ಪ್ರಧಾನ ಮಂತ್ರಿಯವರ ಕಛೇರಿ

3 ನೇ ಶತ ಕೋಟಿ ಸೌಲಭ್ಯ ವಂಚಿತ ಮಕ್ಕಳ ಊಟದ ವ್ಯವಸ್ಥೆಗೆ ಬೃಂದಾವನದಲ್ಲಿ ಪ್ರಧಾನ ಮಂತ್ರಿಗಳಿಂದ ಸಾಂಕೇತಿಕ ಚಾಲನೆ 

Posted On: 11 FEB 2019 4:24PM by PIB Bengaluru

3 ನೇ ಶತ ಕೋಟಿ ಸೌಲಭ್ಯ ವಂಚಿತ ಮಕ್ಕಳ ಊಟದ ವ್ಯವಸ್ಥೆಗೆ ಬೃಂದಾವನದಲ್ಲಿ ಪ್ರಧಾನ ಮಂತ್ರಿಗಳಿಂದ ಸಾಂಕೇತಿಕ ಚಾಲನೆ 

ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬೃಂದಾವನಕ್ಕೆ ಭೇಟಿ ನೀಡದರು. ಬೃಂದಾವನದ ಚಂದ್ರೋದಯ ಮಂದಿರದಲ್ಲಿ ಅಕ್ಷಯ ಪಾತ್ರಾ ಪ್ರತಿಷ್ಠಾನದ 3 ನೇ ಶತ ಕೋಟಿ ಊಟದ ವ್ಯವಸ್ಥೆಯ ದ್ಯೋತಕವಾಗಿ ಫಲಕ ಅನಾವರಣ ಮಾಡಿದರು. ಸೌಲಭ್ಯ ವಂಚಿತ ಶಾಲಾ ಮಕ್ಕಳಿಗೆ 3 ನೇ ಶತ ಕೋಟಿ ಊಟವನ್ನು ಉಣಬಡಿಸಿದರು. ಈ ಸಂದರ್ಭದಲ್ಲಿ ಇಸ್ಕಾನ್ ಆಚಾರ್ಯರಾದ ಶ್ರೀಲ ಪ್ರಭುಪಾದ ಅವರ ಪ್ರತಿಮೆಗೆ ಪುಷ್ಪ ನಮನ ಸಮರ್ಪಿಸಿದರು. 
 

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀ ರಾಮ್ ನಾಯಕ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಅಕ್ಷಯ ಪಾತ್ರಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಅಕ್ಷಯ ಪಾತ್ರಾ ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿಗಳು, ಕೇವಲ 1500 ಮಕ್ಕಳಿಗೆ ಉಣಬಡಿಸುವುದರಿಂದ ಆರಂಭಗೊಂಡ ಈ ಸೇವೆ ಇಂದು ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದೊಂದಿಗೆ ದೇಶದ ವಿವಿಧೆಡೆ ಇರುವ 17 ಲಕ್ಷ ಶಾಲಾ ಮಕ್ಕಳಿಗೆ ಸೇವೆ ಕಲ್ಪಿಸುತ್ತಿದೆ ಎಂದರು. ಅಟಲ್ ಬಿಹಾರಿ ವಾಜಪೆಯಿ ಅವರ ಆಡಳಿತಾವಧಿಯಲ್ಲಿ ಪ್ರಥಮ ಬಿಸಿಯೂಟ ವಿತರಣೆ ಆರಂಭವಾಗಿದ್ದು ಇಂದು ತಮಗೆ 3 ನೇ ಶತಕೋಟಿ ಊಟದ ಮೂಲಕ ಸೇವೆಗೈಯ್ಯುವ ಅವಕಾಶ ದೊರೆತಿರುವುದು ಸಂತೋಷವಾಗಿದೆ ಎಂದರು. ಉತ್ತಮ ಪೌಷ್ಟಿಕತೆ ಮತ್ತು ಆರೋಗ್ಯಕರ ಬಾಲ್ಯ, ನವಭಾರತದ ಅಡಿಪಾಯ ಎಂದರು. 

ಪ್ರಧಾನ ಮಂತ್ರಿಯವರು ಆರೋಗ್ಯದ 3 ಅಂಶಗಳನ್ನು ತಿಳಿಸಿದರು – ಪೌಷ್ಟಿಕತೆ, ಸೋಂಕು ತಡೆ ಮತ್ತು ಸ್ವಚ್ಛತೆಗೆ ತಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಹಾಗೂ ರಾಷ್ಟ್ರೀಯ ಪೌಷ್ಟಿಕತಾ ಅಭಿಯಾನ, ಮಿಶನ್ ಇಂದ್ರಧನುಷ್ ಮತ್ತು ಸ್ವಚ್ಛ ಭಾರತ ಅಭಿಯಾನ ಪ್ರಮುಖ ಉಪಕ್ರಮಗಳು ಎಂದರು. ಪ್ರತಿಯೊಬ್ಬ ತಾಯಿ ಹಾಗೂ ಮಗುವಿಗೆ ಸೂಕ್ತ ಪೌಷ್ಟಿಕತೆ ಒದಗಿಸುವ ಧ್ಯೇಯದೊಂದಿಗೆ ಕಳೆದ ವರ್ಷ ರಾಷ್ಟ್ರೀಯ ಪೌಷ್ಟಿಕತೆ ಅಭಿಯಾನವನ್ನು ಆರಂಭಿಸಲಾಯಿತು. “ನಾವು ಪ್ರತಿಯೊಬ್ಬ ತಾಯಿ ಹಾಗೂ ಮಗುವಿಗೆ ಸೂಕ್ತ ಪೌಷ್ಟಿಕತೆ ಒದಗಿಸುವಲ್ಲಿ ಯಶಸ್ವಿಯಾದರೆ ಹಲವಾರು ಜೀವಗಳನ್ನು ರಕ್ಷಿಸಬಹುದಾಗಿದೆ” ಎಂದು ಕೂಡಾ ಪ್ರಧಾನ ಮಂತ್ರಿಗಳು ನುಡಿದರು. 

ಇಂದ್ರಧನುಷ್ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದ ಅವರು ರಾಷ್ಟ್ರೀಯ ಕಾರ್ಯಕ್ರಮದಲ್ಲಿ 5 ಹೆಚ್ಚುವರಿ ಲಸಿಕೆಗಳ ಸೇರ್ಪಡೆಯಾಗಿದೆ ಎಂದು ತಿಳಿಸಿದರು. ಇಲ್ಲಿವರೆಗೆ 3 ಕೋಟಿ 40 ಲಕ್ಷ ಮಕ್ಕಳು ಮತ್ತು 90 ಲಕ್ಷ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ ಎಂದರು. ಒಂದು ಜನಪ್ರಿಯ ವೈದ್ಯಕೀಯ ನಿಯತಕಾಲಿಕೆಯಲ್ಲಿ, ಜಾಗತಿಕ 12 ಉತ್ತಮ ಆಚರಣೆಗಳಲ್ಲಿ ಮಿಷನ್ ಇಂದ್ರಧನುಷ್ ಅನ್ನು ಒಂದು ಎಂದು ಆಯ್ಕೆ ಮಾಡಿರುವುದನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದರು. 

ಸ್ವಚ್ಛ ಭಾರತ ಅಭಿಯಾನ ಮತ್ತು ನೈರ್ಮಲ್ಯದ ಕುರಿತು ಮಾತನಾಡುತ್ತಾ, ಶೌಚಾಲಯದ ಬಳಕೆಯಿಂದ 3 ಲಕ್ಷ ಜನರನ್ನು ರಕ್ಷಿಸಲು ಸಾಧ್ಯವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಸ್ವಚ್ಛ ಭಾರತ ಅಭಿಯಾನ ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಪ್ರಮುಖ ಉಪಕ್ರಮವಾಗಿದೆ ಎಂದರು. 

ರಾಷ್ಟ್ರೀಯ ಗೋಕುಲ್ ಮಿಶನ್, ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಸೇರಿದಂತೆ ಸರ್ಕಾರ ಕೈಗೆತ್ತಿಕೊಂಡಿರುವ ಹಲವಾರು ಉಪಕ್ರಮಗಳ ಬಗ್ಗೆ ಒತ್ತು ನೀಡಿದರು. ಉತ್ತರ ಪ್ರದೇಶವೊಂದರಲ್ಲೇ ಉಜ್ವಲ ಯೋಜನೆಯಡಿ ಸರ್ಕಾರ 1 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿದೆ ಎಂದು ತಿಳಿಸಿದರು. 

ಹಸುಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪಿಸಲಾಗಿದೆ. ಪಶು ಸಂಗೋಪನೆಯಲ್ಲಿ ತೊಡಗಿರುವವರಿಗೆ ಸಹಾಯ ಮಾಡಲೆಂದೇ ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿ 3 ಲಕ್ಷ ಹೆಚ್ಚುವರಿ ಸಾಲ ಸೌಲಭ್ಯ ನೀಡುತ್ತಿರುವ ತಮ್ಮ ಸರ್ಕಾರದ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದರು. 

ರೈತರ ಕಲ್ಯಾಣಕ್ಕಾಗಿ ರೂಪಿಸಲಾದ ಪಿ ಎಂ ಕಿಸಾನ್ ಯೋಜನೆ ಉತ್ತರ ಪ್ರದೇಶದ ರೈತರಿಗೆ ಹೆಚ್ಚು ಲಾಭದಾಯಕವಾಗಿದೆ, ಏಕೆಂದರೆ ಈ ರಾಜ್ಯದಲ್ಲಿ 5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿದ ರೈತರೇ ಹೆಚ್ಚಿದ್ದಾರೆ ಎಂದರು. 

ಈ ಪ್ರತಿಷ್ಠಾನದ ಪ್ರಯತ್ನಗಳು ನಾನು ಎಂಬುದರಿಂದ ನಾವು ಎಂಬುದರೆಡೆಗೆ ಪರಿವರ್ತನೆಗೊಳ್ಳುವುದರ ಪ್ರಾಮುಖ್ಯತೆಯನ್ನು ತೋರ್ಪಡಿಸುತ್ತದೆ, ನಾವು ನಮ್ಮತನದಿಂದ ಮೇಲೆದ್ದು ಸಮಾಜದ ಬಗ್ಗೆ ಚಿಂತಿಸಿದಾಗ ಇದು ಸಾಧ್ಯ ಎಂದು ಹೇಳಿ ತಮ್ಮ ಭಾಷಣಕ್ಕೆ ವಿರಾಮ ನೀಡಿದರು. 

ಅಕ್ಷಯ ಪಾತ್ರಾ ಪ್ರತಿಷ್ಠಾನ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಡಿ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಒದಗಿಸುವಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಒಡಗೂಡಿ ನಿಕಟವಾಗಿ ಕೆಲಸ ಮಾಡುತ್ತಿದೆ. 12 ರಾಜ್ಯಗಳ 14, 702 ಶಾಲೆಗಳ 1.76 ದಶಲಕ್ಷ ಮಕ್ಕಳಿಗೆ ಈ ಪ್ರತಿಷ್ಠಾನ ಮಧ್ಯಾಹ್ನದ ಬಿಸಿಯೂಟ ಉಣಬಡಿಸುತ್ತಿದೆ. 2016 ರಲ್ಲಿ ಭಾರತದ ಅಂದಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರ ಉಪಸ್ಥಿತಿಯಲ್ಲಿ ಒಟ್ಟಾರೆ 2 ಶತಕೋಟಿ ಮಕ್ಕಳಿಗೆ ಉಣಬಡಿಸಿತ್ತು. ಸೌಲಭ್ಯ ವಂಚಿತ ಶಾಲಾ ಮಕ್ಕಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ 3 ನೇ ಶತ ಕೋಟಿ ಊಟದ ವ್ಯವಸ್ಥೆ ಒದಗಿಸುವ ದ್ಯೋತಕ ಕಾರ್ಯಕ್ರಮ ಸಮಾಜದ ಬಡ ಮತ್ತು ಕೆಳವರ್ಗದವರನ್ನು ತಲುಪುವಲ್ಲಿ ಇಡಲಾದ ಮತ್ತೊಂದು ದಿಟ್ಟ ಹೆಜ್ಜೆ ಎನಿಸಿದೆ. 



(Release ID: 1564176) Visitor Counter : 95