ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಮತ್ತು ರಷ್ಯಾ ನಡುವೆ ಅನೌಪಚಾರಿಕ ಶೃಂಗಸಭೆ

Posted On: 21 MAY 2018 10:16PM by PIB Bengaluru

ಭಾರತ ಮತ್ತು ರಷ್ಯಾ ನಡುವೆ ಅನೌಪಚಾರಿಕ ಶೃಂಗಸಭೆ 
 

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡುವೆ ರಷ್ಯಾ ಒಕ್ಕೂಟದ ಸೂಚಿ ಪಟ್ಟಣದಲ್ಲಿ 2018ರ ಮೇ 21ರಂದು ಮೊದಲ ಅನೌಪಚಾರಿಕ ಶೃಂಗಸಭೆ ನಡೆಯಿತು. ಈ ಶೃಂಗಸಭೆ ಉಭಯ ನಾಯಕರ ಸ್ನೇಹ ಸಂಬಂಧ ಗಟ್ಟಿಗೊಳಿಸಲು ಮತ್ತು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ ಭಾರತ ಮತ್ತು ರಷ್ಯಾ ನಡುವಿನ ಉನ್ನತ ಮಟ್ಟದ ರಾಜಕೀಯ ವಿನಿಮಯ ಪರಂಪರೆ ಮುಂದುವರಿಸಲು ಸಹಕಾರಿಯಾಯಿತು. 

ಜಾಗತಿಕ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತ ಮತ್ತು ರಷ್ಯಾ ನಡುವೆ ವಿಶೇಷ ಮತ್ತು ಕಾರ್ಯತಂತ್ರ ಪಾಲುದಾರಿಕೆಗೆ ಉಭಯ ನಾಯಕರು ಸಮ್ಮತಿ ಸೂಚಿಸಿದರು. ಜಾಗತಿಕ ಸಮಾನತೆ ಮತ್ತು ಮುಕ್ತ ಅವಕಾಶಗಳು ಪ್ರಮುಖ ಪಾತ್ರವಹಿಸಲಿವೆ ಎಂಬ ಬಗ್ಗೆ ಭಾರತ ಮತ್ತು ರಷ್ಯಾದ ಅಭಿಪ್ರಾಯಗಳನ್ನು ಉಭಯ ನಾಯಕರು ವಿನಿಮಯ ಮಾಡಿಕೊಂಡರು. ಈ ನಿಟ್ಟಿನಲ್ಲಿ ಜಾಗತಿಕ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಪ್ರಮುಖ ಶಕ್ತಿಗಳಾಗಿರುವ ಉಭಯ ರಾಷ್ಟ್ರಗಳ ಪಾತ್ರಗಳು ಮತ್ತು ಸಮಾನ ಹೊಣೆಗಾರಿಕೆಗಳ ಬಗ್ಗೆ ಚರ್ಚಿಸಲಾಯಿತು. 

ಉಭಯ ನಾಯಕರು ಹಲವು ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳ ಕುರಿತಂತೆ ತುಂಬಾ ಆಳವಾಗಿ ಸಮಾಲೋಚನೆ ನಡೆಸಿದರು. ಜಾಗತಿಕ ವ್ಯವಸ್ಥೆ ನಿರ್ಮಾಣದ ಅಗತ್ಯತೆಯನ್ನು ಇಬ್ಬರು ನಾಯಕರು ಒಪ್ಪಿದರು. ಭಾರತ-ಫೆಸಿಫಿಕ್ ಪ್ರಾಂತ್ಯ ಸೇರಿದಂತೆ ಇಬ್ಬರಿಗೂ ಸೇರಿದ ಪ್ರದೇಶಗಳಲ್ಲಿನ ವಿಷಯಗಳ ಕುರಿತು ಸಮನ್ವಯತೆ ಮತ್ತು ಸಮಾಲೋಚನೆಗಳನ್ನು ತೀವ್ರಗೊಳಿಸಲು ಉಭಯ ನಾಯಕರು ನಿರ್ಧರಿಸಿದರು. ವಿಶ್ವಸಂಸ್ಥೆ, ಎಸ್ ಸಿ ಒ ಬ್ರಿಕ್ಸ್ ಮತ್ತು ಜಿ-20 ಸಂಸ್ಥೆಗಳೂ ಸೇರಿದಂತೆ ಬಹು ಹಂತದ ಸಂಸ್ಥೆಗಳ ಮೂಲಕ ಜತೆಯಾಗಿ ಕೆಲಸ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಪ್ಪಿಗೆ ಸೂಚಿಸಿದರು. 

ಭಯೋತ್ಪಾದನೆ ಮತ್ತು ಬಂಡುಕೋರರ ಹಾವಳಿ ಬಗ್ಗೆ ಉಭಯ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಎಲ್ಲ ಬಗೆಯ ಮತ್ತು ಎಲ್ಲ ರೂಪದಲ್ಲಿರುವ ಭಯೋತ್ಪಾದನೆಯನ್ನು ನಿಗ್ರಹಿಸಲು ತಮ್ಮ ಬದ್ಧತೆಗಳನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರು ಸ್ಥಾಪಿಸುವ ಅಗತ್ಯತೆಯನ್ನು ಉಭಯ ನಾಯಕರು ಪ್ರತಿಪಾದಿಸಿ, ಅಫ್ಘಾನಿಸ್ತಾನವನ್ನು ಭಯೋತ್ಪಾದನೆ, ಬೆದರಿಕೆಯಿಂದ ಮುಕ್ತಗೊಳಿಸುವ ಗುರಿ ಸಾಧನೆಗೆ ಒಗ್ಗೂಡಿ ಕೆಲಸ ಮಾಡಲು ನಿರ್ಧರಿಸಿದರು. 

ಉಭಯ ನಾಯಕರು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳು ಮತ್ತು ಆದ್ಯತೆಗಳ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ವಿಸ್ತೃತವಾಗಿ ಪರಸ್ಪರ ವಿನಿಮಯ ಮಾಡಿಕೊಂಡರು. ಭಾರತ ಮತ್ತು ರಷ್ಯಾ ಸಂಬಂಧಗಳಲ್ಲಿ ಕಾಣಬಹುದಾದ ಸದಾಭಿಪ್ರಾಯ, ಪರಸ್ಪರ ಗೌರವಿಸುವುದು ಮತ್ತು ವಿಶ್ವಾಸದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಕಳೆದ 2017ರ ಜೂನ್ ನಲ್ಲಿ ಸೆಂಟ್ ಫೀಟರ್ಸ್ ಬರ್ಗ್ ನಲ್ಲಿ ದ್ವಿಪಕ್ಷೀಯ ಶೃಂಗಸಭೆಯ ನಂತರ ಸಕಾರಾತ್ಮಕ ಬೆಳವಣಿಗೆಗಳು ಆಗಿರುವ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಶೃಂಗಸಭೆಯ ಫಲಿತಾಂಶಗಳ ಕುರಿತು ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಶೃಂಗಸಭೆ ವೇಳೆಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ನಡುವೆ ಹೆಚ್ಚಿನ ಸಮನ್ವಯತೆ ಸಾಧಿಸಲು ಭಾರತದ ನೀತಿ ಆಯೋಗದ ಮತ್ತು ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಜತೆ ಕಾರ್ಯತಂತ್ರ ಆರ್ಥಿಕ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಲು ಉಭಯ ನಾಯಕರು ಒಪ್ಪಿದರು. ಇಂಧನ ವಲಯದಲ್ಲಿ ಸಹಕಾರ ವಿಸ್ತರಣೆಯಾಗುತ್ತಿರುವ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿ, ಮುಂದಿನ ತಿಂಗಳು ಗಾಜ್ ಪ್ರಾಮ್ ಮತ್ತು ಜಿಎಐಎಲ್ ನಡುವೆ ದೀರ್ಘಕಾಲದ ಒಪ್ಪಂದದ ಅನ್ವಯ ಎಲ್ ಎನ್ ಜಿ ಅನಿಲ ಪೂರೈಕೆ ಆರಂಭವಾಗುತ್ತಿರುವುದನ್ನು ಸ್ವಾಗತಿಸಿದರು. ಉಭಯ ನಾಯಕರು ಮಿಲಿಟರಿ, ಭದ್ರತೆ ಮತ್ತು ಅಣು ಇಂಧನ ವಲಯಗಳಲ್ಲಿ ದೀರ್ಘಕಾಲೀನ ಸಹಭಾಗಿತ್ವದ ಅಗತ್ಯತೆಯನ್ನು ಪ್ರತಿಪಾದಿಸಿ, ಈ ವಲಯಗಳಲ್ಲಿ ಪ್ರಸ್ತುತ ಪರಸ್ಪರ ಸಹಕಾರ ನೀಡುತ್ತಿರುವುದನ್ನು ಸ್ವಾಗತಿಸಿದರು. 

ಎರಡೂ ದೇಶಗಳ ನಡುವೆ ವಾರ್ಷಿಕ ಶೃಂಗಸಭೆಗಳ ಜತೆಗೆ ನಾಯಕರ ಮಟ್ಟದಲ್ಲಿ ಹೆಚ್ಚುವರಿಯಾಗಿ ಅನೌಪಚಾರಿಕ ಶೃಂಗಸಭೆಗಳನ್ನು ನಡೆಸುವ ಪ್ರಸ್ತಾವವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ 19ನೇ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆಮಂತ್ರಣ ನೀಡಿದರು. 



(Release ID: 1533266) Visitor Counter : 128