ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಗಾಂಡ ಭೇಟಿ ವೇಳೆ ಉಗಾಂಡ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ

Posted On: 25 JUL 2018 2:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಗಾಂಡ ಭೇಟಿ ವೇಳೆ ಉಗಾಂಡ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ

ಗೌರವಾನ್ವಿತ ಅಧ್ಯಕ್ಷ ಯೊವೆರಿ ಮುಸೆವೆನಿ, 

ಗೌರವಾನ್ವಿತ ಉಪಾಧ್ಯಕ್ಷರೆ, 

ಗೌರವಾನ್ವಿತ ಉಗಾಂಡ ಸಂಸತ್ತಿನ ಸ್ಪೀಕರ್ ರೆಬೆಕ್ಕಾ ಕದಗ ಅವರೆ, 

ಗೌರವಾನ್ವಿತ ಸಚಿವರೆ, 

ಎಲ್ಲ ಗೌರವಾನ್ವಿತ ಸಂಸತ್ ಸದಸ್ಯರೇ, 

ಗೌರವಾನ್ವಿತರೆ, 

ಸಹೋದರ ಸಹೋದರಿಯರೇ 

ನಮಸ್ಕಾರ, 

ಬಲಮುಸಿಜ 

 

ಈ ಘನತೆವೆತ್ತ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಆಹ್ವಾನ ನನಗೆ ಲಭಿಸಿರುವುದು ತುಂಬಾ ಗೌರವ ತಂದಿದೆ. ನನಗೆ ಇತರೆ ಸಂಸತ್ ಗಳಲ್ಲೂ ಭಾಷಣ ಮಾಡುವ ಇಂತಹುದೇ ಅವಕಾಶ ದೊರೆತಿದೆ. ಆದರೆ ಇದು ಅತ್ಯಂತ ವಿಶೇಷದ್ದು. ಭಾರತದ ಪ್ರಧಾನಮಂತ್ರಿ ಒಬ್ಬರಿಗೆ ಮೊದಲ ಬಾರಿಗೆ ಇಂತಹ ಗೌರವ ದೊರೆತಿದೆ. ಇದು ಭಾರತದ 125 ಕೋಟಿ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ನಾನು ಭಾರತದ ಎಲ್ಲ ಜನರ ಹಾರ್ದಿಕ ಶುಭಾಶಯಗಳು ಮತ್ತು ಅವರ ಗೆಳೆತನದ ಶುಭಹಾರೈಕೆಗಳನ್ನು ನನ್ನೊಂದಿಗೆ ತಂದು ಇಲ್ಲಿನ ಸದನದ ಮೂಲಕ ಉಗಾಂಡದ ಎಲ್ಲ ಜನರಿಗೆ ತಿಳಿಸುತ್ತಿದ್ದೇನೆ. ಮೇಡಂ ಸ್ಪೀಕರ್, ನಿಮ್ಮ ಉಪಸ್ಥಿತಿ ನನಗೆ ನಮ್ಮ ಲೋಕಸಭೆಯನ್ನು ನೆನಪು ಮಾಡುತ್ತದೆ, ಕಾರಣ ನಮ್ಮ ದೇಶದಲ್ಲೂ ಲೋಕಸಭೆಯ ಸ್ಪೀಕರ್ ಆಗಿರುವುದು ಓರ್ವ ಮಹಿಳೆ. ನಾನು ಈ ಸಂಸತ್ತಿನಲ್ಲಿ ಬಹು ಸಂಖ್ಯೆಯ ಯುವ ಸದಸ್ಯರನ್ನು ನೋಡುತ್ತಿದ್ದೇನೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಶುಭ ಸಮಾಚಾರವಾಗಿದೆ. ನಾನು ಉಗಾಂಡಾಗೆ ಬಂದಾಗಲೆಲ್ಲ ಇದು 'ಆಫ್ರಿಕಾದ ಮುತ್ತು' ಎಂದು ಪಠಿಸುತ್ತೇನೆ. ಈ ರಾಷ್ಟ್ರ ಸೌಂದರ್ಯದ ಘನಿ. ಇಲ್ಲಿ ಶ್ರೇಷ್ಠ ಸಂಪನ್ಮೂಲವಿದೆ ಮತ್ತು ಶ್ರೀಮಂತ ಪರಂಪರೆಯಿದೆ. ಇಲ್ಲಿನ ನದಿಗಳು ಮತ್ತು ಕೊಳ್ಳಗಳು ಪ್ರಾಂತ್ಯದಾದ್ಯಂತ ನಾಗರಿಕತೆಗಳನ್ನು ಪೋಷಿಸಿವೆ. ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದ ಪ್ರಧಾನಿಯೊಬ್ಬರು ಮತ್ತೊಂದು ಸಾರ್ವಭೌಮತ್ವ ಹೊಂದಿರುವ ರಾಷ್ಟ್ರದ ಸಂಸತ್ತಿನ ಚುನಾಯಿತ ಸದಸ್ಯರನ್ನುದ್ದೇಶಿಸಿ ಮಾತನಾಡುವ ಈ ಅವಕಾಶದ ಹಿಂದಿನ ಇತಿಹಾಸದ ಅರಿವಿದೆ. ನಮ್ಮ ಹಿಂದಿನ ಕಡಲ ಸಂಬಂಧಗಳು, ವಸಾಹತುಷಾಹಿ ಆಡಳಿತದ ಕತ್ತಲೆಯುಗ, ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿ ಹೋರಾಟ ನಡೆಸಿದ್ದು, ವಿಭಜಿತ ವಿಶ್ವದಲ್ಲಿ ಸ್ವತಂತ್ರ ರಾಷ್ಟ್ರಗಳಾಗಿ ಅನಿಶ್ಚಿತತೆಯ ಮಾರ್ಗದಲ್ಲಿ ನಡೆಯುತ್ತಿರುವುದು, ಹೊಸ ಅವಕಾಶಗಳ ಅನ್ವೇಷಣೆ ಮತ್ತು ನಮ್ಮ ಯುವ ಜನಾಂಗದ ಏಕತೆಯ ಆಶೋತ್ತರಗಳು ಇವೆಲ್ಲ ನಮ್ಮನ್ನು ಬೆಸೆದಿವೆ. 

 

ಮಾನ್ಯ ಅಧ್ಯಕ್ಷರೇ,  

 

ನಮ್ಮ ಜನರು ಹಲವು ರೀತಿಯಲ್ಲಿ ಉಗಾಂಡ ಮತ್ತು ಭಾರತದ ಸಂಬಂಧವನ್ನು ಬೆಸೆದಿದ್ದಾರೆ. ಸುಮಾರು ಒಂದು ಶತಮಾನದ ಹಿಂದೆ ಧೀರೋದಾತ್ತ ಕಾರ್ಮಿಕರು ರೈಲ್ವೆ ಮೂಲಕ ಹಿಂದೂ ಮಹಾಸಾಗರ ಮತ್ತು ಉಗಾಂಡದ ನಡುವೆ ಸಂಪರ್ಕ ಸಾಧಿಸಿದರು. ನಿಮ್ಮ ಘನ ಉಪಸ್ಥಿತಿ, ಇಂದು ನಮ್ಮ ಜನರ ಪವಿತ್ರ ಗೆಳೆತನ, ಸಂಬಂಧ ಮತ್ತು ಐಕ್ಯತೆಯನ್ನು ತಿಳಿಸುತ್ತದೆ. ನೀವು ನಿಮ್ಮ ರಾಷ್ಟ್ರದಲ್ಲಿ ಮತ್ತು ಪ್ರಾಂತ್ಯದಲ್ಲಿ ಸ್ಥಿರತೆಯನ್ನು ತಂದಿದ್ದೀರಿ. ಹಲವು ಸವಾಲುಗಳ ನಡುವೆ ನೀವು ದೇಶವನ್ನು ಅಭಿವೃದ್ಧಿ ಮತ್ತು ಪ್ರಗತಿಯ ಮಾರ್ಗಕ್ಕೆ ಕೊಂಡೊಯ್ದಿದ್ದೀರಿ. ನೀವು ಮಹಿಳೆಯರನ್ನು ಸಬಲೀಕರಣಗೊಳಿಸಿದ್ದೀರಿ ಮತ್ತು ನಿಮ್ಮ ರಾಷ್ಟ್ರವನ್ನು ಹೆಚ್ಚು ಸಮಗ್ರ ಅಭಿವೃದ್ಧಿಯತ್ತ ಒಯ್ದಿದ್ದೀರಿ. ನಿಮ್ಮ ದೂರದೃಷ್ಟಿಯ ನಾಯಕತ್ವ ಭಾರತೀಯ ಮೂಲದ ಉಗಾಂಡದಲ್ಲಿರುವ ಜನರಿಗೆ ಇದು ನಮ್ಮದೇ ಸ್ವಂತ ನೆಲ ಎನ್ನುವಂತೆ ಭಾವನೆ ಬರುವಂತೆ ಮಾಡಿದ್ದೀರಿ. ಅವರು ತಮ್ಮ ಜೀವನವನ್ನು ಪುನಶ್ಚೇತನಗೊಳಿಸಿಕೊಂಡು ತಾವು ಹೆಚ್ಚು ಪ್ರೀತಿಸುವ ರಾಷ್ಟ್ರದ ಮರು ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ. ರಾಷ್ಟ್ರಪತಿ ಭವನದಲ್ಲೇ ದೀಪಾವಳಿ ಹಬ್ಬದ ಆಚರಣೆಗೆ ಅವಕಾಶ ನೀಡುವ ಮೂಲಕ ಭಾರತ ಮತ್ತು ಉಗಾಂಡ ನಡುವೆ ಸಂಪರ್ಕ ಬೆಸೆಯುವ ಹಲವು ಹಣತೆಗಳನ್ನು ಬೆಳಗಿಸಿದ್ದೀರಿ. ಅವುಗಳಲ್ಲಿ ಅತ್ಯಂತ ಪವಿತ್ರವಾದುದು ಎಂದರೆ, ನೈಲ್ ನದಿಯ ಉಗಮ ಸ್ಥಾನದ ಜಿಂಜಾ ಪ್ರದೇಶ. ಅಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ನೀರಿನಲ್ಲಿ ವಿಸರ್ಜಿಸಲಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಮತ್ತು ಆನಂತರವೂ ಆಫ್ರಿಕಾದೊಂದಿಗೆ ಮತ್ತು ಆಫ್ರಿಕನ್ನರೊಂದಿಗೆ ಬೆರೆತು ಹೋಗಿದ್ದಾರೆ. ಈ ಪವಿತ್ರ ಜಿಂಜಾ ಪ್ರದೇಶದಲ್ಲಿ ಗಾಂಧೀಜಿ ಅವರ ಪ್ರತಿಮೆ ಇದೆ. ಅಲ್ಲಿ ನಾವು ಗಾಂಧಿ ಪಾರಂಪರಿಕ ಕೇಂದ್ರವನ್ನು ನಿರ್ಮಿಸುತ್ತೇವೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯ ಹೊತ್ತಿನಲ್ಲಿ ಇಂತಹ ಕೇಂದ್ರ ಆರಂಭಿಸುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಗೌರವ ಸಲ್ಲಿಸುವ ಕೆಲಸ ಬೇರೆ ಇಲ್ಲ ಎನಿಸುತ್ತದೆ. ಅವರು ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಆಫ್ರಿಕಾಕ್ಕೆ ಸ್ಫೂರ್ತಿ ನೀಡಿ, ಆಫ್ರಿಕಾದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದರು. ಅವರ ಜೀವನ ಮತ್ತು ಸಂದೇಶ ಸಾರ್ವಕಾಲಿಕ ಹಾಗೂ ಎಲ್ಲ ಕಾಲಕ್ಕೂ ಪ್ರಸ್ತುತವಾದ ಮೌಲ್ಯಗಳಾಗಿವೆ. 

 

ಗೌರವಾನ್ವಿತರೆ, 

ಭಾರತದ ಸ್ವಾತಂತ್ರ್ಯ ಹೋರಾಟದ ಗಾಥೆ ಆಫ್ರಿಕಾದೊಂದಿಗೆ ಅತ್ಯಂತ ನಿಕಟವಾಗಿ ಬೆಸೆದುಕೊಂಡಿದೆ. ಗಾಂಧೀಜಿ ಅವರು ಕೇವಲ 21 ವರ್ಷಗಳ ಕಾಲ ಆಫ್ರಿಕಾದಲ್ಲಿ ನೆಲೆಸಲಿಲ್ಲ ಅಥವಾ ಅವರು ಮೊದಲ ಅಸಹಕಾರ ಚಳವಳಿಗೆ ನೇತೃತ್ವ ವಹಿಸಿದ್ದಲ್ಲ. ಭಾರತದ ಮಟ್ಟಿಗೆ ಸ್ವಾತಂತ್ರ್ಯ ಚಳವಳಿಯ ನೈತಿಕ ಸಿದ್ಧಾಂತಗಳನ್ನು ಹಾಗೂ ಅದರ ಸಾಧನೆಗೆ ಶಾಂತಿಯುತ ಮಾರ್ಗಗಳನ್ನು ಹಾಕಿಕೊಟ್ಟರಲ್ಲದೆ, ಅವರು ಭಾರತದ ಗಡಿಗೆ ಸೀಮಿತವಾಗದೆ, ಭಾರತದ ಭವಿಷ್ಯದ ಬೆಳಕಿಗೂ ದಾರಿ ತೋರಿಸಿದರು. ಸ್ವಾತಂತ್ರ್ಯ, ಗೌರವ, ಸಮಾನತೆ ಮತ್ತು ಪ್ರತಿಯೊಬ್ಬ ಮಾನವನಿಗೂ ಅವಕಾಶ ಒದಗಿಸುವ ಸಾರ್ವತ್ರಿಕ  ವಿಚಾರವಿತ್ತು. ನಮ್ಮ ಸ್ವಾತಂತ್ರ್ಯಕ್ಕೂ ಮುನ್ನ 20 ವರ್ಷಗಳಲ್ಲಿ ನಮ್ಮ ರಾಷ್ಟ್ರೀಯ ಚಳವಳಿಯ ಅನೇಕ ನಾಯಕರು ಭಾರತದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಬ್ರಿಟೀಷರ ವಸಾಹತು ವಿರುದ್ಧದ ಹೋರಾಟದ ಮೂಲಕ ವಿಶ್ವದೆಲ್ಲೆಡೆ ವಿಶೇಷವಾಗಿ ಆಫ್ರಿಕಾದಲ್ಲಿ ಸಂಬಂಧಗಳನ್ನು ಹೊಂದಿದ್ದರು. ಭಾರತ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದರೂ ಆಫ್ರಿಕಾದ ಭವಿಷ್ಯ ನಮ್ಮ ಆಲೋಚನೆಯಿಂದ ದೂರವಿರಲಿಲ್ಲ. ಮಹಾತ್ಮ ಗಾಂಧೀಜಿ ಅವರು, ಆಫ್ರಿಕಾ ಗುಲಾಮಗಿರಿಯಲ್ಲಿ ಇರುವವರೆಗೆ ಭಾರತದ ಸ್ವಾತಂತ್ರ್ಯ ಅಪೂರ್ಣ ಎಂದು ಬಲವಾಗಿ ನಂಬಿದ್ದರು. ಸ್ವತಂತ್ರ ಭಾರತ ಅವರ ಹೇಳಿಕೆಗಳನ್ನು ಮರೆಯಲು ಸಾಧ್ಯವಿಲ್ಲ. ಭಾರತ ಆಫ್ರೋ ಏಷ್ಯನ್ ಒಗ್ಗಟ್ಟನ್ನು ಬಾನ್ ಡುಂಗ್ ನಲ್ಲಿ ಪ್ರತಿಪಾದಿಸಿತ್ತು. ನಾವು ದಕ್ಷಿಣ ಆಫ್ರಿಕಾದ ದೌರ್ಜನ್ಯವನ್ನು ಬಲವಾಗಿ ವಿರೋಧಿಸಿದ್ದೇವೆ. ನಾವು ಇದೀಗ ಜಿಂಬಾಬ್ವೆ ಎಂದು ಹೆಸರಾಗಿರುವ ಗೈನೇ, ಬಾಸ್ಸೌ, ಅಂಗೋಲ ಮತ್ತು ನಮಿಬಿಯಾ ಸೇರಿದ್ದ ಹಿಂದಿನ ರೋದೆಸಿಯಾ ಕುರಿತಂತೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಗಾಂಧೀಜಿ ಅವರ ಶಾಂತಿಯುತ ಪ್ರತಿರೋಧದಿಂದ ನೆಲ್ಸನ್ ಮಂಡೇಲಾ, ಡೆಸ್ಮಂಡ್ ಟುಟು, ಅಲ್ಬರ್ಟ್ ಲುತುಲಿ, ಜೂಲಿಯಸ್ ನೈರೆರೆ ಮತ್ತು ಕ್ವಾಮೆ ಕೃಮ್ಹಾ ಮತ್ತಿತರರು ಸ್ಫೂರ್ತಿ ಪಡೆದಿದ್ದರು. ಭಾರತ ಮತ್ತು ಆಫ್ರಿಕಾದ ಆಧುನಿಕ ಭವಿಷ್ಯದ ಯಶಸ್ಸಿಗೆ ಇತಿಹಾಸ ಸಾಕ್ಷಿಯಾಗಿದೆ ಮತ್ತು ಶಾಂತಿಯುತ ಪ್ರತಿರೋಧವೇ ಅವುಗಳಿಗೆ ಬಲತಂದುಕೊಟ್ಟಿದೆ. ಆಫ್ರಿಕಾದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿದ್ದು ಗಾಂಧಿ ಮಾರ್ಗದ ಮೂಲಕ. ಆಫ್ರಿಕಾದ ವಿಮೋಚನಾ ಚಳವಳಿಗೆ ಭಾರತ ಸೈದ್ಧಾಂತಿಕ ಬೆಂಬಲ ನೀಡಿತ್ತು.  ಆದರೆ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಹೋಲಿಕೆ ಮಾಡಲಾಗದು. 

 

ಗೌರವಾನ್ವಿತರೇ, 

ಕಳೆದ 7 ದಶಕದ ನಮ್ಮ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವದಿಂದಾಗಿ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಮತ್ತು ನಮ್ಮ ನೈತಿಕ ಸಿದ್ಧಾಂತ ಹಾಗೂ ಭಾವನಾತ್ಮಕ ಸಂಬಂಧಗಳು ಬೆಸೆದಿವೆ. ನಾವು ಮಾರುಕಟ್ಟೆ ಮತ್ತು ಸಂಪನ್ಮೂಲಗಳಿಗೆ ಸಮಾನ ಮತ್ತು ನ್ಯಾಯ ಕೇಳುತ್ತಿದ್ದೇವೆ. ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಭದ್ರ ಬುನಾದಿ ಹಾಕಲು ಒಟ್ಟಾಗಿ ಹೋರಾಡುತ್ತಿದ್ದೇವೆ. ಅಲ್ಲದೆ ನಾವು ದಕ್ಷಿಣದ ರಾಷ್ಟ್ರಗಳ ನಡುವೆ ಆರ್ಥಿಕ ಸಹಭಾಗಿತ್ವ ವಿಸ್ತರಣೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ನಮ್ಮ ವೈದ್ಯರು ಮತ್ತು ಶಿಕ್ಷಕರು ಆಫ್ರಿಕಾ ರಾಷ್ಟ್ರಗಳಿಗೆ ಕೇವಲ ವೃತ್ತಿಪರ ಅವಕಾಶಗಳಿಗಾಗಿ ತೆರಳುತ್ತಿಲ್ಲ. ಆ ಸ್ವತಂತ್ರ ರಾಷ್ಟ್ರಗಳ ಅಭಿವೃದ್ಧಿಯ ನಿಗದಿತ ಕಾರಣಕ್ಕೆ ಐಕ್ಯತೆ ತೋರುತ್ತಿದ್ದಾರೆ. ಅಧ್ಯಕ್ಷ ಮುಸೆವೆನಿ ಅವರು, 2015ರಲ್ಲಿ ದೆಹಲಿಯಲ್ಲಿ ನಡೆದ ಮೂರನೇ ಭಾರತ-ಆಫ್ರಿಕಾ ವೇದಿಕೆ ಶೃಂಗಸಭೆಯಲ್ಲಿ ಹೇಳಿದ್ದಂತೆ 'ನಾವು ವಸಾಹತುಶಾಹಿ ವಿರುದ್ಧ ಒಟ್ಟಾಗಿ ಹೋರಾಡಿದ್ದೇವೆ. ಅದೇ ರೀತಿ ಇದೀಗ ಪರಸ್ಪರ ಶ್ರೇಯೋಭಿವೃದ್ಧಿಗಾಗಿ ಹೋರಾಡೋಣ' ಎಂದಿದ್ದರು. 

 

ಇಂದು ಭಾರತ ಮತ್ತು ಆಫ್ರಿಕಾ ಭವಿಷ್ಯದ ದೊಡ್ಡ ಭರವಸೆಗಳಾಗಿ ಎದ್ದುನಿಂತಿವೆ. ಈ ರಾಷ್ಟ್ರಗಳು ವಿಶ್ವಾಸದಿಂದ ಸುಭದ್ರವಾಗಿವೆ, ಯುವಜನರಿಂದ ಕೂಡಿದ್ದು, ಯುವಜನರು ಮತ್ತು ಆವಿಷ್ಕಾರ ಹಾಗೂ ಪ್ರಬಲ ಜನರಿಂದ ಕೂಡಿವೆ. ಉಗಾಂಡ, ಆಫ್ರಿಕಾ ಮುನ್ನಡೆಯುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ಈ ರಾಷ್ಷ್ರ ಲಿಂಗ ಸಮಾನತೆಯನ್ನು ಸಾಧಿಸುತ್ತಿದೆ. ಜೊತೆಗೆ ಶೈಕ್ಷಣಿಕ ಮತ್ತು ಆರೋಗ್ಯ ಗುಣಮಟ್ಟ ಹೆಚ್ಚಳವಾಗುತ್ತಿದೆ ಹಾಗೂ ಮೂಲಸೌಕರ್ಯ ಮತ್ತು ಸಂಪರ್ಕ ವಿಸ್ತರಣೆಯಾಗುತ್ತಿದೆ. ಈ ಪ್ರಾಂತ್ಯದಲ್ಲಿ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಾಗುತ್ತಿದೆ. ನಾವು ಹೊಸ ಹೊಸ ಅನ್ವೇಷಣೆಗಳನ್ನು ಕಾಣುತ್ತಿದ್ದೇವೆ. ಆಫ್ರಿಕಾದ ಪ್ರತಿಯೊಂದು ಯಶಸ್ಸನ್ನು ನಾವು ಭಾರತದಲ್ಲಿ ಆನಂದಿಸುತ್ತಿದ್ದೇವೆ. ಅದಕ್ಕೆ ಕಾರಣ ನಮ್ಮ ಮತ್ತು ಈ ರಾಷ್ಟ್ರಗಳ ನಡುವಿನ ಆಳವಾದ ಗೆಳೆತನದ ಬಾಂಧವ್ಯ. 

 

ಗೌರವಾನ್ವಿತರೇ,

ಆಫ್ರಿಕಾದ ಪಾಲುದಾರನಾಗಲು ಭಾರತಕ್ಕೆ ಹೆಮ್ಮೆಯಿದೆ ಮತ್ತು ಉಗಾಂಡ ಆಫ್ರಿಕಾ ಖಂಡದ ನಮ್ಮ ಬದ್ಧತೆಯ ಪ್ರಮುಖ ಕೇಂದ್ರವಾಗಿದೆ. ನಿನ್ನೆಯಷ್ಟೇ ನಾನು ಉಗಾಂಡಾಕ್ಕೆ ಎರಡು ಬಗೆಯ ಸಾಲ ಯೋಜನೆಗಳನ್ನು ಪ್ರಕಟಿಸಿದೆ. ಮೊದಲನೆಯದು ವಿದ್ಯುತ್ ಮಾರ್ಗಗಳ ಅಳವಡಿಕೆಗಾಗಿ 141 ಮಿಲಿಯನ್ ಅಮೆರಿಕನ್ ಡಾಲರ್ ನೀಡುವುದು, ಎರಡನೆಯದು ಹೈನುಗಾರಿಕೆ ಅಭಿವೃದ್ಧಿ ಮತ್ತು ಕೃಷಿಗೆ 64 ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವುದು. ಹಿಂದಿನಂತೆ ನಾವು ಉಗಾಂಡಾದ ಜನರ ಆಶೋತ್ತರಗಳನ್ನು ಈಡೇರಿಸಲು - ಕೃಷಿ ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ತರಬೇತಿ, ಮೂಲಸೌಕರ್ಯ ಮತ್ತು ಇಂಧನ, ಸರ್ಕಾರದಲ್ಲಿ ಸಾಮರ್ಥ್ಯವೃದ್ಧಿ ಮತ್ತು ರಕ್ಷಣಾ ವಲಯದಲ್ಲಿ ತರಬೇತಿ ಕುರಿತಂತೆ ನೆರವು ನೀಡುವ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು. ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸೇರ್ಪಡೆಗೊಳ್ಳಲು ಈ ಸದನ ನಿರ್ಧಾರ ಕೈಗೊಂಡಿರುವುದಕ್ಕೆ ನಾನು ಇಡೀ ಸದನವನ್ನು ಹಾಗೂ ಅಧ್ಯಕ್ಷ ಮುಸೆವೆನಿ ಅವರನ್ನು ಅಭಿನಂದಿಸುತ್ತೇನೆ. 

 

ಗೌರವಾನ್ವಿತರೇ, 

ಉಗಾಂಡದೊಂದಿಗೆ ನಾವು ನಮ್ಮ ಸಹಭಾಗಿತ್ವ ಮತ್ತು ಸಂಬಂಧಗಳನ್ನು ಬಲಗೊಳಿಸುವ ಮೂಲಕ ಆಫ್ರಿಕಾ ಖಂಡದ ರಾಷ್ಟ್ರಗಳೊಂದಿಗಿನ ಬಾಂಧವ್ಯವನ್ನು ಮುಂದುವರಿಸಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ನಾನು ಆಫ್ರಿಕಾದ 25ಕ್ಕೂ ಅಧಿಕ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇವೆ. ನಮ್ಮ ಸಚಿವರು ಬಹುತೇಕ ಆಫ್ರಿಕಾದ ಎಲ್ಲ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. 2015ರ ಅಕ್ಟೋಬರ್ ನಲ್ಲಿ ನಡೆದ ಮೂರನೇ ಆಫ್ರಿಕಾ-ಭಾರತ ವೇದಿಕೆ ಶೃಂಗಸಭೆಯಲ್ಲಿ ಸುಮಾರು 40 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಗಳ ನೇತೃತ್ವ ವಹಿಸಿರುವವರು ಸೇರಿ 54 ರಾಷ್ಟ್ರಗಳಿಗೆ ಆತಿಥ್ಯ ನೀಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಅಲ್ಲದೆ, ಅಂತಾರಾಷ್ಟ್ರೀಯ ಸೌರಮೈತ್ರಿ ಸಮಾವೇಶದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಹಲವು ಆಫ್ರಿಕಾ ನಾಯಕರು ಅತಿಥಿಗಳಾಗಿ ಭಾಗವಹಿಸಿದ್ದು, ಭಾರತಕ್ಕೆ ಸಿಕ್ಕ ಸದಾವಕಾಶವಾಗಿದೆ. ಇದಲ್ಲದೆ ಕಳೆದ ನಾಲ್ಕು ವರ್ಷದಲ್ಲಿ ಆಫ್ರಿಕಾದ 32 ರಾಷ್ಟ್ರಗಳ ಮುಖ್ಯಸ್ಥರು ಅಥವಾ ಸರ್ಕಾರದ ನೇತೃತ್ವ ವಹಿರುವವರು ಭಾರತಕ್ಕೆ ಭೇಟಿ ನೀಡಿದ್ದಾರೆ. ನನ್ನ ತವರು ರಾಜ್ಯ ಗುಜರಾತ್ ಕಳೆದ ವರ್ಷ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ನ ಮೊದಲ ಸಭೆಯ ಆತಿಥ್ಯ ವಹಿಸಿದ್ದು ನನಗೆ ಹೆಮ್ಮೆ ಎನಿಸುತ್ತದೆ. ಅಷ್ಟೇ ಅಲ್ಲದೆ ನಾವು ಆಫ್ರಿಕಾದಲ್ಲಿ 18 ಕಡೆ ಹೊಸ ರಾಯಭಾರ ಕಚೇರಿಗಳನ್ನು ಆರಂಭಿಸುತ್ತಿದ್ದೇವೆ. 

 

ಗೌರವಾನ್ವಿತರೇ, 

ನಮ್ಮ ಅಭಿವೃದ್ಧಿಯ ಪಾಲುದಾರಿಕೆಯಲ್ಲಿ ಪ್ರಸ್ತುತ 40 ಆಫ್ರಿಕಾ ರಾಷ್ಟ್ರಗಳಿಗೆ ಸುಮಾರು 11 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವ 180 ಸಾಲ ಯೋಜನೆಗಳ ಅನುಷ್ಠಾನವೂ ಸೇರಿದೆ. ಕಳೆದ ಭಾರತ-ಆಫ್ರಿಕಾ ಶೃಂಗಸಭೆಯಲ್ಲಿ ನಾವು ಹತ್ತು ಬಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ರಿಯಾಯಿತಿ ದರದಲ್ಲಿ ಮತ್ತು 600 ಮಿಲಿಯನ್ ಡಾಲರ್ ಅನ್ನು ಅನುದಾನದ ರೂಪದಲ್ಲಿ ನೀಡುವುದಾಗಿ ಬದ್ಧತೆ ತೋರಿದ್ದೇವೆ. ಪ್ರತಿ ವರ್ಷ ಸುಮಾರು 8 ಸಾವಿರ ಆಫ್ರಿಕನ್ ಯುವಕರು ಹಲವು ಕಾರ್ಯಕ್ರಮಗಳಡಿ ನಾನಾ ರೀತಿಯ ತರಬೇತಿಯನ್ನು ಪಡೆಯುತ್ತಿದ್ದಾರೆ. ನಿಮ್ಮ ಆದ್ಯತೆಗಳಿಗೆ ಸದಾ ನಮ್ಮ  ಬೆಂಬಲ ಇರುತ್ತದೆ. ಭಾರತೀಯ ಕಂಪನಿಗಳು ಸುಮಾರು 54 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಆಫ್ರಿಕಾದಲ್ಲಿ ಹೂಡಿಕೆ ಮಾಡಿವೆ. ನಮ್ಮ ಮತ್ತು ಆಫ್ರಿಕಾ ನಡುವಿನ ವ್ಯಾಪಾರ ವಹಿವಾಟು ಇದೀಗ 62 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.21ರಷ್ಟು ಹೆಚ್ಚಾಗಿದೆ. ಭಾರತಕ್ಕೆ ಆಫ್ರಿಕಾದ ರಫ್ತು ಪ್ರಮಾಣ ಹೆಚ್ಚಾಗಿದೆ. ನಮ್ಮ ಆರ್ಥಿಕ ಸಂಬಂಧಗಳು ಡಿಜಿಟಲ್ ಆರ್ಥಿಕತೆಯಲ್ಲಿನ ಆವಿಷ್ಕಾರಿ ಹೊಸ ಸಹಭಾಗಿತ್ವದ ಆಧಾರದ ಮೇಲೆ ನಡೆಯುತ್ತಿವೆ. ಪ್ಯಾನ್ ಆಫ್ರಿಕಾ ಇ-ಸಂಪರ್ಕ ಜಾಲದಡಿ ಭಾರತ 48 ಆಫ್ರಿಕಾ ರಾಷ್ಟ್ರಗಳೊಂದಿಗೆ ಸಂಪರ್ಕ ಬೆಸೆದಿದ್ದು, ಒಂದಕ್ಕೊಂದು ಸಂಬಂಧ ಹೊಂದಿವೆ. ಇದು ಆಫ್ರಿಕಾದಲ್ಲಿ ಡಿಜಿಟಲ್ ಆವಿಷ್ಕಾರಕ್ಕೆ ಹೊಸ ಬೆನ್ನೆಲುಬಾಗಿ ಕೆಲಸ ಮಾಡಲಿದೆ. ಹಲವು ಸಮುದ್ರ ತೀರದ ರಾಷ್ಟ್ರಗಳ ನಡುವೆ ನಮ್ಮ ಸಹಭಾಗಿತ್ವ ವಿಸ್ತರಣೆಗೊಂಡಿದ್ದು, ಇದು ಸುಸ್ಥಿರ ರೀತಿಯಲ್ಲಿ ನೀಲಿ ಆರ್ಥಿಕತೆಯ ಪ್ರಯೋಜನ ಪಡೆದುಕೊಳ್ಳಲು ನೆರವಾಗುತ್ತದೆ. ಅಲ್ಲದೆ ಭಾರತದ ಔಷಧಗಳನ್ನು ಒಂದು ಕಾಲದಲ್ಲಿ ಆಫ್ರಿಕಾದ ಭವಿಷ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಆ ಔಷಧಗಳು ಹೊಸ ಅಲೆಯನ್ನು ಸೃಷ್ಟಿಸಿವೆ. ಅವು ಹಲವರಿಗೆ ಆರೋಗ್ಯ ರಕ್ಷಣಾ ಸೇವೆಗಳು, ಕೈಗೆಟಕುವ ದರದಲ್ಲಿ ಸುಲಭವಾಗಿ ದೊರೆಯುವಂತೆ ಮಾಡಿವೆ. 

 

ಗೌರವಾನ್ವಿತರೇ, 

ನಾವು ಅಭಿವೃದ್ಧಿಗೆ ಜೊತೆಯಾಗಿ ಕೆಲಸ ಮಾಡುವುದಲ್ಲದೆ, ಶಾಂತಿಗಾಗಿಯೂ ನಾವು ಒಟ್ಟಾಗಿ ಹೋರಾಡುತ್ತಿದ್ದೇವೆ. ಭಾರತೀಯ ಯೋಧರು ನೀಲಿ ಹೆಲ್ಮೆಟ್ ಗಳನ್ನು ಧರಿಸಿ, ಸೇವೆ ಸಲ್ಲಿಸುವ ಮೂಲಕ ಆಫ್ರಿಕಾದ ಮಕ್ಕಳಲ್ಲಿ ಭವಿಷ್ಯದ ಶಾಂತಿಯತ್ತ ನೋಡುವಂತೆ ಮಾಡಿದ್ದಾರೆ. ಆಫ್ರಿಕಾದಲ್ಲಿನ ಒಂದು ಡಜನ್ ಗೂ ಅಧಿಕ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲಿ ಭಾರತೀಯ ಶಾಂತಿ ಪಾಲನಾ ಯೋಧರು ಕಾರ್ಯನಿರ್ವಹಿಸುತ್ತಿರುವುದು ನಮಗೆ ಹೆಮ್ಮೆ ಎನಿಸಿದೆ. ಭಾರತ 1960ರಲ್ಲಿ ಮೊದಲು ಕಾಂಗೋದಲ್ಲಿ ಶಾಂತಿ ಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸಿತ್ತು. ವಿಶ್ವ ಸಂಸ್ಥೆ ಜಗತ್ತಿನಲ್ಲಿ ಕೈಗೊಂಡಿರುವ ಶಾಂತಿ ಪಾಲನಾ ಕಾರ್ಯಾಚರಣೆಗಳಲ್ಲಿ 163 ಭಾರತೀಯರು ಹುತಾತ್ಮರಾಗಿದ್ದಾರೆ. ಈ ಸಂಖ್ಯೆ ಇತರೆ ಎಲ್ಲ ರಾಷ್ಟ್ರಗಳಿಗಿಂತ ಅಧಿಕವಾಗಿದೆ. ಅವರಲ್ಲಿ ಬಹುತೇಕ ಶೇ.70ಕ್ಕೂ ಅಧಿಕ ಯೋಧರು ಆಫ್ರಿಕಾದಲ್ಲೇ ಹುತಾತ್ಮರಾಗಿದ್ದಾರೆ. ಇಂದು ಆಫ್ರಿಕಾದ 5 ಕಡೆ ಇರುವ ಶಾಂತಿ ಪಾಲನಾ ಕಾರ್ಯಾಚರಣೆಗಳಲ್ಲಿ 6 ಸಾವಿರಕ್ಕೂ ಅಧಿಕ ಭಾರತೀಯ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಸಂಸ್ಥೆಯಲ್ಲಿನ ಪೂರ್ಣ ಮಹಿಳೆಯರೇ ಇರುವ ಪೊಲೀಸ್ ಘಟಕದಲ್ಲಿ ಭಾರತೀಯ ಮಹಿಳೆಯರು ಮಹತ್ವದ ಸಾಧನೆಗೈದಿದ್ದು, ಆ ಘಟಕ ಲಿಬೇರಿಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಫ್ರಿಕಾ ರಾಷ್ಟ್ರಗಳೊಂದಿಗಿನ ನಮ್ಮ ರಕ್ಷಣಾ ಮತ್ತು ಭದ್ರತಾ ಸಹಕಾರ ದಿನೇ ದಿನೇ ವೃದ್ಧಿಯಾಗುತ್ತಿದೆ. ನಾವು ನಮ್ಮ ಸಮುದ್ರಗಳನ್ನು ರಕ್ಷಿಸಿಕೊಳ್ಳಲು ಭಯೋತ್ಪಾದನೆ ನಿಗ್ರಹ, ಪೈರಸಿ ವಿರುದ್ಧ ಒಟ್ಟಾಗಿ ಹೋರಾಡುತ್ತಿದ್ದೇವೆ. 

 

ಗೌರವಾನ್ವಿತರೇ, 

ಭಾರತ ಮತ್ತು ಆಫ್ರಿಕಾ ನಡುವಿನ ಪಾಲುದಾರಿಕೆ ಹತ್ತು ಸಿದ್ಧಾಂತಗಳನ್ನು ಆಧರಿಸಿ ಮುಂದುವರಿಯಲಿದೆ. 

 

ಒಂದು, ಆಫ್ರಿಕಾ ನಮ್ಮ ಆದ್ಯತೆಯ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಆಫ್ರಿಕಾದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ವಿಸ್ತರಣೆ ಮತ್ತು ವೃದ್ಧಿಗೊಳಿಸುವುದನ್ನು ನಾವು ಮುಂದುವರಿಸುತ್ತೇವೆ. ಈಗಾಗಲೇ ತೋರಿರುವ ಬದ್ಧತೆಯಂತೆ ಸಂಬಂಧ ಸುಸ್ಥಿರ ಮತ್ತು ನಿರಂತರವಾಗಿರಲಿದೆ. 

 

ಎರಡು, ನಿಮ್ಮ ಆದ್ಯತೆಗಳನ್ನು ಆಧರಿಸಿ, ನಮ್ಮ ಅಭಿವೃದ್ಧಿ ಸಹಭಾಗಿತ್ವ ಮುಂದುವರಿಯಲಿದೆ. ನಿಮಗೆ ಸೂಕ್ತವಾಗುವ ಹಿತಕರ ವಾತಾವರಣದಲ್ಲಿ ನಾವು ನಿಮ್ಮ ಸಾಮರ್ಥ್ಯದ ಬಳಕೆಗೆ ನೆರವಾಗುತ್ತೇವೆ. ಆದರೆ ನಿಮ್ಮ ಭವಿಷ್ಯಕ್ಕೆ ತೊಡಕಾಗುವುದಿಲ್ಲ, ಪ್ರತಿಭೆ ಅರಳಲು ಅವಕಾಶ ಮಾಡಿಕೊಡುತ್ತೇವೆ. ನಾವು ಆಫ್ರಿಕಾದ ಪ್ರತಿಭೆ ಮತ್ತು ಕೌಶಲ್ಯವನ್ನು ಅವಲಂಬಿಸುತ್ತೇವೆ. ನಾವು ಸಾಧ್ಯವಾದಷ್ಟು ಹೆಚ್ಚು ಸ್ಥಳೀಯ ಸಾಮರ್ಥ್ಯವನ್ನು ವೃದ್ಧಿಸಿ, ಸ್ಥಳೀಯರಿಗಾಗಿಯೇ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿಕೊಡುತ್ತೇವೆ. 

 

ಮೂರು, ನಾವು ನಮ್ಮ ಮಾರುಕಟ್ಟೆಗಳನ್ನು ಮುಕ್ತವಾಗಿರಿಸಿ ಭಾರತದೊಂದಿಗಿನ ವ್ಯಾಪಾರವನ್ನು ಹೆಚ್ಚು ಆಕರ್ಷಕ ಮತ್ತು ಸುಲಭವಾಗುವಂತೆ ಮಾಡಿಕೊಡುತ್ತೇವೆ. ಆಫ್ರಿಕಾದಲ್ಲಿ ಬಂಡವಾಳ ಹೂಡಿಕೆಗೆ ನಾವು ನಮ್ಮ ಕೈಗಾರಿಕೆಗಳನ್ನು ಬೆಂಬಲಿಸುತ್ತೇವೆ. 

 

ನಾಲ್ಕು, ಭಾರತದ ಡಿಜಿಟಲ್ ಕ್ರಾಂತಿಯ ಅನುಭವವನ್ನು ಬಳಸಿಕೊಂಡು ಆಫ್ರಿಕಾದ ಅಭಿವೃದ್ಧಿಯನ್ನು ಬೆಂಬಲಿಸುತ್ತೇವೆ. ಅದರ ಜೊತೆಗೆ ಸಾರ್ವಜನಿಕ ಸೇವೆಗಳ ವಿತರಣಾ ವ್ಯವಸ್ಥೆ ಸುಧಾರಿಸುವುದು, ಆರೋಗ್ಯ ಮತ್ತು ಶಿಕ್ಷಣ ವಿಸ್ತರಣೆ, ಡಿಜಿಟಲ್ ಸಾಕ್ಷರತೆ ಪಸರಿಸುವುದು, ಸಮಗ್ರ ಆರ್ಥಿಕ ಒಳಗೊಳ್ಳುವಿಕೆ ವಿಸ್ತರಣೆ ಮತ್ತು ನಿರ್ಲಕ್ಷ್ಯಕ್ಕೊಳಗಾಗಿರುವವರನ್ನು ಮುಖ್ಯವಾಹಿನಿಗೆ ತರಲು ನೆರವು ನೀಡಲಾಗುವುದು. ಇದು ಕೇವಲ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ನಾವು ಸಹಭಾಗಿತ್ವ ನೀಡುತ್ತಿರುವುದಲ್ಲದೆ, ಡಿಜಿಟಲ್ ಯುಗದಲ್ಲಿ ಆಫ್ರಿಕಾದ ಯುವ ಜನತೆ ತಮ್ಮ ಸ್ಥಾನವನ್ನು ಪಡೆಯಲು ಅವರನ್ನು ಸಜ್ಜುಗೊಳಿಸಲಾಗುವುದು. 

 

ಐದು, ಆಫ್ರಿಕಾ ಜಗತ್ತಿನ ಶೇಕಡ 60ರಷ್ಟು ಕೃಷಿಯೋಗ್ಯ ಭೂಮಿ ಹೊಂದಿದೆ. ಆದರೆ ಅದು ಕೇವಲ ಶೇ.10ರಷ್ಟು ಜಾಗತಿಕ ಉತ್ಪಾದನೆಯನ್ನು ಮಾತ್ರ ಮಾಡುತ್ತಿದೆ. ಆಫ್ರಿಕಾದಲ್ಲಿ ಕೃಷಿ ಸುಧಾರಣೆಗೆ ನಾವು ನಿಮ್ಮ ಜೊತೆ ಸೇರಿ ಕೆಲಸ ಮಾಡುತ್ತೇವೆ. 

 

ಆರು, ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲೂ ಸಹ ನಾವು ಸಹಭಾಗಿತ್ವ ಸಾಧಿಸುತ್ತೇವೆ. ಅಂತಾರಾಷ್ಟ್ರೀಯ ಹವಾಮಾನ ಆದೇಶಕ್ಕೆ ಅನುಗುಣವಾಗಿ ನಾವು ಆಫ್ರಿಕಾದೊಂದಿಗೆ ಕೆಲಸ ಮಾಡುತ್ತೇವೆ. ಜತೆಗೆ ನಮ್ಮ ಜೀವವೈವಿಧ್ಯ ರಕ್ಷಣೆ ಮತ್ತು ಶುದ್ಧ ಹಾಗೂ ಪರಿಣಾಮಕಾರಿ ಇಂಧನ ಮೂಲಗಳ ಅಳವಡಿಕೆ ಕುರಿತಂತೆಯೂ ಒಟ್ಟಾಗಿ ಶ್ರಮಿಸಲಾಗುವುದು. 

 

ಏಳು, ಭಯೋತ್ಪಾದನೆ ಮತ್ತು ಬಂಡುಕೋರರ ನಿಗ್ರಹ, ಸೈಬರ್ ಸುರಕ್ಷತೆ ಮತ್ತು ಭದ್ರತೆ ಕಾಯ್ದುಕೊಳ್ಳುವುದು, ಶಾಂತಿ ಸ್ಥಾಪನೆಗೆ ವಿಶ್ವ ಸಂಸ್ಥೆಗೆ ನೆರವು ನೀಡುವ ವಿಷಯಗಳಲ್ಲಿ ನಮ್ಮ ಮತ್ತು ಆಫ್ರಿಕಾ ನಡುವಿನ ಸಂಬಂಧಗಳ ಬಲವರ್ಧನೆ ಮಾಡಲಾಗುವುದು. 

 

ಎಂಟು, ಆಫ್ರಿಕಾ ರಾಷ್ಟ್ರಗಳೊಡಗೂಡಿ ನಾವು ಸಾಗರಗಳನ್ನು ಮುಕ್ತವಾಗಿ ಎಲ್ಲ ರಾಷ್ಟ್ರಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಂತೆ ಮಾಡಲಾಗುವುದು. ಆಫ್ರಿಕಾದ ಪೂರ್ವ ಭಾಗದಲ್ಲಿ ಮತ್ತು ಹಿಂದೂ ಮಹಾಸಾಗರದ ಪೂರ್ವಭಾಗದಲ್ಲಿ ಸ್ಪರ್ಧೆ ಬೇಕಾಗಿಲ್ಲ, ಅಲ್ಲಿ ಸಹಕಾರದ ಅಗತ್ಯವಿದೆ. ಅದೇ ಕಾರಣಕ್ಕಾಗಿ ಹಿಂದೂಮಹಾಸಾಗರದ ಭದ್ರತೆ ವಿಷಯದಲ್ಲಿ ಸಹಕಾರ ಮತ್ತು ಸಮಗ್ರತೆ ಅತ್ಯಗತ್ಯ ಎಂಬ ಮುನ್ನೋಟವನ್ನು ಭಾರತ ಹೊಂದಿದೆ. ಇದರಿಂದ ಭದ್ರತೆ ಮತ್ತು ಪ್ರಾಂತ್ಯದ ಎಲ್ಲರ ಪ್ರಗತಿ ಸಾಧ್ಯವಾಗಲಿದೆ. 

 

ಒಂಭತ್ತು, ಈ ಅಂಶ ನನಗೆ ಅತ್ಯಂತ ವಿಶೇಷವಾದುದು. ಆಫ್ರಿಕಾ ರಾಷ್ಟ್ರಗಳೊಂದಿಗಿನ ಜಾಗತಿಕ ಸಂಬಂಧಗಳು ಹೆಚ್ಚಾಗುತ್ತಿರುವಂತೆಯೇ, ಆಫ್ರಿಕಾ ಮತ್ತೊಮ್ಮೆ ವೈರಿಗಳ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ರಂಗಶಾಲೆಯಾಗದೆ, ಆಫ್ರಿಕಾದ ಯುವಕರ ಆಶೋತ್ತರಗಳನ್ನು ಪೋಷಿಸುವ ಕೇಂದ್ರವಾಗುವಂತೆ ಖಾತ್ರಿಪಡಿಸಲು ನಾವೆಲ್ಲ ಒಗ್ಗೂಡಿ ಹೋರಾಡಬೇಕಿದೆ. 

 

ಹತ್ತು, ವಸಾಹತುಶಾಹಿ ವಿರುದ್ಧ ಭಾರತ-ಆಫ್ರಿಕಾ ಒಟ್ಟಾಗಿ ಹೋರಾಡಿದ್ದಂತೆ ನಾವು, ಒಗ್ಗೂಡಿ ಭಾರತ ಮತ್ತು ಆಫ್ರಿಕಾದಲ್ಲಿ ನೆಲೆಸಿರುವ ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರ ಜೀವಗಳಿಗೆ ಧ್ವನಿಯಾಗಿ ಜಾಗತಿಕ ಮಟ್ಟದಲ್ಲಿ ಅವರನ್ನು ಪ್ರತಿನಿಧಿಸುವಂತೆ ಮಾಡಬೇಕಿದೆ. ಭಾರತ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದು, ಆಫ್ರಿಕಾಗೆ ಸಮಾನ ಸ್ಥಾನ ಸಿಗದಿದ್ದರೆ, ಆ ಹೋರಾಟ ಅಪೂರ್ಣವಾಗುತ್ತದೆ. ಇದು ನಮ್ಮ ವಿದೇಶಾಂಗ ನೀತಿಯ ಅತ್ಯಂತ ಪ್ರಮುಖ ಉದ್ದೇಶವಾಗಿದೆ. 

 

ಗೌರವಾನ್ವಿತರೇ, 

ಸ್ವಾತಂತ್ರ್ಯ ಮತ್ತು ಸಮಾನತೆಯಿಂದ ಉದಯವಾದ ಈ ರಾಷ್ಟ್ರಗಳು ಎಲ್ಲ ಜನರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತಾ ಬಂದಿವೆ. ಈಗ ಭವಿಷ್ಯದ ಬಗ್ಗೆ ನಮಗೆ ಹೆಚ್ಚಿನ ಭರವಸೆ ಮೂಡಿದೆ. ಆಫ್ರಿಕಾಖಂಡ ಕೂಡ ಜಗತ್ತಿನ ಇತರೆ ಭಾಗದಂತೆ ಅಭಿವೃದ್ಧಿಯಲ್ಲಿ ನಮ್ಮ ಜೊತೆ ಮುಂದಡಿ ಇಡಬೇಕು ಎಂಬುದು ನಮ್ಮ ಬಯಕೆಯಾಗಿದೆ. ಭಾರತ ನಿಮ್ಮೊಂದಿಗೆ ಕೆಲಸ ಮಾಡುತ್ತದೆ ಮತ್ತು ನಿಮ್ಮೊಡನಿರುತ್ತದೆ. ನಮ್ಮ ಸಹಭಾಗಿತ್ವ ಆಫ್ರಿಕಾದ ಸಬಲೀಕರಣಕ್ಕೆ ಸಹಕಾರಿಯಾಗಲಿದೆ. ಸಮಾನತೆಯ ತತ್ವದೊಂದಿಗೆ ನಿಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಎಲ್ಲ ಪಾರದರ್ಶಕ ಅಂಶಗಳೊಂದಿಗೆ ನಾವು ಐಕ್ಯತೆಯಿಂದ ನಿಮ್ಮೊಡನೆ ನಿಲ್ಲುತ್ತೇವೆ. ನಾವು ನಿಮಗೆ ಧ್ವನಿಯಾಗುತ್ತೇವೆ ಮತ್ತು ನಿಮ್ಮೊಡನಿರುತ್ತೇವೆ. ಭಾರತದ ಮೂರನೇ ಎರಡರಷ್ಟು ಹಾಗೂ ಆಫ್ರಿಕಾದ ಮೂರನೇ ಎರಡರಷ್ಟು ಜನರು 35 ವರ್ಷದೊಳಗಿನವರಾಗಿದ್ದಾರೆ. ಮುಂದಿನ ಭವಿಷ್ಯ ಯುವ ಜನಾಂಗದ್ದು. ನಾವು ಈ ಶತಮಾನವನ್ನು ರೂಪುಗೊಳಿಸಿ, ಅದನ್ನು ಅಭಿವೃದ್ಧಿಗೊಳಿಸಬೇಕಿದೆ. ಉಗಾಂಡದವರು ಹೇಳುವಂತೆ 'ಯಾರು ಹೆಚ್ಚು ಪ್ರಯತ್ನ ಪಡುತ್ತಾರೊ ಅವರಿಗೆ ಫಲ ಸಿಗುತ್ತದೆ' ಎಂಬ ತತ್ವದಡಿ ಮುಂದುವರಿಯೋಣ. ಭಾರತ, ಆಫ್ರಿಕಾಕ್ಕಾಗಿ ಅಂತಹ ಒಂದು ಹೆಚ್ಚುವರಿ ಪ್ರಯತ್ನವನ್ನು ಮಾಡಿದೆ ಮತ್ತು ಆಫ್ರಿಕಾದ ಅನುಕೂಲಕ್ಕಾಗಿ ಸದಾ ಮಾಡುತ್ತಲೇ ಇರುತ್ತದೆ. 

 

ಧನ್ಯವಾದಗಳು

 

ತುಂಬಾ ತುಂಬಾ ಧನ್ಯವಾದಗಳು 

 

ಅಸಂತೇ ಸನ(Release ID: 1540437) Visitor Counter : 172