ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ – 43 ನೇ ಭಾಷಣದ ಕನ್ನಡ ಅವತರಣಿಕೆ

Posted On: 29 APR 2018 11:42AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ – 43 ನೇ ಭಾಷಣದ ಕನ್ನಡ ಅವತರಣಿಕೆ

 

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇತ್ತೀಚೆಗೆ ಏಪ್ರಿಲ್ 4 ರಿಂದ ಏಪ್ರಿಲ್ 15 ರ ವರೆಗೆ ಆಸ್ಟ್ರೇಲಿಯಾದಲ್ಲಿ 21 ನೇ ಕಾಮನ್ ವೆಲ್ತ್ ಕ್ರೀಡೆಗಳು ಅಯೋಜನೆಗೊಂಡಿತ್ತು. ಭಾರತವೂ ಸೇರಿದಂತೆ ಜಗತ್ತಿನ 71 ರಾಷ್ಟ್ರಗಳು ಇದರಲ್ಲಿ ಭಾಗವಹಿಸಿದ್ದವು. ಇಷ್ಟೊಂದು ದೊಡ್ಡ ಆಯೋಜನೆ, ವಿಶ್ವದೆಲ್ಲೆಡೆಯಿಂದ ಆಗಮಿಸಿದ ಸಾವಿರಾರು ಕ್ರೀಡಾಪಟುಗಳ ಭಾಗವಹಿಸುವಿಕೆ – ಅಲ್ಲಿ ಎಂತಹ ವಾತಾವರಣ ಇದ್ದಿರಬಹುದು ಎಂದು ಊಹಿಸಿಕೊಳ್ಳಬಲ್ಲಿರಾ? ಹುಮ್ಮಸ್ಸು, ಆತ್ಮವಿಶ್ವಾಸ, ಉತ್ಸಾಹ, ಆಸೆ, ಆಕಾಂಕ್ಷೆ, ಏನಾದರೂ ಮಾಡಿ ತೋರಿಸಬೇಕೆಂಬ ಸಂಕಲ್ಪ – ಈ ರೀತಿಯ ವಾತಾವರಣ ಇದ್ದಾಗ ಯಾರು ತಾನೇ ಇದರಿಂದ ದೂರ ಇರಲು ಸಾಧ್ಯ? ಇದು ಎಂತಹ ಸಮಯವಾಗಿತ್ತೆಂದರೆ ದೇಶದೆಲ್ಲೆಡೆ ಜನರು ‘ಇಂದು ಯಾವ ಯಾವ ಕ್ರೀಡಾಪಟುಗಳು ಪ್ರದರ್ಶನ ನೀಡುತ್ತಾರೆ? ಭಾರತದ ಆಟಗಾರರ ಪ್ರದರ್ಶನ ಹೇಗಿರಬಹುದು? ನಾವು ಎಷ್ಟು ಪದಕಗಳನ್ನು ಗೆಲ್ಲುತ್ತೇವೆ? ಎಂದು ಪ್ರತಿದಿನ ಯೋಚಿಸುತ್ತಿದ್ದರು. ಇದು ಬಹಳ ಸ್ವಾಭಾವಿಕವಾಗಿಯೂ ಇತ್ತು. ನಮ್ಮ ಕ್ರೀಡಾಪಟುಗಳು ಸಹ ದೇಶವಾಸಿಗಳ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಉತ್ತಮ ಪ್ರದರ್ಶನ ನೀಡಿ ಒಂದಾದ ಮೇಲೆ ಒಂದರಂತೆ ಪದಕಗಳನ್ನು ಗೆಲ್ಲುತ್ತಲೇ ಹೋದರು. ಶೂಟಿಂಗ್ ಅಗಲಿ, ಕುಸ್ತಿಯಾಗಲಿ, ಭಾರ ಎತ್ತುವುದಾಗಿರಲಿ, ಟೇಬಲ್ ಟೆನ್ನಿಸ್ ಅಗಲಿ ಅಥವಾ ಬ್ಯಾಡ್ಮಿಂಟನ್ ಆಗಿರಲಿ; ಭಾರತವು ದಾಖಲೆಯ ಪ್ರದರ್ಶನ ನೀಡಿತು. 26 ಚಿನ್ನ, 20 ಬೆಳ್ಳಿ, 20 ಕಂಚಿನ ಪದಕ – ಭಾರತವು ಒಟ್ಟು 66 ಪದಕಗಳನ್ನು ಗೆದ್ದುಕೊಂಡಿತು. ಪ್ರತಿಯೊಬ್ಬ ಭಾರತೀಯನಿಗೂ ಈ ಯಶಸ್ಸು ಹೆಮ್ಮೆ ತಂದುಕೊಡುತ್ತದೆ. ಪದಕ ಗೆಲ್ಲುವುದು ಕ್ರೀಡಾಪಟುಗಳಿಗಂತೂ  ಹೆಮ್ಮೆ ಮತ್ತು ಸಂತೋಷದ ವಿಷಯವೇ. ಇದು ಇಡೀ ದೇಶಕ್ಕೆ, ಎಲ್ಲಾ ದೇಶವಾಸಿಗಳಿಗೆ ಅತ್ಯಂತ ಗೌರವದ ಉತ್ಸವವಾಗುತ್ತದೆ. ಪಂದ್ಯಗಳು ಮುಗಿದ ಮೇಲೆ ಭಾರತವನ್ನು ಪ್ರತಿನಿಧಿಸಿದ ಅಥ್ಲೆಟ್ ಗಳು ತ್ರಿವರ್ಣ ಧ್ವಜವನ್ನು ಹೊದ್ದು ಪದಕಗಳೊಂದಿಗೆ ನಿಂತಾಗ, ರಾಷ್ಟ್ರಗೀತೆಯೂ ಮೊಳಗಿದಾಗ ನಮ್ಮಲ್ಲಿ ಮೂಡುವ  ತೃಪ್ತಿ, ಸಂತೋಷ, ಗೌರವ ಮತ್ತು ಹೆಮ್ಮೆಯ ಭಾವನೆಗಳು ಏನೋ ಒಂದು ವಿಶೇಷವಾದ, ಮೈ ಮನಸ್ಸುಗಳನ್ನು ರೋಮಾಂಚನಗೊಳಿಸುವ ಅನುಭೂತಿಯಾಗಿರುತ್ತದೆ, ಭರವಸೆ ಮತ್ತು ಉತ್ಸಾಹಗಳಿಂದ ತುಂಬಿರುತ್ತದೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ತುಂಬಿಕೊಳ್ಳುತ್ತದೆ. ಬಹುಶಃ ಈ ಭಾವನೆಗಳನ್ನು ವ್ಯಕ್ತ ಪಡಿಸಲು ನನ್ನ ಹತ್ತಿರ ಪದಗಳು ಸಾಲದಾಗುತ್ತವೆ. ಆದರೆ ನಾನು ಈ ಕ್ರೀದಾಪಟುಗಳಿಂದ ಏನು ಕೇಳಿದೆನೋ ಅದನ್ನು ನಿಮಗೆ ಕೇಳಿಸಲು ಬಯಸುತ್ತೇನೆ. ನನಗಂತೂ ಬಹಳ ಹೆಮ್ಮೆ ಆಗುತ್ತದೆ, ನಿಮಗೂ ಹೆಮ್ಮೆ ಅನಿಸಬಹುದು. 

#

ನಾನು ಮಾಣಿಕಾ ಬಾತ್ರಾ, ಕಾಮನ್ ವೆಲ್ತ್ ನಲ್ಲಿ ನಾಲ್ಕು ಪದಕಗಳನ್ನು ತಂದಿದ್ದೇನೆ. ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು. ನನಗೆ ತುಂಬಾ ಸಂತೋಷವಾಗಿದೆ, ಯಾಕೆಂದರೆ ಮೊದಲ ಬಾರಿಗೆ ಭಾರತದಲ್ಲಿ ಟೇಬಲ್ ಟೆನ್ನಿಸ್ ಇಷ್ಟೊಂದು ಜನಪ್ರಿಯವಾಗುತ್ತಿದೆ ಎಂದು ಮನದ ಮಾತು ಕಾರ್ಯಕ್ರಮವನ್ನು ಕೇಳುತ್ತಿರುವವರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನನ್ನ ಅತ್ತ್ಯುತ್ತಮ ಟೇಬಲ್ ಟೆನ್ನಿಸ್ ಆಟವನ್ನು ಆಡಿರಬಹುದು. ಇಡೀ ಜೀವನದಲ್ಲೇ ಅತ್ತ್ಯುತ್ತಮ ಆಟವನ್ನು ಆಡಿರಬಹುದು. ಅದಕ್ಕಿಂತ ಮೊದಲು ನಾನು ಅಭ್ಯಾಸ ಮಾಡಿದ ಬಗ್ಗೆ ಹೇಳಲು ಇಚ್ಚಿಸುತ್ತೇನೆ, ನಾನು ನನ್ನ ಕೋಚ್ ಸಂದೀಪ್ ಸರ್ ಜೊತೆ ಬಹಳ ಅಭ್ಯಾಸ ಮಾಡಿದ್ದೇನೆ. ಕಾಮನ್ ವೆಲ್ತ್ ಗಿಂತ ಮುಂಚೆ ನಮ್ಮ ಕ್ಯಾಂಪ್ ಪೋರ್ಚುಗಲ್ ನಲ್ಲಿ ಇತ್ತು. ನಮ್ಮನ್ನು ಟೂರ್ನಮೆಂಟ್ ಗಳಿಗೆ ಕಳುಹಿಸಿದ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಏಕೆಂದರೆ ಅವರು ನಮಗೆ ಇಷ್ಟೊಂದು international exposure ಕೊಟ್ಟಿದ್ದಾರೆ. ಯುವ ಪೀಳಿಗೆಗೆ ನನ್ನ ಸಂದೇಶವೇನೆಂದರೆ, ಎಂದಿಗೂ ಪ್ರಯತ್ನ ಬಿಡಬೇಡಿ. ನಿಮ್ಮನ್ನು ನೀವೇ ಅನ್ವೇಷಣೆ ಮಾಡಿಕೊಳ್ಳಿ. 

#

ನಾನು ಪಿ. ಗುರುರಾಜ್ ‘ಮನದ ಮಾತು’ ಕಾರ್ಯಕ್ರಮವನ್ನು ಕೇಳುತ್ತಿರುವವರಿಗೆ ನಾನು ಹೇಳಲು ಆಶಿಸುವುದೇನೆಂದರೆ, 2018 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕವನ್ನು ಗೆಲ್ಲುವುದು ನನ್ನ ಕನಸಾಗಿತ್ತು. ನಾನು ಮೊದಲ ಬಾರಿ, ಭಾಗವಹಿಸಿದ ಮೊದಲನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ಗಳಿಸಿಕೊಟ್ಟು ಬಹಳ ಖುಷಿಯಾಗಿದ್ದೇನೆ. ಈ ಪದಕವನ್ನು ನನ್ನ ಊರು ಕುಂದಾಪುರ, ನನ್ನ ರಾಜ್ಯ ಕರ್ನಾಟಕ ಮತ್ತು ನನ್ನ ದೇಶಕ್ಕೆ ಸಮರ್ಪಿಸುತ್ತಿದ್ದೇನೆ.

 

# ಮೀರಾಬಾಯಿ ಚಾನೂ

“ನಾನು ಮೀರಾಬಾಯಿ ಚಾನೂ.  21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದೆ. ಇದರಿಂದ ನನಗೆ ಬಹಳ ಖುಷಿಯಾಯಿತು. ಮಣಿಪುರಕ್ಕೆ ಮತ್ತು ಭಾರತಕ್ಕೆ ಒಬ್ಬ ಒಳ್ಳೆಯ ಆಟಗಾರ ಆಗುವುದು ನನ್ನ ಕನಸಾಗಿತ್ತು. ನಾನು ಇದೆಲ್ಲವನ್ನೂ ಚಲನಚಿತ್ರದಲ್ಲಿ ನೋಡಿದ್ದೆ. ಮಣಿಪುರದ ನನ್ನ ಸೋದರಿ ಮತ್ತು ಆಕೆಯ ಚಲನಚಿತ್ರದಲ್ಲಿ ಇದೆಲ್ಲವನ್ನೂ ನೋಡಿದ ಮೇಲೆ ನಾನೂ ಸಹ ಭಾರತಕ್ಕಾಗಿ, ಮಣಿಪುರಕ್ಕಾಗಿ ಒಳ್ಳೆಯ ಕ್ರೀಡಾಪಟುವಾಗಬೇಕು ಎಂದು ಯೋಚಿಸಿದೆ. ನನ್ನ ಯಶಸ್ಸಿಗೆ ನನ್ನ ಶಿಸ್ತು ಕಾರಣ ಜೊತೆಗೆ ಪ್ರಾಮಾಣಿಕತೆ, ಸಮರ್ಪಣಾ ಭಾವ ಮತ್ತು ಕಠಿಣ ಪರಿಶ್ರಮ ಕೂಡ ಕಾರಣ”. 

 

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿದ್ದುದರ ಜೊತೆಗೆ ವಿಶೇಷವೂ ಆಗಿತ್ತು. ವಿಶೇಷ ಏಕೆಂದರೆ ಈ ಬಾರಿ ಎಷ್ಟೊಂದು ವಿಷಯಗಳು ಮೊದಲನೇ ಸಲ ಘಟಿಸಿದವು. ಈ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಭಾರತದ ಪರವಾಗಿ ಎಷ್ಟು ಕುಸ್ತಿ ಪಟುಗಳಿದ್ದರೋ ಅಷ್ಟೂ ಜನರು ಪದಕಗಳನ್ನು ಗೆದ್ದು ಬಂದಿದ್ದಾರೆ ಎಂಬುದೇ ನಿಮಗೆ ತಿಳಿದಿದೆಯೇ? ಮಾಣಿಕಾ ಬಾತ್ರಾ ಎಷ್ಟು ಇವೆಂಟ್ ಗಳಲ್ಲಿ ಭಾಗವಹಿಸಿದ್ದರೋ ಅವೆಲ್ಲವುಗಳಲ್ಲೂ ಪದಕಗಳನ್ನು ಗೆದ್ದಿದ್ದಾರೆ  ಅವರು ವೈಯುಕ್ತಿಕ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಭಾರತಕ್ಕೆ ಚಿನ್ನ ಗಳಿಸಿಕೊಟ್ಟ ಮೊದಲ ಮಹಿಳೆಯಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಪದಕಗಳು ಭಾರತಕ್ಕೆ ಶೂಟಿಂಗ್ ನಲ್ಲಿ ಸಿಕ್ಕಿದವು. 15 ವರ್ಷದ ಭಾರತೀಯ ಶೂಟರ್ ಅನೀಶ್ ಭಾನ್ ವಾಲಾ ಅವರು ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಭಾರತದ ಪರವಾಗಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಆಟಗಾರ. ಸಚಿನ್ ಚೌಧರಿಯವರು ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಪದಕ ಗೆದ್ದ ಏಕ ಮಾತ್ರ ಭಾರತದ ಪ್ಯಾರಾ ಪವರ್ ಲಿಫ್ಟರ್ ಆಗಿದ್ದಾರೆ. ಈ ಬಾರಿಯ ಕ್ರೀಡೆಗಳ ಇನ್ನೊಂದು ವಿಶೇಷತೆ ಎಂದರೆ ಹೆಚ್ಚಿನ ಪದಕ ವಿಜೇತರು ಮಹಿಳಾ ಅಥ್ಲೀಟ್ ಗಳಾಗಿದ್ದಾರೆ. ಸ್ಕ್ವಾಶ್ ಅಗಲಿ, ಬಾಕ್ಸಿಂಗ್ ಅಗಲಿ, ವೆಯಿಟ್ ಲಿಫ್ಟಿಂಗ್ ಅಥವಾ ಶೂಟಿಂಗ್ ಅಗಲಿ, ಇವೆಲ್ಲವುಗಳಲ್ಲೂ ಮಹಿಳಾ ಆಟಗಾರರು ಅದ್ಭುತ ಸಾಧನೆ ಮಾಡಿ ತೋರಿಸಿದರು. ಬ್ಯಾಡ್ಮಿಂಟನ್ ನಲ್ಲಂತೂ ಫೈನಲ್ ಆಟವು ಭಾರತೀಯ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಇವರುಗಳ ಮಧ್ಯೆಯೇ ನಡೆಯಿತು. ಸ್ಪರ್ಧೆ ನಡೆಯುತ್ತಿದ್ದರೂ ಎರಡೂ ಪದಕಗಳು ಭಾರತಕ್ಕೇ ಸಿಗುತ್ತವೆ ಎಂದು ಎಲ್ಲರೂ ಉತ್ಸಾಹದಿಂದಲೇ ಇದ್ದರು. ಇದನ್ನು ಇಡೀ ದೇಶವೇ ನೋಡಿತು. ನನಗೂ ಇದನ್ನು ನೋಡಿ ತುಂಬಾ ಸಂತಸವಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಥ್ಲೀಟ್ ಗಳು ದೇಶದ ಬೇರೆ ಬೇರೆ ಭಾಗಗಳಿಂದ, ಸಣ್ಣ ಸಣ್ಣ ನಗರಗಳಿಂದ ಬಂದಿದ್ದಾರೆ. ಅನೇಕ ನೋವು, ತೊಂದರೆಗಳನ್ನು ದಾಟಿಕೊಂಡು ಇಲ್ಲಿಯವರೆಗೆ ಬಂದು ತಲುಪಿದ್ದಾರೆ. ಇಂದು ಅವರು ಸಾಧಿಸಿರುವ ಈ ಗುರಿಯ ಹಿಂದಿನ ಅವರ ಜೀವನ ಯಾತ್ರೆಯಲ್ಲಿ ಅವರ ತಂದೆ-ತಾಯಿಯರು, ಪೋಷಕರು, ಕೋಚ್ ಗಳು, ಸಹಾಯಕ ಸಿಬ್ಬಂದಿ, ಅವರ ಶಾಲೆ, ಶಾಲೆಯ ಶಿಕ್ಷಕರು, ಶಾಲೆಯ ವಾತಾವರಣ ಇವೆಲ್ಲವುಗಳ ಕೊಡುಗೆ ಇದೆ. ಅವರ ಜೊತೆಗೆ ಪ್ರತಿಯೊಂದು ಪರಿಸ್ಥಿತಿಯಲ್ಲೂ ಅವರ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವಂತೆ ಮಾಡಿದ ಅವರ ಸ್ನೇಹಿತರ ಕೊಡುಗೆ ಕೂಡ ಇದೆ. ನಾನು ಈ ಆಟಗಾರರ ಜೊತೆಯಲ್ಲಿ ಅವರೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ, ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.

ಹಿಂದಿನ ತಿಂಗಳು ‘ಮನದ ಮಾತು’ ಕಾರ್ಯಕ್ರಮದ ಮುಖಾಂತರ ನಾನು ದೇಶವಾಸಿಗಳಿಗೆ ವಿಶೇಷವಾಗಿ ನಮ್ಮ ಯುವಕರಿಗೆ ಫಿಟ್ ಇಂಡಿಯಾದ ಆಹ್ವಾನ ನೀಡಿದ್ದೆ. ಪ್ರತಿಯೊಬ್ಬರಿಗೂ ‘ಬನ್ನಿ, ಫಿಟ್ ಇಂಡಿಯಾದ ಜೊತೆ ಸೇರಿಕೊಳ್ಳಿ, ಫಿಟ್ ಇಂಡಿಯಾವನ್ನು ಮುಂದುವರೆಸಿ’ ಎಂದು ಫಿಟ್ ಇಂಡಿಯಾದ ಬಗ್ಗೆ ಕರೆ ನೀಡಿದ್ದೆ ಮತ್ತು ಎಲ್ಲರಿಗೂ ಆಮಂತ್ರಣ ನೀಡಿದ್ದೆ. ಜನರು ಬಹಳ ಉತ್ಸಾಹದಿಂದ ಇದರೊಂದಿಗೆ ಸೇರಿಕೊಳ್ಳುತ್ತಿರುವುದರ ಬಗ್ಗೆ ನನಗೆ ಬಹಳ ಸಂತೋಷವಿದೆ. ಬಹಳಷ್ಟು ಜನರು ಇದಕ್ಕೆ ತಮ್ಮ ಬೆಂಬಲ ವ್ಯಕ್ತ ಪಡಿಸುತ್ತಾ ನನಗೆ ಬರೆದಿದ್ದಾರೆ, ಪತ್ರಗಳನ್ನು ಕಳಿಸಿದ್ದಾರೆ, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಫಿಟ್ನೆಸ್ ಮಂತ್ರ- ಫಿಟ್ ಇಂಡಿಯಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. 

ಒಬ್ಬ ಸಜ್ಜನ, ಶ್ರೀ ಶಶಿಕಾಂತ್ ಭೋಂಸ್ಲೆಯವರು ಈಜುಕೊಳದ ಒಂದು ಚಿತ್ರವನ್ನು ಹಂಚಿ ಕೊಳ್ಳುತ್ತಾ:  “My weapon is my body, my element is water, My world is swimming.” ಎಂದು ಬರೆದಿದ್ದಾರೆ. 

ರೂಮಾ ದೇವ್ ನಾಥ್ ರವರು “ಬೆಳಗಿನ ವಾಕ್ ನಿಂದ ನಾನು ಸಂತೋಷ ಮತ್ತು ಆರೋಗ್ಯವನ್ನು ಅನುಭವಿಸುತ್ತೇನೆ” ಎಂದು ಬರೆದಿದ್ದಾರೆ. ಮುಂದುವರೆದು . “For me – fitness comes with a smiles and we should smile, when we are happy.” ಎಂದು ಬರೆದಿದ್ದಾರೆ.    

ದೇವನಾಥ್ ರವರೇ, ಸಂತೋಷವೇ ಫಿಟ್ನೆಸ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಧವಲ್ ಪ್ರಜಾಪತಿ ಅವರು ತಮ್ಮ ಟ್ರೆಕ್ಕಿಂಗ್ ನ ಭಾವಚಿತ್ರವನ್ನು ಹಂಚಿಕೊಳ್ಳುತ್ತಾ- “ ನನಗೆ ಪ್ರವಾಸ ಮತ್ತು ಟ್ರೆಕ್ಕಿಂಗ್ ಗಳೇ ಫಿಟ್ ಇಂಡಿಯಾ ಆಗಿದೆ “ ಎಂದು ಬರೆದಿದ್ದಾರೆ.  ಎಷ್ಟೊಂದು ಜನ ಖ್ಯಾತನಾಮರು ಕೂಡ ಬಹಳ ಆಸಕ್ತಿಯಿಂದ ಫಿಟ್ ಇಂಡಿಯಾ ಗಾಗಿ ನಮ್ಮ ಯುವಕರನ್ನು ಪ್ರೇರೇಪಿಸುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ. ಸಿನಿಮಾ ಕಲಾವಿದ ಅಕ್ಷಯ್ ಕುಮಾರ್ ರವರು ಟ್ವಿಟ್ಟರ್ ನಲ್ಲಿ ಒಂದು ವೀಡಿಯೊ ಹಂಚಿಕೊಂಡಿದ್ದಾರೆ. ನಾನೂ ಅದನ್ನು ನೋಡಿದ್ದೇನೆ, ನೀವೆಲ್ಲರೂ ಖಂಡಿತವಾಗಿಯೂ ನೋಡಿರುತ್ತೀರಿ. ಇದರಲ್ಲಿ ಅವರು wooden beads ನ ಜೊತೆಗೆ ವ್ಯಾಯಾಮ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಅವರು, ‘ಈ ವ್ಯಾಯಾಮ ಬೆನ್ನು ಮತ್ತು ಹೊಟ್ಟೆಯ ಮಾಂಸಖಂಡಗಳಿಗೆ ತುಂಬಾ ಲಾಭದಾಯಕ’ ಎಂದು ಹೇಳಿದ್ದಾರೆ. ಜನರ ಜೊತೆ ವಾಲಿಬಾಲ್ ಆಡುವುದರಲ್ಲಿ ಕೈ ಜೋಡಿಸಿರುವ ಅವರ ಇನ್ನೊಂದು ವೀಡಿಯೊ ಸಹ ಬಹಳಷ್ಟು ಪ್ರಚಲಿತವಾಗಿದೆ. ಬಹಳಷ್ಟು ಬೇರೆ ಯುವಕರು ಸಹ ಫಿಟ್ ಇಂಡಿಯಾ ಎಫರ್ಟ್ ನೊಂದಿಗೆ ಜೊತೆ ಸೇರಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ಆಂದೋಲನವು ನಮ್ಮೆಲ್ಲರಿಗೂ ಮತ್ತು ಇಡೀ ದೇಶಕ್ಕೂ ಬಹಳ ಪ್ರಯೋಜನಕಾರಿ ಎಂದು ನಾನು ತಿಳಿಯುತ್ತೇನೆ.  ನಾನು ಮತ್ತೊಂದು ಮಾತನ್ನು ಖಂಡಿತವಾಗಿ ಹೇಳುತ್ತೇನೆ – ಖರ್ಚಿಲ್ಲದ ಫಿಟ್ ಇಂಡಿಯಾ movement ನ ಹೆಸರು ‘ಯೋಗ’. ಫಿಟ್ ಇಂಡಿಯಾ ಅಭಿಯಾನದಲ್ಲಿ ಯೋಗಕ್ಕೆ ವಿಶೇಷ ಮಹಿಮೆ ಇದೆ, ನೀವೂ ಈ ತಯಾರಿಯಲ್ಲಿ ತೊಡಗಿರಬಹುದು. 21 ಜೂನ್ ಅಂತರ್ರಾಷ್ಟ್ರೀಯ ಯೋಗ ದಿವಸದ ಮಹತ್ವವನ್ನಂತೂ ಈಗ ಇಡೀ ವಿಶ್ವವೇ ಸ್ವೀಕರಿಸಿದೆ. ಇದಕ್ಕಾಗಿ ನೀವು ಈಗಿನಿಂದಲೇ ಸಿದ್ಧತೆ ನಡೆಸಿ. ನೀವೊಬ್ಬರೇ ಅಲ್ಲ, ನಿಮ್ಮ ನಗರ, ನಿಮ್ಮ ಗ್ರಾಮ, ನಿಮ್ಮ ಇಲಾಖೆ, ನಿಮ್ಮ ಶಾಲೆ, ನಿಮ್ಮ ಕಾಲೇಜು – ಹೀಗೆ ಎಲ್ಲಾ ಕಡೆಯಲ್ಲೂ  ಯಾವುದೇ ವಯಸ್ಸಿನ ಯಾರೇ ಅಗಲಿ – ಪುರುಷರಾಗಲಿ, ಮಹಿಳೆಯರಾಗಲಿ, ಯೋಗದೊಂದಿಗೆ ಬೆಸೆದುಕೊಳ್ಳಲು ಪ್ರಯತ್ನಿಸಬೇಕು. ಸಂಪೂರ್ಣವಾದ ಶಾರೀರಿಕ ವಿಕಾಸಕ್ಕೆ, ಮಾನಸಿಕ ವಿಕಸನಕ್ಕೆ, ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಯೋಗದಿಂದ ಏನೇನು ಉಪಯೋಗವಿದೆ ಎಂದು ಈಗ ಹಿಂದೂಸ್ಥಾನದಲ್ಲಿ ಮತ್ತು ಜಗತ್ತಿನಲ್ಲಿ ಹೇಳಲೇ ಬೇಕಾಗಿಲ್ಲ. ನನ್ನನ್ನು ತೋರಿಸಿದ ಯೋಗದ ಒಂದು ಅನಿಮೇಟೆಡ್ ವೀಡಿಯೊ ಈ ದಿನಗಳಲ್ಲಿ ಬಹಳ ಪ್ರಚಲಿತವಾಗುತ್ತಿದೆ, ಅದನ್ನು ನೀವೂ ನೋಡಿರಬಹುದು. ಯಾವ ಕೆಲಸವನ್ನು ಒಬ್ಬ ಶಿಕ್ಷಕ ಮಾಡಬಹುದೋ ಅದನ್ನು ಬಹಳ ಸೂಕ್ಷ್ಮವಾಗಿ ಅನಿಮೇಷನ್ ಮಾಡುತ್ತಿದೆ. ಇದಕ್ಕಾಗಿ ನಾನು ಅನಿಮೇಷನ್ ಮಾಡಿದವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ನಿಮಗೂ ಸಹ ಇದರ ಲಾಭ ಖಂಡಿತ ದೊರೆಯುತ್ತದೆ.

ನನ್ನ ಯುವ ಮಿತ್ರರೇ, ನೀವು ಈಗ ‘ಬರೀ ಪರೀಕ್ಷೆ, ಪರೀಕ್ಷೆ, ಪರೀಕ್ಷೆ’ ಎನ್ನುವ ಚಕ್ರವ್ಯೂಹದಿಂದ ಹೊರಬಂದು ರಜೆಯ ಯೋಚನೆಯಲ್ಲಿ ಇರುತ್ತೀರಿ. ರಜೆಯನ್ನು ಹೇಗೆ ಕಳೆಯುವುದು, ಎಲ್ಲಿ ಹೋಗುವುದು ಎಂದು ಯೋಚಿಸುತ್ತಿರಬಹುದು. ನಾನು ಇಂದು ನಿಮ್ಮನ್ನು ಒಂದು ಹೊಸ ಕೆಲಸ ಕೆಲಸಕ್ಕೆ ಆಮಂತ್ರಣ ನೀಡುವುದರ ಬಗ್ಗೆ ಮಾತನಾಡಲು ಇಚ್ಚಿಸುತ್ತೇನೆ ಹಾಗೂ ಬಹಳಷ್ಟು ನವ ಯುವಕರು ಈ ದಿನಗಳಲ್ಲಿ ಒಂದಿಲ್ಲೊಂದು ಹೊಸದನ್ನು ಕಲಿಯುವುದಕ್ಕಾಗಿ ತಮ್ಮ ಸಮಯವನ್ನು ಉಪಯೋಗಿಸಿಕೊಳ್ಳುವುದನ್ನು ನಾನು ಗಮನಿಸಿದ್ದೇನೆ. Summer Internship ನ ಪ್ರಾಮುಖ್ಯತೆ ಹೆಚ್ಚುತ್ತಲೇ ಹೋಗುತ್ತಿದೆ ಮತ್ತು ಯುವಕರು ಕೂಡ ಅದನ್ನು ಹುಡುಕುತ್ತಿರುತ್ತಾರೆ. ಅಲ್ಲದೆ, Internship ಒಂದು ಹೊಸ ಅನುಭವವಾಗಿರುತ್ತದೆ. ನಾಲ್ಕು ಗೋಡೆಗಳಿಂದ ಆಚೆ, ಕಾಗದ, ಪೆನ್ನು, ಕಂಪ್ಯೂಟರ್ ಇವುಗಳಿಂದ ದೂರವಿದ್ದು ಜೀವನವನ್ನು ಹೊಸ ರೀತಿಯಲ್ಲಿ ನಡೆಸುವ ಅನುಭವವನ್ನು ಪಡೆದುಕೊಳ್ಳುವ ಅವಕಾಶ ಸಿಗುತ್ತದೆ. ನನ್ನ ಯುವ ಮಿತ್ರರೇ, ಒಂದು ವಿಶೇಷವಾದ  Internship ಗಾಗಿ ನಾನು ಇಂದು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ. ಭಾರತ ಸರ್ಕಾರದ ಕ್ರೀಡೆ, ಮಾನವ ಸಂಪನ್ಮೂಲ ಮತ್ತು  ನೀರು ಸರಬರಾಜು – ಈ ಮೂರೂ ಸಚಿವಾಲಯಗಳು ಸೇರಿ ‘Swachh Bharat Summer Internship 2018’  ಎನ್ನುವ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, NCC ಯ ಯುವಕರು, NSS ನ ಯುವಕರು, ನೆಹರೂ ಯುವ ಕೇಂದ್ರದ ಯುವಕರು, ಹೀಗೆ ಯಾರ್ಯಾರು ಏನನ್ನಾದರೂ ಮಾಡಲು ಇಚ್ಚಿಸುತ್ತಿದ್ದೀರೋ, ಸಮಾಜಕ್ಕೆ ಮತ್ತು ದೇಶಕ್ಕೆ ಏನನ್ನಾದರೂ ಕಲಿಸಲು ಇಚ್ಚಿಸುತ್ತಿದ್ದೀರೋ, ಸಮಾಜದ ಬದಲಾವಣೆಯಲ್ಲಿ ಯಾರು ನಿಮ್ಮನ್ನು ನೀವು ಬೆಸೆದುಕೊಳ್ಳಲು ಇಚ್ಚಿಸುತ್ತೀರೋ, ಒಂದು ನಿಮಿತ್ತವಾಗಲು ಬಯಸುತ್ತೀರೋ, ಒಂದು ಸಕಾರಾತ್ಮಕ ಶಕ್ತಿಯಿಂದ ಒಂದಿಲ್ಲೊಂದು ರೀತಿಯಲ್ಲಿ ಸಮಾಜಕ್ಕೆ ಏನನ್ನಾದರೂ ನೀಡಲು ಇಚ್ಚಿಸುತ್ತಿದ್ದೀರೋ, ಅಂತಹ ಎಲ್ಲರಿಗೂ ಇದು ಒಂದು ಅವಕಾಶ. ಇದರಿಂದ ಸ್ವಚ್ಚತೆಗೂ ಬಲ ಸಿಗುತ್ತದೆ ಮತ್ತು ನಾವು ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧಿಯವರ 150 ನೇ ಜಯಂತಿಯನ್ನು ಆಚರಿಸುವ ಮುಂಚೆ ಏನನ್ನಾದರೂ ಮಾಡಿದ ಸಂತೋಷ ಸಿಗುತ್ತದೆ. ಯಾರ್ಯಾರು ಅತ್ಯುತ್ತಮ interns ಗಳಾಗುತ್ತಾರೋ, ಯಾರು ಉತ್ತಮವಾದ ಕೆಲಸಗಳನ್ನು ಕಾಲೇಜಿನಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮಾಡಿರುತ್ತಾರೋ, ಅಂತಹವರೆಲ್ಲರನ್ನೂ ರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕರಿಸಲಾಗುವುದು ಎಂದು ಸಹ ನಾನು ಹೇಳಲು ಬಯಸುತ್ತೇನೆ. ಈ internship ನ್ನು ಯಶಸ್ವಿಯಾಗಿ ಪೂರೈಸುವ ಪ್ರತಿಯೊಬ್ಬ intern ಗೂ ಸಹ ‘ಸ್ವಚ್ಚ ಭಾರತ್ ಮಿಶನ್’ ನಿಂದ ಒಂದು ಪ್ರಮಾಣಪತ್ರ ಕೊಡಲಾಗುವುದು. ಇಷ್ಟೇ ಅಲ್ಲದೆ, ಯಾವ intern ಇದನ್ನು ಉತ್ತಮವಾಗಿ ಪೂರೈಸುತ್ತಾರೋ, ಅವರಿಗೆ UGC ಯು ಎರಡು ಕ್ರೆಡಿಟ್ ಪಾಯಿಂಟ್ ಗಳನ್ನು ಸಹ ಕೊಡುತ್ತದೆ. ನಾನು ವಿದ್ಯಾರ್ಥಿಗಳನ್ನು, ವಿದ್ಯಾರ್ಥಿನಿಯರನ್ನು, ಯುವಕರನ್ನು ಮತ್ತೊಮ್ಮೆ internship ಗೆ ಆಮಂತ್ರಿಸುತ್ತಿದ್ದೇನೆ. ನೀವು ಇದರ ಲಾಭ ಪಡೆದುಕೊಳ್ಳಿ. ನೀವು MyGov ಗೆ ಹೋಗಿ ‘Swachh Bharat Summer Internship’ ಗಾಗಿ ನೊಂದಾಯಿಸಿಕೊಳ್ಳಬಹುದು. ನಮ್ಮ ಯುವಕರು ಸ್ವಚ್ಚತೆಯ ಈ ಅಂದೋಲನವನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಲಿ ಎಂದು ನಾನು ಆಶಿಸುತ್ತೇನೆ. ನಿಮ್ಮ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ನೀವು ನಿಮ್ಮ ಮಾಹಿತಿಗಳನ್ನು, ಕಥೆಗಳನ್ನೂ, ಫೋಟೋ , ವೀಡಿಯೊಗಳನ್ನು ತಪ್ಪದೆ ಕಳಿಸಿ. ಬನ್ನಿ, ಒಂದು ಹೊಸ ಅನುಭವಕ್ಕಾಗಿ ಈ ರಜೆಯನ್ನು ಕಲಿಯುವ ಅವಕಾಶವನ್ನಾಗಿ ಮಾಡಿಕೊಳ್ಳೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಅವಕಾಶ ಸಿಕ್ಕಾಗಲೆಲ್ಲಾ ನಾನು ದೂರದರ್ಶನದಲ್ಲಿ  ‘Good News India’ ಕಾರ್ಯಕ್ರಮವನ್ನು ನೋಡುತ್ತೇನೆ. ‘Good News India’ ಕಾರ್ಯಕ್ರಮವನ್ನು ನೀವೆಲ್ಲರೂ ನೋಡಲೇಬೇಕೆಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ದೇಶದ ಯಾವ ಯಾವ ಮೂಲೆಗಳಲ್ಲಿ ಎಷ್ಟೆಷ್ಟು ಜನ ಯಾವ್ಯಾವ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ, ಒಳ್ಳೆಯ ಮಾತುಕತೆಗಳು ಆಗುತ್ತಿವೆ ಎಂದು ಆ ಕಾರ್ಯಕ್ರಮದಿಂದ ತಿಳಿದುಬರುತ್ತದೆ. 

ನಾನು ಕೆಲವು ದಿನಗಳ ಹಿಂದೆ ನೋಡುತ್ತಿದ್ದಾಗ ಬಡ ಮಕ್ಕಳ ಓದಿಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ದೆಹಲಿಯ ಯುವಕರ ಕಥೆಯನ್ನು ತೋರಿಸುತ್ತಿದ್ದರು. ಈ ಯುವಕರ ಗುಂಪು ದೆಹಲಿಯಲ್ಲಿ ಬೀದಿಯಲ್ಲಿ ಇರುವ ಮಕ್ಕಳು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳ ಶಿಕ್ಷಣಕ್ಕಾಗಿ ಒಂದು ದೊಡ್ಡ ಅಭಿಯಾನವನ್ನು ಹುಟ್ಟು ಹಾಕಿದ್ದಾರೆ. ಪ್ರಾರಂಭದ ಹಂತದಲ್ಲಿ ರಸ್ತೆಯಲ್ಲಿ ಭಿಕ್ಷೆ ಬೇಡುವ ಅಥವಾ ಸಣ್ಣ-ಪುಟ್ಟ ಕೆಲಸ ಮಾಡುವ ಮಕ್ಕಳ ಸ್ಥಿತಿ ನೋಡಿ ಅವರಿಗೆ ಎಂತಹ ಆಘಾತವಾಯಿತು ಎಂದರೆ, ಅದರಿಂದ ಅವರು ಈ ರಚನಾತ್ಮಕ ಕೆಲಸದ ಒಳಗೆ ತಲ್ಲೀನರಾದರು. ದೆಹಲಿಯ ಗೀತಾ ಕಾಲೋನಿಯ ಹತ್ತಿರ ಕೊಳಗೇರಿಯಲ್ಲಿ 15 ಮಕ್ಕಳಿಂದ ಪ್ರಾರಂಭವಾದ ಈ ಅಭಿಯಾನವು ಇಂದು ರಾಜಧಾನಿಯ 12 ಸ್ಥಳಗಳಲ್ಲಿ 2 ಸಾವಿರ ಮಕ್ಕಳೊಂದಿಗೆ ಬೆಸೆದುಕೊಂಡಿದೆ. ಈ ಅಭಿಯಾನದಲ್ಲಿ ಸೇರಿರುವ ಯುವಕರು ಮತ್ತು ಶಿಕ್ಷಕರು ತಮ್ಮ ನಿಗದಿತ ದಿನಚರಿಯಿಂದ 2 ಘಂಟೆ ಸಮಯವನ್ನು ಮೀಸಲಿಟ್ಟು ಸಾಮಾಜಿಕ ಸುಧಾರಣೆಯ ಈ ಭಗೀರಥ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  

ಸೋದರ-ಸೋದರಿಯರೇ, ಇದೇ ರೀತಿಯಲ್ಲಿ ಉತ್ತರಾಖಂಡ್ ನ ಪರ್ವತ ಪ್ರದೇಶದ ಕೆಲವು ರೈತರು ದೇಶದ ಎಲ್ಲಾ ರೈತರಿಗೆ ಪ್ರೇರಣಾದಾಯಕರಾಗಿದ್ದಾರೆ. ಅವರು ಸಂಘಟಿತ ಪ್ರಯತ್ನಗಳಿಂದ ತಮ್ಮದಷ್ಟೇ ಅಲ್ಲದೆ ತಮ್ಮ ಕ್ಷೇತ್ರದ ಭಾಗ್ಯವನ್ನೂ ಸಹ ಬದಲಿಸಿದ್ದಾರೆ. ಉತ್ತರಾಖಂಡದ ಬಾಗೆಶ್ವರ್ ನಲ್ಲಿ ಮುಖ್ಯವಾಗಿ ರಾಗಿ, ದಂಟು, ಮೆಕ್ಕೆ ಜೋಳ ಮುಂತಾದ ಬೆಳೆಗಳು ಬೆಳೆಯುತ್ತವೆ. ಪರ್ವತ ಪ್ರದೇಶವಾಗಿರುವ ಕಾರಣದಿಂದ ರೈತರಿಗೆ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಆದರೆ ಕಪ್ಕೊಟ್ ತಾಲೂಕಿನ ರೈತರು ತಮ್ಮ ಬೆಳೆಗಳನ್ನು ಸೀದಾ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುವ ಬದಲು ಬೆಳೆಗಳ ಮೌಲ್ಯ ವೃದ್ಧಿ ಮಾಡುವ value addition ನ ದಾರಿಯನ್ನು ಕಂಡುಕೊಂಡರು. ಅವರೇನು ಮಾಡಿದರೆಂದರೆ ಅಲ್ಲಿಯೇ ಬೆಳೆದ ಬೆಳೆಗಳಿಂದ ಬಿಸ್ಕೆಟ್ ಮಾಡಲು ಪ್ರಾರಂಭಿಸಿ, ಅದನ್ನು ಮಾರಾಟ ಮಾಡಲು ತೊಡಗಿದರು. ಆ ಪ್ರದೇಶಗಳ ಮಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದು ಖಂಡಿತವಾಗಿಯೂ ಗೊತ್ತಿರುವ ವಿಚಾರ. ಹೀಗಾಗಿ ಕಬ್ಬಿಣಾಂಶ ಹೆಚ್ಚಿರುವ ಈ ಬಿಸ್ಕೆಟ್ ಗಳು ಗರ್ಭಿಣಿ ಮಹಿಳೆಯರಿಗೆ ಒಂದು ರೀತಿಯಲ್ಲಿ ಬಹಳ ಉಪಯೋಗವಾಗುತ್ತದೆ. ಈ ರೈತರು ಮುನಾರ್ ಗ್ರಾಮದಲ್ಲಿ ಒಂದು ಸಹಕಾರ ಸಂಸ್ಥೆಯನ್ನು ಸ್ಥಾಪಿಸಿ ಅಲ್ಲಿ ಒಂದು ಬಿಸ್ಕೆಟ್ ತಯಾರಿಸುವ ಕಾರ್ಖಾನೆಯನ್ನು ಪ್ರಾರಂಭಿಸಿದ್ದಾರೆ. ರೈತರ ಈ ಧೈರ್ಯ ನೋಡಿ ಸರ್ಕಾರವು ಸಹ ಇದನ್ನು ರಾಷ್ಟ್ರೀಯ ಜೀವನೋಪಾಯ ಮಿಶನ್ ನೊಂದಿಗೆ ಸೇರಿಸಿದೆ. ಈ ಬಿಸ್ಕೆಟ್ ಗಳು ಈಗ ಬರೀ ಬಾಗೆಶ್ವರ್ ಜಿಲ್ಲೆಯ ಸುಮಾರು 50 ಅಂಗನವಾಡಿ ಕೇಂದ್ರಗಳಲ್ಲಷ್ಟೇ ಅಲ್ಲದೆ ಆಲ್ಮೊರಾ ಮತ್ತು ಕೌಸಾನಿಯ ತನಕ ತಲುಪುತ್ತಿವೆ. ರೈತರ ಪರಿಶ್ರಮದಿಂದ ಸಂಸ್ಥೆಯ ವಾರ್ಷಿಕ ವಹಿವಾಟು 10 ರಿಂದ 15 ಲಕ್ಷ ರೂಪಾಯಿಗೆ ತಲುಪಿರುವುದಷ್ಟೇ ಅಲ್ಲದೆ 900 ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗಾವಕಾಶ ದೊರಕಿದ್ದು ಜಿಲ್ಲೆಯಿಂದ ಆಗುವ ವಲಸೆ ಸಹ ಕ್ರಮೇಣ ನಿಲ್ಲಲು ಪ್ರಾರಂಭವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಭವಿಷ್ಯದಲ್ಲಿ ಜಗತ್ತಿನಲ್ಲಿ ನೀರಿನ ವಿಷಯವಾಗಿ ಯುದ್ಧವಾಗುತ್ತದೆ ಎಂದು ಕೇಳುತ್ತಿರುತ್ತೇವೆ, ಪ್ರತಿಯೊಬ್ಬರೂ ಈ ಮಾತನ್ನು ಹೇಳುತ್ತಾರೆ. ಆದರೆ ಇದರ ಬಗ್ಗೆ ನಮ್ಮ ಜವಾಬ್ದಾರಿ ಏನೂ ಇಲ್ಲವೇ? ಜಲ ಸಂರಕ್ಷಣೆಯು ಸಾಮಾಜಿಕ ಜವಾಬ್ದಾರಿಯಾಗಬೇಕೆಂದು ನಮಗೆ ಅನ್ನಿಸುವುದಿಲ್ಲವೇ? ಇದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಆಗಬೇಕು. ಭಾರತೀಯರ ಮನದಲ್ಲಿ - ಜಲ ಸಂರಕ್ಷಣೆ ಎನ್ನುವುದು, ಮಳೆಯ ಒಂದೊಂದು ಹನಿಯನ್ನೂ ನಾವು ಹೇಗೆ ಉಳಿಸಬೇಕು ಎನ್ನುವುದು ಯಾವುದೇ ಹೊಸ ವಿಷಯವಲ್ಲ, ಪುಸ್ತಕದ ವಿಷಯವಲ್ಲ, ಭಾಷೆಯ ವಿಷಯವಾಗಿಯೂ ಉಳಿದಿಲ್ಲ ಎನ್ನುವುದು ನಮ್ಮೆಲ್ಲರಿಗೂ ತಿಳಿದಿದೆ. ಶತಮಾನಗಳಿಂದ ನಮ್ಮ ಪೂರ್ವಜರು ಇದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿದ್ದಾರೆ. ಒಂದೊಂದು ಹನಿಗೂ ಇರುವ ಘನತೆಗೆ ಅವರು ಪ್ರಾಮುಖ್ಯತೆ ಕೊಟ್ಟಿದ್ದಾರೆ. ನೀರಿನ ಪ್ರತಿಯೊಂದು ಹನಿಯನ್ನೂ ಹೇಗೆ ಉಳಿಸಬಹುದು ಎನ್ನುವ ಬಗ್ಗೆ ಅವರು ಎಂತೆಂತಹ ಹೊಸ ಹೊಸ ಉಪಾಯಗಳನ್ನು ಹುಡುಕಿದ್ದಾರೆ! ನಿಮ್ಮಲ್ಲಿ ಬಹುಶಃ ಯಾರಿಗಾದರೂ  ತಮಿಳುನಾಡಿಗೆ ಹೋಗುವ ಅವಕಾಶ ಸಿಕ್ಕಿದರೆ ಅಲ್ಲಿಯ ಕೆಲವು ದೇವಸ್ಥಾನಗಳನ್ನು ನೋಡಿ, ಅವು ಹೇಗಿವೆ ಎಂದರೆ ನೀರಾವರಿ ವ್ಯವಸ್ಥೆ, ಜಲ ಸಂರಕ್ಷಣೆಯ ವ್ಯವಸ್ಥೆ, ಒಳಚರಂಡಿ ನಿರ್ವಹಣೆ, ಇವುಗಳ ಬಗ್ಗೆ ದೇವಸ್ಥಾನದ ದೊಡ್ಡ ದೊಡ್ಡ ಶಿಲಾಶಾಸನದಲ್ಲಿ ಬರೆಯಲಾಗಿದೆ. ಮನಾರ್ ಕೊವಿಲ್, ಚಿರಾನ್ ಮಹಾದೇವಿ, ಕೊವಿಲ್ ಪಟ್ಟಿ ಅಥವಾ ಪುದುಕೊಟ್ಟೈ ಮೊದಲಾದ ಜಾಗಗಳಲ್ಲಿ ದೊಡ್ಡ ದೊಡ್ಡ ಶಿಲಾ ಶಾಸನಗಳು ನಿಮಗೆ ಕಾಣಸಿಗುತ್ತವೆ. ಇಂದೂ ಕೂಡ ವಿಭಿನ್ನ ನೀರಿನ ಬಾವಡಿಗಳು (stepwells) ಪ್ರವಾಸ ಸ್ಥಳಗಳ ರೂಪದಲ್ಲಿ ಪರಿಚಿತವಾಗಿವೆ. ಆದರೆ ಇವೆಲ್ಲ ನಮ್ಮ ಪೂರ್ವಜರ ಜಲ ಸಂರಕ್ಷಣೆಯ  ಅಭಿಯಾನದ ಪ್ರತ್ಯಕ್ಷ ಉದಾಹರಣೆಗಳು ಎನ್ನುವುದನ್ನು ನಾವು ಮರೆಯಬಾರದು. ಗುಜರಾತ್ ನಲ್ಲಿ ಆದಾಲಜ್ ಮತ್ತು ಪಾಟನ್ ನ ರಾಣಿಯವರ ಬಾವಡಿಯು ಒಂದು  UNESCO World Heritage site ಆಗಿದೆ. ಇದರ ಭವ್ಯತೆಯನ್ನು ನೋಡಿಯೇ ತಿಳಿದುಕೊಳ್ಳಬೇಕು, ಒಂದು ರೀತಿಯಲ್ಲಿ ಬಾವಡಿಗಳು ಜಲ ಮಂದಿರಗಳೇ ಆಗಿವೆ. ಒಂದು ವೇಳೆ ನೀವು ರಾಜಾಸ್ತಾನಕ್ಕೆ ಹೋದರೆ ಜೋಧಪುರದಲ್ಲಿ ಚಾಂದ್ ಬಾವಡಿಗೆ ಖಂಡಿತವಾಗಿಯೂ ಭೇಟಿ ನೀಡಿ. ಇದು ಭಾರತದ ಎಲ್ಲಕ್ಕಿಂತ ದೊಡ್ಡದಾದ ಮತ್ತು ಸುಂದರವಾದ ಬಾವಡಿಗಳಲ್ಲಿ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಬಾವಡಿಯು   ನೀರಿನ ಅಭಾವವಿರುವ ಪ್ರದೇಶದಲ್ಲಿದೆ. ಏಪ್ರಿಲ್, ಮೇ, ಜೂನ್, ಜುಲೈ ಈ ಅವಧಿ ಮಳೆ ನೀರನ್ನು ಸಂಗ್ರಹಿಸಲು ಉತ್ತಮ ಅವಕಾಶ ಇರುವ ಸಮಯ ಮತ್ತು ನಾವು ಮುಂಚಿತವಾಗಿ ಎಷ್ಟು ತಯಾರಿ ಮಾಡಿಕೊಳ್ಳುತ್ತೇವೆಯೋ ಅಷ್ಟು ನಮಗೆ ಉಪಯೋಗವಾಗುತ್ತದೆ. ಮನ್ ರೇಗಾ ದ budget ಕೂಡ ಈ ಜಲ ಸಂರಕ್ಷಣೆಯ ಕೆಲಸಕ್ಕೆ ಬರುತ್ತದೆ. ಹಿಂದಿನ ಮೂರು ವರ್ಷಗಳ ಸಮಯದಲ್ಲಿ ಜಲ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಯ ದಿಕ್ಕಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ವಿಧಾನದಲ್ಲಿ ಪ್ರಯತ್ನ ಮಾಡಿದ್ದಾರೆ. ಪ್ರತಿ ವರ್ಷ  ಮನ್ ರೇಗಾ budget ನಿಂದ ನೀರಿನ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಗೆ ಸರಾಸರಿ 32 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. 2017 – 18 ರ ಮಾತು ಬಂದರೆ, 64 ಸಾವಿರ ಕೋಟಿ ರೂಪಾಯಿಯ ಒಟ್ಟು ವೆಚ್ಚದ 55 ಪ್ರತಿಶತ ಅಂದರೆ ಸುಮಾರು 35 ಸಾವಿರ ಕೋಟಿ ರೂಪಾಯಿಗಳನ್ನು ನೀರಿನ ಸಂರಕ್ಷಣಾ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. ಹಿಂದಿನ ಮೂರು ವರ್ಷಗಳಲ್ಲಿ ಈ ರೀತಿಯ ನೀರಿನ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಯ ಕ್ರಮಗಳ ಮೂಲಕ ಸುಮಾರು 150 ಲಕ್ಷ ಹೆಕ್ಟರ್ ನಷ್ಟು ಭೂಮಿಗೆ ಹೆಚ್ಚಿನ ಪ್ರಮಾಣದ ಲಾಭ ಸಿಕ್ಕಿದೆ. ಜಲ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಗಾಗಿ ಭಾರತ ಸರ್ಕಾರದ  ಮನ್ ರೇಗಾ ಯೋಜನೆಯಿಂದ ದೊರೆಯುವ ಧನಸಹಾಯವನ್ನು ಕೆಲವು ಜನರು ಬಹಳ ಚೆನ್ನಾಗಿ ಉಪಯೋಗಿಸಿಕೊಂದಿದ್ದಾರೆ. ಕೇರಳದ ಕುಟ್ಟೆಂಪೆರೂರ್ ನದಿಯಲ್ಲಿ  ಮನ್ ರೇಗಾ ಯೋಜನೆಯ ಅಡಿಯಲ್ಲಿ 7 ಸಾವಿರ ಜನರು 70 ದಿನಗಳವರೆಗೆ ಕೆಲಸ ಮಾಡಿ, ಶ್ರಮ ಪಟ್ಟು ಆ ನದಿಗೆ ಪುರ್ನರ್ಜೀವ ಕೊಟ್ಟಿದ್ದಾರೆ. ಗಂಗಾ ಮತ್ತು ಯಮುನಾ ಇವು ನೀರಿನಿಂದ ತುಂಬಿರುವ ನದಿಗಳು. ಆದರೆ ಉತ್ತರ ಪ್ರದೇಶದಲ್ಲಿ ನೀರಿಲ್ಲದ ಬೇರೆ ಸಾಕಷ್ಟು ಪ್ರದೇಶಗಳೂ ಇವೆ. ಉದಾಹರಣೆಗೆ ಫತೇಪುರ್ ಜಿಲ್ಲೆಯ ಸಸುರ್ ಮತ್ತು ಖದೇರಿ ಎನ್ನುವ ಹೆಸರಿನ ಎರಡು ಸಣ್ಣ ನದಿಗಳು ಒಣಗಿದ್ದವು. ಜಿಲ್ಲಾಡಳಿತವು ಮನ್ ರೇಗಾ ಯೋಜನೆಯಡಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕೆಲಸಗಳನ್ನು ಎತ್ತಿಕೊಂಡಿತು. ಸುಮಾರು 40 – 45 ಹಳ್ಳಿಗಳ ಜನರ ಸಹಾಯದಿಂದ ಒಣಗಿಹೋಗಿದ್ದ ಈ ಸಸುರ್ ಮತ್ತು ಖದೇರಿ ನದಿಗಳನ್ನು ಪುನರುಜ್ಜೀವನಗೊಳಿಸಲಾಯಿತು. ಪಶು, ಪಕ್ಷಿ, ರೈತ, ಜಮೀನು, ಹಳ್ಳಿ ಇವೆಲ್ಲವುಗಳ ತುಂಬು ಆಶೀರ್ವಾದ ಹೊಂದಿದ ಸಫಲತೆ ಇದಾಗಿದೆ. ಮತ್ತೆ ಏಪ್ರಿಲ್, ಮೇ, ಜೂನ್, ಜುಲೈ ನಮ್ಮ ಮುಂದಿದೆ. ಜಲ ಸಂರಕ್ಷಣೆಗಾಗಿ ನಾವೂ ಸಹ ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳೋಣ, ನಾವೂ ಕೆಲವು ಯೋಜನೆಗಳನ್ನು ಮಾಡೋಣ, ನಾವೂ ಸಹ ಏನನ್ನಾದರೂ ಮಾಡಿ ತೋರಿಸೋಣ ಎಂದು ನಾನು ನಿಮಗೆ ಹೇಳಬಯಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಯಾವಾಗ ಮನದ ಮಾತು ಆಗುತ್ತದೆಯೋ ಆಗ ನನಗೆ ನಾಲ್ಕೂ ನಿಟ್ಟಿನಿಂದ ಸಂದೇಶಗಳು, ಪತ್ರಗಳು, ದೂರವಾಣಿ ಕರೆಗಳು ಬರುತ್ತವೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ದೆವೀತೊಲಾ ಗ್ರಾಮದ ಆಯನ್ ಕುಮಾರ್ ಬ್ಯಾನರ್ಜಿಯವರು MyGov ನಲ್ಲಿ ತಮ್ಮ ಕಾಮೆಂಟ್ ನಲ್ಲಿ “ನಾವು ಪ್ರತಿ ವರ್ಷ ರವೀಂದ್ರ ಜಯಂತಿಯನ್ನು ಆಚರಿಸುತ್ತೇವೆ, ಆದರೆ ಎಷ್ಟೋ ಜನರಿಗೆ ನೊಬೆಲ್ ಪುರಸ್ಕಾರ ವಿಜೇತ ರವೀಂದ್ರನಾಥ್ ಟ್ಯಾಗೋರ್ ರವರ “ಶಾಂತಿಯುತವಾಗಿ, ಸುಂದರವಾಗಿ ಮತ್ತು ಐಕ್ಯತೆಯ ಜೊತೆಗೆ ಬದುಕು” ಎನ್ನುವ ತತ್ವಶಾಸ್ತ್ರದ ಬಗ್ಗೆ ಗೊತ್ತೇ ಇಲ್ಲ. ದಯಮಾಡಿ ಮನದ ಮಾತು ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡಿ. ಅದರಿಂದ ಜನರು ಅದರ ಬಗ್ಗೆ ತಿಳಿದುಕೊಳ್ಳುವಂತಾಗಲಿ” ಎಂದು ಬರೆದಿದ್ದಾರೆ. 

ನಮ್ಮ ಮನದ ಮಾತು ಕಾರ್ಯಕ್ರಮದ ಎಲ್ಲಾ ಜೊತೆಗಾರರ ಗಮನ ಈ ಕಡೆಗೆ ಆಕರ್ಷಿಸಿದ್ದಕ್ಕಾಗಿ ನಾನು ಆಯನ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಗುರುದೇವ ಟ್ಯಾಗೋರ್ ರವರು ಜ್ಞಾನ ಮತ್ತು ವಿವೇಕದಿಂದ ತುಂಬಿದ ವ್ಯಕ್ತಿತ್ವದವರಾಗಿದ್ದರು. ಅವರ ಲೇಖನಿಯು ಎಲ್ಲರ ಮೇಲೂ ತನ್ನ ಅಳಿಸಲಾಗದ ಪ್ರಭಾವವನ್ನು ಉಳಿಸಿದೆ. ರವೀಂದ್ರನಾಥರು ಒಬ್ಬ ಪ್ರತಿಭಾಶಾಲಿ ವ್ಯಕ್ತಿತ್ವವಾಗಿದ್ದರು, ಬಹು ಆಯಾಮಗಳ ವ್ಯಕ್ತಿತ್ವವಾಗಿದ್ದರು. ಆದರೆ ಅವರ ಒಳಗೆ ಒಬ್ಬ ಶಿಕ್ಷಕನನ್ನು ನಾವು ಪ್ರತಿಕ್ಷಣವೂ ಅನುಭವಿಸಬಹುದು. ಅವರು ತಮ್ಮ ಗೀತಾಂಜಲಿಯಲ್ಲಿ  ‘He, who has the knowledge has the responsibility to impart it to the students.’  ಎಂದು ಬರೆದಿದ್ದಾರೆ. ಅಂದರೆ, ಯಾರ ಬಳಿ ಜ್ಞಾನ ಇದೆಯೋ ಅವರು ಅದನ್ನು ಜಿಜ್ಞಾಸುಗಳ ಜೊತೆಗೆ ಹಂಚಿಕೊಳ್ಳುವುದು ಅವರ ಜವಾಬ್ದಾರಿ. 

ನಾನು ಬಾಂಗ್ಲಾ ಭಾಷೆಯನ್ನು ಬಲ್ಲವನಲ್ಲ, ಆದರೆ ಚಿಕ್ಕವನಾಗಿದ್ದಾಗ ನನಗೆ ಬಹಳ ಬೇಗ ಏಳುವ ಅಭ್ಯಾಸವಿತ್ತು. ಪೂರ್ವ ಹಿಂದುಸ್ಥಾನದಲ್ಲಿ ರೇಡಿಯೋ ಬೇಗ ಪ್ರಾರಂಭವಾಗುತ್ತದೆ, ಪಶ್ಚಿಮ ಹಿಂದುಸ್ಥಾನದಲ್ಲಿ ತಡವಾಗಿ ಪ್ರಾರಂಭವಾಗುತ್ತದೆ. ಸ್ವಲ್ಪ ಸ್ವಲ್ಪ ನನಗೆ ನೆನಪಿದೆ – ಬೆಳಗ್ಗೆ ಬಹುಶಃ 5.30 ಕ್ಕೆ ರವೀಂದ್ರ ಸಂಗೀತ್ ಪ್ರಾರಂಭವಾಗುತ್ತಿತ್ತು. ನನಗೆ ಅದನ್ನು ಕೇಳುವ ಅಭ್ಯಾಸ ಇತ್ತು. ಭಾಷೆಯನ್ನು ತಿಳಿದಿರದಿದ್ದರೂ ಬೆಳಗ್ಗೆ ಬೇಗ ಎದ್ದು ರೇಡಿಯೋ ದಲ್ಲಿ ರವೀಂದ್ರ ಸಂಗೀತ್ ಕೇಳುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಯಾವಾಗ ಆನಂದಲೋಕೆ ಮತ್ತು ಆಗುನೆರ್, ಪೋರೋಶ್ಮೋನಿ – ಈ ಕವಿತೆಗಳನ್ನು ಕೇಳಲು ಅವಕಾಶ ಸಿಕ್ಕುತ್ತಿತ್ತೋ ಆಗ ಮನಸ್ಸಿಗೆ ಬಹಳ ಚೈತನ್ಯ ಸಿಕ್ಕುತ್ತಿತ್ತು. ರವೀಂದ್ರ ಸಂಗೀತ್ ಮತ್ತು ಅವರ ಕವಿತೆಗಳು ಖಂಡಿತವಾಗಿಯೂ ನಿಮ್ಮ ಮೇಲೆಯೂ ಪ್ರಭಾವ ಬೀರಿರಬಹುದು. ನಾನು ರವೀಂದ್ರನಾಥ ಟ್ಯಾಗೋರ್ ರವರಿಗೆ ಆದರಪೂರ್ವಕವಾಗಿ ನಮಸ್ಕರಿಸುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳಲ್ಲಿ ರಮ್ಜಾನ್ ನ ಪವಿತ್ರ ತಿಂಗಳು ಪ್ರಾರಂಭವಾಗುವುದರಲ್ಲಿದೆ. ವಿಶ್ವದೆಲ್ಲೆಡೆ ರಮ್ಜಾನ್ ತಿಂಗಳನ್ನು ಪೂರ್ತಿ ಶ್ರದ್ಧೆ ಮತ್ತು ಗೌರವದಿಂದ ಆಚರಿಸುತ್ತಾರೆ. ಯಾವಾಗ ಮನುಷ್ಯ ತಾನೇ ಹಸಿವಿನಿಂದ ಇರುತ್ತಾನೋ ಆಗ ಅವನಿಗೆ ಇನ್ನೊಬ್ಬರ ಹಸಿವಿನ ಅನುಭವ ಆಗುತ್ತದೆ, ಯಾವಾಗ ತಾನು ಬಾಯಾರಿಕೆಯಿಂದ ಇರುತ್ತಾನೋ ಆಗ ಬೇರೆಯವರ ಬಾಯಾರಿಕೆ ಅವನಿಗೆ ಅನುಭವಕ್ಕೆ ಬರುತ್ತದೆ ಎನ್ನುವುದು ಸಾಮೂಹಿಕ ಉಪವಾಸ ಆಚರಿಸುವ ಉದ್ದೇಶವಾಗಿದೆ. ಮೊಹಮ್ಮದ್ ಪೈಗಂಬರ್ ರ ಉಪದೇಶ ಮತ್ತು ಸಂದೇಶಗಳನ್ನು ನೆನಪಿಸಿಕೊಳ್ಳುವ ಅವಕಾಶ ಇದಾಗಿದೆ. ಅವರ ಜೀವನದಿಂದ ಪ್ರಭಾವಿತರಾಗಿ ಸಮಾನತೆ ಮತ್ತು ಭ್ರಾತೃತ್ವ ದ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಂದು ಬಾರಿ ಒಬ್ಬ ಮನುಷ್ಯ ಪೈಗಂಬರ್ ರವರಿಗೆ “ಇಸ್ಲಾಂ ನಲ್ಲಿ ಯಾವ ಕೆಲಸ ಎಲ್ಲಕ್ಕಿಂತ ಒಳ್ಳೆಯದು?” ಎಂದು ಕೇಳಿದ. ಅದಕ್ಕೆ ಪೈಗಂಬರರು “ನಿಮಗೆ ಪರಿಚಿತ ಅಥವಾ ಅಪರಿಚಿತರಾಗಿರುವ ಯಾವುದೇ ಬಡವ ಮತ್ತು ಅವಶ್ಯಕತೆ ಇರುವ ವ್ಯಕ್ತಿಗೆ ಊಟ ಮಾಡಿಸಿ, ಎಲ್ಲರೊಂದಿಗೆ ಸದ್ಭಾವದಿಂದ ಬೆರೆಯುವುದು” ಎಂದು ಹೇಳಿದರು. ಮೊಹಮ್ಮದ್ ಪೈಗಂಬರರು ಜ್ಞಾನ ಮತ್ತು ಕರುಣೆ ಇವುಗಳಲ್ಲಿ ವಿಶ್ವಾಸವಿಟ್ಟಿದ್ದರು. ಅವರಿಗೆ ಯಾವುದರ ಬಗ್ಗೆಯೂ ಅಹಂಕಾರವಿರಲಿಲ್ಲ. ಅಹಂಕಾರವು ಜ್ಞಾನವನ್ನು ಸೋಲಿಸುತ್ತಲೇ ಇರುತ್ತದೆ ಎಂದು ಅವರು ಹೇಳುತ್ತಿದ್ದರು. ಒಂದುವೇಳೆ ನಿಮ್ಮ ಹತ್ತಿರ ಯಾವುದೇ ವಸ್ತು ನಿಮ್ಮ ಅವಶ್ಯಕತೆಗೆ ಮೀರಿ ಇದ್ದಲ್ಲಿ ನೀವು ಅದನ್ನು ಯಾವುದೇ ಅವಶ್ಯಕತೆ ಇರುವ ವ್ಯಕ್ತಿಗೆ ಕೊಡಬೇಕು ಎನ್ನುವುದು ಮೊಹಮ್ಮದ್ ಪೈಗಂಬರ್ ರ ನಂಬಿಕೆಯಾಗಿತ್ತು. ಆದ್ದರಿಂದ ರಮ್ಜಾನ್ ಸಮಯದಲ್ಲಿ ದಾನಕ್ಕೆ ಸಹ ಬಹಳಷ್ಟು ಪ್ರಾಮುಖ್ಯತೆ ಇದೆ. ಜನರು ಈ ಪವಿತ್ರ ಮಾಸದಲ್ಲಿ ಅವಶ್ಯಕತೆ ಇರುವವರಿಗೆ ದಾನ ನೀಡುತ್ತಾರೆ. ಯಾವುದೇ ವ್ಯಕ್ತಿಯು ತನ್ನ ಪವಿತ್ರ ಆತ್ಮದಿಂದ ಶ್ರೀಮಂತನಾಗುತ್ತಾನೆಯೇ ಹೊರತು ಧನ ಕನಕಗಳಿಂದ ಅಲ್ಲ ಎನ್ನುವುದು ಮೊಹಮ್ಮದ್ ಪೈಗಂಬರರ ನಂಬಿಕೆಯಾಗಿತ್ತು. ನಾನು ಎಲ್ಲಾ ದೇಶವಾಸಿಗಳಿಗೂ ರಮ್ಜಾನ್ ನ ಈ ಪವಿತ್ರಮಾಸದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಮತ್ತು ಈ ಸಮಯವು ಜನರಿಗೆ ಶಾಂತಿ ಮತ್ತು ಸದ್ಭಾವನೆಯ ಸಂದೇಶಗಳ ಜೊತೆಗೆ ನಡೆಯಲು ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ.         

ನನ್ನ ಪ್ರೀತಿಯ ದೇಶವಾಸಿಗಳೇ, ಬುದ್ಧ ಪೂರ್ಣಿಮಾ ಪ್ರತಿ ಭಾರತೀಯನಿಗೂ ಒಂದು ವಿಶೇಷ ದಿನವಾಗಿದೆ. ಭಾರತವು ಕರುಣೆ, ಸೇವೆ ಮತ್ತು ತ್ಯಾಗದ ಶಕ್ತಿಯನ್ನು ತೋರಿಸಿದ ಮಹಾಮಾನವ ಭಗವಾನ್ ಬುದ್ಧನ ಭೂಮಿ ಎನ್ನುವುದರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಅವರು ವಿಶ್ವದೆಲ್ಲೆಡೆ ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡಿದರು. ಈ ಬುದ್ಧ ಪೂರ್ಣಿಮೆಯು ಭಗವಾನ್ ಬುದ್ಧನನ್ನು ಸ್ಮರಿಸುತ್ತಾ, ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡುವ, ಸಂಕಲ್ಪ ಮಾಡುವ ಮತ್ತು ಅದರಂತೆ ನಡೆಯುವ ನಮ್ಮೆಲ್ಲರ ಹೊಣೆಗಾರಿಕೆಯನ್ನು ಮತ್ತೆ ನೆನಪಿಸುತ್ತದೆ. ಭಗವಾನ್ ಬುದ್ಧ ಸಮಾನತೆ, ಶಾಂತಿ, ಸದ್ಭಾವ ಮತ್ತು ಭ್ರಾತೃತ್ವದ ಪ್ರೇರಣಾ ಶಕ್ತಿ.  ಇವೆಲ್ಲ ಎಂತಹ ಮಾನವೀಯ ಮೌಲ್ಯಗಳೆಂದರೆ, ಇವುಗಳ ಅವಶ್ಯಕತೆ ಇಂದಿನ ಜಗತ್ತಿನಲ್ಲಿ ಬಹಳ ಬೇಕಾಗಿದೆ. ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ರವರು ತಮ್ಮ ಸಾಮಾಜಿಕ ತತ್ವಗಳಲ್ಲಿ ಭಗವಾನ್ ಬುದ್ಧನ ದೊಡ್ಡ ಪ್ರೇರಣೆ ಇದೆ ಎಂದು ಒತ್ತಿ ಹೇಳುತ್ತಿದ್ದರು.  ಅವರು  “My Social philosophy may be said to be enshrined in three words; liberty, equality and fraternity. My Philosophy has roots in religion and not in political science. I have derived them from the teaching of my master, The Buddha”  ಎಂದು ಹೇಳಿದ್ದರು. 

ಬಾಬಾ ಸಾಹೇಬ್ ಅವರು ಸಂವಿಧಾನದ ಮೂಲಕ ದಲಿತರು, ಪೀಡಿತರು, ಶೋಷಿತರು, ವಂಚಿತರು, ಹೀಗೆ ಸಮಾಜದ ಅಂಚಿನಲ್ಲಿ ನಿಂತಿರುವ ಕೋಟ್ಯಾಂತರ ಜನರನ್ನು ಸಶಕ್ತಗೊಳಿಸಿದರು. ಕರುಣೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಇರಲಾರದು. ಜನರ ಪೀಡನೆಗಳಿಗೆ ಕರುಣೆ ಎನ್ನುವುದು ಭಗವಾನ್ ಬುದ್ಧನ ಎಲ್ಲಾ ಮಹಾನ್ ಗುಣಗಳಲ್ಲಿ ಒಂದಾಗಿತ್ತು. ಬೌದ್ಧ ಭಿಕ್ಷುಗಳು ವಿಭಿನ್ನ ದೇಶಗಳ ಯಾತ್ರೆಯನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅವರು ತಮ್ಮೊಡನೆ ಭಗವಾನ್ ಬುದ್ಧನ ಸಮೃದ್ಧ ವಿಚಾರಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಇದು ಎಲ್ಲಾ ಕಾಲಗಳಲ್ಲೂ ಆಗುತ್ತಲೇ ಇದೆ. ಇಡಿಯ ಏಷಿಯಾದಲ್ಲಿ ಅನೇಕ ಏಷಿಯಾ ದೇಶಗಳಾದ ಚೀನಾ, ಜಪಾನ್, ಕೊರಿಯಾ, ಥೈಲ್ಯಾಂಡ್, ಕಾಂಬೋಡಿಯಾ, ಮ್ಯಾನ್ಮಾರ್, ಇನ್ನೂ ಅನೇಕ ದೇಶಗಳು ಯಾವುವು ಬುದ್ಧನ ಪರಂಪರೆ, ಬುದ್ಧನ ಉಪದೇಶದ ಜಾಡಿನಲ್ಲಿ ಬೆಸೆದುಕೊಂಡಿತ್ತೋ ಅಂತಹ ಎಲ್ಲಾ ಪರಂಪರೆಗಳಲ್ಲಿಯೂ ಭಗವಾನ್ ಬುದ್ಧನ ಉಪದೇಶಗಳು ಸಿಕ್ಕಿವೆ. ಇದೇ ಕಾರಣದಿಂದ ನಾವು Buddhist Tourism ಗಾಗಿ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಇದು ಆಗ್ನೇಯ ಏಷಿಯಾದ ಪ್ರಮುಖ ಸ್ಥಳಗಳನ್ನು ಭಾರತದ ಬೌದ್ಧ ಸ್ಥಳಗಳೊಂದಿಗೆ ಜೋಡಿಸುತ್ತದೆ. ಭಾರತ ಸರ್ಕಾರವು ಬಹಳಷ್ಟು ಬೌದ್ಧ ಮಂದಿರಗಳ ಜೀರ್ಣೋದ್ಧಾರದ ಕೆಲಸದಲ್ಲಿ ಭಾಗಿಯಾಗುತ್ತಿದೆ ಎನ್ನುವುದು ನನಗೆ ಅತ್ಯಂತ ಪ್ರಸನ್ನತಾ ಭಾವವನ್ನು ನೀಡುತ್ತದೆ. ಇದರಲ್ಲಿ ಮ್ಯಾನ್ಮಾರ್ ನ ಬಾಗಾನ್ ನಲ್ಲಿ ಇರುವ ಭಗವಾನ್ ಬುದ್ಧನ ಶತಮಾನಗಳಷ್ಟು ಹಳೆಯದಾದ ವೈಭವಶಾಲಿ ಆನಂದ ಮಂದಿರವೂ ಸೇರಿದೆ. ಇಂದು ವಿಶ್ವದೆಲ್ಲೆಡೆ ಸಂಘರ್ಷ ಮತ್ತು ಕಷ್ಟಗಳು ನೋಡಲು ಸಿಗುತ್ತವೆ. ಭಗವಾನ್ ಬುದ್ಧನ ಉಪದೇಶವು ದ್ವೇಷವನ್ನು ದಯೆಯಿಂದ ಅಳಿಸಿಹಾಕುವ ದಾರಿ ತೋರಿಸುತ್ತದೆ. ಜಗತ್ತಿನೆಲ್ಲೆಡೆ ಹರಡಿಕೊಂಡಿರುವ, ಭಗವಾನ್ ಬುದ್ಧನಲ್ಲಿ ಶ್ರದ್ಧೆ ಇಟ್ಟುಕೊಂಡಿರುವ, ಕರುಣೆಯ ಸಿದ್ಧಾಂತದಲ್ಲಿ ವಿಶ್ವಾಸವಿಟ್ಟಿರುವ ಎಲ್ಲರಿಗೂ ಬುದ್ಧ ಪೂರ್ಣಿಮೆಯ ಮಂಗಳಮಯ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಭಗವಾನ್ ಬುದ್ಧರ ಉಪದೇಶಗಳನ್ನು ಆಧಾರವಾಗಿಟ್ಟುಕೊಂಡು ಒಂದು ಶಾಂತಿಯುತ ಮತ್ತು ಕರುಣೆಯಿಂದ ತುಂಬಿದ ಜಗತ್ತಿನ ನಿರ್ಮಾಣ ಮಾಡುವುದಕ್ಕಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಇಡೀ ಜಗತ್ತಿಗಾಗಿ ನಾನು ಭಗವಾನ್ ಬುದ್ಧನಲ್ಲಿ  ಆಶೀರ್ವಾದ ಬೇಡುತ್ತೇನೆ,  ಇಂದು ನಾವು ಭಗವಾನ್ ಬುದ್ಧನನ್ನು ನೆನಪಿಸಿಕೊಳ್ಳುತ್ತಿದ್ದೇವೆ. ನೀವು laughing Buddha ನ ಮೂರ್ತಿಯ ಬಗ್ಗೆ ಕೇಳಿರಬಹುದು. laughing Buddha ಒಳ್ಳೆಯ ಅದೃಷ್ಟವನ್ನು ತರುತ್ತದೆ ಎಂದು ಹೇಳುತ್ತಾರೆ. ಆದರೆ smiling Buddha ಭಾರತದ ರಕ್ಷಣಾ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯೊಂದಿಗೆ ಕೂಡ ಬೆಸೆದುಕೊಂಡಿದೆ. smiling Buddha ಮತ್ತು ಭಾರತದ ಸೈನ್ಯ ಶಕ್ತಿ ಇವುಗಳ ಮಧ್ಯೆ ಏನು ಸಂಬಂಧ ಇದೆ ಎಂದು ನೀವು ಯೋಚಿಸುತ್ತಿರಬಹುದು. ಇಂದಿಗೆ 20 ವರ್ಷಗಳ ಕೆಳಗೆ 11 ಮೇ 1998 ರ ಸಂಜೆ ಆಗಿನ ಭಾರತದ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ನಿಮಗೆ ನೆನಪಿರಬಹುದು. ಅವರ ಮಾತುಗಳು ಇಡೀ ದೇಶವನ್ನು ಗೌರವ, ಪರಾಕ್ರಮ ಮತ್ತು ಖುಷಿಯ ಕ್ಷಣಗಳಿಂದ ತುಂಬಿಸಿತ್ತು. ವಿಶ್ವದೆಲ್ಲೆಡೆ ನೆಲೆಸಿರುವ ಭಾರತೀಯ ಸಮುದಾಯದಲ್ಲಿ ಹೊಸ ಆತ್ಮವಿಶ್ವಾಸವನ್ನು  ಹೊಮ್ಮಿಸಿತ್ತು. ಮೇ 11, 1998 ರ ಆ ಬುದ್ಧ ಪೂರ್ಣಿಮೆಯ ದಿನದಂದು ಭಾರತದ ಪಶ್ಚಿಮ ಭಾಗದಲ್ಲಿರುವ ರಾಜಾಸ್ತಾನದ ಪೋಖ್ರಾನ್ ಎಂಬಲ್ಲಿ ಪರಮಾಣು ಪರೀಕ್ಷೆ ಮಾಡಲಾಗಿತ್ತು. ಅದಕ್ಕೆ 20 ವರ್ಷವಾಗುತ್ತಿದೆ ಮತ್ತು ಈ ಪರಮಾಣು ಪರೀಕ್ಷೆಯನ್ನು ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ ಬುದ್ಧ ಪೂರ್ಣಿಮೆಯ ದಿನ ಮಾಡಲಾಗಿತ್ತು. ಭಾರತದ ಅಣು ಪರೀಕ್ಷೆ ಸಫಲವಾಯಿತು ಮತ್ತು ಇನ್ನೊದು ರೀತಿಯಲ್ಲಿ ಹೇಳಬೇಕೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ತನ್ನ ಶಕ್ತಿಯನ್ನು ಪ್ರದರ್ಶಿಸಿತ್ತು. ಆ ದಿನವು ಭಾರತದ ಇತಿಹಾಸದಲ್ಲಿ ಅದರ ಸೈನ್ಯ ಶಕ್ತಿಯ ಪ್ರದರ್ಶನ ರೂಪದಲ್ಲಿ ಅಂಕಿತಗೊಂಡಿದೆ ಎಂದು ನಾವು ಹೇಳಬಹುದು. inner strength  ಅಂದರೆ ಒಳಮನಸ್ಸಿನ ಶಕ್ತಿ ಶಾಂತಿಗಾಗಿ ಅವಶ್ಯಕ ಎಂದು ಭಗವಾನ್ ಬುದ್ಧ ಈ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದೇ ರೀತಿ ನೀವು ಒಂದು ದೇಶದ ರೂಪದಲ್ಲಿ ಶಕ್ತಿಶಾಲಿಯಾದಾಗ ನೀವು ಎಲ್ಲರೊಂದಿಗೆ ಶಾಂತಿಪೂರ್ಣರಾಗಿ ಸಹ ಇರಬಹುದು. 1998 ರ ಮೇ ತಿಂಗಳು, ಈ ತಿಂಗಳಲ್ಲಿ ಪರಮಾಣು ಪರೀಕ್ಷೆ ಮಾಡಲಾಯಿತು ಅನ್ನುವುದು ಮಾತ್ರ ದೇಶಕ್ಕೆ ಮಹತ್ವಪೂರ್ಣವಲ್ಲ, ಅದನ್ನು ಹೇಗೆ ಮಾಡಲಾಯಿತು ಎನ್ನುವುದು ಮಹತ್ವಪೂರ್ಣವಾಗಿದೆ. ಈ ಪರೀಕ್ಷೆಯು, ಭರತ ಭೂಮಿಯು ಮಹಾನ್ ವಿಜ್ಞಾನಿಗಳ ಭೂಮಿ ಮತ್ತು ಒಂದು ಬಲವಾದ ನಾಯಕತ್ವದೊಂದಿಗೆ ಭಾರತದ ನೀತಿಯು ಹೊಸ ಗಮ್ಯತೆ ಮತ್ತು ಎತ್ತರವನ್ನು ಪಡೆದುಕೊಳ್ಳಬಹುದು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿತು. ಅಟಲ್ ಬಿಹಾರಿ ವಾಜಪೇಯಿಯವರು “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್” ಎಂಬ ಮಂತ್ರವನ್ನು ಕೊಟ್ಟಿದ್ದರು. ಇಂದು ಮೇ 11, 1998 ರ 20 ನೇ ವರ್ಷಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಶಕ್ತಿಗೆ ಅಟಲ್ ಜೀ ಕೊಟ್ಟ ‘ಜೈ ವಿಜ್ಞಾನ್’ ಎಂಬ ಮಂತ್ರವನ್ನು ಸಮೀಕರಿಸಿಕೊಂಡು ಆಧುನಿಕ ಭಾರತವನ್ನು ಕಟ್ಟಲು, ಶಕ್ತಿಶಾಲಿ ಭಾರತವನ್ನು ಕಟ್ಟಲು, ಸಮರ್ಥ ಭಾರತವನ್ನು ಕಟ್ಟಲು ಪ್ರತಿಯೊಬ್ಬ ಯುವಜನತೆಯೂ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು. ನಿಮ್ಮ ಸಾಮರ್ಥ್ಯವನ್ನು ಭಾರತದ ಸಾಮರ್ಥ್ಯದ ಭಾಗವಾಗಿಸಿ. ನೋಡುನೋಡುತ್ತಿದ್ದಂತೆ ಯಾವ ಯಾತ್ರೆಯನ್ನು ಅಟಲ್ ಜೀ ಯವರು ಪ್ರಾರಂಭಿಸಿದ್ದರೋ ಅದನ್ನು ಮುಂದುವರೆಸುತ್ತಿರುವ  ಒಂದು ಹೊಸ ತೃಪ್ತಿ, ಹೊಸ ಆನಂದ ನಾವೂ ಪಡೆದುಕೊಳ್ಳುತ್ತೇವೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಮತ್ತೊಮ್ಮೆ ಮನದ ಮಾತು ಕಾರ್ಯಕ್ರಮದಲ್ಲಿ ಭೇಟಿಯಾದಾಗ ಮತ್ತಷ್ಟು ಮಾತುಗಳನ್ನು ಆಡೋಣ.

ಅನಂತಾನಂತ ಧನ್ಯವಾದಗಳು.



(Release ID: 1530745) Visitor Counter : 241