ಪ್ರಧಾನ ಮಂತ್ರಿಯವರ ಕಛೇರಿ

2019-20ರ ಕೇಂದ್ರ ಬಜೆಟ್ ಬಳಿಕ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಭಾಷಾಂತರ

Posted On: 01 FEB 2019 5:02PM by PIB Bengaluru

2019-20ರ ಕೇಂದ್ರ ಬಜೆಟ್ ಬಳಿಕ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಭಾಷಾಂತರ

 

“ಜನರ ಜೀವನವನ್ನು ಮುಟ್ಟುವಂತಹ ಯೋಜನೆಗಳೊಂದಿಗೆ ಭಾರತವನ್ನು ಬಲಿಷ್ಠ ದೇಶವಾಗಿ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

 

ರೈತರ ಕಲ್ಯಾಣದಿಂದ – ಮಧ್ಯಮವರ್ಗದವರೆಗೆ, ಆದಾಯ ತೆರಿಗೆ ವಿನಾಯಿತಿಯಿಂದ ಮೂಲಸೌಕರ್ಯದರವರೆಗೆ, ಉತ್ಪಾದನೆಯಿಂದ ಎಂ.ಎಸ್.ಎಂ.ಇ.ವರೆಗೆ, ವಸತಿಯಿಂದ ಆರೋಗ್ಯ ಆರೈಕೆಯವರೆಗೆ ಮತ್ತು ಅಭಿವೃದ್ಧಿಯ ಹೆಚ್ಚಿನ ವೇಗದಿಂದ ನವ ಭಾರತದವರೆಗೆ ಈ ಬಜೆಟ್ ಹಲವು ವಲಯಗಳ ಹಿತವನ್ನು ರಕ್ಷಿಸುತ್ತದೆ.

 

ಸ್ನೇಹಿತರೆ, ಸರ್ಕಾರ ಆರಂಭಿಸಿರುವ ಅಭಿವೃದ್ದಿ ಯೋಜನೆಗಳು ದೇಶದ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಆಯುಷ್ಮಾನ್ ಭಾರತದ ಯೋಜನೆ 50 ಕೋಟಿ ಜನರನ್ನು ತಲುಪುತ್ತಿದೆ. 21 ಕೋಟಿ ಜನರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆಯ ಲಾಭ ಪಡೆದಿದ್ದಾರೆ. 9 ಕೋಟಿಗೂ ಹೆಚ್ಚು ಕುಟುಂಬಗಳು ಸ್ವಚ್ಛ ಭಾರತ ಅಭಿಯಾನದ ಪ್ರಯೋಜನ ಪಡೆದಿದ್ದಾರೆ. 6 ಕೋಟಿಗೂ ಹೆಚ್ಚು ಕುಟುಂಬಗಳು ಉಚಿತ ಅನಿಲ ಸಂಪರ್ಕವನ್ನು ಉಜ್ವಲಾ ಯೋಜನೆ ಅಡಿಯಲ್ಲಿ ಪಡೆದಿದ್ದು, ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ 1.5 ಕೋಟಿ ಕುಟುಂಬಗಳು ಸ್ವಂತ ಪಕ್ಕಾ ಮನೆಗಳನ್ನು ಹೊಂದಿವೆ.

 

ಈ ಬಜೆಟ್ ನಿಂದ 12 ಕೋಟಿಗೂ ಹೆಚ್ಚು ರೈತರಿಗೆ ಮತ್ತು ಅವರ ಕುಟುಂಬದವರಿಗೆ, 3 ಕೋಟಿ ಮಧ್ಯಮವರ್ಗದ ತೆರಿಗೆದಾರರಿಗೆ ಮತ್ತು 30-40 ಕೋಟಿ ಕಾರ್ಮಿಕರಿಗೆ ನೇರವಾಗಿ ಲಾಭವಾಗಿದೆ.

 

ಸ್ನೇಹಿತರೆ, ಬಡತನ ನಿರ್ಮೂಲನೆ ದಾಖಲೆಯ ವೇಗವನ್ನು ಪಡೆದುಕೊಂಡಿದೆ, ಸರ್ಕಾರದ ಪ್ರಯತ್ನಗಳಿಗೆ ಧನ್ಯವಾದಗಳು. ಅಚಲವಾಗಿದ್ದ ಬಡತನದಿಂದ ಲಕ್ಷಾಂತರ, ಕೋಟ್ಯಂತರ ಜನರು ಮಧ್ಯಮವರ್ಗಕ್ಕೆ ಮತ್ತು ನಿಯೋ ಮಧ್ಯಮ ವರ್ಗಕ್ಕೆ ಬಂದಿದ್ದಾರೆ ಇದು ಸಂತಸದ ವಿಷಯ. ಈ ದೊಡ್ಡ ಸಮೂಹ ಈಗ ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಶ್ರಮಿಸುತ್ತಿದ್ದು, ದೇಶದ ಅಭಿವೃದ್ಧಿಗೆ ಇಂಬು ನೀಡಿವೆ.  ಮಧ್ಯಮ ವರ್ಗದಲ್ಲ ಹೆಚ್ಚುತ್ತಿರುವ ಆಶಯಗಳು ಮತ್ತು ವಿಶ್ವಾಸಗಳಿಗೆ ಗರಿ ಮೂಡಿಸುವ ಸಲುವಾಗಿ ಬೆಂಬಲ ನೀಡುವ ಬದ್ಧತೆಯನ್ನು ಸರ್ಕಾರ ತೋರಿದೆ.

 

ನಾನು, ಈ ಬಜೆಟ್ ನಲ್ಲಿ ಆದಾಯ ತೆರಿಗೆಯ ವಿನಾಯಿತಿ ಪಡೆದ ಮಧ್ಯಮವರ್ಗ ಮತ್ತು ಸಂಬಳದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ನೆಲದ ಕಾನೂನು ಗೌರವಿಸಿ, ಪ್ರಾಮಾಣಿಕವಾಗಿ ತೆರಿಗೆಯನ್ನು ಪಾವತಿಸುತ್ತಿರುವ ಮಧ್ಯಮವರ್ಗ ಮತ್ತು ಮೇಲ್ ಮಧ್ಯಮವರ್ಗದವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ತೆರಿಗೆ ಹಣವನ್ನು ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಮತ್ತು ಬಡವರ ಏಳಿಗೆಗೆ ಬಳಸಲಾಗುತ್ತದೆ. 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಬಾರದು ಎಂಬುದು ದೀರ್ಘ ಕಾಲದಿಂದ ನನೆಗುದಿಯಲ್ಲಿದ್ದ ಬೇಡಿಕೆಯಾಗಿತ್ತು. ಹಲವು ವರ್ಷಗಳಿಂದ ಈಡೇರದೆ ಉಳಿದಿದ್ದ ಈ ಬೇಡಿಕೆಯನ್ನು ನಮ್ಮ ಸರ್ಕಾರ ಪೂರೈಸಿದೆ.

 

ಸ್ನೇಹಿತರೆ, ರೈತರಿಗಾಗಿ ವಿವಿಧ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿವೆ. ಆದಾಗ್ಯೂ, ಮೇಲ್ವರ್ಗದಲ್ಲಿರುವ 2-3 ಕೋಟಿ ರೈತರನ್ನು ಹೊರತುಪಡಿಸಿ, ದೊಡ್ಡ ಸಂಖ್ಯೆಯ ರೈತರು ಇದರ ವ್ಯಾಪ್ತಿಯಲ್ಲಿ ಇಲ್ಲ. ಈಗ ಪ್ರಧಾನಮಂತ್ರಿ ಕಿಸಾನ್ ಯೋಜನಾ ಎಂದೂ ಕರೆಯಲಾಗುವ ಪ್ರಧಾನಮಂತ್ರಿ ಕಿಸಾನ್ ನಿಧಿ ಬರುತ್ತಿದ್ದು, ಇದು 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ನೆರವಾಗಲಿದೆ. ಇದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರೈತರ ಕಲ್ಯಾಣಕ್ಕಾಗಿ ಕೈಗೊಂಡ ಐತಿಹಾಸಿಕ ಹೆಜ್ಜೆಯಾಗಿದೆ. ನಮ್ಮ ಸರ್ಕಾರ ರೈತರಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಕೃಷಿ ಮತ್ತು ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ಕ್ಷೇತ್ರಗಳು ಅಂದರೆ ಪಶುಸಂಗೋಪನೆ, ಗೋ ಕಲ್ಯಾಣ, ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆಗಳು ಇವುಗಳ ಹಿತ ಕಾಯಲಿವೆ. ರಾಷ್ಟ್ರೀಯ ಕಾಮಧೇನು ಅಭಿಯಾನ ಮತ್ತು ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಕೋಟ್ಯಂತರ ರೈತರ ಜೀವನೋಪಾಯದ ಅವಕಾಶಗಳ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.  ಇದು ಮೀನುಗಾರರಿಗೂ ನೆರವಾಗಲಿದೆ. ನಮ್ಮ ಮೊದಲ ಪ್ರಯತ್ನ ರೈತರ ಸಬಲೀಕರಣವಾಗಿದೆ, ಅವರ ಆದಾಯ ದುಪ್ಪಟ್ಟು ಮಾಡಲು ಯಂತ್ರ ಮತ್ತು ಸಂಪನ್ಮೂಲ ಒದಗಿಸುವುದಾಗಿದೆ. ಇಂದಿನ ನಿರ್ಧಾರ ಈ ಅಭಿಯಾನಕ್ಕೆ ಇಂಬು ನೀಡಲಿದೆ.

 

ಸ್ನೇಹಿತರೆ, ಭಾರತ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೊಸ ಯೋಜನೆಗಳು ಬರುತ್ತಿವೆ. ಹೊಸ ಕ್ಷೇತ್ರಗಳನ್ನು ಶೋಧಿಸಲಾಗುತ್ತಿದೆ ಮತ್ತು ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಜನರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಆದಾಗ್ಯೂ, ಅಸಂಘಟಿತ ವಲಯದ ಕಾರ್ಮಿಕರಾಗಿರಲಿ, ಮನೆ ಗೆಲಸದವರಾಗಿರಲಿ, ಕೃಷಿ ಕಾರ್ಮಿಕರಾಗಿರಲಿ ಅಥವಾ ಕೈಗಾಡಿ ಎಳೆಯುವವರಾಗಿರಲಿ ಸಮಾಜದ ದೊಡ್ಡ ಸಂಖ್ಯೆಯ ಜನರು ನಿರ್ಲಕ್ಷಿತರಾಗಿದ್ದರು. ಅವರನ್ನು ಅವರ ಪಾಡಿಗೆ ಬಿಡಲಾಗಿತ್ತು. ಸುಮಾರು 40-42 ಕೋಟಿ ಅಸಂಘಟಿತ ವಲಯದ ಕಾರ್ಮಿಕರು ದೇಶದಲ್ಲಿದ್ದಾರೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಅವರಿಗೆ 60 ವರ್ಷ ತುಂಬಿದ ತರುವಾಯ  ಅವರ ಬದುಕಿಗೆ ದೊಡ್ಡ ಬೆಂಬಲ ನೀಡುತ್ತದೆ. ಅವರು ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ, ಪ್ರಧಾನಮಂತ್ರಿ ವಸತಿ ಯೋಜನೆ ಮತ್ತು ಇತರ ಕಲ್ಯಾಣ ಯೋಜನೆಗಳ ಲಾಭವನ್ನಷ್ಟೇ ಪಡೆಯುವುದಿಲ್ಲ ಜೊತೆಗೆ ತಮ್ಮ ದೈನಂದಿನ ಖರ್ಚಿಗಾಗಿ ಪಿಂಚಣಿಯನ್ನೂ ಪಡೆಯಲಿದ್ದಾರೆ.

 

ಸಹೋದರ, ಸಹೋದರಿಯರೇ, ನಮ್ಮ ಸರ್ಕಾರ ಅಭಿವೃದ್ಧಿಯ ಲಾಭ ಕೊನೆಯ ವ್ಯಕ್ತಿಗೂ ತಲುಪಬೇಕು ಎಂದು ಶ್ರಮಿಸುತ್ತಿದೆ. ನಾವು ಅಲೆಮಾರಿ ಜನಾಂಗದವರಾದ ಮದಾರೀಸ್, ಹಾವಾಡಿಗರು, ಬಂಜಾರರು, ಗಾದಿಯಾಲೋಹರ್ಸ್ ಇತ್ಯಾದಿಯವರಿಗಾಗಿ ಕಲ್ಯಾಣ ಮಂಡಳಿ ರಚಿಸಲು ನಿರ್ಧರಿಸಿದ್ದೇವೆ. ಸೂಕ್ತ ಮಾನ್ಯತೆಯ ಬಳಿಕ, ಅಭಿವೃದ್ಧಿಯ ಲಾಭ ಈ ಸಮುದಾಯಗಳಿಗೆ ತ್ವರಿತವಾಗಿ ತಲುಪಲಿದೆ ಎಂಬ ವಿಶ್ವಾಸ ನನಗಿದೆ.

 

ಸ್ನೇಹಿತರೆ, ವಾಣಿಜ್ಯ ಮತ್ತು ವ್ಯಾಪಾರ ಮಾಡುವ ಜನರಿಗಾಗಿ ಪ್ರತ್ಯೇಕ ಸಚಿವಾಲಯ ಹೊಂದುವತ್ತ ಹೆಜ್ಜೆ ಹಾಕಿದ್ದೇವೆ. ವ್ಯಾಪಾರಸ್ಥರ, ವಣಿಕರ, ಮತ್ತು ಇತರ ಅಧಿಕಾರಿಗಳ ಅಗತ್ಯಗಳನ್ನು ಪೂರೈಸಲು ಡಿಐಪಿಪಿಯನ್ನು ವಿಶೇಷವಾಗಿ ಪುನಾರಚಿಸಲಾಗಿದೆ. ಈಗ ಈ ಇಲಾಖೆಯನ್ನು ಕೈಗಾರಿಕೆಗಳು ಮತ್ತು ಆಂತರಿಕ ವಾಣಿಜ್ಯ ಉತ್ತೇಜನ ಇಲಾಖೆ ಎಂದು ಕರೆಯಲಾಗಿದೆ.  

 

ಈ ಬಜೆಟ್ ಮುಂದಿನ ದಶಕದ ಅಂತ್ಯದ ವೇಳೆಯ ಅಗತ್ಯಗಳನ್ನು ಮತ್ತು ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ ಎಂಬುದು ನನಗೆ ಸಂತಸ ತಂದಿದೆ. ಈ ಬಜೆಟ್ ಬಡವರನ್ನು ಸಶಕ್ತಗೊಳಿಸುತ್ತದೆ, ರೈತರಿಗೆ ಚೈತನ್ಯ ನೀಡುತ್ತದೆ, ಕಾರ್ಮಿಕರಿಗೆ ಗೌರವ ದೊರಕಿಸುತ್ತದೆ, ಮಧ್ಯಮವರ್ಗದವರ ಆಶೋತ್ತರಗಳನ್ನು ಈಡೇರಿಸುತ್ತದೆ, ಪ್ರಾಮಾಣಿಕ ತೆರಿಗೆದಾರರಿಗೆ ಗೌರವ ನೀಡುತ್ತದೆ, ವ್ಯಾಪಾರಸ್ಥರ ಸಬಲೀಕರಣ ಮಾಡುತ್ತದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. ಈ ಬಜೆಟ್ ನವ ಭಾರತದ ಗುರಿ ತಲುಪಲು ದೇಶದ 130 ಕೋಟಿ ಜನರಿಗೆ ಚೈತನ್ಯ ಕೊಡುತ್ತದೆ. ಇದೆಲ್ಲವೂ ಧನಾತ್ಮಕವಾಗಿದೆ, ಎಲ್ಲರ ಜೀವನವನ್ನೂ ತಟ್ಟುತ್ತಿದೆ ಮತ್ತು ಎಲ್ಲರನ್ನೂ ಒಳಗೊಂಡಿದೆ. ಇದು ಎಲ್ಲರ ಅಭಿವೃದ್ಧಿಗೆ ಸಮರ್ಪಿತವಾಗಿದೆ.

 

ಈ ಅದ್ಭುತ ಬಜೆಟ್ ನೀಡಿದ್ದಕ್ಕಾಗಿ ಮತ್ತೊಮ್ಮೆ ನನ್ನ ಗೆಳೆಯ ಅರುಣ್ ಜೇಟ್ಲಿ ಮತ್ತು ಪೀಯೂಶ್ ಗೋಯೆಲ್ ಮತ್ತು ಅವರ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು”



(Release ID: 1562406) Visitor Counter : 131