ಪ್ರಧಾನ ಮಂತ್ರಿಯವರ ಕಛೇರಿ
ಜಾನ್ಸಿಗೆ ಪ್ರಧಾನಮಂತ್ರಿ ಭೇಟಿ
Posted On:
15 FEB 2019 7:16PM by PIB Bengaluru
ಜಾನ್ಸಿ ಪ್ರಧಾನಮಂತ್ರಿ ಭೇಟಿ
ಉತ್ತರ ಪ್ರದೇಶದಲ್ಲಿ ರಕ್ಷಣಾ ಕಾರಿಡಾರ್ ಗೆ ಶಂಕುಸ್ಥಾಪನೆ, ಪಾಕಿಸ್ತಾನದ ಪಾತಕೀಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು: ಪ್ರಧಾನಮಂತ್ರಿ, ಬುಂದೇಲ್ ಖಂಡ್ ಗೆ ಖಾತ್ರಿಯ ನೀರು ಪೂರೈಕೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ, ಪಹರಿ ಜಲಾಶಯ ಆಧುನೀಕರಣ ಯೋಜನೆ ದೇಶಕ್ಕೆ ಸಮರ್ಪಣೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಜಾನ್ಸಿಗೆ ಭೇಟಿ ನೀಡಿದರು. ಜಾನ್ಸಿಯಲ್ಲಿ ಅವರು ರಕ್ಷಣಾ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸಿದರು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ‘ನಮ್ಮ ನೆರೆಯವರ ಉದ್ದೇಶಗಳಿಗೆ ಭಾರತದ ಜನರು ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದರು. ವಿಶ್ವದ ಎಲ್ಲ ಪ್ರಮುಖ ಶಕ್ತಿಗಳು ಇಂದು ನಮ್ಮೊಂದಿಗಿವೆ ಮತ್ತು ಬೆಂಬಲ ವ್ಯಕ್ತಪಡಿಸಿವೆ. ನನಗೆ ಬಂದಿರುವ ಸಂದೇಶಗಳು ಅವರು ಕೇವಲ ದುಃಖಿತರಾಗಷ್ಟೇ ಇಲ್ಲ, ಆಕ್ರೋಶಗೊಂಡಿದ್ದಾರೆ ಎಂಬುದನ್ನೂ ತೋರಿಸುತ್ತದೆ ಎಂದರು. ಪ್ರತಿಯೊಬ್ಬರೂ ಭಯೋತ್ಪಾದನೆಯನ್ನು ಕೊನೆಗಾಣಿಸುವುದರ ಪರವಾಗಿದ್ದಾರೆ’ ಎಂದರು.
ನಮ್ಮ ವೀರ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಮತ್ತು ಈ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಪುಲ್ವಾಮಾ ವಿಧ್ವಂಸಕರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. “ನಮ್ಮ ನೆರೆಯ ದೇಶ ಇದು ನವ ಭಾರತ ಎಂಬುದನ್ನು ಮರೆತುಬಿಟ್ಟಿದೆ. ಪಾಕಿಸ್ತಾನ ಭಿಕ್ಷಾಪಾತ್ರ ಹಿಡಿದು ಅಲೆಯುತ್ತಿದೆ, ಅದಕ್ಕೆ ವಿಶ್ವದಿಂದ ನೆರವು ದೊರೆಯುತ್ತಿಲ್ಲ ಎಂದರು.”
ರಕ್ಷಣಾ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ, ಜಾನ್ಸಿ ಆಗ್ರಾ ಮಾರ್ಗದಲ್ಲಿರುವ ರಕ್ಷಣಾ ಕಾರಿಡಾರ್ ಈ ವಲಯದ ಯುವಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಹಲವು ವಿದೇಶೀ ಮತ್ತು ದೇಶೀಯ ರಕ್ಷಣಾ ಸಂಬಂಧಿತ ಕಂಪನಿಗಳು ಈ ವಲಯದಲ್ಲಿ ಹೂಡಿಕೆ ಮಾಡಲಿದ್ದಾರೆ ಎಂದರು. ಅವರು ವಲಯದಲ್ಲಿನ ಕಾರ್ಯಪಡೆಗಾಗಿ ಕೌಶಲ ಅಭಿವೃದ್ಧಿಯನ್ನು ಮಾಡಿಕೊಳ್ಳಬೇಕು ಎಂದೂ ಅವರು ಹೇಳಿದರು. ಯೋಜನಯೆ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಯುವಜನರು ವಲಸೆ ಹೋಗುವ ಅಗತ್ಯವಿಲ್ಲ, ಅವರು ತಮ್ಮ ತವರಿನ ಸನಿಹದಲ್ಲೇ ಸಂಪಾದನೆ ಮಾಡಬಹುದು ಎಂದರು. ರಕ್ಷಣಾ ಕಾರಿಡಾರ್ ಭಾರತ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ನೆರವಾಗಲಿದೆ ಎಂದು ಹೇಳಿದರು.
ಬುಂದೇಲ್ ಖಂಡ್ ವಲಯದ ಗ್ರಾಮೀಣ ಪ್ರದೇಶಗಳಿಗೆ ಕೊಳವೆ ಮಾರ್ಗದ ನೀರು ಪೂರೈಕೆ ಯೋಜನೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಕೇವಲ ಕೊಳವೆ ಮಾರ್ಗದ ಯೋಜನೆಯಷ್ಟೇ ಅಲ್ಲ ಬರಪೀಡಿತ ಈ ಪ್ರದೇಶಕ್ಕೆ ಜೀವನಾಧಾರ ಕೂಡ ಎಂದರು. ದೂರ ದೂರದ ಸ್ಥಳದಿಂದ ಕುಡಿಯುವ ನೀರು ತರುವ ನಮ್ಮ ಮಾತೆಯರ ಮತ್ತು ಸೋದರಿಯರ ಸಮಯ, ಶ್ರಮವನ್ನು ಇದು ಉಳಿಸುತ್ತದೆ, ಪ್ರತಿ ಮನೆಗೂ ಕೊಳವೆಯ ಮೂಲಕ ನೀರು ಒದಗಿಸಲಾಗುತ್ತದೆ ಎಂದರು.
ಅಮೃತ್ ಯೋಜನೆಯಡಿಯಲ್ಲಿ, ಪ್ರಧಾನಮಂತ್ರಿ, ಜಾನ್ಸಿ ನಗರ ಕುಡಿಯುವ ನೀರಿನ ಯೋಜನೆ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 600 ಕೋಟಿ ರೂಪಾಯಿಗಳ ಈ ಯೋಜನೆ ಜಾನ್ಸಿ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ, ಬೇತ್ವಾ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಪೂರೈಸಲಿದೆ ಎಂದರು.
425 ಕಿ.ಮೀ ಉದ್ದದ ಜಾನ್ಸಿ –ಮಾಣಿಕ್ ಪುರ್ ಮತ್ತು ಭೀಮ್ ಸೇನ್ – ಖೈರಾರ್ ಜೋಡಿ ರೈಲು ಮಾರ್ಗಕ್ಕೆ ಮತ್ತು ಜಾನ್ಸಿಯಲ್ಲಿ ಬೋಗಿಗಳ ಆಧುನಿಕರಣ ಕಾರ್ಯಾಗಾರಕ್ಕೆ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು.
ಜಾನ್ಸಿ – ಖೈರಾರ್ ವಿಭಾಗದಲ್ಲಿ 297 ಕಿ.ಮೀ. ಉದ್ದದ ವಿದ್ಯುದ್ದೀಕರಣಮಾರ್ಗವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಈ ಯೋಜನೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಸಲಿದ್ದು, ಬುಂದೇಲ್ ಖಂಡ್ ವಲಯದ ಸರ್ವಾಂಗೀಣ ಅಭಿವೃದ್ಧಿಗೂ ಕಾರಣವಾಗಲಿದೆ. ಈ ಸಂದರ್ಭದಲ್ಲ ಮಾತನಾಡಿದ ಪ್ರಧಾನಮಂತ್ರಿಯವರು, ಇದೇ ವಲಯದ ರೀತಿಯಲ್ಲಿದ್ದ ಗುಜರಾತ್ ನ ಕಚ್ ನಂತೆ ಬುಂದೇಲ್ ಖಂಡ್ ವಲಯ ಸಹ ಅಭಿವೃದ್ದಿಯನ್ನು ಸಾಧಿಸಲಿ ಎಂದು ಆಶಿಸಿದರು.
ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ತಡೆ ರಹಿತ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವ ಪಶ್ಚಿಮ – ಉತ್ತರ ಅಂತರ ವಲಯ ವಿದ್ಯುತ್ ಪ್ರಸರಣ ವರ್ಧನೆ ಯೋಜನೆಯನ್ನು ದೇಶಕ್ಕೆ ಇಂದು ಸಮರ್ಪಿಸಲಾಯಿತು. ಇದು ಈ ವಲಯದ ವಿದ್ಯುತ್ ಬೇಡಿಕೆಯನ್ನು ದೀರ್ಘ ಕಾಲ ನಿಭಾಯಿಸಲಿದೆ.
ಮತ್ತೊಂದು ಮುಖ್ಯವಾದ ಉದ್ಘಾಟನೆ ಎಂದರೆ ಪಹರಿ ಜಲಾಶಯ ಆಧುನೀಕರಣ ಯೋಜನೆ. ಈ ಯೋಜನೆ ಜಲಾಶಯದಿಂದ ನೀರು ಸೋರಿಕೆಯನ್ನು ತಡೆದು ರೈತರಿಗೆ ಉಪಯುಕ್ತವಾಗಲಿದೆ ಮತ್ತು ರೈತರಿಗೆ ಹೆಚ್ಚಿನ ನೀರು ದೊರಕುವಂತೆ ಮಾಡುತ್ತದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 7.5 ಲಕ್ಷ ಲಕ್ಷ ಕೋಟಿ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಪಿಎಂ ತಿಳಿಸಿದರು. ಅದೇ ರೀತಿ ಸಬ್ಸಿಡಿ, ವಿದ್ಯಾರ್ಥಿ ವೇತನ, ಇತ್ಯಾದಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕುತ್ತಿರುವ ಕಾರಣ ಸೋರಿಕೆಯಾಗುತ್ತಿದ್ದ 1 ಲಕ್ಷ ಕೋಟಿ ರೂಪಾಯಿ ಹಣ ಉಳಿಸಲಾಗಿದೆ ಎಂದರು.
*****
(Release ID: 1564846)