ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಸಾರಿಗೆ ವಾಹನ ಚಾಲಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯವನ್ನು ರದ್ದುಪಡಿಲಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
Posted On:
18 JUN 2019 3:56PM by PIB Bengaluru
ಸಾರಿಗೆ ವಾಹನ ಚಾಲಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯವನ್ನು ರದ್ದುಪಡಿಲಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಈ ಕ್ರಮದಿಂದಾಗಿ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿನ ಕುಶಲ ವ್ಯಕ್ತಿಗಳಿಗೆ ಪ್ರಯೋಜನವಾಗುತ್ತದೆ
ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಸಮರ್ಥ ಚಾಲಕರ ತರಬೇತಿ ಮತ್ತು ಕಠಿಣ ಕೌಶಲ್ಯ ಪರೀಕ್ಷೆಗೆ ಒತ್ತು
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಕುಶಲ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಸಾರಿಗೆ ವಾಹನವನ್ನು ಓಡಿಸಲು ಬೇಕಾಗಿದ್ದ ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯವನ್ನು ತೆಗೆದುಹಾಕಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. 1989ರ ಕೇಂದ್ರೀಯ ಮೋಟಾರು ವಾಹನಗಳ ನಿಯಮದ ನಿಯಮ 8 ರ ಅಡಿಯಲ್ಲಿ, ಸಾರಿಗೆ ವಾಹನ ಚಾಲಕನು 8 ನೇ ತರಗತಿಯಲ್ಲಿ ಉತ್ತೀರ್ಣನಾಗಿರಬೇಕು. ದೇಶದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ನಿರುದ್ಯೋಗಿಗಳಿದ್ದಾರೆ. ಇವರು ಔಪಚಾರಿಕ ಶಿಕ್ಷಣ ಪಡೆದಿಲ್ಲದಿರಬಹುದು, ಆದರೆ ಅವರು ಸಾಕ್ಷರರು ಹಾಗೂ ಕೌಶಲ್ಯ ಹೊಂದಿರುತ್ತಾರೆ.
ಸಾರಿಗೆ ಸಚಿವಾಲಯದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ, ಆರ್ಥಿಕವಾಗಿ ಹಿಂದುಳಿದ ಮೇವಾತ್ ಪ್ರದೇಶದ ಜನರು ಜೀವನೋಪಾಯಕ್ಕಾಗಿ ವಾಹನ ಚಾಲನೆ ಸೇರಿದಂತೆ ಕಡಿಮೆ ಆದಾಯದ ಕೆಲಸಗಳ ಮೇಲೆ ಅವಲಂಬಿತವಾಗಿದ್ದಾರೆ. ಆದ್ದರಿಂದ ಈ ಪ್ರದೇಶದ ಚಾಲಕರಿಗೆ ಶೈಕ್ಷಣಿಕ ಅರ್ಹತೆಯನ್ನು ಮನ್ನಾ ಮಾಡುವಂತೆ ಹರಿಯಾಣ ಸರ್ಕಾರ ಕೋರಿತ್ತು, ಈ ಪ್ರದೇಶದ ಅನೇಕ ಜನರು ಅಗತ್ಯವಾದ ಕೌಶಲ್ಯವನ್ನು ಹೊಂದಿದ್ದಾರೆ ಆದರೆ ಅಗತ್ಯವಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿಲ್ಲ. ಆದ್ದರಿಂದ ಚಾಲನಾ ಪರವಾನಗಿ ಪಡೆಯುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಚಾಲನಾ ಸಾಮರ್ಥ್ಯವು ಶೈಕ್ಷಣಿಕ ಸಾಮರ್ಥ್ಯಕ್ಕಿಂತ ಕೌಶಲ್ಯದ ವಿಷಯವಾಗಿದೆ, ಕನಿಷ್ಠ ಶೈಕ್ಷಣಿಕ ಅರ್ಹತೆಯು ಅರ್ಹ ನಿರುದ್ಯೋಗಿ ಯುವಕರಿಗೆ ಅಡ್ಡಿಯಾಗಿದೆ. ಈ ಅಗತ್ಯವನ್ನು ತೆಗೆದುಹಾಕುವುದರಿಂದ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳಿಗೆ, ವಿಶೇಷವಾಗಿ ದೇಶದ ಯುವಕರಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ.
ಇದಲ್ಲದೆ, ಈ ನಿರ್ಧಾರವು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗಿರುವ ಸುಮಾರು 22 ಲಕ್ಷ ಚಾಲಕರ ಕೊರತೆಯನ್ನು ನೀಗಿಸುತ್ತದೆ.
ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯವನ್ನು ತೆಗೆದುಹಾಕುವಾಗ, ರಸ್ತೆ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಸಚಿವಾಲಯ ಚಾಲಕರ ತರಬೇತಿ ಮತ್ತು ಕೌಶಲ್ಯ ಪರೀಕ್ಷೆಗೆ ಹೆಚ್ಚು ಒತ್ತು ನೀಡಿದೆ. ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಕೌಶಲ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಮೋಟಾರು ವಾಹನ ಕಾಯ್ದೆ 1988 ರಲ್ಲಿ ಉಲ್ಲೇಖಿಸಿರುವಂತೆ ಶಾಲೆ ಅಥವಾ ಸಂಸ್ಥೆಯಿಂದ ನೀಡಲಾಗುವ ತರಬೇತಿಯು ಚಾಲಕನು ಚಿಹ್ನೆಗಳನ್ನು ಓದುವ ಮತ್ತು ಚಾಲಕನ ದಾಖಲೆಗಳ ನಿರ್ವಹಣೆ, ಟ್ರಕ್‌ಗಳು ಮತ್ತು ಟ್ರೇಲರ್‌ಗಳ ಪರಿಶೀಲನೆ, ಪೂರ್ವ-ಸಲ್ಲಿಕೆ ಮುಂತಾದ ವ್ಯವಸ್ಥಾಪಕ ಕರ್ತವ್ಯಗಳನ್ನು ನಿರ್ವಹಿಸಬಹುದೆಂದು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಚಿವಾಲಯ ಒತ್ತಿ ಹೇಳಿದೆ. ಇದಲ್ಲದೆ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ಶಾಲೆಗಳು ಮತ್ತು ಸಂಸ್ಥೆಗಳು ರಾಜ್ಯಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಆದ್ದರಿಂದ, ನೀಡಲಾಗುವ ತರಬೇತಿಯು ನಿರ್ದಿಷ್ಟ ರೀತಿಯ ಮೋಟಾರು ವಾಹನವನ್ನು ಚಾಲನೆ ಮಾಡುವ ಎಲ್ಲಾ ಅಂಶಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ್ದಾಗಿರಬೇಕು.
2011 ರ ಸಿವಿಲ್ ಮೇಲ್ಮನವಿ ಸಂಖ್ಯೆ 5826 ರಲ್ಲಿ 3.7.2017 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ - ಮುಕುಂದ್ ದೇವಾಗನ್ Vs. ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಇತರು.,- ಲಘು ಮೋಟಾರು ವಾಹನಗಳಿಗೆ ಚಾಲನಾ ಪರವಾನಗಿ ನೀಡುವ ವಿಷಯದಲ್ಲಿ, ಲಘು ಮೋಟಾರು ವಾಹನ (ಎಲ್‌ಎಂವಿ) ವರ್ಗದ ಪರವಾನಗಿಯ ಸಂದರ್ಭದಲ್ಲಿ ಸಾರಿಗೆ ವಾಹನಗಳ ಪರವಾನಗಿ ಉದ್ಭವಿಸುವುದಿಲ್ಲ ಎಂದು ನಿರ್ದೇಶನಗಳನ್ನು ನೀಡಿದೆ.
ಹಿಂದಿನ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿರುವ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆಯಲ್ಲಿ ಶೈಕ್ಷಣಿಕ ಅರ್ಹತೆಯ ಅಗತ್ಯವನ್ನು ತೆಗೆದುಹಾಕಲು ಸಚಿವಾಲಯ ಈಗಾಗಲೇ ಪ್ರಸ್ತಾಪಿಸಿತ್ತು. ಸಂಸತ್ತಿನ ಸ್ಥಾಯಿ ಸಮಿತಿ ಮತ್ತು ಆಯ್ಕೆ ಸಮಿತಿಯು ಈ ವಿಷಯವನ್ನು ಚರ್ಚಿಸಿದ್ದವು.
ಈ ಎಲ್ಲ ಕಾರಣಗಳಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 1989 ರ ಕೇಂದ್ರ ಮೋಟಾರು ವಾಹನ ನಿಯಮ 8 ಕ್ಕೆ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು.
(Release ID: 1574897)