ಪ್ರಧಾನ ಮಂತ್ರಿಯವರ ಕಛೇರಿ

ವಿವಿಧ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳ ಫಲಾನುಭವಿಗಳ ಜೊತೆಗೆ ಪ್ರಧಾನಿ ಅವರಿಂದವಿಡಿಯೋ ಸಂಪರ್ಕದ ಮೂಲಕ ಮುಖಾಮುಖಿ

Posted On: 07 JUN 2018 12:51PM by PIB Bengaluru

ವಿವಿಧ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳ ಫಲಾನುಭವಿಗಳ ಜೊತೆಗೆ ಪ್ರಧಾನಿ ಅವರಿಂದವಿಡಿಯೋ ಸಂಪರ್ಕದ ಮೂಲಕ ಮುಖಾಮುಖಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ಕೇಂದ್ರ ಸರ್ಕಾರದ ಇನ್ನಿತರ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳ ಫಲಾನುಭವಿಗಳ ಜತೆಗೆ ವಿಡಿಯೋ ಸೇತು ಮೂಲಕ ಮಾತುಕತೆ ನಡೆಸಿದರು. ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳ ಜೊತೆಗೆ ಪ್ರಧಾನಿ ಅವರು ವಿಡಿಯೋ ಸೇತು ಮೂಲಕ ನಡೆಸಿದ ಮಾತುಕತೆ ಸರಣಿಯ ಐದನೇ ಮುಖಾಮುಖಿ ಇದಾಗಿತ್ತು.  

ಆರೋಗ್ಯ ರಕ್ಷಣೆ ಮತ್ತು ಯೋಗಕ್ಷೇಮದ ಪ್ರಾಮುಖ್ಯತೆಯನ್ನು ವಿವರಿಸಿದ ಪ್ರಧಾನಿ ಮೋದಿ ಅವರು, ಯಶಸ್ಸು ಮತ್ತು ಸಮೃದ್ಧಿಗೆ ಆರೋಗ್ಯವೇ ಮೂಲಾಧಾರ. ಭಾರತದ 125 ಕೋಟಿ ಪ್ರಜೆಗಳು ಆರೋಗ್ಯವಾಗಿದ್ದಾಗ ಮಾತ್ರ ದೇಶವು ಮಹಾನ್ ಹಾಗೂ ಆರೋಗ್ಯವಂತ ದೇಶವಾಗಲಿದೆ ಎಂದರು.

 

ಫಲಾನುಭವಿಗಳ ಜೊತೆಗೆ ಮಾತುಕತೆ ನಡೆಸಿದ ಅವರು, ಅನಾರೋಗ್ಯವು ಕುಟುಂಬಗಳು, ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದವರ ಮೇಲೆ, ಭಾರಿ ಎನ್ನಬಹುದಾದ ಆರ್ಥಿಕ ಹೊರೆಯನ್ನು ಹೊರಿಸುವುದಲ್ಲದೆ, ದೇಶದ ಸಾಮಾಜಿಕ-ಆರ್ಥಿಕ ಕ್ಷೇತ್ರದ ಮೇಲೆಯೂ ಪರಿಣಾಮ ಬೀರುತ್ತದೆ. ಆದ್ದರಿಂದ, ಸರ್ಕಾರವು ದೇಶದ ಎಲ್ಲ ನಾಗರಿಕರಿಗೆ ಕೈಗೆಟಕಬಹುದಾದ ವೆಚ್ಚದಲ್ಲಿ ಆರೋಗ್ಯ ರಕ್ಷಣೆಯನ್ನು ನೀಡಲು ಪ್ರಯತ್ನಿಸುತ್ತಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು ಇದೇ ಉದ್ದೇಶದಿಂದ ಆರಂಭಿಸಲಾಗಿದೆ. ಬಡವರು, ಕೆಳ ಮಧ್ಯಮ ವರ್ಗದ ಜನರಿಗೆ ಔಷಧಗಳು ಸುಲಭ ದರದಲ್ಲಿ ದೊರೆಯುವಂತಾಗಿ, ಅವರ ಮೇಲಿನ ಆರ್ಥಿಕ ಹೊರೆಯು ಕಡಿಮೆಯಾಗಲಿ ಎನ್ನುವುದು ಯೋಜನೆಯ ಉದ್ದೇಶ ಎಂದರು.

 

ದೇಶದೆಲ್ಲೆಡೆ 3,600ಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಇಲ್ಲಿ 700ಕ್ಕೂ ಅಧಿಕ ಜನರಿಕ್ ಔಷಧಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿವೆ. ಮಾರುಕಟ್ಟೆ ದರಕ್ಕೆ ಹೋಲಿಸಿದರೆ, ಜನೌಷಧಿ ಕೇಂದ್ರಗಳಲ್ಲಿ ಔಷಧದ ಬೆಲೆ ಶೇ. 50-90 ರಷ್ಟು ಕಡಿಮೆ ಇದೆ. ಭವಿಷ್ಯದಲ್ಲಿ ಇನ್ನಷ್ಟು ಜನೌಷಧಿ ಕೇಂದ್ರಗಳನ್ನು ತೆರೆದು, ಅವುಗಳ ಸಂಖ್ಯೆಯನ್ನು 5,000ಕ್ಕೆ ಹೆಚ್ಚಿಸಲಾಗುವುದು ಎಂದರು.

 

ಸ್ಟೆಂಟ್‍ಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ಈ ಮೊದಲು ಆರೋಗ್ಯಕರ ಸ್ಟೆಂಟ್‍ಗಳನ್ನು ಖರೀದಿಸಲು ಆಸ್ತಿಯನ್ನು ಅಡವಿಡಬೇಕಿತ್ತು ಇಲ್ಲವೇ ಮಾರಾಟ ಮಾಡಬೇಕಿತ್ತು. ಬಡವರು ಹಾಗೂ ಮಧ್ಯಮ ವರ್ಗದವರಿಗೆ ನೆರವಾಗಲು ಸರ್ಕಾರವು ಸ್ಟೆಂಟ್‍ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಹೃದಯ ಸ್ಟೆಂಟ್‍ಗಳ ಬೆಲೆ 2 ಲಕ್ಷ ರೂ.ನಿಂದ 29,000 ರೂ.ಗೆ ಕಡಿಮೆಯಾಗಿದೆ ಎಂದರು.

 

ಮಾತುಕತೆ ವೇಳೆ ಪ್ರಧಾನಿ ಅವರು, ಮಂಡಿ ಚಿಪ್ಪಿನ ಕಸಿ(ಟ್ರಾನ್ಸ್‍ಪ್ಲಾಂಟ್) ಬೆಲೆಯನ್ನು ಸರ್ಕಾರವು ಶೇ 60-70ರಷ್ಟು ಇಳಿಸಿದ್ದು, 2.5 ಲಕ್ಷ ರೂ ಇದ್ದ ಬೆಲೆ 70,000-80,000 ರೂ.ಗೆ ಕಡಿಮೆ ಯಾಗಿದೆ. ಭಾರತದಲ್ಲಿ ಪ್ರತಿ ವರ್ಷ ಒಂದರಿಂದ 1.5 ಲಕ್ಷ ಮಂಡಿ ಚಿಪ್ಪು ಬದಲು ಶಸ್ತ್ರಚಿಕಿತ್ಸೆ ನಡೆಯುತ್ತದೆ. ಮಂಡಿ ಚಿಪ್ಪು ಕಸಿ ಬೆಲೆ ಕಡಿಮೆಯಾದ್ದರಿಂದ, ಸಾರ್ವಜನಿಕರಿಗೆ ಅಂದಾಜು 1,500 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದರು.

 

ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ ಮೂಲಕ ದೇಶದ 500ಕ್ಕೂ ಹೆಚ್ಚು ಜಿಲ್ಲೆಗಳ 2.25 ಲಕ್ಷ ರೋಗಿಗಳಿಗೆ 22 ಲಕ್ಷಕ್ಕೂ ಅಧಿಕ ಡಯಾಲಿಸಿಸ್ ಮಾಡಲಾಗಿದೆ. ಮಿಷನ್ ಇಂದ್ರಧನುಷ್ ಮುಖಾಂತರ 528 ಜಿಲ್ಲೆಗಳ 3.15 ಕೋಟಿ ಮಕ್ಕಳು ಹಾಗೂ 80 ಲಕ್ಷ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ. ಹೆಚ್ಚು ಆಸ್ಪತ್ರೆ, ಅಧಿಕ ವೈದ್ಯರು ಹಾಗೂ ಹೆಚ್ಚು ಹಾಸಿಗೆಗಳನ್ನು ಒದಗಿಸಲು ಸರ್ಕಾರವು 92 ವೈದ್ಯಕೀಯ ಕಾಲೇಜುಗಳನ್ನು ತೆರೆದಿದ್ದು, ಹೆಚ್ಚುವರಿ 15,000 ಎಂಬಿಬಿಎಸ್ ಸೀಟ್‍ಗಳನ್ನು ಸೃಷ್ಟಿಸಿದೆ ಎಂದು ವಿವರಿಸಿದರು.

ಜನರಿಗೆ ಆರೋಗ್ಯ ಸೇವೆ ಕಡಿಮೆ ದರದಲ್ಲಿ ಹಾಗೂ ಕೈ ಗೆಟಕುವಂತೆ ಮಾಡಲು, ಸರ್ಕಾರವು ಆಯುಷ್ಮಾನ್ ಭಾರತ ಕಾರ್ಯಕ್ರಮವನ್ನು ಆರಂಭಿಸಿದೆ. ಆಯುಷ್ಮಾನ್ ಭಾರತ ಕಾರ್ಯಕ್ರಮದಡಿ, 10 ಕೋಟಿ ಕುಟುಂಬಗಳಿಗೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸಲಾಗುತ್ತದೆ ಎಂದರು. "ಸ್ವಚ್ಛ ಭಾರತ ಆಂದೋಲನ'ದ ಕುರಿತು ಮಾತಬಾಡಿ, ಆರೋಗ್ಯವಂತ ಭಾರತದ ನಿರ್ಮಾಣದಲ್ಲಿ ಈ ಯೋಜನೆಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನದಿಂದಾಗಿ ದೇಶದಲ್ಲಿ 3.5 ಲಕ್ಷ ಹಳ್ಳಿಗಳು ಬಯಲು ಶೌಚಾಲಯಮುಕ್ತವಾಗಿದ್ದು, ಶೌಚಾಲಯಗಳ ವ್ಯಾಪ್ತಿ  ಶೇ.38 ರಷ್ಟು ಹೆಚ್ಚಿದೆ ಎಂದರು. 

ಪ್ರಧಾನಿ ಅವರೊಂದಿಗೆ ಸಂವಾದ ನಡೆಸಿದ ಫಲಾನುಭವಿಗಳು, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯಿಂದ ಔಷಧಗಳ ಬೆಲೆ ಕುಸಿತವಾಗಿದೆ ಮತ್ತು ಸುಲಭವಾಗಿ ಲಭ್ಯವಾಗುತ್ತಿದೆ ಎಂದರು. ಹೃದಯದ ಸ್ಟೆಂಟ್‍ಗಳು ಹಾಗೂ ಮಂಡಿ ಚಿಪ್ಪಿನ ಬೆಲೆ ಕುಸಿತವಾಗಿದ್ದರಿಂದ, ತಮ್ಮ ಬದುಕು ಹೇಗೆ ಬದಲಾಗಿದೆ ಎಂದು ವಿವರಿಸಿದರು.

 

ದೇಶದ ಎಲ್ಲ ಜನರೂ ಯೋಗವನ್ನು ತಮ್ಮ ದೈನಂದಿನ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಬೇಕು ಹಾಗೂ ಆ ಮೂಲಕ ಆರೋಗ್ಯವಂತ ದೇಶದ ನಿರ್ಮಾಣದಲ್ಲಿ ನೆರವಾಗಬೇಕು ಎಂದು ಪ್ರಧಾನಿ ಮನವಿ ಮಾಡಿದರು. 



(Release ID: 1535150) Visitor Counter : 84