ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ಪ್ರಧಾನಮಂತ್ರಿ ಮಾತನಾಡಿದ ಭಾಷಣದ ಕನ್ನಡ ನಿರೂಪಣೆ..
Posted On:
16 DEC 2018 8:01PM by PIB Bengaluru
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ಪ್ರಧಾನಮಂತ್ರಿ ಮಾತನಾಡಿದ ಭಾಷಣದ ಕನ್ನಡ ನಿರೂಪಣೆ..
ವೇದಿಕೆಯಲ್ಲಿ ಉಪಸ್ಥಿತರಿರುವ ಉತ್ತರಪ್ರದೇಶದ ರಾಜ್ಯಪಾಲರು ಶ್ರೀ ರಾಮನಾಯ್ಕ್ ರವರೇ, ಪ್ರಖ್ಯಾತ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥನವರೇ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ ಮೌರ್ಯರವರೇ, ಉತ್ತರಪ್ರದೇಶದ ಸಂಪುಟ ಸದಸ್ಯರು ಹಾಗೂ ನನ್ನ ಸಹೋದ್ಯೋಗಿಗಳಾದ ಶ್ರೀ ಶ್ಯಾಮಚರಣ್ ಗುಪ್ತರವರೇ, ವಿನೋಧ್ ಕುಮಾರ್ ಸೋನಾಕರ್‌ರವರೇ ಮತ್ತು ವಿರೇಂದ್ರವರೇ , ಪ್ರಯಾಗರಾಜ್‌ನ ಮೇಯರ್ ಅಭಿಲಾಶ್ ಗುಪ್ತರವರೇ ಮತ್ತು ನನ್ನ ಸಹೋದರರೇ ಮತ್ತು ಸಹೋದರಿಯರೇ
ಪ್ರಾಚೀನ ಕಾಲದಿಂದಲೂ ಈ ನೆಲದ ಮಣ್ಣು ಸಾಧು ಸಂತರಲ್ಲಿರುವ ದೈವತ್ವವನ್ನ ಪ್ರತಿಫಲಿಸುತ್ತಲೇ ಬರುತ್ತಿದೆ. ಈ ಮಣ್ಣಿನ ಮೇಲೆ ಕಾಲಿಡಲು ಅವಕಾಶ ಪಡೆದುಕೊಳ್ಳುವ ಪ್ರತಿಯೊಬ್ಬನ ಮನಸ್ಸು ಹಾಗೂ ದೇಹ, ಕೂಡ ಪ್ರತಿಯೊಂದು ಕಡೆಯಿಂದಲೂ ವೈವಿದ್ಯಮಯವಾದ ಸ್ಫೂರ್ತಿಯನ್ನು ಪಡೆಯುತ್ತದೆ. ಪಾಪನಿವೇದನೆ ಮಾಡಿಕೊಳ್ಳುವಂತಹ ಪ್ರವಿತ್ರ ಸ್ಥಳವಾದ, ಮೌಲ್ಯ ಹಾಗೂ ಸಾಂಸ್ಕೃತಿ ಪ್ರದೇಶವಾದ ಪ್ರಯಾಗ್‌ರಾಜ್‌ನ ಜನರಿಗೆ ತಲೆಭಾಗಿ ವಂದಿಸುತ್ತೇನೆ.
ಯಾರೋ ಹೇಳಿದ ಮಾತಿದು को कहि सकहि प्रयाग प्रभाऊ। कलुष पुंज कुंजर मृगराऊ।।
ಈ ಮಾತಿನ ಅರ್ಥವಿಷ್ಟೆ, ಪ್ರಯಾಗರಾಜ್‌ನ ಶ್ರೇಷ್ಟತೆ ಹಾಗೂ ಪರಿಣಾಮಗಳನ್ನು ವಿಸ್ತರಿಸಿ ನುಡಿವುದು ಕಷ್ಟ. ದುಷ್ಟ ಆನೆಯನ್ನು ಕೊಂದ ಸಿಂಹಕ್ಕೆ ಇದನ್ನು ಹೋಲಿಸಲಾಗುತ್ತದೆ. ಸಮಕ್ತ ಸಂತುಷ್ಟತೆಯ ಆಗರವೂ ಆಗಿರುವ ಸಾಕ್ಷಾತ್ ಶ್ರೀರಾಮನಿಗೂ ಅತ್ಯುನ್ನತ ಪರಮಾನಂದವನ್ನು ನೀಡಿದಂತಹ ಪವಿತ್ರ ಸ್ಥಳವು ಈ ಪ್ರಯಾಗ್ ರಾಜ್
ಸಹೋದರರೇ ಹಾಗೂ ಸಹೋದರಿಯೇ
ಅರ್ಧಕುಂಭ ಮೇಳದ ಸುಸಂದರ್ಭದಲ್ಲಿ ಮುಂಚಿತವಾಗಿ ಈ ಸ್ಥಳಕ್ಕೆ ಭೇಟಿಕೊಟ್ಟಿರುವ ನಾನು ನಿಮಗೊಂದು ಸಿಹಿಸುದ್ದಿಯನ್ನು ಹೇಳಬಯಸುತ್ತೇನೆ. ಹಲವು ತಲೆಮಾರುಗಳಿಂದ ಕೋಟೆಯಲ್ಲಿ ಭದ್ರವಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ಎಟುಕದ ಅಕ್ಷಯಾವತ್ ಈ ಸಲದ ಕುಂಬಮೇಳದಲ್ಲಿ ಭಕ್ತರಿಗೆ ಸುಲಲಿತವಾಗಿ ದರ್ಶನಕ್ಕೆ ಸಿಗಲಿದೆ. ಪ್ರಯಾಗರಾಜ್‌ನ ತ್ರಿವೇಣಿಯಲ್ಲಿ ಸ್ನಾನ ಮಾಡಿದ ಪ್ರತಿಯೊಬ್ಬರಿಗೂ ಇದರ ದರ್ಶನ ಸಿಗಲಿದೆ.
ಅಷ್ಟೆಅಲ್ಲದೆ, ಅಕ್ಷಯಾವತ್‌ನ ಜೊತೆಜೊತೆಗೆ ಇಲ್ಲಿಗೆ ಬರುವ ಭಕ್ತರು ಸರಸ್ವತಿ ಕುಂಭದ ದರ್ಶನವನ್ನು ಪಡೆಯಬಹುದಾಗಿದೆ. ಕೆಲವು ಸಮಯದ ಹಿಂದೇ ನಾನಿಲ್ಲಿಗೆ ಅಕ್ಷಯಾವತ್‌ನ ದರ್ಶನ ಪಡೆಯುವ ಸಲುವಾಗಿ ಇಲ್ಲಿಗೆ ಬಂದಾಗ, ಇಲ್ಲಿಯ ಮರವೂ ನನಗೆ ಚೈತನ್ಯಮಯವಾದ ಚಟುವಟಿಕೆಯುಳ್ಳ ಜೀವನದ ಮೌಲ್ಯವನ್ನು ಪ್ರೇರಪಿಸಿತು. ಅದರ ಆಳವಾದ ಬೇರಿನ ಮೂಲತತ್ವದ ಮೂಲಕ ನಿರಂತರ ವಿಕಸನದ ಮೂಲಕ ಮರವೂ ನನಗೆ ಜೀವನಪ್ರೇರಣೆಯನ್ನು ನೀಡಿದೆ.
ಸ್ನೇಹಿತರೇ,
ಕೆಲವೂ ಕ್ಷಣಗಳ ಮೊದಲೂ, ಸರ್ವೋತ್ಕ್ರಷ್ಟ ಹಾಗೂ ಪ್ರಜ್ವಲಿತ ಪ್ರಯಾಗರಾಜ್‌ರನ್ನು ಇನ್ನಷ್ಟು ಅತ್ಯಾಕರ್ಷಕ ಹಾಗೂ ಆಧುನಿಕವಾಗಿ ಮಾರ್ಪಡುಗೊಳಿಸುವ ಸಲುವಾಗಿ ರೂ.೪೫೦೦ ಕೋಟಿ ರೂಪಾಯಿಗಳಷ್ಟು ಮೌಲ್ಯ ಉಳ್ಳಂತಹ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.ಹಾಗೂ ಹಲವು ಕಾಮಗಾರಿಗಳಿಗೆ ಶಿಲಾನ್ಯಾಸಮಾಡಲಾಗಿದೆ. ಈ ಅಭಿವೃದ್ಧಿ ಕಾಮಗಾರಿಗಳು ರಸ್ತೆ, ರೈಲ್ವೆ, ಸ್ಮಾರ್ಟ್ ಸಿಟಿ, ಗಂಗೆಯ ಸ್ವಚ್ಛತೆಯಂತಹ ಮಹತ್ಕಾರ್ಯಗಳನ್ನು ಒಳಗೊಂಡಿದೆ.
ಈ ಎಲ್ಲಾ ಯೋಜನೆಗಳು ಕೇವಲ ಕುಂಭಕ್ಕೇ ಉಪಯೋಗವಾಗಲಾರದು ಇದರಿಂದ ಕಲ್ಪವಾಸಿಗಳಿಗೂ ಅನುಕೂಲವಾಗಲಿವೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಮೂಲಕ ಈ ಭಾಗದ ಜನರ ಜೀವನಶೈಲಿಯನ್ನ ಮತ್ತು ಸುಲಭ ಸಂತುಲಿತಗೊಳಿಸುವ ನಿಟ್ಟಿಲ್ಲಿ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ನಿಮಗೆ ನಾನು ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ
ಸ್ನೇಹಿತರೇ,
ಸಂಪರ್ಕದಿಂದ ಹಿಡಿದು ಮೂಲಸೌಕರ್ಯದವರೆಗೂ ಕುಂಬಮೇಳ ನಡೆಯುವ ವಲಯದ ಪ್ರತಿಅಂಶಗಳ ಮೇಲೂ ಬಿಜೆಪಿ ಸರ್ಕಾರವೂ ವಿಶೇಷ ಗಮನವನ್ನು ನೆಟ್ಟಿದೆ. ಪ್ರಯಾಗರಾಜ್‌ರನ್ನು ಸಂಪರ್ಕಿಸುವ ಪ್ರತಿಯೊಂದು ಸಂಪರ್ಕವನ್ನು ನಾವು ಸಮೃದ್ಧ ಹಾಗೂ ಅಭಿವೃದ್ಧಿಗೊಳಿಸುತ್ತಿದ್ದೇವೆ. ಅದು ರೈಲ್ವೆ ಸಂಪರ್ಕ ಇರುಬಹುದು. ಅಥವಾ ವಿಮಾನಯಾನ ಸಂಪರ್ಕವೇ ಇರಬಹುದು ಅಥವಾ ರಸ್ತೆಸಾರಿಗೆಯೇ ಅಭಿವೃದ್ಧಿಯೇ ಇರಬಹುದು. ರೈಲ್ವೆ ಇಲಾಖೆ ಕುಂಭಮೇಳಕ್ಕಾಗಿಯೇ ವಿಶೇಷವಾಗಿ ಹಲವು ಟ್ರೈನ್‌ಗಳನ್ನ ಆರಂಭಿಸಿದೆ. ಅತಿದೊಡ್ಡ ಪ್ಲೈಓವರ್, ರೈಲ್ವೆ ಓವರ್ ಬ್ರಿಡ್ಜ್, ಅಂಡರ್ ಪಾಸ್, ಎಲೆಕ್ಟ್ರಿಸಿಟಿ, ಕುಡಿಯುವ ನೀರಿನ ಸೌಲಭ್ಯದಂತ ಯೋಜನೆಗಳನ್ನು ನಾನು ಉದ್ಘಾಟಿಸಿದ್ದು, ಇವುಗಳು ಈ ಪ್ರದೇಶದ ಮೂಲಸೌಕರ್ಯಗಳು ಹಾಗೂ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸನ್ನದ್ಧಗೊಳಿಸಲಿದೆ.
ಈ ಕಾರ್ಯಕ್ರಮದ ಬಳಿಕ ನಾನು ಪ್ರಯಾಗ್‌ರಾಜ್ ಏರ್‌ಪೋರ್ಟ್‌ನ ಹೊಸ ಟರ್ಮಿನಲ್‌ನ ಉದ್ಘಾಟನೆಗೆ ತೆರಳಲಿದ್ದೇನೆ. ಈ ಟರ್ಮಿನಲ್‌ನನ್ನು ಕೇವಲ ಒಂದೇ ವರ್ಷದಲ್ಲಿಯೇ ನಿರ್ಮಿಸಲಾಗಿದೆ ಎನ್ನುವುದು ದಾಖಲಾರ್ಹ. ಪ್ರಯಾಗ್‌ರಾಜ್‌ಗೆ ವಿವಿಧ ನಗರಗಳನ್ನು ಸಂಪರ್ಕಗೊಳಿಸುವ ಜೊತೆಜೊತೆಗೆ ಈ ಟರ್ಮಿನಲ್ ಇಲ್ಲಿ ನಾಗರಿಕರಿಗೆ ವಿಶೇಷವಾದ ಅನುಕೂಲ ನೀಡಲಿದೆ. ಇದಕ್ಕಾಗಿ ಪ್ರಯಾಗ್‌ರಾಜ್‌ನ ಜನರಿಗೆ ನಾನು ಮುಂಚಿತವಾಗಿಯೇ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ಸ್ನೇಹಿತರೇ,
ಅರ್ಧಕುಂಭ ಮೇಳದ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಈ ಯೋಜನೆಗಳು ಕೇವಲ ಈ ಕುಂಭಮೇಳಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ಭವಿಷ್ಯದಲ್ಲಿ ಈ ಪ್ರಯಾಗ ರಾಜ್‌ನ ಪ್ರತಿಯೊಬ್ಬರ ಬದುಕಿನ ಜೀವನ ಕ್ರಮಗಳ ಮೇಲೆ ಈ ಇವೆಲ್ಲವೂ ಸಕಾರಾತ್ಮಕ ಪರಿಣಾಮಗಳನ್ನು ಬೀರಲಿವೆ. ವಿಶೇಷ ಎಂದರೆ, ಈ ಸಲ ಕಲ್ಪಿಸಲಾಗಿರುವ ಸೌಲಭ್ಯವ್ಯವಸ್ಥೆಗಳು ಶಾಶ್ವತವಾಗಿರುವುದು ಎನ್ನುವುದು ವಿಶೇಷ. ಇಲ್ಲಿ ಕೈಗೊಂಡಿರುವ ಕೆಲಸಗಳು ತಾತ್ಕಾಲಿಕವಲ್ಲ. ನೂರು ಕೋಟಿ ವೆಚ್ಚದಲ್ಲಿ ಇಂಟ್ರಾಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ನ್ನು ಸ್ಥಾಪಿಸಲಾಗಿದ್ದು ಇದು ಪ್ರಯಾಗರಾಜ್‌ನ ಪ್ರಾಚಿನತೆ ಹಾಗೂ ಆಧುನಿಕತೆಯ ಸಮ್ಮಿಶ್ರಣದ ಸಂಕೇತವಾಗಲಿದೆ.
ಸಹೋದರರೇ ಮತ್ತು ಸಹೋದರಿಯರೇ
ಕುಂಭಮೇಳದ ಆಧ್ಯಾತ್ಮಿಕತೆಯಿಂದ ಹಿಡಿದು ತಂತ್ರಜ್ಞಾನದವರೆಗೂ ಪ್ರತಿಯೊಂದು ಅಂಶಗಳನ್ನು ಕೂಡ ಇಲ್ಲಿಗೆ ಬರುವ ವಿಶ್ವದ ವಿವಿಧ ಭಾಗದ ನಾಗಿಕರು ಪಡೆದುಕೊಳ್ಳಬೇಕು ಎನ್ನುವ ನಿರೀಕ್ಷೆಯಲ್ಲಿ ಬಿಜೆಪಿ ಸರ್ಕಾರವೂ ಕಾರ್ಯನಿರ್ಹಿಸುತ್ತಿದೆ.
ಇಲ್ಲಿ ಸೃಷ್ಟಿಮಾಡಲಾಗಿರುವ ಸೆಲ್ಫಿ ಪಾಯಿಂಟ್ ಇದೀಗ ಆಕರ್ಷಣೆಯ ಕೇಂದ್ರ ಬಿಂದು ಆಗಿ ಮಾರ್ಪಟ್ಟಿದೆ. ಈ ಕ್ಷಣಕ್ಕೂ ಕೆಲಹೊತ್ತಿನ ಮೊದಲೂ ನಾನೂ ಕೂಡ ದಿವ್ಯ ಕುಂಭ, ಭವ್ಯ ಕುಂಭ ಸೆಲ್ಫಿ ಪಾಯಿಂಟ್‌ಗಳಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡೆ.
ಸ್ನೇಹಿತರೇ,
ತ್ರಿವೇಣಿ ಸಂಗಮದವನ್ನು ಸಮೃದ್ಧಗೊಳಿಸದ ಹೊರತಾಗಿ ಅರ್ಧಕುಂಭವಾಗಲಿ ಸೆಲ್ಫಿಯಾಗಲಿ ಸಂಪೂರ್ಣಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಗಂಗಾಮಾತೆ ಶಕ್ತಿಯ ಮೂಲ. ಅಂತಹ ಶಕ್ತಿಯ ಮೂಲವನ್ನು ಸ್ಪಷ್ಟ ಹಾಗೂ ಸ್ವಚ್ಛಗೊಳಿಸಬೇಕಿದೆ. ಗಂಗೆಯ ಹರಿವಿಗೆ ಅಡೆತಡೆಗಳನ್ನು ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರು ಕ್ಷ್ಪಿಪ್ರ ಹಾಗೂ ತರ್ಕಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
ಇವತ್ತು ಅನುಷ್ಠಾನಗೊಳಿಸಲಾದ ಕೋಟಿ ಸಾವಿರ ಮೌಲ್ಯದ ಅಭಿವೃದ್ಧಿ ಯೋಜನೆಗಳ ಜೊತೆಯಲ್ಲಿ ಗಂಗೆಯನ್ನು ಸ್ವಚ್ಛಗೊಳಿಸುವ ಹಾಗೂ ಗಂಗಾತೀರವನ್ನು ಸುಂದರಗೊಳಿಸುವ ಯೋಜನೆಯು ಯಶಸ್ವಿಯಾಗಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ೧೭೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನ ಸ್ಥಾಪಿಸಲಾಗಿದ್ದು, ಇದು ವಿವಿಧ ನಗರಗಳಿಂದ ನೇರವಾಗಿ ಗಂಗೆಯನ್ನು ಸೇರುತ್ತಿರುವ ತ್ಯಾಜ್ಯಗಳನ್ನು ತಡೆಗಟ್ಟುತ್ತದೆ.ಅಷ್ಟೆಅಲ್ಲದೆ ಇದೇ ವೇಳೆ ೧೫೦ ಘಾಟ್‌ಗಳನ್ನು ಸುಂದರಗೊಳಿಸುವ ನಮಾಮಿ ಗಂಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.ಈ ಪೈಕಿ ೫೦ ಘಾಟ್ಗಳ ಕಾಮಗಾರಿ ಪೂರ್ಣಗೊಂಡಿದ್ದು, ಆರು ಘಾಟ್‌ಗಳನ್ನು ಉದ್ಘಾಟಿಸಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ
ಉತ್ತರಪ್ರದೇಶದ ಪ್ರಯಾಗ್‌ರಾಜ್ , ಕಾಶಿ , ಕಾನ್ಪುರ್ ಹಾಗೂ ಇತರೇ ನಗರಗಳು ಸೇರಿದಂತೆ ಗಂಗಾ ನದಿಯು ಆವರಿಸಿಕೊಂಡಿರುವ ಎಲ್ಲಾ ರಾಜ್ಯಗಳಲ್ಲೂ ಇದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನಮಾಮಿ ಗಂಗೆ ಯೋಜನೆಗೆ ೨೪೫೦೦ ಕೋಟಿ ರೂಪಾಯಿಗಳ ಅನುಧಾನವನ್ನು ನೀಡಲಾಗಿದೆ. ಐದುಸಾವಿರ ಕೋಟಿ ವೆಚ್ಚದ ೭೫ ಯೋಜನೆಗಳು ಪೂರ್ಣಗೊಂಡಿವೆ ಎನ್ನುವುದನ್ನ ತಿಳಿಸಲು ಬಯುಸುತ್ತೇನೆ. ಅಲ್ಲದೆ ಈ ಸಂಬಂಧಿತ ಸಾವಿರಾರು ಕೋಟಿಯ ವೆಚ್ಚದ ೧೫೦ ಯೋಜನೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿವೆ.
ಸ್ನೇಹಿತರೇ,
ಗಂಗೆಯನ್ನು ಸ್ವಚ್ಛ ಹಾಗೂ ಅಡೆತಡೆಯಿಲ್ಲದ ಹರಿವಿಗೆ ಒಳಪಡಿಸುವ ನಮ್ಮ ಅಗಾಧ ವಿಶ್ವಸನೀಯ ಪಾತ್ರದ ಹೊರತಾಗಿಯು, ಕೊಟ್ಯಂತರ ಗಂಗೆಯ ಸೇವಕರು ಹಾಗೂ ಸ್ವಚ್ಛಾಗ್ರಹಿಗಳ ಪಾತ್ರವೂ ಇಲ್ಲಿ ಪ್ರಮುಖವಾದದು. ಈ ಅಭಿಯಾನದೊಂದಿಗೆ ಸಮೂಹವೇ ಒಂದುಗೂಡುತ್ತಿದೆ. ಅಷ್ಟೆಅಲ್ಲದೇ, ಪ್ರತಿಯೊಬ್ಬರು ವೈಯಕ್ತಿಕ ನೆಲಗಟ್ಟಿನಲ್ಲಿ ಈ ಕಾರ್ಯವನ್ನು ಯಶಸ್ವಿಗೊಳ್ಳುತ್ತಿದ್ದಾರೆ. ಗಂಗೆಯ ಬಗೆಗಿನ ಜನರು ತೋರುತ್ತಿರುವ ಜವಾಬ್ದಾರಿ ಹಾಗೂ ಅವರ ಪಾಲ್ಗೊಳ್ಳುವಿಕೆ ನಮ್ಮ ಶ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ. ಪ್ರಸ್ತುತ ಗಂಗಾ ನದಿಯ ತಟದಲ್ಲಿರುವ ಬಹುತೇಕ ಎಲ್ಲಾ ಹಳ್ಳಿಗಳನ್ನು ಬಯಲು ಶೌಚ ಮುಕ್ತಪ್ರದೇಶ ಎಂದು ಘೋಷಿಸಲಾಗಿದೆ.
ಸಹೋದರರೇ ಹಾಗೂ ಸಹೋದರಿಯರೇ
ಶಾಸ್ತ್ರದಲ್ಲಿ ದೈವಭಕ್ತಿಗೂ ಸ್ವಚ್ಛತೆಗೂ ಸಂಬಂಧ ಕಲ್ಪಿಸಲಾಗಿದೆ. ಅಲ್ಲದೆ ಕುಂಭದ ಸಂದರ್ಭದಲ್ಲಿ ದೇವಾನುದೇವತೆಗಳು ಇಲ್ಲಿ ನೆಲೆಸುತ್ತಾರೆ ಎನ್ನುವ ಪ್ರತೀತಿ ಇದೆ. ಈ ನಿಟ್ಟಿನಲ್ಲಿ ಕುಂಭಕ್ಕೆ ಕಲ್ಪಿಸುವ ಯಾವೊಂದು ಸವಲತ್ತುಗಳಲ್ಲಿ ಲೋಪ ಕಾಣದು
ಇಲ್ಲಿಗೆ ಬರುವ ಮುಂಚೆ ನಾನು ಸ್ವಚ್ಛಕುಂಭ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದೆ. ಪೋರ್ಟಬಲ್ ಕಾಂಪಾಕ್ಟರ್‌ನಂತಹ ಸಾಧನಗಳ ಜೊತೆಗೆ ಇತರೇ ಆಧುನಿಕ ತಂತ್ರಜ್ಞಾನದ ಮೂಲಕ ಕುಂಭ ಮೇಳದ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಸಂಪೂರ್ಣ ವಿಶ್ವಾಸವನ್ನು ನಾನು ನಿಮಗೆ ನೀಡುತ್ತೇನೆ.
ಸ್ನೇಹಿತರೇ
ಅದ್ಭುತ , ಶ್ರೇಷ್ಟ ಹಾಗೂ ಆಧ್ಯಾತ್ಮಿಕವಾದಂತಹ ವ್ಯವಸ್ಥೆಗಳನ್ನು ಉತ್ತರಪ್ರದೇಶದ ಸರ್ಕಾರದ ಸಹಕಾರದೊಂದಿಗೆ ಕೈಗೊಳ್ಳಲು ಸರ್ಕಾರವೂ ಪ್ರಯತ್ನಿಸುತ್ತಿದೆ. ನಮ್ಮ ಸರ್ಕಾರವೂ ಈ ನಿಟ್ಟಿನಲ್ಲಿ ಭಾರತದ ಶ್ರೇಷ್ಠ ಇತಿಹಾಸ ಹಾಗೂ ಅದ್ಭುತ ಭವಿಷ್ಯದ ಮಿನುಗುನೋಟವನ್ನು ಇಲ್ಲಿ ಪ್ರದರ್ಶಿಸಲು ಕಟಿಬದ್ಧವಾಗಿದೆ.
ಈ ನಿಟ್ಟಿಲ್ಲಿ ಸರ್ಕಾರದ ಶ್ರಮಕಾರ್ಯದೊಂದಿಗೆ ಸಹಕಾರ ನೀಡಿದ ಪ್ರತಿಯೊಬ್ಬ ಪ್ರಯಾಗರಾಜ್‌ನ ನಿವಾಸಿಗೂ ಆಭಾರಿಯಾಗಿದ್ದೇನೆ. ನಿಮ್ಮದೇ ಮನೆಯ ಕೆಲಸವೇನೋ ಎಂಬಂತೆ ನೀವು ಶ್ರಮವಹಿಸಿದ್ದೀರಿ. ನಗರದಲ್ಲಿ ಸ್ವಚ್ಛತೆಯನ್ನ ಸೃಷ್ಟಿಸುವ ನಿಟ್ಟಿನಲ್ಲಿ ಸಕರಾತ್ಮಕ ವಾತಾವರಣವನ್ನು ಕಲ್ಪಿಸುವ ದಿಕ್ಕಿನೆಡೆಗೆ ನೀವು ಕಾರ್ಯನಿರ್ವಹಿಸಿದ್ದೀರಿ. ಈ ಸುಂದರ ನಗರವನ್ನು ಅಲಂಕರಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಹಾಕಲಾಗದ ಆಕರ್ಷಣೀಯ ಕಲಾಕೃತಿಗಳನ್ನು ನಾನು ನೋಡಿದ್ದೇನೆ. ಇಂತಹ ಕಲಾಕೃತಿಗಳ ಮೂಲಕ ಪ್ರಯಾಗ್‌ರಾಜ್ ಹಾಗೂ ಭಾರತವನ್ನ ತೋರಿಸುವ ಪ್ರಯತ್ನವೂ ಶ್ಲಾಘನೀಯ ಮತ್ತು ಈ ಪ್ರಯತ್ನಗಳು ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನಿಗೆ ಅನನ್ಯ ಅನುಭವಗಳನ್ನ ನೀಡುತ್ತದೆ.
ಸ್ನೇಹಿತರೇ,
ನಿಮ್ಮ ಪ್ರೀತಿಪಾತ್ರತೆಯನ್ನು ಪರಿಗಣಿಸಿ ಹಾಗೂ ನಿಮ್ಮ ಭಾವನೆಗಳನ್ನ ಅರ್ಥಮಾಡಿಕೊಂಡವನಾಗಿ ನಾನು ಇಡೀ ವಿಶ್ವದ ಜನರನ್ನು ಈ ಅರ್ಧಕುಂಭ ಮೇಳದ ಸಂದರ್ಭದಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನವನ್ನು ನೀಡುತ್ತೇನೆ. ಅಷ್ಟೆಅಲ್ಲದೇ ನಾನು ಕಳೆದ ೧-೧.೫ ವರ್ಷಗಳಲ್ಲಿ ಎಲ್ಲಿಗೆಲ್ಲಾ ಹೋಗಿದ್ದೇನೋ ಅಲ್ಲಿರುವ ಭಾರತೀಯರಿಗೆ ಒಂದು ಆಹ್ವಾನವನ್ನು ನೀಡುತ್ತಲೇ ಬಂದಿದ್ದೇನೆ. ನಿಮ್ಮ ವಿದೇಶಿ ಸ್ನೇಹಿತರ ಜೊತೆಜೊತೆಗೆ ಪ್ರಯಾಗ್‌ರಾಜ್‌ಗೆ ಬಂದು ಕುಂಭ ಮೇಳದಲ್ಲಿ ಪಾಲ್ಗೊಳ್ಳಿ ಅಂತಾ ವಿನಮ್ರ ಆಹ್ವಾನವನ್ನು ನೀಡಿದ್ದೇನೆ. ಅಲ್ಲದೇ ಸಾಂಸ್ಕೃತಿಕ ರಾಯಭಾರ ಕ್ಷೇತ್ರದೊಂದಿಗೆ ಬೆಸೆದುಕೊಳ್ಳಿ ಎಂದು ಮನವಿ ಮಾಡಿದ್ದೇನೆ. ಯಾಕೆಂದರೆ ಈಗ ನಾನು ಕೂಡ ಉತ್ತರಪ್ರದೇಶದವನು.
ನಿನ್ನೆ ನೀವಿಲ್ಲಿ ಸಂಗಮದ ಬಳಿಯಲ್ಲಿ ಎಪ್ಪತ್ತು ರಾಷ್ಟ್ರಗಳ ಧ್ವಜಗಳು ಹಾರುತ್ತಿರುವುದನ್ನು ನೋಡಿರಬಹುದು. ಆ ಎಲ್ಲಾ ೭೦ ರಾಷ್ಟ್ರಗಳ ರಾಜತಾಂತ್ರಿಕರು ಇಲ್ಲಿಯ ವಾತಾವರಣವನ್ನು ಆಹ್ಲಾದಿಸುತ್ತಿದ್ದಾರೆ. ಹಾಗೂ ಇಡೀ ಕುಂಭಮೇಳದ ಪ್ರದೇಶದ ತುಂಬೆಲ್ಲಾ ವಿಹರಿಸುತ್ತಿದ್ದಾರೆ. ಈ ಪ್ರಯತ್ನವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಂಭಮೇಳದ ಕುರಿತಾದ ಪ್ರಖ್ಯಾತಿಯನ್ನು ಉಜ್ವಲಗೊಳಿಸುತ್ತದೆ.
ಸ್ನೇಹಿತರೇ,
ಈ ಸಲ ವಿಶ್ವದ ಅತ್ಯಂತ ಪುರಾತನ ನಗರಗಳಾದ ಪ್ರಯಾಗ್‌ರಾಜ್ ಹಾಗೂ ಕಾಶಿಯಲ್ಲಿ ಎರಡೂ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿದೆ. ವಿಶ್ವದ ವಿವಿಧ ಭಾಗದ ಜನರು ಇಲ್ಲಿ ಅರ್ಧ ಕುಂಭಮೇಳದಲ್ಲಿ ಪಾಲ್ಗೊಳ್ಳಲುತ್ತಿದ್ದರೇ ಅತ್ತ ಕಾಶಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ವಿಶ್ವದೆಲ್ಲೆಡೆಯಿಂದ ಬರುವ ಅನಿವಾಸಿ ಭಾರತೀಯರು ಪಾಲ್ಗೊಳ್ಳಲಿದ್ದಾರೆ. ಅವರು ಈ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ ಅನ್ನೋದು ಸ್ವಾಭಾವಿಕ
ಸಹೋದರರೇ ಹಾಗೂ ಸಹೋದರಿಯರೇ
ಅರ್ಧಕುಂಭ ಎನ್ನುವುದು ಕೇವಲ ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಉತ್ಸವವಷ್ಟೆ ಅಲ್ಲಾ. ಬದಲಾಗಿ ಈ ಅರ್ಧಕುಂಭ ಮೇಳೆ ಅಭಿವೃದ್ಧಿಯ ಸಂಪರ್ಕದಲ್ಲಿ ಸಹಾಯ ಮಾಡುವ ಮೂಲಕ ದೇಶಕ್ಕೆ ಹೊಸ ದಿಕ್ಕನ್ನು ನೀಡಬಲ್ಲದು. ಕೋಟಿ ಕೋಟಿ ಜನರ ಭೇಟಿ ಮೂಲಕ ಕೋಟಿ ಕೋಟಿ ಯೋಚನೆಗಳು ಹೊರಹೊಮ್ಮುತ್ತವೆ. ಅದು ದೇಶವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಕಾರ್ಯಸಾಧುವಾಗಿದೆ.
ಭಾರತ ಹಾಗೂ ಭಾರತೀಯತೆಯ ಶ್ರೇಷ್ಠತೆಗೆ ಕುಂಭಮೇಳದ ಉತ್ಸವ ಜ್ವಲಂತ ಸಾಕ್ಷಿಯಾಗಿದೆ. ವಿವಿಧ ಸಂಪ್ರದಾಯ ಭಾ಼ಷೆಗಳನ್ನು ಮರೆತು ಎಲ್ಲರಲ್ಲಿ ಒಬ್ಬರಾಗುವ ಈ ಉತ್ಸವವೂ ಇನ್ನಿಲ್ಲದ ಪ್ರೇರೇಪಣೆ ನೀಡುತ್ತಿದೆ. ಅಷ್ಟೆಅಲ್ಲಾ ಈ ಉತ್ಸವ ನಗರಗಳನ್ನು ಹಳ್ಳಿಗಳನ್ನು ಒಂದುಗೂಡಿಸುತ್ತಿದ್ದು. ಇಲ್ಲಿ ಏಕ ಭಾರತ ಶ್ರೇಷ್ಠ ಭಾರತವನ್ನು ಯಾರಾದರೂ ಸಹ ಕಣ್ತುಂಬಿಕೊಳ್ಳಬಹುದಾಗಿದೆ.ಈ ನಿಟ್ಟಿನಲ್ಲಿ ಇಲ್ಲಿಗೆ ಬರುವ ಅತಿಥಿಗಳನ್ನು ವಿಶೇಷ ಕಾಳಜಿಯಿಂದ ಸತ್ಕರಿಸುವುದು ನಮ್ಮ ಜವಾಬ್ದಾರಿ. ಈ ಕಾರ್ಯಕ್ರಮವೂ ಕೇವಲ ಧಾರ್ಮಿಕವಾಗಿ ಉಳಿದಿಲ್ಲ. ಬದಲಾಗಿ ಇದು ಭಾರತದ ಪ್ರತಿಷ್ಠೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿಂದ ಪ್ರತಿಯೊಬ್ಬ ಭಾರತೀಯನ ದೇಶದ ಹೊಸದೊಂದು ದೃಷ್ಠಿಕೋನವನ್ನು ತನ್ನೊಂದಿಗೆ ಕೊಂಡೊಯ್ಯಬೇಕು ಎನ್ನುವುದನ್ನು ನಾವುಗಳು ಖಾತರಿಗೊಳಿಸುವ ಅಗತ್ಯವಿದೆ.
ಈ ಕುಂಭಮೇಳದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿನ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಲು ಬರ್ತಿದ್ದಾರೆ. ವಿಶ್ವದ ಅತಿದೊಡ್ಡ ಮ್ಯಾನೇಜ್‌ಮೆಂಟ್ ಯೂನಿವರ್ಸಿಟಿಯು ಈ ಕಾರ್ಯಕ್ರಮದ ವೈವಿಧ್ಯತೆ, ವಿಸ್ತಾರತೆ ಹಾಗೂ ಯಶಸ್ಸಿನ ನಿರ್ವಹಣೆಯ ಟ್ರಿಕ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಿದೆ.
ಸ್ಬೇಹಿತರೇ,
ಭಾರತವೂ ಸಾಂಸ್ಕೃತಿಕ ಪರಂಪರೆ ಹಾಗೂ ತನ್ನ ಜ್ಞಾನ ಭಂಡಾರದಿಂದಲೇ ಗುರುತಿಸಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಸಂತರು ಈ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.ಕಳೆದ ನಾಲ್ಕು, ನಾಲ್ಕುವರೇ ವರ್ಷಗಳಲ್ಲಿ ಸರ್ಕಾರವೂ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ದೇಶದ ಶಕ್ತಿಯ ಪರಿಣಾಮಗಳನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಅವಿರತ ಶ್ರಮವನ್ನು ಹಾಕುತ್ತಿದೆ.
ಸ್ನೇಹಿತರೇ
ಈ ಸಂದರ್ಭದಲ್ಲಿ ಈ ಪವಿತ್ರ ನೆಲದಲ್ಲಿ ಪ್ರಯಾಗ್‌ರಾಜ್‌ಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಷ್ಯವನ್ನು ಪ್ರಸ್ತಾಪಿಸಲು ಬಯುಸುತ್ತೇನೆ. ಉತ್ತರಪ್ರದೇಶದಲ್ಲಿ ಪ್ರಯಾಗ್‌ರಾಜ್‌ನ್ನು ನ್ಯಾಯದ ದೇವಸ್ಥಾನ ಎಂದು ಕರೆಯುತ್ತಾರೆ. ಕೆಲಸಮಯದಿಂದ ನ್ಯಾಯ ವ್ಯವಸ್ಥೆಯ ಮೇಲೆ ಈ ಸಂಬಂಧ ವಿಶೇಷ ಒತ್ತಡಗಳನ್ನು ಸೃಷ್ಟಿಯಾಗಿವೆ. ಈ ನಿಟ್ಟಿನಲ್ಲಿ ದೇಶದ ಜನರು ಹಾಗೂ ಯುವಜನತೆಯು ಈ ಸಂಬಂಧ ಹೆಚ್ಚು ಕುತೂಹಲವನ್ನು ಹೊಂದುವಂತೆ ಮಾಡುವುದು ಸಮಂಜಸವಾದ ಕಾರ್ಯವಾಗಿದೆ.
ಸ್ನೇಹಿತರೇ,
ಈ ದೇಶದಲ್ಲಿ ಸುದೀರ್ಘವಾಗಿ ಆಡಳಿತವನ್ನು ನಡೆಸಿದ ಪಕ್ಷವೊಂದು ಕಾನೂನಿಗಿಂತ, ಆಡಳಿತ ಸಂಸ್ಥೆಗಳಿಗಿಂತ, ಅಷ್ಟೆಯಾಕೆ ದೇಶಕ್ಕಿಂತ ತಮ್ಮನ್ನೇ ಶ್ರೇಷ್ಟ ಅಂತಾ ಭಾವಿಸಿದೆ. ಆ ಪಕ್ಷವೂ ಪ್ರತಿಯೊಂದು ಸಂಸ್ಥೆಯನ್ನು ನಾಶಮಾಡಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಕೂಡ ಆ ಪಕ್ಷವೂ ರೀತಿ ನೀತಿ ನಿಯಮಗಳ ಪ್ರಕಾರ ಕೆಲಸ ಮಾಡೋದಕ್ಕೆ ಅವಕಾಶವೇ ಕೊಡಲಿಲ್ಲ.
ಸಹೋದರರೇ ಸಹೋದರಿಯರೇ
ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಈ ನಿರಂತರ ಅನಿಯಂತ್ರಿತ ಪ್ರಯತ್ನಗಳು ದುರ್ಬಳಗೊಳಿಸಿದ್ದವು. ಇದಕ್ಕೆ ಕಾರಣ ನ್ಯಾಯಾಂಗ ವ್ಯವಸ್ಥೆಯು ಆ ಪಕ್ಷದ ಭ್ರಷ್ಟಾಚಾರ ಹಾಗೂ ಸರ್ವಾಧಿಕಾರಿ ಧೋರಣೆಗೆ ವಿರುದ್ಧವಾಗಿ ನಿಂತಿದ್ದ ಸಂಸ್ಥೆಗಳಲ್ಲಿ ಒಂದಾಗಿದೆ ಎನ್ನುವುದು. ಯಾಕೆ ಕಾಂಗ್ರೆಸ್ ನ್ಯಾಯಾಂಗ ವ್ಯವಸ್ಥೆಯನ್ನು ಇಷ್ಟಪಡುವುದಿಲ್ಲ ಎನ್ನುವುದು ಯುಪಿ ಹಾಗೂ ಪ್ರಯಾಗ್‌ರಾಜ್‌ನ ಜನರಿಗಿಂತ ಇನ್ಯಾರಿಗೆ ತಾನೇ ಸ್ಪಷ್ಟವಾಗಿ ತಿಳಿಯೋಕೆ ಸಾಧ್ಯ. ಉತ್ತರಪ್ರದೇಶದ ಮಂದಿ ಆ ಪಕ್ಷದ ಪ್ರಮುಖ ನಾಯಕರು ಸಾರ್ವಜನಿಕರ ಅಭಿಪ್ರಾಯಕ್ಕೆ ಅಗೌರವ ತೋರಿದ ದಿನಗಳನ್ನು ನೆನಪಿಸಿಕೊಳ್ಳಬೇಕು. ಅದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಅಲ್ಲವೇ
ಸ್ನೇಹಿತರೇ,
ಪ್ರಯಾಗ್‌ರಾಜ್‌ನ ಹೈಕೋರ್ಟ್ ಸಂವಿಧಾನಿಕವಾಗಿ ಸತ್ಯವನ್ನು ಎತ್ತಿಹಿಡಿದು ಸಂಸತ್‌ನಲ್ಲಿ ಅವರ ಸ್ಥಾನದಿಂದ ಹೊರಹಾಕಿ ಆದೇಶವನ್ನು ಹೊರಡಿಸಿದ್ದಾಗ, ಅವರು ಪ್ರಜಾಪ್ರಭುತ್ವವನ್ನೇ ಮುಗಿಸುವ ಮಾರ್ಗಕ್ಕೆ ಕೈ ಹಾಕಿ ದೇಶದಲ್ಲಿ ತುರ್ತುಪರಿಸ್ಥಿತಿಯನ್ನುಘೋಷಿಸಿದ್ದ ಘಟನೆಯನ್ನು ಯಾರು ಕೂಡ ಮರೆಯಲು ಸಾಧ್ಯವೇ ಇಲ್ಲ. ಅಷ್ಟೆ ಅಲ್ಲ ಅವರು ದೇಶದ ಸಂವಿಧಾನವನ್ನು ಮಾರ್ಪಾಡು ಮಾಡಿದ್ರು. ಅಲ್ಲದೇ ಚುನಾವಣಾ ಸಂಬಂಧಿತ ಅರ್ಜಿಗಳನ್ನು ನ್ಯಾಯಾಂಗ ವ್ಯವಸ್ಥೆಯು ವಿಚಾರಣೆ ನಡೆಸುವ ಹಕ್ಕನ್ನೇ ಕಿತ್ತುಕೊಳ್ಳುವಂತಹ ಪ್ರಯತ್ನಗಳು ಕೂಡ ನಡೆದವು.
ಸ್ನೇಹಿತರೇ
ಇದು ಕಾಂಗ್ರೆಸ್ ನಾಯಕರ ಪ್ರವೃತ್ತಿಯಾಗಿದೆ. ಈ ಪ್ರವೃತ್ತಿಯಿಂದಾಗಿ ಸಾಂವಿಧಾನಿಕ ಸಂಸ್ಥೆಗಳು ಆ ಪಕ್ಷದ ಮುಂದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿಗಳು ನಿರ್ಮಾಣವಾದವು. ಅವರು ತಮಗೆ ನಿಷ್ಟರಾಗದವರನ್ನೇಲ್ಲಾ ಮುಗಿಸುವ ಪ್ರಯತ್ನಕ್ಕೆ ಕೈಹಾಕಿದರು. ತಟಸ್ಥ ಸಂಸ್ಥೆಗಳನ್ನು ನಾಶಕ್ಕೆ ಪ್ರೇರಪಣೆ ಕೊಡುತ್ತೆ ಆ ಪಕ್ಷದ ಊಳಿಗಮಾನ್ಯ ಮತ್ತು ರಾಜಪ್ರಭುತ್ವದ ಮನಸ್ಥಿತಿ. ಕೇವಲ ತೋಳ್ಬಲವಷ್ಟೆ ಅಲ್ಲದೇ ಕುತಂತ್ರದ ಮೂಲಕವೂ ಕೂಡ ಆ ಪಕ್ಷವೂ ನ್ಯಾಯಧಾನ ವ್ಯವಸ್ಥೆಯ ಗೌರವದ ಮೂಲಬೇರನ್ನೇ ಬುಡಮೇಲು ಮಾಡುವಂತ ಪ್ರಯತ್ನ ನಡೆಸಿತು. ಈ ನಿಟ್ಟಿನಲ್ಲಿ ಆ ಪಕ್ಷವೂ ವಂಚನೆ, ಕಪಟ,ಶೋಷಣೆ, ಸುಳ್ಳುಬರುಕತನದ ಯಾವ ಪರಿಮಿತಿಗೂ ಸಿಗದೇ ಎಲ್ಲಾ ಪರಿಮಿತಿಯನ್ನು ದಾಟಿ ತನ್ನ ದುರುದ್ದೇಶವನ್ನು ಈಡೇರಿಸಿಕೊಳ್ಳಲು ಮುಂದಾಗಿತ್ತು. ನ್ಯಾಯದಾನ ವ್ಯವಸ್ಥೆಗೆ ಅನ್ವಯಿಸಿದಂತೆ ಆ ಪಕ್ಷದ ಸಂಪ್ರದಾಯ ಹೇಗಿದೆ ಅಂದರೆ, ಅಧಿಕಾರದಲ್ಲಿದ್ದಾಗ ಆ ಪಕ್ಷವೂ ಪ್ರತಿಯೊಂದನ್ನು ಅನಿಶ್ಚಿತತೆಯಲ್ಲಿ ಇಡುತ್ತದೆ. ಅದೇ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಯೊಂದರ ವಿರುದ್ಧವೂ ಜಗಳಕ್ಕೆ ನಿಲ್ಲುತ್ತದೆ.
ಸ್ನೇಹಿತರೇ,
ಸ್ನೇಹಿತರೇ ನಾನು ನಿಮಗೆ ದೇಶದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಕೇಶವಾನಂದ ಭಾರತಿ ಪ್ರಕರಣವನ್ನು ನೆನಪಿಸಬಯುಸುತ್ತೇನೆ. ಯಾವಾಗ ಪ್ರಕರಣದ ತೀರ್ಪನ್ನು ನೀಡಬೇಕಾದ ಜಡ್ಜ್ ಯಾವುದೇ ಒತ್ತಡಕ್ಕೆ ಮಣಿಯದೇ ಇದ್ದಾಗ ಆ ಪಕ್ಷದವರು ನ್ಯಾಯದಾನದ ಸಂಪ್ರದಾಯವನ್ನ ಬುಡಮೇಲು ಮಾಡಲು ಹೊರಟಿತು. ಮುಖ್ಯನ್ಯಾಯಮೂರ್ತಿಯನ್ನಾಗಿ ಹಿರಿಯ ನ್ಯಾಯಮೂರ್ತಿಗಳನ್ನ ನೇಮಿಸುವ ಬದಲು, ಸೀನಿಯಾರಿಟಿ ಪಟ್ಟಿಯಲ್ಲಿ ಮೂರನೇ ನ್ಯಾಯಮೂರ್ತಿಯನ್ನು ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಆಯ್ಕೆ ಮಾಡಿತು. ಇದು ನ್ಯಾಯದಾನ ವ್ಯವಸ್ಥೆಯ ಮೇಲೆ ಹೇಗೆ ಆ ಪಕ್ಷವೂ ಒತ್ತಡವನ್ನು ಹೇರುತ್ತದೆ ಎನ್ನುವುದಕ್ಕೆ ಸಾಕ್ಷಿ. ಯಾವಾಗ ಜಸ್ಟೀಸ್ ಖನ್ನಾ ತುರ್ತುಪರಿಸ್ಥಿತಿಯನ್ನು ಹೇರುವಂತಹ ಆ ಪಕ್ಷದ ನಿರ್ಧಾರಕ್ಕೆ ಸಮ್ಮತಿಯನ್ನು ಸೂಚಿಸಲಿಲ್ಲವೋ ಅವರ ವಿರುದ್ಧ ಇಂತಹುದ್ದೇ ಕ್ರಮವನ್ನು ಕೈಗೊಳ್ಳಲಾಗಿತ್ತು. ಅವರ ಸೇವಾಹಿರಿತನವನ್ನು ನಿರ್ಲಕ್ಷ್ಯಿಸಲಾಯ್ತು..
ಸಹೋದರ ಸಹೋದರಿಯರೇ
ಅವರು ಈ ದೇಶದ ಒಳಿತನ್ನಾಗಲಿ, ಪ್ರಜಾಪ್ರಭುತ್ವದ ಆಶಯವನ್ನ ಉಳಿಸುವ ಉದ್ದೇಶವನ್ನ ಉಳಿಸುವ ಕಾಳಜಿಯಾಗಲಿ ಯಾವತ್ತಿಗೂ ಹೊಂದಿಲ್ಲ. ಅಷ್ಟೆಯಾಕೆ ಸಂಪ್ರದಾಯ ಅಥವಾ ಕಾನೂನಿಗೆ ಯಾವುದೇ ಮನ್ನಣೆಯನ್ನು ಕೂಡ ನೀಡುವುದಿಲ್ಲ. ನಮ್ಮ ನಿರ್ದೇಶನಗಳಿಗೆ ತಕ್ಕಂತೆ, ನಮ್ಮ ದೃಷ್ಠಿಕೋನಗಳಿಗೆ ಪೂರಕವಾಗಿ, ನಮ್ಮ ಸಿದ್ಧಾಂತಗಳನ್ನು ಪರಿಗಣಿಸುವ ವ್ಯಕ್ತಿಯನ್ನಷ್ಟೆ ನಾವು ಮುಖ್ಯ ನ್ಯಾಯಮೂರ್ತಿಯನ್ನು ಯಾಗಿ ಆಯ್ಕೆಯಾಗಲು ಅವಕಾಶ ಕಲ್ಪಿಸುತ್ತೇವೆ ಅಂತಾ ಹೇಳಿದ್ದರು ಆ ಪಕ್ಷದ ಮುಖಂಡರೊಬ್ಬರು. ಅದು ಆಗ ವಾರ್ತಾಪತ್ರಿಕೆಗಳಲ್ಲಿ ಹೆಡ್‌ಲೈನ್ ಕೂಡ ಆಗಿತ್ತು.
ಸ್ನೇಹಿತರೇ,
ದೇಶದ ಸಾರ್ವಭೌಮತ್ವವನ್ನು ಪ್ರತಿನಿಧಿಸುವ ಸಂವಿಧಾನದ ನೆಲಗಟ್ಟಿನಲ್ಲಿ ನಮ್ಮ ನ್ಯಾಯದಾನದ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ.
ಆದರೆ ದೇಶವೂ ಈ ರಾಜಕೀಯ ಪಕ್ಷವೂ ತನ್ನ ಅಧಿಕಾರ, ದ್ವೇಷ ಸೇರಿದಂತೆ ಪ್ರತಿಯೊಂದು ಅಂಶಗಳ ಮೂಲಕವೂ ಹೇಗೆಲ್ಲಾ ನ್ಯಾಯದಾನ ವ್ಯವಸ್ಥೆಯನ್ನು ತನ್ನ ಇಚ್ಛಾಶಕ್ತಿಯ ಎದುರು ಮಣಿಯುವಂತೆ ಮಾಡಿದೆ ಎನ್ನುವದಕ್ಕೆ ಸಾಕ್ಷಿಯಾಗಿದೆ. ದಾರಿತಪ್ಪಿಸುವುದು, ಜಗಳಕ್ಕೆ ಇಳಿಯುವುದು, ಬಹಿಷ್ಕರಿಸುವುದು ಇತ್ಯಾದಿಗಳಂತಹ ಹಲವು ದಾರಿಗಳನ್ನು ಈ ರಾಜಕೀಯ ಪಕ್ಷವೂ ತನ್ನ ಕಾರ್ಯಸಾಧನೆಗಾಗಿ ಬಳಸಿಕೊಳ್ಳುತ್ತಿದೆ.
ಇತ್ತೀಚಗಷ್ಟೆ ನಾವು ಆ ಪಕ್ಷವೂ ದೇಶದ ಸರ್ವೋಚ್ಛ ನ್ಯಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹಾಭಿಯೋಗ ಮಂಡನೆ ಮುಂದಾಗಿತ್ತು ಎನ್ನುವುದುನ್ನು ಗಮನಿಸಿದ್ದೇವೆ. ಈ ಮೂಲಕ ಆತಂಕ ಹಾಗೂ ಕಿರುಕುಳವನ್ನು ನೀಡುವುದು ಆ ಪಕ್ಷದ ಬಹಳ ಹಳೇಯ ಮನಸ್ಥಿತಿಯಾಗಿದೆ.
ಮುಖಂಡರೊಬ್ಬರ ವಿಚಾರಣೆಯ ಸಂದರ್ಭ, ಜಡ್ಜ್‌ಗೆ ನಿಮ್ಮ ಪತ್ನಿಯು ಕರ್ವಾಚೌತ್‌ನ್ನು ಆಚರಿಸೋದನ್ನು ನೀವು ಬಯಸುವುದಿಲ್ಲವೇ ಎಂದು ಕೇಳಲಾಗಿತ್ತು. ಅದು ಕಿರುಕುಳ ಅಲ್ಲವಾ?
ಸಹೋದರ ಸಹೋದರಿಯರೇ
ಪ್ರತಿಯೊಂದು ವ್ಯವಸ್ಥೆಯನ್ನು ನಾಶ ಮಾಡಿದ ಬಳಿಕ ಇದೀಗ ಆ ಪಕ್ಷದ ಮಂದಿ ಪ್ರಜಾಪ್ರಭುತ್ವಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅವರ ಸ್ವಭಾವ ಅವರ ಷಡ್ಯಂತ್ರಗಳು ಮತ್ತೆ ಮತ್ತೆ ಅವರು ಈ ದೇಶಕ್ಕಿಂತ, ಪ್ರಜಾಪ್ರಭುತ್ವಕ್ಕಿಂತ, ನ್ಯಾಯಾಂಗಕ್ಕಿಂತ, ಅಷ್ಟೆಯಾಕೆ ಈ ದೇಶದ ಜನತೆಗಿಂತ ತಾವೇ ದೊಡ್ಡವರು ಎನ್ನುವ ಅವರ ಮನಸ್ಥಿತಿಯನ್ನು ಸಾರಿ ಸಾರಿ ಹೇಳುತ್ತಿದೆ. ಹಾಗಾಗಿ ನಾನು ಹೇಳುವುದು ಇಷ್ಟೆ ಆ ಪಕ್ಷ ಹಾಗೂ ಅದರ ಸದಸ್ಯರ ಬಗ್ಗೆ ಎಚ್ಚರದಿಂದಿರಿ..
ಸಹೋದರ ಸಹೋದರಿಯರೇ
ಈ ಹಿಂದಿಗಿಂತಲೂ ಹೆಚ್ಚು ಮಸಿ ಈಗಿನ ಕಾಂಗ್ರೆಸ್‌ನ ಮುಖದ ಮೇಲಿದೆ. ಅಧಿಕಾರದ ಲಾಲಸೆ ಹಾಗೂ ಸ್ವಾರ್ಥ ಸಾಧನೆಯಲ್ಲಿ ಮುಳುಗಿರೋ ಈ ಜನರು ದೇಶದ ಜನರ ಬಗ್ಗೆಯಾಗಲಿ ಅಥವಾ ಈ ದೇಶದ ಬಗ್ಗೆಯಾಗಲಿ ಅಷ್ಟೆಯಾಕೆ ಈ ದೇಶದ ಸಾಂಸ್ಕೃತಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಲಿ ಕಿಂಚಿತ್ತು ಕೂಡ ಕಾಳಜಿಯನ್ನು ತೋರಿಸುವುದಿಲ್ಲ. ನಮಗೆ ಈ ದೇಶ, ಇದರ ಅಭ್ಯುದಯ, ವೈಭವ, ಆದ್ಯಾತಿಕ ಅಭಿವೃದ್ಧಿಯು ಪ್ರತಿ ಯೋಚನೆಯಲ್ಲೂ ಮೂಡುತ್ತಿದ್ದರೇ ಆ ಪಕ್ಷದಲ್ಲಿ ಈ ದೇಶದ ಸಂಸ್ಕೃತಿ ಅಪರೂಪಕ್ಕೆ ಎಂಬಂತೆ ಚಿಂತನೆಗೆ ಬರುತ್ತದೆ.
ನಮ್ಮ ಚಿಂತನೆಗಳು ಹಾಗೂ ಅದರ ಮೌಲ್ಯಗಳಿಗೆ ಅನುಗುಣವಾಗಿ ಪ್ರಸಾದ್ ಯೋಜನೆಯಡಿಯಲ್ಲಿ ದೈವಿಕ ಹಾಗೂ ಆಧ್ಯಾತ್ಮಿಕತೆಯನ್ನು ಹೊಂದಿರುವ ಯುಪಿ ಸೇರಿದಂತೆ ಹಲವು ಪ್ರದೇಶಗಳನ್ನು ಒಳಪಡಿಸಲಾಗಿದೆ. ಪ್ರಯಾಗ್‌ರಾಜ್, ಕಾಶಿ, ಅಯೋಧ್ಯೆ, ಬೃಂದಾವನ, ಕೇದಾರನಾಥ, ಕಾಮಾಕ್ಯ, ಮತ್ತು ಶಬರಿಮಲೆ ಸೇರಿದಂತೆ ಇತರೇ ಪ್ರದೇಶಗಳಲ್ಲಿ ಅಗತ್ಯ ಸೌಲ್ಯಗಳನ್ನು ಕಲ್ಪಿಸಿ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ಈ ಪ್ರದೇಶಗಳು ಇನ್ನುಷ್ಟು ಅದ್ಭುತ ಹಾಗೂ ರೋಮಾಂಚಕ ಪ್ರದೇಶಗಳಾಗಿ ಮಾರ್ಪಾಡಾಗುತ್ತಿವೆ.
ಸಹೋದರ ಸಹೋದರಿಯರೇ
ನೀವು ಈ ಅರ್ಧಕುಂಭ ಮೇಳದಲ್ಲಿ ಆಧುನಿಕತೆ ಮತ್ತು ಪ್ರಾಚೀನತೆಯ ಸಮ್ಮಿಶ್ರಣದ ರೂಪದಲ್ಲಿ ನವಭಾರತ ಹೇಗೆ ಉದಯಿಸುತ್ತಿದೆ ಎನ್ನುವುದನ್ನು ಹಾಗೂ ಭಾರತದ ಪ್ರಕಾಶಮಾನ ಬದಲಾವಣೆಯ ಮಿನುಗು ನೋಟವನ್ನು ನೀವು ಪ್ರತ್ಯಕ್ಷವಾಗಿ ನೋಡುವಿರಿ.
ಆಧ್ಯಾತ್ಮಿಕತೆಯೊಂದಿಗೆ ಮಿಳಿತಗೊಂಡಿರುವ ಆಧುನಿಕತೆಯ, ಆಚರಣೆಯ ಬುನಾಧಿಯ ಮೇಲಿನ ಅಭಿವೃದ್ಧಿ ಕಂಡಿರುವ ಹಾಗೂ ನಂಬಿಕೆಯ ವಿಶ್ವಾಸದಲ್ಲಿ ಹೊರಹೊಮ್ಮಿರುವ ಕುಂಭವನ್ನು ಯಶಸ್ವಿಗೊಳಿಸಿ ಎಂದು ಪ್ರಯಾಗ್‌ನ ಜನರಲ್ಲಿ ವಿನಮ್ರವಾಗಿ ಮನವಿಯನ್ನು ಮಾಡಿಕೊಳ್ಳುತ್ತೇನೆ.
ಈ ಕುಂಭಮೇಳಕ್ಕೆ ಸಂಬಂಧಿಸಿದಂತೆ ಸರ್ಕಾರವೂ ತನ್ನದೇ ಆದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದೆ. ಆದರೆ ಸರ್ಕಾರದ ಶ್ರಮದಿಂದ ಮಾತ್ರ ಈ ಕುಂಭ ಮೇಳೆ ಯಶಸ್ವಿಯಾಗೋದಕ್ಕೆ ಸಾಧ್ಯವಿಲ್ಲ. ನಾನು, ಯೋಗಿಯವರು ಮತ್ತು ನಮ್ಮೆಲ್ಲಾ ಸಿಬ್ಬಂದಿ ನಿಮ್ಮೊಂದಿಗೆ ಕೈ-ಕೈ ಮಿಲಾಯಿಸಿ ಈ ಸಲ ಕುಂಭಮೇಳವನ್ನು ಯಶಸ್ವಿಯಾಗಿ ಕಟ್ಟಿಕೊಡೋಣ. ಈ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಪ್ರಯಾಗ್‌ರಾಜ್‌ನ ಎಲ್ಲಾ ನಾಗರಿಕರಿಗೆ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಕಾರಣಕ್ಕಾಗಿ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.
ಜೈ ಗಂಗಾ ಮಾಯಿ-ಜೈ
ಜೈ ಯುಮುನಾ ಮಾಯಿ-ಜೈ
ಜೈ ಸರಸ್ವತಿ ಮಾಯಿ-ಜೈ
ಜೈ ತೀರ್ಥರಾಜ್—ಜೈ ತೀರ್ಥರಾಜ್!
ಜೈ ತೀರ್ಥರಾಜ್—ಜೈ ತೀರ್ಥರಾಜ್!
ಭಾರತ ಮಾತೆಗೆ ಜಯವಾಗಲಿ
ಭಾರತ ಮಾತೆಗೆ ಜಯವಾಗಲಿ
ಭಾರತ ಮಾತೆಗೆ ಜಯವಾಗಲಿ
ಧನ್ಯವಾದಗಳು…
(Release ID: 1561752)
Visitor Counter : 87