ಪ್ರಧಾನ ಮಂತ್ರಿಯವರ ಕಛೇರಿ

ಜಮ್ಮು, ಕಾಶ್ಮೀರ ಹಾಗೂ ಲಡಾಖ್ ನ ತಾಳ್ಮೆಯ ಸೋದರ ಮತ್ತು ಸಹೋದರಿಯರ ಧೈರ್ಯಕ್ಕೆ ನಮಿಸಿದ ಪ್ರಧಾನಮಂತ್ರಿ

Posted On: 06 AUG 2019 8:32PM by PIB Bengaluru

ಜಮ್ಮು, ಕಾಶ್ಮೀರ ಹಾಗೂ ಲಡಾಖ್ ನ ತಾಳ್ಮೆಯ ಸೋದರ ಮತ್ತು ಸಹೋದರಿಯರ ಧೈರ್ಯಕ್ಕೆ ನಮಿಸಿದ ಪ್ರಧಾನಮಂತ್ರಿ

 

ಜಮ್ಮು ಮತ್ತು ಕಾಶ್ಮೀರದ ಐತಿಹಾಸಿಕ ಮಸೂದೆಯ ಅನುಮೋದನೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಮರಣಾರ್ಹ ಸಂದರ್ಭ ಎಂದು ಹೇಳಿಕೆ

 

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಧೇಯಕಗಳ ಅನುಮೋದನೆಯನ್ನು  ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಸ್ವಾಗತಿಸಿದ್ದು ‘ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದು ಸ್ಮರಣಾರ್ಹ ಸಂದರ್ಭ ’ ಎಂದು ಹೇಳಿದ್ದಾರೆ.

ಸರಣಿ ಟ್ವೀಟ್ ಸಂದೇಶದಲ್ಲಿ ಪ್ರಧಾನ ಮಂತ್ರಿಯವರು, “ಒಗ್ಗೂಡಿ ನಾವು ಉದಯಿಸುತ್ತೇವೆ ಮತ್ತು ಒಟ್ಟಾಗಿ 130 ಕೋಟಿ ಭಾರತೀಯರ ಕನಸು ನನಸಾಗಿಸುತ್ತೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಧೈರ್ಯ ಮತ್ತು ತಾಳ್ಮೆ ಪ್ರದರ್ಶಿಸಿದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ನ ಸೋದರ, ಸೋದರಿಯರಿಗೆ ನಾನು ನಮಿಸುತ್ತೇನೆ.’ ಎಂದು ತಿಳಿಸಿದ್ದಾರೆ.

‘ಹಲವು ವರ್ಷಗಳಿಂದ ಭಾವನಾತ್ಮಕ ಬ್ಲಾಕ್ ಮೇಲ್ ನಲ್ಲಿ ನಂಬಿಕೆ ಇಟ್ಟಿದ್ದ ಪಟ್ಟಭದ್ರ ಗುಂಪುಗಳು, ಎಂದಿಗೂ ಜನರ ಸಬಲೀಕರಣಕ್ಕೆ ಕಾಳಜಿ ವಹಿಸಲೇ ಇಲ್ಲ. ಈಗ ಜಮ್ಮು ಮತ್ತು ಕಾಶ್ಮೀರ ತನ್ನ ಸಂಕೋಲೆಗಳಿಂದ ಮುಕ್ತವಾಗಿದೆ. ಹೊಸ ಸೂರ್ಯೋದಯವಾಗುತ್ತದೆ, ಉತ್ತಮ ನಾಳೆಗಾಗಿ ನಾವು ಕಾಯಬೇಕು.’ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

“ಜಮ್ಮು, ಕಾಶ್ಮೀರ ಮತ್ತು ಲಡಾಖ್‌ಗೆ ಸಂಬಂಧಿಸಿದ ಮಸೂದೆಗಳು ಏಕೀಕರಣ ಮತ್ತು ಸಬಲೀಕರಣವನ್ನು ಖಾತ್ರಿಪಡಿಸುತ್ತವೆ. ಈ ಕ್ರಮಗಳು ಯುವಕರನ್ನು ಮುಖ್ಯವಾಹಿನಿಗೆ ತರುತ್ತವೆ ಮತ್ತು ಅವರ ಕೌಶಲ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಅಸಂಖ್ಯಾತ ಅವಕಾಶಗಳನ್ನು ನೀಡುತ್ತದೆ. ಸ್ಥಳೀಯ ಮೂಲಸೌಕರ್ಯ ಗಮನಾರ್ಹವಾಗಿ ಸುಧಾರಿಸುತ್ತದೆ. ” ಎಂದು ಶ್ರೀ. ನರೇಂದ್ರ ಮೋದಿ ಹೇಳಿದ್ದಾರೆ.

ಅವರು ವಿಶೇಷವಾಗಿ ಲಡಾಖ್ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. “ಕೇಂದ್ರಾಡಳಿತ ಪ್ರದೇಶ  ಎಂದು ಘೋಷಿಸಬೇಕು ಎಂಬ ಅವರ ದೀರ್ಘಕಾಲದ ಬೇಡಿಕೆ ಈಡೇರಿದೆ. ಇದು ಸಂಭ್ರಮಿಸುವ ವಿಚಾರ”. ಈ ನಿರ್ಧಾರವು ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಇಂಬು ನೀಡುತ್ತದೆ ಮತ್ತು ಉತ್ತಮ ಮೂಲಸೌಲಭ್ಯದ ಅಭಿವೃದ್ಧಿಯ ಖಾತ್ರಿ ಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.

“ಜಮ್ಮು, ಕಾಶ್ಮೀರ ಮತ್ತು ಲಡಾಖ್ ಗೆ ಸಂಬಂಧಿಸಿದ ಪ್ರಮುಖ ಮಸೂದೆಗಳ ಅನುಮೋದನೆ ಭಾರತದ ಏಕತೆಗಾಗಿ ಶ್ರಮಿಸಿದ ಮಹಾನ್ ನಾಯಕರಾದ ಸರ್ದಾರ್ ಪಟೇಲ್, ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ತಮ್ಮ ಬದುಕನ್ನೇ ಭಾರತದ ಏಕತೆ ಮತ್ತು ಒಗ್ಗಟ್ಟಿಗಾಗಿ ಮುಡಿಪಾಗಿಟ್ಟಿದ್ದ ಡಾ. ಎಸ್.ಪಿ. ಮುಖರ್ಜಿಯವರಿಗೆ ಸೂಕ್ತ  ಶ್ರದ್ಧಾಂಜಲಿ’ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

“ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳು ಸಂದರ್ಭಕ್ಕೆ ಸರಿಯಾಗಿ ಪುಟಿದೆದ್ದರು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೆಟ್ಟಿ ನಿಂತರು ಮತ್ತು ಚರ್ಚೆಯಲ್ಲಿ ಭಾಗಿಯಾದರು. ಇದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅದಕ್ಕಾಗಿ ನಾನು ಎಲ್ಲ ಸಂಸತ್ ಸದಸ್ಯರಿಗೆ, ವಿವಿಧ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.’’ ಎಂದು ಅವರು ಹೇಳಿದ್ದಾರೆ.

“ತಮ್ಮ ವಲಯದ ಪ್ರಗತಿ, ಭವಿಷ್ಯ, ಶಾಂತಿ ಮತ್ತು ಸಮೃದ್ಧಿಯ ಬಗ್ಗೆ ಸಂಸದರು ತಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ ಚರ್ಚಿಸಿದ್ದಾರೆ ಇದಕ್ಕಾಗಿ ಜಮ್ಮು , ಕಾಶ್ಮೀರ ಹಾಗೂ ಲಡಾಖ್ ಜನತೆ ಹೆಮ್ಮೆ ಪಡಬೇಕು. ಇದಕ್ಕೆ ವ್ಯಾಪಕವಾದ ಬೆಂಬಲ ದೊರೆತಿದ್ದು, ಇದನ್ನು ರಾಜ್ಯಸಭೆಯಲ್ಲಿ 125:61 ಮತ್ತು ಲೋಕಸಭೆಯಲ್ಲಿ 370:70 ಅಂತಿಮ ಮತಗಳ ಸಂಖ್ಯೆಯಿಂದಲೇ ಕಾಣಬಹುದು’’ ಎಂದು ಪ್ರತ್ಯೇಕ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

“ಅತ್ಯದ್ಭುತ ರೀತಿಯಲ್ಲಿ ಉಭಯ ಸದನಗಳ ಕಲಾಪ ನಡೆಸಿದ ಭಾರತದ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಶ್ರೀ. ಎಂ. ವೆಂಕಯ್ಯನಾಯ್ಡು ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಇಡೀ ದೇಶದ ಶ್ಲಾಘನೆಗೆ ಅರ್ಹರಾಗಿದ್ದಾರೆ’’ ಎಂದು ತಿಳಿಸಿದ್ದಾರೆ.

ನಾನು ವಿಶೇಷವಾಗಿ ಗೃಹ ಸಚಿವ ಶ್ರೀ. ಅಮಿತ್ ಶಾ ಅವರನ್ನು ಅಭಿನಂದಿಸುತ್ತೇನೆ. “ನಮ್ಮ ಗೃಹ ಸಚಿವರಾದ  ಅಮಿತ್ ಶಾ ಅವರು, ಜಮ್ಮು, ಕಾಶ್ಮೀರ ಮತ್ತು ಲಡಾಖ್ ನ ಜನರ ಉತ್ತಮ ಜೀವನದ ಖಾತ್ರಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಮಸೂದೆಗಳ ಅನುಮೋದನೆಯಲ್ಲಿ ಅವರ ಬದ್ಧತೆ ಮತ್ತು ಪರಿಶ್ರಮ ಸ್ಪಷ್ಟವಾಗಿ ಗೋಚರಿಸಿತ್ತು. ನಾನು ವಿಶೇಷವಾಗಿ ಅಮಿತ್ ಭಾಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’’ ಎಂದು ತಿಳಿಸಿದ್ದಾರೆ.

 

****



(Release ID: 1581404) Visitor Counter : 223