ಪ್ರಧಾನ ಮಂತ್ರಿಯವರ ಕಛೇರಿ

ಇಂದೋರ್ ನಲ್ಲಿ ನಡೆದ ಅಶಾರಾ ಮುಬಾರಕಾ (ಹುತಾತ್ಮರ ಸ್ಮರಣೆ) ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ

Posted On: 14 SEP 2018 6:32PM by PIB Bengaluru

ಇಂದೋರ್ ನಲ್ಲಿ ನಡೆದ ಅಶಾರಾ ಮುಬಾರಕಾ (ಹುತಾತ್ಮರ ಸ್ಮರಣೆ) ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ

 

ಪರಮಪೂಜ್ಯ ಡಾ.ಸೈದ್ನಾ ಮುಫದ್ದಾಲ್ ಸೈಫುದ್ದೀನ್ ಅವರೇ, ಮಧ್ಯಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರೇ, ಮತ್ತು ಇಂದು ಇಲ್ಲಿ ಉಪಸ್ಥಿತರಿರುವ ನನ್ನ ದಾವೂದಿ ಬೋಹ್ರಾ ಪರಿವಾರದ ಸದಸ್ಯರೇ,

 

ನಿಮ್ಮೆಲ್ಲರ ಮಧ್ಯೆ ಇಂದು ಇರುವುದು ನನ್ನ ಪಾಲಿಗೊಂದು ಸ್ಫೂರ್ತಿದಾಯಕವಾದ ಸಂದರ್ಭವಾಗಿದ್ದು, ನನಗಿದು ಹೊಸ ಅನುಭವವೂ ಆಗಿದೆ.

ಅಶಾರಾ ಮುಬಾರಾಕಾದಂತಹ ಇಂಥ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನನಗೆ ನೀಡಿದ್ದಕ್ಕಾಗಿ, ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.

ತಂತ್ರಜ್ಞಾನದ ಸಹಾಯದಿಂದಾಗಿ, ಜಗತ್ತಿನ ನಾನಾ ದೇಶಗಳ ಮತ್ತು ಕೇಂದ್ರಗಳಲ್ಲಿರುವ ನಮ್ಮ ಸಮಾಜದ ಜನರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನನಗೆ ತಿಳಿಸಲಾಯಿತು. ದೂರದೂರದ ಊರುಗಳಲ್ಲಿದ್ದರೂ ತಂತ್ರಜ್ಞಾನದ ಮುಖೇಣ ನಮ್ಮೊಂದಿಗೆ ಸಂಪರ್ಕದಲ್ಲಿ ಇರುವವರಿಗೆ ನಾನು ತಲೆ ಬಾಗಿ ನಮಿಸುತ್ತೇನೆ.

 

ಸ್ನೇಹಿತರೇ,

ನೀವೆಲ್ಲರೂ ನಿಮ್ಮ ಅನುದಿನದ ಜೀವನದಲ್ಲಿ ಇಮಾಂ ಹುಸೇನ್ ಅವರ ಪವಿತ್ರ ಸಂದೇಶವನ್ನು ಪಾಲಿಸುತ್ತಿದ್ದು, ಅವರ ಸಂದೇಶಗಳನ್ನು ಶತಶತಮಾನಗಳಿಂದಲೂ ದೇಶದಾದ್ಯಂತ ಮತ್ತು ಜಗತ್ತಿನೆಲ್ಲೆಡೆ ಪಸರಿಸುತ್ತಿದ್ದೀರಿ. ಇಮಾಂ ಹುಸೇನರು ಶಾಂತಿ ಮತ್ತು ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಅವರು ಅನ್ಯಾಯ ಮತ್ತು ಅಹಂಕಾರಗಳ ವಿರುದ್ಧ ತಮ್ಮ ದನಿ ಎತ್ತಿದರು. ಅವರ ಬೋಧನೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಇಂತಹ ಸಂಪ್ರದಾಯಗಳನ್ನು ಎಲ್ಲೆಡೆ ಪಸರಿಸುವ ಕೆಲಸ ಜರೂರಿನಿಂದ ನಡೆಯಬೇಕಾದ ಅಗತ್ಯವಿದೆ. ಶ್ರೀ ಸೈದ್ನಾ ಸಾಹೇಬರು ಮತ್ತು ಬೋಹ್ರಾ ಸಮುದಾಯದ ಪ್ರತಿಯೊಬ್ಬ ಸದಸ್ಯರು ಇಂತಹ ಮಹತ್ತ್ವದ ಕೆಲಸದಲ್ಲಿ ಕೈ ಜೋಡಿಸಿದ್ದೀರಿ ಎನ್ನುವುದನ್ನು ತಿಳಿದು ನನಗೆ ಸಂತೋಷವಾಗಿದೆ.

 

ಸ್ನೇಹಿತರೇ,

ನಾವು `ವಸುಧೈವ ಕುಟುಂಬಕಂ’ ಎನ್ನುವ ತತ್ತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ; ಅಂದರೆ, ಇಡೀ ಜಗತ್ತನ್ನೇ ನಾವು ಒಂದು ಕುಟುಂಬವೆಂದು ಭಾವಿಸಿದ್ದೇವೆ. ನಾವು, ಉಳಿದ ಪ್ರತಿಯೊಬ್ಬರೊಂದಿಗೂ ಕೈ-ಕೈ ಹಿಡಿದುಕೊಂಡು ನಡೆಯುವಂಥವರು. ಉಳಿದ ದೇಶಗಳೊಂದಿಗೆ ಹೋಲಿಸಿದರೆ ನಮ್ಮ ಸಮಾಜದಲ್ಲಿರುವ ಈ ವಿಶೇಷವಾದ ಶಕ್ತಿಯು ನಮಗೊಂದು ಪ್ರತ್ಯೇಕವಾದ/ಅನನ್ಯವಾದ ಅಸ್ಮಿತೆಯನ್ನು ತಂದುಕೊಟ್ಟಿದೆ.

 

ಬೋಹ್ರಾ ಸಮುದಾಯವು ಭಾರತದ ಈ ಶಕ್ತಿಯನ್ನು ಜಗತ್ತಿನೆಲ್ಲೆಡೆ ಪಸರಿಸುತ್ತಿದೆ/ ಪರಿಚಯಿಸುತ್ತಿದೆ ಎನ್ನುವುದು ನನಗೆ ಸಂತಸದ ಸಂಗತಿಯಾಗಿದೆ. ಜಗತ್ತಿನ ಯಾವುದೇ ಭಾಗಕ್ಕೆ ನಾನು ಭೇಟಿ ಕೊಟ್ಟಾಗಲೂ ಅಲ್ಲಿಯ ಜನರು ನನ್ನ ಯೋಗಕ್ಷೇಮವನ್ನು ವಿಚಾರಿಸುತ್ತಾರೆ.

 

ನಮಗೆ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯ ಭಾವನೆ ಇದೆ; ವರ್ತಮಾನದ ಬಗ್ಗೆ ನಂಬಿಕೆ ಇದೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ನಾವು ಸಂಕಲ್ಪ ಮಾಡಿದ್ದೇವೆ. ನಾನು ಎಲ್ಲಿಗೇ ಹೋಗಲಿ, ನಮ್ಮ ಸಮಾಜವು ಶಾಂತಿ ಮತ್ತು ಅಭಿವೃದ್ಧಿಗಾಗಿ ಕೊಟ್ಟಿರುವ ಅಮೂಲ್ಯ ಕೊಡುಗೆಯ ಬಗ್ಗೆ ಅಲ್ಲೆಲ್ಲ ಹೇಳುತ್ತೇನೆ.

 

ಶಾಂತಿ, ಸೌಹಾರ್ದ, ಸತ್ಯಾಗ್ರಹ ಮತ್ತು ದೇಶಭಕ್ತಿಗಳಿಗೆ ಸಂಬಂಧಿಸಿದಂತೆ ಬೋಹ್ರಾ ಸಮುದಾಯವು ಸದಾ ಪ್ರಮುಖ ಪಾತ್ರವನ್ನು ವಹಿಸುತ್ತ ಬಂದಿದೆ. ಸ್ವತಃ ಸೈದ್ನಾ ಸಾಹೇಬರೇ ತಮ್ಮ ಪ್ರವಚನ/ಉಪನ್ಯಾಸಗಳಲ್ಲಿ ನಮ್ಮ ದೇಶ ಮತ್ತು ಜನ್ಮಭೂಮಿಗಳೆಡೆಗೆ ಪ್ರೀತಿ-ಶ್ರದ್ಧೆಗಳನ್ನು ಮೈಗೂಡಿಸಿಕೊಳ್ಳುವಂತೆ ಬೋಧಿಸುತ್ತಿದ್ದರು. ಕೆಲಕ್ಷಣಗಳ ಹಿಂದೆ ಅವರು ಮಾತನಾಡುತ್ತಿದ್ದಾಗ, ಯಾವುದೇ ಒಬ್ಬ ವ್ಯಕ್ತಿಯು ತನ್ನ ದೇಶದ ಸಲುವಾಗಿ, ಸಮಾಜಕ್ಕಾಗಿ ಮತ್ತು ಕಾನೂನುಬದ್ಧವಾಗಿ ಹೇಗೆ ಬದುಕಬೇಕೆಂದು ಹೇಳುತ್ತಿದ್ದರು. 

 

ಹಿಂದೆಯೂ ಅಷ್ಟೆ, ಗೌರವಾನ್ವಿತರಾದ ಸೈದ್ನಾ ತಾಹಿರ್ ಸೈಫುದ್ದೀನ್ ಸಾಹೇಬರು ಮಹಾತ್ಮ ಗಾಂಧಿಯವರ ಜತೆಗೂಡಿ ಈ ಮೌಲ್ಯಗಳನ್ನು ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಿದರು.

 

ಶ್ರೀ ಸೈಫುದ್ದೀನ್ ಮತ್ತು ಶ್ರೀ ಮಹಾತ್ಮ ಗಾಂಧೀಜಿ ಒಬ್ಬರನ್ನೊಬ್ಬರು ರೈಲು ಪ್ರಯಾಣದಲ್ಲಿ ಭೇಟಿಯಾದರು ಎಂಬುದನ್ನು ನಾನು ಎಲ್ಲೋ ಓದಿದ್ದೇನೆ. ಅದಾದ ಬಳಿಕ, ಅವರಿಬ್ಬರೂ ನಿರಂತರ ಸಂಪರ್ಕದಲ್ಲಿದ್ದರಲ್ಲದೆ, ಪ್ರತಿಯೊಂದು ಪ್ರಮುಖ ಘಟನೆ ಅಥವಾ ಚಳವಳಿ/ಆಂದೋಲನದ ಬಗ್ಗೆ ಪರಸ್ಪರ ಚರ್ಚಿಸುತ್ತಿದ್ದರು. 

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದಂಡಿ ಸತ್ಯಾಗ್ರಹವು ಒಂದು ಸುವರ್ಣ ಅಧ್ಯಾಯ ಎನ್ನುವುದು ನಮ್ಮೆಲ್ಲರಿಗೂ ಗೊತ್ತಿದೆ. ಆ ಸತ್ಯಾಗ್ರಹದ ಸಮಯದಲ್ಲಿ ಗೌರವಾನ್ವಿತ ಬಾಪು ಅವರು -ಅಂದರೆ, ಮಹಾತ್ಮ ಗಾಂಧೀಜಿಯವರು- ಸೈದ್ನಾ ಸಾಹೇಬರು ಮನೆಯಲ್ಲಿ ತಂಗಿದ್ದರು. ಮಹಾತ್ಮ ಗಾಂಧೀಜಿಯವರೊಂದಿಗೆ ತಾವು ಹೊಂದಿದ್ದ ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತಿದ್ದ ಸೈದ್ನಾ ಸಾಹೇಬರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ತಮ್ಮ ಈ ಮನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಆ `ಸೈಫಿ ವಿಲ್ಲಾ’ವೇ ಈಗ ದೇಶದ ಯುವಜನರಿಗೆ ಸ್ಫೂರ್ತಿಯನ್ನು ನೀಡುತ್ತಿದೆ.

 

ಸ್ನೇಹಿತರೇ,

ಬೋಹ್ರಾ ಸಮುದಾಯದೊಂದಿಗಿನ ನನ್ನ ಸಂಬಂಧ ತುಂಬಾ ಹಳೆಯದು. ಅದರಲ್ಲೂ ಸೈದ್ನಾ ಸಾಹೇಬರು ಮಾತನಾಡಿದ ಮೇಲೆ, ಒಂದು ವಿಧದಲ್ಲಿ ನಾನು ಬೋಹ್ರಾ ಕುಟುಂಬದ ಸದಸ್ಯನೇ ಆಗಿಬಿಟ್ಟಿದ್ದೇನೆ ಎನಿಸುತ್ತಿದೆ. ನಾನು ಸದಾ ನಿಮ್ಮೊಂದಿಗೆ ಒಂದಾಗಿ ಹೋಗಿದ್ದೇನೆ. ಇವತ್ತಿಗೂ ಅಷ್ಟೆ, ನಮ್ಮ ಮನೆಯ ಬಾಗಿಲು ಸದಾ ನಿಮಗಾಗಿ ತೆರೆದಿದೆ. ನಿಮ್ಮ ಮತ್ತು ನಿಮ್ಮ ಇಡೀ ಕುಟುಂಬದ ಪ್ರೀತಿಯನ್ನು ಪಡೆಯಲು ನಿಜಕ್ಕೂ ನಾನು ಅದೃಷ್ಟ ಮಾಡಿದ್ದೆ.

 

ನನ್ನ ಹುಟ್ಟುಹಬ್ಬಕ್ಕಿನ್ನೂ ಸಾಕಷ್ಟು ಸಮಯವಿದೆ. ಆದರೆ, ಈ ದೇಶದ ಕಲ್ಯಾಣಕ್ಕಾಗಿ ದುಡಿಯಲು ಅಗತ್ಯವಾದ ಶಕ್ತಿಯನ್ನು ನನಗೆ ನೀಡಲೆಂದು ನೀವು ಈ ಪವಿತ್ರ ವೇದಿಕೆಯಲ್ಲಿ ನನ್ನನ್ನು ಆಶೀರ್ವದಿಸಿದ್ದೀರಿ. ಇದು ನಿಜಕ್ಕೂ ತುಂಬಾ ದೊಡ್ಡ ವಿಷಯವೇ ಸರಿ. ಆದ್ದರಿಂದ, ನಾನು ನಿಮ್ಮೆಲ್ಲರಿಗೂ ತುಂಬಾ ಋಣಿಯಾಗಿದ್ದೇನೆ.

ಪ್ರಾಯಶಃ, ಬೋಹ್ರಾ ಸಮುದಾಯದ ಒಬ್ಬ ಸದಸ್ಯನಾದರೂ ಇಲ್ಲದಂತಹ ಒಂದೇಒಂದು ಹಳ್ಳಿಯೂ ನಮ್ಮಲ್ಲಿಲ್ಲ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲಂತೂ ಬೋಹ್ರಾ ಸಮುದಾಯವು ಪ್ರತಿಯೊಂದು ಹಂತದಲ್ಲೂ ನನಗೆ ಬೆಂಬಲ ನೀಡುತ್ತಿತ್ತು. ಇಂತಹ ಗಾಢ ಸಂಬಂಧವೇ ನನ್ನನ್ನು ಇಂದು ನಿಮ್ಮ ಬಳಿಗೆ ಕರೆದುಕೊಂಡು ಬಂದಿದೆ.

ಒಂದು ಸಂಗತಿ ನನಗೆ ತುಂಬಾ ಚೆನ್ನಾಗಿ ನೆನಪಿದೆ. ಅದೇನೆಂದರೆ, ಶ್ರೀಮಾನ್ ಸೈದ್ನಾ ಸಾಹೇಬರು ಒಂದು ಸಲ ಪಠಾಣ್ ನಿಂದ ವಾಪಸ್ ಬರುತ್ತಿದ್ದರು; ಪ್ರಾಯಶಃ ಅವರು ಸೂರತ್ ನಗರಕ್ಕೆ ಹೋಗಬೇಕಾಗಿತ್ತೆನಿಸುತ್ತದೆ. ವಾಸ್ತವವಾಗಿ ಅವರಿಗೆ ಪುರಸತ್ತೇ ಇರಲಿಲ್ಲ. ಹೀಗಾಗಿ, ಅವರನ್ನು ನೋಡಲೆಂದು ನಾನೇ ವಿಮಾನ ನಿಲ್ದಾಣಕ್ಕೆ ಹೋದೆ. ಏಕೆಂದರೆ, ಅವರನ್ನು ಕಾಣದೆ ಇರುವುದು ನನ್ನಿಂದ ಸಾಧ್ಯವಿರಲಿಲ್ಲ. ಅಂದರೆ, ನಾನಿರುವಲ್ಲಿಗೆ ನಿಮಗೆ ಬರಲಾಗುತ್ತಿಲ್ಲ ಎಂದಿಟ್ಟುಕೊಳ್ಳಿ; ಆಗ ನಾನೇ ನೀವಿರುವಲ್ಲಿಗೆ ಬರುತ್ತೇನೆ. ವಿಮಾನ ನಿಲ್ದಾಣದೊಳಗೆ ನಾವು ಕೂತುಕೊಂಡಾಗ, ಒಂದು ಚಿಕ್ಕ ಮಗುವಿನ ಮೇಲೆ ಪ್ರೀತಿ-ವಾತ್ಸಲ್ಯಗಳನ್ನು ಧಾರೆ ಎರೆಯುವ ಹಾಗೆ ನನ್ನನ್ನೂ ಅಕ್ಕರೆಯಿಂದ ಕಂಡರು. ನಾವಿಬ್ಬರೂ ಹಾಗೆಯೇ ಮಾತನಾಡುತ್ತಿದ್ದಾಗ, ಗುಜರಾತಿನಲ್ಲಿರುವ ನೀರಿನ ಕೊರತೆಯನ್ನೂ ಇದನ್ನು ನೀಗಲು ಚೆಕ್ ಡ್ಯಾಂಗಳನ್ನು ನಿರ್ಮಿಸುವ ಬಗ್ಗೆಯೂ ನಾನು ಚರ್ಚಿಸಿದೆ. ಅಷ್ಟು ಹೊತ್ತಿಗಾಗಲೇ ಸೈದ್ನಾ ಸಾಹೇಬರಿಗೆ 97-98 ವರ್ಷವಾಗಿತ್ತು. ಅಂದರೆ, ಅವರಾಗಲೇ 95 ವಸಂತಗಳನ್ನು ದಾಟಿದ್ದರು. ಹಾಗೆ ನೋಡಿದರೆ, ಅದೊಂದು ಲೋಕಾಭಿರಾಮದ ಮಾತುಕತೆಯಾಗಿತ್ತು. ಆದರೆ, ಆ ವಯಸ್ಸಿನಲ್ಲೂ ಸೈದ್ನಾ ಸಾಹೇಬರು ಕುಡಿಯುವ ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸವನ್ನು ಆರಂಭಿಸಿದರು ಎನ್ನುವುದನ್ನು ನಾನು ಮನಸಾರೆ ಹೇಳಬಲ್ಲೆ. ತಮ್ಮ ಪ್ರಯತ್ನಗಳ ಮೂಲಕ ಅವರು ಗುಜರಾತಿನ ಹಲವಾರು ಹಳ್ಳಿಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದರು. ಈ ಆಂದೋಲನವು ಅಂತಿಮವಾಗಿ ಯಶಸ್ಸನ್ನು ಕಂಡಿತಲ್ಲದೆ, ಗುಜರಾತಿನ ಅದೆಷ್ಟೋ ಹಳ್ಳಿಗಳು ನೀರನ್ನು ಕಾಣತೊಡಗಿದವು.

 

ಇದಕ್ಕಿಂತ ಹೆಚ್ಚಾಗಿ, ಕೆಲವು ವರ್ಷಗಳ ಹಿಂದೆ ನಾನು, ಗುಜರಾತನ್ನು ಕಾಡುತ್ತಿದ್ದ ಅಪೌಷ್ಟಿಕತೆಯ ಸಮಸ್ಯೆಯನ್ನು  ಹೋಗಲಾಡಿಸಲು ಒಂದು ಕಾರ್ಯಕ್ರಮವನ್ನು ರೂಪಿಸುವಾಗ ಬೋಹ್ರಾ ಸಮುದಾಯದ ನೆರವನ್ನು ಕೋರಿದೆ. ಅಂದರೆ, ಈ ಕಾರ್ಯಕ್ರಮದ ಸಂಬಂಧ ಸಾರ್ವಜನಿಕ ಜಾಗೃತಿ ಪ್ರಚಾರ ಆಂದೋಲನವನ್ನು ಕೈಗೊಳ್ಳುವಂತೆ ನಾನು ಆಗ ಈ ಸಮುದಾಯವನ್ನು ಕೋರಿದೆ. ನನ್ನ ಮನವಿಗೆ ತಕ್ಷಣವೇ ಸ್ಪಂದಿಸಿದ ಬೋಹ್ರಾ ಸಮುದಾಯವು, ಗುಜರಾತ್ ರಾಜ್ಯವು ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡಿತು.

 

ಇಲ್ಲೊಂದು ಸ್ವಾರಸ್ಯಕರವಾದ ಅಂಶವಿರುವುದನ್ನು ಗಮನಿಸಬೇಕು. ಅದೇನೆಂದರೆ, ಒಂದೆಡೆ ಇಡೀ ಬೋಹ್ರಾ ಸಮುದಾಯವು ಪವಿತ್ರ `ಅಶಾರಾ ಮುಬಾರಕಾ’ವನ್ನು ಆಚರಿಸಲು ಸೇರಿತ್ತು; ಅದೇ ಸಮಯದಲ್ಲಿ ಇನ್ನೊಂದೆಡೆ, ಪೌಷ್ಟಿಕತಾ ಮಿಷನ್ ಕಾರ್ಯಕ್ರಮದಡಿ `ಪೌಷ್ಟಿಕತಾ ಮಾಸ’ವನ್ನು ಆಚರಿಸಲಾಗುತ್ತಿತ್ತು. ನಂತರ, ಈ ಪ್ರಚಾರವನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಯಿತು. ಅಂದಹಾಗೆ, ಪ್ರತಿಯೊಂದು ಮಗು ಮತ್ತು ತಾಯಿಯ ಸುರಕ್ಷತೆಯನ್ನು ಖಾತ್ರಿಪಡಿಸುವುದು ಇದರ ಆಶಯವಾಗಿತ್ತು.

ಶಿಕ್ಷಣ, ಆರೊಗ್ಯ ಮತ್ತು ಮಕ್ಕಳಲ್ಲಿ ಪೌಷ್ಟಿಕತೆ- ಈ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ನೀವು ಕೈಗೊಂಡ ಪ್ರತಿಯೊಂದು ಉಪಕ್ರಮವೂ ದೇಶದ ಸಬಲೀಕರಣಕ್ಕೆ ಇಂಬು ನೀಡಿವೆ. `ಪ್ರಾಜೆಕ್ಟ್ ರೈಸ್’ ಯೋಜನೆಯಡಿ ಮಹಾರಾಷ್ಟ್ರವೂ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಮಕ್ಕಳಿಗೆ ಪುಷ್ಟಿದಾಯಕವಾದ ಊಟವನ್ನು ಕೊಡುತ್ತಿದ್ದೀರೆಂದು ನಾನು ಕೇಳಿದ್ದೇನೆ. ನಿಮ್ಮ ಈ ಉಪಕ್ರಮವು ದೇಶದ ಭವಿಷ್ಯವನ್ನು ಗಟ್ಟಿಗೊಳಿಸಲು ಖಂಡಿತವಾಗಿಯೂ ನೆರವು ನೀಡಲಿದೆ.

 

ಸರಕಾರವು ಇದೇ ಮೊದಲ ಬಾರಿಗೆ ಆರೋಗ್ಯದ ವಿಚಾರವನ್ನು ಆದ್ಯತೆಯ ಮೇರೆಗೆ ಪರಿಗಣಿಸಿದ್ದು, ಇದಕ್ಕೆ ಸಾಕಷ್ಟು ಒತ್ತು ನೀಡಿದೆ ಎನ್ನುವುದನ್ನು ನೀವೆಲ್ಲರೂ ಬಲ್ಲಿರಿ. ಈ ನಿಟ್ಟಿನಲ್ಲಿ ಕೈಗೆಟುಕುವಂತಹ ಮತ್ತು ಕಾಯಿಲೆಕಸಾಲೆಗಳೇ ಬರದಂತೆ ತಡೆಯುವ ಮುಂಜಾಗ್ರತಾ ಆರೋಗ್ಯ ಸೇವೆಗಳನ್ನು ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ ದೇಶದಾದ್ಯಂತ ಉತ್ತಮ ಗುಣಮಟ್ಟದ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಜಾಲವನ್ನೇ ಸಾಕಾರಗೊಳಿಸಲಾಗುತ್ತಿದೆ. ಹಾಗೆಯೇ, ಜನೌಷಧಿ ಮಳಿಗೆಗಳ ಮೂಲಕ ಕೈಗೆಟುಕುವ ದರದಲ್ಲಿ ಔಷಧಿಗಳು ಸಿಗುವಂತೆ ಮಾಡಲಾಗಿದೆ. ಇನ್ನೊಂದೆಡೆ, ಉಚಿತ ಡಯಾಲಿಸಿಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜತೆಗೆ, ಹೃದಯ ಮತ್ತು ಮಂಡಿ ಶಸ್ತ್ರ ಚಿಕಿತ್ಸೆಗೆ ಅಗತ್ಯವಿರುವ ಸಾಧನಗಳ ಬೆಲೆಯನ್ನು ಗಣನೀಯವಾಗಿ ಇಳಿಸಲಾಗಿದೆ. ಇನ್ನು `ಆಯುಷ್ಮಾನ್ ಭಾರತ’ ಯೋಜನೆಯಂತೂ ಬಡತನದಲ್ಲಿರುವ 50 ಕೋಟಿ ಸೋದರ-ಸೋದರಿಯರಿಗೆ ಆಪದ್ಬಾಂಧವನಂತೆ ಒದಗಿ  ಬಂದಿದೆ.

 

ಇದೇನೂ ಯಃಕಶ್ಚಿತ್ ಅನ್ನುವಂಥ ಕಾರ್ಯಕ್ರಮವಲ್ಲ. `ಆಯುಷ್ಮಾನ್ ಭಾರತ’ ಯೋಜನೆಯಿಂದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಜನಸಂಖ್ಯೆಯನ್ನು ಒಟ್ಟು ಸೇರಿಸಿದರೆ ಎಷ್ಟಾಗುತ್ತದೋ ಅದಕ್ಕಿಂತ ಹೆಚ್ಚು ಜನರಿಗೆ ಆರೋಗ್ಯ ಸೇವೆಗಳು ಸಿಗಲಿವೆ. ಈ ಯೋಜನೆಯ ಮೂಲಕ ಪ್ರಯೋಜನ ಪಡೆದುಕೊಳ್ಳಲಿರುವವರ ಸಂಖ್ಯೆಯು ಇಡೀ ಯೂರೋಪ್ ಖಂಡದ ಜನಸಂಖ್ಯೆಗೆ ಸಮವಾಗಿದೆ. ನಮ್ಮ ದೇಶದ ಇಷ್ಟೊಂದು ಸಂಖ್ಯೆಯ ಭಾರೀ ಜನರಿಗೆ ಪ್ರಯೋಜನವಾಗಲೆಂದು ರೂಪಿಸಿರುವ ಬೃಹತ್ ಕಲ್ಯಾಣ ಕಾರ್ಯಕ್ರಮವಿದಾಗಿದೆ.

 

`ಆಯುಷ್ಮಾನ್ ಭಾರತ’ ಯೋಜನೆ ಮೂಲಕ ಪ್ರತಿಯೊಂದು ಕುಟುಂಬಕ್ಕೂ ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿ ಮೊತ್ತದ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ. ಇದೇನೂ ತುಂಬಾ ಸಣ್ಣ ನಿರ್ಧಾರವಲ್ಲ. ಈ ಯೋಜನೆಯ ವ್ಯಾಪ್ತಿಗೆ ಬರಲಿರುವ 50 ಕೋಟಿ ಕುಟುಂಬಗಳು ಪ್ರತೀವರ್ಷವೂ 5 ಲಕ್ಷ ರೂ.ಗಳನ್ನು ಪಡೆದುಕೊಳ್ಳಲಿದ್ದಾರೆ. `ಆಯುಷ್ಮಾನ್ ಭಾರತ’ ಯೋಜನೆಯ ಭಾಗವಾಗಿ ನಡೆಯುವ ವೈದ್ಯಕೀಯ ಪರೀಕ್ಷೆಗಳು ಒಬ್ಬ ವ್ಯಕ್ತಿಯು ಈಗಾಗಲೇ ಪಡೆದುಕೊಳ್ಳುತ್ತಿರುವ ಚಿಕಿತ್ಸೆಯ ಹೊಣೆಯನ್ನೂ ತಾವೇ ಹೊತ್ತುಕೊಳ್ಳಲಿವೆ. ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ ಸೆ.25ರಿಂದ ಈ ಯೋಜನೆಯು ದೇಶದೆಲ್ಲೆಡೆ ಅನುಷ್ಠಾನಕ್ಕೆ ಬರಲಿದೆ.

 

ಸ್ನೇಹಿತರೇ,

 

ಪೌಷ್ಟಿಕತೆ ಮತ್ತು ಆರೋಗ್ಯ ಸೇವೆಗಳ ಜತೆಗೆ ಅಗತ್ಯವಿರುವವರಿಗೆ ಒಂದು ಸೂರನ್ನು ಕೂಡ ಒದಗಿಸುತ್ತಿರುವ ನಿಮ್ಮ ಸೇವೆಯು ನಿಜಕ್ಕೂ ಸ್ತುತ್ಯರ್ಹವಾಗಿದೆ. ನಿಮ್ಮ ಈ ಪ್ರಯತ್ನದಿಂದಾಗಿ 11,000 ಜನರಿಗೆ ಒಂದು ಮನೆ ಸಿಕ್ಕಿದೆ ಎಂದು ನನಗೆ ತಿಳಿಸಲಾಗಿದೆ. ತಲೆಯ ಮೇಲೊಂದು ಸೂರಿಲ್ಲದ ನಮ್ಮ ಸೋದರ-ಸೋದರಿಯರಿಗೆ 2022ನೇ ಇಸವಿಯ ಹೊತ್ತಿಗೆ ಒಂದು ಮನೆಯನ್ನು ಒದಗಿಸಬೇಕೆಂಬ ಗುರಿಯನ್ನು ಸರಕಾರ ಕೂಡ ಹಾಕಿಕೊಂಡಿದೆ. 

 

ಈಗಾಗಲೇ ಇಂತಹ ಒಂದು ಕೋಟಿ ಸೋದರ-ಸೋದರಿಯರಿಗೆ ಅಕ್ಷರಶಃ ಹೊಸ ಮನೆಗಳ ಬೀಗದ ಎಸಳನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದರೆ, ಖಂಡಿತವಾಗಿಯೂ ನಿಮಗೆ ಅತೀವವಾದ ಸಂತೋಷವಾಗಲಿದೆ. ಇದು ಕೇವಲ ಘೋಷಣೆಯಲ್ಲ. ಬದಲಿಗೆ, ಇಷ್ಟು ಜನ ನಿಜವಾಗಿಯೂ ತಮ್ಮತಮ್ಮ ಮನೆಗಳ ಬೀಗದ ಎಸಳನ್ನು ಸ್ವೀಕರಿಸಿದ್ದಾರೆ. ಉಳಿದ ಮನೆಗಳ ಕಾಮಗಾರಿಯನ್ನು ಮುಗಿಸುವ ಕೆಲಸ ಕ್ಷಿಪ್ರ ಗತಿಯಲ್ಲಿ ಮುಂದುವರಿದಿದೆ. ಇದರ ಜತೆಗೆ, ನೀವು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಮಾಡುತ್ತಿರುವ ಕೆಲಸವು ಈ ನಿಟ್ಟಿನಲ್ಲಿ ಸರಕಾರವು ನಡೆಸುತ್ತಿರುವ ಪ್ರಯತ್ನಗಳಿಗೆ ಬಲವನ್ನು ತುಂಬಿದೆ. ಹೀಗಾಗಿ, ಇದರ ಫಲಿತಾಂಶವು ಕೂಡ ಇಮ್ಮಡಿಯಾಗಿರಲಿದೆ. ನಿಜ ಹೇಳಬೇಕೆಂದರೆ, ಇದು ಅಂತಿಮ ಫಲಿತಾಂಶವನ್ನು ಕೇವಲ ದ್ವಿಗುಣಗೊಳಿಸುವುದಷ್ಟೇ ಅಲ್ಲ, ಬದಲಿಗೆ ಫಲಿತಾಂಶದ ಗುಣಮಟ್ಟ ಕೂಡ ಅದೆಷ್ಟೋ ಪಟ್ಟು ಚೆನ್ನಾಗಿರುವಂತೆ ಮಾಡುತ್ತದೆ. ಶ್ರೀಸಾಮಾನ್ಯನ ಜೀವನವು ಸುಗಮವಾಗುವಂತೆ ಮಾಡಲು ಮತ್ತು ಅವರ ಜೀವನದ ಗುಣಮಟ್ಟವನ್ನು ವರ್ಧಿಸಲು ಸರಕಾರವು ನಿರಂತರವಾಗಿ ಪ್ರಯತ್ನ ಪಡುತ್ತಲೇ ಇದೆ.

 

ಗೆಳೆಯರೇ,

 

ನಮ್ಮ ದೇಶದ ಬಡವರ ಮತ್ತು ಮಧ್ಯಮ ವರ್ಗದ ಜನರ  ಬದುಕಿಗೆ ಸಂಬಂಧಿಸಿದ ಇನ್ನೊಂದು ಸಂಗತಿಗೂ ಸರಕಾರವು ಒತ್ತು ನೀಡಿದೆ. ಇದು, ಶುಚಿತ್ವಕ್ಕೆ/ಸ್ವಚ್ಛತೆಗೆ ಸಂಬಂಧಿಸಿದ ವಿಚಾರ. ಈ ಯೋಜನೆಯನ್ನು ಸರಕಾರವೇ ಪ್ರಾರಂಭಿಸಿರಬಹುದು, ನಿಜ. ಆದರೆ, ಇಂದು ಈ ಯೋಜನೆಯನ್ನು/ಕಾರ್ಯಕ್ರಮವನ್ನು ದೇಶದ 125 ಕೋಟಿ ಜನರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಇಂದು ದೇಶದ ಹಳ್ಳಿಹಳ್ಳಿಗಳಲ್ಲೂ  ಬೀದಿಬೀದಿಗಳಲ್ಲೂ ಸ್ವಚ್ಛತೆಯ ಬಗ್ಗೆ ಒಂದು ವಿಶಿಷ್ಟವಾದ/ಅನನ್ಯವಾದ ಆಸಕ್ತಿ ಬೆಳೆದಿದೆ.

 

ನಾಲ್ಕು ವರ್ಷಗಳ ಹಿಂದಿನವರೆಗಿನ, ಅಂದರೆ ನಾನು ದೇಶದ ಪ್ರಧಾನಮಂತ್ರಿಯಾಗಿ ಬರುವ ಮುನ್ನ ದೇಶದ ಶೇಕಡ 40ರಷ್ಟು ಮನೆಗಳು ಮಾತ್ರ ಶೌಚಾಲಯವನ್ನು ಹೊಂದಿದ್ದವು. ಆದರೆ, ಕಳೆದ 4 ವರ್ಷಗಳಲ್ಲಿ ಈ ಸಂಖ್ಯೆಯು ಇಂದು ಶೇ.90ರಷ್ಟನ್ನು ಮುಟ್ಟಿದೆ. ಸದ್ಯದಲ್ಲಿಯೇ ನಮ್ಮ ದೇಶವು `ಬಯಲು ಬಹಿರ್ದೆಸೆಮುಕ್ತ ರಾಷ್ಟ್ರ’ವಾಗಿ ಹೊರಹೊಮ್ಮಲಿದೆ ಎನ್ನುವ ನಂಬಿಕೆ ನನಗಿದೆ.

 

ಸ್ವಚ್ಛತೆಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ಇಂದೋರ ನಗರವು ಅಗ್ರಪಂಕ್ತಿಯಲ್ಲಿದ್ದು,  ನಿರಂತರವಾಗಿ ಅಗ್ರಸ್ಥಾನವನ್ನು ಅಲಂಕರಿಸಿಕೊಂಡು ಬರುತ್ತಿದೆ. ಇದಕ್ಕಾಗಿ ನಾನು ಇಂದೋರಿನ ಜನತೆಯನ್ನು, ಇಲ್ಲಿನ ಚುನಾಯಿತ ಪ್ರತಿನಿಧಿಗಳನ್ನು, ಇಲ್ಲಿನ ನಗರಸಭಾ ಸದಸ್ಯರನ್ನು, ರಾಜ್ಯ ಸರಕಾರವನ್ನು ಮತ್ತು ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಇಡೀ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. 

 

ಇಂದೋರ್ ಅಷ್ಟೇ ಅಲ್ಲ, ಈ ವಿಚಾರದಲ್ಲಿ ಭೋಪಾಲ್ ಕೂಡ ಅದ್ಭುತ ಸಾಧನೆ ಮಾಡಿದೆ! ಹಾಗೆ ಹೇಳುವುದಾದರೆ, ಇಡೀ ಮಧ್ಯಪ್ರದೇಶದ ನನ್ನ ಯುವಸ್ನೇಹಿತರು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಈ ಸ್ವಚ್ಛತೆಯ ಆಂದೋಲನಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ. ಸ್ವಚ್ಛತೆ ಮತ್ತು ಶುದ್ಧ ಪರಿಸರವನ್ನು ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಸಮುದಾಯವು ನೀಡಿರುವ ಕೊಡುಗೆಯ ಬಗ್ಗೆ ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತಿದೆ. ಸ್ವತಃ ಸೈದ್ನಾ ಸಾಹೇಬರು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಪ್ರತಿಪಾದಕರಾಗಿದ್ದರು. ಅಂದಂತೆ, ಶ್ರೀ ಬಡೇ ಸೈದ್ನಾ ಸಾಹೇಬರ ಜನ್ಮಶತಾಬ್ದಿ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದು ನನಗೆ ನೆನಪಿದೆ.

 

ಇತರರು ತಮ್ಮತಮ್ಮ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತಾರೆಂಬುದು ನನಗೆ ಗೊತ್ತಿಲ್ಲ. ಆದರೆ, ಶ್ರೀ ಬಡೇ ಸೈದ್ನಾ ಸಾಹೇಬರ ಜನ್ಮಶತಾಬ್ದಿಯಂದು ಗುಬ್ಬಚ್ಚಿಗಳನ್ನು ಉಳಿಸುವ ಒಂದು ಆಂದೋಲನ ಹೇಗೆ ಆರಂಭವಾಯಿತು ಎನ್ನುವುದನ್ನು ನೀವು ನೆನಪಿಸಿಕೊಳ್ಳಬಹುದು. ಅಂದು, ಗುಬ್ಬಚ್ಚಿಗಳು ಗೂಡು ಕಟ್ಟಿಕೊಳ್ಳಬಹುದಾದಂತಹ ಒಂದೊಂದು ಪೆಟ್ಟಿಗೆಯನ್ನು ಎಲ್ಲರಿಗೂ ಕೊಡಲಾಯಿತು. ಇದು ಪರಿಸರ ಸಂರಕ್ಷಣೆಯಲ್ಲ ಎಂದಾದರೆ, ನಿಜವಾದ ಪರಿಸರ ಸಂರಕ್ಷಣೆ ಯಾವುದಿದೆ ಹೇಳಿ? ಇವೆಲ್ಲವೂ ನಮ್ಮ ಮೌಲ್ಯಗಳಾಗಿದ್ದು, ನಮ್ಮ ಮನಸ್ಸಿನ ಶುದ್ಧಿಗೂ ಶುದ್ಧ ಪರಿಸರಕ್ಕೂ ಪರಸ್ಪರ ಸಂಬಂಧವನ್ನು ಬೆಸೆಯಲಾಗಿದೆ.

 

ಶ್ರೀ ಸೈದ್ನಾ ಸಾಹೇಬರು ಹೃದಯ ಮತ್ತು ಮನಸ್ಸು ಕೂಡ ತಿಳಿಯಾಗಿರಬೇಕು ಎಂದು ಹೇಳಿದರೆಂದು ನಾನು ಈಗ ತಾನೇ ಕೇಳಲ್ಪಟ್ಟೆ. ಇಂದೋರಿನ ಪ್ರತಿಷ್ಠೆಯನ್ನು ಗಮನದಲ್ಲಿಟ್ಟುಕೊಂಡೇ, ಪರಿಸರ ಮತ್ತು ಸ್ವಚ್ಛತೆಯ ಸಂದೇಶಗಳೊಂದಿಗೆ `ಅಶಾರಾ ಮುಬಾರಕಾ’ ಕಾರ್ಯಕ್ರಮವನ್ನು ಇಲ್ಲೇ ಆಯೋಜಿಸಲಾಯಿತು ಎಂದು ನನಗೆ ಹೇಳಲಾಯಿತು. 

 

ಇಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಮೂಲಕ `ಅಶಾರಾ ಮುಬಾರಾಕಾ’ ಕಾರ್ಯಕ್ರಮವನ್ನು `ಸಂಪೂರ್ಣ ತ್ಯಾಜ್ಯಮುಕ್ತ’ ಅಥವಾ `ತ್ಯಾಜ್ಯರಹಿತ’ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಇಲ್ಲಿ ಪ್ರತಿನಿತ್ಯವೂ 10 ಲಕ್ಷ ಟನ್ ಗಳಷ್ಟು ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಇಲ್ಲಿಯ ರೈತರಿಗೆ ಅದನ್ನು ಉಚಿತವಾಗಿ ಕೊಡಲಾಗುತ್ತಿದೆ.

 

ಈ ಮೂಲಕ ನೀವು ಪರಿಸರಕ್ಕಷ್ಟೆ ಸೇವೆ ಸಲ್ಲಿಸುತ್ತಿಲ್ಲ. ಜತೆಗೆ, ಸರಕಾರವು ಹೊಂದಿರುವ `ಕಸದಿಂದ ರಸ’ (ವೇಸ್ಟ್ ಟು ಎನರ್ಜಿ) ಎನ್ನುವ ಸರಕಾರದ ಸೂತ್ರಕ್ಕೂ ಒತ್ತಾಸೆಯಾಗಿ ನಿಂತಿದ್ದೀರಿ. ಈ ಕಾರ್ಯಕ್ರಮವು ಕೂಡ ನಮ್ಮ ರೈತಾಪಿ ಸೋದರ-ಸೋದರಿಯರಿಗೆ ಪ್ರಯೋಜನಕಾರಿಯಾಗಿದೆ. ದೇಶದಾದ್ಯಂತ ಇರುವ ಸ್ವಚ್ಛಾಗ್ರಹಿಗಳು ಇಂತಹ ಕಾರ್ಯಕ್ರಮಗಳಿಂದ ಪಾಠ ಕಲಿತು, ಸ್ವಚ್ಛತೆಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ನಮ್ಮ ಮುಂದಿನ ಕಾರ್ಯಕ್ರಮಗಳಲ್ಲೆಲ್ಲ ನಾವು `ಕಸದಿಂದ ರಸ’ ಎನ್ನುವ ಸೂತ್ರಕ್ಕೆ ಒತ್ತು ಕೊಡಲಿದ್ದೇವೆ. `ಸ್ವಚ್ಛತೆಯೇ ಸೇವೆ’ (ಸ್ವಚ್ಛತಾ ಹೀ ಸೇವಾ) ಕಾರ್ಯಕ್ರಮವು ನಾಳೆಯಿಂದ -ಅಂದರೆ, ಸೆ.15ರಿಂದ- ಆರಂಭವಾಗಲಿದ್ದು, ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ರವರೆಗೆ ದೇಶದೆಲ್ಲೆಡೆ ನಡೆಯಲಿದೆ.

ನಾಳೆ ಬೆಳಿಗ್ಗೆ 9.30ಕ್ಕೆ ನಾನು ಸ್ವಚ್ಛಾಗ್ರಹಿಗಳು, ಧರ್ಮಗುರುಗಳು, ಸ್ವಚ್ಛತೆಯನ್ನು ಕುರಿತು ಜಾಗೃತಿ ಮೂಡಿಸುವ ಕಲಾವಿದರು, ಕ್ರೀಡಾಪಟುಗಳು, ಉದ್ಯಮಿಗಳು ಮತ್ತು ಸಮಾಜದ ಗಣ್ಯ ವ್ಯಕ್ತಿಗಳೊಂದಿಗೆ ವಿಡಿಯೋ ಸಂವಾದವನ್ನು ನಡೆಸಲಿದ್ದೇನೆ. ಇದೇ ಸಮಯಕ್ಕೆ ಸರಿಯಾಗಿ ದೇಶದಾದ್ಯಂತ ಕೋಟ್ಯಂತರ ಜನರು ಸ್ವಚ್ಛತೆಯ ಯಜ್ಞದಲ್ಲಿ ನಿರತರಾಗಿರಲಿದ್ದಾರೆ.

 

ಇದಕ್ಕಿಂತ ಹೆಚ್ಚಾಗಿ, ಮಹಾತ್ಮ ಗಾಂಧೀಜಿಯವರ 150 ಜನ್ಮದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಅಕ್ಟೋಬರ್ 2ರಿಂದ ಆರಂಭವಾಗಲಿವೆ. ಗೌರವಾನ್ವಿತ ಬಾಪು ಅವರ 150ನೇ ಜನ್ಮದಿನಕ್ಕೆ ಸಂಬಂಧಿಸಿದಂತೆ ಶ್ರೀ ಸೈದ್ನಾ ಸಾಹೇಬರು ನಮಗೊಂದು ಸಂದೇಶವನ್ನು ಕೊಟ್ಟಿದ್ದಾರೆ. ಈ ಕಾರ್ಯಕ್ರಮಗಳು ನಡೆಯುವ ಮುಂದಿನ ಎರಡು ವರ್ಷಗಳಲ್ಲಿ, ಸ್ವಚ್ಛತೆಯ ಸಂದೇಶದೊಂದಿಗೆ ಬಾಪು ಅವರು ತೋರಿಸಿದ ಹಾದಿಯಲ್ಲಿ ಮುನ್ನಡೆಯುವಂತೆ ಇಡೀ ದೇಶ ಮತ್ತು ಜಗತ್ತನ್ನು ಉತ್ತೇಜಿಸಲಿದ್ದಾರೆ.

ಸ್ವಚ್ಛತೆಗೆ ಸಂಬಂಧಿಸಿದ ಈ ಆಂದೋಲನದ ಜತೆಗೂಡುವಂತೆ ಬೋಹ್ರಾ ಸಮುದಾಯವನ್ನೂ ಮಧ್ಯಪ್ರದೇಶದ ಸೋದರ-ಸೋದರಿಯರನ್ನೂ  ಆಹ್ವಾನಿಸಲು ನಾನು ಇವತ್ತು ಇಂದೋರಿಗೆ ಬಂದಿದ್ದೇನೆ,

 

ಮಿತ್ರರೇ,

 

ಈ ಸಂದರ್ಭದಲ್ಲಿ ನಾನು ಇನ್ನೊಂದು ವಿಚಾರಕ್ಕಾಗಿ ನಿಮ್ಮೆಲರನ್ನೂ ಪ್ರಶಂಸಿಸಲು ಬಯಸುತ್ತೇನೆ. ಅದೇನೆಂದರೆ, ನಿಮ್ಮಲ್ಲಿ ಹೆಚ್ಚಿನವರು ಒಂದಿಲ್ಲೊಂದು ತರಹ್ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿಕೊಂಡಿದ್ದೀರಿ. ಒಂದು ಕೆಲಸವನ್ನು ಎಷ್ಟೊಂದು ಅಚ್ಚುಕಟ್ಟಾಗಿ ಮತ್ತು ಕಾನೂನುಬದ್ಧವಾಗಿ ಮಾಡಬಹುದು ಎನ್ನುವುದಕ್ಕೆ ನೀವೊಂದು ನಿದರ್ಶನವನ್ನು ತೋರಿಸಿ ಕೊಟ್ಟಿದ್ದೀರಿ. ಹಾಗೆಯೇ, ಶಿಸ್ತಿನ ಚೌಕಟ್ಟಿನಲ್ಲಿ ವ್ಯಾಪಾರ-ವಹಿವಾಟುಗಳನ್ನು ಹೇಗೆ ಬೆಳೆಸಬಹುದು ಎನ್ನುವುದನ್ನು ನೀವು ಸಾಧಿಸಿದ್ದೀರಿ. ಸೈದ್ನಾ ಸಾಹೇಬರು ನಮಗೆ ಇದನ್ನು ಪದೇಪದೇ ಬೋಧಿಸಿದ್ದಾರೆ. ಇದೇನೂ ಸಣ್ಣ ಸಂಗತಿಯಲ್ಲ. ದಾವೂದಿ ಬೋಹ್ರಾ ಸಮುದಾಯವು ಜಗತ್ತಿನ ಯಾವುದೇ ಭಾಗದಲ್ಲಿ ನೆಲೆ ನಿಂತಿದ್ದರೂ ಸಹ ಇಂತಹ ಮೌಲ್ಯಗಳೊಂದಿಗೆ ತನ್ನದೇ ಆದ ಅಸ್ಮಿತೆಯನ್ನು ಪಡೆದುಕೊಂಡಿದೆಯಲ್ಲದೆ, ಗೌರವಕ್ಕೂ ಪಾತ್ರವಾಗಿದೆ.

 

ಪ್ರಾಮಾಣಿಕತೆಯೊಂದಿಗೆ ಒಂದು ವ್ಯಾಪಾರವನ್ನು ಹೇಗೆ ಮುಂದುವರಿಸಿಕೊಂಡು ಹೋಗಬಹುದು ಎನ್ನುವುದನ್ನು ನೀವು ನಿಮ್ಮ ನಡೆವಳಿಕೆಯ ಮೂಲಕ ಪುನರ್ ಪ್ರತಿಷ್ಠಾಪಿಸಿದ್ದೀರಿ. ಒಬ್ಬ ವ್ಯಾಪಾರಿಯು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾನೆ. ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ವ್ಯಾಪಾರಿಯು ತುಂಬಾ ಮುಖ್ಯನಾಗಿದ್ದಾನೆ. ಇಂತಹ ವ್ಯಾಪಾರಿಯನ್ನು ನಾವು ಸಾಧ್ಯವಾದಷ್ಟೂ ಮಟ್ಟಿಗೆ ಉತ್ತೇಜಿಸಲು ಪ್ರಯುತ್ನಿಸಿದ್ದೇವೆ. ಇದು ನಮ್ಮ ಆದ್ಯತೆಯೇ ಆಗಿದೆ.

ಆದರೆ, ಐದು ಬೆರಳುಗಳೂ ಒಂದೇ ಸಮವಲ್ಲ ಎನ್ನವುದು ಕೂಡ ಸತ್ಯ. ಮೋಸ ಮಾಡುವುವೇ ವ್ಯಾಪಾರ ಎಂದುಕೊಂಡಿರುವ ಜನರೂ ನಮ್ಮ ನಡುವೆ ಇದ್ದಾರೆ. ಆದರೆ, ಪ್ರತಿಯೊಬ್ಬರೂ ಕಾನೂನಿಗೆ ಬದ್ಧರಾಗಿರಲೇಬೇಕು ಎನ್ನುವ ಸಂದೇಶವನ್ನು ಕಳಿಸುವಲ್ಲಿ ನಮ್ಮ ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗಿದೆ. ಪ್ರಾಮಾಣಿಕ ವ್ಯಾಪಾರ-ವಹಿವಾಟುದಾರರನ್ನು ಜಿಎಸ್ಟಿ ಮತ್ತು ದಿವಾಳಿ ಸಂಹಿತೆಯಂತಹ ಅನೇಕ ಶಾಸನಾತ್ಮಕ ಕ್ರಮಗಳ ಮೂಲಕ ಉತ್ತೇಜಿಸಲಾಗುತ್ತಿದೆ. ನನ್ನ ಪ್ರೀತಿಯ ಬೋಹ್ರಾ ಸಮುದಾಯವು ಇದರಿಂದ ಗರಿಷ್ಠ ಲಾಭವನ್ನು ಪಡೆದುಕೊಂಡಿದೆ.

 

ಕಳೆದ ನಾಲ್ಕು ವರ್ಷಗಳಲ್ಲಿ ದೇಶದಾದ್ಯಂತ ಮತ್ತು ಜಗತ್ತಿನೆಲ್ಲೆಡೆ ಬಂಡವಾಳ ಹೂಡಿಕೆದಾರರ ವಿಶ್ವಾಸವು ಹೆಚ್ಚುವಲ್ಲಿ ಇದೂ ಸಹ ಒಂದು ದೊಡ್ಡ ಕಾರಣವಾಗಿದೆ. ಸದ್ಯದ ಚಿತ್ರಣದ ಪ್ರಕಾರ, `ಮೇಕ್ ಇನ್ ಇಂಡಿಯಾ’ ಯೋಜನೆಯಡಿ ನಾವು ದಾಖಲೆ ಸಂಖ್ಯೆಯ ಮೊಬೈಲ್ ಸೆಟ್ ಗಳನ್ನು, ಕಾರುಗಳನ್ನು ಮತ್ತು ಇತರ ಉತ್ಪನ್ನಗಳನ್ನು ಉತ್ಪಾದಿಸಿದ್ದೇವೆ. ಇನ್ನೊಂದೆಡೆ, ನಮ್ಮಲ್ಲಿಗೆ ಬರುತ್ತಿರುವ ಬಂಡವಾಳವು ಕೂಡ ದಾಖಲೆ ಪ್ರಮಾಣದಲ್ಲಿದೆ. ಇದರ ಫಲವಾಗಿ, ಕಳೆದ ತ್ರೈಮಾಸಿಕದ ಅವಧಿಯಲ್ಲಿ ನಾವು ಶೇಕಡ 8ಕ್ಕಿಂತ ಹೆಚ್ಚು ಪ್ರಮಾಣದ ಬೆಳವಣಿಗೆಯನ್ನು ಕಂಡಿದ್ದೇವೆ. ನಿಮ್ಮ ಪ್ರಯತ್ನ ಮತ್ತು 125 ಕೋಟಿ ಭಾರತೀಯರ ಶ್ರಮವೇ ಇದಕ್ಕೆ ಕಾರಣ. ಅಂದಂತೆ, ನಮ್ಮದು ಇಡೀ ಜಗತ್ತಿನಲ್ಲೇ ಅತ್ಯಂತ ವೇಗದಿಂದ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿದೆ.

 

ಸದ್ಯಕ್ಕೆ ದೇಶವು ಈಗ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಲು ಹವಣಿಸುತ್ತಿದೆ. ಹಲವು ಕಠಿಣ ಸವಾಲುಗಳ ಮಧ್ಯೆಯೂ ನಾವೀಗ ಬೆಳವಣಿಗೆ ಹೊಂದುತ್ತಿರುವ ಪ್ರಮಾಣವನ್ನು ನೋಡಿದರೆ, ದೇಶವು ತನ್ನ ಸ್ವಂತ ಬಲದಿಂದಲೇ ಎರಡಂಕಿಯ ಬೆಳವಣಿಗೆ ದರವನ್ನು ಸಾಧಿಸಲಿದೆ.

 

ಮಿತ್ರರೇ,

ಇಡೀ ಜಗತ್ತಿನ ಮುಂದೆ ಭಾರತಕ್ಕೊಂದು ಒಳ್ಳೆಯ ವರ್ಚಸ್ಸನ್ನು ಸೃಷ್ಟಿಸುವಲ್ಲಿ ನೀವೆಲ್ಲರೂ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತಿದ್ದೀರಿ. ಪುರಾತನ ಭಾರತವು ಹೇಗೆ ಜಗತ್ತಿನಲ್ಲಿ ಜಾಜ್ವಲ್ಯಮಾನವಾದ ಸ್ಥಾನಮಾನವನ್ನು ಹೊಂದಿತ್ತೋ, ಅದೇ ರೀತಿಯಲ್ಲಿ ನಮ್ಮ `ನವಭಾರತ’ವು ಕೂಡ ಬೆಳಗುವಂತೆ ಮಾಡುವ ಸದವಕಾಶ ನಮಗೆ ಸಿಕ್ಕಿದೆ.

ನಮ್ಮ ದೇಶವನ್ನು ಪುನರ್ನಿರ್ಮಿಸಲು ನಾವೆಲ್ಲರೂ ದಣಿವರಿಯದೆ ಮುಂದಡಿ ಇಡಬೇಕಾಗಿದೆ. ಇಂತಹ ನಂಬಿಕೆಯೊಂದಿಗೆ ನಾನು ನನ್ನ ಈ ಭಾಷಣವನ್ನು ಮುಗಿಸುತ್ತಿದ್ದೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ಸೈಊದ್ನಾ ಸಾಹೇಬರು ಮತ್ತು ಅವರ ಕುಟುಂಬ ವರ್ಗಕ್ಕೆ ನನ್ನ ಹೃದಯಾಂತರಾಳದ ಕೃತಜ್ಞತೆಗಳು. ನೀವು ಸದಾ ನನಗೆ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದ ಮಳೆ ಸುರಿಸಿದ್ದೀರಿ. ನಿಮ್ಮ ಈ ಆಶೀರ್ವಾದವೇ ನನ್ನ ಆಸ್ತಿ ಮತ್ತು ಶಕ್ತಿ. ಇದು ಕೇವಲ ನನ್ನೊಬ್ಬನ ಪಾಲಿಗಷ್ಟೆ ಶಕ್ತಿಯಲ್ಲ; ಬದಲಿಗೆ, ಇಡೀ 125 ಕೋಟಿ ಭಾರತೀಯರಿಗೆ ಇದು ಶಕ್ತಿಯಾಗಿದೆ. ಈ ಹಾರೈಕೆ, ಶಕ್ತಿ ಮತ್ತು ವಿಶ್ವಾಸಗಳನ್ನು ನನ್ನ ದೇಶವಾಸಿಗಳಿಗೆ ನಾನು ಸಮರ್ಪಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ನನ್ನ ಎದೆಯಾಳದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

……



(Release ID: 1561255) Visitor Counter : 71


Read this release in: English , Marathi , Bengali , Tamil