ಪ್ರಧಾನ ಮಂತ್ರಿಯವರ ಕಛೇರಿ

ಸಂತ ಕಬೀರ ನಗರದಲ್ಲಿ ಶ್ರೇಷ್ಠ ಕವಿ, ಸಂತ ಕಬೀರರಿಗೆ ನಮನ ಸಲ್ಲಿಸಿದ ಪ್ರಧಾನಿ

Posted On: 28 JUN 2018 1:00PM by PIB Bengaluru

ಸಂತ ಕಬೀರ ನಗರದಲ್ಲಿ ಶ್ರೇಷ್ಠ ಕವಿ, ಸಂತ ಕಬೀರರಿಗೆ ನಮನ ಸಲ್ಲಿಸಿದ ಪ್ರಧಾನಿ 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಸಂತ ಕಬೀರ ನಗರ ಜಿಲ್ಲೆಯ ಮಘಾರ್ ಗೆ ಭೇಟಿ ನೀಡಿದ್ದರು. 

 

ಅವರು ಶ್ರೇಷ್ಠ ಸಂತ, ಕವಿ ಕಬೀರ ಅವರ 500ನೇ ಪುಣ್ಯತಿಥಿ ಅಂಗವಾಗಿ ಸಂತ ಕಬೀರರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಅವರು ಸಂತ ಕಬೀರ ಮಸೀದಿಗೆ ಚಾದರ ಅರ್ಪಿಸಿದರು. ಪ್ರಧಾನಿ ಅವರು ಸಂತ ಕಬೀರರ ಗುಹೆಗೆ ಭೇಟಿ ನೀಡಿ, ಶ್ರೇಷ್ಠ ಸಂತರ ಬೋಧನೆ ಮತ್ತು ಚಿಂತನೆಗಳನ್ನು ಬಿಂಬಿಸಲು ನಿರ್ಮಿಸಲಿರುವ ಸಂತ ಕಬೀರ ಅಕಾಡೆಮಿಗೆ ಶಂಕುಸ್ಥಾಪನೆ ನೆರವೇರಿಸಿ, ಫಲಕ ಅನಾವರಣಗೊಳಿಸಿದರು.

 

ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂತ ಕಬೀರರಿಗೆ ನಮನ ಸಲ್ಲಿಸಬೇಕೆಂಬ ತಮ್ಮ ಬಹು ವರ್ಷಗಳ ಬಯಕೆ ಇಂದು ಈಡೇರಿದೆ, ಈ ಪವಿತ್ರ ನೆಲ ಮಘರ್ ನಲ್ಲಿ ಶ್ರೇಷ್ಠ ಸಂತರಾದ ಕಬೀರರು, ಗುರುನಾನಕ್ ಮತ್ತು ಬಾಬಾ ಗೋರಖ್ ನಾಥ್ ಅವರು, ಆಧ್ಯಾತ್ಮಿಕ ಅನುಸಂಧಾನದಲ್ಲಿ ತೊಡಗಿದ್ದರು ಎಂದರು.

 

ಸಂತ ಕಬೀರ ಅಕಾಡೆಮಿಯನ್ನು ಸುಮಾರು 24 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಅದು ಸಂತ ಕಬೀರರ ಗತವೈಭವವನ್ನು ಸಂರಕ್ಷಿಸುವ ಕೇಂದ್ರವಾಗಲಿದೆ. ಜತೆಗೆ ಪ್ರಾದೇಶಿಕ ನುಡಿಗಟ್ಟು ಮತ್ತು ಉತ್ತರ ಪ್ರದೇಶದ ಜಾನಪದ ಕಲೆಯನ್ನು ರಕ್ಷಿಸುವ ಕೇಂದ್ರವಾಗಲಿದೆ ಎಂದರು.

 

ಸಂತ ಕಬೀರರು ಭಾರತದ ಆತ್ಮದ ಮೂಲತತ್ವವನ್ನು ಪ್ರತಿನಿಧಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಜಾತಿಯ ಎಲ್ಲ ಅಡತಡೆಗಳನ್ನು ಮುರಿದಿದ್ದ ಕಬೀರರು ಗ್ರಾಮೀಣ ಭಾರತೀಯರು ಮಾತನಾಡುತ್ತಿದ್ದಂತಹ ಸಾಮಾನ್ಯ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದರು.

 

ಭಾರತದ ನಾನಾ ಭಾಗಗಳಲ್ಲಿ ಕಾಲಕಾಲಕ್ಕೆ ಹಲವು ಸಂತರುಗಳು ಹುಟ್ಟಿದ್ದಾರೆ ಮತ್ತು ಅವರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತ, ಸಾಮಾಜಿಕ ಅನಿಷ್ಠಗಳನ್ನು ಅಥವಾ ಪಿಡುಗುಗಳನ್ನು ತೊಡೆದುಹಾಕಲು ಶ್ರಮಿಸಿದ್ದಾರೆ ಎಂದರು.

 

ಭಾರತದ ಹಲವು ಭಾಗಗಳಲ್ಲಿನ ಅಂತಹ ಶ್ರೇಷ್ಠ ಸಂತರುಗಳ ಹೆಸರುಗಳನ್ನು ಉಲ್ಲೇಖಿಸಿದ ಪ್ರಧಾನಿ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ, ಅಂಬೇಡ್ಕರ್ ಸಂವಿಧಾನದ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು ತಂದುಕೊಟ್ಟರು ಎಂದು ಹೇಳಿದರು.

 

ರಾಜಕೀಯ ಅವಕಾಶವಾದಿತನದ ಬಗ್ಗೆ ಕಠಿಣ ಹೇಳಿಕೆಯನ್ನು ನೀಡಿದ ಪ್ರಧಾನಿ ಅವರು, ಸಂತ ಕಬೀರರ ಬೋಧನೆಗಳಲ್ಲಿರುವಂತೆ ಒಬ್ಬ ಆದರ್ಶ ಆಡಳಿತಗಾರನೆಂದರೆ ಆತ ಜನರ ಭಾವನೆ ಮತ್ತು ನೋವುಗಳನ್ನು ಅರ್ಥಮಾಡಿಕೊಳ್ಳುವವ ಎಂಬುದಾಗಿದೆ. ಜನರ ನಡುವೆ ತಾರತಮ್ಯ ಮಾಡುತ್ತಿದ್ದ ಎಲ್ಲ ಸಾಮಾಜಿಕ ವ್ಯವಸ್ಥೆಗಳನ್ನು ಸಂತ ಕಬೀರರು ಕಟುವಾಗಿ ಟೀಕಿಸಿದ್ದರು ಎಂದು ಪ್ರಧಾನಿ ಹೇಳಿದರು. ಆ ನಿಟ್ಟಿನಲ್ಲಿ ಸಮಾಜದ ಬಡವರು ಮತ್ತು ದುರ್ಬಲ ವರ್ಗದವರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಜನ್-ಧನ್, ಉಜ್ವಲ ಯೋಜನೆ, ವಿಮಾ ಯೋಜನೆ, ಶೌಚಾಲಯಗಳ ನಿರ್ಮಾಣ ಮತ್ತು ನೇರ ನಗದು ವರ್ಗಾವಣೆ ಮತ್ತಿತರ ಹಲವು ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.  ರಸ್ತೆ, ರೈಲ್ವೆ, ಆಪ್ಟಿಕಲ್ ಫೈಬರ್ ಜಾಲ ಮತ್ತಿತರ ಮೂಲಸೌಕರ್ಯ ವಲಯಗಳಲ್ಲಿ ವೇಗದ ಪ್ರಗತಿ ಹೆಚ್ಚಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಅಭಿವೃದ್ಧಿಯ ಫಲ ದೇಶದ ಎಲ್ಲ ಭಾಗಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ಹೇಳಿದರು.

 

ಸಂತ ಕಬೀರರ ಬೋಧನೆಗಳು ನವಭಾರತ ನಿರ್ಮಾಣದ ಮುನ್ನೋಟ ರೂಪಿಸಲು ನಮಗೆ ಸಹಾಯಕವಾಗಲಿವೆ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು. 

 

 

 

************************


(Release ID: 1537172) Visitor Counter : 158