ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 29-07-2018ರಂದು ಮಾಡಿದ ‘ಮನದ ಮಾತು’ ( ‘ಮನ್ ಕಿ ಬಾತ್’ ) – 46 ನೇ ಭಾಷಣದ ಕನ್ನಡ ಅವತರಣಿಕೆ

Posted On: 29 JUL 2018 11:43AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 29-07-2018ರಂದು ಮಾಡಿದ ‘ಮನದ ಮಾತು’ ( ‘ಮನ್ ಕಿ ಬಾತ್’ ) – 46 ನೇ ಭಾಷಣದ ಕನ್ನಡ ಅವತರಣಿಕೆ 
 

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 

ಈ ಮಳೆಗಾಲದ ದಿನಗಳಲ್ಲಿ ಬಹಳಷ್ಟು ಸ್ಥಳಗಳಿಂದ ಹೆಚ್ಚಿನ ಮಳೆಯಾಗಿರುವ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಸ್ಥಳಗಳಲ್ಲಿ ಅತೀವೃಷ್ಟಿಯಿಂದಾಗಿ ಆತಂಕದ ಸುದ್ದಿಗಳೂ ಬರುತ್ತಿವೆ ಮತ್ತು ಇನ್ನು ಕೆಲವೆಡೆ ಜನರು ಇನ್ನೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಭಾರತದ ವಿಶಾಲತೆ, ವಿವಿಧತೆಯೊಂದಿಗೆ ಕೆಲವೊಮ್ಮೆ ಮಳೆ ಕೂಡಾ ಇಷ್ಟಾನಿಷ್ಟದ ರೂಪ ಪ್ರದರ್ಶಿಸುತ್ತದೆ. ಆದರೆ ನಾವು ಮಳೆಯನ್ನು ಹೇಗೆ ದೂಷಿಸುವುದು, ಸ್ವತಃ ಮನುಷ್ಯನೇ ಪ್ರಕೃತಿಯೊಂದಿಗೆ ಸಂಘರ್ಷದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅದರ ಪರಿಣಾಮವೇ ಕೆಲವೊಮ್ಮೆ ನಿಸರ್ಗ ನಮ್ಮೊಂದಿಗೆ ಮುನಿಸಿಕೊಳ್ಳುತ್ತದೆ. ಆದ್ದರಿಂದ ನಾವು ನಿಸರ್ಗ ಪ್ರೆಮಿಗಳಾಗಬೇಕು, ಪ್ರಕೃತಿಯ ರಕ್ಷಕರಾಗಬೇಕು, ಪ್ರಕೃತಿಯ ಪ್ರವರ್ತಕರಾಗಬೇಕು ಎಂಬುದು ನಮ್ಮ ಕರ್ತವ್ಯವಾಗಿದೆ. ಆಗ ಮಾತ್ರ ಪ್ರಕೃತಿದತ್ತ ವಸ್ತುಗಳಲ್ಲಿ ಸಮತೋಲನ ತನ್ನಿಂತಾನೇ ಮೂಡುತ್ತದೆ. 

ಕೆಲದಿನಗಳ ಹಿಂದೆ ಇಂಥದೇ ಒಂದು ಪ್ರಕೃತಿ ವಿಕೋಪದ ಘಟನೆ ಸಂಪೂರ್ಣ ವಿಶ್ವದ ಗಮನ ಸೆಳೆದಿತ್ತು. ಮನುಜ ಕುಲದ ಮನಸ್ಸನ್ನೇ ಕಲಕಿಬಿಟ್ಟಿತ್ತು. ನೀವೆಲ್ಲರೂ ಟಿ ವಿ ಯಲ್ಲಿ ನೋಡಿರಬಹುದು. ಥೈಲೆಂಡ್‌ನಲ್ಲಿ 12 ಜನ ಯುವಕರ ಫುಟ್‌ಬಾಲ್ ತಂಡ ಮತ್ತು ಅವರ ತರಬೇತುದಾರ ಚಾರಣಕ್ಕೆಂದು ಗುಹೆಗೆ ತೆರಳಿದ್ದರು. ಸಾಮಾನ್ಯವಾಗಿ ಗುಹೆಯೊಳಗೆ ಹೋಗಿ ಹೊರಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಅಂದು ವಿಧಿಯಾಟ ಬೇರೆಯೇ ಆಗಿತ್ತು. ಅಂದು ಅವರು ಗುಹೆಯಲ್ಲಿ ಬಹುದೂರ ತೆರಳಿದಾಗ ಇದ್ದಕ್ಕಿದ್ದಂತೆ ಜೋರಾದ ಮಳೆಯಿಂದಾಗಿ ಗುಹೆಯ ಪ್ರವೇಶದ್ವಾರದ ಬಳಿ ಸಾಕಷ್ಟು ನೀರು ತುಂಬಿತ್ತು. ಹೊರಬರುವ ದಾರಿ ಮುಚ್ಚಿಬಿಟ್ಟಿತ್ತು. ಬೇರೆ ಯಾವ ದಾರಿ ಇಲ್ಲದ ಕಾರಣ ಗುಹೆಯಲ್ಲಿಯೇ ಒಂದು ದಿಬ್ಬದ ಮೇಲೆ ನಿಂತಿದ್ದರು ಅದೂ ಒಂದೆರಡು ದಿನಗಳಲ್ಲ ಪೂರ್ತಿ 18 ದಿನಗಳವರೆಗೆ. ಹದಿಹರೆಯದ ವಯಸ್ಸಿನಲ್ಲಿ ಕಣ್ಣೆದುರಿಗೆ ಸಾವು ತಾಂಡವವಾಡುತ್ತಿರುವಾಗ ಪ್ರತಿ ಕ್ಷಣವನ್ನು ಕಳೆಯುವುದು ಎಷ್ಟು ಭಯಂಕರ ಎನ್ನುವುದನ್ನು ನೀವು ಊಹಿಸಬಹುದು. ಒಂದೆಡೆ ಅವರು ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾಗ ಇನ್ನೊಂದೆಡೆ ಇಡೀ ವಿಶ್ವದ ಮನುಕುಲವೇ ಒಂದಾಗಿ ದೈವದತ್ತ ಮಾನವತೆಯನ್ನು ಮೆರೆಯುವಲ್ಲಿ ನಿರತರಾಗಿದ್ದರು. ವಿಶ್ವದಾದ್ಯಂತದ ಜನತೆ ಇವರನ್ನು ಸುರಕ್ಷಿತವಾಗಿ ಹೊರತೆಗೆಯುವ ಕುರಿತು ಪ್ರಾರ್ಥನೆ ಮಾಡುತ್ತಿದ್ದರು. ಮಕ್ಕಳು ಎಲ್ಲಿದ್ದಾರೆ, ಹೇಗಿದ್ದಾರೆ, ಅವರನ್ನು ಹೇಗೆ ಹೊರಗೆ ತೆಗೆಯಬಹುದು ಎಂದು ಶೋಧಿಸುವ ಸಂಭಾವ್ಯ ಎಲ್ಲ ಪ್ರಯತ್ನಗಳನ್ನೂ ಮಾಡಲಾಯಿತು. ಒಂದು ವೇಳೆ ಅವರನ್ನು ರಕ್ಷಿಸುವ ಕೆಲಸ ಸಕಾಲದಲ್ಲಿ ಆಗದೇ ಹೋದರೆ ಮಳೆಗಾಲದ ದಿನಗಳಲ್ಲಿ ಕೆಲ ತಿಂಗಳುಗಳವರೆಗೆ ಅವರನ್ನು ಹೊರ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಒಟ್ಟಾರೆ ಒಳ್ಳೆ ಸುದ್ದಿ ಬಂದಾಗ ವಿಶ್ವದ ಎಲ್ಲ ಜನರೂ ನಿರಾಳರಾದರು, ಸಂತೋಷಪಟ್ಟರು. ಆದರೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಇನ್ನೊಂದು ದೃಷ್ಟಿಯಿಂದ ನೋಡಬಯಸುತ್ತೇನೆ. ಈ ಪೂರ್ಣ ಘಟನೆ ಹೇಗೆ ಜರುಗಿತು. ಪ್ರತಿ ಘಟ್ಟದಲ್ಲೂ ಜವಾಬ್ದಾರಿಯ ಅನುಭವ ಬಹಳ ಅದ್ಭುತವೆನಿಸಿತು. ಸರ್ಕಾರದವರೇ ಆಗಿರಲಿ, ಆ ಮಕ್ಕಳ ತಂದೆ ತಾಯಿಯಾಗಲಿ, ಅವರ ಕುಟುಂಬದವರಾಗಲಿ, ಮಾಧ್ಯಮವಾಗಲಿ, ದೇಶದ ಜನತೆಯಾಗಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಧೈರ್ಯವನ್ನು ಮೆರೆದದ್ದು ಅದ್ಭುತವಾಗಿತ್ತು. ಎಲ್ಲರೂ ಒಂದು ತಂಡದ ರೂಪದಲ್ಲಿ ತಂತಮ್ಮ ಕಾರ್ಯದಲ್ಲಿ ತೊಡಗಿದ್ದರು. ಎಲ್ಲರ ಸಂಮಯಯುಕ್ತ ವ್ಯವಹಾರ ಅರಿಯುವಂಥ ಮತ್ತು ಕಲಿಯುವಂಥ ವಿಷಯವಾಗಿದೆ. ಅವರ ತಂದೆ ತಾಯಿ ದುಖಿಃತರಾಗಿರಲಿಲ್ಲ ಎಂದಲ್ಲ, ಅವರ ತಾಯಂದಿರ ಕಣ್ಣಲ್ಲಿ ನೀರು ತುಂಬಿರಲಿಲ್ಲ ಎಂದಲ್ಲ, ಆದರೆ ಅವರು ತೋರಿದ ದೈರ್ಯ, ಸಂಯಮ, ಸಂಪೂರ್ಣ ಸಮಾಜದ ಶಾಂತಚಿತ್ತ ನಡತೆ ಇದೆಲ್ಲವೂ ನಮ್ಮೆಲ್ಲರಿಗೆ ಕಲಿಯುವಂಥ ವಿಷಯವಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಥೈಲ್ಯಾಂಡ್‌ನ ನೌಕಾಪಡೆಯ ಯೋಧನೊಬ್ಬ ಜೀವ ತೆರಬೇಕಾಯಿತು. ಇಂಥ ಕಠಿಣ ಪರಿಸ್ಥಿತಿಯಲ್ಲಿಯೂ ನೀರಿನಿಂದ ತುಂಬಿದ ಕಗ್ಗತ್ತಲ ಒಂದು ಗುಹೆಯೊಳಗೆ ಧೈರ್ಯ ಮತ್ತು ಸಾಹಸದೊಂದಿಗೆ ಭರವಸೆಯನ್ನು ಕಳೆದುಕೊಳ್ಳದೇ ಅವರು ಕೆಲಸ ಮಾಡಿದ್ದಕ್ಕೆ ಸಂಪೂರ್ಣ ವಿಶ್ವವೇ ಆಶ್ಚರ್ಯಚಕಿತಗೊಂಡಿದೆ. ಮಾನವೀಯತೆ ಒಗ್ಗೂಡಿದಾಗ ಅದ್ಭುತ ಕೆಲಸಗಳಾಗುತ್ತವೆ ಎಂಬುದನ್ನು ಇದು ತೋರುತ್ತದೆ. ಇದಕ್ಕಾಗಿ ನಾವು ಶಾಂತಚಿತ್ತರಾಗಿ ಸ್ಥಿರ ಮನಸ್ಸಿನಿಂದ ನಮ್ಮ ಗುರಿಯತ್ತ ಗಮನವಿಟ್ಟು ಕೆಲಸ ಮಾಡುವುದು ಅವಶ್ಯಕವಾಗಿರುತ್ತದೆ. 

ಕೆಲ ದಿನಗಳ ಹಿಂದೆ ನಮ್ಮ ದೇಶದ ಪ್ರಿಯ ಕವಿ ನೀರಜ್ ಅವರು ನಮ್ಮನ್ನಗಲಿದರು. ಆಸೆ, ಭರವಸೆ, ಧೃಡಸಂಕಲ್ಪ, ಆತ್ಮವಿಶ್ವಾಸ ನೀರಜ್ ಅವರ ವಿಶೇಷತೆಯಾಗಿತ್ತು. ನಾವೆಲ್ಲ ಹಿಂದೂಸ್ಥಾನದ ಜನರಿಗೆ ನೀರಜ್ ಅವರ ಪ್ರತಿ ಮಾತುಗಳೂ ಬಹಳ ಶಕ್ತಿಯನ್ನು ನೀಡಬಲ್ಲಂಥವಾಗಿವೆ, ಪ್ರೆÃರಣಾದಾಯಕವಾಗಿವೆ. ಅವರು ಹೀಗೆ ಬರೆದಿದ್ದಾರೆ - 

ಅಂಧಿಯಾರ್ ಢಲ್‌ಕರ್ ಹಿ ರಹೇಗಾ 

ಆಂಧಿಯಾ ಚಾಹೆ ಉಠಾವೊ, 

ಬಿಜಲಿಯಾ ಚಾಹೆ ಗಿರಾವೊ 

ಜಲ್ ಗಯಾ ಹೈ ದೀಪ್ ತೊ 

ಅಂಧಿಯಾರ್ ಢಲ್‌ಕರ್ ಹಿ ರಹೇಗಾ 

‘अँधियार ढलकर ही रहेगा, 

आँधियाँ चाहे उठाओ, 

बिजलियाँ चाहे गिराओ, 

ದೀಪ ಹೊತ್ತಿದೆ ಅಂದ ಮೇಲೆ ಕತ್ತಲೆಯೂ ಕಳೆಯಲೇಬೇಕು. ನೀರಜ್ ಅವರಿಗೆ ಸನ್ಮಾನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. 

“ಪ್ರಧಾನಮಂತ್ರಿಯವರೇ ನಮಸ್ಕಾರ, ನನ್ನ ಹೆಸರು ಸತ್ಯಂ. ನಾನು ಈ ಬಾರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದಿದ್ದೇನೆ. ನಮ್ಮ ಶಾಲೆಯ ಬೋರ್ಡ್ ಪರೀಕ್ಷೆ ಸಮಯದಲ್ಲಿ ನೀವು ಪರೀಕ್ಷಾ ಒತ್ತಡ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿದ್ದಿರಿ. ನನ್ನಂಥ ವಿದ್ಯಾರ್ಥಿಗಳಿಗೆ ಈಗ ನಿಮ್ಮ ಸಂದೇಶವೇನು?” 

ಜುಲೈ ಮತ್ತು ಅಗಸ್ಟ್ ತಿಂಗಳು ಕೃಷಿಕರಿಗೆ ಮತ್ತು ಯುವಕರಿಗೆ ಬಹಳ ಮಹತ್ವಪೂರ್ಣವಾದವು. ಏಕೆಂದರೆ ಇದೇ ಸಮಯ ಕಾಲೇಜುಗಳಲ್ಲಿ ಅತ್ಯಂತ ಪೀಕ್ ಸೀಸನ್ ಆಗಿರುತ್ತದೆ. ಸತ್ಯಂ ಅವರಂತಹ ಲಕ್ಷಾಂತರ ಯುವಕರು ಶಾಲೆಯಿಂದ ಕಾಲೇಜಿಗೆ ತೆರಳುತ್ತಾರೆ. ಫೆಬ್ರವರಿ, ಮಾರ್ಚ ತಿಂಗಳು ಪರೀಕ್ಷೆ, ಪೇಪರ್‌ಗಳು, ಉತ್ತರಗಳು ಎಂದೆಲ್ಲ ಕಳೆದರೆ ಏಪ್ರಿಲ್ ಮತ್ತು ಮೇ ತಿಂಗಳು ರಜೆ, ಮೋಜು ಜೊತೆಗೆ ಫಲಿತಾಂಶ ಮತ್ತು ಮುಂದೆ ಜೀವನದಲ್ಲಿ ಏನು ಮಾಡಬೇಕು ಎಂದು ನಿರ್ಧರಿಸುವುದು, ಕೆರಿಯರ್ ಛಾಯ್ಸ್, ಇದರಲ್ಲೇ ಕಳೆದುಹೋಗುತ್ತವೆ. ಜುಲೈ ಎಂಥ ತಿಂಗಳು ಎಂದರೆ ಇದರಲ್ಲಿ ಯುವಕರು ತಮ್ಮ ಜೀವನದ ಹೊಸ ಘಟ್ಟಕ್ಕೆ ಕಾಲಿರಿಸುತ್ತಾರೆ. ಈ ಸಮಯದಲ್ಲಿ ಫೋಕಸ್ ಕೊಶ್ಚನ್ ನಿಂದ ಮುಂದೆ ಸಾಗಿ ಕಟ್ ಆಫ್ ಹಂತ ತಲುಪುತ್ತಾರೆ. (ಈ ಸಮಯದಲ್ಲಿ ಯಾವುದರತ್ತ ಗಮನ ಕೇಂದ್ರೀಕರಿಸಬೇಕು ಎಂಬ ಪ್ರಶ್ನೆಗಳನ್ನು ದಾಟಿ ಯಾವುದನ್ನು ಆಯ್ದುಕೊಳ್ಳಬೇಕು ಎಂದು ನಿರ್ಧರಿಸುವ ಹಂತ ತಲುಪುತ್ತಾರೆ) ವಿದ್ಯಾರ್ಥಿಗಳ ಗಮನ ಮನೆಯಿಂದ ಹಾಸ್ಟೆಲ್‌ನತ್ತ ತಿರುಗುತ್ತದೆ. ವಿದ್ಯಾರ್ಥಿ ಪೋಷಕರ ನೆರಳಿನಿಂದ ಶಿಕ್ಷಕರ ಸುಪರ್ದಿಗೆ ಬರುತ್ತಾನೆ. ನನ್ನ ಯುವಮಿತ್ರರು ಕಾಲೇಜು ಜೀವನದ ಆರಂಭದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ ಮತ್ತು ಸಂಭ್ರಮದಿಂದಿದ್ದಾರೆ ಎಂದು ನನಗೆ ವಿಶ್ವಾಸವಿದೆ. ಪ್ರಥಮ ಬಾರಿಗೆ ಮನೆಯಿಂದ ಹೊರ ಹೋಗುವುದು, ಹಳ್ಳಿಯಿಂದ ಹೊರ ಹೋಗುವುದು, ತಮ್ಮ ಸುರಕ್ಷಿತ ವಲಯದಿಂದ ಹೊರಹೋಗಿ ತಮಗೆ ತಾವೇ ಸಾರಥಿಯಾಗಿ ಮುನ್ನಡೆಯಬೇಕಾಗುತ್ತದೆ. 

ಇಷ್ಟೊಂದು ಜನ ಯುವಕರು ಮೊದಲ ಬಾರಿಗೆ ಮನೆಗಳನ್ನು ತೊರೆದು ತಮ್ಮ ಜೀವನಕ್ಕಾಗಿ ಒಂದು ಹೊಸ ದಿಕ್ಕನ್ನು ಅರಸುತ್ತಾ ಹೊರಬರುತ್ತಾರೆ. ಎಷ್ಟೋ ವಿದ್ಯಾರ್ಥಿಗಳು ಈಗಾಗಲೇ ತಂತಮ್ಮ ಕಾಲೇಜುಗಳನ್ನು ಸೇರಿದ್ದಾಗಿರಬಹುದು, ಇನ್ನೂ ಕೆಲವರು ಸೇರುವವರಿರಬಹುದು. ನಿಮಗೆ ಹೇಳುವುದು ಇಷ್ಟೇ ಶಾಂತರಾಗಿರಿ, ಜೀವನವನ್ನು ಆನಂದಿಸಿ, ಜೀವನದಲ್ಲಿ ಅಂತರಾಳದ ಪೂರ್ಣ ಆನಂದ ಪಡೆಯಿರಿ. ಪುಸ್ತಕಗಳ ಹೊರತಾಗಿ ಅನ್ಯ ಮಾರ್ಗವಿಲ್ಲ, ಓದಲೇಬೇಕು, ಆದರೆ ಹೊಸತನ್ನು ಶೋಧಿಸುವ ಪ್ರವೃತ್ತಿ ಹೊಂದಿದವರಾಗಿರಬೇಕು. ಹಳೆಯ ಗೆಳೆಯರು, ಬಾಲ್ಯ ಸ್ನೇಹಿತರು ಬಹಳ ಅಮೂಲ್ಯವಾಗಿರುತ್ತಾರೆ. ಆದರೆ ಹೊಸ ಸ್ನೇಹಿತರನ್ನು ಆಯ್ದುಕೊಳ್ಳುವುದು, ಗೆಳೆತನ ಮಾಡುವುದು ಮತ್ತು ನಿಭಾಯಿಸುವುದು ಇದು ಬಹುದೊಡ್ಡ ವಿವೇಚನೆಯ ಕೆಲಸವಾಗಿದೆ. ಹೊಸತು ಏನನ್ನಾದರೂ ಕಲಿಯಿರಿ, ಹೊಸ ಹೊಸ ಕೌಶಲ್ಯಗಳು, ಹೊಸ ಭಾಷೆಗಳನ್ನು ಕಲಿಯಿರಿ. ಯಾವ ಯುವಕರು ತಮ್ಮ ಊರನ್ನು ಬಿಟ್ಟು ಬೇರೆಡೆ ಕಲಿಯಲು ಹೋಗಿದ್ದೀರೋ ಆ ಸ್ಥಳದ ಬಗ್ಗೆ ಶೋಧ ನಡೆಸಿ, ಆ ಸ್ಥಳದ ಬಗ್ಗೆ, ಜನರ ಬಗ್ಗೆ, ಭಾಷೆ ಬಗ್ಗೆ ಸಂಸ್ಕೃತಿ ಬಗ್ಗೆ ಅರಿಯಿರಿ. ಅಲ್ಲಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ಅವುಗಳ ಬಗ್ಗೆ ತಿಳಿಯಿರಿ. ಜೀವನದ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವ ಎಲ್ಲ ಯುವಕರಿಗೆ ನನ್ನ ಶುಭಾಷಯಗಳು. ಈಗ ಕಾಲೇಜ್ ಸೀಸನ್ ಬಗ್ಗೆ ಮಾತಾಡುತ್ತಿದ್ದಂತೆ ನಾನು ನ್ಯೂಸ್‌ನಲ್ಲಿ ನೋಡಿದ ಸುದ್ದಿ ನೆನಪಾಗ್ತಿದೆ. ಮಧ್ಯಪ್ರದೇಶದ ಅತ್ಯಂತ ಬಡ ಕುಟುಂಬದ ಒಬ್ಬ ವಿದ್ಯಾರ್ಥಿ ಆಶಾರಾಮ್ ಚೌಧರಿ ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ಹೇಗೆ ಸಫಲತೆಯನ್ನು ಪಡೆದ ಎಂಬುದು. ಇವರು ಜೋಧಪುರದ ಎ ಐ ಐ ಎಂ ಎಸ್ ನ ಎಂ ಬಿ ಬಿ ಎಸ್ ಪರೀಕ್ಷೆಯಲ್ಲಿ ಒಂದೇ ಪ್ರಯತ್ನದಲ್ಲಿಯೇ ಸಫಲತೆಯನ್ನು ಪಡೆದಿದ್ದಾರೆ. ಅವರ ತಂದೆ ಕಸ ಆಯ್ದು ತಮ್ಮ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದಾರೆ. ಅವರ ಈ ಸಾಧನೆಗೆ ಅವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಬಡ ಕುಟುಂಬದಿಂದ ಬಂದ ಬಹಳಷ್ಟು ಜನ ವಿದ್ಯಾರ್ಥಿಗಳಿದ್ದಾರೆ ಮತ್ತು ಸಂಕಷ್ಟ ಪರಿಸ್ಥಿತಿಗಳ ಹೊರತಾಗಿಯೂ ತಮ್ಮ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅವರು ಎಂಥ ಸಾಧನೆಯನ್ನು ಮಾಡಿದ್ದಾರೆಂದರೆ ಅದು ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತದೆ. ಅವರು ದಿಲ್ಲಿಯ ಡಿಟಿಸಿ ಯಲ್ಲಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವವರ ಮಗ ಪ್ರಿನ್ಸ್ ಕುಮಾರ್ ಆಗಿರಲಿ ಅಥವಾ ಕೊಲ್ಕತ್ತಾದ ಫುಟ್ ಪಾತ್ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಓದಿದ ಅಭಯ್ ಗುಪ್ತಾ ಆಗಿರಲಿ, ಅಹ್ಮದಾಬಾದ್‌ನ ಕುಮಾರಿ ಆಫ್ರಿಕನ್ ಆಗಿರಲಿ ಅವಳ ತಂದೆ ಅಟೋ ರಿಕ್ಷಾ ಚಾಲಕರಾಗಿದ್ದಾರೆ, ನಾಗ್ಪುರದ ಕುಮಾರಿ ಖುಷಿ ಆಗಿರಲಿ ಅವಳ ತಂದೆ ಕೂಡಾ ಶಾಲಾ ಬಸ್ ಚಾಲಕರಾಗಿದ್ದಾರೆ, ಅಥವಾ ಹರಿಯಾಣದ ಕಾರ್ತಿಕ್ ಆಗಿರಲಿ ಅವರ ತಂದೆ ಕಾವಲುಗಾರನಾಗಿದ್ದಾರೆ ಅಥವಾ ಜಾರ್ಖಂಡ್ ನ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವವರ ಮಗ ರಮೇಶ್ ಸಾಹು ಆಗಿರಲಿ, ಸ್ವತಃ ರಮೇಶ್ ಜಾತ್ರೆಯಲ್ಲಿ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದರು. ಅಥವಾ ಗುಡ್‌ಗಾಂವ್‌ನ ಜನ್ಮತಃ ಸ್ಪೈನಲ್ ಮಸ್ಕ್ಯುಲಾರ್ ಅಟ್ರೋಫಿ ಎಂಬ ರೋಗದಿಂದ ನರಳುತ್ತಿರುವ ವಿಕಲಚೇತನೆ ಕುಮಾರಿ ಅನುಷ್ಕಾ ಪಾಂಡಾ ಆಗಿರಲಿ ಇವರೆಲ್ಲರೂ ಧೃಡಸಂಕಲ್ಪದಿಂದ ಮತ್ತು ತಾಳ್ಮೆಯಿಂದ ಎಲ್ಲ ಬಗೆಯ ಸಂಕಷ್ಟಗಳನ್ನು ದಾಟಿ ಜಗತ್ತು ನೋಡಬಲ್ಲಂಥ ಸಾಧನೆಯನ್ನು ಮಾಡಿದ್ದಾರೆ. ನಮ್ಮ ಸುತ್ತಮುತ್ತಲೂ ನಾವು ನೋಡಿದರೆ ಇಂಥ ಎಷ್ಟೋ ಉದಾಹರಣೆಗಳು ನಮಗೆ ಸಿಗುತ್ತವೆ. 

ದೇಶದ ಯಾವುದೇ ಮೂಲೆಯಲ್ಲಿ ಘಟಿಸಿದ ಉತ್ತಮ ಘಟನೆಯಾಗಲಿ ನನಗೆ ಶಕ್ತಿ ನೀಡುತ್ತದೆ, ಪ್ರೇರಣೆ ನೀಡುತ್ತದೆ ಮತ್ತು ಈ ಯುವಕರ ಬಗ್ಗೆ ನಿಮಗೆ ಹೇಳುತ್ತಿದ್ದೇನೆ ಎಂದಾಗ ನನಗೆ ನೀರಜ್ ಅವರ ಆ ಮಾತುಗಳು ನೆನಪಿಗೆ ಬರುತ್ತವೆ ಮತ್ತು ಜೀವನದ ಉದ್ದೇಶವೂ ಅದೇ ಅಲ್ಲವೆ? ನೀರಜ್ ಅವರು ಹೇಳಿದ್ದರು: 

“ಗೀತ್ ಆಕಾಶ್ ಕೊ ಧರತಿ ಕಾ ಸುನಾನಾ ಹೈ ಮುಝೆ 

ಹರ್ ಅಂಧೆರೆ ಕೊ ಉಜಾಲೆ ಮೆ ಬುಲಾನಾ ಹೈ ಮುಝೆ 

ಫೂಲ್ ಕಿ ಗಂಧ ಸೆ ತಲವಾರ್ ಕೊ ಸರ್ ಕರನಾ ಹೈ 

ಔರ್ ಗಾ ಗಾ ಕೆ ಪಹಾಡೊಂಕೊ ಜಗಾನಾ ಹೈ ಮುಝೆ” 

‘गीत आकाश को धरती का सुनाना है मुझे, 

हर अँधेरे को उजाले में बुलाना है मुझे, 

फूल की गंध से तलवार को सर करना है, 

और गा-गा के पहाड़ों को जगाना है मुझे’ 

ನನ್ನ ಪ್ರಿಯ ದೇಶಬಾಂಧವರೇ ಕೆಲ ದಿನಗಳ ಹಿಂದೆ ಒಂದು ಸುದ್ದಿಯೆಡೆ ನನ್ನ ದೃಷ್ಟಿ ಹೋಯಿತು. ಅಲ್ಲಿ ಹೀಗೆ ಬರೆದಿದ್ದರು. ‘ಇಬ್ಬರು ಯುವಕರು ಮೋದಿಯವರ ಕನಸನ್ನು ನನಸು ಮಾಡಿದ್ದಾರೆ’ ಎಂದು. ವಿವರವಾಗಿ ಓದಿದಾಗ, ಹೇಗೆ ನಮ್ಮ ಯುವಕರು ತಂತ್ರಜ್ಞಾನವನ್ನು ಜಾಣ್ಮೆಯಿಂದ ಮತ್ತು ಕೌಶಲ್ಯಪೂರ್ಣವಾಗಿ ಬಳಸಿ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಯಿತು. ಘಟನೆ ಏನು ಎಂದರೆ ಅಮೇರಿಕದ ಟೆಕ್ನಾಲಾಜಿ ಹಬ್ ಎಂದೇ ಗುರುತಿಸಲ್ಪಡುವ ಸ್ಯಾನ್ ಜೋಸ್ ನಗರದಲ್ಲಿ ನಾನು ಒಮ್ಮೆ ಭಾರತೀಯ ಯುವಕರೊಂದಿಗೆ ಚರ್ಚೆ ಮಾಡುತ್ತಿದ್ದೆ. ನಾನು ಅವರಿಗೆ ತಮ್ಮ ಜ್ಞಾನವನ್ನು ಅವರು ಭಾರತಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ಯೋಚಿಸಿ ಸ್ವಲ್ಪ ಸಮಯವನ್ನು ಮೀಸಲಿರಿಸಿ ಏನನ್ನಾದರೂ ಮಾಡಿ ಎಂದು ಮನವಿ ಮಾಡಿದ್ದೆ. ನಾನು ಬ್ರೇನ್ ಡ್ರೇನ್ ಅನ್ನು ಬ್ರೇನ್ ಗೇನ್ ಆಗಿ ಬದಲಿಸುವ ಮನವಿ ಮಾಡಿದ್ದೆ. ಯೋಗೇಶ್ ಸಾಹು ಮತ್ತು ರಜನೀಶ್ ವಾಜಪೇಯಿ ಎಂಬ ರಾಯಬರೇಲಿಯ ಇಬ್ಬರು ಐಟಿ ವೃತ್ತಿಪರರು ನನ್ನ ಈ ಸವಾಲನ್ನು ಸ್ವೀಕರಿಸಿ ಒಂದು ಹೊಸ ಪ್ರಯತ್ನ ಮಾಡಿದ್ದಾರೆ. ತಮ್ಮ ವೃತ್ತಿಪರ ಕೌಶಲ್ಯವನ್ನು ಉಪಯೋಗಿಸಿ ಯೋಗೇಶ್ ಸಾಹು ಮತ್ತು ರಜನೀಶ್ ವಾಜಪೇಯಿ ಅವರು ಒಂದು ಸ್ಮಾರ್ಟ್ ಗಾಂವ್ ಆಪ್ ತಯಾರಿಸಿದ್ದಾರೆ. ಈ ಆಪ್ ಈಗ ಹಳ್ಳಿಯ ಜನರಿಗೆ ಸಂಪೂರ್ಣ ವಿಶ್ವದೊಂದಿಗೆ ಸಂಪರ್ಕ ಕಲ್ಪಿಸುತ್ತಿರುವುದಷ್ಟೇ ಅಲ್ಲ ಅವರು ಯಾವುದೇ ಮಾಹಿತಿ ಮತ್ತು ಸೂಚನೆಗಳನ್ನು ಸ್ವತಃ ತಮ್ಮ ಮೊಬೈಲ್ ನಲ್ಲಿ ಪಡೆಯಬಹುದಾಗಿದೆ. ರಾಯಬರೇಲಿಯ ತೌಘಕ್‌ಪುರ್ ಗ್ರಾಮಸ್ಥರು, ಗ್ರಾಮ ಮುಖ್ಯಸ್ಥ, ಜಿಲ್ಲಾ ನ್ಯಾಯಾಧೀಶರು, ಸಿ ಡಿ ಒ ಎಲ್ಲರೂ ಈ ಆಪ್ ಬಳಸಲು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಆಪ್ ಗ್ರಾಮದಲ್ಲಿ ಒಂದು ರೀತಿಯ ಡಿಜಿಟಲ್ ಕ್ರಾಂತಿಯನ್ನು ತರುವ ಕೆಲಸ ಮಾಡುತ್ತಿದೆ. ಗ್ರಾಮದಲ್ಲಾಗುವ ಅಭಿವೃದ್ಧಿ ಕೆಲಸಗಳನ್ನು ಈ ಆಪ್ ಮೂಲಕ ರೆಕಾರ್ಡ್ ಮಾಡುವುದು, ಟ್ರ್ಯಾಕ್ ಮಾಡುವುದು, ಮಾನಿಟರ್ ಮಾಡುವುದು ಸುಲಭವಾಗಿದೆ. ಈ ಆಪ್‌ನಲ್ಲಿ ಗ್ರಾಮದ ಫೋನ್ ಡೈರೆಕ್ಟರಿ, ಸುದ್ದಿ ವಿಭಾಗ, ಘಟನೆಗಳ ಪಟ್ಟಿ, ಆರೋಗ್ಯ ಕೇಂದ್ರ ಮತ್ತು ಮಾಹಿತಿ ಕೇಂದ್ರ ಇವೆ. ಈ ಆಪ್ ಕೃಷಿಕರಿಗೂ ಬಹಳ ಉಪಯುಕ್ತವಾಗಿದೆ. ಆಪ್‌ನ ಗ್ರಾಮರ್ ಫೀಚರ್, ರೈತರ ಮಧ್ಯೆ ಫ್ಯಾಕ್ಟ್ ರೇಟ್ ಹೀಗೆ ಅವರ ಉತ್ಪಾದನೆಗಳಿಗೆ ಒಂದೇ ಮಾರುಕಟ್ಟೆ ಸ್ಥಳದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಘಟನೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಷಯ ಗಮನಕ್ಕೆ ಬರುತ್ತದೆ. ಆ ಯುವಕರು ಅಮೇರಿಕದಲ್ಲಿ, ಅಲ್ಲಿಯ ಜೀವನ, ವಿಚಾರ ವೈಖರಿ ಮಧ್ಯೆ ಜೀವಿಸ್ಮತ್ತಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ಭಾರತವನ್ನು ಬಿಟ್ಟು ಹೋಗಿರಬಹುದು ಆದರೂ ತಮ್ಮ ಗ್ರಾಮದ ಸೂಕ್ಷ್ಮತೆಗಳನ್ನು ಅರಿತಿದ್ದಾರೆ, ಸಮಸ್ಯೆಗಳ ಬಗ್ಗೆ ತಿಳಿದಿದ್ದಾರೆ ಮತ್ತು ಹಳ್ಳಿಯೊಂದಿಗೆ ಭಾವನಾತ್ಮಕವಾಗಿ ಇಂದಿಗೂ ಹೊಂದಿಕೊಂಡಿದ್ದಾರೆ. ಆದ್ದರಿಂದಲೇ ಬಹುಶಃ ಅವರು ತಮ್ಮ ಗ್ರಾಮಕ್ಕೆ ಏನು ಬೇಕೋ ಅದಕ್ಕೆ ಅನುಸಾರ ಕೆಲಸ ಮಾಡಿದ್ದಾರೆ. ತನ್ನ ಗ್ರಾಮ, ತಮ್ಮ ಮೂಲ ಬೇರುಗಳೊಂದಿಗೆ ಇರುವ ಈ ಬಂಧ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಭಾವನೆ ಬಹುಶಃ ಪ್ರತಿಯೊಬ್ಬ ಭಾರತೀಯನಲ್ಲೂ ಸ್ವಾಭಾವಿಕವಾಗಿಯೇ ಇರುತ್ತದೆ. ಆದರೆ ಕೆಲವೊಮ್ಮೆ ಸಮಯದ ಅಭಾವದಿಂದಾಗಿ, ಅಂತರದಿಂದಾಗಿ, ಕೆಲವೊಮ್ಮೆ ಪರಿಸ್ಥಿತಿಯಿಂದಾಗಿ ಆ ಭಾವನೆಯ ಮೇಲೆ ಒಂದು ತೆಳುವಾದ ಪದರ ಶೇಖರಣೆಯಾಗಿಬಿಡುತ್ತದೆ ಆದರೆ ಒಂದು ಒಂದು ಪುಟ್ಟ ಕಿಡಿ ತಗುಲಿದರೂ ಆ ಎಲ್ಲ ವಿಷಯಗಳು ಹೊರಹೊಮ್ಮುತ್ತವೆ ಮತ್ತು ಕಳೆದು ಹೋದ ದಿನಗಳತ್ತ ಸೆಳೆದುಕೊಂಡು ಹೋಗುತ್ತವೆ. ನಾವೂ ನಮ್ಮ ವಿಷಯದಲ್ಲೂ ಹೀಗೆ ಆಗಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಸ್ಥಿತಿ, ಪರಿಸ್ಥಿತಿ, ಅಂತರ, ನಮ್ಮನ್ನು ಅಗಲಿಸಿಲ್ಲ ತಾನೇ, ಬೂದಿ ಮುಚ್ಚಿದೆಯೇ ಎಂದು ಖಂಡಿತ ಪರೀಕ್ಷಿಸಿ, ಖಂಡಿತ ಯೋಚಿಸಿ. 

“ಆದರಣೀಯ ಪ್ರಧಾನಮಂತ್ರಿಗಳೇ ನಮಸ್ಕಾರ.ನಾನು ಸಂತೋಷ್ ಕಾಕಡೆ, ಮಹಾರಾಷ್ಟ್ರದ ಕೊಲ್ಹಾಪುರದಿಂದ ಮಾತನಾಡುತ್ತಿದ್ದೇನೆ. ಪಂಢರಾಪುರದ ಯಾತ್ರೆ ಈ ಮಹಾರಾಷ್ಟ್ರದಲ್ಲಿ ಹಳೆಯ ಸಂಪ್ರದಾಯ. ಪ್ರತಿವರ್ಷ ಇದು ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲ್ಪಡುತ್ತದೆ. ಸುಮಾರು 7 ರಿಂದ 8 ಲಕ್ಷ ಯಾತ್ರಿಕರು ಇದರಲ್ಲಿ ಭಾಗವಹಿಸುತ್ತಾರೆ. ಈ ವಿಶೇಷವಾದ ಕಾರ್ಯಕ್ರಮದಲ್ಲಿ ದೇಶದ ಉಳಿದ ಜನರೂ ಭಾಗಿಯಾಗುವಂತಾಗಲಿ, ಆದ್ದರಿಂದ ನೀವು ಈ ಯಾತ್ರೆಯ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ”. 

ಸಂತೋಷ್ ರವರೇ, ನಿಮ್ಮ ದೂರವಾಣಿ ಕರೆಗೆ ಬಹಳ ಧನ್ಯವಾದಗಳು. ನಿಜವಾಗಿಯೂ ಪಂಢರಾಪುರದ ಯಾತ್ರೆಯು ತನ್ನಷ್ಟಕ್ಕೆ ತಾನೇ ಒಂದು ಅದ್ಭುತ ಯಾತ್ರೆಯಾಗಿದೆ. ಗೆಳೆಯರೇ, ಈ ಜುಲೈ ತಿಂಗಳ 23 ರಂದು ಆಷಾಢ ಏಕಾದಶಿ ಆಗಿತ್ತು, ಆ ದಿನವನ್ನು ಪಂಢರಾಪುರದಲ್ಲಿ ವೈಭವೋಪೇತ ಯಾತ್ರೆಯ ರೂಪದಲ್ಲಿ ಆಚರಿಸಲಾಗುತ್ತದೆ. ಪಂಢರಾಪುರವು ಮಹಾರಾಷ್ಟ್ರದ ಸೋಲ್ಹಾಪುರ್ ಜಿಲ್ಲೆಯ ಒಂದು ಪವಿತ್ರ ಸ್ಥಳವಾಗಿದೆ. ಆಷಾಢ ಏಕಾದಶಿಗೆ ಸುಮಾರು 15 – 20 ದಿನಗಳ ಮುಂಚೆಯೇ ಯಾತ್ರಾರ್ಥಿಗಳು ಪಲ್ಲಕ್ಕಿಗಳೊಂದಿಗೆ ಪಂಢರಾಪುರದ ಯಾತ್ರೆಗೆ ಕಾಲ್ನಡಿಗೆಯಿಂದ ಹೊರಡುತ್ತಾರೆ. ಜಾತ್ರೆ ಎಂದು ಕರೆಯುವ ಈ ಯಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯಾತ್ರಿಗಳು ಸೇರಿಕೊಳ್ಳುತ್ತಾರೆ. ಸಂತ ಜ್ಞಾನೇಶ್ವರ್ ಮತ್ತು ಸಂತ ತುಕಾರಾಂ ರವರಂತಹ ಸಂತರ ಪಾದುಕೆಗಳನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು “ವಿಠ್ಠಲ, ವಿಠ್ಠಲ’ ಎಂದು ಹಾಡುತ್ತಾ, ನೃತ್ಯ ಮಾಡುತ್ತಾ, ವಾದ್ಯಗಳನ್ನು ನುಡಿಸುತ್ತಾ ಕಾಲ್ನಡಿಗೆಯಿಂದ ಪಂಢರಾಪುರದ ಕಡೆಗೆ ಹೊರಡುತ್ತಾರೆ. ಈ ಯಾತ್ರೆಯು ವಿದ್ಯೆ, ಸಂಸ್ಕಾರ ಮತ್ತು ಶ್ರದ್ಧೆಯ ತ್ರಿವೇಣೀಸಂಗಮವಾಗಿದೆ. ಯಾತ್ರಾರ್ಥಿಗಳು ವಿಠೋಬ ಅಥವಾ ಪಾಂಡುರಂಗ ಎಂದು ಕೂಡ ಕರೆಯುವ ಭಗವಾನ್ ವಿಠ್ಠಲನ ದರ್ಶನಕ್ಕೆ ಅಲ್ಲಿಗೆ ತಲುಪುತ್ತಾರೆ. ಭಗವಾನ್ ವಿಠ್ಠಲನು ಬಡವರು, ವಂಚಿತರು, ಶೋಷಿತರು ಇವರುಗಳ ಹಿತರಕ್ಷಣೆ ಮಾಡುತ್ತಾನೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಇಲ್ಲಿಯ ಜನರಲ್ಲಿ ಅಪಾರ ಶ್ರದ್ಧೆ, ಭಕ್ತಿ ಇದೆ. ಪಂಢರಾಪುರದಲ್ಲಿ ವಿಠೋಬನ ಮಂದಿರಕ್ಕೆ ಹೋಗುವುದು ಮತ್ತು ಅಲ್ಲಿಯ ಮಹಾತ್ಮೆ, ಸೌಂದರ್ಯ, ಅಧ್ಯಾತ್ಮಿಕ ಆನಂದವನ್ನು ಹೊಂದುವುದು ಒಂದು ಬೇರೆಯದೇ ರೀತಿಯ ಅನುಭವವಾಗಿದೆ. ಅವಕಾಶ ಸಿಕ್ಕಿದಾಗ ಒಂದು ಬಾರಿ ಖಂಡಿತವಾಗಿಯೂ ಪಂಢರಾಪುರದ ಯಾತ್ರೆಯ ಅನುಭವವನ್ನು ಪಡೆದುಕೊಳ್ಳಿ ಎನ್ನುವುದು ‘ಮನದ ಮಾತು’ ಕಾರ್ಯಕ್ರಮದ ಶ್ರೋತೃಗಳಲ್ಲಿ ನನ್ನ ವಿನಂತಿ. ಜ್ಞಾನೇಶ್ವರ, ನಾಮದೇವ, ಏಕನಾಥ, ರಾಮದಾಸ, ತುಕಾರಾಂ ಹೀಗೆ ಬಹಳಷ್ಟು ಸಂತರು ಮಹಾರಾಷ್ಟ್ರದಲ್ಲಿ ಇಂದಿಗೂ ಕೂಡ ಜನಸಾಮಾನ್ಯರನ್ನು ಸುಶಿಕ್ಷಿತರನ್ನಾಗಿ ಮಾಡುತ್ತಿದ್ದಾರೆ, ಮೂಢನಂಬಿಕೆಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುತ್ತಿದ್ದಾರೆ ಮತ್ತು ಹಿಂದುಸ್ತಾನದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಈ ಸಂತ ಪರಂಪರೆಯು ಪ್ರೇರಣೆ ನೀಡುತ್ತಿರುತ್ತದೆ. ಅವರ ಭಾರುಡ್ ಆಗಿರಲಿ, ಅಭಂಗ್ ಆಗಿರಲಿ, ಅವುಗಳಿಂದ ನಮಗೆ ಒಳ್ಳೆಯ ಅಭಿರುಚಿ, ಪ್ರೀತಿ ಮತ್ತು ಸಹೋದರತ್ವದ ಪ್ರಮುಖ ಸಂದೇಶಗಳು ಸಿಗುತ್ತವೆ; ಮೂಢನಂಬಿಕೆಗಳ ವಿರುದ್ಧ ಶ್ರದ್ಧೆಯೊಂದಿಗೆ ಸಮಾಜವು ಹೋರಾಡುವಂತಾಗಬೇಕು ಎನ್ನುವ ಮಂತ್ರವು ಸಿಗುತ್ತದೆ. ಇವರುಗಳು ತಕ್ಕ ಸಮಯದಲ್ಲಿ ಸಮಾಜವನ್ನು ತಡೆದು, ಬುದ್ಧಿ ಹೇಳಿ, ಕನ್ನಡಿಯನ್ನು ತೋರಿಸಿ ಹಳೆಯ ಕಂದಾಚಾರಗಳನ್ನು ನಮ್ಮ ಸಮಾಜದಿಂದ ತೊಲಗಿಸಿ ಜನರಲ್ಲಿ ಕರುಣೆ, ಸಮಾನತೆ ಮತ್ತು ಶುಚಿತ್ವದ ಸಂಸ್ಕಾರವನ್ನು ನಿಶ್ಚಿತವಾಗಿ ತರಲು ಶ್ರಮಿಸಿದಂತಹವರು. ನಮ್ಮ ಈ ಭಾರತ ಭೂಮಿಯು ‘ಬಹುರತ್ನಾ ವಸುಂಧರಾ’ ಎನ್ನುವಂತಿದೆ. ಹೇಗೆ ಸಂತರ ಒಂದು ಮಹಾನ್ ಪರಂಪರೆಯು ನಮ್ಮ ದೇಶದಲ್ಲಿದೆಯೋ ಹಾಗೆಯೇ ಸಾಮರ್ಥ್ಯವುಳ್ಳ, ತಾಯಿ ಭಾರತಿಗೆ ತಮ್ಮನ್ನೇ ಸಮರ್ಪಿಸಿಕೊಂಡ ಮಹಾಪುರುಷರೂ ಇದ್ದಾರೆ; ಅವರು ಈ ನೆಲಕ್ಕೆ ತಮ್ಮ ಜೀವನವನ್ನು ಬಲಿ ಕೊಟ್ಟಿದ್ದಾರೆ, ಸಮರ್ಪಣೆ ಮಾಡಿದ್ದಾರೆ. ಲೋಕಮಾನ್ಯ ತಿಲಕರು ಇಂತಹ ಒಬ್ಬ ಮಹಾಪುರುಷರು. ಅವರು ಅನೇಕ ಭಾರತೀಯರ ಮನದಲ್ಲಿ ತಮ್ಮ ಆಳವಾದ ಮುದ್ರೆಯನ್ನು ಒತ್ತಿದ್ದಾರೆ. ನಾವು ಜುಲೈ 23 ರಂದು ತಿಲಕರ ಜನ್ಮ ಜಯಂತಿ ಮತ್ತು ಆಗಸ್ಟ್ 1 ರಂದು ಅವರ ಪುಣ್ಯತಿಥಿಯ ಅಂಗವಾಗಿ ಅವರ ಪುಣ್ಯಸ್ಮರಣೆಯನ್ನು ಮಾಡುತ್ತೇವೆ. ಲೋಕಮಾನ್ಯ ತಿಲಕರು ಸಾಹಸ ಮತ್ತು ಆತ್ಮವಿಶ್ವಾಸವನ್ನು ತುಂಬಿಕೊಂಡಿದ್ದರು. ಅವರಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಅವರ ತಪ್ಪುಗಳನ್ನು ಕನ್ನಡಿ ಹಿಡಿದು ತೋರಿಸುವ ಶಕ್ತಿ ಮತ್ತು ಬುದ್ಧಿಮತ್ತೆ ಇತ್ತು. ಬ್ರಿಟೀಷರು ಲೋಕಮಾನ್ಯ ತಿಲಕರಿಗೆ ಎಷ್ಟೊಂದು ಹೆದರುತ್ತಿದ್ದರೆಂದರೆ 20 ವರ್ಷಗಳಲ್ಲಿ ಅವರ ಮೇಲೆ 3 ಬಾರಿ ರಾಜದ್ರೋಹದ ಆರೋಪವನ್ನು ಹೇರಲು ಪ್ರಯತ್ನ ಮಾಡಿದ್ದರು. ಇದೊಂದು ಸಣ್ಣ ವಿಷಯವಲ್ಲ. ಲೋಕಮಾನ್ಯ ತಿಲಕರು ಮತ್ತು ಅಹಮದಾಬಾದ್ ನಲ್ಲಿ ಅವರ ಒಂದು ಪ್ರತಿಮೆಯ ಜೊತೆ ಬೆಸೆದುಕೊಂಡಿರುವ ಒಂದು ಕುತೂಹಲಕಾರಿ ಘಟನೆಯನ್ನು ಇಂದು ನಾನು ದೇಶವಾಸಿಗಳ ಜೊತೆ ಹಂಚಿಕೊಳ್ಳಲು ಆಶಿಸುತ್ತಿದ್ದೇನೆ. 1916 ನೇ ಅಕ್ಟೋಬರ್ ನಲ್ಲಿ ಲೋಕಮಾನ್ಯ ತಿಲಕರು ಅಹಮದಾಬಾದ್ ಗೆ ಬಂದಾಗ ಆ ಕಾಲದಲ್ಲೇ - ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆಯೇ 40 ಸಾವಿರಕ್ಕೂ ಹೆಚ್ಚಿನ ಜನರು ಅವರನ್ನು ಅಹಮದಾಬಾದ್ ನಲ್ಲಿ ಸ್ವಾಗತಿಸಿದ್ದರು ಮತ್ತು ಈ ಯಾತ್ರೆಯ ಕಾರಣದಿಂದಲೇ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಗೆ ಅವರ ಜೊತೆ ಮಾತುಕತೆ ನಡೆಸಲು ಅವಕಾಶ ಒದಗಿಬಂದಿತ್ತು. ಸರ್ದಾರ್ ವಲ್ಲಭಭಾಯ್ ಪಟೇಲರು ಲೋಕಮಾನ್ಯ ತಿಲಕರಿಂದ ಅತ್ಯಂತ ಪ್ರಭಾವಿತರಾಗಿದ್ದರು. 1920 ನೇ ಆಗಸ್ಟ್ 1 ರಂದು ಲೋಕಮಾನ್ಯ ತಿಲಕರು ವಿಧಿವಶರಾದಾಗ ಅಹಮದಾಬಾದ್ ನಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲು ಪಟೇಲರು ನಿರ್ಧರಿಸಿದ್ದರು. ಸರ್ದಾರ್ ವಲ್ಲಭಭಾಯ್ ಪಟೇಲರು ಅಹಮದಾಬಾದ್ ನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರು. ತಕ್ಷಣವೇ ಅವರು ಲೋಕಮಾನ್ಯ ತಿಲಕರ ಸ್ಮಾರಕಕ್ಕಾಗಿ ವಿಕ್ಟೋರಿಯಾ ಗಾರ್ಡನ್ ನನ್ನು ಆಯ್ಕೆ ಮಾಡಿಕೊಂಡರು. ಈ ವಿಕ್ಟೋರಿಯಾ ಗಾರ್ಡನ್ ಅಂದಿನ ಬ್ರಿಟನ್ನಿನ ಮಹಾರಾಣಿಯವರ ಹೆಸರಿನಲ್ಲಿ ಇತ್ತು. ಇದರಿಂದ ಬ್ರಿಟೀಷರು ಸ್ವಾಭಾವಿಕವಾಗಿಯೇ ಅಸಮಾಧಾನಗೊಂಡರು ಮತ್ತು ಕಲೆಕ್ಟರ್ ಇದಕ್ಕಾಗಿ ಅನುಮತಿ ನೀಡುವುದನ್ನು ನಿರಂತರವಾಗಿ ನಿರಾಕರಿಸುತ್ತಿದ್ದ. ಆದರೆ ಸರ್ದಾರ್ ಸಾಹೇಬರು ಸರ್ದಾರ್ ಸಾಹೇಬರೇ. ಅವರು ಆಚಲವಾಗಿದ್ದರು. ತಮ್ಮ ಹುದ್ದೆಯನ್ನು ಬಿಡುವಂತಾದರೂ ಸರಿ ಆದರೆ ಲೋಕಮಾನ್ಯ ತಿಲಕರ ಪ್ರತಿಮೆ ಆಗಿಯೇ ತೀರುತ್ತದೆ ಎಂದು ಅವರು ಹೇಳಿದ್ದರು. ಕೊನೆಗೂ ಪ್ರತಿಮೆ ತಯಾರಾಯಿತು. 1929 ನೇ ಫೆಬ್ರವರಿ 28 ರಂದು ಸರ್ದಾರರು ಬೇರೆ ಯಾರಿಂದಲೋ ಅಲ್ಲ, ಮಹಾತ್ಮಾ ಗಾಂಧಿಯವರಿಂದ ಇದರ ಉದ್ಘಾಟನೆಯನ್ನು ನೆರವೇರಿಸಿದರು. ಎಲ್ಲಕ್ಕಿಂತ ಸಂತೋಷದ ವಿಚಾರವೆಂದರೆ ಆ ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯ ಬಾಪೂರವರು ತಮ್ಮ ಭಾಷಣದಲ್ಲಿ ಸರ್ದಾರ್ ಪಟೇಲರು ಬಂದಮೇಲೆ ಅಹಮದಾಬಾದ್ ನಗರಪಾಲಿಕೆಗೆ ಬರೀ ಒಬ್ಬ ವ್ಯಕ್ತಿಯಷ್ಟೇ ಸಿಕ್ಕಿಲ್ಲ, ಬದಲಾಗಿ ತಿಲಕರ ಪ್ರತಿಮೆಯನ್ನು ನಿರ್ಮಾಣ ಮಾಡುವಂತಹ ಧೈರ್ಯ ಸಹ ಸಿಕ್ಕಿದೆ ಎಂದು ಹೇಳಿದ್ದರು. ನನ್ನ ಪ್ರೀತಿಯ ದೇಶವಾಸಿಗಳೇ, ಈ ಪ್ರತಿಮೆಯ ವಿಶಿಷ್ಟತೆ ಏನೆಂದರೆ, ಇದು ತಿಲಕರ ಒಂದು ಅಪರೂಪದ ಪ್ರತಿಮೆ. ಇದರಲ್ಲಿ ಅವರು ಒಂದು ಕುರ್ಚಿಯಲ್ಲಿ ಕುಳಿತಿರುವ ರೀತಿ ಇದೆ ಜೊತೆಗೆ ಇದರಲ್ಲಿ ಸರಿಯಾಗಿ ತಿಲಕರ ಕೆಳಗೆ ‘स्वराज हमारा जन्म सिद्ध अधिकार है’ (‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು) ಎಂದು ಬರೆಯಲಾಗಿದೆ. ಇದೆಲ್ಲಾ ಬ್ರಿಟೀಷರ ಕಾಲದ ಕಥೆಗಳು, ಅದನ್ನೇ ಹೇಳುತ್ತಿದ್ದೇನೆ. ಲೋಕಮಾನ್ಯ ತಿಲಕರ ಪ್ರಯತ್ನದಿಂದಲೇ ಸಾರ್ವಜನಿಕ ಗಣೇಶೋತ್ಸವದ ಪರಂಪರೆಯು ಪ್ರಾರಂಭವಾಯಿತು. ಸಾರ್ವಜನಿಕ ಗಣೇಶೋತ್ಸವವು ಪರಂಪರಾಗತ ಶ್ರದ್ಧೆ ಮತ್ತು ಉತ್ಸವದ ಜೊತೆ ಜೊತೆಗೆ ಸಾಮಾಜಿಕ ಜಾಗೃತಿ, ಸಾಮೂಹಿಕತೆ, ಜನರಲ್ಲಿ ಸಾಮರಸ್ಯ ಮತ್ತು ಸಮಾನತೆಯ ಭಾವಗಳನ್ನು ಮುಂದುವರೆಸಿಕೊಂಡು ಹೋಗಲು ಒಂದು ಪ್ರಭಾವೀ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ದೇಶವು ಬ್ರಿಟೀಷರ ವಿರುದ್ಧ ಹೋರಾಡುವ ಸಲುವಾಗಿ ಜನರನ್ನು ಒಂದುಗೂಡಿಸಲು ಅಂತಹ ಒಂದು ಅಧ್ಯಾಯ ಬೇಕಿತ್ತು. ಈ ಉತ್ಸವಗಳು ಜಾತಿ ಮತ್ತು ಸಂಪ್ರದಾಯದ ಕಟ್ಟುಪಾಡುಗಳನ್ನು ಮುರಿದುಹಾಕುತ್ತಾ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡಿತು. ಸಮಯದ ಜೊತೆಗೆ ಈ ಕಾರ್ಯಕ್ರಮಗಳ ಜನಪ್ರಿಯತೆ ಸಹ ಹೆಚ್ಚಾಗುತ್ತಾ ಹೋಯಿತು. ನಮ್ಮ ಪ್ರಾಚೀನ ಪರಂಪರೆ ಮತ್ತು ಇತಿಹಾಸದ ನಮ್ಮ ವೀರ ನಾಯಕರ ಬಗ್ಗೆ ಇಂದಿಗೂ ಕೂಡ ನಮ್ಮ ಯುವ ಪೀಳಿಗೆಯವರಿಗೆ ಗೀಳು ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇಂದು ಬಹಳಷ್ಟು ನಗರಗಳಲ್ಲಿ ಹೇಗಾಗುತ್ತದೆ ಎಂದರೆ ನಿಮಗೆ ಸುಮಾರು ಪ್ರತೀ ರಸ್ತೆಯಲ್ಲಿಯೂ ಗಣೇಶನ ಪೆಂಡಾಲ್ ನೋಡಲು ಸಿಗುತ್ತದೆ. ರಸ್ತೆಯ ಎಲ್ಲಾ ಕುಟುಂಬದವರೂ ಒಟ್ಟಿಗೆ ಸೇರಿ ಅದನ್ನು ಆಯೋಜಿಸುತ್ತಾರೆ. ಒಂದು ಟೀಮ್ ನ ರೀತಿ ಕೆಲಸ ಮಾಡುತ್ತಾರೆ. ಇದು ನಮ್ಮ ಯುವಕರಿಗೆ ಕೂಡ ಒಂದು ಒಳ್ಳೆಯ ಅವಕಾಶ. ಅಲ್ಲಿ ಅವರು ನಾಯಕತ್ವ ಮತ್ತು ಸಂಘಟನೆಯಂತಹ ಗುಣಗಳನ್ನು ಕಲಿಯುತ್ತಾರೆ, ಅವನ್ನು ತಮ್ಮೊಳಗೆ ವಿಕಸನಗೊಳಿಸಿಕೊಳ್ಳುತ್ತಾರೆ. 

ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಈ ಹಿಂದೆ ವಿನಂತಿ ಮಾಡಿಕೊಂಡಿದ್ದೆ ಮತ್ತು ಈಗ ಲೋಕಮಾನ್ಯ ತಿಲಕರನ್ನು ನೆನಪಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೊಮ್ಮೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ – ಈ ಬಾರಿ ಕೂಡ ನಾವು ಗಣೇಶೋತ್ಸವವನ್ನು ಆಚರಿಸೋಣ, ಅದ್ಧೂರಿಯಾಗಿ ಆಚರಿಸೋಣ, ಸಂತೋಷವಾಗಿ ಆಚರಿಸೋಣ. ಆದರೆ, ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸುವ ನಿರ್ಧಾರ ಇರಿಸಿಕೊಳ್ಳಿ. ಗಣೇಶನ ಮೂರ್ತಿಯಿಂದ ಹಿಡಿದು ಅಲಂಕಾರಿಕ ವಸ್ತುಗಳ ತನಕ ಎಲ್ಲವೂ ಪರಿಸರಸ್ನೇಹಿಯಾಗಿರಲಿ. ಪ್ರತಿ ನಗರದಲ್ಲೂ ಬೇರೆ ಬೇರೆ ಪರಿಸರಸ್ನೇಹಿ ಗಣೇಶೋತ್ಸವದ ಸ್ಪರ್ಧೆಗಳು ಇರಲಿ, ಅದಕ್ಕೆ ಬಹುಮಾನ ಕೊಡಲ್ಪಡಲಿ ಎನ್ನುವುದು ನನ್ನ ಆಶಯ. MyGov ಮತ್ತು Narendra Modi App ನಲ್ಲಿ ಕೂಡ ವ್ಯಾಪಕವಾಗಿ ಪ್ರಚಾರ ಪಡಿಸಲು ಪರಿಸರಸ್ನೇಹಿ ಗಣೇಶೋತ್ಸವದ ವಿಷಯವನ್ನು ಎಲ್ಲರೂ ಹಾಕಲಿ ಎಂದು ನಾನು ಆಶಿಸುತ್ತೇನೆ. ಅಗತ್ಯವಾಗಿ ನಾನು ನಿಮ್ಮೆಲ್ಲರ ಮಾತುಗಳನ್ನು ಜನರಿಗೆ ತಲುಪಿಸುತ್ತೇನೆ. ಲೋಕಮಾನ್ಯ ತಿಲಕರು ದೇಶವಾಸಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರು. ಅವರು “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾವು ಪಡೆದೇ ತೀರುತ್ತೇವೆ“ ಎನ್ನುವ ಘೋಷಣೆಯನ್ನು ಮಾಡಿದ್ದರು. ಇಂದು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾವು ಪಡೆದೇ ತೀರುತ್ತೇವೆ ಎಂದು ಮತ್ತೊಮ್ಮೆ ಹೇಳುವ ಸಮಯವಾಗಿದೆ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಉತ್ತಮ ಫಲಿತಾಂಶಗಳು ಪ್ರತಿ ಭಾರತೀಯರಿಗೆ ತಲುಪುವಂತೆ ಆಗಬೇಕು. ಯಾವುದು ಒಂದು ನವ ಭಾರತದ ನಿರ್ಮಾಣವನ್ನು ಮಾಡಬಲ್ಲದೋ ಅದು ಇದೇ ಮಾತು. ತಿಲಕರು ಹುಟ್ಟಿ ಸರಿಯಾಗಿ 50 ವರ್ಷಗಳ ನಂತರ ಅದೇ ದಿನ ಅಂದರೆ ಜುಲೈ 23 ರಂದು ಭಾರತಮಾತೆಯ ಮತ್ತೊಬ್ಬ ಸುಪುತ್ರನ ಜನನವಾಯಿತು. ದೇಶವಾಸಿಗಳು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಲಿ ಎನ್ನುವ ಭಾವನೆಯಿಂದ ಆತ ತನ್ನ ಜೀವನವನ್ನು ಬಲಿದಾನ ಮಾಡಿದ. ನಾನು ಚಂದ್ರಶೇಖರ್ ಆಜಾದ್ ಬಗ್ಗೆ ಮಾತನಾಡುತ್ತಿದ್ದೇನೆ. ಭಾರತದಲ್ಲಿ ಈ ಕೆಳಗಿನ ಸಾಲುಗಳನ್ನು ಕೇಳಿ ಪ್ರಭಾವಿತರಾಗದ ಯಾವ ಯುವಜನರಿದ್ದಾರೆ? 

“ಸರ್ಫರೋಷಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ, 

ದೇಖನಾ ಹೈ ಜೋರ್ ಕಿತನಾ ಬಾಜು-ಎ-ಕಾತಿಲ್ ಮೇ ಹೈ’ 

ಈ ಸಾಲುಗಳು ಅಶ್ಫಾಕ್ ಉಲ್ಲಾಹ್ ಖಾನ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದ ಅನೇಕ ಯುವಕರನ್ನು ಪ್ರೇರಿತಗೊಳಿಸಿತ್ತು. ಚಂದ್ರಶೇಖರ್ ಅಜಾದ್ ರ ಶೌರ್ಯ ಮತ್ತು ಸ್ವಾತಂತ್ರಕ್ಕಾಗಿ ಅವರ ತುಡಿತ ಇವು ಬಹಳಷ್ಟು ಯುವಕರಿಗೆ ಸ್ಫೂರ್ತಿ ನೀಡಿತ್ತು. ಆಜಾದ್ ತಮ್ಮ ಜೀವನವನ್ನು ಪಣವಾಗಿಟ್ಟರು. ಆದರೆ ವಿದೇಶೀ ಶಾಸನದ ಮುಂದೆ ಅವರು ಎಂದಿಗೂ ಬಾಗಲಿಲ್ಲ. ಮಧ್ಯಪ್ರದೇಶದಲ್ಲಿರುವ ಚಂದ್ರಶೇಖರ್ ಅಜಾದ್ ಅವರ ಹಳ್ಳಿ ಅಲೀರಾಜ್ ಪುರ್ ಗೆ ಹೋಗುವ ಸದವಕಾಶ ನನಗೆ ಸಿಕ್ಕಿತ್ತು. ಇದು ನನ್ನ ಸೌಭಾಗ್ಯ. ಅಲಹಾಬಾದ್ ನ ಚಂದ್ರಶೇಖರ್ ಅಜಾದ್ ಉದ್ಯಾನವನದಲ್ಲಿ ಸಹ ಗೌರವಾರ್ಪಣೆ ಮಾಡಲು ಅವಕಾಶ ಸಿಕ್ಕಿತ್ತು. ಚಂದ್ರಶೇಖರ್ ಅಜಾದ್ ಅವರು ಎಂತಹ ವೀರ ಪುರುಷರೆಂದರೆ ವಿದೇಶೀಯರ ಗುಂಡಿನಿಂದ ಸಾಯುವುದಕ್ಕೂ ಇಷ್ಟಪಡಲಿಲ್ಲ. ಬದುಕಿದ್ದರೆ ಸ್ವಾತಂತ್ರಕ್ಕಾಗಿ ಹೋರಾಡುತ್ತಾ ಇರುವುದು ಮತ್ತು ಸಾಯುವುದಾದರೂ ಸಹ ಸ್ವತಂತ್ರವಾಗಿ ಇದ್ದು ಸಾಯುವುದು ಎನ್ನುವುದೇ ಅವರ ವಿಶೇಷತೆಯಾಗಿತ್ತು. ಮತ್ತೊಮ್ಮೆ ಭಾರತಮಾತೆಯ ಇಬ್ಬರು ಮಹಾನ್ ಸುಪುತ್ರರಾದ ಲೋಕಮಾನ್ಯ ತಿಲಕರು ಮತ್ತು ಚಂದ್ರಶೇಖರ್ ಅಜಾದ್ ಅವರಿಗೆ ಶ್ರದ್ಧಾಪೂರ್ವಕವಾಗಿ ನಮಸ್ಕರಿಸುತ್ತೇನೆ. 

ಈಗ ಸ್ವಲ್ಪ ದಿನಗಳ ಮುಂಚೆ ಫಿನ್ಲ್ಯಾಂಡ್ ನಲ್ಲಿ ನಡೆಯುತ್ತಿದ್ದ ಜೂನಿಯರ್ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ಸ್ ಓಟದ ಆ ಸ್ಪರ್ಧೆಯಲ್ಲಿ ಭಾರತದ ವೀರ ಪುತ್ರಿ ಮತ್ತು ರೈತನ ಪುತ್ರಿ ಹಿಮಾ ದಾಸ್ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದಾಳೆ. ದೇಶದ ಮತ್ತೋರ್ವ ಪುತ್ರಿ ಏಕತಾ ಭಯಾನ್ ನನ್ನ ಪತ್ರಕ್ಕೆ ಉತ್ತರವಾಗಿ ಇಂಡೋನೇಶಿಯಾದಿಂದ ನನಗೆ ಇ-ಮೇಲ್ ಕಳುಹಿಸಿದ್ದಾಳೆ. ಈಗ ಆಕೆ ಅಲ್ಲಿ ಏಷ್ಯನ್ ಗೇಮ್ಸ್ ನ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಇ-ಮೇಲ್ ನಲ್ಲಿ ಏಕತಾ “ಯಾವುದೇ ಅಥ್ಲೆಟ್ ಗೆ ತ್ರಿವರ್ಣ ಧ್ವಜವನ್ನು ಹಿಡಿದುಕೊಳ್ಳುವ ಕ್ಷಣವು ಜೀವನದಲ್ಲಿ ಎಲ್ಲಕ್ಕಿಂತ ಮಹತ್ವಪೂರ್ಣ ಕ್ಷಣವಾಗಿರುತ್ತದೆ. ಅದನ್ನು ನಾನು ಮಾಡಿತೋರಿಸಿದ್ದೇನೆ ಎನ್ನುವುದರ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಬರೆದಿದ್ದಾಳೆ. ಏಕತಾ, ನಮ್ಮೆಲ್ಲರಿಗೂ ಕೂಡ ನಿಮ್ಮ ಬಗ್ಗೆ ಹೆಮ್ಮೆ ಇದೆ. ನೀವು ದೇಶದ ಹೆಸರನ್ನು ಬೆಳಗಿಸಿದ್ದೀರಿ. ಟುನೀಶಿಯ ದಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ Grand Prix 2018 ನಲ್ಲಿ ಏಕತಾ ಅವರು ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಅವರ ಸಾಧನೆ ಬಹಳ ವಿಶೇಷ ಏಕೆಂದರೆ ಅವರು ತಮ್ಮ ಸವಾಲನ್ನೇ ತಮ್ಮ ಯಶಸ್ಸಿನ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ. ಏಕತಾ ಭಯಾನ್ ಎಂಬ ಈ ಹೆಣ್ಣುಮಗಳಿಗೆ 2003 ರಲ್ಲಿ ರಸ್ತೆ ಅಪಘಾತದ ಕಾರಣದಿಂದ ಅವಳ ಶರೀರದ ಅರ್ಧ ಭಾಗ, ಕೆಳಗಿನ ಅರ್ಧ ಭಾಗ ಉಪಯೋಗವಿಲ್ಲದಂತೆ ಆಯಿತು. ಆದರೆ ಈ ಹೆಣ್ಣುಮಗಳು ಧೈರ್ಯಗೆಡದೆ ತನ್ನನ್ನು ತಾನು ಬಲಗೊಳಿಸಿಕೊಳ್ಳುತ್ತಾ ತನ್ನ ಗುರಿ ಸಾಧಿಸಿದಳು. ಮತ್ತೋರ್ವ ದಿವ್ಯಾಂಗ ಯೋಗೇಶ್ ಕಠುನಿಯಾ ಅವರು ಬರ್ಲಿನ್ ನಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ವಿಶ್ವದಾಖಲೆ ಮಾಡಿದ್ದಾರೆ. ಅವರ ಜೊತೆಗೆ ಸುಂದರ್ ಸಿಂಗ್ ಗುರ್ಜರ್ ಅವರು ಸಹ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನಾನು ಏಕತಾ ಭಯಾನ್, ಯೋಗೇಶ್ ಕಠುನಿಯಾ ಮತ್ತು ಸುಂದರ್ ಸಿಂಗ್, ನಿಮ್ಮೆಲ್ಲರ ಭರವಸೆ ಮತ್ತು ಉತ್ಸಾಹಕ್ಕೆ ನಮಸ್ಕರಿಸುತ್ತೇನೆ. ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ನೀವುಗಳು ಮತ್ತಷ್ಟು ಮುಂದೆ ಹೋಗಿ, ಆಡುತ್ತಿರಿ, ಅರಳುತ್ತಿರಿ. 

ನನ್ನ ಪ್ರೀತಿಯ ದೇಶವಾಸಿಗಳೇ, ಆಗಸ್ಟ್ ತಿಂಗಳಿನಲ್ಲಿ ಇತಿಹಾಸದ ಅನೇಕ ಘಟನೆಗಳು ಮತ್ತು ಉತ್ಸವಗಳ ಭರಪೂರ ತುಂಬಿರುತ್ತದೆ. ಆದರೆ ಹವಾಮಾನದ ಕಾರಣದಿಂದ ಕೆಲವೊಮ್ಮೆ ರೋಗಗಳೂ ಮನೆಯೊಳಗೆ ಪ್ರವೇಶಿಸುತ್ತವೆ. ನಾನು ನಿಮ್ಮೆಲ್ಲರ ಉತ್ತಮ ಆರೋಗ್ಯಕ್ಕಾಗಿ, ದೇಶಭಕ್ತಿಯ ಪ್ರೇರಣೆಯನ್ನು ಜಾಗೃತಗೊಳಿಸುವ ಈ ಆಗಸ್ಟ್ ತಿಂಗಳಿಗಾಗಿ ಮತ್ತು ಹಿಂದಿನಿಂದಲೂ ನಡೆದು ಬಂದಿರುವ ಅನೇಕಾನೇಕ ಉತ್ಸವಗಳಿಗಾಗಿ ಅನಂತಾನಂತ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಮತ್ತೊಮ್ಮೆ ಮನದ ಮಾತಿಗಾಗಿ ಅವಶ್ಯವಾಗಿ ಸಿಗೋಣ. 

ಅನಂತಾನಂತ ಧನ್ಯವಾದಗಳು. 
 

***


(Release ID: 1540592) Visitor Counter : 202