ಪ್ರಧಾನ ಮಂತ್ರಿಯವರ ಕಛೇರಿ

ಸ್ವಚ್ಛ ಶಕ್ತಿ-2019: ಸ್ವಚ್ಛ ಭಾರತಕ್ಕಾಗಿ ಗ್ರಾಮೀಣ ಮಹಿಳಾ ಚಾಂಪಿಯನ್ ಗಳು 

Posted On: 11 FEB 2019 5:19PM by PIB Bengaluru

ಸ್ವಚ್ಛ ಶಕ್ತಿ-2019: ಸ್ವಚ್ಛ ಭಾರತಕ್ಕಾಗಿ ಗ್ರಾಮೀಣ ಮಹಿಳಾ ಚಾಂಪಿಯನ್ ಗಳು 

ನಾಳೆ ಪ್ರಧಾನಿಯವರಿಂದ ಕುರುಕ್ಷೇತ್ರದಲ್ಲಿ ಸ್ವಚ್ಛ ಶಕ್ತಿ-2019 ಉದ್ಘಾಟನೆ: ದೇಶಾದ್ಯಂತದ ಮಹಿಳಾ ಸರಪಂಚರಿಗೆ ಸನ್ಮಾನ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಫೆಬ್ರವರಿ 12, 2019 ರಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮಹಿಳಾ ಸರಪಂಚರ ಸಮಾವೇಶ ಸ್ವಚ್ಛ ಶಕ್ತಿ-2019ರಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸ್ವಚ್ಛ ಶಕ್ತಿ-2019 ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಪ್ರಧಾನಿಯವರು ಕುರುಕ್ಷೇತ್ರದ ಸ್ವಚ್ಚ ಸುಂದರ್ ಶೌಚಾಲಯಕ್ಕೆ ಭೇಟಿ ನೀಡಲಿದ್ದು ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹರಿಯಾಣದ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಪ್ರಧಾನಿಯವರು ಶಂಕುಸ್ಥಾಪನೆ/ಉದ್ಘಾಟನೆ ನೆರವೇರಿಸಲಿದ್ದಾರೆ.

 

ಸ್ವಚ್ಛ ಶಕ್ತಿ - 2019, ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮೀಣ ಮಹಿಳೆಯರ ನಾಯಕತ್ವ ಪಾತ್ರವನ್ನು ಕೇಂದ್ರೀಕರಿಸುವ ಒಂದು ರಾಷ್ಟ್ರೀಯ ಸಮಾವೇಶ. ಈ ಸಮಾವೇಶದಲ್ಲಿ ದೇಶದೆಲ್ಲೆಡೆಯಿಂದ ಮಹಿಳಾ ಸರಪಂಚರು ಮತ್ತು ಪಂಚರು ಭಾಗವಹಿಸಲಿದ್ದಾರೆ. ಮಹಿಳಾ ಸಶಕ್ಕ್ತೀಕರಣ ಗುರಿಯ ಈ ಸಮಾವೇಶದಲ್ಲಿ ಸುಮಾರು 15,000 ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.

 

ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯವು ಹರಿಯಾಣ ಸರ್ಕಾರದ ಸಹಯೋಗದಲ್ಲಿ ಸ್ವಚ್ಛ ಶಕ್ತಿ-2019ನ್ನು ಆಯೋಜಿಸಿದೆ. ಸ್ವಚ್ಛ ಭಾರತಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ತಳಮಟ್ಟದಲ್ಲಿ ಕೈಗೊಂಡ ಉತ್ತಮ ಚಟುವಟಿಕೆಗಳನ್ನು ಅವರು ಹಂಚಿಕೊಳ್ಳಲಿದ್ದಾರೆ. ಸಮಾವೇಶವು ಸ್ವಚ್ಛ ಭಾರತದ ಸಾಧನೆಗಳು ಹಾಗೂ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಪ್ರಥಮವೆನಿಸಿರುವ ಅನನ್ಯವಾದ ಸ್ವಚ್ಛ ಸುಂದರ ಶೌಚಾಲಯದ (neat and clean toilet) ಬಗ್ಗೆ ಬೆಳಕು ಚೆಲ್ಲಲಿದೆ.

 

ಹಿನ್ನೆಲೆ:

 

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2017ರಲ್ಲಿ ಗುಜರಾತ್ ನ ಗಾಂಧಿನಗರದಲ್ಲಿ ಸ್ವಚ್ಛ ಶಕ್ತಿ ಕಾರ್ಯಕ್ರಮಕ್ಕೆ ಚಾಲನ ನೀಡಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗುಜರಾತ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಶಕ್ತಿ-2017 ಸಮಾವೇಶದಲ್ಲಿ ದೇಶದೆಲ್ಲೆಡೆಯಿಂದ ಆಗಮಿಸಿದ್ದ 6000 ಮಹಿಳಾ ಸರಪಂಚರು ಭಾಗವಹಿಸಿದ್ದರು. ಪ್ರಧಾನಿಯವರು ಅವರನ್ನು ಉದ್ದೇಶಿಸಿ ಮಾತನಾಡಿದ್ದರು ಮತ್ತು ಅವರನ್ನು ಸನ್ಮಾನಿಸಿದ್ದರು.

 

ಎರಡನೇ ಸ್ವಚ್ಛ ಶಕ್ತಿ ಸಮಾವೇಶ ಸ್ವಚ್ಛ ಶಕ್ತಿ-2018 ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಿತು. ದೇಶಾದ್ಯಂತ ಸ್ವಚ್ಛ ಭಾರತಕ್ಕಾಗಿ ಅಭೂತಪೂರ್ವ ಕೊಡುಗೆ ನೀಡಿದ ದೇಶದ 8000 ಮಹಿಳಾ ಸರಪಂಚರು, 3000 ಮಹಿಳಾ ಸ್ವಚ್ಚಗ್ರಾಹಿಗಳು ಮತ್ತು ಮಹಿಳಾ ಚಾಂಪಿಯನ್ ಗಳನ್ನು ಗುರುತಿಸಲಾಗಿತ್ತು.

 

 ಈಗ ಮೂರನೇ ಸಮಾವೇಶ ಕುರುಕ್ಷೇತ್ರದಲ್ಲಿ ಉದ್ಘಾಟನೆಯಾಗುತ್ತಿದೆ.

 

ತಳಮಟ್ಟದ, ಗ್ರಾಮೀಣ ಮಹಿಳೆಯರು ಬದಲಾವಣೆಯ ಪ್ರತಿನಿಧಿಗಳಾಗಿ ಹೇಗೆ ಸ್ವಚ್ಛ ಭಾರತದ ಚಟುವಟಿಕೆಗಳಲ್ಲಿ ಸಮುದಾಯವನ್ನು ಕ್ರೋಢೀಕರಿಸಿ ಮುನ್ನಡೆಸುತ್ತಾರೆ ಎಂಬುದಕ್ಕೆ ಸ್ವಚ್ಛ ಶಕ್ತಿ ಒಂದು ಉದಾಹರಣೆಯಾಗಿದೆ. 2019ರ ಅಕ್ಟೋಬರ್ 2 ರೊಳಗೆ  ಸ್ವಚ್ಛ ಮತ್ತು ಬಯಲು ಬಹಿರ್ದೆಸೆ ಮುಕ್ತ ಭಾರತದ ಗುರಿ ಸಾಧನೆಗಾಗಿ 2014ರ ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಸ್ವಚ್ಛ ಭಾರತ ಅಭಿಯಾನದಡಿ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಈ ಆಂದೋಲನವು ಒಂದು ಭಾಗವಾಗಿದೆ.



(Release ID: 1564175) Visitor Counter : 101