ಪ್ರಧಾನ ಮಂತ್ರಿಯವರ ಕಛೇರಿ

ಸ್ವೀಡನ್ ಮತ್ತು ಯು.ಕೆ. ಗೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ಹೇಳಿಕೆ

Posted On: 15 APR 2018 8:50PM by PIB Bengaluru

ಸ್ವೀಡನ್ ಮತ್ತು ಯು.ಕೆ. ಗೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ಹೇಳಿಕೆ 
 

ಸ್ವೀಡನ್ ಮತ್ತು ಯುನೈಟೆಡ್ ಕಿಂಗ್ಡಮ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಯ ಪಠ್ಯ ಈ ಕೆಳಗಿನಂತಿದೆ

"ನಾನು ದ್ವಿಪಕ್ಷೀಯ ಸಭೆಗಾಗಿ ಮತ್ತು ಭಾರತ-ನಾರ್ಡಿಕ್ ಶೃಂಗಸಭೆ ಮತ್ತು ಕಾಮನ್ವೆಲ್ತ್ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳಲು 2018ರ ಏಪ್ರಿಲ್ 17-20ರವರೆಗೆ ಸ್ವೀಡನ್ ಮತ್ತು ಯುನೈಟೆಡ್ ಕಿಂಗ್ಡಮ್ ಗೆ ಭೇಟಿ ನೀಡುತ್ತಿದ್ದೇನೆ.

ಸ್ವೀಡನ್ ಪ್ರಧಾನಮಂತ್ರಿ ಸ್ಟೀಫನ್ ಲಾಫ್ವೆನ್ ಅವರ ಆಹ್ವಾನದ ಮೇರೆಗೆ ಏಪ್ರಿಲ್ 17ರಂದು, ನಾನು ಸ್ಟಾಕ್ ಹೋಂನಲ್ಲಿರುತ್ತೇನೆ. ಇದು ಸ್ವೀಡನ್ ಗೆ ನನ್ನ ಪ್ರಥಮ ಭೇಟಿಯಾಗಿದೆ. ಭಾರತ ಮತ್ತು ಸ್ವೀಡನ್ ಆಪ್ತ ಮತ್ತು ಸ್ನೇಹಪರ ಬಾಂಧವ್ಯ ಹೊಂದಿವೆ. ನಮ್ಮ ಪಾಲುದಾರಿಕೆಯು ಪ್ರಜಾತಂತ್ರದ ಮೌಲ್ಯಗಳ ಆಧಾರದಲ್ಲಿವೆ ಮತ್ತು ಮುಕ್ತ, ಸಮಗ್ರ ಹಾಗೂ ಜಾಗತಿಕ ವ್ಯವಸ್ಥೆಯ ನೀಯಮ ಆಧಾರಿತ ಬದ್ಧತೆಯಿಂದ ಕೂಡಿವೆ. ಸ್ವೀಡನ್ ನಮ್ಮ ಅಭಿವೃದ್ಧಿ ಉಪಕ್ರಮಗಳಲ್ಲಿ ಮೌಲ್ಯಯುತ ಪಾಲುದಾರ ರಾಷ್ಟ್ರವಾಗಿದೆ. ಪ್ರಧಾನಮಂತ್ರಿ ಲಾಫ್ವೆನ್ ಮತ್ತು ನನಗೆ ಎರಡೂ ರಾಷ್ಟ್ರಗಳ ಉನ್ನತ ವಾಣಿಜ್ಯ ನಾಯಕರೊಂದಿಗೆ ಮಾತುಕತೆ ನಡೆಸುವ ಮತ್ತು ವಾಣಿಜ್ಯ ಮತ್ತು ಹೂಡಿಕೆ, ನಾವಿನ್ಯತೆ, ಎಸ್ ಅಂಡ್ ಟಿ, ಕೌಶಲ ವರ್ಧನೆ, ಸ್ಮಾರ್ಟ್ ಸಿಟಿಗಳು, ಶುದ್ಧ ಇಂಧನ, ಡಿಜಿಟಲೀಕರಣ ಮತ್ತು ಆರೋಗ್ಯದ ಮೇಲೆ ಗಮನ ಹರಿಸಿ ಭವಿಷ್ಯದ ಮಾರ್ಗಸೂಚಿಯನ್ನು ರೂಪಿಸುವ ಅವಕಾಶ ದೊರೆತಿದೆ. ನಾನು ಸ್ವೀಡನ್ ರ ದೊರೆ ಘನತೆವೆತ್ತ ಕಾರ್ಲ್ XVI ಗುಸ್ತಫ್ ಅವರನ್ನೂ ಭೇಟಿ ಮಾಡಲಿದ್ದೇನೆ.

ಫಿನ್ ಲ್ಯಾಂಡ್, ನಾರ್ವೆ, ಡೆನ್ಮಾರ್ಕ್ ಮತ್ತು ಐಸ್ ಲ್ಯಾಂಡ್ ಪ್ರಧಾನಮಂತ್ರಿಯವರೊಂದಿಗೆ ಭಾರತ ಮತ್ತು ಸ್ವೀಡನ್ ಜಂಟಿಯಾಗಿ ಭಾರತ – ನಾರ್ಡಿಕ್ ಶೃಂಗಸಭೆಯನ್ನು ಸ್ಟಾಕ್ ಹೋಂ ನಲ್ಲಿ ಏಪ್ರಿಲ್ 17ರಂದು ಆಯೋಜಿಸಿವೆ. ನೋರ್ಡಿಕ್ ರಾಷ್ಟ್ರಗಳು ಶುದ್ಧ ತಂತ್ರಜ್ಞಾನ, ಪರಿಸರಾತ್ಮಕ ಪರಿಹಾರಗಳು, ಬಂದರು ಆಧುನೀಕರಣ, ಶೀತಲ ಸರಪಣಿ, ಕೌಶಲ ವರ್ಧನೆ ಮತ್ತು ನಾವಿನ್ಯತೆಯಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ನಾರ್ಡಿಕ್ ಸಾಮರ್ಥ್ಯ ಭಾರತದ ಪರಿವರ್ತನೆಯ ನಮ್ಮ ದೃಷ್ಟಿಕೋನಕ್ಕೆ ಹೊಂದಿಕೊಳ್ಳುತ್ತದೆ.

2018ರ ಏಪ್ರಿಲ್ 18ರಂದು ನಾನು, ಪ್ರಧಾನಮಂತ್ರಿ ಥೆರೆಸಾ ಮೇ ಅವರ ಆಹ್ವಾನದ ಮೇರೆಗೆ ಲಂಡನ್ ಗೆ ಹೋಗುತ್ತಿದ್ದೇನೆ. ನಾನು 2015ರ ನವೆಂಬರ್ ನಲ್ಲಿ ಕೊನೆಯದಾಗಿ ಯು.ಕೆ.ಗೆ ಭೇಟಿ ನೀಡಿದ್ದೆ. ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಬಲವಾದ ಐತಿಹಾಸಿಕ ಬಾಂಧವ್ಯದೊಂದಿಗೆ ಆಧುನಿಕ ಪಾಲುದಾರಿಕೆಯ ನಂಟನ್ನ ಹಂಚಿಕೊಂಡಿವೆ.

ಲಂಡನ್ ಗೆ ನಾನು ನೀಡುತ್ತಿರುವ ಭೇಟಿ, ಬೆಳೆಯುತ್ತಿರುವ ಈ ದ್ವಿಪಕ್ಷೀಯ ಕಾರ್ಯಕ್ರಮಗಳಿಗೆ ಹೊಸ ಚಾಲನೆ ನೀಡುವ ಮತ್ತೊಂದು ಅವಕಾಶ ನೀಡುತ್ತದೆ. ನಾನು ಆರೋಗ್ಯ ಆರೈಕೆ, ನಾವಿನ್ಯತೆ, ಡಿಜಿಟಲೀಕರಣ, ವಿದ್ಯುತ್ ಚಲನಶೀಲತೆ, ಶುದ್ಧ ಇಂಧನ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿಭಾರತ –ಯುಕೆಪಾಲುದಾರಿಕೆಯನ್ನು ಹೆಚ್ಚಿಸಲು ಗಮನ ಹರಿಸುತ್ತೇನೆ. "ಲಿವಿಂಗ್ ಬ್ರಿಡ್ಜ್" ಧ್ಯೇಯದ ಅಡಿಯಲ್ಲಿ, ನನಗೆ ಭಾರತ – ಯುಕೆ ಬಾಂಧವ್ಯವನ್ನು ಬಹುಮುಖಿಯಾಗಿ ಶ್ರೀಮಂತಗೊಳಿಸಿದ ವಿವಿಧ ಸ್ತರದ ಜನರನ್ನು ಭೇಟಿ ಮಾಡುವ ಅವಕಾಶ ಲಭಿಸಿದೆ.

ನಾನು ಘನತೆವೆತ್ತ ರಾಣಿಯವರನ್ನು ಭೇಟಿ ಮಾಡುತ್ತೇನೆ, ಹೊಸ ಆರ್ಥಿಕ ಪಾಲುದಾರಿಕೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎರಡೂ ದೇಶಗಳ ಸಿಇಓಗಳೊಂದಿಗೆ ಕೆಲಕಾಲ ಸಂವಾದ ನಡೆಸಲಿದ್ದೇನೆ, ಲಂಡನ್ ನಲ್ಲಿ ಆಯುರ್ವೇದ ಉತ್ಕೃಷ್ಟತಾ ಕೇಂದ್ರಕ್ಕೆಚಾಲನೆ ನೀಡಲಿದ್ದೇನೆ ಮತ್ತು ಅಂತಾರಾಷ್ಟ್ರೀಯ ಸೌರ ಸಹಯೋಗಕ್ಕೆ ತನ್ನ ಹೊಸ ಸದಸ್ಯನಾಗಿ ಯುಕೆಯನ್ನು ಸ್ವಾಗತಿಸಲಿದ್ದೇನೆ.

ಮಾಲ್ಟಾದಿಂದ ಹೊಸದಾಗಿ ಕಾಮನ್ವೆಲ್ತ್ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಯುನೈಟೆಡ್ ಕಿಂಗ್ಡಮ್ ಏಪ್ರಿಲ್ 19 ಮತ್ತು 20ರಂದು ಆಯೋಜಿಸಿರುವ ಕಾಮನ್ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ.

ಕಾಮನ್ವೆಲ್ತ್ ಅನನ್ಯವಾದ ಬಹುಪಕ್ಷೀಯ ಗುಂಪಾಗಿದ್ದು, ಅದು ಅಭಿವೃದ್ಧಿಶೀಲ ಸದಸ್ಯ ರಾಷ್ಟ್ರಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ರಾಷ್ಟ್ರಗಳು ಮತ್ತು ಸಣ್ಣ-ದ್ವೀಪಗಳ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉಪಯುಕ್ತ ನೆರವು ನೀಡುತ್ತಿರುವುದಷ್ಟೇ ಅಲ್ಲ, ಅಭಿವೃದ್ಧಿ ವಿಷಯಗಳಲ್ಲಿ ಬಲವಾದ ಅಂತಾರಾಷ್ಟ್ರೀಯ ಧ್ವನಿಯನ್ನು ಸಹ ಹೊಂದಿದೆ.

ಸ್ವೀಡನ್ ಮತ್ತು ಯುಕೆಯ ಈ ಭೇಟಿ, ಈ ರಾಷ್ಟ್ರಗಳೊಂದಿಗೆ ನಮ್ಮ ಕಾರ್ಯಕ್ರಮಗಳನ್ನು ಹೆಚ್ಚಿಸಲು ಉಪಯುಕ್ತವಾಗಿದೆ ಎಂಬ ವಿಶ್ವಾಸ ನನಗಿದೆ. "
 

****



(Release ID: 1529246) Visitor Counter : 91