ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಲಂ ಬೈಪಾಸ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ 

Posted On: 15 JAN 2019 9:00PM by PIB Bengaluru

ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಲಂ ಬೈಪಾಸ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ 
 

ಕೇರಳದ ಸೋದರ, ಸೋದರಿಯರೇ,

 

 

ದೇವರ ಸ್ವಂತ ನಾಡಿಗೆ ಭೇಟಿ ನೀಡಲು ನಾನು ಪುಣ್ಯ ಮಾಡಿದ್ದೇನೆ. ಕಳೆದ ವರ್ಷದ ಪ್ರವಾಹಗಳಿಂದಾದ ಚೇತರಿಕೆಯನ್ನು ಅಷ್ಠಮುಡಿ ಸರೋವರದ ದಂಡೆಯ ಮೇಲಿನ ಕೊಲ್ಲಂನಲ್ಲಿ ನಿಂತು ಗಮನಿಸುತ್ತಿದ್ದೇನೆ.  ಕೇರಳವನ್ನು ಮರು ನಿರ್ಮಿಸಲು ನಾವು ಕಠಿಣ ಪರಿಶ್ರಮ ಪಡಬೇಕಿದೆ.

 

  

ಜನರ ಜೀವನವನ್ನು ಸುಲಭಗೊಳಿಸಲಿರುವ ಈ ಬೈಪಾಸ್ ಪೂರ್ಣಗೊಳಿಸಿದ್ದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಜನರ ನೆಮ್ಮದಿಯ ಜೀವನ ನನ್ನ ಸರ್ಕಾರದ ಬದ್ಧತೆಯಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಎಲ್ಲರೊಂದಿಗೆ ಎಲ್ಲರ ವಿಕಾಸ)  ನಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಈ ಬದ್ಧತೆಯೊಂದಿಗೆ ನನ್ನ ಸರ್ಕಾರವು ಈ ಯೋಜನೆಗೆ 2015ರ ಜನವರಿಯಲ್ಲಿ ಅಂತಿಮ ಅನುಮೋದನೆ ನೀಡಿತು. ರಾಜ್ಯ ಸರ್ಕಾರದ ಕೊಡುಗೆ ಮತ್ತು ಸಹಕಾರದೊಂದಿಗೆ ಈ ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ಪೂರ್ಣಗೊಳಿಸಿರುವುದು ನನಗೆ ಸಂತೋಷವಾಗಿದೆ. 2014ರ ಮೇ ನಲ್ಲಿ ನನ್ನ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ  ಕೇರಳದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಭಾರತ್ ಮಾಲಾ ಅಡಿಯಲ್ಲಿ ಮುಂಬೈ ಕನ್ಯಾಕುಮಾರಿ ಕಾರಿಡಾರಿನ ವಿಸ್ತೃತ ಯೋಜನಾ ವರದಿ ತಯಾರಾಗುತ್ತಿದೆ. ಇಂತಹ ಅನೇಕ ಯೋಜನೆಗಳು ಅಭಿವೃದ್ಧಿಯ ಹಲವು ಹಂತಗಳಲ್ಲಿವೆ.

 

 

 

ನಮ್ಮ ದೇಶದಲ್ಲಿ ಮೂಲಸೌಕರ್ಯ ಯೋಜನೆಗಳು ಘೋಷಣೆಯಾದ ನಂತರ ಹಲವಾರು ಕಾರಣಗಳಿಂದಾಗಿ ಸ್ಥಗಿತಗೊಂಡಿರುವುದನ್ನು ನಾವು ನೋಡಿದ್ದೇವೆ. ವೆಚ್ಚ ಮತ್ತ ಅಧಿಕ ಸಮಯದಿಂದಾಗಿ ಸಾಕಷ್ಟು ಸಾರ್ವಜನಿಕ ಹಣ ವ್ಯರ್ಥವಾಗುತ್ತಿದೆ. ಸಾರ್ವಜನಿಕ ಹಣ ವ್ಯರ್ಥವಾಗುವ ಸಂಸ್ಕೃತಿ ಮುಂದುವರಿಯಬಾರದು ಎಂದು ನಾವು ನಿರ್ಧರಿಸಿದ್ದೇವೆ. “ಪ್ರಗತಿ (PRAGATHI)”ಯ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಿ ಯೋಜನೆಗಳನ್ನು ಚುರುಕುಗೊಳಿಸಿದ್ದೇವೆ.

 

 

 

ಪ್ರತಿ ತಿಂಗಳ ಕೊನೆಯ ಬುಧವಾರ ಭಾರತ ಸರ್ಕಾರದ ಎಲ್ಲ ಕಾರ್ಯದರ್ಶಿಗಳು ಮತ್ತು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಕುಳಿತು ಅಂತಹ ವಿಳಂಬವಾಗಿರುವ  ಯೋಜನೆಗಳ ಪರಿಶೀಲನೆ ಮಾಡುತ್ತೇನೆ.

 

 

 

ಕೆಲವು ಯೋಜನೆಗಳು 20 ರಿಂದ 30 ವರ್ಷಗಳಷ್ಟು ಭಾರೀ ವಿಳಂಬವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಒಂದು ಯೋಜನೆ ಅಥವಾ ಕಾರ್ಯಕ್ರಮವನ್ನು ಅಷ್ಟೊಂದು ಕಾಲದವರೆಗೆ ವಿಳಂಬಮಾಡಿ ಸಾಮಾನ್ಯ ಜನರನ್ನು ಅದರ ಪ್ರಯೋಜನದಿಂದ ವಂಚಿಸುವುದು ಅಪರಾಧ. ಪ್ರಗತಿ (PRAGATHI) ಯಡಿಯಲ್ಲಿ ನಾನು ಇದುವರೆಗೆ ಸುಮಾರು 12 ಲಕ್ಷ ಕೋ.ರೂ.ಗಳ 250ಕ್ಕೂ ಹೆಚ್ಚು ಯೋಜನೆಗಳನ್ನು ಪರಿಶೀಲನೆ ಮಾಡಿದ್ದೇನೆ.

 

 

 

ಸ್ನೇಹಿತರೇ, ಅಟಲ್ ಜೀ ಯವರು, ಸಂಪರ್ಕದ ಶಕ್ತಿಯನ್ನು ನಂಬಿದ್ದವರು ಮತ್ತು ನಾವು ಅವರ ದೂರದೃಷ್ಟಿಯನ್ನು ಮುಂದುವರೆಸುತ್ತೇವೆ. ಕಳೆದ ಸರ್ಕಾರಕ್ಕೆ ಹೋಲಿಸಿದರೆ, ರಾಷ್ಟ್ರೀಯ ಹೆದ್ದಾರಿಗಳಿಂದ ಗ್ರಾಮೀಣ ರಸ್ತೆಗಳವರೆಗೆ ನಿರ್ಮಾಣದ ವೇಗ ದ್ವಿಗುಣವಾಗಿದೆ.

 

 

 

ನಾವು ಸರ್ಕಾರ ರಚಿಸಿದಾಗ ಕೇವಲ ಶೇ.56ರಷ್ಟು ಜನವಸತಿ ಮಾತ್ರ ರಸ್ತೆ ಸಂಪರ್ಕ ಹೊಂದಿತ್ತು. ಈಗ ಶೇ.90ಕ್ಕೂ ಹೆಚ್ಚು ಜನವಸತಿ ರಸ್ತೆ ಸಂಪರ್ಕ ಹೊಂದಿದೆ. ನಾವು ಶೇ.100ರ ಗುರಿಯನ್ನು ಸದ್ಯದಲ್ಲೇ ಖಂಡಿತವಾಗಿಯೂ ತಲುಪುವ ಬಗ್ಗೆ ನನಗೆ ಖಾತ್ರಿಯಿದೆ.

 

 

 

ನನ್ನ ಸರ್ಕಾರವು ರಸ್ತೆ ಸಂಪರ್ಕದಂತೆಯೇ ರೈಲು ಮಾರ್ಗ, ಜಲಮಾರ್ಗ ಮತ್ತು ವಾಯುಮಾರ್ಗಗಳಿಗೂ ಪ್ರಾಮುಖ್ಯತೆ ನೀಡಿದೆ. ವಾರಾಣಸಿಯಿಂದ ಹಲ್ದಿಯಾಗೆ ರಾಷ್ಟ್ರೀಯ ಜಲಮಾರ್ಗ ಈಗಾಗಲೇ ಆರಂಭವಾಗಿದೆ. ಇದು ಸ್ವಚ್ಛ ಸಾರಿಗೆಯ ಮಾದರಿಯನ್ನು ಖಾತ್ರಿಪಡಿಸಲಿದೆ ಮತ್ತು ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಸಂರಕ್ಷಿಸಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಾದೇಶಿಕ ವಾಯು ಸಂಪರ್ಕವೂ ಗಣನೀಯವಾಗಿ ಸುಧಾರಿಸಿದೆ. ಜೋಡಿ ಹಳಿಗಳು, ವಿದ್ಯುದೀಕರಣ ಮತ್ತು ಹೊಸ ಹಳಿಗಳ ಅಳವಡಿಕೆಯಲ್ಲಿ ಸುಧಾರಣೆ ಕಂಡಿದೆ. ಇವೆಲ್ಲವೂ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತವೆ.

 

 

 

ನಾವು ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸಿದಾಗ ನಾವು ಪಟ್ಟಣಗಳು ಮತ್ತು ಹಳ್ಳಿಗಳನ್ನು ಮಾತ್ರ ಜೋಡಿಸುವುದಿಲ್ಲ. ನಾವು ಸಾಧನೆಗಳೊಂದಿಗೆ ಆಕಾಂಕ್ಷೆಗಳನ್ನು ಮತ್ತು ಅವಕಾಶಗಳೊಂದಿಗೆ ಆಶಾವಾದವನ್ನು ಸಂಪರ್ಕಿಸುತ್ತೇವೆ,

 

 

 

ನನ್ನ ದೇಶದ ಪ್ರತಿಯೊಬ್ಬರ ಅಭಿವೃದ್ಧಿ ನನ್ನ ಬದ್ಧತೆ. ಸರದಿಯಲ್ಲಿರುವ ಕೊನೆಯ ಮನುಷ್ಯ ನನ್ನ ಆದ್ಯತೆ. ನನ್ನ ಸರ್ಕಾರವು ಮೀನುಗಾರಿಕಾ ವಲಯಕ್ಕಾಗಿ 7,500 ಕೋ.ರೂ.ಗಳ ನೂತನ ನಿಧಿಯೊಂದನ್ನು ಮಂಜೂರು ಮಾಡಿದೆ.

 

 

 

ಆಯುಷ್ಮಾನ್ ಭಾರತ್ ಅಡಿಯಲ್ಲಿ, ಬಡವರಿಗಾಗಿ ನಗದು ರಹಿತ ಆರೋಗ್ಯ ವಿಮೆ ನೀಡುತ್ತಿದ್ದು, ಪ್ರತೀ ಕುಟುಂಬಕ್ಕೆ ಪ್ರತೀ ವರ್ಷಕ್ಕೆ 5 ಲಕ್ಷ ರೂ.ಗಳ ಖಾತ್ರಿ ಒದಗಿಸಲಾಗಿದೆ. ಇದುವರೆಗೆ 8 ಲಕ್ಷಕ್ಕೂ ಹೆಚ್ಚು ರೋಗಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಸರ್ಕಾರವು ಇದುವರೆಗೆ 1,100 ಕೋ.ರೂ.ಗಳನ್ನು ಮಂಜೂರು ಮಾಡಿದೆ. ಈ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ನಾನು ಕೇರಳ ಸರ್ಕಾರವನ್ನು ವಿನಂತಿಸುತ್ತೇನೆ. ಆಗ ಕೇರಳದ ಜನತೆ ಅದರ ಪ್ರಯೋಜನವನ್ನು ಪಡೆಯಬಹುದು.

 

 

 

ಪ್ರವಾಸೋದ್ಯಮ ಕೇರಳದ ಆರ್ಥಿಕಾಭಿವೃದ್ಧಿಯ ಪ್ರಮುಖ ಲಕ್ಷಣವಾಗಿದೆ ಮತ್ತು ರಾಜ್ಯದ ಆರ್ಥಿಕತೆಗೆ ಪ್ರಮುಖ ಕೊಡುಗೆಯಾಗಿದೆ. ನನ್ನ ಸರ್ಕಾರವು ಪ್ರವಾಸೋದ್ಯಮ ವಲಯದಲ್ಲಿ ಪರಿಶ್ರಮದಿಂದ ಕೆಲಸ ಮಾಡಿದ್ದು ಫಲಿತಾಂಶವು ಉತ್ತಮವಾಗಿದೆ. ವಲ್ಡ್ ಟ್ರಾವೆಲ್ ಆಂಡ್ ಟೂರ್ ಕೌನ್ಸಿಲ್ ನ 2018ರ ವರದಿಯಲ್ಲಿ ಭಾರತವು ಮೂರನೇ ಕ್ರಮಾಂಕದಲ್ಲಿದೆ. ದೇಶದ ಪ್ರವಾಸೋದ್ಯಮ ವಲಯದಲ್ಲಿ ಇದೊಂದು ಪ್ರಮುಖ ಬೆಳವಣಿಗೆಯಾಗಿದೆ.

 

 

 

ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 65ನೇ ಸ್ಥಾನದಿಂದ 40ನೇ ಸ್ಥಾನಕ್ಕೇರಿದೆ.

 

 

 

ಭಾರತಕ್ಕೆ ಬರುವ ವಿದೇಶೀ ಪ್ರವಾಸಿಗರ ಸಂಖ್ಯೆ 2013ರಲ್ಲಿ 70 ಲಕ್ಷದಷ್ಟಿದ್ದದ್ದು, 2017ರಲ್ಲಿ ಸುಮಾರು ಒಂದು ಕೋಟಿಗೆ ಏರಿದೆ. ಇದು ಶೇ. 42 ಹೆಚ್ಚಳ. ಪ್ರವಾಸೋದ್ಯಮದಿಂದ ಭಾರತವು ಗಳಿಸುತ್ತಿರುವ ವಿದೇಶೀ ವಿನಿಮಯ 2013ರಲ್ಲಿದ್ದ 18 ಬಿಲಿಯನ್ ಡಾಲರ್ ಗಳಿಂದ 2017ರಲ್ಲಿ 27 ಬಿಲಿಯನ್ ಡಾಲರ್  ಗಳಿಗೆ ಏರಿದೆ. ಇದು ಶೇ.50ರಷ್ಟು ಹೆಚ್ಚಳ. 2017ರಲ್ಲಿ ಅತಿ ಹೆಚ್ಚು ಬೆಳವಣಿಗೆ ಕಂಡ ಪ್ರವಾಸಿ ತಾಣಗಳಲ್ಲಿ ಭಾರತವೂ ಒಂದು. 2016ಕ್ಕಿಂತ ಶೇ.14ರಷ್ಟು ಬೆಳವಣಿಗೆ ಕಂಡಿದೆ. ಇದೇ ವರ್ಷ ಜಾಗತಿಕ ಬೆಳವಣಿಗೆಯು ಅಂದಾಜು ಶೇ. 7 ಆಗಿದೆ.

 

 

 

ಇ-ವೀಸಾ, ಭಾರತೀಯ ಪ್ರವಾಸೋದ್ಯಮದ ಗತಿಯನ್ನು ಬದಲಿಸಿತು. ಈಗ ಈ ಸೌಲಭ್ಯವು ವಿಶ್ವದ 166 ರಾಷ್ಟ್ರಗಳ ಜನರಿಗೆ ದೊರೆಯುತ್ತಿದೆ.

 

ಪ್ರವಾಸಿ, ಪಾರಂಪರಿಕ ಮತ್ತು ಧಾರ್ಮಿಕ ತಾಣಗಳ ಸುತ್ತ ಮೂಲ ಸೌಕರ್ಯಗಳನ್ನು ನಿರ್ಮಿಸಲು ನನ್ನ ಸರ್ಕಾರವು ಎರಡು ಪ್ರಮುಖ ಕಾರ್ಯಕ್ರಮಗಳನ್ನು ಆರಂಭಿಸಿದೆ. ಅವುಗಳೆಂದರೆ; ಪ್ರವಾಸಿತಾಣಗಳಲ್ಲಿ ವಿಷಯಾಧಾರಿತ ಅಂತರ್ಗತ ಅಭಿವೃದ್ಧಿಯ ಸ್ವದೇಶ್ ದರ್ಶನ್ ಮತ್ತು ಪ್ರಸಾದ್.

 

 

 

ಕೇರಳದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಗುರುತಿಸಿ ಸ್ವದೇಶ್ ದರ್ಶನ್ ಮತ್ತು ಪ್ರಸಾದ್ ಅಡಿಯಲ್ಲಿ ಅಂದಾಜು 550 ಕೋ.ರೂ. ಮೌಲ್ಯದ 7 ಯೋಜನೆಗಳನ್ನು ನಾವು ಮಂಜೂರು ಮಾಡಿದ್ದೇವೆ.

 

 

 

ಅಂತಹ ಒಂದು ಯೋಜನೆಯನ್ನು ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಇಂದು ನಾನು ಉದ್ಘಾಟಿಸಲಿದ್ದೇನೆ. ಕೇರಳದ ಜನತೆ ಹಾಗೂ ದೇಶದ ಜನತೆಗ ಒಳಿತಾಗಲೆಂದು ನಾನು ಶ್ರೀ ಪದ್ಮನಾಭಸ್ವಾಮಿಯ ಆಶೀರ್ವಾದವನ್ನು ಬೇಡಲಿದ್ದೇನೆ.

 

 

 

“ಕೊಲ್ಲಂ ಕಂಡಲಿಲ್ಲಂ ವೇಂಡಾ” ಅಂದರೆ, ಕೊಲ್ಲಂನಲ್ಲಿದ್ದರೆ ಯಾರಿಗೂ ಮನೆಯಿಂದ ಹೊರಗಿರುವಂತೆ ಅನಿಸುವುದಿಲ್ಲ ಎಂಬ ಮಾತಿದೆ. ಅದೇ ಭಾವನೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

 

 

 

ಕೇರಳ ಹಾಗೂ ಕೊಲ್ಲಂ ಜನರ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ವಂದನೆಗಳು. ಅಭಿವೃದ್ಧಿಹೊಂದಿದ ಮತ್ತು ಶಕ್ತಿಶಾಲಿಯಾದ ಕೇರಳಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.

 

 

 

ಧನ್ಯವಾದಗಳು, ನಮಸ್ಕಾರಗಳು.    



(Release ID: 1562591) Visitor Counter : 87