ಪ್ರಧಾನ ಮಂತ್ರಿಯವರ ಕಛೇರಿ

‘ಮನ್ ಕಿ ಬಾತ್’ – 2 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 28 JUL 2019 11:33AM by PIB Bengaluru

‘ಮನ್ ಕಿ ಬಾತ್’ – 2 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

 

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಮನದ ಮಾತು ನನಗೆ ಮತ್ತು ನಿಮಗೆ ಎಂದಿಗೂ ಒಂದು ನಿರೀಕ್ಷೆಯ ಘಳಿಗೆಯಾಗಿದೆ. ಈ ಬಾರಿಯೂ ಬಹಳಷ್ಟು ಪತ್ರಗಳು, ಪ್ರತಿಕ್ರಿಯೆಗಳು ಮತ್ತು ದೂರವಾಣಿ ಕರೆಗಳು ಬಂದಿವೆ ಎಂಬುದನ್ನು ನಾನು ಗಮನಿಸಿದೆ. ಎಷ್ಟೋ ಕಥೆಗಳಿವೆ, ಸಲಹೆಗಳಿವೆ. ಪ್ರೇರಣೆಗಳಿವೆ - ಪ್ರತಿಯೊಬ್ಬರೂ ಏನನ್ನಾದರೂ ಮಾಡಬಯಸುತ್ತಾರೆ, ಹೇಳಬಯಸುತ್ತಾರೆ. ಒಂದು ಚೈತನ್ಯದ ಅನುಭೂತಿಯಾಗುತ್ತದೆ. ಮತ್ತು ಇದೆಲ್ಲದರಲ್ಲಿ ನಾನು ಅಳವಡಿಸಿಕೊಳ್ಳಬಯಸುವಂಥದ್ದು ಅದೆಷ್ಟೋ ಇದೆ. ಆದರೆ ಸಮಯದ ಮಿತಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ನೀವು ನನ್ನನ್ನು ಬಹಳ ಪರೀಕ್ಷೆ ಮಾಡುತ್ತಿದ್ದೀರಿ ಎನ್ನಿಸುತ್ತಿದೆ. ಆದರೂ ನಿಮ್ಮದೇ ಮಾತುಗಳನ್ನು ಮನದ ಮಾತೆಂಬ ಈ ಸೂತ್ರದಲ್ಲಿ ಪೋಣಿಸಿ ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ನಿಮಗೆ ನೆನಪಿರಬಹುದು. ಕಳೆದ ಬಾರಿ ನಾನು ಪ್ರೇಮಚಂದ್ ರವರ ಕಥೆಗಳ ಒಂದು ಪುಸ್ತಕದ ಬಗ್ಗೆ ಚರ್ಚೆ ಮಾಡಿದ್ದೆ ಮತ್ತು ನೀವು ಯಾವುದೇ ಪುಸ್ತಕ ಓದಲಿ ಅದರ ಕುರಿತು ಕೆಲ ವಿಷಯಗಳನ್ನು NarendraModi App ನಲ್ಲಿ ಹಂಚಿಕೊಳ್ಳಿ ಎಂದು ನಿರ್ಧರಿಸಿದ್ದೆವು. ಬಹಳಷ್ಟು ಜನರು ಹಲವಾರು ಬಗೆಯ ಪುಸ್ತಕಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ನಾನು ಗಮನಿಸಿದ್ದೇನೆ. ಜನರು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಇತಿಹಾಸ, ಸಂಸ್ಕೃತಿ, ವ್ಯಾಪಾರ, ಜೀವನ ಚರಿತ್ರೆ ಹೀಗೆ ಎಷ್ಟೋ ವಿಷಯಗಳ ಬಗ್ಗೆ ಬರೆದ ಪುಸ್ತಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕೆಲವರು ನನಗೆ ನಾನು ಇಂಥ ಪುಸ್ತಕಗಳ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ. ಸರಿ, ನಾನು ಖಂಡಿತ ಇನ್ನಷ್ಟು ಇಂಥ ಪುಸ್ತಕಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ.  ಆದರೆ ನಾನು ಸಾಕಷ್ಟು ಪುಸ್ತಕಗಳನ್ನು ಓದಲು ಸಮಯ ಮೀಸಲಿರಿಸಲಾಗುತ್ತಿಲ್ಲ ಎಂಬ ಒಂದು ವಿಷಯ ನಾನು ಸ್ವೀಕರಿಸಲೇಬೇಕು. ಆದರೆ ನೀವು ನನಗೆ ಬರೆದು ಕಳುಹಿಸುವುದರಿಂದ ಬಹಳಷ್ಟು ಪುಸ್ತಕಗಳ ಬಗ್ಗೆ ಅರಿಯುವ ಅವಕಾಶ ನನಗೆ ಲಭಿಸುತ್ತಿರುವ ಲಾಭವಂತೂ ಆಗುತ್ತಿದೆ. ಆದರೆ ಕಳೆದ ಒಂದು ತಿಂಗಳ ಅನುಭವದಿಂದ ನಾವಿದನ್ನು ಮುಂದುವರಿಸಬೇಕು ಎನ್ನಿಸುತ್ತದೆ. ನಾವು ನರೇಂದ್ರ ಮೋದಿ ಆಪ್ ನಲ್ಲಿ ಒಂದು ಖಾಯಂ ಬುಕ್ಸ್ ಕಾರ್ನರ್ ಮಾಡಿದರೆ ಹೇಗಿರತ್ತೆ ಮತ್ತು ನಾವು ಯಾವುದಾದರೂ ಹೊಸ ಪುಸ್ತಕ ಓದಿದಾಗ ಅದರ ಕುರಿತು ಬರೆಯೋಣ, ಚರ್ಚಿಸೋಣ ಮತ್ತು ನೀವು ನಮ್ಮ ಈ ಬುಕ್ಸ್ ಕಾರ್ನರ್ಗೆ ಒಂದೊಳ್ಳೆ ಹೆಸರನ್ನು ಸೂಚಿಸಬಹುದು. ಈ ಬುಕ್ಸ್ ಕಾರ್ನರ್ ಓದುಗರು ಮತ್ತು ಲೇಖಕರಿಗೆ ಒಂದು ಸಕ್ರೀಯ ವೇದಿಕೆಯಾಗಲಿ ಎಂದು ಬಯಸುತ್ತೇನೆ. ನೀವು ಓದುತ್ತಿರಿ, ಬರೆಯುತ್ತಿರಿ ಮತ್ತು ಮನದ ಮಾತಿನ ಎಲ್ಲ ಸ್ನೇಹಿತರೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳ್ಳುತ್ತಿರಿ.

ಸ್ನೇಹಿತರೆ, ಜಲಸಂರಕ್ಷಣೆ ಕುರಿತು ಮನದ ಮಾತಿನಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ಆದರೆ ಅದಕ್ಕೂ ಮೊದಲೇ ಜಲಸಂರಕ್ಷಣೆ ನಿಮ್ಮ ಮನ ಮುಟ್ಟುವ ವಿಷಯವಾಗಿತ್ತು. ಸಾಮಾನ್ಯ ಜನರ ಇಷ್ಟವಾದ ವಿಷಯವಾಗಿತ್ತು ಎಂದು ನನಗೆ ಅನ್ನಿಸುತ್ತದೆ. ನೀರಿನ ವಿಷಯ ಇಂದಿನ ದಿನ ಪ್ರತಿಯೊಬ್ಬ ಭಾರತೀಯರ ಮನಸ್ಸನ್ನು ತಲ್ಲಣಿಸುವಂತೆ ಮಾಡಿದೆ. ಜಲಸಂರಕ್ಷಣೆ ಕುರಿತು ದೇಶಾದ್ಯಂತ ಅನೇಕ ಬಗೆಯ ಪ್ರಭಾವಯುತವಾದ ಪ್ರಯತ್ನಗಳು ನಡೆದಿವೆ. ಜನರು ಪಾರಂಪರಿಕ ವಿಧಿ ವಿಧಾನಗಳ ಬಗ್ಗೆ ನವೀನ ವಿನ್ಯಾಸದ ಆಂದೋಲನ ಹಂಚಿಕೊಂಡಿದ್ದಾರೆ. ಮಾಧ್ಯಮಗಳು ಜಲಸಂರಕ್ಷಣೆ ಬಗ್ಗೆ ಬಹಳಷ್ಟು  ಪ್ರಚಾರಗಳನ್ನು ಆರಂಭಿಸಿವೆ. ಸರ್ಕಾರವೇ ಆಗಲಿ, ಸ್ವಯಂ ಸೇವಾ ಸಂಸ್ಥೆಗಳಾಗಲಿ ಯುದ್ಧೋಪಾದಿಯಲ್ಲಿ ಒಂದಲ್ಲ ಒಂದು ಕೆಲಸ ಮಾಡುತ್ತಿದ್ದಾರೆ. ಒಗ್ಗಟ್ಟಿನ ಇಂಥ ಸಾಮರ್ಥ್ಯವನ್ನು ಕಂಡು ಮನಸ್ಸಿಗೆ ಬಹಳ ಆನಂದವಾಗುತ್ತಿದೆ. ಜಾರ್ಖಂಡ್ ನಲ್ಲಿ ರಾಂಚಿಯಿಂದ ಸ್ವಲ್ಪ ದೂರ ಓರ್ಮಾಂಝಿ ಪ್ರಾಂತ್ಯದ ಆರಾ ಕೇರಂ ಎಂಬ ಗ್ರಾಮದಲ್ಲಿ, ಅಲ್ಲಿಯ ಗ್ರಾಮವಾಸಿಗಳು ಜಲಸಂರಕ್ಷಣೆ ಬಗ್ಗೆ ತೆಗೆದುಕೊಂಡಂತಹ ಕ್ರಮಗಳು ಎಲ್ಲರಿಗೂ ಒಂದು ಉದಾಹರಣೆಯಂತಿದೆ. ಗ್ರಾಮ ಜನತೆ ಶ್ರಮದಾನದ ಮೂಲಕ ಬೆಟ್ಟದಿಂದ ಹರಿಯುತ್ತಿದ್ದ ಝರಿಗೆ ನಿರ್ದಿಷ್ಟ ದಿಕ್ಕನ್ನು ಕಲ್ಪಿಸುವ ಕೆಲಸ ಮಾಡಿದ್ದಾರೆ. ಅದು ಕೂಡಾ ಶುದ್ಧ ಗ್ರಾಮೀಣ ಸ್ವರೂಪದಲ್ಲಿ. ಇದರಿಂದ ಮಣ್ಣಿನ ಸವಕಳಿ ತಡೆದು ಬೆಳೆ ಸಂರಕ್ಷಣೆಯಾಗಿದೆಯಲ್ಲದೇ ಹೊಲಗದ್ದೆಗಳಿಗೆ ನೀರಿನ ಪೂರೈಕೆ ಆಗಿದೆ. ಗ್ರಾಮಸ್ಥರ ಈ ಶ್ರಮದಾನ ಸಂಪೂರ್ಣ ಗ್ರಾಮಕ್ಕೆ ನೀಡಿದ ಜೀವದಾನಕ್ಕಿಂತ ಕಡಿಮೆಯೇನಲ್ಲ. ದೇಶದಲ್ಲಯೇ ತನ್ನದೇ ಆದ ಜಲನೀತಿಯನ್ನು ತಯಾರಿಸಿದ ಮೊದಲ ರಾಜ್ಯ ಈಶಾನ್ಯ ಭಾಗದ ಸುಂದರ ರಾಜ್ಯ ಮೇಘಾಲಯ  ಎಂದು ತಿಳಿದು ನಿಮ್ಮೆಲ್ಲರಿಗೂ ಬಹಳ ಸಂತೋಷವಾಗಿರಬಹುದು. ನಾನು ಅಲ್ಲಿಯ ಸರ್ಕಾರಕ್ಕೆ ಅಭಿನಂದಿಸುತ್ತೇನೆ. 

ಹರಿಯಾಣದಲ್ಲಿ ನೀರಿನ ಅವಶ್ಯಕತೆ ಕಡಿಮೆ ಇರುವಂತಹ ಮತ್ತು ರೈತರಿಗೆ ನಷ್ಟವಾಗದಂತಹ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಹರಿಯಾಣ ಸರ್ಕಾರ ಅಲ್ಲಿಯ ಕೃಷಿಕರನ್ನು ಸಂಪರ್ಕಿಸಿ ಸಾಂಪ್ರದಾಯಿಕ ವ್ಯವಸಾಯದ ಬದಲಾಗಿ ಕಡಿಮೆ ನೀರನ್ನು ಅಪೇಕ್ಷಿಸುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿರುವುದಕ್ಕೆ ವಿಶೇಷವಾಗಿ ನಾನು ಅಭಿನಂದಿಸಬಯಸುತ್ತೇನೆ.   

ಈಗಂತೂ ಹಬ್ಬಗಳ ಸಮಯ. ಹಬ್ಬಗಳ ಸಂದರ್ಭದಲ್ಲಿ ಬಹಳಷ್ಟು ಜಾತ್ರೆಗಳನ್ನು ಆಯೋಜಿಸಲಾಗುತ್ತದೆ. ಜಲ ಸಂರಕ್ಷಣೆ ಪ್ರಚಾರಕ್ಕಾಗಿ ಈ ಜಾತ್ರೆಗಳ ಪ್ರಯೋಜನ ಪಡೆಯಬಹುದಲ್ಲವೇ?  ಜಾತ್ರೆಗಳಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಬರುತ್ತಾರೆ. ಇಂಥ ಜಾತ್ರೆಗಳಲ್ಲಿ ನಾವು ಜಲ ಸಂರಕ್ಷಣೆಯ ಸಂದೇಶವನ್ನು ಬಹಳ ಪ್ರಭಾವಯುತವಾಗಿ ಪ್ರದರ್ಶಿಸಬಹುದು, ಬೀದಿ ನಾಟಕಗಳನ್ನು ಮಾಡಬಹುದು. ಉತ್ಸವಗಳ ಜೊತೆಗೆ ಜಲ ಸಂರಕ್ಷಣೆಯ ಸಂದೇಶವನ್ನು ಬಹಳ ಸುಲಭವಾಗಿ ತಲುಪಿಸಬಹುದು.              

   ಸ್ನೇಹಿತರೆ, ಜೀವನದಲ್ಲಿ ಕೆಲ ವಿಷಯಗಳು ನಮ್ಮಲ್ಲಿ ಉತ್ಸಾಹವನ್ನು ತುಂಬುತ್ತವೆ. ವಿಶೇಷವಾಗಿ ಮಕ್ಕಳ ಸಾಧನೆ, ಅವರ ಕೆಲಸಗಳು ನಮ್ಮಲ್ಲಿ ಹೊಸ ಶಕ್ತಿಯನ್ನು ತುಂಬುತ್ತವೆ. ಆದ್ದರಿಂದಲೇ ಇಂದು ಕೆಲ ಮಕ್ಕಳ ಬಗ್ಗೆ ಮಾತನಾಡುವ ಮನಸ್ಸಾಗಿದೆ. ಈ ಮಕ್ಕಳು ನಿಧಿ ಬೈಪೋಟು. ಮೊನೀಷ್ ಜೋಷಿ, ದೇವಾಂಶಿ ರಾವತ್, ತನುಷ್ ಜೈನ್, ಹರ್ಷ್ ದೇವ್ ಧರ್ಕರ್, ಅನಂತ ತಿವಾರಿ,  ಪ್ರೀತಿ ನಾಗ್,  ಅಥರ್ವ ದೇಶ್ಮುಖ್. ಅರೋನ್ಯತೇಶ್ ಗಾಂಗೂಲಿ ಮತ್ತು ಹೃತಿಕ್ ಅಲಾ-ಮಂದಾ.

ಇವರ ಬಗ್ಗೆ ನಾನು ಹೇಳುವುದನ್ನು ಕೇಳಿದರೆ ನಿಮ್ಮ ಮನದಲ್ಲೂ ಉತ್ಸಾಹ ಉಕ್ಕುತ್ತದೆ. ಕ್ಯಾನ್ಸರ್ ಎಂಬ ಶಬ್ದದಿಂದ ಇಡೀ ವಿಶ್ವವೇ ಹೆದರುತ್ತದೆ ಎಂಬುದು ನಮಗೆಲ್ಲ ತಿಳಿದ ವಿಷಯವೇ. ಮೃತ್ಯು ಬಾಗಿಲಿಗೆ ಬಂದು ನಿಂತಿದೆ ಎಂಬಂತೆ ಭಾಸವಾಗುತ್ತದೆ. ಆದರೆ ಈ ಎಲ್ಲ ಹತ್ತು ಮಕ್ಕಳು ತಮ್ಮ ಜೀವನದ ಹೋರಾಟದಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸದೆಬಡಿಯುವುದು ಮಾತ್ರವಲ್ಲದೇ ತಮ್ಮ ಕೆಲಸದಿಂದ ಇಡೀ ವಿಶ್ವದಲ್ಲಿ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಕ್ರೀಡೆಗಳಲ್ಲಿ ಕ್ರೀಡಾಳುಗಳು ಪಂದ್ಯಾವಳಿಯನ್ನು ಗೆಲ್ಲುವ ಅಥವಾ ಪದಕ ಗಳಿಸುವ ಮೂಲಕ ಚಾಂಪಿಯನ್ ಆಗುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇಂತಹ ಕಷ್ಟಕರ ಸನ್ನಿವೇಶದಲ್ಲೂ ಈ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೊದಲೇ ಚಾಂಪಿಯನ್ ಆಗಿದ್ದರು. ಅದರಲ್ಲೂ, ಜೀವನದ ಹೋರಾಟದ ಚಾಂಪಿಯನ್ ಗಳಾಗಿದ್ದರು. 

ಇದೇ ತಿಂಗಳು ಮಾಸ್ಕೋ ನಲ್ಲಿ ವಿಶ್ವದ ವಿಜೇತ ಮಕ್ಕಳ ಪಂದ್ಯಾವಳಿ World Children’s winners games ಆಯೋಜಿಸಲಾಗಿತ್ತು. ಇದೊಂದು ವಿಶೇಷ ಪಂದ್ಯಾವಳಿಯಾಗಿದ್ದು, ಇದರಲ್ಲಿ ಕ್ಯಾನ್ಸರ್ ಗೆದ್ದುಬಂದ ಯುವ ಮಕ್ಕಳು ಅಂದರೆ ತಮ್ಮ ಜೀವನದಲ್ಲಿ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ ಚೇತರಿಸಿಕೊಂಡಂತಹವರು ಮಾತ್ರ ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಪಂದ್ಯಾವಳಿಯಲ್ಲಿ Shooting, Chess, Swimming, Running, Football ಮತ್ತು Table Tennis ನಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಮ್ಮ ದೇಶದ ಈ ಎಲ್ಲ ಹತ್ತು ಚಾಂಪಿಯನ್ ಗಳು ಈ ಪಂದ್ಯಾವಳಿಯಲ್ಲಿ ಪದಕಗಳನ್ನು ಸಾಧಿಸಿದ್ದಾರೆ. ಇದರಲ್ಲಿ ಕೆಲ ಸ್ಪರ್ಧಾಳುಗಳು ಒಂದಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.

ನನ್ನ ಪ್ರಿಯ ದೇಶಬಾಂಧವರೇ, ಆಕಾಶದಿಂದಾಚೆ, ಅಂತರಿಕ್ಷದಲ್ಲೂ ಭಾರತದ ಯಶಸ್ಸು ಕುರಿತು ಕೇಳಿ ನಿಮಗೆ ಹೆಮ್ಮೆ ಆಗಿರಬಹುದು ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ  ಚಂದ್ರಯಾನ ಎರಡು.

ರಾಜಸ್ಥಾನದ ಜೋಧ್ಪುರ್ ನ ಸಂಜೀವ್ ಹರೀಪುರ, ಕೊಲ್ಕತಾದ ಮಹೇಂದ್ರ ಕುಮಾರ್ ದಾಗಾ, ತೆಲಂಗಾಣದ ಪಿ. ಅರವಿಂದ್ ರಾವ್... ಹೀಗೆ ಅನೇಕರು ದೇಶದ ವಿವಿದೆಡೆಗಳಿಂದ, ಹಲವಾರು ಜನ ನನಗೆ NarendraModi App ಮತ್ತು MyGov ಮೂಲಕ, ಈ ಬಾರಿಯ ಮನದ ಮಾತಿನಲ್ಲಿ ಚಂದ್ರಯಾನ ಎರಡರ  ಕುರಿತು ಮಾತನಾಡ ಬೇಕೆಂದು ಆಗ್ರಹಿಸಿದ್ದಾರೆ.

 

ಬಾಹ್ಯಾಕಾಶ ಸಾಧನೆಯ ದೃಷ್ಟಿಯಿಂದ 2019 ನೇ ವರ್ಷ ಬಹಳ ಉತ್ತಮವಾಗಿತ್ತು. ನಮ್ಮ ವಿಜ್ಞಾನಿಗಳು ಮಾರ್ಚ್ನಲ್ಲಿ A-Sat launch ಮಾಡಿದ್ದರು ತದನಂತರ ಚಂದ್ರಯಾನ 2. ಚುನಾವಣೆಯ ಕೆಲಸಕಾರ್ಯಗಳಿಂದಾಗಿ ಆಗ ಎಸ್ಯಾಟ್ ನಂತಹ ಬಹು ದೊಡ್ಡ ಮತ್ತು ಮಹತ್ವಪೂರ್ಣ ವಿಷಯದ ಕುರಿತು ಹೆಚ್ಚು ಚರ್ಚೆ ನಡೆಯಲಿಲ್ಲ. ಆದರೆ ನಾವು ಎಸ್ಯಾಟ್ ಕ್ಷಿಪಣಿಯಿಂದ ಕೇವಲ 3 ನಿಮಿಷಗಳಲ್ಲಿ 300 ಕಿಲೋಮೀಟರ್ ದೂರದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ. ಭಾರತ ಈ ಸಾಧನೆಯನ್ನು ಸಂಭ್ರಮಿಸಿದ ವಿಶ್ವದ ನಾಲ್ಕನೇ ದೇಶವಾಗಿ ಹೊರಹೊಮ್ಮಿತು. ಈಗ ಜುಲೈ 22 ರಂದು ಚಂದ್ರಯಾನ 2 ಶ್ರೀಹರಿಕೋಟಾದಿಂದ ಅಂತರಿಕ್ಷದೆಡೆಗೆ ತನ್ನ ದಾಪುಗಾಲಿಕ್ಕಿದೆ ಎಂಬುದನ್ನು ಸಂಪೂರ್ಣ ದೇಶವೇ ಬಹಳ ಹೆಮ್ಮೆಯಿಂದ ವೀಕ್ಷಿಸಿದೆ. ಚಂದ್ರಯಾನ 2 ರ ಯಶಸ್ವೀ ಉಡಾವಣೆಯ ಭಾವಚಿತ್ರಗಳು ದೇಶಬಾಂಧವರಲ್ಲಿ ಗೌರವ, ಉತ್ಸಾಹ ಮತ್ತು ಆನಂದವನ್ನು ತುಂಬಿದೆ.

ಚಂದ್ರಯಾನ 2 ಈ ಮಿಶನ್ ಹಲವಾರು ರೀತಿಯಲ್ಲಿ ವಿಶೇಷವಾಗಿದೆ. ಚಂದ್ರಯಾನ 2 ಚಂದ್ರನ ಕುರಿತು ನಮ್ಮ ಜ್ಞಾನವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ. ಇದರಿಂದ ನಮಗೆ ಚಂದ್ರನ ಕುರಿತು ಇನ್ನಷ್ಟು ವಿಸ್ತ್ರತ ಮಾಹಿತಿ ದೊರೆಯಲಿದೆ ಆದರೆ ಚಂದ್ರಯಾನ 2 ಮಿಷನ್ನಿಂದ ಯಾವ ಎರಡು ಬಹುದೊಡ್ಡ ವಿಷಯಗಳನ್ನು ಅರಿತಿದ್ದೇನೆ ಎಂದು ನನ್ನನ್ನು ನೀವು ಕೇಳಿದರೆ ಅವು ವಿಶ್ವಾಸದಿಂದಿರುವುದು ಮತ್ತು ನಿರ್ಭೀತವಾಗಿರುವುದು ಎಂದು ನಾನು ಹೇಳಬಲ್ಲೆ. ನಮಗೆ ನಮ್ಮ ಪ್ರತಿಭೆ ಮತ್ತು ಕ್ಷಮತೆ ಬಗ್ಗೆ ನಮ್ಮಲ್ಲಿ ವಿಶ್ವಾಸವಿರಬೇಕು. ಚಂದ್ರಯಾನ 2 ಸಂಪೂರ್ಣವಾಗಿ ಭಾರತೀಯರೇ ಕೈಗೊಂಡಂತಹ ಯೋಜನೆಯಾಗಿದೆ ಎಂಬುದನ್ನು ಕೇಳಿ ನಿಮಗೆ ಸಂತೋಷವಾಗಬಹುದು. ಇದು ಹೃದಯದಿಂದಲೂ, ಆತ್ಮದಿಂದಲೂ ಭಾರತೀಯವಾಗಿದೆ. ಇದು ಸಂಪೂರ್ಣವಾಗಿ ಸ್ವದೇಶಿ ಯೋಜನೆಯಾಗಿದೆ. ಎಂದಿಗೇ ಆಗಲಿ ಹೊಸ ಕ್ಷೇತ್ರಗಳಲ್ಲಿ ಹೊಸತೇನನ್ನಾದರೂ ಮಾಡಿ ತೋರಬೇಕು ಎಂದಾದಲ್ಲಿ ನಮ್ಮ ವಿಜ್ಞಾನಿಗಳು ಸರ್ವ ಶ್ರೇಷ್ಠರೂ ಮತ್ತು ವಿಶ್ವಮಾನ್ಯ ಅಗ್ರರೂ ಆಗಿದ್ದಾರೆ ಎಂಬುದನ್ನು ಈ ಮಿಶನ್ ಮತ್ತೊಮ್ಮೆ ಸಾಬೀತು ಮಾಡಿದೆ.          

ಮತ್ತೊಂದು ಮಹತ್ವಪೂರ್ಣವಾದ ಪಾಠವೇನೆಂದರೆ ಯಾವುದೇ ಅಡ್ಡಿ ಆತಂಕಗಳಿಗೆ ಅಂಜಬಾರದು. ನಮ್ಮ ವಿಜ್ಞಾನಿಗಳು ಹೇಗೆ ನಿರ್ಧರಿತ ಸಮಯದಲ್ಲಿ ಹಗಲು ರಾತ್ರಿಯೆನ್ನದೇ ತಾಂತ್ರಿಕ ದೋಷಗಳನ್ನು ನಿವಾರಿಸಿ ಚಂದ್ರಯಾನ 2 ನ್ನು ಯಶಸ್ವಿಗೊಳಿಸಿದರೋ ಅದೊಂದು ಅಭೂತಪೂರ್ವವಾದ ವಿಷಯ. ವಿಜ್ಞಾನಿಗಳ ಈ ತಪಸ್ಸಿಗೆ ವಿಶ್ವವೇ ಸಾಕ್ಷಿಯಾಗಿದೆ. ಈ ಕುರಿತು ನಾವೆಲ್ಲರೂ ಬಹಳ ಹೆಮ್ಮೆ ಪಡಬೇಕು. ಅಡ್ಡಿ ಆತಂಕಗಳ ಹೊರತಾಗಿಯೂ ಉಡಾವಣಾ ಸಮಯವನ್ನು ಅವರು ಬದಲಾಯಿಸದಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸುವಂಥ ವಿಷಯ. ನಮ್ಮ ಜೀವನದಲ್ಲೂ temporary set backs ಅಂದರೆ ತಾತ್ಕಾಲಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇದು ಯಶಸ್ವಿಯಾಗುವ ಸಾಮರ್ಥ್ಯ ನಮ್ಮಲ್ಲೇ ಇರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಚಂದ್ರಯಾನ 2 ಅಭಿಯಾನ ನಮ್ಮ ದೇಶದ ಯುವಕರಿಗೆ ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಪ್ರೇರಣಾದಾಯಕವಾಗಿರುತ್ತದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಮಿಗಿಲಾಗಿ ವಿಜ್ಞಾನವೇ ವಿಕಾಸದ ಮಾರ್ಗವಲ್ಲವೇ? ಈಗ ನಾವು ಸೆಪ್ಟೆಂಬರ್ ತಿಂಗಳನ್ನು ಬಹಳ ಕುತೂಹಲದಿಂದ ಕಾಯುತ್ತಿದ್ದೇವೆ. ಆಗ   ಚಂದ್ರನ ಮೇಲೆ ಲ್ಯಾಂಡರ್ - ವಿಕ್ರ್ರಮ್ ಮತ್ತು ರೋವರ್ - ಪ್ರಜ್ಞಾನದ ಲ್ಯಾಂಡಿಂಗ್ ಆಗಲಿದೆ.  

ಈ ದಿನ ನಾನು “ಮನದ ಮಾತು” ಕಾರ್ಯಕ್ರಮದ ಮೂಲಕ ದೇಶದ ವಿದ್ಯಾರ್ಥಿ ಮಿತ್ರರ ಜೊತೆಗೆ, ಯುವ ಸ್ನೇಹಿತರ ಜೊತೆಗೆ ಒಂದು ಆಸಕ್ತಿದಾಯಕವಾದ ಸ್ಪರ್ಧೆ / ಕಾಂಪಿಟಿಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ ಮತ್ತು ದೇಶದ ಯುವಕ ಯುವತಿಯರನ್ನು ಒಂದು ಕ್ವಿಜ್ ಕಾಂಪಿಟಿಷನ್ ಗೆ ಆಹ್ವಾನಿಸುತ್ತಿದ್ದೇನೆ. ಅಂತರಿಕ್ಷಕ್ಕೆ ಸಂಬಂಧಿಸಿದ ಜಿಜ್ಞಾಸೆಗಳು ಭಾರತದ ಸ್ಪೇಸ್ ಮಿಷನ್, ವಿಜ್ಞಾನ ಮತ್ತು ತಂತ್ರಜ್ಞಾನ  ಇವು ಈ ಕ್ವಿಜ್ ಕಾಂಪಿಟಿಷನ್ ನ ಮುಖ್ಯ ವಿಷಯಗಳಾಗಿರುತ್ತವೆ. ಯಾವ ರೀತಿ ಅಂದರೆ  ರಾಕೆಟ್ ಉಡಾವಣೆ ಮಾಡಲು ಏನೇನು ಮಾಡಬೇಕು, ಉಪಗ್ರಹವನ್ನು ಹೇಗೆ ಕಕ್ಷೆಯಲ್ಲಿ ಸ್ಥಾಪನೆ ಮಾಡುತ್ತಾರೆ, ಉಪಗ್ರಹದಿಂದ ನಾವು ಏನೇನು ಮಾಹಿತಿಗಳನ್ನು ಪಡೆದುಕೊಳ್ಳಬಹುದು, A-Sat ಅಂದರೆ ಏನು, ಹೀಗೆ ಬಹಳಷ್ಟು ವಿಷಯಗಳಿವೆ.  MyGov website ನಲ್ಲಿ ಆಗಸ್ಟ್ ಒಂದರಂದು ಸ್ಪರ್ಧೆಯ ವಿವರಗಳನ್ನು ಕೊಡಲಾಗುತ್ತದೆ.

ಈ ಕ್ವಿಜ್ ಕಾಂಪಿಟಿಷನ್ ನಲ್ಲಿ ಭಾಗವಹಿಸಿ; ನಿಮ್ಮ ಭಾಗವಹಿಸುವಿಕೆಯಿಂದ ಇದನ್ನು ಆಸಕ್ತಿದಾಯಕ, ರೋಚಕ ಮತ್ತು ನೆನಪಿನಲ್ಲಿ ಉಳಿಯುವಂತೆ ಮಾಡಿ ಎಂದು ನಾನು ಯುವ ಮಿತ್ರರನ್ನೂ,  ವಿದ್ಯಾರ್ಥಿಗಳನ್ನೂ  ಆಗ್ರಹಿಸುತ್ತೇನೆ. ನೀವು ನಿಮ್ಮ ಶಾಲೆಯನ್ನು ಇದರಲ್ಲಿ ಗೆಲ್ಲಿಸಲು ಸಾಕಷ್ಟು ಶ್ರಮ ವಹಿಸಿ ಎಂದು ನಾನು ಶಾಲೆಗಳಿಗೆ, ಶಾಲೆಗಳ ಪ್ರವರ್ತಕರಿಗೆ, ಉತ್ಸಾಹಿ ಗುರುಗಳು ಮತ್ತು ಶಿಕ್ಷಕರಿಗೆ ವಿಶೇಷವಾಗಿ ಹೇಳಲು ಬಯಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳನ್ನೂ ಇದರಲ್ಲಿ ಸೇರಿಕೊಳ್ಳಲು ಪ್ರೋತ್ಸಾಹಿಸಿ. ಎಲ್ಲಕ್ಕಿಂತ ರೋಮಾಂಚಕವಾದ ವಿಷಯ ಏನೆಂದರೆ ಪ್ರತಿ ರಾಜ್ಯದಿಂದ, ಎಲ್ಲರಿಗಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು, ಭಾರತ ಸರ್ಕಾರವು ತನ್ನ ಖರ್ಚಿನಲ್ಲಿ ಶ್ರೀಹರಿಕೋಟಾಕ್ಕೆ ಕರೆದೊಯ್ಯುತ್ತದೆ. ಸೆಪ್ಟೆಂಬರ್ ನಲ್ಲಿ ಚಂದ್ರಯಾನದ ನೌಕೆ ಚಂದ್ರನ ಮೇಲೆ ಇಳಿಯುತ್ತಿರುವ ದೃಶ್ಯಕ್ಕೆ ಸಾಕ್ಷಿಯಾಗುವ ಅವಕಾಶ ಇವರಿಗೆ ಸಿಗುತ್ತದೆ. ಗೆಲುವು ಸಾಧಿಸಿದ ಈ ವಿದ್ಯಾರ್ಥಿಗಳಿಗೆ ಇದು ಅವರ ಜೀವನದ ಐತಿಹಾಸಿಕ ಘಟನೆ ಆಗುತ್ತದೆ. ಆದರೆ ಇದಕ್ಕಾಗಿ ನೀವು ಕ್ವಿಜ್ ಕಾಂಪಿಟಿಷನ್ ನಲ್ಲಿ ಭಾಗವಹಿಸಬೇಕಾಗುತ್ತದೆ, ಎಲ್ಲರಿಗಿಂತ ಹೆಚ್ಚು ಅಂಕ ಪಡೆದುಕೊಳ್ಳಬೇಕಾಗುತ್ತದೆ, ಗೆಲುವು ಸಾಧಿಸಬೇಕಾಗುತ್ತದೆ.

ಸ್ನೇಹಿತರೇ, ನನ್ನ ಈ ಸಲಹೆ ನಿಮಗೆ ಖಂಡಿತವಾಗಿಯೂ ಸರಿಯಾಗಿದೆ ಎಂದು ಅನಿಸುತ್ತಿರಬಹುದು. ಇದು ಒಂದು ಮೋಜಿನ ಅವಕಾಶವಲ್ಲವೇ? ಆದ್ದರಿಂದ ನಾವು ಕ್ವಿಜ್ ನಲ್ಲಿ ಭಾಗವಹಿಸುವುದನ್ನು ಮರೆಯಬಾರದು ಮತ್ತು ಹೆಚ್ಚು ಹೆಚ್ಚು ಸ್ನೇಹಿತರನ್ನು ಕೂಡ ಇದರಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಒಂದು ವಿಷಯವನ್ನು ಗಮನಿಸಿರಬಹುದು. ನಮ್ಮ ಮನದ ಮಾತುಗಳು ಸ್ವಚ್ಚತಾ ಅಭಿಯಾನಕ್ಕೆ ಆಗಿಂದಾಗ್ಗೆ ವೇಗ ಕೊಟ್ಟಿವೆ ಮತ್ತು ಅದೇ ರೀತಿ ಸ್ವಚ್ಚತೆಗಾಗಿ ಮಾಡುತ್ತಿರುವ ಪ್ರಯತ್ನಗಳು ಕೂಡ ಮನದ ಮಾತಿಗೆ ಯಾವಾಗಲೂ ಪ್ರೇರಣೆ ಕೊಟ್ಟಿವೆ. 5 ವರ್ಷದ ಹಿಂದೆ ಪ್ರಾರಂಭವಾದ ಈ ಪಯಣ ಇಂದು ಎಲ್ಲಾ ಜನರ ಸಹಭಾಗಿತ್ವದಿಂದ ಸ್ವಚ್ಚತೆಯ ಹೊಸ ಹೊಸ ಮಾನದಂಡಗಳನ್ನು ಹುಟ್ಟುಹಾಕುತ್ತಿದೆ. ಸ್ವಚ್ಚತೆಯಲ್ಲಿ ನಾವು ಆದರ್ಶವಾದ ಎತ್ತರಕ್ಕೆ ಏರಿಲ್ಲವಾದರೂ ಬಯಲು ಶೌಚ ಮುಕ್ತವಾಗುವುದರಿಂದ ಹಿಡಿದು ಸಾರ್ವಜನಿಕ ಸ್ಥಳಗಳ ತನಕ ಸ್ವಚ್ಚತಾ ಅಭಿಯಾನದಲ್ಲಿ ಸಫಲತೆ ಸಿಕ್ಕಿದೆಯೋ, ಅದು 130 ಕೋಟಿ ದೇಶವಾಸಿಗಳ ಸಂಕಲ್ಪದ ಶಕ್ತಿ. ಆದರೆ ನಾವು ಇಷ್ಟಕ್ಕೇ ನಿಲ್ಲಿಸುವವರಲ್ಲ. ಈಗ ಈ ಆಂದೋಲನವು ಸ್ವಚ್ಚತೆಯಿಂದ ಸೌಂದರ್ಯದ ಕಡೆಗೆ ಹೋಗುತ್ತಿದೆ. ಈಗ ಸ್ವಲ್ಪ ದಿನಗಳ ಕೆಳಗೆ ನಾನು ಮೀಡಿಯಾ ದಲ್ಲಿ ಶ್ರೀಯುತ ಯೋಗೇಶ್ ಸೈನಿ ಮತ್ತು ಅವರ ತಂಡದ ಕಥೆಯನ್ನು ನೋಡುತ್ತಿದ್ದೆ. ಯೋಗೇಶ್ ಸೈನಿ ಅವರು ಒಬ್ಬ ಇಂಜಿನಿಯರ್ ಮತ್ತು ಅಮೆರಿಕಾದಲ್ಲಿದ್ದ ನೌಕರಿಯನ್ನು ತೊರೆದು ಭಾರತ ಮಾತೆಯ ಸೇವೆಗಾಗಿ ಹಿಂತಿರುಗಿ ಬಂದಿದ್ದಾರೆ. ಅವರು ಕೆಲದಿನಗಳ ಹಿಂದೆ ದೆಹಲಿಯನ್ನು ಸ್ವಚ್ಚ ಮಾತ್ರವಲ್ಲ, ಜೊತೆಗೆ ಸುಂದರಗೊಳಿಸುವ ಸಂಕಲ್ಪ ತೆಗೆದುಕೊಂಡಿದ್ದರು. ಇವರು ತಮ್ಮ ತಂಡದ ಜೊತೆಗೂಡಿ ಲೋಧಿ ಗಾರ್ಡನ್ ನ ಕಸದ ತೊಟ್ಟಿಯಿಂದ ತಮ್ಮ ಕೆಲಸ ಪ್ರಾರಂಭಿಸಿದರು. ಸ್ಟ್ರೀಟ್ ಆರ್ಟ್ ನ ಮಾಧ್ಯಮದಿಂದ ದೆಹಲಿಯ ಬಹಳಷ್ಟು ಭಾಗಗಳನ್ನು ಸುಂದರವಾದ ಪೈಂಟಿಂಗ್ಸ್ ಗಳಿಂದ ಅಲಂಕರಿಸುವ ಕೆಲಸ ಮಾಡಿದರು. ರಸ್ತೆ ಮೇಲ್ಸೇತುವೆಗಳು ಮತ್ತು ಶಾಲೆಗಳ ಗೋಡೆಗಳಿಂದ ಹಿಡಿದು ಕೊಳೆಗೇರಿಯ ಗುಡಿಸಲುಗಳವರೆಗೆ ಅವರು ತಮ್ಮ ಕೌಶಲ್ಯವನ್ನು ತೋರಿಸಲು ಪ್ರಾರಂಭಿಸಿದಾಗ ಜನರು ಕೂಡ ಕೈ ಜೋಡಿಸುವರು. ಇದು ಒಂದು ರೀತಿಯ ಸರಪಳಿಯಂತೆ ಮುಂದುವರೆಯಿತು. ಕುಂಭ ಮೇಳದ ಸಲುವಾಗಿ ಪ್ರಯಾಗ್ ರಾಜ್ ನ್ನು ಯಾವರೀತಿ ಬೀದಿಬದಿ ಚಿತ್ರಕಲೆಯಿಂದ ಅಲಂಕರಿಸಲಾಗಿತ್ತು ಎನ್ನುವುದು ನಿಮಗೆ ನೆನಪಿರಬಹುದು. ಯೋಗೇಶ್ ಸೈನಿ ಮತ್ತು ಅವರ ತಂಡವು ಅದರಲ್ಲಿಯೂ ಬಹಳ ದೊಡ್ಡ ಪಾತ್ರ ವಹಿಸಿದ್ದರು ಎಂದು ನಂಗೆ ತಿಳಿಯಿತು ಸೋದರರೇ, ಬಣ್ಣ ಮತ್ತು ರೇಖೆಗಳಲ್ಲಿ ಶಬ್ದಗಳಿಲ್ಲದಿದ್ದರೂ ಇದರಿಂದ ಮಾಡಿದ ಚಿತ್ರಗಳಿಂದ ಮೂಡುವ ಕಾಮನಬಿಲ್ಲು ನೀಡುವ ಸಂದೇಶ ಸಾವಿರಾರು ಶಬ್ದಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ ಎಂದು ಸಾಬೀತು ಪಡಿಸುತ್ತದೆ. ಸ್ವಚ್ಚತಾ ಅಭಿಯಾನದಲ್ಲಿ ಸೌಂದರ್ಯದಲ್ಲಿ ಕೂಡ ಈ ಮಾತು ನಮ್ಮ ಅನುಭವಕ್ಕೆ ಬಂದಿದೆ. ವೇಸ್ಟ್ ಣo ವೆಲ್ತ್  ಮಾಡುವ ಸಂಸ್ಕೃತಿ ನಮ್ಮ ಸಮಾಜದಲ್ಲಿ ಬೆಳೆಯಬೇಕು ಎನ್ನುವುದು ಬಹಳ ಮುಖ್ಯವಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಕಸದಿಂದ ರಸ ಮಾಡುವ ದಿಶೆಯಲ್ಲಿ ನಾವು ಮುಂದುವರೆಯಬೇಕಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ   MyGov ನಲ್ಲಿ ನಾನು ಒಂದು ತುಂಬಾ ಆಸಕ್ತಿದಾಯಕ ಟಿಪ್ಪಣಿ ಓದಿದೆ. ಇದು ಜಮ್ಮು ಕಾಶ್ಮೀರ್ ನ ಶೋಪಿಯಾನ್ ವಾಸಿ ಸೋದರ ಮೊಹಮ್ಮದ್ ಅಸ್ಲಂ ಅವರದ್ದಾಗಿತ್ತು.

“ಮನದ ಮಾತು ಕಾರ್ಯಕ್ರಮವನ್ನು ಕೇಳುವುದು ಬಹಳ ಸಂತೋಷವಾಗುತ್ತದೆ. ನನ್ನ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ನಾನು Community Mobilization Programme - Back To Village  ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿದ್ದೇನೆ ಎನ್ನುವುದನ್ನು ತಿಳಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ಈ ಕಾರ್ಯಕ್ರಮವನ್ನು ಜೂನ್ ತಿಂಗಳಲ್ಲಿ ಆಯೋಜಿಸಲಾಗಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳು ಅಯೋಜನೆಯಾಗಬೇಕು ಎಂದು ನನಗೆ ಅನ್ನಿಸುತ್ತದೆ. ಇದರ ಜೊತೆಗೆ ಕಾರ್ಯಕ್ರಮದ online monitoring ನ ವ್ಯವಸ್ಥೆ ಕೂಡ ಮಾಡಬೇಕಾಗಿದೆ. ನನಗೆ ಗೊತ್ತಿರುವಂತೆ ಜನರು ಸರಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿದಂತಹ ಈ ಈ ಬಗೆಯ ಮೊದಲ ಕಾರ್ಯಕ್ರಮವಾಗಿತ್ತು.” ಎಂದು ಅವರು ಬರೆದಿದ್ದಾರೆ. 

ಸೋದರ ಮೊಹಮ್ಮದ್ ಅಸ್ಲಂ ಅವರು ನನಗೆ ಕಳಿಸಿದ ಈ ಸಂದೇಶವನ್ನು ಓದಿದ ನಂತರ  ‘Back To Village’ Programme    ನ ಬಗ್ಗೆ ತಿಳಿದುಕೊಳ್ಳುವ ನನ್ನ ಉತ್ಸಾಹ ಹೆಚ್ಚಾಯಿತು. ನಾನು ಇದರ ಬಗ್ಗೆ ವಿವರವಾಗಿ ತಿಳಿದುಕೊಂಡಾಗ ಇಡೀ ದೇಶಕ್ಕೆ ಇದರ ಮಾಹಿತಿ ಸಿಗಬೇಕು ಎಂದು ನನಗೆ ಅನ್ನಿಸಿತು. ಕಾಶ್ಮೀರದ ಜನರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಲು ಎಷ್ಟೊಂದು ಕಾತರರಾಗಿದ್ದಾರೆ, ಎಷ್ಟೊಂದು ಉತ್ಸುಕರಾಗಿದ್ದಾರೆ ಎನ್ನುವುದು ಈ ಕಾರ್ಯಕ್ರಮದಿಂದ ತಿಳಿದುಬರುತ್ತದೆ. ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದೊಡ್ಡ ದೊಡ್ಡ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಇತ್ತರು - ಯಾವ ಅಧಿಕಾರಿಗಳನ್ನು ಹಳ್ಳಿಯ ಜನರು ನೋಡಿಯೇ ಇರಲಿಲ್ಲವೋ ಅಂಥವರೆಲ್ಲ ಅಭಿವೃದ್ಧಿಯ ಕೆಲಸಗಳಲ್ಲಿ ಬರಬಹುದಾದ ತೊಂದರೆಗಳನ್ನು ಅರ್ಥ ಮಾಡಿಕೊಂಡು ಸಮಸ್ಯೆಗಳನ್ನು ದೂರ ಮಾಡಲು ನೇರವಾಗಿ ಹಳ್ಳಿಗಳ ತನಕ ತಲುಪಿದರಲ್ಲದೆ ತಾವಾಗಿಯೇ ಹೋಗಿ ಅವರ ಮನೆಯ ಬಾಗಿಲಿಗೆ ಬಂದು ನಿಂತರು. 

ಈ ಕಾರ್ಯಕ್ರಮ ವಾರವಿಡೀ ನಡೆಯಿತು. ರಾಜ್ಯದ ಸರಿಸುಮಾರು ಎಲ್ಲಾ ನಾಲ್ಕೂವರೆ ಸಾವಿರ ಪಂಚಾಯ್ತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಳ್ಳಿಯ ಜನರಿಗೆ ಸರಕಾರೀ ಯೋಜನೆಗಳ ಬಗ್ಗೆ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಆ ಜನರ ಬಳಿಗೆ ಸರ್ಕಾರಿ ಸೇವೆಗಳು ತಲುಪುತ್ತಿದೆಯೋ ಇಲ್ಲವೋ,  ಪಂಚಾಯ್ತಿಗಳನ್ನು ಇನ್ನೂ ಬಲಗೊಳಿಸುವುದು ಹೇಗೆ, ಅವುಗಳ ಗಳಿಕೆಯನ್ನ ಹೆಚ್ಚಿಸಿಕೊಳ್ಳುವುದು ಹೇಗೆ ಅವುಗಳ ಸೇವೆಗಳು ಸಾಮಾನ್ಯ ಜನರ ಜೀವನದಲ್ಲಿ ಏನು ಪ್ರಭಾವ ಬೀರಬಹುದು ಎನ್ನುವುದನ್ನು ಕೂಡ ತಿಳಿದುಕೊಂಡರು. ಹಳ್ಳಿಯ ಜನರೂ ಸಹ ಮನ ಬಿಚ್ಚಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸಾಕ್ಷರತೆ, ಲಿಂಗಾನುಪಾತ, ಅರೋಗ್ಯ, ಸ್ವಚ್ಚತೆ, ನೀರಿನ ಸಂರಕ್ಷಣೆ, ವಿದ್ಯುತ್, ನೀರು, ಹೆಣ್ಣುಮಕ್ಕಳ ಶಿಕ್ಷಣ, ಹಿರಿಯ ನಾಗರೀಕರ ಪ್ರಶ್ನೆಗಳು, ಇಂತಹ ಹಲವಾರು ವಿಷಯಗಳ ಮೇಲೂ ಸಹ ಚರ್ಚೆ ನಡೆಯಿತು.

ಗೆಳೆಯರೇ, ಅಧಿಕಾರಿಗಳು ದಿನವೆಲ್ಲ ಹಳ್ಳಿಗಳಲ್ಲಿ ತಿರುಗಾಡಿ ಬಂದು ಸರ್ಕಾರದ ವತಿಯಿಂದ ಊಟಮಾಡಿ ಬರುವ ಯಾವುದೇ ಕಾರ್ಯಕ್ರಮ ಇದಾಗಿರಲಿಲ್ಲ. ಈ ಬಾರಿ ಅಧಿಕಾರಿಗಳು ಎರಡು ದಿನ ಮತ್ತು ಒಂದು ರಾತ್ರಿ ಪಂಚಾಯ್ತಿಯಲ್ಲೇ ಕಳೆದರು. ಇದರಿಂದ ಅವರಿಗೆ ಹಳ್ಳಿಗಳಲ್ಲಿ ಹೆಚ್ಚು ಕಾಲ ಇರುವ  ಅವಕಾಶ ಸಿಕ್ಕಿತು. ಪ್ರತಿಯೊಬ್ಬರನ್ನೂ ಭೇಟಿ ಮಾಡುವ ಪ್ರಯತ್ನ ಮಾಡಿದರು. ಪ್ರತಿ ಸಂಸ್ಥೆಯ ಬಳಿಯೂ ಹೋಗುವ ಪ್ರಯತ್ನ ಮಾಡಿದರು. ಈ ಕಾರ್ಯಕ್ರಮವನ್ನು ಆಸಕ್ತಿದಾಯಕವಾಗಿಸಲು ಇನ್ನೂ ಬಹಳಷ್ಟು ವಿಷಯಗಳನ್ನೂ ಸೇರಿಸಲಾಗಿತ್ತು. ಖೇಲೋ ಇಂಡಿಯಾ ದ ಅಡಿಯಲ್ಲಿ ಮಕ್ಕಳಿಗೆ ಆಟೋಟಗಳ ಸ್ಪರ್ಧೆ ನಡೆಸಲಾಯಿತು. ಜೊತೆಗೆ,  Sports Kits, ಮನ್ರೆಗಾದ  job cards ಮತ್ತು  SC/ST Certificates ಗಳನ್ನು ಸಹಾ ಹಂಚಲಾಯಿತು. Financial Literacy Camps ಗಳನ್ನು ಹಾಕಲಾಗಿತ್ತು.. Agriculture, Horticulture ಗಳಂಥಹ ಸರ್ಕಾರಿ ಇಲಾಖೆಗಳ ಪರವಾಗಿ stalls ಗಳನ್ನೂ ಹಾಕಲಾಗಿತ್ತು. ಇದರೊಟ್ಟಿಗೆ ಸರ್ಕಾರಿ ಯೋಜನೆಗಳ ಕುರಿತಾಗಿ ಮಾಹಿತಿಯನ್ನೂ ನೀಡಲಾಯಿತು. ಒಂದು ರೀತಿಯಲ್ಲಿ ಈ ಕಾರ್ಯಕ್ರಮವು ಅಭಿವೃದ್ಧಿ ಉತ್ಸವವಾಗಿತ್ತು; ಜನರ ಭಾಗವಹಿಸುವಿಕೆಯ ಉತ್ಸವವಾಗಿತ್ತು; ಜನ ಜಾಗೃತಿಯ ಉತ್ಸವವಾಗಿತ್ತು. ಕಾಶ್ಮೀರದ ಜನರು ಈ ಅಭಿವೃದ್ಧಿ ಉತ್ಸವದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡರು. ಸರ್ಕಾರಿ ಅಧಿಕಾರಿಗಳಿಗೆ ತಲುಪುವುದಕ್ಕೆ ಕಷ್ಟವಾದ, ದುರ್ಗಮವಾದ ರಸ್ತೆಗಳ ಮೂಲಕ, ಪರ್ವತಗಳನ್ನು ಹತ್ತಿ ಇಳಿಯುತ್ತಾ, ಕೆಲವೊಮ್ಮೆ ಒಂದು ದಿನ, ಒಂದೂವರೆ ದಿನ ಕಾಲ್ನಡಿಗೆ ಮಾಡಿ ತಲುಪಬೇಕಾಗುವಂತಹ ದೂರ ದೂರದ ಹಳ್ಳಿಗಳಲ್ಲಿ  ‘Back To Village’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎನ್ನುವುದೇ ಒಂದು ದೊಡ್ಡ ಖುಷಿಯ ವಿಚಾರ. ಸದಾ Cross Border ಫೈರಿಂಗ್ ನೆರಳಲ್ಲಿ ಗಡಿ ರೇಖೆಗಳಲ್ಲಿ ಇರುವ ಪಂಚಾಯ್ತಿಗಳ ತನಕ ಕೂಡ ಈ ಅಧಿಕಾರಿಗಳು ಹೋದರು. ಇದಷ್ಟೇ ಅಲ್ಲ; ಶೋಪಿಯಾನ್, ಪುಲ್ವಾಮಾ, ಕುಲಗಾಮ್ ಮತ್ತು ಅನಂತ್ ನಾಗ್ ಜಿಲ್ಲೆಗಳ ಅತಿ ಸೂಕ್ಷ್ಮ ಪ್ರದೇಶಗಳಿಗೆ ಕೂಡ ಅಧಿಕಾರಿಗಳು ಯಾವುದೇ ಭಯವಿಲ್ಲದೆ ತಲುಪಿದರು. ತಮಗೆ ನೀಡಿದ ಸ್ವಾಗತಕ್ಕೆ ಅಧಿಕಾರಿಗಳು ಎಷ್ಟು ಸ್ತಂಬೀಭೂತರಾದರೆಂದರೆ ಅವರುಗಳು ಎರಡು ದಿನಕ್ಕೂ ಅಧಿಕ ಸಮಯ ಹಳ್ಳಿಗಳಲ್ಲಿ ಉಳಿದುಕೊಂಡರು. ಈ ಇಲಾಖೆಗಳಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸುವುದು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದು, ತಮಗಾಗಿ ಯೋಜನೆಗಳನ್ನು ತಯಾರು ಮಾಡುವುದು ಇವೆಲ್ಲ ಬಹಳ ಆಹ್ಲಾದಕತೆ ನೀಡುವ ವಿಚಾರಗಳು. ಹೊಸ ಸಂಕಲ್ಪ, ಹೊಸ ಉತ್ಸಾಹ ಮತ್ತು ಅದ್ಭುತವಾದ ಫಲಿತಾಂಶಗಳು. ಇಂತಹ ಕಾರ್ಯಕ್ರಮಗಳು ಮತ್ತು ಅವುಗಳಲ್ಲಿ ಜನರ ಭಾಗವಹಿಸುವಿಕೆ ಕಾಶ್ಮೀರದ ನಮ್ಮ ಸೋದರ ಸೋದರಿಯರು ಒಳ್ಳೆಯ ಆಡಳಿತವನ್ನು ಬಯಸುತ್ತಾರೆ ಎನ್ನುವುದನ್ನು ತಿಳಿ ಹೇಳುತ್ತದೆ. “ಅಭಿವೃದ್ದಿಯ ಶಕ್ತಿ, ಬಾಂಬ್  ಬಂದೂಕುಗಳ ಶಕ್ತಿಗಿಂತ ಯಾವಾಗಲೂ ಹೆಚ್ಚಾಗಿರುತ್ತದೆ” ಎನ್ನುವುದನ್ನು ಸಹ ಇದು ಸಾಬೀತು ಪಡಿಸುತ್ತದೆ. ಅಭಿವೃದ್ಧಿಯ ಹಾದಿಯಲ್ಲಿ ದ್ವೇಷವನ್ನು ಹರಡಲು ಬಯಸುವವರು, ಅಡೆತಡೆಗಳನ್ನು ಸೃಷ್ಟಿಸಲು ಬಯಸುವವರು ಎಂದಿಗೂ ತಮ್ಮ ದುಷ್ಟ ಉದ್ದೇಶಗಳಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದು ಕೂಡ ಇದರಿಂದ ಸ್ಪಷ್ಟವಾಗಿದೆ.  

ನನ್ನ ಪ್ರೀತಿಯ ದೇಶವಾಸಿಗಳೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ ಶ್ರಾವಣ ಮಾಸದ ಮಹಿಮೆಯನ್ನ 

“ಹೊಳಿಗೆ ಮತ್ತ ಮಳಿಗೆ ಆಗ್ಯೇದ್ ಲಗ್ನ , ಅದರಾಗ ಭೂಮಿ ಮಗ್ನ”   ಎಂದು ವಿವರಿಸ್ತಾರೆ. 

ಇದರ ಅರ್ಥ  ‘ಸುರಿತಿರೋ ಮಳೆಗೂ ನೀರಿನ ಹರಿವಿಗೂ ಆಗೋ ಬೆಸುಗೆ ತುಂಬಾ ವಿಶಿಷ್ಟ, ಮತ್ತು ಅದರ ಸೌಂದರ್ಯ ವನ್ನ ನೋಡುವುದರಲ್ಲಿ ಭೂಮಿ ಮಗ್ನವಾಗಿದೆ’ ಅಂತ. 

ಇಡೀ ಭಾರತ ದೇಶದಲ್ಲಿ ಬೇರೆ ಬೇರೆ ಸಂಸ್ಕೃತಿ ಮತ್ತು ಭಾಷೆಯ ಜನರು ಶ್ರಾವಣ ಮಾಸವನ್ನು ತಮ್ಮ ತಮ್ಮ ರೀತಿಯಲ್ಲಿ celebrate ಮಾಡುತ್ತಾರೆ. ಇಂತಹ ಋತುವಿನಲ್ಲಿ ನಾವು ನಮ್ಮ ಅಕ್ಕಪಕ್ಕದಲ್ಲಿ ನೋಡಿದಾಗ ಭೂಮಿ ಹಸಿರಿನ ಹೊದಿಕೆಯನ್ನು ಹೊದ್ದುಕೊಂಡಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಎಲ್ಲಾ ಕಡೆಯೂ ಒಂದು ಹೊಸ ಶಕ್ತಿಯ ಸಂಚಾರ ಪ್ರಾರಂಭವಾಗುತ್ತದೆ. ಇಂತಹ ಪವಿತ್ರವಾದ ತಿಂಗಳಿನಲ್ಲಿ ಎಷ್ಟೋ ಜನ ಭಕ್ತರು ಕಾವಡಿ ಯಾತ್ರೆ ಮತ್ತು ಅಮರನಾಥ್ ಯಾತ್ರೆಗೆ ಹೋಗುತ್ತಾರೆ, ಮತ್ತೆ ಕೆಲವು ಜನರು ನಿಯಮಿತವಾಗಿ ಉಪವಾಸ ಮಾಡುತ್ತಾರೆ ಮತ್ತು ಉತ್ಸುಕತೆಯಿಂದ ಜನ್ಮಾಷ್ಟಮಿ ಮತ್ತು ನಾಗಪಂಚಮಿಯಂತಹ ಹಬ್ಬಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಇದೇ ಸಮಯದಲ್ಲಿ ಸೋದರ-ಸೋದರಿಯರ ಪ್ರೇಮದ ಸಂಕೇತವಾದ ರಕ್ಷಾಬಂಧನದ ಹಬ್ಬ ಕೂಡ ಬರುತ್ತದೆ. ಈ ಬಾರಿ ಅಮರನಾಥ್ ಯಾತ್ರೆಗೆ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಎಲ್ಲಕ್ಕಿಂತ ಹೆಚ್ಚು ಭಕ್ತರು ಹೋಗುತ್ತಿದ್ದಾರೆ ಎಂದು ಕೇಳಿ ಶ್ರಾವಣ ಮಾಸದ ಬಗ್ಗೆ ಮಾತನಾಡುತ್ತಿರುವ ಈ ಸಮಯದಲ್ಲಿ ನಿಮಗೆ ಬಹಳ ಖುಷಿಯೆನಿಸಬಹುದು. ಜುಲೈ ಒಂದರಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಪವಿತ್ರವಾದ ಅಮರನಾಥ ಗುಹೆಯ ದರ್ಶನ ಮಾಡಿದ್ದಾರೆ. 2015 ರ ಈ ಯಾತ್ರೆಯಲ್ಲಿ 60 ದಿನಗಳಲ್ಲಿ ಎಷ್ಟು ಜನ ಯಾತ್ರಾರ್ಥಿಗಳು ಭಾಗಿಯಾಗಿದ್ದರೋ ಅದಕ್ಕಿಂತ ಹೆಚ್ಚು ಜನರು ಈ ಬಾರಿ ಬರೀ 28 ದಿನಗಳಲ್ಲಿ ಭಾಗಿಯಾಗಿದ್ದಾರೆ.

ಅಮರನಾಥ ಯಾತ್ರೆಯ ಸಫಲತೆಗಾಗಿ ನಾನು ವಿಶೇಷವಾಗಿ ಜಮ್ಮು-ಕಾಶ್ಮೀರದ ಜನತೆ ಮತ್ತು ಅವರ ಅತಿಥಿ ಸತ್ಕಾರದ ಬಗೆಯನ್ನು ಸಹ ಪ್ರಶಂಸಿಸುತ್ತೇನೆ. ಯಾತ್ರೆಯನ್ನು ಮುಗಿಸಿ ಬರುವವರಿಗೆ ಆ ರಾಜ್ಯದ ಜನರ ಅಪ್ಯಾಯತೆಯ ಮತ್ತು ಅವರೂ ತಮ್ಮವರು ಎನ್ನುವ ಭಾವನೆಯ ಅನುಭವ ಕೂಡ ಆಗುತ್ತದೆ. ಈ ಎಲ್ಲಾ ವಿಷಯಗಳೂ ಭವಿಷ್ಯದಲ್ಲಿ ಪ್ರವಾಸೋದ್ಯಮಕ್ಕೆ ತುಂಬಾ ಲಾಭದಾಯಕವಾಗಿ ಪರಿಣಮಿಸುವವು. ಉತ್ತರಾಖಂಡದಲ್ಲಿ ಕೂಡ ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ಒಂದೂವರೆ ತಿಂಗಳ ಒಳಗೆ 8 ಲಕ್ಷಕ್ಕೂ ಅಧಿಕ ಭಕ್ತರು ಕೇದಾರನಾಥ ಕ್ಷೇತ್ರದ ದರ್ಶನ ಮಾಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. 2013 ರಲ್ಲಿ ಉಂಟಾದ ಭೀಕರ ದುರಂತದ ನಂತರ ಮೊದಲನೇ ಬಾರಿ ಇಷ್ಟೊಂದು  ದಾಖಲೆಯ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ. ಮಾನ್ಸೂನ್ ಸಮಯದಲ್ಲಿ ಸೌಂದರ್ಯವನ್ನು ಹೊರಸೂಸುವ ದೇಶದ ಆ ಭಾಗಗಳಿಗೆ ನೀವು ಖಂಡಿತವಾಗಿಯೂ ಹೋಗಬೇಕೆಂದು ನಾನು ನಿಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ. ನಮ್ಮ ದೇಶದ ಈ ಸೌಂದರ್ಯವನ್ನು ನೋಡುವುದಕ್ಕೆ ಮತ್ತು ನಮ್ಮ ದೇಶದ ಜನರ ಮನೋಭಾವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರವಾಸ ಮತ್ತು ಯಾತ್ರೆಗಿಂತ ದೊಡ್ಡ ಶಿಕ್ಷಕ ಬಹುಶಃ ಯಾರೂ ಇಲ್ಲ. 

ಶ್ರಾವಣದ ಈ ಸುಂದರ ಮತ್ತು ಜೀವಭರಿತ ತಿಂಗಳಿನಲ್ಲಿ ನಿಮ್ಮೆಲ್ಲರಲ್ಲಿ ಹೊಸ ಶಕ್ತಿ, ಹೊಸ ಆಶೆ ಮತ್ತು ಹೊಸ ಭರವಸೆಗಳ ಸಂಚಾರವಾಗಲಿ ಎನ್ನುವ ಶುಭಾಶಯಗಳನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಅದೇ ರೀತಿಯಾಗಿ ಆಗಸ್ಟ್ ತಿಂಗಳು “ಭಾರತ ಬಿಟ್ಟು ತೊಲಗಿ” ನೆನಪನ್ನು ತರುತ್ತದೆ. ನೀವೆಲ್ಲ ಆಗಸ್ಟ್ 15 ಕ್ಕೆ ಸ್ವಲ್ಪ ವಿಶೇಷ ರೀತಿಯ ತಯಾರಿ ಮಾಡಬೇಕು ಎಂದು ನಾನು ಬಯಸುತ್ತೇನೆ. ಸ್ವಾತಂತ್ರ್ಯದ ಈ ಹಬ್ಬವನ್ನು ಆಚರಿಸಲು ಹೊಸ ವಿಧಾನವನ್ನು ಹುಡುಕಿ. ಜನರ ಭಾಗವಹಿಸುವಿಕೆ ಹೆಚ್ಚಾಗಲಿ. ಆಗಸ್ಟ್ 15 ನ್ನು ಲೋಕೋತ್ಸವವನ್ನಾಗಿ ಹೇಗೆ ಮಾಡಬೇಕು? ಜನೋತ್ಸವವನ್ನಾಗಿ  ಹೇಗೆ ಮಾಡಬೇಕು? ಇದರ ಚಿಂತನೆಯನ್ನು ನೀವೆಲ್ಲರೂ ಮಾಡಿ. ಮತ್ತೊಂದೆಡೆ ದೇಶದ ಬಹಳಷ್ಟು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ಭಾಗಗಳಲ್ಲಿ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ - ಇದು ಅಂತಹ ಸಮಯ. ಪ್ರವಾಹದಿಂದ ವಿವಿಧ ಪ್ರಕಾರದ ನಷ್ಟ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆ ಸೇರಿ ಸಂಕಷ್ಟದಲ್ಲಿ ಇರುವ ಜನರಿಗೆ ಎಲ್ಲಾ ರೀತಿಯ ಸಹಾಯ ಸಿಗುವಂತೆ ಮಾಡುವ ಕೆಲಸವನ್ನು ಬಹಳ ತ್ವರಿತವಾಗಿ ಮಾಡುತ್ತದೆ ಎಂದು ನಾನು ಪ್ರವಾಹದ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲಾ ಜನರಿಗೂ ಆಶ್ವಾಸನೆ ನೀಡುತ್ತೇನೆ. ಹಾಗೆಯೇ ನಾವು ಟಿವಿ ನೋಡಿದಾಗ ಒಂದೇ ಬಗೆಯ ಮಳೆಯ ಚಿತ್ರಣ ಕಾಣಿಸುತ್ತವೆ - ಎಲ್ಲಾ ಕಡೆಯೂ ಪ್ರವಾಹ, ತುಂಬಿಕೊಂಡಿರುವ ನೀರು, ಟ್ರಾಫಿಕ್ ಜಾಮ್. ಮಾನ್ಸೂನ್ ನ ಎರಡನೇ ಚಿತ್ರ - ಅದರಲ್ಲಿ ಸಂತೋಷಗೊಂಡಿರುವ ನಮ್ಮ ರೈತ, ಪಕ್ಷಿಗಳ ಕೂಗು, ಹರಿಯುತ್ತಿರುವ ಝರಿ, ಹಸಿರಿನ ಹೊದಿಕೆ ಹೊದ್ದ ಭೂಮಿ - ಇವನ್ನೆಲ್ಲ ನೋಡಲು ನೀವು ಸ್ವತಃ ನಿಮ್ಮ ಕುಟುಂಬದವರೊಂದಿಗೆ ಹೊರಗೆ ಬರಬೇಕಾಗುತ್ತದೆ. ಮಳೆ, ತಾಜಾತನ ಮತ್ತು ಖುಷಿ ಅಂದರೆ -   Freshness  ಮತ್ತು Happiness ಇವೆರಡನ್ನೂ ತನ್ನ ಜೊತೆ ತರುತ್ತದೆ. ಈ ಮಾನ್ಸೂನ್ ನಿಮ್ಮೆಲ್ಲರಿಗೂ ಸತತವಾಗಿ ಖುಷಿಯನ್ನು ನೀಡುತ್ತಿರಲಿ, ನೀವೆಲ್ಲರೂ ಆರೋಗ್ಯವಾಗಿರಿ ಎನ್ನುವುದು ನನ್ನ ಆಶಯ. 

ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತನ್ನು ‘ ಎಲ್ಲಿ ಪ್ರಾರಂಭಿಸುವುದು, ಎಲ್ಲಿ ನಿಲ್ಲಿಸುವುದು ಎನ್ನುವುದು  ಬಹಳ ಕಷ್ಟದ ಕೆಲಸ ಎನ್ನಿಸುತ್ತದೆ. ಆದರೆ ಸಮಯದ ಮಿತಿ ಇರುತ್ತದೆಯಲ್ಲವೇ? ಒಂದು ತಿಂಗಳ ನಿರೀಕ್ಷೆಯ ನಂತರ ಮತ್ತೆ ಬರುತ್ತೇನೆ. ಮತ್ತೆ ಭೇಟಿಯಾಗುತ್ತೇನೆ. ತಿಂಗಳು ಪೂರ್ತಿ ನೀವು ನನಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಾ ಇರಿ. ಮುಂದಿನ ಮನದ ಮಾತು ಕಾರ್ಯಕ್ರಮದಲ್ಲಿ ನಾನು ಅವುಗಳನ್ನು ಜೋಡಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಯುವ ಮಿತ್ರರಿಗೆ ಮತ್ತೆ ನೆನಪು ಮಾಡುತ್ತಿದ್ದೇನೆ - ನೀವು ಕ್ವಿಜ್ ಕಾಂಪಿಟಿಷನ್ ನ ಅವಕಾಶ ಬಿಡಬೇಡಿ. ಶ್ರೀಹರಿಕೋಟಾಗೆ ಹೋಗಲು ಸಿಗುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. 

ನಿಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನಮಸ್ಕಾರ.

**************     



(Release ID: 1580582) Visitor Counter : 495