚಿಸುವತ್ತ ಗಮನಹರಿಸಲು ಎರಡೂ ದೇಶಗಳು ಉದ್ದೇಶಿಸಿವೆ.

54. ಯುರೇಷಿಯನ್ ನಲ್ಲಿ ಹೆಚ್ಚಿನ, ಸಮನಾದ, ಮುಕ್ತ ಮತ್ತು ಪರಸ್ಪರ ಲಾಭದಾಯಕ ಸಹಕಾರವನ್ನು ನಿರ್ಮಿಸಲು ಮುಖ್ಯವಾಗಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಮೂಲಸೌಕರ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಎಸ್ಸಿಒ ಒಳಗೆ ಆರ್ಥಿಕ ಸಹಕಾರದ ವಿಸ್ತರಣೆಯನ್ನು ಎರಡೂ ದೇಶಗಳು ಉತ್ತೇಜಿಸುತ್ತವೆ. ಎಸ್ಸಿಒ ಸ್ವರೂಪದೊಳಗೆ ಸಾಂಸ್ಕೃತಿಕ ಮತ್ತು ಮಾನವೀಯ ಸಂಬಂಧಗಳನ್ನು ಗಾಢವಾಗಿಸಲು ನಾವು ನಿರ್ಧರಿಸಿದ್ದೇವೆ.

55. ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಎಸ್ಸಿಒನ ಹೆಚ್ಚಿದ ಪಾತ್ರ, ವಿಶ್ವಸಂಸ್ಥೆ ಮತ್ತು ಅದರ ವಿಶೇಷ ಏಜೆನ್ಸಿಗಳಾದ ಸಿಎಸ್ಟಿಒ, ಸಿಐಎಸ್, ಏಷಿಯಾನ್ ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳು ಮತ್ತು ಸಂಘಗಳೊಂದಿಗಿನ ಸಂಸ್ಥೆಯ ಸಂಪರ್ಕಗಳ ಸಮಗ್ರ ಅಭಿವೃದ್ಧಿಗೆ ಬೆಂಬಲ. ಈ ಸನ್ನಿವೇಶದಲ್ಲಿ, ಎಸ್ಸಿಒ ಮತ್ತು ಯುರೇಷಿಯನ್ ಎಕನಾಮಿಕ್ ಯೂನಿಯನ್ ನಡುವೆ ಅಧಿಕೃತ ಸಂಬಂಧಗಳನ್ನು ಸ್ಥಾಪಿಸುವುದನ್ನು ಎರಡೂ ದೇಶಗಳು ಬೆಂಬಲಿಸುತ್ತವೆ.

56. RIC ಚೌಕಟ್ಟಿನೊಳಗೆ ಸಹಕಾರವನ್ನು ತೀವ್ರಗೊಳಿಸಲು ಎರಡೂ ದೇಶಗಳು ಉದ್ದೇಶಿಸಿವೆ. ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವ, ರಕ್ಷಣಾತ್ಮಕತೆ ಮತ್ತು ಏಕಪಕ್ಷೀಯ ನಿರ್ಬಂಧಗಳ ವಿಸ್ತರಣೆಯನ್ನು ಎದುರಿಸುವ ಮತ್ತು ಭಯೋತ್ಪಾದನೆ ಮತ್ತು ಇತರ ಹೊಸ ಬೆದರಿಕೆಗಳನ್ನು ಎದುರಿಸುವಲ್ಲಿ ಜಾಗತಿಕ ಮತ್ತು ಪ್ರಾದೇಶಿಕ ಕಾರ್ಯಸೂಚಿಯಲ್ಲಿನ ಸಮಸ್ಯೆಗಳನ್ನು ನಿರಂತರವಾಗಿ ಉತ್ತೇಜಿಸುತ್ತದೆ. ರಾಷ್ಟ್ರಗಳ / ಸರ್ಕಾರದ ಮುಖ್ಯಸ್ಥರು, ವಿದೇಶಾಂಗ ಮಂತ್ರಿಗಳು ಮತ್ತು ಅಗತ್ಯವಿದ್ದರೆ, ಇತರ ಏಜೆನ್ಸಿಗಳ ಮುಖ್ಯಸ್ಥರ ಮಟ್ಟದಲ್ಲಿ ಈ ಸ್ವರೂಪದಲ್ಲಿ ನಿಯಮಿತ ಸಭೆಗಳು ಮುಂದುವರಿಯುತ್ತವೆ.

57. ಪ್ರಮುಖ ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ಸುಲಭಗೊಳಿಸುವ ಉದ್ದೇಶದಿಂದ ಜಿ 20 ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವೇದಿಕೆಗಳಲ್ಲಿ ಸಮನ್ವಯವನ್ನು ಸುಧಾರಿಸಲು ನಾವು ಒಪ್ಪಿದ್ದೇವೆ. ಜಿ 20 ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಜಾಗತಿಕ ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆ ಸಹಕಾರವನ್ನು ಗಾಢವಾಗಿಸುವ ಬದ್ಧತೆಯನ್ನು ಎರಡೂ ಕಡೆಯಿಂದ ಪುನರುಚ್ಚರಿಸಲಾಯಿತು.

58. ಭಯೋತ್ಪಾದನೆಯನ್ನು ಅದರ ಎಲ್ಲಾ ಸ್ವರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ನಾಯಕರು ತೀವ್ರವಾಗಿ ಖಂಡಿಸಿದರು. ಈ ಅನಿಷ್ಟದ ವಿರುದ್ಧ ಹೋರಾಡಲು ಒಕ್ಕೂಟ ವೇದಿಕೆಯನ್ನು ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು. ಭಯೋತ್ಪಾದನೆಯನ್ನು ತಡೆಗಟ್ಟಲು ಮತ್ತು ಎದುರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಅವರು ಶಾಂಘೈ ಸಹಕಾರ ಸಂಸ್ಥೆಯ ರಾಜ್ಯ ಮಂಡಳಿ ಸಭೆಯ ಮುಖ್ಯಸ್ಥರ ಬಿಷ್ಕೆಕ್ ಘೋಷಣೆಯನ್ನು ಸ್ವಾಗತಿಸಿದರು. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಎದುರಿಸಲು ದ್ವಿಮುಖತೆಗೆ ಹಾಗೆಯೇ ರಾಜಕೀಯ ಉದ್ದೇಶಗಳಿಗಾಗಿ ಭಯೋತ್ಪಾದಕ ಗುಂಪುಗಳನ್ನು ಬಳಸುವುದಕ್ಕೆ ಅವಕಾಶ ಕೊಡುವುದಿಲ್ಲ ನೀಡುವುದಿಲ್ಲ ಎಂದರು. ಭಯೋತ್ಪಾದಕ ಉದ್ದೇಶಗಳಿಗಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಬಳಸುವುದರ ವಿರುದ್ಧದ ಹೋರಾಟವನ್ನು ಬಲಪಡಿಸುವ ಮೂಲಕ ಅಂತರರಾಷ್ಟ್ರೀಯ ಭಯೋತ್ಪಾದನಾ ನಿಗ್ರಹದ ಸಹಕಾರದ ಚೌಕಟ್ಟಿನೊಳಗೆ ತಮ್ಮ ದೇಶಗಳ ಪ್ರಯತ್ನಗಳ ವರ್ಧಿತ ಸಮನ್ವಯಕ್ಕಾಗಿ ಉಭಯ ನಾಯಕರು ಕರೆ ನೀಡಿದರು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸ್ವರೂಪಗಳಲ್ಲಿ ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ತೀವ್ರಗೊಳಿಸಲು ಅವರು ಒಪ್ಪಿದರು ಮತ್ತು ಅಂತರರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶವನ್ನು ಶೀಘ್ರವಾಗಿ ಅಂತಿಮಗೊಳಿಸಲು ಕರೆ ನೀಡಿದರು. ವಿಶ್ವಸಂಸ್ಥೆಯ ಮೂರು ಸಂಬಂಧಿತ ಸಮಾವೇಶಗಳ ಆಧಾರದ ಮೇಲೆ ಪ್ರಸ್ತುತ ಅಂತರ-ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಆಡಳಿತವನ್ನು ಬಲಪಡಿಸುವ ಪರಸ್ಪರ ಬದ್ಧತೆಯನ್ನು ಪುನರುಚ್ಚರಿಸಿದರು. ಇಂದು ಯಾವುದೇ ದೇಶ ಭಯೋತ್ಪಾದನೆಯ ನೆರಳಿನಿಂದ ಹೊರಗುಳಿದಿಲ್ಲ. ಭಯೋತ್ಪಾದನೆ ನಿಗ್ರಹದ ಪ್ರಯತ್ನಗಳಲ್ಲಿ ಭಾರತ ಮತ್ತು ರಷ್ಯಾ ಒಂದಾಗಬೇಕಿದೆ. ಜಾಗತಿಕ ಭಯೋತ್ಪಾದನಾ-ವಿರೋಧಿ ಸಮಾವೇಶವನ್ನು ಆಯೋಜಿಸುವ ಭಾರತದ ಪ್ರಸ್ತಾಪವನ್ನು ರಷ್ಯಾ ಗಮನಿಸಿತು.

59. ಬಹುಪಕ್ಷೀಯ ವಿಶೇಷ ಸಮಾಲೋಚನಾ ವೇದಿಕೆಗಳನ್ನು ಒಳಗೊಂಡಂತೆ, ಮುಖ್ಯವಾಗಿ ವಿಶ್ವಸಂಸ್ಥೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಬಳಕೆಯಲ್ಲಿ ಭದ್ರತಾ ಕ್ಷೇತ್ರದಲ್ಲಿ ತಮ್ಮ ದೇಶಗಳ ನಡುವಿನ ಪರಿಣಾಮದ ಮಟ್ಟವನ್ನು ಎರಡೂ ರಾಷ್ಟ್ರಗಳು ಶ್ಲಾಘಿಸಿದವು. ವಿಶ್ವಸಂಸ್ಥೆಯ 73 ನೇ ಸಾಮಾನ್ಯ ಅಧಿವೇಶನದ ಫಲಿತಾಂಶಗಳ ಆಧಾರದ ಮೇಲೆ, ರಾಜ್ಯಗಳ ಜವಾಬ್ದಾರಿಯುತ ನಡವಳಿಕೆಯ ಅಂತರರಾಷ್ಟ್ರೀಯ ನಿಯಮಗಳು, ನೀತಿಗಳು ಮತ್ತು ತತ್ವಗಳ ಒಂದು ಗುಂಪನ್ನು 2018 ರ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಅಂಗೀಕರಿಸಿದೆ ಮತ್ತು ಮಾಹಿತಿ ಮತ್ತು ಸಂಪರ್ಕ ಕುರಿತು ವ್ಯಾಪಕ ಚರ್ಚೆಯಾಗಿದೆ ಅಪರಾಧ ಉದ್ದೇಶಗಳಿಗಾಗಿ ಐಸಿಟಿಯ ಬಳಕೆಯನ್ನು ಎದುರಿಸುವುದು ಸೇರಿದಂತೆ ತಂತ್ರಜ್ಞಾನಗಳ (ಐಸಿಟಿ) ಭದ್ರತೆಯನ್ನು ಪ್ರಾರಂಭಿಸಲಾಗಿದೆ.

60. ಬ್ರಿಕ್ಸ್ ಸಂಘಟನೆಯ ಸದಸ್ಯ ರಾಷ್ಟ್ರಗಳ ನಡುವಿನ ಸಂಬಂಧಿತ ಅಂತರ್ ಸರ್ಕಾರಿ ಒಪ್ಪಂದವನ್ನು ಮುಕ್ತಾಯಗೊಳಿಸುವುದರ ಮೂಲಕ ಐಸಿಟಿಗಳ ಬಳಕೆಯಲ್ಲಿ ಭದ್ರತಾ ಕ್ಷೇತ್ರದಲ್ಲಿ ಬ್ರಿಕ್ಸ್ ದೇಶಗಳ ನಡುವೆ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

61. ಐಸಿಟಿಗಳ ಬಳಕೆಯಲ್ಲಿ ಭದ್ರತೆಯನ್ನು ಒದಗಿಸುವ ವಿಧಾನಗಳ ಸಾಮಾನ್ಯತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಐಸಿಟಿಗಳ ಬಳಕೆಯಲ್ಲಿ ಭದ್ರತೆಯ ಸಹಕಾರ ಕುರಿತು ಭಾರತ-ರಷ್ಯಾ ಅಂತರ್ ಸರ್ಕಾರಿ ಒಪ್ಪಂದವನ್ನು ಸಾಕಾರಗೊಳಿಸುವ ಮೂಲಕ ದ್ವಿಪಕ್ಷೀಯ ಅಂತರ-ಏಜೆನ್ಸಿ ಪ್ರಾಯೋಗಿಕ ಸಹಕಾರವನ್ನು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.

62. 2019-2020ರ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳ ಬಳಕೆಯಲ್ಲಿ ಸುರಕ್ಷತೆ ಕುರಿತು ಭಾರತ ಮತ್ತು ರಷ್ಯಾ ನಡುವಿನ ಸಹಕಾರದ ಮುಖ್ಯ ನಿರ್ದೇಶನಗಳನ್ನು ಜಾರಿಗೆ ತರುವ ಯೋಜನೆಗೆ ಅನುಗುಣವಾಗಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಅಂತರರಾಷ್ಟ್ರೀಯ ಭದ್ರತಾ ಪರಿಸರವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಪ್ರಯತ್ನಗಳನ್ನು ಮುಂದುವರಿಸುವುದು. ಹಾಗೆಯೇ ಅಂತರ-ರಾಜ್ಯ ವಿಶ್ವಾಸದ ಮಟ್ಟವನ್ನು ಹೆಚ್ಚಿಸುವ ಮತ್ತು ಅದರ ಎಲ್ಲಾ ಅಂಶಗಳಲ್ಲಿ ಜಾಗತಿಕ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಬಲಪಡಿಸುವ ದೃಷ್ಟಿಯಿಂದ ಸ್ಥಿರವಾಗಿ ಕೆಲಸ ಮಾಡುವ ತತ್ತ್ವದ ಮೇಲೆ ಸ್ಥಾಪಿತವಾದ ಶಾಶ್ವತ ಶಾಂತಿಯನ್ನು ಖಾತ್ರಿಪಡಿಸಲು ಎಲ್ಲ ರಾಷ್ಟ್ರಗಳ ಹಿತಾಸಕ್ತಿಗಳು ಮತ್ತು ಕಾಳಜಿಗಳನ್ನು ಗೌರವಿಸುವಾಗ ಎಲ್ಲರಿಗೂ ಸಮಾನ ಮತ್ತು ಭದ್ರತೆಯ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.

63. ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ರಷ್ಯಾ ಒಕ್ಕೂಟದ ಭದ್ರತಾ ಮಂಡಳಿಯ ಮೂಲಕ ಸಂಪೂರ್ಣ ಶ್ರೇಣಿಯ ಭದ್ರತಾ ವಿಷಯಗಳ ಬಗ್ಗೆ ತೀವ್ರವಾದ ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಅವರು ಒಪ್ಪಿಕೊಂಡರು.

64. ಬಾಹ್ಯಾಕಾಶ ಮತ್ತು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯು ಮಿಲಿಟರಿ ಮುಖಾಮುಖಿಗೆ ಕಾರಣವಾಗುವ ಸಾಸಾದ್ಯತೆಗಳ ಬಗ್ಗೆ ಎರಡೂ ಕಡೆಯವರು ಕಳವಳ ವ್ಯಕ್ತಪಡಿಸಿದರು. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಗಟ್ಟುವುದು (PAROS) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಅಪಾಯವನ್ನು ತಪ್ಪಿಸುತ್ತದೆ ಮತ್ತು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಲು ಅವರು ಉದ್ದೇಶಿಸಿದ್ದಾರೆ ಎಂದು ಪುನರುಚ್ಚರಿಸಲಾಯಿತು. ಅಂತರರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಗೆ ಬೆಂಬಲ, ಅಂತರರಾಷ್ಟ್ರೀಯ ಸಹಕಾರ ಮತ್ತು ಪರಸ್ಪರ ತಿಳುವಳಿಕೆಯನ್ನು ಒಳಗೊಂಡಂತೆ ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಕಾನೂನು ಒಪ್ಪಂದಗಳ ಕಟ್ಟುನಿಟ್ಟಾದ ಅನುಸರಣೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

65. ಭೂಮಿಯ ಕಕ್ಷೆಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಇಡದಂತೆ ವಿಶ್ವಾಸಾರ್ಹ ಖಾತರಿಗಳನ್ನು ಸ್ಥಾಪಿಸಲು ಬಹುಪಕ್ಷೀಯ, ಕಾನೂನುಬದ್ಧವಾದ ಮಾತುಕತೆಯನ್ನು ಎರಡೂ ಬದಿಗಳು ಬೆಂಬಲಿಸಿದವು. ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಬಾಹ್ಯಾಕಾಶದಲ್ಲಿ ಅದರ ಎಲ್ಲಾ ಅಂಶಗಳಲ್ಲಿ ತಡೆಗಟ್ಟುವ ಬಗ್ಗೆ ಅಂತರರಾಷ್ಟ್ರೀಯ ಒಪ್ಪಂದದ (ಅಥವಾ ಒಪ್ಪಂದಗಳು) ಬಹುಪಕ್ಷೀಯ ಮಾತುಕತೆಗಳನ್ನು ನಡೆಸುವ ಏಕೈಕ ವೇದಿಕೆಯೆಂದರೆ ನಿಶಸ್ತ್ರೀಕರಣ ಕುರಿತಾದ ಸಮ್ಮೇಳನ ಎಂದು ಅವರು ಪುನರುಚ್ಚರಿಸಿದರು.

66. ಸಾರ್ವತ್ರಿಕ, ತಾರತಮ್ಯರಹಿತ ಮತ್ತು ಪ್ರಾಯೋಗಿಕ ಪಾರದರ್ಶಕತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳು PAROS ನಲ್ಲಿ ಕಾನೂನುಬದ್ಧವಾದ ಸಾಧನವಾಗಿ ಪೂರಕ ಪಾತ್ರವನ್ನು ವಹಿಸುತ್ತವೆ ಎಂದು ಒಪ್ಪಲಾಯಿತು.

67. ಅಂತಾರಾಷ್ಟ್ರೀಯ, ತಾರತಮ್ಯರಹಿತ ಮತ್ತು ಪರಿಣಾಮಕಾರಿ ಅನುಸರಣೆ ಪರಿಶೀಲನಾ ಕಾರ್ಯವಿಧಾನವನ್ನು ಒದಗಿಸುವ ಸಮಾವೇಶಕ್ಕೆ ಪ್ರೋಟೋಕಾಲ್ಅನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಸಮಾವೇಶವನ್ನು (ಬಿಟಿಡಬ್ಲ್ಯುಸಿ) ಬಲಪಡಿಸಲು ಎರಡೂ ಬದಿಗಳು ಬೆಂಬಲ ನೀಡಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸಂಬಂಧಿಸಿದ ಬಿಟಿಡಬ್ಲ್ಯೂಸಿ ಕಾರ್ಯಗಳನ್ನು ಇತರ ಕಾರ್ಯವಿಧಾನಗಳಿಂದ ನಕಲು ಮಾಡಬಾರದು ಎಂದು ಪುನರುಚ್ಚರಿಸಲಾಯಿತು.

68. ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧದ (ಸಿಡಬ್ಲ್ಯುಸಿ) ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೊಡುಗೆ ನೀಡಿದ ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಘಟನೆಗೆ (ಒಪಿಸಿಡಬ್ಲ್ಯೂ) ಎರಡೂ ಕಡೆಯವರು ಬೆಂಬಲವನ್ನು ಪುನರುಚ್ಚರಿಸಿದರು. ಸಿಡಬ್ಲ್ಯುಸಿಯ ಪಾತ್ರವನ್ನು ಕಾಪಾಡುವ ಉದ್ದೇಶದಿಂದ ಮತ್ತು ಒಪಿಸಿಡಬ್ಲ್ಯೂನ ಚಟುವಟಿಕೆಗಳನ್ನು ರಾಜಕೀಯಗೊಳಿಸುವುದನ್ನು ತಡೆಯುವ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಬೆಂಬಲಿಸುವ ದೃಢ ನಿರ್ಧಾರವನ್ನು ಅವರು ಪುನರುಚ್ಚರಿಸಿದರು. 

69. ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು, ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದಕ ಕೃತ್ಯಗಳನ್ನು ನಿಗ್ರಹಿಸಲು ಅಂತರರಾಷ್ಟ್ರೀಯ ಸಮಾವೇಶದಲ್ಲಿ ಬಹುಪಕ್ಷೀಯ ಮಾತುಕತೆಗಳನ್ನು ಪ್ರಾರಂಭಿಸುವ ಅಗತ್ಯವನ್ನು ಎರಡೂ ಕಡೆಯವರು ಒತ್ತಿಹೇಳಿದರು.

70. ಜಾಗತಿಕ ಪ್ರಸರಣ ನಿಷೇಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಪರಮಾಣು ಪೂರೈಕೆದಾರರ ಗುಂಪಿನ ಭಾರತದ ಸದಸ್ಯತ್ವಕ್ಕೆ ರಷ್ಯಾ ತನ್ನ ಬೆಂಬಲವನ್ನು ವ್ಯಕ್ತಪಡಿಸಿತು.

71. ಅಫ್ಘಾನಿಸ್ತಾನದಲ್ಲಿ ಸಮಗ್ರ ಶಾಂತಿ ಮತ್ತು ಅಫ್ಘನ್ ನೇತೃತ್ವದ ಮತ್ತು ಅಫ್ಘನ್ ಒಡೆತನದ ಸಮನ್ವಯಕ್ಕಾಗಿ ಭಾರತ ಮತ್ತು ರಷ್ಯಾ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತವೆ. ಅಫ್ಘಾನಿಸ್ತಾನದಲ್ಲಿ ಶೀಘ್ರ ಶಾಂತಿಯುತ ಇತ್ಯರ್ಥಕ್ಕೆ ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಎಸ್ಸಿಒ-ಅಫ್ಘಾನಿಸ್ತಾನ್ ಸಂಪರ್ಕ ಗುಂಪು ಮತ್ತು ಇತರ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸ್ವರೂಪಗಳಲ್ಲಿ ಸಹಕಾರವನ್ನು ಮುಂದುವರೆಸುವ ಮೂಲಕ ಈ ಗುರಿಯನ್ನು ಸಾಧಿಸುವ ದೃಢ ನಿಶ್ಚಯ ಮತ್ತು ಫೆಬ್ರವರಿ 2019 ರಲ್ಲಿ ಮಾಸ್ಕೋದಲ್ಲಿ ಪ್ರಾರಂಭಿಸಲಾದ ಅಂತರ್-ಅಫಘಾನ್ ಮಾತುಕತೆಗಳಿಗೆ ಬೆಂಬಲ ಘೋಷಿಸಲಾಯಿತು. ಅಫ್ಘಾನಿಸ್ತಾನದ ಬಗ್ಗೆ ತೀವ್ರವಾದ ಚರ್ಚೆಗಳನ್ನು ಎರಡೂ ದೇಶಗಳು ಮುಂದುವರೆಸಲಿವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯನ್ನು ವಿಶಾಲ ಆಧಾರಿತವಾಗಿಸಲು, ಸಾಂವಿಧಾನಿಕ ಕ್ರಮವನ್ನು ಕಾಪಾಡಿಕೊಳ್ಳಲು, ದೀರ್ಘಕಾಲೀನ ಶಾಂತಿಯನ್ನು ತರಲು ಮತ್ತು ಅಫ್ಘಾನಿಸ್ತಾನವನ್ನು ಶಾಂತಿಯುತ, ಸುರಕ್ಷಿತ, ಸ್ಥಿರ ಮತ್ತು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನದಲ್ಲಿ ಎಲ್ಲಾ ಆಸಕ್ತ ದೇಶಗಳನ್ನು ಪ್ರೋತ್ಸಾಹಿಸುವರು. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಇಬ್ಬರೂ ನಾಯಕರು ಕರೆ ನೀಡಿದರು.

72. ಸಿರಿಯಾದ ಪರಿಸ್ಥಿತಿಯಲ್ಲಿನ ಸ್ಥಿರತೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು. ಸಿರಿಯಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯದ ಬಗ್ಗೆ ಅವರು ಹೇಳಿದರು. ಸಿರಿಯನ್ ಬಿಕ್ಕಟ್ಟನ್ನು ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಬಗೆಹರಿಸಲು ಕರೆ ನೀಡಿದರು.

73. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವ್ಯಾಖ್ಯಾನಿಸಿರುವಂತೆ ಸಿರಿಯಾದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಎದುರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ನಿರಾಶ್ರಿತರು ಮತ್ತು ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳ ಮರಳುವಿಕೆಗೆ ಷರತ್ತುಗಳನ್ನು ರೂಪಿಸುವುದೂ ಸೇರಿದಂತೆ ಪುನರ್ನಿರ್ಮಾಣದ ಉದ್ದೇಶದಿಂದ ಸಿರಿಯಾಕ್ಕೆ ಸಹಾಯವನ್ನು ಹೆಚ್ಚಿಸಲು ಅವರು ಒಪ್ಪಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 46/182 ರಲ್ಲಿ ತಿಳಿಸಲಾದ ಅಂತರರಾಷ್ಟ್ರೀಯ ಮಾನವೀಯ ನೆರವಿನ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಎರಡೂ ಕಡೆಯವರು ಒತ್ತಾಯಿಸಿದರು. ಇದು ಸಂತ್ರಸ್ತ ದೇಶದ ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸಿ, ಸಂತ್ರಸ್ತ ದೇಶದ ಸರ್ಕಾರಕ್ಕೆ ಮಾನವೀಯ ನೆರವಿನ ನಿಯತಾಂಕಗಳನ್ನು ವ್ಯಾಖ್ಯಾನಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 

4. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಭದ್ರಪಡಿಸುವ ಸಂದರ್ಭದಲ್ಲಿ ಇರಾನಿನ ಪರಮಾಣು ಕಾರ್ಯಕ್ರಮದ (ಜೆಸಿಪಿಒಎ) ಮೇಲಿನ ಜಂಟಿ ಸಮಗ್ರ ಕಾರ್ಯಾಚರನೆಯ ಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನದ ಮಹತ್ವವನ್ನು ಎರಡೂ ಕಡೆಯವರು ಗುರುತಿಸಿದರು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 2231 ನೇ ನಿರ್ಣಯಕ್ಕೆ ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು. ಇದರ ಸುತ್ತ ಇರುವ ಸಮಸ್ಯೆಗಳನ್ನು ಶಾಂತಿಯುತವಾಗಿ ಮತ್ತು ಮಾತುಕತೆಗಳ ಮೂಲಕ ಪರಿಹರಿಸಬೇಕು. ಇರಾನ್ನೊಂದಿಗೆ ಪರಸ್ಪರ ಲಾಭದಾಯಕ ಮತ್ತು ನ್ಯಾಯಸಮ್ಮತ ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ಮುಂದುವರೆಸುವ ದೃಢ ನಿರ್ಧಾರವನ್ನು ಎರಡೂ ಕಡೆಯವರು ವ್ಯಕ್ತಪಡಿಸಿದರು.

75. ಅಣ್ವಸ್ತ್ರರಹಿತ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಸಂಬಂಧಪಟ್ಟ ಎಲ್ಲಾ ಪಕ್ಷಗಳ ನಡುವೆ ಶಾಂತಿಯುತ ಮಾತುಕತೆಯ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.

76. ತೃತೀಯ ರಾಷ್ಟ್ರಗಳಲ್ಲಿ, ವಿಶೇಷವಾಗಿ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ಪರಸ್ಪರ ಸ್ವೀಕಾರಾರ್ಹ ಮತ್ತು ಲಾಭದಾಯಕ ಸಹಕಾರಿ ಕ್ಷೇತ್ರಗಳನ್ನು ಅನ್ವೇಷಿಸಲು ಒಪ್ಪಲಾಯಿತು.

77. ಪಾರದರ್ಶಕ, ತಾರತಮ್ಯರಹಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಎತ್ತಿಹಿಡಿಯಲು ವಿಶ್ವ ವ್ಯಾಪಾರ ಸಂಸ್ಥೆಯ ಪಾತ್ರವನ್ನು ಕಾಪಾಡಿಕೊಳ್ಳುವ ಮತ್ತು ಬಲಪಡಿಸುವ ಅಗತ್ಯವನ್ನು ಎರಡೂ ದೇಶಗಳು ಒಪ್ಪಿಕೊಂಡವು. ನ್ಯಾಯಯುತ ಮತ್ತು ಮುಕ್ತ ಜಾಗತಿಕ ಆರ್ಥಿಕತೆಯನ್ನು ರೂಪಿಸಲು ಒಟ್ಟಾಗಿ ಕೆಲಸ ಮಾಡಲು ಉದ್ದೇಶಿಸಿದವು.

78. ಸುಸ್ಥಿರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಾದೇಶಿಕ ಆರ್ಥಿಕ ಸಹಕಾರವನ್ನು ಗಾಢವಾಗಿಸುವುದು ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಏಷ್ಯಾ ಮತ್ತು ಪೆಸಿಫಿಕ್ನ ಚೌಕಟ್ಟಿನೊಳಗೆ ಸಹಕಾರ ವಿಸ್ತರಣೆ ಸೇರಿದಂತೆ ಸಾರಿಗೆ, ಶಕ್ತಿ ಮತ್ತು ವ್ಯಾಪಾರದಂತಹ ಪ್ರಮುಖ ಕ್ಷೇತ್ರಗಳಲ್ಲಿ 2030 ರ ಕಾರ್ಯಸೂಚಿಯ ಅನುಷ್ಠಾನದ ಮಹತ್ವವನ್ನು ಎರಡೂ ರಾಷ್ಟ್ರಗಳು ಒತ್ತಿ ಹೇಳಿದವು.

79. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಸಮಾನ ಮತ್ತು ಅವಿನಾಭಾವ ಭದ್ರತಾ ರಚನೆಯನ್ನು ನಿರ್ಮಿಸುವ ಬದ್ಧತೆಯನ್ನು ಎರಡೂ ಬದಿಗಳು ಪುನರುಚ್ಚರಿಸಿದವು. ಪೂರ್ವ ಏಷ್ಯಾ ಶೃಂಗಸಭೆಗಳು ಮತ್ತು ಇತರ ಪ್ರಾದೇಶಿಕ ವೇದಿಕೆಗಳ ಚೌಕಟ್ಟಿನೊಳಗೆ ಈ ವಿಷಯದ ಕುರಿತು ಬಹುಪಕ್ಷೀಯ ಮಾತುಕತೆಯ ಪ್ರಗತಿಗೆ ಅವರು ಬೆಂಬಲ ನೀಡುತ್ತಾರೆ. ಪ್ರಾದೇಶಿಕ ಕ್ರಮವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳು ಬಹುಪಕ್ಷೀಯತೆ, ಮುಕ್ತತೆ, ಅಂತರ್ಗತತೆ ಮತ್ತು ಪರಸ್ಪರ ಗೌರವದ ತತ್ವಗಳನ್ನು ಆಧರಿಸಿರಬೇಕು ಮತ್ತು ಯಾವುದೇ ದೇಶದ ವಿರುದ್ಧ ಗುರಿಯಾಗಿರಬಾರದು ಎಂದು ಅವರು ಒಪ್ಪಿಕೊಂಡರು. ಈ ಸಾಮಾನ್ಯ ವಿಷಯದಲ್ಲಿ ಭಾರತ ಮತ್ತು ರಷ್ಯಾ ಪಾಲುದಾರರಾಗಿ ಯುರೇಷಿಯನ್ ಜಾಗದಲ್ಲಿ ಮತ್ತು ಭಾರತೀಯ ಮತ್ತು ಪೆಸಿಫಿಕ್ ಸಾಗರಗಳ ಪ್ರದೇಶಗಳಲ್ಲಿ ಏಕೀಕರಣ ಮತ್ತು ಅಭಿವೃದ್ಧಿ ಉಪಕ್ರಮಗಳ ನಡುವಿನ ಪೂರಕತೆಗಳ ಕುರಿತು ಸಮಾಲೋಚನೆಗಳನ್ನು ತೀವ್ರಗೊಳಿಸಲು ಒಪ್ಪಿಕೊಂಡಿವೆ.

80. ತಮ್ಮ ವಿದೇಶಾಂಗ ನೀತಿ ಆದ್ಯತೆಗಳಲ್ಲಿನ ಗಮನಾರ್ಹ ಸಾಮ್ಯತೆಯ ಬಗ್ಗೆ ಎರಡೂ ರಾಷ್ಟ್ರಗಳು ತೃಪ್ತಿ ವ್ಯಕ್ತಪಡಿಸಿದವು. ಭಾರತ-ರಷ್ಯಾ ನಡುವಿನ ವಿಶೇಷ ಮತ್ತು ಕಾರ್ಯತಂತ್ರ ಸಹಭಾಗಿತ್ವದ ಮತ್ತಷ್ಟು ಅಭಿವೃದ್ಧಿಯ ಮಹತ್ವವನ್ನು ಒತ್ತಿಹೇಳಿದರು. ಪ್ರಸ್ತುತ ದ್ವಿಪಕ್ಷೀಯ ಸಂಬಂಧಗಳ ಸಂದರ್ಭದಲ್ಲಿ ಮತ್ತು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಎದುರಿಸುವಾಗ ಭಾರತ ಮತ್ತು ರಷ್ಯಾದ ಜನರ ಅನುಕೂಲಕ್ಕಾಗಿ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮತ್ತು ವಿಸ್ತರಿಸುವ ಪರಸ್ಪರ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು.

81. ವ್ಲಾಡಿವೋಸ್ತೋಕ್ನಲ್ಲಿ ತಮಗೆ ಹಾಗೂ ತಮ್ಮ ನಿಯೋಗಕ್ಕೆ ನೀಡಿದ ಆತಿಥ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. 21 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವಂತೆ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಹ್ವಾನಿಸಿದರು.



(Release ID: 1584330) Visitor Counter : 246