ಸಂಪುಟ

1996ರ ವಿಪೋ ಕೃತಿಸ್ಯಾಮ್ಯ ಒಪ್ಪಂದ ಮತ್ತು 1996ರ ವಿಪೋ ಬೌದ್ಧಿಕ/ಸೃಜನಶೀಲ ಹಾಗೂ ಧ್ವನಿಲೇಖ ಒಪ್ಪಂದದ ಬಳಕೆಗೆ ಕೇಂದ್ರ ಸಂಪುಟದ ಸಮ್ಮತಿ (Cabinet approves accession to WIPO Copyright Treaty 1996 and WIPO performance and phonograms Treaty, 1996)

Posted On: 04 JUL 2018 2:34PM by PIB Bengaluru

1996ರ ವಿಪೋ ಕೃತಿಸ್ಯಾಮ್ಯ ಒಪ್ಪಂದ ಮತ್ತು 1996ರ ವಿಪೋ ಬೌದ್ಧಿಕ/ಸೃಜನಶೀಲ ಹಾಗೂ ಧ್ವನಿಲೇಖ ಒಪ್ಪಂದದ ಬಳಕೆಗೆ ಕೇಂದ್ರ ಸಂಪುಟದ ಸಮ್ಮತಿ (Cabinet approves accession to WIPO Copyright Treaty 1996 and WIPO performance and phonograms Treaty, 1996)

ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಗಳು ವಿಪೋ ಕೃತಿಸ್ವಾಮ್ಯ ಒಪ್ಪಂದ ಮತ್ತು ವಿಪೋ ಬೌದ್ಧಿಕ/ಸೃಜನಶೀಲ ಹಾಗೂ ಧ್ವನಿಲೇಖ ಒಪ್ಪಂದವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಗೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸಮ್ಮತಿಸಿದೆ. ಇದರಿಂದಾಗಿ ಅಂತರ್ಜಾಲ ಮತ್ತು ಡಿಜಿಟಲ್ ರೂಪದಲ್ಲಿ ಬರೆಯುವ ಬರಹಗಳಿಗೂ ಕೃತಿಸ್ವಾಮ್ಯದ ಹಕ್ಕುಗಳು ವಿಸ್ತರಣೆಯಾಗಲಿವೆ. ಜತೆಗೆ, 2016ರ ಮೇ 12ರಂದು ಅಳವಡಿಸಿಕೊಳ್ಳಲಾದ ರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ನೀತಿಯಲ್ಲಿ ಅಳವಡಿಸಿಕೊಂಡಿರುವ ಆಶಯದೆಡೆಗೆ ಇದು ಇನ್ನೊಂದು ಹೆಜ್ಜೆಯಾಗಿದೆ. ಅಂದಂತೆ, ಬೌದ್ಧಿಕವಾದ ಕೆಲಸಗಳಿಗೆ ವಾಣಿಜ್ಯೀಕರಣದ ಮೂಲಕ ಮೌಲ್ಯವನ್ನು ತಂದುಕೊಡಬೇಕೆಂಬುದು ಈ ನೀತಿಯ ಉದ್ದೇಶವಾಗಿದೆ. ಇದಕ್ಕಾಗಿ, ಸಂಬಂಧಿಸಿದವರಿಗೆ ಅಂತರ್ಜಾಲ ಮತ್ತು ಮೊಬೈಲ್ ಫೋನುಗಳ ಮೂಲಕ ಇ-ಕಾಮರ್ಸ್ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಲು ಉದ್ದೇಶಿಸಲಾಗಿದೆ. 

 

ಉಪಯೋಗಗಳು:

ಕೃತಿಸ್ವಾಮ್ಯ ಉದ್ಯಮದ ಬೇಡಿಕೆಗೆ ಸ್ಪಂದಿಸಿರುವ ಈ ಒಪ್ಪಂದದಿಂದ ಭಾರತಕ್ಕೆ ಈ ಮುಂದಿನ ಉಪಯೋಗಗಳು ಆಗಲಿವೆ-

 

* ಸೃಜನಶೀಲ/ಬೌದ್ಧಿಕ ಸಾಧನೆ ಮಾಡಿದವರು ಅಂತಾರಾಷ್ಟ್ರೀಯ ಕೃತಿಸ್ವಾಮ್ಯ ವ್ಯವಸ್ಥೆಯ ಮೂಲಕ ತಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವುದು ಇದರಿಂದ ಸಾಧ್ಯವಾಗಲಿದೆ. ಅಂದರೆ, ತಮ್ಮ ಸೃಜನಶೀಲ/ಬೌದ್ಧಿಕ ಸಾಧನೆಯ ಕನಸನ್ನು ನನಸಾಗಿಸಿಕೊಳ್ಳಲು ಮತ್ತು ಅದನ್ನು ವಿತರಿಸಲು ಮಾಡಿದ ವೆಚ್ಚವನ್ನು ಪುನಃ ಪಡೆಯಲು ಇದರಿಂದ ಅವಕಾಶ ಸಿಗಲಿದೆ.

 

* ಭಾರತವು ಇತರ ದೇಶಗಳ ಸೃಜನಶೀಲ/ಬೌದ್ಧಿಕ ಸಾಧಕರಿಗೆ ಕೃತಿಸ್ವಾಮ್ಯ ರಕ್ಷಣೆಯ ದೃಷ್ಟಿಯಿಂದ ಈಗಾಗಲೇ ಸಾಕಷ್ಟು ರಕ್ಷಣೆಯನ್ನು ನೀಡಿ, ಅವರ ಹಿತಾಸಕ್ತಿಗಳನ್ನು ಕಾಯುತ್ತಿದೆ. ಇದೇ ರೀತಿಯಲ್ಲಿ ಭಾರತದ ಸೃಜನಶೀಲ/ಬೌದ್ಧಿಕ ಪರಿಶ್ರಮಿಗಳಿಗೂ ವಿದೇಶಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ, ನಮ್ಮವರ ಹಿತಾಸಕ್ತಿಗಳನ್ನೂ ಪೊರೆಯಲಾಗುವುದು. 

 

* ಬೌದ್ಧಿಕ ಸಾಹಸಗಳು ಅಥವಾ ಸೃಜನಶೀಲ ಸಾಧನೆಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲು ಬೇಕಾದ ಆತ್ಮವಿಶ್ವಾಸ ಮತ್ತು ಡಿಜಿಟಲ್ ಯುಗಕ್ಕೆ ತಕ್ಕಂತೆ ಬೇಕಾದ ವಿತರಣಾ ಕೌಶಲ್ಯಗಳನ್ನು ಪೂರೈಸಲಾಗುವುದು.

 

* ಅತ್ಯಂತ ಸದೃಢವಾದ ಆರ್ಥಿಕತೆ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ರೂಪಿಸಲು ಅಗತ್ಯವಾದ ಕೊಡುಗೆಯನ್ನು ನೀಡಲು ಮತ್ತು ವಾಣಿಜ್ಯ ವಹಿವಾಟನ್ನು ನಡೆಸಲು ಉತ್ತೇಜನ ನೀಡುವುದು. 

 

ಹಿನ್ನೆಲೆ: 

 

ಕೃತಿಸ್ವಾಮ್ಯ ಕಾಯ್ದೆ, 1957:

1957ರ ಕೃತಿಸ್ವಾಮ್ಯ ಕಾಯ್ದೆಯನ್ನು 2016ರ ಮಾರ್ಚ್ ತಿಂಗಳಲ್ಲಿ ಡಿಐಪಿಪಿಗೆ ವರ್ಗಾಯಿಸಲಾಯಿತು. ಇದಾದ ನಂತರ, ಈ ಕಾಯ್ದೆಯು ಡಬ್ಲ್ಯುಸಿಪಿ ಮತ್ತು ಡಬ್ಲ್ಯುಪಿಪಿಟಿಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಒಂದು ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಜತೆಗೆ, ಡಬ್ಲ್ಯುಐಪಿಒ ಜತೆಗೂಡಿ ಕೂಡ ಇನ್ನೊಂದು ಜಂಟಿ ಅಧ್ಯಯನವನ್ನು ಆರಂಭಿಸಲಾಯಿತು.

 

1957ರ ಕೃತಿಸ್ವಾಮ್ಯ ಕಾಯ್ದೆಗೆ 2012ರಲ್ಲಿ ತಿದ್ದುಪಡಿ ತರಲಾಯಿತು. ಡಬ್ಲ್ಯುಸಿಟಿ ಮತ್ತು ಡಬ್ಲ್ಯುಪಿಪಿಟಿಗಳಿಗೆ ಹೊಂದಿಕೊಳ್ಳುವಂತೆ  ಈ ಕಾಯ್ದೆ ಇರಬೇಕೆಂಬುದು ತಿದ್ದುಪಡಿಯ ಹಿಂದಿನ ಆಶಯವಾಗಿತ್ತು. ಇದರ ಜತೆಗೆ `ಸಾರ್ವಜನಿಕ ಸ್ವರೂಪದ ಸಂವಹನ/ಸಂಪರ್ಕ' ಎನ್ನುವ ಪರಿಕಲ್ಪನೆಯನ್ನು ಕಾಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವ ಉದ್ದೇಶವೂ ಇದರಲ್ಲಿತ್ತು. ಅಂದರೆ, ಈಗಿನ ಡಿಜಿಟಲ್ ಯುಗಕ್ಕೆ ಸರಿಹೊಂದುವಂತೆ ಇದರಲ್ಲಿ 2(ಎಫ್ಎಫ್) ಪರಿಚ್ಛೇದವನ್ನು ಇದರಲ್ಲಿ ಸೇರಿಸಲಾಯಿತು. ಅಲ್ಲದೆ, ತಂತ್ರಜ್ಞಾನ ಸಂರಕ್ಷಣಾ ಕ್ರಮಗಳು (ಪರಿಚ್ಛೇದ 65ಎ), ಹಕ್ಕುಗಳ ನಿರ್ವಹಣಾ ಮಾಹಿತಿ (ಪರಿಚ್ಛೇದ 65ಬಿ), ಬೌದ್ಧಿಕ/ಸೃಜನಶೀಲ ಸಾಧಕರ ನೈತಿಕ ಹಕ್ಕುಗಳು (ಪರಿಚ್ಛೇದ 38ಬಿ); ಸೃಜನಶೀಲ ಪರಿಶ್ರಮಿಗಳು ವಿಶೇಷ ಹಕ್ಕುಗಳು (ಪರಿಚ್ಛೇದ 38ಎ); ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸುರಕ್ಷತೆ (ಪರಿಚ್ಛೇದ  52 (1) (ಬಿ) ಮತ್ತು (ಸಿ)) ಇವುಗಳಿಗೂ ಅವಕಾಶ ಕಲ್ಪಿಸಿ ಕೊಡಲಾಯಿತು. 

 

ವಿಪೋ ಕೃತಿಸ್ವಾಮ್ಯ ಒಡಂಬಡಿಕೆಯು 2002ರ ಮಾರ್ಚ್ 6ರಂದು ಜಾರಿಗೆ ಬಂದಿತು. ಇದಕ್ಕೆ ಇಲ್ಲಿಯವರೆಗೂ 96 ದೇಶಗಳು ಸಹಿ ಹಾಕಿವೆ. ಜತೆಗೆ ಸಾಹಿತ್ಯಕ ಮತ್ತು ಕಲಾತ್ಮಕ ಕೃತಿಗಳ ಸಂರಕ್ಷಣೆಗೆ ಬರ್ನ್ ಸಮಾವೇಶದಲ್ಲಿ ವಿಶೇಷ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಡಿಜಿಟಲ್ ಸ್ವರೂಪದಲ್ಲಿರುವ ಬೌದ್ಧಿಕ ಪರಿಶ್ರಮದ/ಸೃಜನಶೀಲ ಕೃತಿಗಳಿಗೆ ಕೂಡ ಕೃತಿಸ್ವಾಮ್ಯವನ್ನು ವಿಸ್ತರಿಸಲಿದೆ. ಇದಲ್ಲದೆ, ಅಂತರ್ಜಾಲದ ವೇದಿಕೆಗಳಲ್ಲಿರುವ ಇಂತಹ ಕೃತಿಗಳಿಗೂ ಇದು ಕೃತಿಸ್ವಾಮ್ಯವನ್ನು ನೀಡುತ್ತದೆ. 

 

ವಿಪೋ ಬೌದ್ಧಿಕ ಪರಿಶ್ರಮ ಮತ್ತು ಧ್ವನಿಲೇಖ ಒಡಂಬಡಿಕೆಯು 2002ರ ಮೇ 20ರಂದು ಜಾರಿಗೆ ಬಂದಿತು. ಈ ಒಪ್ಪಂದಕ್ಕೆ ಇದುವರೆಗೆ 96 ದೇಶಗಳು ಸಹಿ ಹಾಕಿವೆ. ಈ ಒಪ್ಪಂದವು ಡಿಜಿಟಲ್ ಪರಿಸರದಲ್ಲಿ ಮುಖ್ಯವಾಗಿ ಎರಡು ಬಗೆಯ ಸೃಜನಶೀಲ ಸಾಧಕರ ಹಕ್ಕುಗಳನ್ನು ಸಂರಕ್ಷಿಸುವ ಕಡೆಗೆ ಒತ್ತು ನೀಡಿದೆ. ಇವರೆಂದರೆ- (1) ನಟರು, ಗಾಯಕರು, ಸಂಗೀತಗಾರರು ಇತ್ಯಾದಿ. (2) ಶ್ರವ್ಯರೂಪದಲ್ಲಿ ತಮ್ಮ ಬೌದ್ಧಿಕ ಸಾಧನೆಗಳನ್ನು ಮಾಡುವವರು (ಉದಾ: ಸೌಂಡ್ ರೆಕಾರ್ಡಿಂಗ್) ಈ ಒಡಂಬಡಿಕೆಯು ಡಿಜಿಟಲ್ ಸ್ವರೂಪದ ವ್ಯವಹಾರ ಮತ್ತು ವಿತರಣೆಗಳಿಗೆ ಸಂಬಂಧಿಸಿದಂತೆ ಮೂಲಲೇಖಕರಿಗೆ ಹಕ್ಕುಗಳನ್ನು ಒದಗಿಸುತ್ತದೆ. ಅಲ್ಲದೆ, ಬೌದ್ಧಿಕ ಪರಿಶ್ರಮಿಗಳಿಗೆ ತಮ್ಮ ಕೃತಿಗಳ ಮೇಲಿರುವ ನೈತಿಕ ಹಕ್ಕುಗಳನ್ನು ಮಾನ್ಯ ಮಾಡುವ ಈ ಒಪ್ಪಂದವು, ಅವರಿಗೆ ವಿಶೇಷವಾದ ಆರ್ಥಿಕ ಹಕ್ಕುಗಳನ್ನೂ ನೀಡುತ್ತದೆ.

 

ಈ ಎರಡೂ ಒಡಂಬಡಿಕೆಗಳು ಬೌದ್ಧಿಕ/ಸೃಜನಶೀಲ ಪರಿಶ್ರಮಿಗಳಿಗೆ ಮತ್ತು ಅವುಗಳ ನಿಜವಾದ ಹಕ್ಕುದಾರರಿಗೆ ತಮ್ಮ ಕೃತಿಗಳನ್ನು ಸಂರಕ್ಷಿಸಿಕೊಳ್ಳಲು ಅಗತ್ಯವಾದ ನೆರವನ್ನು ನೀಡುತ್ತದೆ. ಅಂದರೆ, ಈ ಒಡಂಬಡಿಕೆಯು ತಾಂತ್ರಿಕ ರಕ್ಷಣಾ ಕ್ರಮಗಳ ರಕ್ಷಣೆ ಮತ್ತು ಹಕ್ಕುಗಳ ನಿರ್ವಹಣಾ ಮಾಹಿತಿಯನ್ನು ಇದು ಒದಗಿಸಲಿದೆ.  



(Release ID: 1537968) Visitor Counter : 135