ಪ್ರಧಾನ ಮಂತ್ರಿಯವರ ಕಛೇರಿ

ಕೊರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ 

Posted On: 21 FEB 2019 7:40PM by PIB Bengaluru

ಕೊರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೊರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. 

ತಮಗೆ ನೀಡಿದ ಹಾರ್ದಿಕ ಸ್ವಾಗತಕ್ಕಾಗಿ ಸಿಯೋಲ್ ನಲ್ಲಿಯ ಭಾರತೀಯ ಸಮುದಾಯಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. 

ಭಾರತ ಮತ್ತು ಕೊರಿಯಾ ನಡುವಿನ ಸಂಬಂಧ ಬರೇ ವ್ಯಾಪಾರ ವ್ಯವಹಾರವನ್ನು ಆಧರಿಸಿರುವುದಲ್ಲ ಎಂದು ಹೇಳಿದ ಅವರು ಉಭಯ ದೇಶಗಳ ನಡುವಿನ ಸಂಬಂಧ ಜನತೆ ಮತ್ತು ಜನತೆ ನಡುವಿನ ಬಾಂಧವ್ಯವನ್ನು ಅಡಿಪಾಯವಾಗಿ ಹೊಂದಿದೆ ಎಂದೂ ಹೇಳಿದರು. 

ಭಾರತ ಮತ್ತು ಕೊರಿಯಾ ನಡುವಿನ ಪ್ರಾಚೀನ ಕಾಲದ ಸಂಪರ್ಕಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು , ರಾಣಿ ಸೂರ್ಯರತ್ನ ಅವರು ಅಯೋಧ್ಯೆಯಿಂದ ಸಾವಿರಾರು ಕಿಲೋಮೀಟರ್ ದೂರ ಕ್ರಮಿಸಿ ಕೊರಿಯನ್ ದೊರೆಯನ್ನು ಮದುವೆಯಾದುದನ್ನು ನೆನಪಿಸಿಕೊಂಡರು. ಇತ್ತೀಚೆಗೆ ದೀಪಾವಳಿಯಂದು ಕೊರಿಯಾದ ಪ್ರಥಮ ಮಹಿಳೆ ಕಿಂ ಜಂಗ್ ಸೂಕ್ ಅವರು ಅಯೋಧ್ಯೆಗೆ ಭೇಟಿ ನೀಡಿದ್ದನ್ನೂ ಅವರು ಸ್ಮರಿಸಿಕೊಂಡರು. 

ಬುದ್ದ ತತ್ವಗಳು ಉಭಯ ದೇಶಗಳ ಬಾಂಧವ್ಯದ ಈ ಬಂಧವನ್ನು ಇನ್ನಷ್ಟು ಬಲಪಡಿಸಿವೆ ಎಂದೂ ಪ್ರಧಾನಮಂತ್ರಿ ಹೇಳಿದರು. 

ಕೊರಿಯಾದಲ್ಲಿ ಭಾರತೀಯ ಸಮುದಾಯವು ಅಭಿವೃದ್ದಿ, ಸಂಶೋಧನೆ, ಮತ್ತು ಅನ್ವೇಷಣೆಗೆ ಕೊಡುಗೆ ನೀಡುತ್ತಿರುವುದನ್ನು ಗಮನಿಸಲು ತಮಗೆ ಸಂತೋಷವೆನಿಸುತ್ತದೆ ಎಂದೂ ಪ್ರಧಾನಮಂತ್ರಿ ಅವರು ನುಡಿದರು. 

ಕೊರಿಯಾದಲ್ಲಿ ಯೋಗ ಮತ್ತು ಭಾರತೀಯ ಹಬ್ಬಗಳ ಜನಪ್ರಿಯತೆ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಕೊರಿಯಾದಲ್ಲಿ ಭಾರತೀಯ ತಿಂಡಿ ತಿನಿಸು ಕೂಡಾ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಬಗ್ಗೆಯೂ ಹೇಳಿದರು. ಏಶ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡೆಯಾದ ಕಬಡ್ಡಿಯಲ್ಲಿ ಕೊರಿಯಾದ ಭವ್ಯವಾದ ಸಾಧನೆಯ ಬಗ್ಗೆಯೂ ಅವರು ಮಾತನಾಡಿದರು. 

ವಿಶ್ವದಾದ್ಯಂತ ಇರುವ ಭಾರತೀಯ ಸಮುದಾಯ ಭಾರತದ ರಾಯಭಾರಿಗಳು ಇದ್ದಂತೆ ಎಂದ ಪ್ರಧಾನಮಂತ್ರಿ ಅವರು ಅವರ ಕಠಿಣ ದುಡಿಮೆ ಮತ್ತು ಶಿಸ್ತು ಭಾರತದ ಸ್ಥಾನಮಾನವನ್ನು ಎತ್ತರಿಸಿದೆ ಎಂದರು. 

ಭಾರತವು ಈ ವರ್ಷ ಮಹಾತ್ಮಾ ಗಾಂಧಿ ಅವರ 150 ನೇ ಜನ್ಮವರ್ಷವನ್ನು ಆಚರಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ವಿಶ್ವವು ಬಾಪು ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು, ಮತ್ತು ಈ ಉದ್ದೇಶ ಅನುಸರಣೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. 

ಕೊರಿಯಾದ ಜೊತೆ ಭಾರತದ ಬಾಂಧವ್ಯ ಬಲಗೊಳ್ಳುತ್ತಿದೆ ಮತ್ತು ಉಭಯ ದೇಶಗಳು ಈ ವಲಯದಲ್ಲಿ ಶಾಂತಿ, ಸ್ಥಿರತೆ, ಮತ್ತು ಸಮೃದ್ದಿ ಸಾಧನೆಯತ್ತ ಕಾರ್ಯತತ್ಪರವಾಗಿವೆ ಎಂದರು. ಕೊರಿಯಾದಲ್ಲಿ ಈಗ ಭಾರತದ ಬ್ರಾಂಡುಗಳು ಲಭ್ಯ ಇವೆ ಮತ್ತು ಭಾರತದಲ್ಲಿ ಕೊರಿಯಾದ ಬ್ರಾಂಡುಗಳು ಮನೆ ಮಾತಾಗಿವೆ ಎಂಬುದನ್ನು ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. 

ಭಾರತದಲ್ಲಿ ಇತ್ತೀಚೆಗೆ ಆಗುತ್ತಿರುವ ಆರ್ಥಿಕ ಅಭಿವೃದ್ದಿಯ ಬಗ್ಗೆ ಧೀರ್ಘವಾಗಿ ಪ್ರಧಾನಮಂತ್ರಿ ಅವರು ಮಾತನಾಡಿದರು. 

ಭಾರತವು ಶೀಘ್ರದಲ್ಲಿಯೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದವರು ಹೇಳಿದರು. 

ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವಾಗಿಸುವ ನಿಟ್ಟಿನಲ್ಲಿ ಮತ್ತು ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಆಗಿರುವ ಗಮನೀಯವಾದ ಪ್ರಗತಿಯ ಬಗ್ಗೆ ಅವರು ಮಾತನಾಡಿದರು. ಜಿ.ಎಸ್.ಟಿ. ಮತ್ತು ನಗದು ರಹಿತ ಆರ್ಥಿಕತೆಯ ನಿಟ್ಟಿನಲ್ಲಿ ಆಗಿರುವ ಸುಧಾರಣೆಗಳನ್ನು ಅವರು ಪ್ರಸ್ತಾಪಿಸಿದರು. 

ಭಾರತದಲ್ಲಾಗುತ್ತಿರುವ ಹಣಕಾಸು ಸೇರ್ಪಡೆಯನ್ನು ವಿಶ್ವವೀಗ ಗಮನಿಸುತ್ತಿದೆ ಎಂಬುದನ್ನು ಉಲ್ಲೇಖಿಸಿದ ಅವರು ಈ ನಿಟ್ಟಿನಲ್ಲಿ ಅವರು ಬ್ಯಾಂಕ್ ಖಾತೆಗಳು, ವಿಮೆ ಮತ್ತು ಮುದ್ರಾ ಸಾಲಗಳ ಬಗ್ಗೆ ಮಾತನಾಡಿದರು. 

ಹಲವಾರು ಸಾಧನೆಗಳ ಕಾರಣದಿಂದಾಗಿ ಭಾರತದ ಘನತೆ ವರ್ಧಿಸುತ್ತಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು. ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ , ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಪ್ರತಿಮೆ-ಏಕತೆಯ ಪ್ರತಿಮೆ, ಮತ್ತು ಡಿಜಿಟಲ್ ಇಂಡಿಯಾಗಳನ್ನವರು ಉಲ್ಲೇಖಿಸಿದರು. 

ಸ್ವಚ್ಚ ಇಂಧನ ಕ್ಷೇತ್ರದಲ್ಲಿ ಭಾರತದಲ್ಲಿಯ ಬೆಳವಣಿಗೆಗಳನ್ನು ಮತ್ತು ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ರಚನೆಯನ್ನು ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. 

ಭಾರತದಲ್ಲಿಂದು ಹೊಸ ಶಕ್ತಿ ಇದೆ ಎಂದ ಪ್ರಧಾನಮಂತ್ರಿ ಅವರು ನಾಳೆ ತಾವು ಭಾರತದ ಜನತೆಯ ಪರವಾಗಿ ಮತ್ತು ವಲಸೆ ಬಂದಿರುವವರ ಪರವಾಗಿ ಸಿಯೋಲ್ ಶಾಂತಿ ಪ್ರಶಸ್ತಿ ಪಡೆಯುತ್ತಿರುವುದನ್ನೂ ಪ್ರಸ್ತಾಪಿಸಿದರು. 

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದ ಬಗ್ಗೆ ಪ್ರಸ್ತಾವಿಸಿದ ಪ್ರಧಾನಮಂತ್ರಿ ಅವರು ಈ ಬಾರಿಯ ಕುಂಭ ಮೇಳದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ ಬಗ್ಗೆ ಜಗತ್ತು ಗಮನಿಸಿದೆ ಎಂದರು. ಕೊರಿಯಾದಲ್ಲಿರುವ ಭಾರತೀಯ ಸಮುದಾಯ ತನ್ನ ವೈಯಕ್ತಿಕ ಪ್ರಯತ್ನಗಳ ಮೂಲಕ ಭಾರತದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವಂತೆ ಅವರು ಮನವಿ ಮಾಡಿದರು. 

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದ ಬಗ್ಗೆ ಪ್ರಸ್ತಾವಿಸಿದ ಪ್ರಧಾನಮಂತ್ರಿ ಅವರು ಈ ಬಾರಿಯ ಕುಂಭ ಮೇಳದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ ಬಗ್ಗೆ ಜಗತ್ತು ಗಮನಿಸಿದೆ ಎಂದರು. ಕೊರಿಯಾದಲ್ಲಿರುವ ಭಾರತೀಯ ಸಮುದಾಯ ತನ್ನ ವೈಯಕ್ತಿಕ ಪ್ರಯತ್ನಗಳ ಮೂಲಕ ಭಾರತದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವಂತೆ ಅವರು ಮನವಿ ಮಾಡಿದರು. 
 

***



(Release ID: 1566168) Visitor Counter : 87