ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಡೊನಾಲ್ಡ್ ಟ್ರಂಪ್ ನಡುವೆ ದೂರವಾಣಿ ಸಂಭಾಷಣೆ.

Posted On: 19 AUG 2019 8:04PM by PIB Bengaluru

ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಡೊನಾಲ್ಡ್ ಟ್ರಂಪ್ ನಡುವೆ ದೂರವಾಣಿ ಸಂಭಾಷಣೆ.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅಮೇರಿಕಾ ಅಧ್ಯಕ್ಷ ಗೌರವಾನ್ವಿತ ಶ್ರೀ ಡೊನಾಲ್ಡ್ ಟ್ರಂಪ್ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು. ಅವರ ಮೂವತ್ತು ನಿಮಿಷಗಳ ಸಂಭಾಷಣೆಯಲ್ಲಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳು ಒಳಗೊಂಡಿದ್ದವು  ಹಾಗು ಉಭಯ ದೇಶಗಳ ನಾಯಕರ ನಡುವಿನ ಬಾಂಧವ್ಯಕ್ಕೆ ಸಾಕ್ಷಿ ಎಂಬಂತೆ  ಮಾತುಕತೆ ಸೌಹಾರ್ದಯುತವಾಗಿತ್ತು.

ಪ್ರಧಾನ ಮಂತ್ರಿ ಅವರು ಈ ವರ್ಷದ ಜೂನ್ ತಿಂಗಳಾಂತ್ಯದಲ್ಲಿ ಒಸಾಕಾದಲ್ಲಿ ನಡೆದ ಜಿ-20 ರ ಶೃಂಗದ ನೇಪಥ್ಯದಲ್ಲಿ ನಡೆದ ತಮ್ಮ ಭೇಟಿಯನ್ನು  ಸ್ಮರಿಸಿಕೊಂಡರು. 

ಒಸಾಕಾದಲ್ಲಿ ತಾವು ನಡೆಸಿದ ದ್ವಿಪಕ್ಷೀಯ  ಮಾತುಕತೆಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಭಾರತದ ವಾಣಿಜ್ಯ ಸಚಿವರು ಮತ್ತು ಅಮೇರಿಕಾದ ವ್ಯಾಪಾರೋದ್ಯಮದ ಪ್ರತಿನಿಧಿಗಳು ಪರಸ್ಪರ ಲಾಭದಾಯಕವಾದ ದ್ವಿಪಕ್ಷೀಯ ವ್ಯಾಪಾರೋದ್ಯಮದ ಸಾಧ್ಯತೆಗಳನ್ನು ಚರ್ಚಿಸಲು ಆದಷ್ಟು ಬೇಗ ಸಭೆ ಸೇರುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಪ್ರಾದೇಶಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅವರು ಈ ವಲಯದಲ್ಲಿ ಕೆಲವು ನಿರ್ದಿಷ್ಟ ನಾಯಕರು ನಡೆಸುತ್ತಿರುವ ಭಾರತ ವಿರೋಧಿ ಹಿಂಸೆ ಮತ್ತು ತೀವ್ರಗಾಮಿತ್ವದ ವಾದ ಸರಣಿ ಹಾಗು ಪ್ರಚೋದನೆಗಳಿಂದಾಗಿ ಶಾಂತಿಗೆ ಸೂಕ್ತ ವಾತಾವರಣ ಇಲ್ಲದಂತಾಗಿದೆ ಎಂದರು. ಹೆಚ್ಚುತ್ತಿರುವ  ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಯಾವುದೇ ಮುಲಾಜಿಲ್ಲದೆ  ಮಟ್ಟ ಹಾಕಿ ಭಯ ಮತ್ತು ಹಿಂಸೆ ಮುಕ್ತ ಪರಿಸರ ನಿರ್ಮಾಣದ ಮಹತ್ವವನ್ನು ಪ್ರಧಾನ ಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಬಡತನ ನಿರ್ಮೂಲನೆ, ನಿರಕ್ಷರತೆ ಮತ್ತು ರೋಗಗಳ ವಿರುದ್ದ ಹೋರಾಡುವ ಹಾಗು ಈ ಪಥ ಅನುಸರಿಸುವವರ ಜೊತೆ ಸಹಕಾರ ನೀಡುವ ಕುರಿತ ಭಾರತದ ಬದ್ದತೆಯನ್ನು ಪ್ರಧಾನ ಮಂತ್ರಿ ಅವರು ಪುನರುಚ್ಚರಿಸಿದರು.  

ಅಪಘಾನಿಸ್ತಾನ ಇಂದು ಸ್ವಾತಂತ್ರ್ಯದ ನೂರನೆ ವರ್ಷಾಚರಣೆ ಮಾಡುತ್ತಿರುವುದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ಅವರು ಏಕತ್ರ, ಭದ್ರ, ಪ್ರಜಾಸತ್ತಾತ್ಮಕ, ಮತ್ತು ನೈಜ ಸ್ವತಂತ್ರ ಅಪಘಾನಿಸ್ತಾನಕ್ಕಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಭಾರತದ ಧೀರ್ಘಕಾಲೀನ ಮತ್ತು ಅಚಲ ಬದ್ದತೆಯನ್ನೂ ಪುನರುಚ್ಚರಿಸಿದರು.

ಪ್ರಧಾನ ಮಂತ್ರಿ ಅವರು ಅಧ್ಯಕ್ಷರಾದ ಟ್ರಂಪ್ ಅವರ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.



(Release ID: 1582379) Visitor Counter : 79