ಸಂಪುಟ

ಪಿಪಿಪಿ ಮೂಲಕ ಅಹಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ ಮತ್ತು ಮಂಗಳೂರು - ಆರು ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡಲು ಸಂಪುಟದ ಅನುಮೋದನೆ

Posted On: 08 NOV 2018 8:42PM by PIB Bengaluru

ಪಿಪಿಪಿ ಮೂಲಕ ಅಹಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ ಮತ್ತು ಮಂಗಳೂರು - ಆರು ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡಲು ಸಂಪುಟದ ಅನುಮೋದನೆ

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಕಂಡವುಗಳಿಗೆ ತನ್ನ ಅನುಮೋದನೆ ನೀಡಿದೆ:

 

       i.            ಸಾರ್ವಜನಿಕ, ಖಾಸಗಿ ಪಾಲುದಾರಿಕೆ ನಿರ್ಧರಣಾ ಸಮಿತಿ (ಪಿಪಿಪಿಎಸಿ) ಮೂಲಕ ಸಾರ್ವಜನಿಕ, ಖಾಸಗಿ ಪಾಲುದಾರಿಕೆ ಅಡಿಯಲ್ಲಿ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಅಹಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ ಮತ್ತು ಮಂಗಳೂರು ಸೇರಿ ಎಎಐನ ಆರು ವಿಮಾನ ನಿಲ್ದಾಣಗಳ "ತಾತ್ವಿಕ" ಗುತ್ತಿಗೆಗೆ ಅನುಮೋದನೆ.

 

      ii.            ಪಿಪಿಪಿಎಸಿಯ ವ್ಯಾಪ್ತಿ ಮೀರಿದ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು  ನಾಗರಿಕ ವಿಮಾನ ಯಾನ ಸಚಿವಾಲಯದ ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮತ್ತು ವೆಚ್ಚ ಇಲಾಖೆಯ ಕಾರ್ಯದರ್ಶಿ ಒಳಗೊಂಡ ಮತ್ತು ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದ ಉನ್ನತಾಧಿಕಾರ ಗುಂಪಿನ ಸ್ಥಾಪನೆ.

 

 

ಪ್ರಯೋಜನಗಳು:

 

1.     ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಪಿಪಿಪಿ ಸಾರ್ವಜನಿಕ ವಲಯದಲ್ಲಿ ಅಗತ್ಯ ಹೂಡಿಕೆಗಳನ್ನು ಬಳಸಿಕೊಳ್ಳುವುದರ ಜೊತೆಗೆ ಸೇವಾ ವಿತರಣೆ, ಪರಿಣತಿ, ಉದ್ಯಮ ಮತ್ತು ವೃತ್ತಿಪರತೆಗಳಲ್ಲಿನ ದಕ್ಷತೆಯನ್ನು ತರುತ್ತದೆ.

 

2.     ವಿಮಾನ ನಿಲ್ದಾಣದ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಪಿಪಿಪಿ ವಿಮಾನ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯವನ್ನು ತಂದಿದೆ, ವಿಮಾನ ಪ್ರಯಾಣಿಕರಿಗೆ ಸಮರ್ಥ ಮತ್ತು ಸಕಾಲಿಕ ಸೇವೆಗಳ ವಿತರಣೆ ಮಾಡುತ್ತಿದೆ, ಯಾವುದೇ ಹೂಡಿಕೆ ಇತ್ಯಾದಿ ಇಲ್ಲದೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಆದಾಯ ಮೂಲವನ್ನು ಹೆಚ್ಚಿಸುತ್ತಿದೆ, ಇವುಗಳಲ್ಲಿ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹಸಿರು ವಲಯ ವಿಮಾನ ನಿಲ್ದಾಣಗಳ ಅಭಿವೃದ್ಧಿಯೂ ಸೇರಿದೆ. ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್ ಮತ್ತು ಕೊಚ್ಚಿನ್ ವಿಮಾನ ನಿಲ್ದಾಣಗಳು ಪಿಪಿಪಿ ಮಾದರಿಯಲ್ಲಿ ನಿರ್ವಹಣೆಯಾಗುತ್ತಿವೆ.

 

3.     ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಷತ್ತಿ (ಎ.ಸಿ.ಐ.)ನಿಂದ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎ.ಎಸ್.ಕ್ಯು) ವಿಚಾರದಲ್ಲಿ ಭಾರತದಲ್ಲಿನ ಪಿಪಿಪಿ ವಿಮಾನ ನಿಲ್ದಾಣಗಳು ತಮ್ಮ ಸಂಬಂಧಿತ ವರ್ಗಗಳಲ್ಲಿ ಮೊದಲ ಐದು ಸ್ಥಾನಗಳ ಶ್ರೇಯಾಂಕ ಪಡೆದಿವೆ.

 

4.     ಪಿಪಿಪಿ ಪ್ರಯೋಗವು ವಿಶ್ವದರ್ಜೆಯ ವಿಮಾನ ನಿಲ್ದಾಣ ರಚನೆಗೆ ನೆರವಾಗಿದೆ, ಇದು ಎ.ಎ.ಐ.ಗೆ ದೇಶದ ಉಳಿದೆಡೆ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ವಾಯು ಪಥದರ್ಶಕ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ,  ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲೂ ನೆರವಾಗಿದೆ.

 

 

ಹಿನ್ನೆಲೆ:

 

ಭಾರತದಲ್ಲಿನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಹೆಚ್ಚಳವು, ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ಸೃಷ್ಟಿಸಿದೆ ಮತ್ತು ಒಂದು ದಶಕದ ಹಿಂದೆ ಖಾಸಗೀಕರಣಗೊಂಡ 5 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣದ ವೃದ್ಧಿಯು ಹಲವಾರು ಅಂತಾರಾಷ್ಟ್ರೀಯ ವಿಮಾನಯಾನ ನಿರ್ವಾಹಕರು ಮತ್ತು ಹೂಡಿಕೆದಾರರ ಗಮನವನ್ನು ಸೆಳೆದಿದೆ. ಅಂತಾರಾಷ್ಟ್ರೀಯ ಆಸಕ್ತಿಯ ವಿಚಾರದಲ್ಲಿ ವಿಮಾನನಿಲ್ದಾಣ ವಲಯವು ಮೂಲಸೌಕರ್ಯ ವಲಯದಲ್ಲಿ ಮೊದಲ ಸ್ಪರ್ಧಿಯಾಗಿದೆ. ಅಂತಾರಾಷ್ಟ್ರೀಯ ಆಪರೇಟರ್ ಗಳು ಮತ್ತು ಹೂಡಿಕೆದಾರರು 3-4 ದಶಲಕ್ಷ ಪ್ರಯಾಣಿಕರ ಸಾಮರ್ಥ್ಯವಿರುವ ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣಗಳ ವಿಸ್ತರಣೆ ಅವಕಾಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪಿಪಿಪಿ ಅಳವಡಿಕೆಯ ಮೂಲಕ ವಿಮಾನ ನಿಲ್ದಾಣ ವಲಯವು ವಿದೇಶೀ ನೇರ ಬಂಡವಾಳ (ಎಫ್.ಡಿ.ಐ.)ವನ್ನು ಸೆಳೆಯಲು ಅವಕಾಶ ನೀಡುತ್ತದೆ.

 

ಹೀಗಾಗಿ ಮೊದಲ ಹಂತದ ಅಭಿವೃದ್ಧಿಯಲ್ಲಿ ಪಿಪಿಪಿಯಡಿ ಕಾರ್ಯಾಚರಣೆ ಮತ್ತು ನಿರ್ವಹಣೆ ಅಡಿಯಲ್ಲಿ ಆರು ವಿಮಾನ ನಿಲ್ದಾಣಗಳು ಅಂದರೆ ಅಹಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ ಮತ್ತು ಮಂಗಳೂರು ಸೇರಿ ಎಎಐನ ಆರು ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ಇದು ಎಎಐನ ಆದಾಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಉದ್ಯೋಗ ಸೃಷ್ಟಿ ಮತ್ತು ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ಈ ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

 

****

 



(Release ID: 1552255) Visitor Counter : 96