ಪ್ರಧಾನ ಮಂತ್ರಿಯವರ ಕಛೇರಿ

ಪಶ್ಚಿಮ ಒಡಿಶಾ ಮತ್ತು ಕರಾವಳಿಯಲ್ಲಿ ಉತ್ತೇಜನ ಪಡೆಯಲು ಸಂಪರ್ಕ, ಸುಗಮ ವ್ಯಾಪಾರ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ 

Posted On: 14 JAN 2019 4:12PM by PIB Bengaluru

ಪಶ್ಚಿಮ ಒಡಿಶಾ ಮತ್ತು ಕರಾವಳಿಯಲ್ಲಿ ಉತ್ತೇಜನ ಪಡೆಯಲು ಸಂಪರ್ಕ, ಸುಗಮ ವ್ಯಾಪಾರ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ 

ಒಡಿಶಾದ ಬಾಲಂಗೀರ್ ಗೆ ನಾಳೆ ಭೇಟಿ ನೀಡಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ. ಜರ್ಸುಗುಡದಲ್ಲಿ ದೇಶಕ್ಕೆ ಸಮರ್ಪಣೆಯಾಗಲಿರುವ ಬಹು ಮಾದರಿ ಸಾಗಣೆ ಉದ್ಯಾನ (ಎಂ.ಎಂ.ಎಲ್.ಪಿ.), ಬಾಲಂಗೀರ್ ಮತ್ತು ಬಿಕುಪಲಿ ನಡುವೆ ಹೊಸ ರೈಲು ಮಾರ್ಗದ ಉದ್ಘಾಟನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಳೆ ಅಂದರೆ 2019ರ ಜನವರಿ 15ರಂದು ಒಡಿಶಾದ ಬಾಲಂಗೀರ್ ಗೆ ಭೇಟಿ ನೀಡುತ್ತಿದ್ದಾರೆ. ಜರ್ಸುಗುಡದಲ್ಲಿ ಅವರು, ಬಹು ಮಾದರಿ ಸಾಗಣೆ ಪಾರ್ಕ್ (ಎಂ.ಎಂ.ಎಲ್.ಪಿ.) ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ಬಲಂಗಿರ್ – ಬಿಕುಪಲಿ ನಡುವೆ ಹೊಸ ರೈಲು ಮಾರ್ಗವನ್ನೂ ಉದ್ಘಾಟಿಸಲಿದ್ದಾರೆ. ಸೋನೆಪುರ್ ನಲ್ಲಿ ಅವರು ಕೇಂದ್ರೀಯ ವಿದ್ಯಾಲಯದ ಶಾಶ್ವತ ಕಟ್ಟಡಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಜರ್ಸುಗುಡದ ಬಹು ಮಾದರಿ ಸಾಗಣೆ ಪಾರ್ಕ್ ಅನ್ನು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಖಾಸಗಿ ಸರಕು ಸಂಚಾರ ಸೇರಿದಂತೆ ಎಕ್ಸಿಮ್ ಮತ್ತು ದೇಶೀಯ ಸರಕು ಸಾಗಾಟಕ್ಕೆ ಅವಕಾಶ ಕಲ್ಪಿಸುತ್ತದೆ. ಎಂ.ಎಂ.ಎಲ್.ಪಿ., ಹೌರಾ – ಮುಂಬೈ ಮಾರ್ಗಕ್ಕೆ ಹೊಂದಿಕೊಂಡಂತೆ ಜರ್ಸುಗುಡ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿದೆ. ಹಲವು ಮಹತ್ವದ ಕಾರ್ಖಾನೆಗಳಾದ ಉಕ್ಕು, ಸಿಮೆಂಟ್, ಕಾಗದ ಇತ್ಯಾದಿ ಈ ಸೌಲಭ್ಯದ ಸುತ್ತಲೂ ಇದ್ದು, ಅವು ಇದರ ಲಾಭ ಪಡೆಯಲಿವೆ. ಬಹು ಮಾದರಿ ಸಾಗಣೆ ಪಾರ್ಕ್ ಅನ್ನು ಜರ್ಸುಗುಡದಲ್ಲಿ ಒಡಿಶಾದ ಪ್ರಮುಖ ಸಾಗಣೆ ತಾಣವಾಗಿ ಸ್ಥಾಪಿಸಲಾಗುತ್ತಿದ್ದು, ರಾಜ್ಯದಲ್ಲಿ ಸುಗಮ ವಾಣಿಜ್ಯಕ್ಕೆ ಉತ್ತೇಜನ ನೀಡಲಿದೆ. 

15 ಕಿ.ಮೀ.ಗಳ ಬಲಂಗಿರ್ –ಬಿಕುಪಲಿ ಹೊಸ ರೈಲು ಮಾರ್ಗ ಒಡಿಶಾ ಕರಾವಳಿಯನ್ನು ಪಶ್ಚಿಮ ಒಡಿಶಾದೊಂದಿಗೆ ಸಂಪರ್ಕಿಸುತ್ತಿದ್ದು, ರಾಜ್ಯದಾದ್ಯಂತ ಅಭಿವೃದ್ಧಿಯನ್ನು ಒಗ್ಗೂಡಿಸುತ್ತದೆ. ಇದು ಭುವನೇಶ್ವರ್ ಮತ್ತು ಪುರಿಯಿಂದ ಪ್ರಮುಖ ನಗರಗಳಾದ ನವ ದೆಹಲಿ ಮತ್ತು ಮುಂಬೈ ನಡುವೆ ಪ್ರಯಾಣದ ಸಮಯ ತಗ್ಗಿಸಲಿದೆ. ಈ ಮಾರ್ಗದಿಂದ ಒಡಿಶಾದ ಹಲವು ಎಂ.ಎಸ್.ಎಂ.ಇ. ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದ್ದು, ಒಡಿಶಾದ ಗಣಿ ವಲಯಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ.

ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು, ಈ ಕೆಳಕಂಡ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

· ಜರ್ಸುಗುಡ – ವಿಜಯನಗರಂ ಮತ್ತು ಸಂಬಾಲ್ಪುರ – ಅಂಗೂಲ್ ಮಾರ್ಗಗಳಲ್ಲಿ 1085 ಕೋಟಿ ರೂಪಾಯಿ ವೆಚ್ಚದಲ್ಲಿ 813 ಕಿ.ಮೀ. ವಿದ್ಯುದ್ದೀಕರಣ ಮಾರ್ಗದ ಸಮರ್ಪಣೆ. ಇದು ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಪರ್ಕವನ್ನು ಖಾತ್ರಿ ಪಡಿಸುತ್ತದೆ. 

· ಬರ್ಪಲಿ – ದುಂಗಾರಿಪಲಿ ಮತ್ತು ಬಲಂಗಿರ್ – ದೇವೋಗಾನ್ ರಸ್ತೆ ಮಾರ್ಗದಲ್ಲಿ 13.5 ಕಿ.ಮೀ ಜೋಡಿ ಮಾರ್ಗ ಸಮರ್ಪಣೆ. ಈ ಜೋಡಿ ಮಾರ್ಗ ಒಡಿಶಾದ ಕೈಗಾರಿಕಾ ಸಾಮರ್ಥ್ಯಕ್ಕೆ ಉತ್ತೇಜನ ನೀಡುತ್ತದೆ. 

· ಥೇರುವಲಿ –ಸಿಂಗಾಪುರ್ ರಸ್ತೆ ರೈಲು ನಿಲ್ದಾಣದ ನಡುವೆ ಸೇತುವೆ ಸಂಖ್ಯೆ 588ರ ಲೋಕಾರ್ಪಣೆ. 2017ರ ಜುಲೈನಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಬಳಿಕ, ಇದು ನಾಗವೇಲಿ ನದಿಯ ಮೇಲೆ ಮತ್ತೆ ಮರು ಸಂಪರ್ಕ ಕಲ್ಪಿಸುತ್ತದೆ.

ಪಾಸ್ ಪೋರ್ಟ್ ಸೇವೆಯನ್ನು ಒದಗಿಸಲು ಮತ್ತು ಜನರ ಪ್ರಯಾಣದ ತೊಡಕು ತಗ್ಗಿಸಲು ಪ್ರಧಾನಮಂತ್ರಿಯವರು, ಜಗತ್ ಸಿಂಗ್, ಕೇಂದ್ರಪಾರ, ಪುರಿ, ಕಂಡಮಲ್, ಬರ್ಗರ್ ಮತ್ತು ಬಲಂಗೀರ್ ಗಳಲ್ಲಿ ಹೊಸ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಪಾಸ್ ಪೋರ್ಟ್ ಸಂಬಂಧಿತ ಸೇವೆಗಳಿಗಾಗಿ ಭುವನೇಶ್ವರಕ್ಕೆ ಭೇಟಿ ನೀಡಬೇಕಾಗಿದ್ದ ಈ ವಲಯದ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ.

ಪ್ರಧಾನಮಂತ್ರಿಯವರು ಗಾಂಧಹರದಿ (ಬೌದ್)ನಲ್ಲಿನ ನೀಲ ಮಾಧವ ಮತ್ತು ಸಿದ್ದೇಶ್ವರ ದೇವಾಲಯಗಳ ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣ ಕಾಮಗಾರಿಯನ್ನೂ ಉದ್ಘಾಟಿಸಲಿದ್ದಾರೆ. ಇವು ಒಡಿಶಾದ ದೇವಾಲಯ ವಾಸ್ತುಶಿಲ್ಪಗಳಲ್ಲಿ ಆರಂಭದ ದೇವಾಲಯಗಳಾಗಿದ್ದು, ಪಶ್ಚಿಮ ಒಡಿಶಾದ “ಹರ-ಹರಿ” ಸಾಂಸ್ಕೃತಿಕ ವೈಭವವನ್ನು ಆಚರಿಸುತ್ತಿವೆ.

ಈ ಸಂದರ್ಭದಲ್ಲಿ ಇದರ ಜೊತೆಗೆ, ಪುರಾತನ ವಾಣಿಜ್ಯ ಮಾರ್ಗ ಬಲಂಗಿರ್ ನಲ್ಲಿನ ರಾಣಿಪುರ್ ಜಾರಿಯಲ್ ಸಮೂಹದ ಸ್ಮಾರಕಗಳ ಪುನಶ್ಚೇತನ ಮತ್ತು ಪುನರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ಕಾಲಹಂದಿಯಲ್ಲಿನ ಅಸುರ್ ಗಢ ಕೋಟೆಯ ಪುನರ್ ನಿರ್ಮಾಣ ಮತ್ತು ನವೀಕರಣ ಕಾಮಗಾರಿಯನ್ನೂ ಉದ್ಘಾಟಿಸಲಿದ್ದಾರೆ. ಪುರಾತನ ಪಠ್ಯಗಳಲ್ಲಿ ಅಸುರ್ ಗಢ ಮಹತ್ವದ ರಾಜಕೀಯ ಮತ್ತು ವಾಣಿಜ್ಯ ಕೇಂದ್ರವಾಗಿತ್ತು ಎಂದು ಬಿಂಬಿತವಾಗಿದೆ.

ಶ್ರೀ ಮೋದಿ ಅವರು ಸೋನೆಪುರ್ ನಲ್ಲಿ ಕೇಂದ್ರೀಯ ವಿದ್ಯಾಲಯದ ಶಾಶ್ವತ ಕಟ್ಟಡಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಟ್ಟಡ 1000 ಶಾಲಾ ಮಕ್ಕಳ ಅನುಕೂಲಕ್ಕಾಗಿ ಆಧುನಿಕ ಶಾಲಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. 
 

***



(Release ID: 1560064) Visitor Counter : 77


Read this release in: English , Marathi , Gujarati , Tamil