ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಕೇಂದ್ರೀಯ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳಲ್ಲಿ ಉಪವರ್ಗೀಕರಣಕ್ಕಾಗಿರುವ ಸಮಿತಿಯ ಅವಧಿಯನ್ನು ಎರಡು ತಿಂಗಳು ವಿಸ್ತರಿಸಲು ಸಂಪುಟದ ಅನುಮೋದನೆ.

Posted On: 12 JUN 2019 7:59PM by PIB Bengaluru

ಕೇಂದ್ರೀಯ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳಲ್ಲಿ ಉಪವರ್ಗೀಕರಣಕ್ಕಾಗಿರುವ ಸಮಿತಿಯ ಅವಧಿಯನ್ನು ಎರಡು ತಿಂಗಳು ವಿಸ್ತರಿಸಲು ಸಂಪುಟದ ಅನುಮೋದನೆ.

ಆಯೋಗದ ಅವಧಿ ಈಗ 2019 ರ ಜುಲೈ 31ರ ವರೆಗೆ ವಿಸ್ತರಣೆ.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ವಿವಿಧ ವಯೋಮಾನದ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ದವಾಗಿದೆ. ಈ ಸ್ಪೂರ್ತಿಯನ್ನು ಉಳಿಸಿಕೊಂಡು ಮತ್ತು ಒ.ಬಿ.ಸಿ. ಜಾತಿ ಸಮುದಾಯಗಳಲ್ಲಿ ಲಾಭಗಳ ಸಮಾನ ವಿತರಣೆಯಾಗಬೇಕಾದ ಅಗತ್ಯವನ್ನು ಮನಗಂಡು ಸಂವಿಧಾನದ 340  ನೇ ವಿಧಿ ಅನ್ವಯ ಆಯೋಗವನ್ನು ಕೇಂದ್ರೀಯ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳ ಉಪ –ವರ್ಗೀಕರಣ ವಿಷಯವನ್ನು ಪರಿಶೀಲಿಸುವುದಕ್ಕಾಗಿ ರಚಿಸಲಾಗಿತ್ತು.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಇತರ ಹಿಂದುಳಿದ ವರ್ಗಗಳ ಉಪ –ವರ್ಗೀಕರಣ ವಿಷಯವನ್ನು ಪರಿಶೀಲಿಸುವುದಕ್ಕಾಗಿ ರಚಿಸಲಾದ ಆಯೋಗದ ಅವಧಿಯನ್ನು ಪೂರ್ವಾನ್ವಯಗೊಂಡಂತೆ ಮತ್ತೆ ಎರಡು ತಿಂಗಳ ಕಾಲ ಅಂದರೆ 2019 ರ ಜುಲೈ 31 ರವರೆಗೆ ವಿಸ್ತರಿಸಲು ಅನುಮೋದನೆ ನೀಡಿತು.

 

ಆಯೋಗಕ್ಕೆ ನೀಡಲಾದ ಆರನೆ ಅವಧಿ ವಿಸ್ತರಣೆ ಇದಾಗಿದೆ. ಆಯೋಗದ ಅವಧಿ 2019 ರ ಮೇ 31 ಕ್ಕೆ ಕೊನೆಗೊಳ್ಳುತ್ತಿತ್ತು.

 

ಪರಿಣಾಮ:

ಆಯೋಗದ ಅವಧಿ ವಿಸ್ತರಣೆ ಅದಕ್ಕೆ ಕೇಂದ್ರೀಯ ಪಟ್ಟಿಯಲ್ಲಿ ಒ.ಬಿ.ಸಿ.ಗಳ ಉಪ ವರ್ಗೀಕರಣ ವಿಷಯದ ಮೌಲ್ಯಮಾಪನವನ್ನು ವಿವಿಧ ಭಾಗೀದಾರರ ಜೊತೆ  ವಿಸ್ತಾರ ವ್ಯಾಪ್ತಿಯ ಸಮಾಲೋಚನೆ ಮೂಲಕ ನಡೆಸಲು ಅನುಕೂಲ ಮಾಡಿಕೊಡಲಿದೆ. ಇದರಿಂದ ಆಯೋಗಕ್ಕೆ  ಈ ವಿಷಯ ಕುರಿತಂತೆ ಸಮಗ್ರ ವರದಿ ಸಲ್ಲಿಸುವುದಕ್ಕೆ ಸಾಧ್ಯವಾಗಲಿದೆ.

 

ಹಿನ್ನೆಲೆ: 

ಸಂವಿಧಾನದ 340 ನೇ ವಿಧಿಯನ್ವಯ , 2017 ರ ಅಕ್ಟೋಬರ್ 2 ರಂದು ರಾಷ್ಟ್ರಪತಿಗಳ ಮಂಜೂರಾತಿಯನ್ವಯ ಆಯೋಗವನ್ನು  ರಚಿಸಲಾಗಿತ್ತು. ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ಜಿ.ರೋಹಿಣಿ ಅವರ ನೇತೃತ್ವದ ಆಯೋಗವು 2017 ರ ಅಕ್ಟೋಬರ್ ತಿಂಗಳಿನಿಂದ ಕಾರ್ಯ ಆರಂಭಿಸಿತ್ತು. ಮತ್ತು ಅಂದಿನಿಂದ ಒ.ಬಿ.ಸಿ.ಗಳ ಉಪ-ವರ್ಗೀಕರಣ ಹೊಂದಿರುವ ಎಲ್ಲಾ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಜೊತೆ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳ ಜೊತೆ ಸಂವಾದ,  ಸಮಾಲೋಚನೆಗಳನ್ನು ನಡೆಸಿತ್ತು. ಆಯೋಗವು ಈ ಮೊದಲು ಬಿಡುಗಡೆ ಮಾಡಿದ ಸಲಹಾ ಪತ್ರಗಳಿಗೆ ಬಂದಿರುವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ವಿವರವಾದ ಸಮಾಲೋಚನೆ ನಡೆಸುವುದು ಸೂಕ್ತ ಎಂದು ಆಯೋಗವು ಅಭಿಪ್ರಾಯ ವ್ಯಕ್ತಪಡಿಸಿತ್ತು. ಯಾವುದೇ ಸಮುದಾಯವೂ ಒಟ್ಟಾರೆಯಾಗಿ ಕಡಿಮೆ ಸವಲತ್ತಿನ ಸ್ಥಾನಕ್ಕೆ ಹೋಗುವುದನ್ನು ತಡೆಯಲು ಮತ್ತು ಅದನ್ನು ಖಾತ್ರಿಪಡಿಸಲು , ಆ ಸಂಬಂಧಿ ಪ್ರಕ್ರಿಯೆಗಳಿಗೆ ಕೆಲವು ತಿಂಗಳುಗಳ    ಕಾಲಾವಕಾಶ ಅಗತ್ಯವಾಗಬಹುದು.

 

ಈ ವಸ್ತು ಸ್ಥಿತಿಯ ಹಿನ್ನೆಲೆಯಲ್ಲಿ , ಆಯೋಗವು ಅದರ ಅವಧಿಯನ್ನು ಇನ್ನೆರಡು ತಿಂಗಳ ಕಾಲ  ಅಂದರೆ 2019 ರ ಜುಲೈ 31 ರವರೆಗೆ ವಿಸ್ತರಿಸುವಂತೆ ಕೇಳಿತ್ತು, ಅದಕ್ಕೆ ಅನುಮೋದನೆ ದೊರೆತಿದೆ.



(Release ID: 1574346) Visitor Counter : 94


Read this release in: Punjabi , English , Tamil , Telugu