ಸಂಪುಟ

ಐ.ಡಿ.ಬಿ.ಐ. ಬ್ಯಾಂಕಿನ ನಿಯಂತ್ರಣ ಶೇರುಪಾಲು ಎಲ್.ಐ.ಸಿ.ತೆಕ್ಕೆಗೆ  ಸರಕಾರದ ಶೇರು ಪಾಲನ್ನು 50 %ಗಿಂತ ಕಡಿಮೆ ಮಾಡಲು ಸಂಪುಟದ ಅಂಗೀಕಾರ. 

Posted On: 01 AUG 2018 6:09PM by PIB Bengaluru

ಐ.ಡಿ.ಬಿ.ಐ. ಬ್ಯಾಂಕಿನ ನಿಯಂತ್ರಣ ಶೇರುಪಾಲು ಎಲ್.ಐ.ಸಿ.ತೆಕ್ಕೆಗೆ 

ಸರಕಾರದ ಶೇರು ಪಾಲನ್ನು 50 %ಗಿಂತ ಕಡಿಮೆ ಮಾಡಲು ಸಂಪುಟದ ಅಂಗೀಕಾರ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಐ.ಡಿ.ಬಿ.ಐ. ಬ್ಯಾಂಕ್  ಲಿಮಿಟೆಡ್ ನಲ್ಲಿ ಹೊಂದಿರುವ ಸರಕಾರೀ ಶೇರು ಬಂಡವಾಳವನ್ನು 50%ಕ್ಕಿಂತ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದ ನಿರಾಕ್ಷೇಪಣೆಯನ್ನು ನೀಡುವುದಕ್ಕೆ ಅನುಮೋದನೆ ನೀಡಿತು. ನಿಯಂತ್ರಣ ಪಾಲನ್ನು ಈಕ್ವಿಟಿಯ ಮುಕ್ತ ಕೊಡುಗೆ ಅಥವಾ ಆದ್ಯತಾ ಮಂಜೂರಾತಿ ಮೂಲಕ  ಬ್ಯಾಂಕಿನ ಪ್ರಮೋಟರ್ ಆಗಿ ಜೀವ ವಿಮಾ ನಿಗಮ (ಎಲ್.ಐ.ಸಿ.) ಸ್ವಾಧೀನಪಡಿಸಿಕೊಳ್ಳುವುದಕ್ಕೂ  ಮತ್ತು ಬ್ಯಾಂಕಿನ ಆಡಳಿತ ನಿಯಂತ್ರಣವನ್ನು ಸರಕಾರ ಹಿಂಪಡೆಯುವುದಕ್ಕೂ ಅನುಮೋದನೆ ನೀಡಲಾಯಿತು.

ಪರಿಣಾಮ:

1.      ಈ ಸ್ವಾಧೀನ ಪ್ರಕ್ರಿಯೆ ಗ್ರಾಹಕರಿಗೆ ಎಲ್.ಐ.ಸಿ. ಮತ್ತು ಬ್ಯಾಂಕಿನಿಂದ ದೊರೆಯುವ ಸವಲತ್ತುಗಳ ವ್ಯಾಪ್ತಿಯನ್ನು ವಿಸ್ತರಿಸಲಿದೆ.

2.     . ಆರ್ಥಿಕತೆಯ ಮಾಪಕದಲ್ಲಿ , ವಿತರಣಾ ವೆಚ್ಚ ಕಡಿತದಲ್ಲಿ  ಮತ್ತು ಗ್ರಾಹಕರ ಸೇರ್ಪಡೆಯಲ್ಲಿ , ದಕ್ಷತೆ ಹೆಚ್ಚಳದಲ್ಲಿ ಮತ್ತು ಕಾರ್ಯಾಚರಣೆಯ ಅನುಕೂಲತೆ ಹಾಗು ಉತ್ಪನ್ನಗಳು ಮತ್ತು ಸೇವೆಗಳ ಮಾರಾಟದಲ್ಲಿ ಅವಕಾಶ ಹೆಚ್ಚಳದಿಂದಾಗಿ ಎರಡು ಸಂಸ್ಥೆಗಳಿಗೆ  ಲಾಭಗಳು ದೊರೆಯಲಿವೆ.

3.       ಇದು ಎಲ್.ಐ.ಸಿ. ಮತ್ತು ಬ್ಯಾಂಕು-ಈ ಎರಡು ಸಂಸ್ಥೆಗಳಿಗೂ ಆರ್ಥಿಕವಾಗಿ ಬಲಿಷ್ಟಗೊಳ್ಳಲು   ಸಹಾಯ ಮಾಡುತ್ತದೆ ಜೊತೆಗೆ  ಗೃಹ ಹಣಕಾಸು ಮತ್ತು ಮ್ಯೂಚುವಲ್ ಫಂಡ್ ಗಳಂತಹ ಹಣಕಾಸು ಉತ್ಪನ್ನಗಳನ್ನು ಒದಗಿಸುವ ಅವುಗಳ ಸಹವರ್ತಿ ಸಂಸ್ಥೆಗಳಿಗೂ ಇದರಿಂದ ನೆರವು ಲಭಿಸಲಿದೆ.

4      ಇದಿಷ್ಟಲ್ಲದೆ ಬ್ಯಾಂಕಿಗೆ ಎಲ್.ಐ.ಸಿ.ಯ 11 ಲಕ್ಷ ಏಜೆಂಟರ ಸಹಾಯವನ್ನು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ತಲುಪಿಸುವುದಕ್ಕಾಗಿ , ಗ್ರಾಹಕ ಸೇವೆಗಳನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಮತ್ತು ವಿತ್ತೀಯ ಸೇರ್ಪಡೆಯನ್ನು ಇನ್ನಷ್ಟು ವಿಸ್ತರಿಸುವುದಕ್ಕಾಗಿ ಪಡೆಯಲು ಅವಕಾಶ ಒದಗಿಸುತ್ತದೆ.

5.     ಕಡಿಮೆ ವೆಚ್ಚದ ಠೇವಣಿಗಳ, ನಿಧಿಗಳ ಸ್ವಾಧೀನದಿಂದ ಮತ್ತು ಪಾವತಿ ಸೇವೆಗಳ ಮೇಲಿನ ಶುಲ್ಕದ ಆದಾಯದಿಂದ ಬ್ಯಾಂಕಿಗೆ ಲಾಭವಾಗುವ ನಿರೀಕ್ಷೆ ಇದೆ.

6.    . ಬ್ಯಾಂಕಿನ 1,916  ಶಾಖೆಗಳ ಜಾಲದ  ಮೂಲಕ ಎಲ್.ಐ.ಸಿ.ಗೆ ಬ್ಯಾಂಕಾಶ್ಯೂರೆನ್ಸ್ (ಅಂದರೆ ಬ್ಯಾಂಕ್ ಗಳ ವಿಮಾ ಉತ್ಪನ್ನ ಮಾರಾಟ )  ದೊರೆಯಲಿದೆ ಜೊತೆಗೆ ಬ್ಯಾಂಕಿನ ನಗದು ನಿರ್ವಹಣಾ ಸೇವೆಗಳೂ ಅದಕ್ಕೆ ಲಭ್ಯವಾಗುತ್ತವೆ.

7. ಹಣಕಾಸು ಗುಂಪು  ಆಗುವ ಎಲ್.ಐ.ಸಿ.ಯ ಚಿಂತನೆಯೂ ಇದರಿಂದ ಸಾಕಾರಗೊಳ್ಳಲಿದೆ.

             8. ವಿಸ್ತಾರ ವ್ಯಾಪ್ತಿಯ ಹಣಕಾಸು ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವುದರಿಂದ ಮತ್ತು ಜೀವ ವಿಮಾ ವ್ಯಾಪ್ತಿಯನ್ನು ವಿಸ್ತರಿಸಲು ಎಲ್.ಐ.ಸಿ.ಗೆ ಉತ್ತಮ ಅವಕಾಶಗಳು ಲಭ್ಯವಾಗುವುದರಿಂದ   ಗ್ರಾಹಕರಿಗೂ ಲಾಭವಾಗಲಿದೆ.

ಹಿನ್ನೆಲೆ:

2016 ರ ತಮ್ಮ ಬಜೆಟ್ ಭಾಷಣದಲ್ಲಿ  ಹಣಕಾಸು ಸಚಿವರು  ಐ.ಡಿ.ಬಿ.ಐ.ಬ್ಯಾಂಕನ್ನು ಪರಿವರ್ತಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಹೇಳಿದ್ದರು.  ಮತ್ತು ಸರಕಾರವು ಅದನ್ನು ಮುಂದುವರಿಸುತ್ತದೆ ಹಾಗು ತನ್ನ ಪಾಲನ್ನು 50 % ಕ್ಕಿಂತ ಕಡಿಮೆ ಮಾಡುತ್ತದೆ  ಎಂದೂ ಹೇಳಿದ್ದರು. ಈ ಘೋಷಣೆಯನ್ನು  ಪರಿಗಣಿಸಿ , ಮಂಡಳಿಯ ಅನುಮೋದನೆಯೊಂದಿಗೆ  ಎಲ್.ಐ.ಸಿ.ಯು ಐ.ಡಿ.ಬಿ.ಐ. ಬ್ಯಾಂಕಿನ ನಿಯಂತ್ರಣ ಪಾಲನ್ನು ಖರೀದಿಸಲು  ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರದ (ಐ.ಅರ್. ಡಿ.ಎ.ಐ.)  ಅನುಮತಿಯನ್ನು ಕೋರಿತು. ಪ್ರಾಧಿಕಾರದ ಅನುಮತಿಯ ಬಳಿಕ ಎಲ್.ಐ.ಸಿ.ಯು ಐ.ಡಿ.ಬಿ.ಐ. ಬ್ಯಾಂಕಿನ ನಿಯಂತ್ರಣಕ್ಕೆ ಅವಶ್ಯವಾದ 51 % ಪಾಲನ್ನು  ಖರೀದಿಸಲು ಆಸಕ್ತಿ  ವ್ಯಕ್ತಪಡಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಂಕು ತನ್ನ ಮಂಡಳಿಯಲ್ಲಿ ಈ ಪ್ರಸ್ತಾಪವನ್ನು ಪರಿಗಣಿಸಿ  ಪ್ರಸ್ತಾವಿತ ಸ್ವಾಧೀನತಾ ಕ್ರಮದಿಂದಾಗಿ ಸರಕಾರದ ಪಾಲು ಬಂಡವಾಳ 51% ಗಿಂತ ಕಡಿಮೆಯಾಗುವ ಹಿನ್ನೆಲೆಯಲ್ಲಿ  ಸರಕಾರದ ನಿರ್ಧಾರವನ್ನು ಕೋರಿತ್ತು.



(Release ID: 1541341) Visitor Counter : 100