ಪ್ರಧಾನ ಮಂತ್ರಿಯವರ ಕಛೇರಿ

ಹೊಸದಾಗಿ ಆಯ್ಕೆಯಾದ ಜಮ್ಮು ಮತ್ತು ಕಾಶ್ಮೀರದ ಸರಪಂಚರಿಂದ ಪ್ರಧಾನಿ ಭೇಟಿ 

Posted On: 19 DEC 2018 5:49PM by PIB Bengaluru

ಹೊಸದಾಗಿ ಆಯ್ಕೆಯಾದ ಜಮ್ಮು ಮತ್ತು ಕಾಶ್ಮೀರದ ಸರಪಂಚರಿಂದ ಪ್ರಧಾನಿ ಭೇಟಿ 
 

ಹೊಸದಾಗಿ ಆಯ್ಕೆಯಾಗಿರುವ ಜಮ್ಮು ಮತ್ತು ಕಾಶ್ಮೀರದ 48 ಸರಪಂಚರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಅಖಿಲ ಜಮ್ಮು ಮತ್ತು ಕಾಶ್ಮೀರ ಪಂಚಾಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಶ್ರೀ ಸಫೀಕ್ ಮಿರ್ ನಿಯೋಗದ ನೇತೃತ್ವ ವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯತ್ ಚುನಾವಣೆಗಳನ್ನು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಸುವ ಮೂಲಕ ಸ್ಥಳೀಯ ಸ್ವಯಂ ಆಡಳಿತದ ಸಂಸ್ಥೆಗಳನ್ನು ಸಬಲೀಕರಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ನಿಯೋಗವು ಮೆಚ್ಚುಗೆಯನ್ನು ವ್ಯಕ್ತಪಡಿಸಿತು.

ಪ್ರಧಾನಮಂತ್ರಿಯವರು ಹೊಸದಾಗಿ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ತಮ್ಮ ಶುಭ ಹಾರೈಕೆಗಳನ್ನು ಸಲ್ಲಿಸಿದರು. ಜನರ ಕಲ್ಯಾಣ ಮತ್ತು ಉನ್ನತಿಗಾಗಿ ಶ್ರಮಿಸುವಂತೆ ಪ್ರೇರೇಪಿಸಿದರು. ಜನರ ಸಬಲೀಕರಣಕ್ಕೆ ತಾವು ಮತ್ತು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ನಿಯೋಗಕ್ಕೆ ಭರವಸೆ ನೀಡಿದ ಪ್ರಧಾನಮಂತ್ರಿಯವರು, ಜನ ಸಮುದಾಯದ ಆಶೋತ್ತರಗಳ ಈಡೇರಿಕೆಗಾಗಿ, ರಾಜ್ಯದ ಕಲ್ಯಾಣಕ್ಕಾಗಿ ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುವುದಾಗಿ ತಿಳಿಸಿದರು. ಅವರುಗಳ ಮೇಲೆ ಜನರು ಅಗಾಧ ನಂಬಿಕೆ ಮತ್ತು ಭರವಸೆ ಹೊಂದಿದ್ದು, ಜನರ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆ ನಿಯೋಗದ ಸದಸ್ಯರಿಗೆ ಪ್ರಧಾನಿ ಒತ್ತಾಯಿಸಿದರು.

ಪ್ರತೀಕೂಲ ಸನ್ನಿವೇಶದಲ್ಲೂ ಸ್ಥಳೀಯ ಪ್ರತಿನಿಧಿಗಳು ಪ್ರದರ್ಶಿಸಿದ ಧೈರ್ಯಕ್ಕಾಗಿ; ಮತ್ತು ಭಯ ಮತ್ತು ಬೆದರಿಕೆಗಳ ನಡುವೆಯೂ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರುಗಳನ್ನು ಅಭಿನಂದಿಸಿದರು. ಪಂಚಾಯತ್ ರಾಜ್ ಮಾದರಿಯನ್ನು ಯಶಸ್ವಿಗೊಳಿಸಲು ಮತ್ತು ಜನರ ಮೂಲಭೂತ ಅವಶ್ಯಕತೆ ಮತ್ತು ಕುಂದುಕೊರತೆಗಳಿಗೆ ಸ್ಪಂದನಾತ್ಮಕಗೊಳಿಸಲು ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಭರವಸೆಯನ್ನು ನೀಡಿದರು. ಬೇರು ಮಟ್ಟದ ಸಂಸ್ಥೆಗಳ ಸಬಲೀಕರಣವು ಜಮ್ಮು ಮತ್ತು ಕಾಶ್ಮೀರವನ್ನು ಹಿಂಸಾಚಾರದ ಮಾರ್ಗದಿಂದ ಹೊರತಂದು ಸ್ಥಳೀಯ ಜನರ ಅಭಿವೃದ್ಧಿ ಮತ್ತು ಹಕ್ಕುಗಳ ರಕ್ಷಣೆಯ ಖಾತ್ರಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು. ಇತ್ತೀಚಿನ ಪಂಚಾಯತ್ ಚುನಾವಣೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. 

ಹಿನ್ನೆಲೆ

ಬೇರುಮಟ್ಟದಲ್ಲಿ ಅಧಿಕಾರದ ವಿಕಸನ ಜನತೆಗೆ ತಮ್ಮ ಸ್ವಯಂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಬಾಧ್ಯಸ್ಥರಾಗಲು ಒಂದು ಅನನ್ಯ ಅವಕಾಶವನ್ನು ಕಲ್ಪಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಪಂಚಾಯ್ತಿ ಕಾಯಿದೆಯನ್ನು 1989ರಲ್ಲಿ ಅನುಮೋದಿಸಲಾಯಿತು. ಆದರೆ ಕಾಯಿದೆ ಅಡಿಯಲ್ಲಿ ನೀಡಲ್ಪಟ್ಟ 25 ಕಾರ್ಯಗಳಲ್ಲಿ ಮೂರಕ್ಕೆ ಮಾತ್ರ ಬಜೆಟ್ ಬೆಂಬಲವನ್ನು ಒದಗಿಸಲಾಗಿದೆ. ಸರ್ಕಾರ ಈಗ ಜೆ ಮತ್ತು ಕೆ ಪಂಚಾಯ್ತಿ ರಾಜ್ ಕಾಯಿದೆ 1989ಗೆ ತಿದ್ದುಪಡಿ ತಂದಿದ್ದು, ವಾರ್ಷಿಕ 2000 ಕೋಟಿ ರೂಪಾಯಿಗಳನ್ನು ಪಂಚಾಯ್ತಿಗಳಿಗೆ ವರ್ಗಾವಣೆ ಮಾಡುತ್ತಿದೆ. ಅಲ್ಲದೆ 1200 ಕೋಟಿ ರೂಪಾಯಿಗಳನ್ನು ಸ್ಥಳೀಯ ನಗರ ಸಂಸ್ಥೆಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಪಂಚಾಯ್ತಿಗಳು ನೇರವಾಗಿ 19 ಇಲಾಖೆಗಳ/ವಿಷಯಗಳಿಗೆ ಸಂಬಂಧಿಸಿದ ಚಟುವಟಿಕೆಗಳ ನಿಗಾವಹಿಸಲಿದ್ದು, ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳ ಪರಿಶೋಧನೆಯನ್ನೂ ನಡೆಸುತ್ತವೆ. 

ನಗರ ಸ್ಥಳೀಯ ಸಂಸ್ಥೆಗಳ 1100 ವಾರ್ಡ್ ಗಳಿಗೆ 13 ವರ್ಷಗಳ ಬಳಿಕ; ಮತ್ತು 35,000 ಪಂಚಾಯ್ತಿಗಳಿಗೆ 7 ವರ್ಷಗಳ ಬಳಿಕ 2018ರ ನವೆಂಬರ್ – ಡಿಸೆಂಬರ್ ನಲ್ಲಿ ಚುನಾವಣೆ ನಡೆಯಿತು. ಪಂಚಾಯ್ತಿ ಚುನಾವಣೆಗಳಲ್ಲಿ ಒಟ್ಟಾರೆ 58 ಲಕ್ಷ ಮತದಾರರ ಪೈಕಿ ಶೇ.74ರಷ್ಟು ಮತದಾನವಾಗಿತ್ತು.

ಈ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಲು, 40 ಸಾವಿರ ಬೇರುಮಟ್ಟದ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು. ಸರಪಂಚರಿಗೆ ಮಾಸಿಕ 2500 ರೂ. ಮತ್ತು ಪ್ರತಿ ಪಂಚ ರಿಗೆ 1000 ರೂ. ಮಾಸಿಕ ಗೌರವಧನ ಒದಗಿಸಲಾಗುವುದು. 
 

*****



(Release ID: 1556897) Visitor Counter : 83