ಪ್ರಧಾನ ಮಂತ್ರಿಯವರ ಕಛೇರಿ

ಗಾಜಿಪುರದಲ್ಲಿ ಪ್ರಧಾನಮಂತ್ರಿ 

Posted On: 30 DEC 2018 6:23PM by PIB Bengaluru

ಗಾಜಿಪುರದಲ್ಲಿ ಪ್ರಧಾನಮಂತ್ರಿ 
 

ಮಹಾರಾಜಾ ಸುಹೇಲ್ ದೇವ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ, ಗಾಜಿಪುರ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಗಾಜಿಪುರಕ್ಕೆ ಭೇಟಿ ನೀಡಿದರು. ಅವರು ಮಹಾರಾಜ ಸುಹೇಲ್ ದೇವ್ ಅವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು. ಅವರು ಗಾಜಿಪುರ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ವಿವಿಧ ಸಮಾರಂಭಗಳಲ್ಲಿ ಇಂದು ಆರಂಭಿಸಿದ ಯೋಜನೆಗಳು ಪೂರ್ವಾಂಚಲವನ್ನು ಒಂದು ವೈದ್ಯಕೀಯ ತಾಣವಾಗಿಸುವ ನಿಟ್ಟಿನಲ್ಲಿ ಮತ್ತು ಕೃಷಿ ಸಂಶೋಧನೆಯಲ್ಲಿ ಬಹಳ ದೂರ ಕೊಂಡೊಯ್ಯಲಿವೆ ಎಂದರು.

ಮಹಾರಾಜ ಸುಹೇಲ್ ದೇವ್ ಅವರನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು ಸುಹೇಲ್ ದೇವ್ ಧೈರ್ಯ ಸಾಹಸದ ಹೋರಾಟಗಾರರಾಗಿದ್ದರು ಮತ್ತು ಜನರನ್ನು ಪ್ರೇರೇಪಿಸುವ ನಾಯಕರಾಗಿದ್ದರು ಎಂದರು. ಮಹಾರಾಜ ಸುಹೇಲ್ ದೇವ್ ಅವರ ಆಡಳಿತಾತ್ಮಕ ಕೌಶಲ್ಯ ಮತ್ತು ಸೇನಾ ಹಾಗು ವ್ಯೂಹಾತ್ಮಕ ಕೌಶಲ್ಯಗಳ ಬಗ್ಗೆಯೂ ಪ್ರಧಾನ ಮಂತ್ರಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಭಾರತದ ರಕ್ಷಣೆ ಮತ್ತು ಭದ್ರತೆಗೆ ಹಾಗು ಅದರ ಸಾಮಾಜಿಕ ಜೀವನಕ್ಕೆ ಕೊಡುಗೆ ನೀಡಿದವರ ಪರಂಪರೆಯನ್ನು ಕಾಪಿಡಲು ಬದ್ದವಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಉತ್ತರ ಪ್ರದೇಶದಲ್ಲಿ ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರಗಳು ಜನತೆಯ ಕಳವಳಗಳಿಗೆ ಸಂವೇದನಾಶೀಲವಾಗಿ ಸ್ಪಂದಿಸುತ್ತಿವೆ ಎಂದ ಪ್ರಧಾನಮಂತ್ರಿ ಅವರು ಪ್ರತೀಯೊಬ್ಬರಿಗೂ ಘನತೆಯ ಜೀವನವನ್ನು ಖಾತ್ರಿಪಡಿಸಲು ಈ ಆಂದೋಲನ ಜಾರಿಯಲ್ಲಿದೆ ಎಂದರು.

ಶಿಲಾನ್ಯಾಸ ಮಾಡಲಾದ ವೈದ್ಯಕೀಯ ಕಾಲೇಜು ಈ ವಲಯದಲ್ಲಿ ಅತ್ಯಾಧುನಿಕ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಹೇಳಿದ ಪ್ರಧಾನಮಂತ್ರಿಗಳು ಇದು ಈ ಭಾಗದ ಜನತೆಯ ಬಲು ಧೀರ್ಘ ಕಾಲದ ಬೇಡಿಕೆಯಾಗಿತ್ತು, ಮತ್ತು ಅದು ಸದ್ಯದಲ್ಲಿಯೇ ಸಾಕಾರಗೊಳ್ಳಲಿದೆ ಎಂದರು. ಈ ವಲಯದಲ್ಲಿ ಆರೋಗ್ಯ ರಕ್ಷಣೆಯ ಸವಲತ್ತುಗಳನ್ನು ಸುಧಾರಿಸಲು ಸ್ಥಾಪಿಸಲಾಗುತ್ತಿರುವ ಹಲವು ಆಸ್ಪತ್ರೆಗಳಲ್ಲಿ ಇದು ಪ್ರಮುಖವಾದುದು ಎಂದವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅವರು ಗೋರಖ್ ಪುರ ಮತ್ತು ವಾರಣಾಸಿಯಲ್ಲಿ ಅಸ್ತಿತ್ವಕ್ಕೆ ಬರುವ ಆಸ್ಪತ್ರೆಗಳನ್ನು ಉಲ್ಲೇಖಿಸಿದರು.

ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ಕೇಂದ್ರ ಸರಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ಆಯುಷ್ಮಾನ್ ಭಾರತ್ ಯೋಜನಾವನ್ನು ಮತ್ತು ರೋಗಿಗಳಿಗೆ ದೊರೆಯುವ ಚಿಕಿತ್ಸೆ ಬಗ್ಗೆ ಅವರು ಪ್ರಸ್ತಾವಿಸಿದರು. ಬರೇ 100 ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾದಿಂದ ಲಾಭ ಪಡೆದಿದ್ದಾರೆ ಎಂದರು. 

ಕೇಂದ್ರ ಸರಕಾರವು ಆರಂಭಿಸಿದ ವಿಮಾ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು , ದೇಶಾದ್ಯಂತ 20 ಕೋಟಿ ಜನರು ಜೀವನ್ ಜ್ಯೋತಿ ಅಥವಾ ಸುರಕ್ಷಾ ಭೀಮಾ ಯೋಜನೆಗಳಿಗೆ ಸೇರಿದ್ದಾರೆ ಎಂದರು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಈ ವಲಯದ ಹಲವು ಯೋಜನೆಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇದರಲ್ಲಿ ವಾರಣಾಸಿಯ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ, ವಾರಣಾಸಿ ಮತ್ತು ಗಾಜಿಯಾಪುರದ ಕಾರ್ಗೋ ಕೇಂದ್ರಗಳು ಮತ್ತು ಗೋರಖ್ ಪುರದ ರಸಗೊಬ್ಬರ ಸ್ಥಾವರ, ಮತ್ತು ಬಾಣಸಾಗರ ನೀರಾವರಿ ಯೋಜನೆಗಳನ್ನು ಅವರು ಪ್ರಸ್ತಾವಿಸಿದರು. ಇಂತಹ ಉಪಕ್ರಮಗಳು ರೈತರಿಗೆ ಲಾಭ ತರಲಿವೆ ಮತ್ತು ಅವರ ಆದಾಯ ಹೆಚ್ಚಳಕ್ಕೆ ಸಹಾಯ ಮಾಡಲಿವೆ ಎಂದೂ ಅವರು ಹೇಳಿದರು.

ತಕ್ಷಣದ ರಾಜಕೀಯ ಲಾಭಕ್ಕಾಗಿ ಕೈಗೊಳ್ಳುವ ಕ್ರಮಗಳು ದೇಶದ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಾರವು ಎಂದು ಅಭಿಪ್ರಾಯಪಟ್ಟ ಪ್ರಧಾನಮಂತ್ರಿಗಳು ಕೇಂದ್ರ ಸರಕಾರವು 22 ಬೆಳೆಗಳಿಗೆ ವೆಚ್ಚದ 1.5 ಪಟ್ಟು ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ ಎಂದರು. ಕೃಷಿ ವಲಯಕ್ಕಾಗಿ ಕೈಗೊಂಡ ವಿವಿಧ ಉಪಕ್ರಮಗಳನ್ನು ಅವರು ಪ್ರಸ್ತಾವಿಸಿದರು.

ಸಂಪರ್ಕ ಸಂಬಂಧಿ ಕ್ಷೇತ್ರದಲ್ಲಿಯ ಪ್ರಗತಿಯ ಕುರಿತಾಗಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಕಾರ್ಯ ಪೂರ್ಣ ಪ್ರಮಾಣದ ವೇಗದಲ್ಲಿ ಸಾಗಿದೆ ಎಂದರು. ತಾರಿಘಾಟ್-ಗಾಜಿಯಾಪುರ –ಮಾವು ಸೇತುವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ವಾರಣಾಸಿ ಮತ್ತು ಕೋಲ್ಕೊತ್ತಾ ನಡುವೆ ಇತ್ತೀಚೆಗೆ ಆರಂಭವಾದ ಜಲಮಾರ್ಗ ಗಾಜಿಯಾಪುರಕ್ಕೂ ಲಾಭ ತರಲಿದೆ ಎಂದರು. ಈ ಯೋಜನೆಗಳು ಈ ವಲಯದಲ್ಲಿ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನ ನೀಡಲಿವೆ ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟರು. 



(Release ID: 1557832) Visitor Counter : 60