ಪ್ರಧಾನ ಮಂತ್ರಿಯವರ ಕಛೇರಿ

ಕೇರಳಕ್ಕೆ ಪ್ರಧಾನಿ ಭೇಟಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪರಾಮರ್ಶೆ

Posted On: 18 AUG 2018 11:06AM by PIB Bengaluru

ಕೇರಳಕ್ಕೆ ಪ್ರಧಾನಿ ಭೇಟಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪರಾಮರ್ಶೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರವಾಹದಿಂದ ರಾಜ್ಯದಲ್ಲಿ ತಲೆದೋರಿರುವ  ಪರಿಸ್ಥಿತಿಯ ಖುದ್ದು ಅವಲೋಕನಕ್ಕಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಪರಿಶೀಲನೆ ಸಭೆಯ ಬಳಿಕ ಪ್ರವಾಸದಿಂದ ಬಾಧಿತವಾಗಿರುವ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಗಿರುವ ಹಾನಿಯ ಕುರಿತಂತೆ ವೈಮಾನಿಕ ಸಮೀಕ್ಷೆ ಕೈಗೊಂಡರು.  ಪ್ರಧಾನ ಮಂತ್ರಿಯವರೊಂದಿಗೆ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು (ಕೇಂದ್ರ ಸರ್ಕಾರದ ರಾಜ್ಯ ಸಚಿವ) ಶ್ರೀ ಕೆ.ಜೆ. ಅಲ್ಫೋನ್ಸ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

ಪ್ರವಾಹದಿಂದ ಸಂಭವಿಸಿರುವ ಜೀವ ಮತ್ತು ಆಸ್ತಿ ಪಾಸ್ತಿ ಹಾನಿ ಬಗ್ಗೆ ಪ್ರಧಾನಮಂತ್ರಿ ತೀವ್ರ ದುಃಖ ವ್ಯಕ್ತಪಡಿಸಿದರು.

 

ಕೇರಳದ ಮುಖ್ಯಮಂತ್ರಿ ಶ್ರೀ ಪಿನರಾಯಿ ವಿಜಯನ್ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿಯವರು ಪ್ರವಾಹ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.

 

ಪರಿಶೀಲನೆಯ ಬಳಿಕ, ಪ್ರಧಾನಮಂತ್ರಿಯವರು ರಾಜ್ಯಕ್ಕೆ 500 ಕೋಟಿ ರೂಪಾಯಿಗಳ ಆರ್ಥಿಕ ನೆರವು ಪ್ರಕಟಿಸಿದರು. 12.08.2018ರಂದು ಗೃಹ ಸಚಿವರು ಘೋಷಿಸಿರುವ 100 ಕೋಟಿ ರೂಪಾಯಿಗಳ ಜೊತೆಗೆ ಈ ನೆರವು ಪ್ರಕಟಿಸಲಾಗಿದೆ. ಆಹಾರಧಾನ್ಯಗಳು, ಔಷಧ ಇತ್ಯಾದಿ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಪೂರೈಸುವ ಭರವಸೆಯನ್ನು ರಾಜ್ಯ ಸರ್ಕಾರಕ್ಕೆ ಅವರು ನೀಡಿದರು.

 

ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿ.ಎಂ.ಎನ್.ಆರ್.ಎಫ್.)ಯಿಂದ ಮೃತಪಟ್ಟವರ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರವನ್ನು  ಪ್ರಧಾನಮಂತ್ರಿ ಘೋಷಿಸಿದರು.

 

ಸಾಮಾಜಿಕ ಭದ್ರತೆ ಯೋಜನೆಗಳಡಿ ಬಾಧಿತ ಕುಟುಂಬಗಳು/ಫಲಾನುಭವಿಗಳಿಗೆ ಸಕಾಲದಲ್ಲಿ ನಿರ್ಧರಣೆ ಮತ್ತು ಪರಿಹಾರ ಬಿಡುಗಡೆ ಮಾಡಲು ವಿಶೇಷ ಶಿಬಿರ ಆಯೋಜಿಸುವಂತೆ ವಿಮಾ ಕಂಪನಿಗಳಿಗೆ ಪ್ರಧಾನಮಂತ್ರಿಯವರು ನಿರ್ದೇಶಿಸಿದರು. ಬೆಳೆ ವಿಮೆ ಯೋಜನೆ ಅಡಿಯಲ್ಲಿ ಶೀಘ್ರ ಕೃಷಿಕರ ಕ್ಲೇಮ್ ವಿಲೆ ಮಾಡಲೂ ನಿರ್ದೇಶಿಸಿದರು.

 

ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಆದ್ಯತೆಯ ಮೇಲೆ ದುರಸ್ತಿ ಮಾಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಧಾನಮಂತ್ರಿಯವರು ನಿರ್ದೇಶನ ನೀಡಿದರು. ವಿದ್ಯುತ್ ಮಾರ್ಗಗಳ ಪುನರ್ ಸ್ಥಾಪನೆಗೆ ಎಲ್ಲ ಸಾಧ್ಯ ನೆರವು ನೀಡುವಂತೆ ಎನ್.ಟಿ.ಪಿ.ಸಿ. ಮತ್ತು ಪಿಜಿಸಿಐಎಲ್ ನಂಥ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಿಗೂ ನಿರ್ದೇಶನ ನೀಡಿದರು.

 

ಭೀಕರ ಪ್ರವಾಹದಿಂದ ಕಚ್ಚಾ ಮನೆಗಳನ್ನು ಕಳೆದುಕೊಂಡಿರುವ ಗ್ರಾಮಸ್ಥರಿಗೆ ಅವರ ಹೆಸರು ಪಿಎಂಎವೈ-ಜಿಯ ಶಾಶ್ವತ ಕಾಯುವ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಆ ಆದ್ಯತೆಯ ಹೊರತಾಗಿಯೂ ಪ್ರಧಾನಮಂತ್ರಿ ವಸತಿ ಯೋಜನೆ – ಗ್ರಾಮೀಣ ಅಡಿಯಲ್ಲಿ ಆದ್ಯತೆಯ ಮೇಲೆಒದಗಿಸುವಂತೆಯೂ ಸೂಚಿಸಿದರು.

 

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2018-19ರ ಸಾಲಿನ ಕಾರ್ಮಿಕ ಬಜೆಟ್ ನಲ್ಲಿ 5.5 ಕೋಟಿ ಮಾನವ ದಿನಗಳನ್ನು ಮಂಜೂರು ಮಾಡಿಲಾಗಿದೆ. ಮಾನವ ದಿನಗಳ ಹೆಚ್ಚಳಕ್ಕೆ ಮನವಿ ಬಂದರೆ ರಾಜ್ಯ ಸರ್ಕಾರ ಅಂದಾಜು ಮಾಡುವ ಅಗತ್ಯಕ್ಕೆ ಅನುಗುಣವಾಗಿ ಪರಿಗಣಿಸಲಾಗುವುದು ಎಂದರು.

 

ತೋಟಗಾರಿಕೆ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಮರು ಸ್ಥಾಪನೆಗಾಗಿ ತೋಟಗಾರಿಕೆ, ಕೃಷಿಯ ಸಮಗ್ರ ಅಭಿವೃದ್ಧಿ ಕುರಿತ ಅಭಿಯಾನದಡಿ ನೆರವು ನೀಡಲಾಗುವುದು.

 

ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ನಿರಂತರವಾಗಿ ಮತ್ತು ಹತ್ತಿರದಿಂದ ನಿಗಾವಹಿಸಿದೆ. ಪ್ರತೀಕೂಲ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಎಲ್ಲ ಅಗತ್ಯ ನೆರವನ್ನೂ ಒದಗಿಸಲಾಗುತ್ತಿದೆ. ಪ್ರವಾಹ ಪರಿಸ್ಥಿತಿಯ ಕುರಿತಂತೆ ಪ್ರಧಾನಮಂತ್ರಿಯವರು ಮುಖ್ಯಮಂತ್ರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

 

ಪ್ರಧಾನಮಂತ್ರಿಯವರ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಶ್ರೀ ಕಿರಣ್ ರಿಜಿಜು, ಕೇಂದ್ರ ಪ್ರವಾಸೋದ್ಯಮ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಶ್ರೀ ಕೆ.ಜೆ. ಆಲ್ಫೋನ್ಸ್  ಮತ್ತು ಉನ್ನತ ಮಟ್ಟದ ಕೇಂದ್ರ ತಂಡ 21.07.2018ರಂದು ಅಲಾಪ್ಪುಜಾ ಮತ್ತು ಕೊಟ್ಟಾಯಂನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ, ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದ್ದರು ಮತ್ತು ಸಂತ್ರಸ್ತ ಜನರನ್ನು ಭೇಟಿ ಮಾಡಿದ್ದರು.

 

2018ರ ಆಗಸ್ಟ್ 12ರಂದು ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ ಸಿಂಗ್, ಕೇಂದ್ರ ಪ್ರವಾಸೋದ್ಯಮ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಶ್ರೀ ಕೆ.ಜೆ. ಆಲ್ಫೋನ್ಸ್  ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೇರಳದ ಪ್ರವಾಹ/ಭೂಕುಸಿತಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಕೇರಳದ ಮುಖ್ಯಮಂತ್ರಿ ಮತ್ತು ಇತರ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳು ಕೈಗೊಂಡಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ, ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕೇಂದ್ರ ಗೃಹ ಸಚಿವರು 100 ಕೋಟ ರೂಪಾಯಿಗಳ ಮುಂಗಡ ಪರಿಹಾರವನ್ನು ಎನ್.ಡಿ.ಆರ್.ಎಫ್.ನಿಂದ ಪ್ರಕಟಿಸಿದ್ದರು.

 

ರಾಜ್ಯ ಸರ್ಕಾರ 21.07.2018ರಂದು ಸಲ್ಲಿಸಿದ್ದ ಮನವಿಯ ಮೇರೆಗೆ ಅಂತರ ಸಚಿವರ ಕೇಂದ್ರ ತಂಡ (ಐ.ಎಂ.ಸಿ.ಟಿ) ಈಗಾಗಲೇ 2018ರ ಆಗಸ್ಟ್ 7-12ರ ನಡುವೆ ಭೇಟಿ ನೀಡಿ ರಾಜ್ಯದ ಬಾಧಿತ ಪ್ರದೇಶಗಳಲ್ಲಿ ಆಗಿರುವ ಹಾನಿಯ ನಿರ್ಧರಣೆ ಕಾರ್ಯ ಮಾಡಿದೆ.

 

1300 ಸಿಬ್ಬಂದಿ ಮತ್ತು 435 ದೋಣಿಗಳನ್ನು ಒಗೊಂಡ ಎನ್.ಡಿ.ಆರ್.ಎಫ್.ನ 57 ತಂಡಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯುಕ್ತಿಗೊಳಿಸಲಾಗಿದೆ. ಬಿ.ಎಸ್.ಎಫ್, ಸಿಐಎಸ್.ಎಫ್ ಮತ್ತು ಆರ್.ಎ.ಎಫ್.ನ ಐದು ಕಂಪನಿಗಳನ್ನು ರಾಜ್ಯದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ನಿಯೋಜಿಸಲಾಗಿದೆ.

 

ಸೇನೆ, ವಾಯುಪಡೆ, ನೌಕಾಪಡೆ ಮತ್ತು ಕರಾವಳಿ ಭದ್ರತಾ ಪಡೆಗಳನ್ನೂ ಸಹ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ರಾಜ್ಯಕ್ಕೆ ನೆರವಾಗಲು ನಿಯೋಜಿಸಲಾಗಿದೆ.ಒಟ್ಟು 38 ಹೆಲಿಕಾಪ್ಟರ್ ಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಇದರ ಜೊತಗೆ 20 ವಿಮಾನಗಳನ್ನು ಸಂಪನ್ಮೂಲ ಸಾಗಿಸಲು ಬಳಸಲಾಗುತ್ತಿದೆ. ಸೇನೆ 790 ತರಬೇತಿ ಪಡೆದ ಸಿಬ್ಬಂದಿಯನ್ನೊಳಗೊಂಡ 10 ಕಾಲಂ ಮತ್ತು 10 ಎಂಜಿನಿಯರಿಂಗ್ ಕಾರ್ಯ ತಂಡಗಳನ್ನು ನಿಯೋಜಿಸಿದೆ. ನೌಕಾಪಡೆ 82 ತಂಡ ಒದಗಿಸಿದೆ. ಕರಾವಳಿ ಭದ್ರತಾ ಪಡೆ  42 ತಂಡ, 2 ಹೆಲಿಕಾಪ್ಟರ್ ಮತ್ತು 2 ಹಡಗುಗಳನ್ನು ಒದಗಿಸಿದೆ.

 

ಆಗಸ್ಟ್ 9ರಿಂದ ಎನ್.ಡಿ.ಆರ್.ಎಫ್ ಮತ್ತು ನೌಕಾಪಡೆಗಳು ಒಟ್ಟೆರೆ 6714 ಜನರನ್ನು ರಕ್ಷಿಸಿವೆ/ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿವೆ ಹಾಗೂ 891 ಜನರಿಗೆ ವೈದ್ಯಕೀಯ ನೆರವು ಪೂರೈಸಿವೆ.

 

ಹಿಂದೆಂದೂ ಕಾಣದಂಥ ಸನ್ನಿವೇಶದ ಸವಾಲನ್ನು ಎದಿರಿಸಲು ಕೈಗೊಂಡಿರುವ ಕ್ರಮಗಳಿಗೆ ರಾಜ್ಯ ಸರ್ಕಾರಕ್ಕೆ ಪ್ರಧಾನಮಂತ್ರಿಯವರು ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೂ ನೀರಿನ ನಡುವೆ ಸಿಲುಕಿರುವ ಜನರನ್ನು ರಕ್ಷಿಸುವುದು ಅತ್ಯುನ್ನತ ಆದ್ಯತೆ ಆಗಬೇಕು ಎಂದು ಅವರು ಹೇಳಿದರು. ಭಾರತ ಸರ್ಕಾರ ರಾಜ್ಯ ಸರ್ಕಾರದ ಎಲ್ಲ ಪ್ರಯತ್ನಗಳಿಗೆ ನಿರಂತರ ಬೆಂಬಲ ನೀಡಲಿದೆ ಎಂದೂ ತಿಳಿಸಿದರು.

******



(Release ID: 1543370) Visitor Counter : 91