ಪ್ರಧಾನ ಮಂತ್ರಿಯವರ ಕಛೇರಿ

49 ನೇ ರಾಜ್ಯಪಾಲರ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 04 JUN 2018 1:20PM by PIB Bengaluru

49 ನೇ ರಾಜ್ಯಪಾಲರ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಏರ್ಪಟ್ಟ ರಾಜ್ಯಪಾಲರುಗಳ 49 ನೇ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾಷಣ ಮಾಡಿದರು.

ರಾಜ್ಯಪಾಲರು ತಮ್ಮ ಜೀವನದ ವಿವಿಧ ಹಂತಗಳ ಅನುಭವದ ಲಾಭಗಳನ್ನು ಹೇಗೆ ಸಾರ್ವಜನಿಕ ಜೀವನದಲ್ಲಿ ಬಳಸಿಕೊಳ್ಳಬಹುದೆಂಬ ಬಗ್ಗೆ ಅವರು ವಿಸ್ತಾರವಾಗಿ ಮಾತನಾಡಿದರು. ಇದರಿಂದಾಗಿ ಜನರಿಗೆ ವಿವಿಧ ಕೇಂದ್ರೀಯ ಯೋಜನೆಗಳು ಮತ್ತು ಉಪಕ್ರಮಗಳ ಗರಿಷ್ಟ ಲಾಭ ಪಡೆಯುವುದು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಗಳು ನಮ್ಮ ದೇಶದ ಸಾಂವಿಧಾನಿಕ ಚೌಕಟ್ಟಿನಲ್ಲಿ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರೆಂಬ ಸಂಸ್ಥೆಗೆ ಮುಖ್ಯ ಪಾತ್ರ ವಿದೆ ಎಂದರು.

ಬುಡಕಟ್ಟು ಜನರ ಸಂಖ್ಯೆ ಹೆಚ್ಚು ಪ್ರಮಾಣದಲ್ಲಿ ಇರುವ ರಾಜ್ಯಗಳ ರಾಜ್ಯಪಾಲರು ಆ ಬುಡಕಟ್ಟು ಜನತೆ ಶಿಕ್ಷಣ, ಕ್ರೀಡೆ, ಮತ್ತು ಹಣಕಾಸು ಸೇರ್ಪಡೆಯಂತಹ ಸರಕಾರಿ ಉಪಕ್ರಮಗಳ ಪ್ರಯೋಜನ ಪಡೆಯುವುದನ್ನು ಖಾತ್ರಿಪಡಿಸಬಹುದು ಎಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನತೆ ಪ್ರಮುಖ ಪಾತ್ರ ವಹಿಸಿದ್ದಾರೆ , ಇದನ್ನು ಗುರುತಿಸಬೇಕು ಮತ್ತು ಇದನ್ನು ಡಿಜಿಟಲ್ ವಸ್ತು ಸಂಗ್ರಹಾಲಯಗಳ ಮೂಲಕ ಭವಿಷ್ಯತ್ತಿಗೆ ದಾಖಲಿಸಿಡಬೇಕು ಎಂದವರು ಹೇಳಿದರು.

ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿಗಳು , ಜೂನ್ 21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಕಾರ್ಯಕ್ರಮವನ್ನು ಯುವಕರಲ್ಲಿ ಯೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಬಳಸಿಕೊಳ್ಳಬಹುದು ಎಂದರು. ಅದೇ ರೀತಿ ಮಹಾತ್ಮಾ ಗಾಂಧೀಜಿಯವರ ೧೫೦ ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮಗಳಲ್ಲಿ ವಿಶ್ವವಿದ್ಯಾಲಯಗಳು ಮುಖ್ಯ ಬಿಂದುಗಳಾಗುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. 

ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಪೋಷಣೆ ಕಾರ್ಯಕ್ರಮ, ಗ್ರಾಮಗಳ ವಿದ್ಯುದ್ದೀಕರಣ ಮತ್ತು ಅಭಿವೃದ್ಧಿ ಆಶಯದ ಜಿಲ್ಲೆಗಳ ಅಭಿವೃದ್ಧಿಯ ಮಾನದಂಡಗಳು ಸೇರಿದಂತೆ ಸರಕಾರದ ಪ್ರಮುಖ ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾಪಿಸಿದರು. ರಾಜ್ಯಪಾಲರು ಇತ್ತೀಚೆಗೆ ವಿದ್ಯುದ್ದೀಕರಣಗೊಂಡ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯುದ್ದೀಕರಣದ ಲಾಭಗಳನ್ನು ಸಾಕ್ಷೀಕರಿಸಿಕೊಳ್ಳಬಹುದು ಎಂದವರು ರಾಜ್ಯಪಾಲರಿಗೆ ಸಲಹೆ ಮಾಡಿದರು. 

ಇತ್ತೀಚೆಗೆ ಏಪ್ರಿಲ್ 14 ರಿಂದ ನಡೆದ ಗ್ರಾಮ ಸ್ವರಾಜ್ ಅಭಿಯಾನದಲ್ಲಿ 16,000 ಕ್ಕೂ ಅಧಿಕ ಗ್ರಾಮಗಳಲ್ಲಿ ಸರಕಾರದ 7 ಪ್ರಮುಖ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಟಾನಿಸಲಾಗಿದೆ. ಜನ್ ಭಾಗೀದಾರಿ ಮೂಲಕ ಈ ಗ್ರಾಮಗಳನ್ನು 7 ಸಮಸ್ಯೆಗಳಿಂದ ಮುಕ್ತ ಮಾಡಲಾಗಿದೆ ಎಂದವರು ಹೇಳಿದರು. ಗ್ರಾಮ ಸ್ವರಾಜ್ ಅಭಿಯಾನವನ್ನು ಈಗ ಇನ್ನೂ 65,000 ಗ್ರಾಮಗಳಿಗೆ ವಿಸ್ತರಿಸಲಾಗಿದ್ದು, ಆಗಸ್ಟ್ 15 ನ್ನು ಕಾಲಮಿತಿಯಾಗಿ ನಿಗದಿ ಮಾಡಲಾಗಿದೆ ಎಂದವರು ನುಡಿದರು.

ಮುಂದಿನ ವರ್ಷದ 50 ನೇ ರಾಜ್ಯಪಾಲರ ಸಮ್ಮೇಳನಕ್ಕೆ ಯೋಜನೆ ತಕ್ಷಣವೇ ಆರಂಭಗೊಳ್ಳಬೇಕು ಎಂದವರು ಸಲಹೆ ಮಾಡಿದರು. ಈ ವಾರ್ಷಿಕ ಕಾರ್ಯಕ್ರಮವನ್ನು ಹೆಚ್ಚು ಪ್ರಯೋಜನಕಾರಿಯಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.
 

****



(Release ID: 1535157) Visitor Counter : 91