ಪ್ರಧಾನ ಮಂತ್ರಿಯವರ ಕಛೇರಿ

ಅಜಂಘರ್ ನಲ್ಲಿ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

Posted On: 14 JUL 2018 4:14PM by PIB Bengaluru

ಅಜಂಘರ್ ನಲ್ಲಿ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರ ಪ್ರದೇಶದ ಅಜಂಘರ್ ನಲ್ಲಿ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ನೆರವೇರಿಸಿದರು.

 

ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಹೊಸ ಅಧ್ಯಾಯದ ಆರಂಭದ ಕ್ಷಣ ಇದೆಂದು ಬಣ್ಣಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ನೀಡಿರುವ ನಾಯಕತ್ವನ್ನು ಶ್ಲಾಘಿಸಿದ ಅವರು, ರಾಜ್ಯ ಸರ್ಕಾರವು ಅಭಿವೃದ್ಧಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಲು ಶ್ರಮಿಸುತ್ತಿದೆ ಎಂದರು. ರಾಜ್ಯ ಸರ್ಕಾರವು ಸಮಾಜದ ವಿವಿಧ ವರ್ಗಗಳ ಕ್ಷೇಮಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

 

340 ಕಿ.ಮೀ ಉದ್ದದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಹಾದುಹೋಗುವ ನಗರ ಮತ್ತು ಪಟ್ಟಣಗಳ ಪರಿವರ್ತನೆ ಆಗಲಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಇದು ದೆಹಲಿ ಮತ್ತು ಗಾಜಿಪುರದ ನಡುವೆ ತ್ವರಿತ ಸಂಪರ್ಕವನ್ನೂ ಒದಗಿಸಲಿದೆ ಎಂದೂ ಅವರು ಹೇಳಿದರು. ಎಕ್ಸ್ ಪ್ರೆಸ್ ಮಾರ್ಗದ ಉದ್ದಕ್ಕೂ ಹೊಸ ಕೈಗಾರಿಕೆ ಮತ್ತು ಸಂಸ್ಥೆಗಳು ಅಭಿವೃದ್ಧಿ ಹೊಂದಲಿವೆ ಎಂದು ತಿಳಿಸಿದರು. ಎಕ್ಸ್ ಪ್ರೆಸ್ ಹೆದ್ದಾರಿ ವಲಯದಲ್ಲಿನ ಐತಿಹಾಸಿಕ ಮಹತ್ವದ ತಾಣಗಳಲ್ಲಿ ಪ್ರವಾಸೋದ್ಯಮದ ಉತ್ತೇಜನ ನೀಡಲಿದೆ ಎಂದರು.

 

ಸಂಪರ್ಕ ಇಂದು ಅಭಿವೃದ್ಧಿಗೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಜಾಲ ಬಹುತೇಕ ದುಪ್ಪಟ್ಟಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಜಲ ಸಂಪರ್ಕ, ವಾಯು ಸಂಪರ್ಕದ ಉಪಕ್ರಮಗಳ ಬಗ್ಗೆಯೂ ಮಾತನಾಡಿದರು. ದೇಶದ ಪೂರ್ವ ಭಾಗಗಳನ್ನು ಅಭಿವೃದ್ಧಿಯ ಹೊಸ ಕಾರಿಡಾರ್ ಆಗಿ ಮಾಡುವ ಪ್ರಯತ್ನಗಳು ಸಾಗಿವೆ ಎಂದು ತಿಳಿಸಿದರು.

 

ಸರ್ವರೊಂದಿಗೆ ಸರ್ವರ ವಿಕಾಸದ ತಮ್ಮ ದೃಷ್ಟಿಕೋನವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ವಲಯದ ಸಮತೋಲಿತ ಅಭಿವೃದ್ಧಿಯನ್ನು ಪ್ರತಿಪಾದಿಸಿದರು. ಡಿಜಿಟಲ್ ಸಂಪರ್ಕದ ಬಗ್ಗೆ ಮಾತನಾಡಿದ ಅವರು ಆಫ್ಟಿಕಲ್ ಫೈಬರ್ ಸಂಪರ್ಕವನ್ನು ಪ್ರಸ್ತಾಪಿಸಿ, ಈವರೆಗೆ ಒಂದು ಲಕ್ಷ ಪಂಚಾಯ್ತಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ, ಮೂರು ಲಕ್ಷ ಕಾಮನ್ ಸರ್ವೀಸ್ ಸೆಂಟರ್ಸ್ (ಸಮಾನ ಸೇವಾ ಕೇಂದ್ರಗಳು) ಜನರ ಬದುಕನ್ನು ಸರಳಗೊಳಿಸುತ್ತಿವೆ ಎಂದರು.

 

ಪ್ರಧಾನಮಂತ್ರಿಯವರು ಇತರ ಅಭಿವೃದ್ಧಿ ಉಪಕ್ರಮಗಳಾದ ಪಿ.ಎಂ. ವಸತಿ ಯೋಜನೆ, ಪಿ.ಎಂ. ಗ್ರಾಮೀಣ ರಸ್ತೆ ಯೋಜನೆ ಮತ್ತು ಸರ್ಕಾರದ ಇತರ ಕಲ್ಯಾಣ ಯೋಜನೆಗಳ ಬಗ್ಗೆಯೂ ಮಾತನಾಡಿದರು. ರೈತರ ಅನುಕೂಲಕ್ಕಾಗಿ ಮುಂಗಾರು ಬೆಳೆಗಳಿಗೆ ಇತ್ತೀಚೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದನ್ನೂ ಅವರು ಉಲ್ಲೇಖಿಸಿದರು.

 

ತ್ರಿವಳಿ ತಲಾಖ್ ನಿಂದ ಮುಸ್ಲಿಮ್ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕಾನೂನು ರೂಪಿಸುವ ಪ್ರಯತ್ನಕ್ಕೆ ಕೆಲವು ಶಕ್ತಿಗಳು ಅಡ್ಡಿಪಡಿಸುತ್ತಿರುವುದನ್ನು ಪ್ರಧಾನಮಂತ್ರಿ ಟೀಕಿಸಿದರು. ಈ ಕಾನೂನನ್ನು ಸಾಕಾರಗೊಳಿಸಲು ದೃಢ ಪ್ರಯತ್ನ ಮಾಡುವ ದೃಢ ಸಂಕಲ್ಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳೆರಡಕ್ಕೂ ದೇಶ ಮತ್ತು ಅದರ ಜನತೆ ಅಮೂಲ್ಯ ಎಂದು ಹೇಳಿದರು. 

ಕೇಂದ್ರ ಸರ್ಕಾರ ವಲಯದ ನೇಕಾರರಿಗಾಗಿಯೂ ಉಪಕ್ರಮ ಕೈಗೊಂಡಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಆಧುನಿಕ ಯಂತ್ರಗಳ ಸಾಲ ಯೋಜನೆ ಮತ್ತು ವಾರಾಣಸಿಯಲ್ಲಿ ವಾಣಿಜ್ಯ ಸೌಕರ್ಯ ಕೇಂದ್ರದ ಪ್ರಸ್ತಾಪ ಮಾಡಿದರು. ರಾಜ್ಯ ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಪ್ರಸ್ತಾಪವನ್ನೂ ಪ್ರಧಾನಮಂತ್ರಿಗಳು ಮಾಡಿದರು.

***



(Release ID: 1538715) Visitor Counter : 74