ಪ್ರಧಾನ ಮಂತ್ರಿಯವರ ಕಛೇರಿ

9ನೇ ವೈಬ್ರೆಂಟ್ ಗುಜರಾತ್ ಶೃಂಗಸಭೆ – 2019 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

Posted On: 18 JAN 2019 2:13PM by PIB Bengaluru

9ನೇ ವೈಬ್ರೆಂಟ್ ಗುಜರಾತ್ ಶೃಂಗಸಭೆ – 2019 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

 

ಗೌರವಾನ್ವಿತ ಸಚಿವರೇ, ನಾನಾ ರಾಷ್ಟ್ರಗಳ ಗಣ್ಯರೇ, ಜನ ಪ್ರತಿನಿಧಿಗಳೇ ಹಾಗೂ  ಪಾಲುದಾರ ರಾಷ್ಟ್ರಗಳ ಪ್ರತಿನಿಧಿಗಳೇ ಕಾರ್ಪೊರೇಟ್ ನಾಯಕರೇ, ಆಹ್ವಾನಿತರೇ, ವೇದಿಕೆ ಮೇಲಿನ ಗಣ್ಯರೇ, ಯುವ ಸ್ನೇಹಿತರೇ, ಮಹನಿಯರೇ ಮತ್ತು ಮಹಿಳೆಯರೇ,

 

ಈ 9ನೇ ಆವೃತ್ತಿಯ ಗುಜರಾತ್ ವೈಬ್ರೆಂಟ್ ಶೃಂಗಸಭೆಗೆ ನಿಮ್ಮನ್ನೆಲ್ಲರನ್ನು ಸ್ವಾಗತಿಸಲು ನನಗೆ ಹರ್ಷವಾಗುತ್ತಿದೆ.

 

ನೀವೇ ನೋಡುತ್ತಿರುವಂತೆ ಈ ಶೃಂಗಸಭೆ ನಿಜಕ್ಕೂ ಜಾಗತಿಕ ಕಾರ್ಯಕ್ರಮವಾಗಿ ಬೆಳೆದಿದೆ. ಇಲ್ಲಿ ಎಲ್ಲರಿಗೂ ಅವಕಾಶವಿದೆ. ಹಿರಿಯ ರಾಜಕೀಯ ನಾಯಕರ ಸಮಕ್ಷಮದಲ್ಲಿ ನಡೆಯುತ್ತಿರುವ ಇದಕ್ಕೆ ವಿಶೇಷ ಹೆಮ್ಮೆ ಇದೆ. ಇದರಲ್ಲಿ ಹೆಸರಾಂತ ಸಂಸ್ಥೆಗಳ ದಿಗ್ಗಜರು ಮತ್ತು ನೀತಿ ನಿರೂಪಕರು ಮಾತ್ರವಲ್ಲದೆ, ಇದರಲ್ಲಿ ಸಿಇಒಗಳು ಮತ್ತು ಕಾರ್ಪೋರೇಟ್ ನಾಯಕರ ಶಕ್ತಿ ಇದೆ. ಯುವ ಉದ್ದಿಮೆದಾರರು ಹಾಗೂ ನವೋದ್ಯಮದ ಯುವ ಪ್ರತಿಭೆಗಳ ಸಂಗಮವಿದೆ. 

 

ವೈಬ್ರೆಂಟ್ ಗುಜರಾತ್ ಶೃಂಗಸಭೆ ನಮ್ಮ ಉದ್ದಿಮೆದಾರರ ವಿಶ್ವಾಸವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ. ಇದು ನಮ್ಮ ಸಾಮರ್ಥ್ಯವೃದ್ಧಿಗೆ ಮತ್ತು ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಉತ್ತಮ ಪದ್ಧತಿಗಳ ಅಳವಡಿಕೆಗೆ ನೆರವಾಗಿದೆ. 

 

ಈ ಸಮಾವೇಶ ಅತ್ಯಂತ ಫಲಪ್ರದವಾಗಲಿ ಮತ್ತು ಇದು ಹೆಚ್ಚಿನ ಪ್ರಗತಿಗೆ ನೆರವಾಗಲಿ ಹಾಗೂ ಎಲ್ಲರೂ ಇದರಲ್ಲಿ ಆನಂದಿಸಿ ಎಂದು ನಾನು ಆಶಿಸುತ್ತೇನೆ. ಗುಜರಾತ್ ನಲ್ಲೀಗ ಉತ್ತರಾಯಣದಲ್ಲಿ ಗಾಳಿಪಟ ಉತ್ಸವಗಳು ನಡೆಯುವ ಋತು. ತಮ್ಮೆಲ್ಲಾ ಒತ್ತಡದ ನಡುವೆಯೂ ನೀವು ಸಮಯ ಬಿಡುವು ಮಾಡಿಕೊಂಡು ರಾಜ್ಯದಲ್ಲಿನ ಹಬ್ಬಗಳನ್ನು ಹಾಗೂ ಹೊರಗಿನ ಸೌಂದರ್ಯವನ್ನು ಸವಿಯಿರಿ ಎಂದು ನಾನು ಕೇಳಿಕೊಳ್ಳುತ್ತೇನೆ. 

 

ವಿಶೇಷವಾಗಿ ನಾನು ಈ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ 15 ಪಾಲುದಾರ ರಾಷ್ಟ್ರಗಳನ್ನು ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. 

 

ಅಲ್ಲದೆ, 11 ಪಾಲುದಾರ ಸಂಸ್ಥೆಗಳನ್ನು ಮತ್ತು ಅವುಗಳ ದೇಶಗಳಿಗೂ ಸಹ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ವೇದಿಕೆಯಲ್ಲಿ ನಡೆಯಲಿರುವ ವಿಚಾರಸಂಕಿರಣಗಳನ್ನು ಆ ಸಂಸ್ಥೆಗಳು ಮತ್ತು ಕೇಂದ್ರಗಳು ನಡೆಸಲಿವೆ. ಭಾರತದ ಎಂಟು ಇತರೆ ರಾಜ್ಯಗಳು ಈ ವೇದಿಕೆಯನ್ನು ಬಳಸಿಕೊಂಡು, ತಮ್ಮ ರಾಜ್ಯಗಳಲ್ಲಿರುವ ಬಂಡವಾಳ ಹೂಡಿಕೆ ಅವಕಾಶಗಳನ್ನು ಬಿಂಬಿಸಲು ಮುಂದೆ ಬಂದಿರುವುದು ತೃಪ್ತಿದಾಯಕ ವಿಚಾರ. 

 

ಇದೇ ಶೃಂಗಸಭೆಯ ಭಾಗವಾಗಿರುವ ಜಾಗತಿಕ ವ್ಯಾಪಾರ ಮೇಳಕ್ಕೂ ಭೇಟಿ ನೀಡುವುದಕ್ಕೆ ನೀವು ಬಿಡುವು ಮಾಡಿಕೊಳ್ಳುವಿರಿ ಎಂದು ನಾನು ಭಾವಿಸಿದ್ದೇನೆ. ಈ ಮೇಳದಲ್ಲಿ ಭಾರತದಲ್ಲಿನ ವಿಶ್ವದರ್ಜೆಯ ಉತ್ಪನ್ನಗಳು, ಅವುಗಳನ್ನು ತಯಾರಿಸುವ ಬಗೆ ಮತ್ತು ತಂತ್ರಜ್ಞಾನ, ವ್ಯಾಪಾರಿ ಸ್ಫೂರ್ತಿ ಸೇರಿದಂತೆ ನಾನಾ ಬಗೆಯ ವಸ್ತುಗಳ ಪ್ರದರ್ಶನವನ್ನು ಕಾಣಬಹುದು. ಗುಜರಾತ್ ಭಾರತದಲ್ಲಿರುವ ಎಲ್ಲ ಬಗೆಯ ವ್ಯಾಪಾರಿ ಸ್ಪೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮ ಹಲವಾರು ದಶಕಗಳಿಂದ ಗುಜರಾತ್ ಮುಂಚೂಣಿಯಲ್ಲಿ ನಿಲ್ಲಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ. ಈ ವೈಬ್ರೆಂಟ್ ಗುಜರಾತ್ ಶೃಂಗಸಭೆ 8 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

 

ಶೃಂಗಸಭೆಯ ಭಾಗವಾಗಿ ನಾನಾ ವಿಷಯಗಳ ಕುರಿತು ಸಮಾವೇಶಗಳು ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲಾಗಿದೆ. ಈ ವಿಷಯಗಳು ಭಾರತೀಯ ಸಮಾಜ, ಆರ್ಥಿಕತೆ ದೃಷ್ಟಿಯಿಂದ ಅತ್ಯಂತ ಪ್ರಮುಖವಾದವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ನಾಳಿನ ಆಫ್ರಿಕಾ ದಿನ ಆಚರಣೆ. ಜನವರಿ 20ರಂದು ನಡೆಯಲಿರುವ ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳ ಜಾಗತಿಕ ದುಂಡುಮೇಜಿನ ಸಭೆ ಮತ್ತಿತರ ಕಾರ್ಯಕ್ರಮಗಳಾಗಿವೆ. 

 

ಗೆಳೆಯರೇ, 

ಇಂದು ಇಲ್ಲಿ ಸೇರಿರುವ ಎಲ್ಲಾ ನಿಜಕ್ಕೂ ಆದರಣೀಯ ಗಣ್ಯರೇ, ಹಲವು ದೇಶಗಳ ಮತ್ತು ರಾಜ್ಯ ಸರ್ಕಾರಗಳ ಮುಖ್ಯಸ್ಥರು ಇಲ್ಲಿ ಉಪಸ್ಥಿತರಿರುವುದು ನಮ್ಮ ಗೌರವ ಹೆಚ್ಚಿಸಿದೆ. ಇದು ಹಲವು ಅಂತಾರಾಷ್ಟ್ರೀಯ ಸಹಕಾರ ಸಂಬಂಧಗಳು ಈಗ ಕೇವಲ ರಾಷ್ಟ್ರದ ರಾಜಧಾನಿಗೆ ಸೀಮಿತವಾಗಿಲ್ಲ, ಅವು ರಾಜ್ಯಗಳ ರಾಜಧಾನಿವರೆಗೆ ವಿಸ್ತರಣೆಯಾಗಿವೆ  ಎಂಬುದನ್ನು ತೋರಿಸುತ್ತದೆ.

ಭಾರತದ ಆರ್ಥಿಕತೆ ಅತ್ಯಂತ ವೇಗದ ಪ್ರಗತಿ ಹೊಂದುತ್ತಿದ್ದು, ನಮ್ಮ ಸವಾಲು ಇರುವುದು ನಾವು ಸಮತಲ ( ಹಾರಿಜಾಂಟಲ್ ) ಬೆಳೆಯುವ ಜೊತೆಗೆ ಊರ್ದ್ವಮುಖ ( ವರ್ಟಿಕಲ್ ) ವಾಗಿಯೂ ಬೆಳೆಯಬೇಕಾಗಿದೆ. 

 

ಊರ್ದ್ವಮುಖವಾಗಿ ಬೆಳೆಯುತ್ತಾ ನಾವು ಹಿಂದುಳಿದ ಸಮುದಾಯ ಮತ್ತು ಪ್ರದೇಶಗಳಿಗೆ ಅಭಿವೃದ್ಧಿಯ ಪ್ರಯೋಜನಗಳನ್ನು ವಿಸ್ತರಿಸಬೇಕಿದೆ. ಸಮತಲವಾಗಿ ನಾವು ಗುಣಮಟ್ಟದ ಜೀವನ, ಗುಣಮಟ್ಟದ ಸೇವೆಗಳು ಮತ್ತು ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸುತ್ತಾ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿದೆ. ನಮಗೆಲ್ಲಾ ತಿಳಿದಿರುವಂತೆ ನಮ್ಮ ಭಾರತದಲ್ಲಿನ ಈ ಸಾಧನೆಗಳು, ಆರನೇ ಒಂದು ಭಾಗದಷ್ಟು ಮಾನವೀಯತೆ ಮೇಲೆ ನೇರ ಪರಿಣಾಮ ಬೀರಲಿವೆ. 

 

ಗೆಳೆಯರೇ, 

ಭಾರತಕ್ಕೆ ಆಗಿಂದ್ದಾಗ್ಗೆ ಭೇಟಿ ನೀಡುತ್ತಿರುವವರು ಬದಲಾವಣೆಯ ಗಾಳಿಯನ್ನು ಕಾಣಬಹುದಾಗಿದೆ. ಬದಲಾವಣೆ ದಿಕ್ಕು ಮತ್ತು ತೀವ್ರತೆ ಎರಡೂ ರೀತಿಯಲ್ಲೂ ಕಾಣಬಹುದಾಗಿದೆ. ಕಳೆದ ನಾಲ್ಕು ವರ್ಷಗಳಿಂದೀಚೆಗೆ ಕೇಂದ್ರ ಸರ್ಕಾರ ಆಡಳಿತದಲ್ಲಿ ಹಸ್ತಕ್ಷೇಪ ಇಳಿಕೆ ಮಾಡಿ, ಜನರಿಗೆ ಆಡಳಿತವನ್ನು ನೀಡಿದೆ. ನಮ್ಮ ಮಂತ್ರವೆಂದರೆ ಸುಧಾರಣೆ (ರಿಫಾರ್ಮ್), ಸಾಧನೆ(ಪರ್ ಫಾರ್ಮ್), ಪರಿವರ್ತನೆ(ಟ್ರಾನ್ಸ್ ಫಾರ್ಮ್) ಮತ್ತು ಇನ್ನಷ್ಟು ಸಾಧನೆ(ಫರ್ದರ್ ಫರ್ ಫಾರ್ಮೆನ್ಸ್) ಎನ್ನುವುದಾಗಿದೆ.

 

ನಾವು ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ನಾವು ಹಲವು ಗಂಭೀರ ಸಾಂಸ್ಥಿಕ ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ನಮ್ಮ ಆರ್ಥಿಕತೆಯನ್ನು ಬಲಗೊಳಿಸುವ ಜೊತೆಗೆ ರಾಷ್ಟ್ರವನ್ನೂ ಬಲವರ್ಧನೆ ಮಾಡಿದ್ದೇವೆ. 

 

ಹಾಗೆ ಮಾಡುವ ಮೂಲಕ ನಾವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿ ಮುಂದುವರಿದಿದ್ದೇವೆ. ಪ್ರಮುಖ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ಐಎಂಎಫ್, ವಿಶ್ವಬ್ಯಾಂಕ್,  ‘ಮೂಡೀಸ್’ಮತ್ತಿತರ ಸಂಸ್ಥೆಗಳು ಭಾರತದ ಆರ್ಥಿಕ ಪಯಣದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿವೆ. 

 

ನಾವು ಪೂರ್ಣ ಪ್ರಮಾಣದ ಸಾಧನೆಗೆ  ಅಡ್ಡಿಯಾಗಿರುವ ಅಡತಡೆಗಳನ್ನು ನಿವಾರಿಸಲು ಗಮನಹರಿಸಿದ್ದೇವೆ. ನಾವು ಆರ್ಥಿಕ ಸುಧಾರಣಾ ಪ್ರಕ್ರಿಯೆಗಳನ್ನು ಮತ್ತು ನಿಯಂತ್ರಣಗಳನ್ನು ತೆಗೆದುಹಾಕುವ ಆ ವೇಗವನ್ನು ಮುಂದುವರಿಸುತ್ತೇವೆ. 

 

ಗೆಳೆಯರೇ,

ಭಾರತ ಈಗ ವ್ಯಾಪಾರಕ್ಕೆ ಸಿದ್ಧವಾಗಿದ್ದು, ಇದು  ಮೊದಲಿನಂತಿಲ್ಲ. ನಾವು ವ್ಯಾಪಾರಕ್ಕೆ ಅನುಕೂಲಕರ ಮತ್ತು ಪೂರಕವಾದ ವಾತಾವರಣ ಸೃಷ್ಟಿಸಿದ್ದೇವೆ. 

 

ಕಳೆದ ನಾಲ್ಕು ವರ್ಷಗಳಿಂದೀಚೆಗೆ ವಿಶ್ವ ಬ್ಯಾಂಕ್ ನ ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ಸೃಷ್ಟಿ ವರದಿಯಲ್ಲಿ ಭಾರತ 65 ಕ್ರಮಾಂಕ ಮೇಲೇರಿದೆ. 

 

2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ 77ನೇ ಸ್ಥಾನಕ್ಕೆ ಏರಿದೆ. ಆದರೂ ನಮಗೆ ಇದು ತೃಪ್ತಿ ತಂದಿಲ್ಲ. ಮುಂದಿನ ವರ್ಷ ನಾವು ಅಗ್ರ 50 ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ತರಲು ಇನ್ನೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವಂತೆ ನಾನು ನಮ್ಮ ತಂಡಕ್ಕೆ ಸೂಚಿಸಿದ್ದೇನೆ. ನಾವು ನಮ್ಮ ನಿಯಂತ್ರಣ ಮತ್ತು ಪ್ರಕ್ರಿಯೆಗಳನ್ನು ವಿಶ್ವದ ಜೊತೆ ಹೋಲಿಕೆ ಮಾಡಬೇಕೆಂದು ಬಯಸುತ್ತೇನೆ. ಆ ಮೂಲಕ ಭಾರತವನ್ನು ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮ ವ್ಯಾಪಾರಿ ತಾಣವನ್ನಾಗಿ ಮಾಡಲು ಉದ್ದೇಶಿಸಿದ್ದೇವೆ. 

 

ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ – ಜಿ.ಎಸ್.ಟಿ ಜಾರಿಯಂತಹ ಕ್ರಮ ಕೈಗೊಳ್ಳಲಾಗಿದ್ದು, ಏಕರೂಪದ ಮತ್ತು ಸರಳ ತೆರಿಗೆ ಪದ್ಧತಿ ಜಾರಿಯಾಗುವ ಜೊತೆಗೆ ಸಾಗಾಣೆ ವೆಚ್ಚ ತಗ್ಗಿದೆ ಮತ್ತು ಇಡೀ ಪ್ರಕ್ರಿಯೆ ಪರಿಣಾಮಕಾರಿಯಾಗಿದೆ. 

 

ಅಲ್ಲದೆ, ಡಿಜಿಟಲ್ ಪ್ರಕ್ರಿಯೆ, ಆನ್ ಲೈನ್ ವಹಿವಾಟು ಮತ್ತು ಏಕಗವಾಕ್ಷಿ ಮತ್ತಿತರ ಯೋಜನೆಗಳ ಮೂಲಕ ತ್ವರಿತ ವಾಣಿಜ್ಯ ವಹಿವಾಟು ವಾತಾವರಣ ಸೃಷ್ಟಿಸಲಾಗಿದೆ. 

 

ವಿದೇಶಿ ನೇರ ಬಂಡವಾಳ – ಎಫ್ ಡಿ ಐ ಆಕರ್ಷಿಸುವಲ್ಲಿ ಭಾರತ ಮುಕ್ತ ರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ಆರ್ಥಿಕತೆಯ ಬಹುತೇಕ ವಲಯಗಳು ಎಫ್ ಡಿ ಐ ಗೆ ಮುಕ್ತವಾಗಿವೆ. ಶೇಕಡ 90ಕ್ಕೂ ಅಧಿಕ ಅನುಮೋದನೆಗಳು ಸಹಜ ಮಾರ್ಗದ ಮೂಲಕ ಸಿಗುವಂತೆ ಮಾಡಲಾಗಿದೆ.  ಇಂತಹ ಕ್ರಮಗಳಿಂದಾಗಿ ನಾವು ನಮ್ಮ ಆರ್ಥಿಕತೆಯಲ್ಲಿ ಹೆಚ್ಚಿನ ಪ್ರಗತಿ ದರ ಕಂಡುಕೊಂಡಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು 263 ಅಮೆರಿಕನ್ ಡಾಲರ್ ಮೌಲ್ಯದ ವಿದೇಶಿ ನೇರ ಬಂಡವಾಳ (ಎಫ್ ಡಿ ಐ) ಸ್ವೀಕರಿಸಿದ್ದು, ಇದು ಕಳೆದ 18 ವರ್ಷಗಳಲ್ಲಿ ಸ್ವೀಕರಿಸಿದ ಎಫ್ ಡಿ ಐ ನ ಶೇ.45ರಷ್ಟಾಗಿದೆ.  

 

ಮತ್ತೆ ಗೆಳೆಯರೇ, 

 

ನಾವು ವಹಿವಾಟು ನಡೆಸುವುದನ್ನೂ ಸಹ ಸ್ಮಾರ್ಟ್ ರೀತಿಯಲ್ಲಿ ಮಾಡುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನ ಆಧಾರಿತ ವಹಿವಾಟುಗಳನ್ನು ನಾವು ಸರ್ಕಾರದ ಎಲ್ಲಾ ಖರೀದಿ ಹಾಗೂ ಮಾರಾಟಕ್ಕೆ ತಾಕೀತು ಮಾಡುತ್ತಿದ್ದು, ಫಲಾನುಭವಿಗಳಿಗೆ ನೇರ ನಗದು ವರ್ಗಾವಣಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು ಇದರಿಂದ ಸರ್ಕಾರಕ್ಕೆ ಪ್ರಯೋಜನವಾಗುತ್ತಿದೆ. ನವೋದ್ಯಮದಲ್ಲಿ ನಾವು ದೇಶದಲ್ಲೇ ಅತಿದೊಡ್ಡ ವ್ಯವಸ್ಥೆಯನ್ನು ರೂಪಿಸಿದ್ದೇವೆ, ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಕಂಪನಿಗಳು ಆರಂಭವಾಗಿವೆ. ಭಾರತದಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಹಲವು ಕಂಪನಿಗಳಿಗೆ ಸುರಕ್ಷಿತ ಹಾಗೂ ಒಂದು ಒಳ್ಳೆಯ ಅವಕಾಶವೆಂದು ಹೇಳಬಹುದು. 

 

ಇದು ಸಾಧ್ಯವಾಗಿರುವುದು ಯು ಎನ್ ಸಿ ಟಿ ಎ ಡಿ ಪಟ್ಟಿ ಮಾಡಿರುವ 10 ಅಗ್ರ ಎಫ್ ಡಿ ಐ ತಾಣಗಳಲ್ಲಿ ನಾವೂ ಕೂಡ ಒಂದಾಗಿರುವುದು. ನಮ್ಮಲ್ಲಿ ಜಾಗತಿಕವಾಗಿ ಅತಿ ಕಡಿಮೆ ದರದಲ್ಲಿ ಉತ್ಪಾದನೆ ಮಾಡುವ ಪರಿಸರವನ್ನು ಹೊಂದಿದ್ದೇವೆ. ನಮ್ಮಲ್ಲಿ ಅಧಿಕ ಜ್ಞಾನ ಮತ್ತು ಶಕ್ತಿ ಇರುವ ಕೌಶಲ್ಯಯುತ ವೃತ್ತಿಪರರಿದ್ದಾರೆ. ನಮ್ಮಲ್ಲಿ ವಿಶ್ವದರ್ಜೆಯ ಇಂಜಿನಿಯರಿಂಗ್ ಶಿಕ್ಷಣದ ಭದ್ರತಳಹದಿಯಿದ್ದು, ಜೊತೆಗೆ ಬಲಿಷ್ಠ ಸಂಶೋಧನಾ ಮತ್ತು ಅಭಿವೃದ್ಧಿ ಸೌಕರ್ಯಗಳಿವೆ. ಜಿಡಿಪಿ ಹೆಚ್ಚಳದಿಂದಾಗಿ ಮಧ್ಯಮ ವರ್ಗದವರ ಸ್ಥಿತಿಗತಿ ಸುಧಾರಣೆ ಜೊತೆಗೆ ಅವರ ಖರೀದಿ ಶಕ್ತಿಯೂ ಹೆಚ್ಚಾಗುತ್ತಿದ್ದು, ಇದು ನಮ್ಮ ಭಾರೀ ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಾಗುತ್ತಿದೆ. ಕಳೆದ ಎರಡು ವರ್ಷಗಳಿಂದೀಚೆಗೆ ನಾವು ಕಾರ್ಪೊರೇಟ್ ಕಡೆಯಿಂದ ಅತಿ ಕಡಿಮೆ ತೆರಿಗೆ ವ್ಯವಸ್ಥೆಯತ್ತ ಸಾಗಿದ್ದೇವೆ. ನಾವು ಹೊಸ ಬಂಡವಾಳ ಹೂಡಿಕೆಗಳು ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇಕಡ 30 ರಿಂದ 25ಕ್ಕೆ ಇಳಿಕೆ ಮಾಡಿದ್ದೇವೆ. ಬೌದ್ಧಿಕ ಹಕ್ಕು ಸಾಮ್ಯ(ಐಪಿಆರ್) ಕುರಿತಂತೆ ನಾವು ಉತ್ತಮ ಪದ್ಧತಿಗಳನ್ನು ರೂಪಿಸಿದ್ದೇವೆ. ಇದೀಗ ನಾವು ಅತ್ಯಂತ ವೇಗದ ಟ್ರೇಡ್ ಮಾರ್ಕ್ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದೇವೆ. ದಿವಾಳಿತನ ಸಂಹಿತೆ ಇದೀಗ ದೀರ್ಘಾವಧಿಯ ಕಾನೂನು ಮತ್ತು ಹಣಕಾಸು ಹೋರಾಟದ ಹೊರೆಯನ್ನು ತಪ್ಪಿಸಿ, ಹೊರಹೋಗುವ ಅವಕಾಶವನ್ನು ವಾಣಿಜ್ಯೋದ್ಯಮಿಗಳಿಗೆ ಕಲ್ಪಿಸಿದೆ. 

 

ಇದರಿಂದಾಗಿ ಬಿಸಿನೆಸ್ ಆರಂಭದಿಂದ ಹಿಡಿದು, ಅದನ್ನು ನಡೆಸುವುದು ಮತ್ತು ಕಂಪನಿಗಳನ್ನು ಮುಚ್ಚುವ ಪ್ರಕ್ರಿಯೆ ಸುಲಭವಾಗಿದ್ದು, ನಾವು ಹೊಸ ಕೇಂದ್ರಗಳ ಸ್ಥಾಪನೆ ಪ್ರಕ್ರಿಯೆ ಮತ್ತು ನಿಯಮಾವಳಿಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಇವೆಲ್ಲಾ ಅತಿಮುಖ್ಯವಾದವು. ಅವುಗಳಿಂದ ಕೇವಲ ವ್ಯಾಪಾರ ವಹಿವಾಟು ನಡೆಸುವುದು ಸುಲಭವಾಗುವುದಲ್ಲದೆ, ನಮ್ಮ ಜನರ ಜೀವನವೂ ಸುಲಭವಾಗಲಿದೆ. ಯುವ ರಾಷ್ಟ್ರವಾಗಿರುವ ನಾವು, ಹೆಚ್ಚಿನ ಉದ್ಯೋಗಾವಕಾಶಗಳು ಮತ್ತು ಮೂಲಸೌಕರ್ಯಗಳನ್ನು ವೃದ್ಧಿಸಬೇಕಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಇವೆರಡು ಬಂಡವಾಳ ಹೂಡಿಕೆ ಜೊತೆ ಸಂಯೋಜನೆಗೊಂಡಿವೆ. ಆದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯಕ್ಕೆ ಹಿಂದೆಂದೂ ನೀಡದಷ್ಟು ಗಮನಹರಿಸಲಾಗುತ್ತಿದೆ. 

 

ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ಪಾದನಾ ವಲಯವನ್ನು ಉತ್ತೇಜಿಸಲು ನಾವು ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ. ‘ಮೇಕ್ ಇನ್ ಇಂಡಿಯಾ’ ಯೋಜನೆಯ ಮೂಲಕ ಬಂಡವಾಳ ಆಕರ್ಷಿಸುತ್ತಾ ಅದಕ್ಕೆ ಪೂರಕವಾಗಿ ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮತ್ತಿತರ ಯೋಜನೆಗಳನ್ನು ಕೈಗೊಳ್ಳಲಾಗಿದೆ. ನಮ್ಮ ಕೈಗಾರಿಕಾ ಮೂಲಸೌಕರ್ಯ ನೀತಿ ಮತ್ತು ಪದ್ಧತಿಗಳಿಗೂ ಹೆಚ್ಚಿನ ಒತ್ತು ನೀಡುತ್ತಾ, ಅವುಗಳಲ್ಲಿ ಜಾಗತಿಕ ಉತ್ತಮ ಮಾನದಂಡಗಳನ್ನು ಕಾಯ್ದುಕೊಳ್ಳುತ್ತಿದ್ದು, ಆ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ಪರಿವರ್ತಿಸಲಾಗುತ್ತಿದೆ. 

 

ಶುದ್ಧ ಇಂಧನ ಮತ್ತು ಹಸಿರು ಅಭಿವೃದ್ಧಿ, ಶೂನ್ಯದೋಷ ಅಥವಾ ನ್ಯೂನತೆ ಮತ್ತು ಉತ್ಪಾದನೆಯ ಮೇಲೆ ಶೂನ್ಯ ಪರಿಣಾಮ, ಇವು ನಮ್ಮ ಬದ್ಧತೆಗಳಾಗಿವೆ. ಹವಾಮಾನ ವೈಪರೀತ್ಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಾವು ವಿಶ್ವಕ್ಕೆ ಬದ್ಧವಾಗಿದ್ದೇವೆ. ಇಂಧನ ವಲಯದಲ್ಲಿ ನಾವು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಐದನೇ ಅತಿದೊಡ್ಡ ರಾಷ್ಟ್ರವಾಗಿದ್ದೇವೆ. ಅಲ್ಲದೆ, ಪವನ ವಿದ್ಯುತ್ ಉತ್ಪಾದನೆಯಲ್ಲಿ ನಾಲ್ಕನೇ ಅತಿದೊಡ್ಡ ರಾಷ್ಟ್ರಮತ್ತು ಸೌರಶಕ್ತಿ ಉತ್ಪಾನೆಯಲ್ಲಿ ಐದನೇ ಅತಿದೊಡ್ಡ ರಾಷ್ಟ್ರವಾಗಿದ್ದೇವೆ. 

 

ನಾವು ಮುಂದಿನ ತಲೆಮಾರಿಗೆ ಅಗತ್ಯವಾದ ಮೂಲಸೌಕರ್ಯಗಳಾದ ರಸ್ತೆಗಳು, ಬಂದರು, ರೈಲ್ವೆ, ವಿಮಾನ ನಿಲ್ದಾಣ, ದೂರಸಂಪರ್ಕ, ಡಿಜಿಟಲ್ ಸಂಪರ್ಕಜಾಲ ಮತ್ತು ಇಂಧನ ವಲಯಗಳಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇವೆ. ಅಲ್ಲದೆ, ನಾವು ನಮ್ಮ ಸಾಮಾಜಿಕ, ಕೈಗಾರಿಕಾ ಮತ್ತು ಕೃಷಿ ಮೂಲಸೌಕರ್ಯಕ್ಕೂ ಹೆಚ್ಚಿನ ಹೂಡಿಕೆ ಮಾಡುವ ಮೂಲಕ ನಮ್ಮ ಜನರು ಉತ್ತಮ ಆದಾಯ ಗಳಿಸುವಂತೆ ಮತ್ತು ಗುಣಮಟ್ಟದ ಜೀವನ ಸಾಗಿಸಲು ನೆರವಾಗುತ್ತಿದ್ದೇವೆ. ಇದಕ್ಕೆ ಉದಾಹರಣೆ ನೀಡುವುದಾದರೆ ನಾಲ್ಕು ವರ್ಷಗಳಲ್ಲಿ ಇಂಧನ ಗರಿಷ್ಠ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸಲಾಗಿದೆ ಮತ್ತು ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಭಾರತ ವಿದ್ಯುತ್ ರಫ್ತು ಮಾಡುವ ರಾಷ್ಟ್ರವಾಗಿದೆ. ನಾವು ಎಲ್ ಇ ಡಿ ಬಲ್ಬ್ ಗಳನ್ನು ಭಾರೀ ಪ್ರಮಾಣದಲ್ಲಿ ವಿತರಣೆ ಮಾಡಿದ್ದೇವೆ. ಇದರಿಂದಾಗಿ ನಾವು ಭಾರೀ ಪ್ರಮಾಣದ ವಿದ್ಯುತ್ ಉಳಿತಾಯ ಮಾಡುತ್ತಿದ್ದೇವೆ. ನಾವು ನಿರೀಕ್ಷೆ ಮಾಡದಂತಹ ಜಾಗಗಳಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಸ್ಥಾಪಿಸಿದ್ದೇವೆ. ನಮ್ಮ ರಸ್ತೆ ನಿರ್ಮಾಣದ ವೇಗ ಬಹುತೇಕ ದುಪ್ಪಟ್ಟಾಗಿದೆ. ಹೊಸ ರೈಲು ಮಾರ್ಗಗಳ ನಿರ್ಮಾಣ, ಗೇಜ್ ಪರಿವರ್ತನೆ, ಡಬ್ಲಿಂಗ್ ಮತ್ತು ರೈಲ್ವೆ ಮಾರ್ಗಗಳ ವಿದ್ಯುದೀಕರಣ ಕಾಮಗಾರಿಗಳ ವೇಗ ದುಪ್ಪಟ್ಟಾಗಿದೆ. ಆನ್ ಲೈನ್ ಪ್ರಕ್ರಿಯೆ ಮೂಲಕ ನಾವು ಬಹುತೇಕ ದೊಡ್ಡ ಯೋಜನೆಗಳ ಜಾರಿಗೆ ಇದ್ದ ಅಡತಡೆಗಳನ್ನು ನಿವಾರಿಸಿದ್ದೇವೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ ಪದ್ಧತಿಯನ್ನು ನಾವು ಮೂಲಸೌಕರ್ಯ ವಲಯದಲ್ಲಿ  ಅಳವಡಿಸಿಕೊಂಡಿರುವುದರಿಂದ, ಇದು ಹೆಚ್ಚು ಹೂಡಿಕೆದಾರರ ಸ್ನೇಹಿಯಾಗಿದೆ. ಜಿ.ಡಿ.ಪಿ ಬೆಳವಣಿಗೆ ಸರಾಸರಿ ಶೇಕಡ 7.3ರಷ್ಟಿದ್ದು, 1991ರ ನಂತರ ಯಾವುದೇ ಭಾರತ ಸರ್ಕಾರದ ಅವಧಿಗೆ ಹೋಲಿಸಿದರೆ, ನಮ್ಮ ಇಡೀ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಜಿಡಿಪಿ ಪ್ರಮಾಣ ದಾಖಲಾಗಿದೆ. ಇದೇ ವೇಳೆ ಹಣದುಬ್ಬರ ದರ 1991ರ ನಂತರ ಭಾರತದಲ್ಲಿ ಜಾಗತೀಕರಣ ಪ್ರಕ್ರಿಯೆ ಕೈಗೊಂಡ ಬಳಿಕ ಯಾವುದೇ ಸರ್ಕಾರದ ಅವಧಿಯಲ್ಲಿ ಇಲ್ಲದಂತಹ ರೀತಿಯಲ್ಲಿ ಹಣದುಬ್ಬರ ದರ ಅತಿ ಕಡಿಮೆ ಎನ್ನಬಹುದಾದ ಶೇಕಡ 4.6ಕ್ಕೆ ಇಳಿಕೆಯಾಗಿದೆ. 

 

ಅಭಿವೃದ್ಧಿಯ ಫಲ ನಮ್ಮ ಜನರಿಗೆ ಅತ್ಯಂತ ಸುಲಭ ಮತ್ತು ಪರಿಣಾಮಕಾರಿಯಾಗಿ ತಲುಪಬೇಕು ಎಂಬುದು ನಮ್ಮ ನಂಬಿಕೆಯಾಗಿದೆ. 

 

ಇದಕ್ಕೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ ನಾವು ಇದೀಗ ಪ್ರತಿ ಕುಟುಂಬವೂ ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡಿದ್ದೇವೆ. ಯಾವುದೇ ಖಾತ್ರಿಯಿಲ್ಲದೇ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಸಾಲ-ಸೌಲಭ್ಯ ಒದಗಿಸಲಾಗುತ್ತಿದೆ. ನಾವು ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಅಲ್ಲದೆ ಪ್ರತಿ ಕುಟುಂಬಕ್ಕೂ ವಿದ್ಯುತ್  ಸೌಕರ್ಯ ಒದಗಿಸಲಾಗಿದೆ. ನಾವು ಖರೀದಿ ಸಾಮರ್ಥ್ಯವಿಲ್ಲದ ಅತಿದೊಡ್ಡ ಜನಸಂಖ್ಯೆಯಗೆ ಉಚಿತ ಎಲ್ .ಪಿ.ಜಿ ಅಡುಗೆ ಅನಿಲ ಸಂಪರ್ಕವನ್ನು ನೀಡಿದ್ದೇವೆ. ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲೂ ಸೂಕ್ತ ನೈರ್ಮಲೀಕರಣ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಎಲ್ಲ ಕುಟುಂಬಗಳನ್ನು ಶೌಚಾಲಯ ಬಳಕೆ ವ್ಯಾಪ್ತಿಗೆ ತರಲು ನಾವು ಕಾರ್ಯೋನ್ಮುಖವಾಗಿದ್ದೇವೆ. 

 

ಮಹನಿಯರೇ, ಮಹಿಳೆಯರೇ, 

ನಾವು 2017ರಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿದ್ದೇವೆ. 2016ರ ಅವಧಿಯಲ್ಲಿ ಭಾರತ ಪ್ರವಾಸಿ ವಲಯದಲ್ಲಿ ಶೇಕಡ 14ರಷ್ಟು ಪ್ರಗತಿ ಸಾಧಿಸಿದ್ದರೆ, ಅದೇ ಅವಧಿಯಲ್ಲಿ ಇಡೀ ವಿಶ್ವ ಶೇಕಡ 7ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ನಾವು ವಿಶ್ವದಲ್ಲೇ ಅತ್ಯಂತ ವೇಗವಾದ ವಿಮಾನಯಾನ ಮಾರುಕಟ್ಟೆ ಹೊಂದಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಪ್ರಯಾಣಿಕರ ಟಿಕೆಟ್ ಖರೀದಿಯ ಪ್ರಗತಿ ಸಂಖ್ಯೆ ಎರಡಂಕೆ ದಾಟಿದೆ. 

 

ನವಭಾರತ ಉದಯವಾಗುತ್ತಿದ್ದು, ಅದು ಆಧುನಿಕ ಮತ್ತು ಸ್ಪರ್ಧಾತ್ಮಕವಾಗಿರಲಿದೆ ಮತ್ತು ಬೇರೆಯವರನ್ನು ರಕ್ಷಿಸುವ ಹಾಗೂ ಅನುಕಂಪ ತೋರುವ ಗುಣ ಹೊಂದಿರುತ್ತದೆ. ಅನುಕಂಪಕ್ಕೆ ಉತ್ತಮ ಉದಾಹರಣೆಯೆಂದರೆ ನಮ್ಮ ವೈದ್ಯಕೀಯ ಭರವಸೆ ಯೋಜನೆ, ಆಯುಷ್ಮಾನ್ ಭಾರತ್ ಆಗಿದೆ. ಈ ಯೋಜನೆ 500 ಮಿಲಿಯನ್ ಜನರಿಗೆ ಅಂದರೆ- ಅಮೆರಿಕ, ಕೆನಡ ಮತ್ತು ಮೆಕ್ಸಿಕೋ ರಾಷ್ಟ್ರಗಳನ್ನು ಒಗ್ಗೂಡಿಸಿದರೆ ಆಗುವ ಜನಸಂಖ್ಯೆಗಿಂತಾ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸುತ್ತದೆ. ಅಲ್ಲದೆ ಆಯುಷ್ಮಾನ್ ಭಾರತ ಯೋಜನೆ ಆರೋಗ್ಯ ಮೂಲಸೌಕರ್ಯ, ಆರೋಗ್ಯ ಸಂಬಂಧಿ ಸಲಕರಣೆಗಳ ಉತ್ಪಾದನೆ ಮತ್ತು ಆರೋಗ್ಯ ರಕ್ಷಣಾ ಸೇವಾ ವಿಭಾಗಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶ ಒದಗಿಸುತ್ತದೆ. 

 

ಇನ್ನೂ ಕೆಲವು ಉದಾಹರಣೆಗಳನ್ನು ನೀಡುವುದಾದರೆ ಭಾರತದ 50 ನಗರಗಳು ಮೆಟ್ರೋ ರೈಲು ವ್ಯವಸ್ಥೆ ನಿರ್ಮಾಣಕ್ಕೆ ಸಿದ್ಧವಾಗಿವೆ. ನಾವು 50 ಮಿಲಿಯನ್ ಮನೆಗಳನ್ನು ನಿರ್ಮಿಸಿದ್ದೇವೆ. ರಸ್ತೆ, ರೈಲು ಮತ್ತು ಜಲಮಾರ್ಗದ ಅಗತ್ಯತೆ ಹೆಚ್ಚಿದೆ. ನಮ್ಮ ಗುರಿಗಳನ್ನು ತ್ವರಿತ ಮತ್ತು ಸರಿಯಾದ ದಿಕ್ಕಿನಲ್ಲಿ ಸಾಧಿಸಲು ವಿಶ್ವದರ್ಜೆಯ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳಬೇಕಿದೆ. 

 

ಗೆಳೆಯರೇ, 

ಇದೇ ಕಾರಣಕ್ಕೆ ಭಾರತ ವಿಫುಲ ಅವಕಾಶಗಳ ತಾಣವಾಗಿದೆ. ಇದೊಂದೇ ಸ್ಥಳದಲ್ಲಿ ನೀವು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಗಳನ್ನು ಕಾಣಬಹುದಾಗಿದೆ. ಭಾರತದಲ್ಲಿ ಈಗಾಗಲೇ ಬಂಡವಾಳ ಹೂಡಿರುವ ಕಂಪನಿಗಳಿಗೆ ನಾವು ನೀಡುವ ಭರವಸೆ ಎಂದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ, ಮಾನವೀಯ ಮೌಲ್ಯಗಳು ಮತ್ತು ಬಲಿಷ್ಠ ನ್ಯಾಯಾಂಗ ಪದ್ಧತಿ ಇವು ನಿಮ್ಮ ಹೂಡಿಕೆಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತವೆ ಎಂದು. 

 

ಬಂಡವಾಳ ಹೂಡಿಕೆ ವಾತಾವರಣವನ್ನು ಇನ್ನಷ್ಟು ಸುಧಾರಿಸಿ, ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ನಾವು ನಿರಂತರ ಪ್ರಯತ್ನಗಳನ್ನು ನಡೆಸಿದ್ದೇವೆ. 

 

ಈಗಾಗಲೇ ಭಾರತದಲ್ಲಿ ಹೂಡಿಕೆ ಮಾಡದವರಿಗೆ ನಾನು ಈ ಮೂಲಕ ಆಹ್ವಾನ ನೀಡುತ್ತಿದ್ದು, ಇಲ್ಲಿನ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ನಿಮ್ಮನ್ನು ಉತ್ತೇಜಿಸುತ್ತಿದ್ದೇನೆ. ಇಲ್ಲಿ ಬಂಡವಾಳ ಹೂಡಿಕೆಗೆ ಇದು ಅತ್ಯುತ್ತಮ ಕಾಲ. ನಾವು ಹೂಡಿಕೆದಾರರಿಗೆ ಪ್ರತಿಯೊಬ್ಬರಿಗೂ ಸಹಾಯ ಮಾಡಲು ನಿಗದಿತ ಮಾರ್ಗಸೂಚಿಗಳನ್ನು ರೂಪಿಸಿದ್ದೇವೆ. ಇದೆಲ್ಲದಿಕ್ಕೂ ಹೆಚ್ಚಾಗಿ ನಿಮ್ಮ ಪಯಣದಲ್ಲಿ ನಾನು ಸದಾ ನಿಮಗೆ ಲಭ್ಯವಿರುತ್ತೇನೆ ಎಂದು ಈ ಮೂಲಕ ಭರವಸೆ ನೀಡುತ್ತಿದ್ದೇನೆ. 

 

ಧನ್ಯವಾದಗಳು

ತುಂಬಾ ತುಂಬಾ ಧನ್ಯವಾದಗಳು



(Release ID: 1560699) Visitor Counter : 65