ಪ್ರಧಾನ ಮಂತ್ರಿಯವರ ಕಛೇರಿ

‘ಓಖಿ’ ಚಂಡಮಾರುತ ಬಾಧಿತ ಲಕ್ಷದ್ವೀಪ, ತಮಿಳುನಾಡು ಮತ್ತು ಕೇರಳದ ಪ್ರದೇಶಗಳಿಗೆ ನಾಳೆ ಭೇಟಿ ನೀಡಲಿರುವ ಪ್ರಧಾನಿ

Posted On: 18 DEC 2017 3:54PM by PIB Bengaluru

ಓಖಿ ಚಂಡಮಾರುತ ಬಾಧಿತ ಲಕ್ಷದ್ವೀಪ, ತಮಿಳುನಾಡು ಮತ್ತು ಕೇರಳದ ಪ್ರದೇಶಗಳಿಗೆ ನಾಳೆ ಭೇಟಿ ನೀಡಲಿರುವ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಲಕ್ಷದ್ವೀಪ, ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ‘ಓಖಿ’ ಚಂಡಮಾರುತದ ಬಳಿಕ ಕವರತ್ತಿ, ಕನ್ಯಾಕುಮಾರಿ ಮತ್ತು ತಿರುವನಂತಪುರದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಅವರು ಪರಾಮರ್ಶಿಸಲಿದ್ದಾರೆ. ಪ್ರಧಾನಿಯವರು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ರೈತರು ಮತ್ತು ಮೀನುಗಾರರೂ ಸೇರಿದಂತೆ ಚಂಡಮಾರುತ ಸಂತ್ರಸ್ತರ ನಿಯೋಗವನ್ನು ಅವರು ಭೇಟಿ ಮಾಡಲಿದ್ದಾರೆ.

ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪದ ಕೆಲವು ಭಾಗಗಳು ಕಳೆದ 2017 ನವೆಂಬರ್ ಅಂತ್ಯದಲ್ಲಿ ಮತ್ತು ಡಿಸೆಂಬರ್ ಆರಂಭದಲ್ಲಿ  ಓಖಿ ಚಂಡಮಾರುತದಿಂದ ಗಂಭೀರವಾಗಿ ಬಾಧಿತವಾಗಿದ್ದವು.

ಪ್ರಧಾನಮಂತ್ರಿಯವರು ಚಂಡಮಾರುತದಿಂದ ಉಂಟಾದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದರು. ಅವರು ಎಲ್ಲ ಸೂಕ್ತ ಪ್ರಾಧಿಕಾರಗಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದರು.

ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ 3 ಮತ್ತು 4ರಂದು ಚಂಡಮಾರುತ ಬಾಧಿತ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆ ಮತ್ತು ತಿರುವನಂತಪುರಕ್ಕೆ ಭೇಟಿ ನೀಡಿದ್ದರು. ಸಂಪುಟ ಕಾರ್ಯದರ್ಶಿ ಶ್ರೀ ಪಿ.ಕೆ. ಸಿನ್ಹ ಅಧ್ಯಕ್ಷತೆಯ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್.ಸಿ.ಎಂ.ಸಿ.) ಡಿಸೆಂಬರ್ 4ರಂದು ಸಭೆ ಸೇರಿ, ಚಂಡಮಾರುತದಿಂದ ಬಾಧಿತವಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪರಿಹಾರ ಮತ್ತು ರಕ್ಷಣಾ ಕಾರ್ಯದ ಪರಾಮರ್ಶೆ ನಡೆಸಿತ್ತು.  

ಕರಾವಳಿ ಭದ್ರತಾ ಪಡೆ, ವಾಯು ಪಡೆ, ನೌಕಾ ಪಡೆ ಮತ್ತು ಎನ್.ಡಿ.ಆರ್.ಎಫ್. ಸೇರಿದಂತೆ ಕೇಂದ್ರ ಸರ್ಕಾರ ಮತ್ತು ಸಂತ್ರಸ್ತ ರಾಜ್ಯಗಳ ಸಂಸ್ಥೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಬಾಧಿತ ಪ್ರದೇಶಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2017-18ರಲ್ಲಿ  ಪ್ರಕೃತಿ ವಿಕೋಪ ಪರಿಹಾರ ಕಾರ್ಯ ಕೈಗೊಂಡಿರುವ ರಾಜ್ಯ ಸರ್ಕಾರದ ಪ್ರಯತ್ನಕ್ಕಾಗಿ ಬೆಂಬಲ ನೀಡಲು ತಮಿಳುನಾಡು ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ರಾಜ್ಯ ವಿಕೋಪ ಪರಿಹಾರ ನಿಧಿ (ಎಸ್.ಡಿ.ಆರ್.ಎಫ್.)ನ ಎರಡನೇ ಕಂತನ್ನು ಬಿಡುಗಡೆ ಮಾಡಿದೆ. 2017-18ನೇ ಹಣಕಾಸು ವರ್ಷದ ಅವಧಿಯಲ್ಲಿ, ಎರ್.ಡಿ.ಆರ್.ಎಫ್.ನ ಕೇಂದ್ರದ ಪಾಲು ಅನುಕ್ರಮವಾಗಿ ಕೇರಳ ಮತ್ತು ತಮಿಳುನಾಡಿಗೆ 153 ಕೋಟಿ ರೂಪಾಯಿ ಮತ್ತು 561 ಕೋಟಿ ರೂಪಾಯಿಗಳಾಗಿವೆ.

ಡಿಸೆಂಬರ್ 5ರ ಬಳಿಕ ಓಖಿ ಚಂಡಮಾರುತದ ಪ್ರಭಾವ ಕ್ಷೀಣಿಸುತ್ತಿದ್ದಂತೆ ಪ್ರತೀಕೂಲ ಸನ್ನಿವೇಶದಲ್ಲಿ ಜನರಿಗೆ ನೆರವಾದ ಮತ್ತು ಅಭೂತಪೂರ್ವವಾಗಿ  ಸನ್ನದ್ಧವಾಗಿದ್ದ,  ಕೇಂದ್ರೀಯ ಸಂಸ್ಥೆಗಳು, ವಿವಿಧ ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತಗಳು ಮತ್ತು ಎಚ್ಚರದಿಂದಿದ್ದ ನಾಗರಿಕರನ್ನು ಪ್ರಶಂಸಿಸಲು ಟ್ವಿಟರ್ ನೆರವು ಪಡೆದಿದ್ದರು.  

ಇದಕ್ಕೂ ಮುನ್ನ, ಕಾಲ ಕಾಲಕ್ಕೆ ತಮ್ಮ ಟ್ವೀಟ್ ಮೂಲಕ ಅವರು ಸಂತ್ರಸ್ತರಿಗೆ ದೊರಕಬಹುದಾದ ಎಲ್ಲ ಸಾಧ್ಯ ನೆರವುಗಳ ಬಗ್ಗೆ ಮಾಹಿತಿ ನೀಡಿದ್ದರು. ಚಂಡಮಾರುತ ಪರಿಹಾರದಲ್ಲಿ ತಮ್ಮ ಸಹ ನಾಗರಿಕರಿಗೆ ನೆರವಾಗುವಂತೆಯೂ ಅವರು ಜನರನ್ನು ಪ್ರೇರೇಪಿಸಿದ್ದರು.  

***



(Release ID: 1513159) Visitor Counter : 116


Read this release in: Telugu , English , Gujarati