Others

ನಕ್ಸಲ್‌ ಮುಕ್ತ ಭಾರತ

ಸಮಗ್ರ ತಂತ್ರಗಳಿಂದ ಎಡಪಂಥೀಯ ಉಗ್ರವಾದದ ನಿರ್ಮೂಲನೆ

Posted On: 24 NOV 2026 11:26AM

ಎಡಪಂಥೀಯ ಉಗ್ರವಾದದಿಂದ ಭಾರತವು ಪರಿಣಾಮಕಾರಿಯಾಗಿ ಮುಕ್ತವಾಗುವ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದು, ದೇಶದಲ್ಲಿ ಎಲ್‌ಡಬ್ಲ್ಯೂಇ ಪೀಡಿತ ಯಾವುದೇ ಜಿಲ್ಲೆ ಉಳಿದಿಲ್ಲ. ಸುರಕ್ಷತಾ ಕಾರ್ಯಾಚರಣೆಗಳು, ಮೂಲಸೌಕರ್ಯ ವಿಸ್ತರಣೆ, ಶರಣಾದ ಕಾರ್ಯಕರ್ತರ ಪುನರ್ವಸತಿ, ಬುಡಕಟ್ಟು ಕಲ್ಯಾಣ ಮತ್ತು ಆಡಳಿತ ಸುಧಾರಣೆಯನ್ನು ಒಳಗೊಂಡ ಸಮಗ್ರ ತಂತ್ರದಿಂದ ಈ ಪರಿವರ್ತನೆ ಸಾಧ್ಯವಾಗಿದೆ. ಸಂಘಟಿತ ಕ್ರಮಗಳು ಹಿಂಸಾಚಾರವನ್ನು ತೀವ್ರವಾಗಿ ಕಡಿಮೆ ಮಾಡಿವೆ, ದೂರದ ಪ್ರದೇಶಗಳಲ್ಲಿ ಸರ್ಕಾರದ ಉಪಸ್ಥಿತಿಯನ್ನು ಮರುಸ್ಥಾಪಿಸಿವೆ ಮತ್ತು ಸಮಗ್ರ ಅಭಿವೃದ್ಧಿಗೆ ವೇಗ ನೀಡಿ, ಶಾಂತಿ ಮತ್ತು ಸಮೃದ್ಧಿಗೆ ಶಾಶ್ವತ ಅಡಿಪಾಯವನ್ನು ರೂಪಿಸಿವೆ.

ಶಾಂತಿ ಮತ್ತು ಭದ್ರತೆಯ ಹೊಸ ಯುಗ

ಸುಮಾರು ಆರು ದಶಕಗಳ ಕಾಲ ಭಾರತವು ಎಡಪಂಥೀಯ ಉಗ್ರವಾದದ ಸವಾಲನ್ನು ಎದುರಿಸಿತು. ಇದು ದೂರದ ಅಥವಾ ಕೇವಲ ಸೈದ್ಧಾಂತಿಕ ಸವಾಲಾಗಿರಲಿಲ್ಲ; ಬದಲಿಗೆ ರಸ್ತೆಗಳು, ಶಾಲೆಗಳು ಮತ್ತು ಸಮಗ್ರ ಅಭಿವೃದ್ಧಿಯ ವ್ಯಾಪಕ ಭರವಸೆಗಳಿಂದ ವಂಚಿತವಾದ ಲಕ್ಷಾಂತರ ಬುಡಕಟ್ಟು ಕುಟುಂಬಗಳು ಮತ್ತು ಗ್ರಾಮಗಳ ನಿತ್ಯದ ವಾಸ್ತವವಾಗಿತ್ತು. ನಿರಂತರ ಹಿಂಸಾಚಾರ ಮತ್ತು ಅನಿಶ್ಚಿತತೆಯೇ ದೈನಂದಿನ ಬದುಕನ್ನು ವ್ಯಾಖ್ಯಾನಿಸಿದ್ದವು.

ಮಾರ್ಚ್ 31, 2026 ರಂದು ಈ ಪರಿಸ್ಥಿತಿ ಬದಲಾಯಿತು; ದೇಶವು ನಕ್ಸಲಿಸಂನಿಂದ ಪರಿಣಾಮಕಾರಿಯಾಗಿ ಮುಕ್ತವಾಗುವ ಮೂಲಕ ಭಾರತದ ಆಂತರಿಕ ಭದ್ರತಾ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲು ದಾಖಲಾಯಿತು. ಮೇ 2014 ರಲ್ಲಿ ಪ್ರಸ್ತುತ ಸರ್ಕಾರ ಅಧಿಕಾರ ವಹಿಸಿಕೊಂಡಾಗ, 'ರೆಡ್ ಕಾರಿಡಾರ್' ಅತ್ಯಂತ ಗಂಭೀರವಾದ ಆಂತರಿಕ ಭದ್ರತಾ ಸವಾಲುಗಳಲ್ಲಿ ಒಂದಾಗಿತ್ತು. ಹಿಂದಿನ ವಿಧಾನಗಳು ಹೆಚ್ಚಾಗಿ ಚದುರಿದಂತಿದ್ದು, ಘಟನೆ ಆಧಾರಿತವಾಗಿದ್ದವು; ಸಮಸ್ಯೆಯ ರಚನಾತ್ಮಕ ಮೂಲಗಳನ್ನು ಪರಿಹರಿಸುವ ಬದಲು ರೋಗಲಕ್ಷಣಗಳನ್ನು ಮಾತ್ರ ನಿರ್ವಹಿಸುತ್ತಿದ್ದವು. ಇದನ್ನು ನಿವಾರಿಸಲು ನಂತರ ಹೆಚ್ಚು ಸಮಗ್ರ ಮತ್ತು ಸಂಘಟಿತ ತಂತ್ರವನ್ನು ಅನುಸರಿಸಲಾಯಿತು.

ಕಳೆದ ಹನ್ನೆರಡು ವರ್ಷಗಳಲ್ಲಿ, ಪರಸ್ಪರ ಪೂರಕವಾದ ಮೂರು ಕಾರ್ಯತಂತ್ರಗಳ ಮೂಲಕ ಈ ಪರಿವರ್ತನೆಗೆ ಮಾರ್ಗದರ್ಶನ ನೀಡಲಾಯಿತು. ರಾಜ್ಯದ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ಮರುಸ್ಥಾಪಿಸುವಲ್ಲಿ ಬಲವರ್ಧಿತ ಸುರಕ್ಷತಾ ಕಾರ್ಯಾಚರಣೆಗಳು, ಸುಧಾರಿತ ಸಂಸ್ಥೆಗಳ ನಡುವಿನ ಸಮನ್ವಯ, ವ್ಯವಸ್ಥಿತ ಶರಣಾಗತಿ ಮತ್ತು ಪುನರ್ವಸತಿ ಚೌಕಟ್ಟುಗಳು ಹಾಗೂ ನಿರಂತರ ಜನಸಂಪರ್ಕ ಸೇರಿವೆ. ಮೂಲಸೌಕರ್ಯ ವಿಸ್ತರಣೆಯು ಭೌತಿಕ ಮತ್ತು ಡಿಜಿಟಲ್ ಸಂಪರ್ಕವನ್ನು ಸುಧಾರಿಸುವುದು, ದೂರದ ಪ್ರದೇಶಗಳಲ್ಲಿ ಆಡಳಿತದ ಉಪಸ್ಥಿತಿಯನ್ನು ವಿಸ್ತರಿಸುವುದು ಮತ್ತು ದೀರ್ಘಕಾಲೀನ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವುದನ್ನು ಒಳಗೊಂಡಿತ್ತು. ಕಲ್ಯಾಣ ಕಾರ್ಯಕ್ರಮಗಳು ಘನತೆ, ಸಮಗ್ರ ಸೇವಾ ವಿತರಣೆ, ಸಾಂಸ್ಕೃತಿಕ ಒಳಗೊಳ್ಳುವಿಕೆ ಮತ್ತು ಬಾಧಿತ ಸಮುದಾಯಗಳನ್ನು ರಾಷ್ಟ್ರೀಯ ಅಭಿವೃದ್ಧಿ ಪ್ರಕ್ರಿಯೆಯ ಮುಖ್ಯವಾಹಿನಿಗೆ ತರುವುದರ ಮೇಲೆ ಕೇಂದ್ರೀಕೃತವಾಗಿದ್ದವು.

ಈ ಪ್ರತಿಯೊಂದು ಅಂಶವೂ ಪರಸ್ಪರ ಬಲಪಡಿಸಿತು. ಭದ್ರತೆಯು ಅಭಿವೃದ್ಧಿಗೆ ಅವಕಾಶ ಕಲ್ಪಿಸಿತು. ಅಭಿವೃದ್ಧಿಯು ನಂಬಿಕೆಯನ್ನು ಇನ್ನಷ್ಟು ಗಾಢವಾಗಿಸಿತು. ನಂಬಿಕೆಯು ಕಲ್ಯಾಣ ಯೋಜನೆಗಳ ಅನುಷ್ಠಾನದ ವೇಗವನ್ನು ಹೆಚ್ಚಿಸಿತು. ಇದು ಕೇವಲ ಒಂದು ಹಂತದ ಕ್ರಮವಾಗಿರಲಿಲ್ಲ; ಇದು ಪ್ರಗತಿಯ ಅವಿನಾಭಾವ ಸರಪಳಿಯಾಗಿತ್ತು.

ರಾಜ್ಯದ ಮೇಲೆ ವಿಶ್ವಾಸ ಮರುಸ್ಥಾಪನೆ

ದುರ್ಬಲ ಮತ್ತು ದೂರದ ಪ್ರದೇಶಗಳಲ್ಲಿ ಸರ್ಕಾರದ ನಿರಂತರ ಉಪಸ್ಥಿತಿಯ ಮೂಲಕ ನಂಬಿಕೆ ಮತ್ತು ವಿಶ್ವಾಸವನ್ನು ಮರುನಿರ್ಮಾಣ ಮಾಡುವುದರ ಮೇಲೆ ಈ ಪ್ರಯತ್ನ ಕೇಂದ್ರೀಕೃತವಾಗಿತ್ತು. ಪರಿಣಾಮಕಾರಿ ಸ್ಪಂದನೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆಗಳ ನಡುವಿನ ಸಮನ್ವಯವನ್ನು ಇದು ಬಲಪಡಿಸಿತು. ಈ ವಿಧಾನವು ಸಮುದಾಯಗಳು ಮತ್ತು ಸರ್ಕಾರಿ ವ್ಯವಸ್ಥೆಯ ನಡುವಿನ ದೀರ್ಘಕಾಲದ ಅಂತರವನ್ನು ಕಡಿಮೆ ಮಾಡಿತು.

2014 ಕ್ಕಿಂತ ಮುಂಚಿನ ಹಿಂಸಾಚಾರದ ಉತ್ತುಂಗ

ಮಾವೋವಾದಿ ಸಿದ್ಧಾಂತ ಮತ್ತು ಸಶಸ್ತ್ರ ಕ್ರಾಂತಿಯ ತತ್ವದಿಂದ ಪ್ರೇರಿತವಾದ ಎಡಪಂಥೀಯ ಉಗ್ರವಾದವು 1967 ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬಾರಿ ದಂಗೆಯಿಂದ ಬೆಳೆಯಿತು. ಬಂದೂಕಿನ ನಳಿಕೆಯಿಂದ ಅಧಿಕಾರ ಹರಿದುಬರುತ್ತದೆ ಎಂಬ ಸರಳ ಮತ್ತು ಹಿಂಸಾತ್ಮಕ ತತ್ವವೇ ಇದರ ಮಾರ್ಗದರ್ಶಿ ಸೂತ್ರವಾಗಿತ್ತು. ನಕ್ಸಲರ ಸುಮಾರು ಶೇ. 92 ರಷ್ಟು ಶಸ್ತ್ರಾಸ್ತ್ರಗಳನ್ನು ನೇರವಾಗಿ ಪೊಲೀಸ್ ಶಸ್ತ್ರಾಗಾರಗಳಿಂದ ಲೂಟಿ ಮಾಡಲಾಗಿತ್ತು. ಕಾಲಾನಂತರದಲ್ಲಿ ಹಲವಾರು ಉಗ್ರಗಾಮಿ ಸಂಘಟನೆಗಳು 2004 ರಲ್ಲಿ ಸಿಪಿಐ (ಮಾವೋವಾದಿ) ಅಡಿಯಲ್ಲಿ ವಿಲೀನಗೊಂಡವು ಮತ್ತು ಇದು ಭಾರತದ ಅತ್ಯಂತ ದೊಡ್ಡ ಆಂತರಿಕ ಭದ್ರತಾ ಸವಾಲಾಗಿ ಮಾರ್ಪಟ್ಟಿತು.

2004 ರಿಂದ 2014 ರ ದಶಕವು ಎಲ್‌ಡಬ್ಲ್ಯೂಇ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಅವಧಿಗಳಲ್ಲಿ ಒಂದಾಗಿತ್ತು. 2010 ರಲ್ಲಿ 1,936 ಘಟನೆಗಳು ಮತ್ತು ಒಂದೇ ವರ್ಷದಲ್ಲಿ 720 ನಾಗರಿಕರ ಸಾವಿನೊಂದಿಗೆ ಹಿಂಸಾಚಾರವು ಉತ್ತುಂಗಕ್ಕೇರಿತು. ಈ ಸಂಪೂರ್ಣ ದಶಕದಲ್ಲಿ 17,542 ಹಿಂಸಾತ್ಮಕ ಘಟನೆಗಳು, 1,913 ಭದ್ರತಾ ಪಡೆಗಳ ಸಿಬ್ಬಂದಿ ಸಾವುಗಳು ಮತ್ತು 5,019 ನಾಗರಿಕರ ಸಾವುಗಳು ದಾಖಲಾಗಿದ್ದವು.

ಯಾವುದೇ ಸ್ಥಿರ ರಾಷ್ಟ್ರೀಯ ನೀತಿ ಇರಲಿಲ್ಲ. ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗಿಂತಲೂ ಭೌಗೋಳಿಕ ವ್ಯಾಪ್ತಿಯಲ್ಲಿ ಹೆಚ್ಚಿನದಾಗಿದ್ದ ನಕ್ಸಲಿಸಂ ಭಾರತ ಎದುರಿಸುತ್ತಿರುವ ಅತ್ಯಂತ ದೊಡ್ಡ ಆಂತರಿಕ ಭದ್ರತಾ ಸವಾಲು ಎಂದು 2009 ರಲ್ಲಿಯೇ ಅಂದಿನ ಸರ್ಕಾರ ಬಹಿರಂಗವಾಗಿ ಒಪ್ಪಿಕೊಂಡಿತ್ತು.

ನೀತಿ ಬದಲಾವಣೆ: ಚದುರಿದ ಪ್ರತಿಕ್ರಿಯೆಯಿಂದ ಏಕೀಕೃತ ತಂತ್ರದತ್ತ

ಎಲ್‌ಡಬ್ಲ್ಯೂಇ ಸಮಸ್ಯೆಯನ್ನು ಎದುರಿಸಲು 2015 ರಲ್ಲಿ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಮೂಲಕ ಮೊದಲ ನಿರ್ಣಾಯಕ ಕ್ರಮ ಕೈಗೊಳ್ಳಲಾಯಿತು. ಇದು ಹಿಂದಿನ ತಾತ್ಕಾಲಿಕ ಧೋರಣೆಯ ಬದಲಿಗೆ ರಚನಾತ್ಮಕ ಮತ್ತು ಇಡೀ ಸರ್ಕಾರದ ಸಮಗ್ರ ಚೌಕಟ್ಟನ್ನು ಜಾರಿಗೆ ತಂದಿತು. ಭದ್ರತಾ ಕ್ರಮಗಳು ರಾಜ್ಯ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು, ದೂರದ ಪ್ರದೇಶಗಳಲ್ಲಿನ ಭದ್ರತಾ ಕೊರತೆಗಳನ್ನು ನೀಗಿಸುವುದು ಮತ್ತು ರಾಜ್ಯ ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಡುವಿನ ಸಮನ್ವಯವನ್ನು ಸುಧಾರಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು. ಇದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಿತು, ವಿಶೇಷ ತರಬೇತಿ ನೀಡಿತು ಮತ್ತು ಸಾಮಾಜಿಕ-ಆರ್ಥಿಕ ಮೂಲ ಕಾರಣಗಳನ್ನು ಭದ್ರತೆಯೊಂದಿಗೆ ಪರಿಹರಿಸುತ್ತಾ ಭದ್ರತೆ ಸಂಬಂಧಿತ ವೆಚ್ಚ, ವಿಶೇಷ ಮೂಲಸೌಕರ್ಯ ಯೋಜನೆ ಮತ್ತು ವಿಶೇಷ ಕೇಂದ್ರ ನೆರವು ಯೋಜನೆಗಳ ಮೂಲಕ ನಿಧಿಯನ್ನು ಹಂಚಿಕೆ ಮಾಡಿತು. 2017 ರಲ್ಲಿ ಎಸ್‌ಸಿಎ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು ₹4,318.52 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಹಿಂದೆ ಎಲ್‌ಡಬ್ಲ್ಯೂಇ ಪೀಡಿತವಾಗಿದ್ದ ರಾಜ್ಯಗಳಲ್ಲಿ ವಿಶೇಷ ಪಡೆಗಳು, ವಿಶೇಷ ಗುಪ್ತಚರ ಶಾಖೆಗಳು, ಜಿಲ್ಲಾ ಪೊಲೀಸರನ್ನು ಬಲಪಡಿಸಲು ಮತ್ತು ಸುಭದ್ರ ಪೊಲೀಸ್ ಠಾಣೆಗಳ ನಿರ್ಮಾಣಕ್ಕಾಗಿ ವಿಶೇಷ ಮೂಲಸೌಕರ್ಯ ಅಡಿಯಲ್ಲಿ ₹1,761 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.

2014-15 ರಿಂದ ಇಲ್ಲಿಯವರೆಗೆ, ಭದ್ರತಾ ಪಡೆಗಳ ಕಾರ್ಯಾಚರಣೆಯ ಅಗತ್ಯಗಳು, ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ, ಶರಣಾದ ಎಡಪಂಥೀಯ ಉಗ್ರವಾದಿ ಕಾರ್ಯಕರ್ತರ ಪುನರ್ವಸತಿ ಹಾಗೂ ಹುತಾತ್ಮ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಕುಟುಂಬಗಳಿಗೆ ಪರಿಹಾರ (ಎಕ್ಸ್‌ ಗ್ರೇಷಿಯಾ) ನೆರವು ನೀಡಲು ಭದ್ರತೆ ಸಂಬಂಧಿತ ವೆಚ್ಚ ಯೋಜನೆಯಡಿಯಲ್ಲಿ ₹3,877.98 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಮೊದಲ ಬಾರಿಗೆ, ಭಾರತವು ಎಲ್‌ಡಬ್ಲ್ಯೂಇ ವಿರುದ್ಧ ನಾಲ್ಕು-ಆಯಾಮದ ತಂತ್ರವನ್ನು ಆಧರಿಸಿದ ರಚನಾತ್ಮಕ ಮತ್ತು ಸಮಗ್ರ ವಿಧಾನವನ್ನು ಜಾರಿಗೆ ತಂದಿತು — ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು, ತ್ವರಿತ ಅಭಿವೃದ್ಧಿ, ಹಕ್ಕುಗಳು ಮತ್ತು ಸೌಲಭ್ಯಗಳನ್ನು ಖಚಿತಪಡಿಸುವುದು ಹಾಗೂ ಗ್ರಹಿಕೆ ನಿರ್ವಹಣೆ. ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಹೆಚ್ಚು ಕೇಂದ್ರೀಕೃತ ಸಂಘಟಿತ ಚೌಕಟ್ಟಿನ ಮೂಲಕ ಸರ್ಕಾರದ ಪ್ರತಿಕ್ರಿಯೆಗೆ ಮಾರ್ಗದರ್ಶನ ನೀಡಲಾಗಿದ್ದು, ನೀತಿ ಅನುಷ್ಠಾನದಲ್ಲಿ ಹೆಚ್ಚಿನ ಸ್ಪಷ್ಟತೆ ಮತ್ತು ಸಮನ್ವಯವನ್ನು ತಂದಿತು.

ನಕ್ಸಲಿಸಂನ ಭಯ ಮತ್ತು ಹಿಂಸಾಚಾರದಿಂದ ಭಾರತವನ್ನು ಮುಕ್ತಗೊಳಿಸುವ ಗುರಿಯನ್ನು ಕೇಂದ್ರೀಕೃತ ಯೋಜನೆ ಮತ್ತು ಸಂಘಟಿತ ಕ್ರಮದ ಮೂಲಕ ಸಾಧಿಸಲಾಯಿತು. 2024 ರ ಆಗಸ್ಟ್ 24 ರಂದು, 2026 ರ ಮಾರ್ಚ್ 31 ರೊಳಗೆ ದೇಶವನ್ನು ನಕ್ಸಲ್‌ಮುಕ್ತಗೊಳಿಸುವ ಗುರಿಯನ್ನು ಭಾರತ ಸರ್ಕಾರ ನಿಗದಿಪಡಿಸಿತ್ತು. ತೀವ್ರಗೊಂಡ ಸುರಕ್ಷತಾ ಕಾರ್ಯಾಚರಣೆಗಳು, ಬಲವಾದ ಸಮನ್ವಯ, ಮೂಲಸೌಕರ್ಯ ವಿಸ್ತರಣೆ ಮತ್ತು ಚುರುಕಾದ ಅಭಿವೃದ್ಧಿ ತಲುಪಿಸುವಿಕೆಯ ಮೂಲಕ ನಿಗದಿತ ಅವಧಿಯೊಳಗೆ ಈ ಗುರಿಯನ್ನು ಸಾಧಿಸಲಾಯಿತು.

ಭದ್ರತಾ ಜಾಲದ ನಿರ್ಮಾಣ

ಮೂಲಸೌಕರ್ಯ ವಿಸ್ತರಣೆ, ವಿಶೇಷ ಪಡೆಗಳು ಮತ್ತು ಸುಧಾರಿತ ಕಾರ್ಯಾಚರಣಾ ಸಮನ್ವಯದ ಮೂಲಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಭದ್ರತಾ ಕೊರತೆಯನ್ನು ಸರ್ಕಾರ ವ್ಯವಸ್ಥಿತವಾಗಿ ನೀಗಿಸಿತು. ಈ ಸಮಗ್ರ ವಿಧಾನವು ರೆಡ್ ಕಾರಿಡಾರ್‌ನಾದ್ಯಂತ ಸರ್ಕಾರದ ಉಪಸ್ಥಿತಿ, ಚಲನಶೀಲತೆ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ದಂಗೆ ನಿಗ್ರಹ ಸಾಮರ್ಥ್ಯಗಳನ್ನು ಹೆಚ್ಚಿಸಿತು.

2014 ಕ್ಕಿಂತ ಮೊದಲು ಕೇವಲ 169 ಭದ್ರತಾ ಶಿಬಿರಗಳಿದ್ದರೆ, ಹೊಸದಾಗಿ 668 ಭದ್ರತಾ ಶಿಬಿರಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಭದ್ರತಾ ಜಾಲವನ್ನು ಇನ್ನಷ್ಟು ಬಿಗಿಗೊಳಿಸಲು, ಪ್ರದೇಶದ ಮೇಲೆ ಹಿಡಿತ ಸಾಧಿಸಲು ಮತ್ತು ದೂರದ ಅರಣ್ಯ ಪ್ರದೇಶಗಳಲ್ಲಿ ನಿರಂತರ ಕಾರ್ಯಾಚರಣೆಗಳನ್ನು ಮುಂದುವರಿಸಲು 615 ಸುಭದ್ರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ದೂರದ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು, ಸೈನಿಕರ ಸಂಚಾರ, ಗಾಯಾಳುಗಳ ಸ್ಥಳಾಂತರ ಮತ್ತು ಕಣ್ಗಾವಲಿಗಾಗಿ 68 ರಾತ್ರಿ-ಇಳಿಯುವ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಭದ್ರತಾ ಪಡೆಗಳಿಗೆ 400 ಬುಲೆಟ್-ಪ್ರೂಫ್ ಮತ್ತು ಬ್ಲಾಸ್ಟ್-ಪ್ರೂಫ್ ವಾಹನಗಳನ್ನು ಒದಗಿಸಲಾಗಿದ್ದು, ಅವರ ಕಲ್ಯಾಣ ಮತ್ತು ವೈದ್ಯಕೀಯ ನೆರವಿಗಾಗಿ 5 ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ.

ವಿಶೇಷ ಪಡೆಗಳ ಸಂಯೋಜನೆ: ಕೋಬ್ರಾ, ಡಿಆರ್‌ಜಿ, ಎಸ್‌ಟಿಎಫ್ ಮತ್ತು ಗ್ರೇಹೌಂಡ್ಸ್

ಕೋಬ್ರಾ, ಸಿಆರ್‌ಪಿಎಫ್, ಜಿಲ್ಲಾ ಮೀಸಲು ಪಡೆ ಹಾಗೂ ಜಾರ್ಖಂಡ್ ಜಾಗ್ವಾರ್, ಛತ್ತೀಸ್‌ಗಢ ಪೊಲೀಸ್ ಘಟಕಗಳು ಮತ್ತು ಆಂಧ್ರಪ್ರದೇಶದ ಗ್ರೇಹೌಂಡ್ಸ್‌ನಂತಹ ವಿಶೇಷ ರಾಜ್ಯ ಘಟಕಗಳನ್ನು ಒಳಗೊಂಡ ಹಂತ ಹಂತದ, ವಿಶೇಷ ಭದ್ರತಾ ರಚನೆಯನ್ನು ರೂಪಿಸಲಾಯಿತು. ಡಿಆರ್‌ಜಿ, ಎಸ್‌ಟಿಎಫ್, ಸಿಆರ್‌ಪಿಎಫ್ ಮತ್ತು ಕೋಬ್ರಾ ಪಡೆಗಳ ನಡುವಿನ ಜಂಟಿ ತರಬೇತಿಯು ಸ್ಪಷ್ಟ ಕಮಾಂಡ್ ರಚನೆಯೊಂದಿಗೆ ಸಂಯೋಜಿತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಪಡೆಯನ್ನು ಸೃಷ್ಟಿಸಿತು.

ತಂತ್ರಜ್ಞಾನ: ಮಹತ್ವದ ಬದಲಾವಣೆ ತಂದ ಅಂಶ

2014 ರ ನಂತರ, ಆಧುನಿಕ ತಂತ್ರಜ್ಞಾನದ ವ್ಯಾಪಕ ಬಳಕೆಯ ಮೂಲಕ ಕೇಂದ್ರ ಸರ್ಕಾರವು ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಮಹತ್ವದ ಪರಿವರ್ತನೆ ತಂದಿತು. ಮಾನವರಹಿತ ವೈಮಾನಿಕ ವಾಹನಗಳು, ಡ್ರೋನ್‌ಗಳು, ಉಪಗ್ರಹ ಚಿತ್ರಣ ಮತ್ತು ಎಐ-ಆಧಾರಿತ ದತ್ತಾಂಶ ವಿಶ್ಲೇಷಣೆಯು ನೈಜ-ಸಮಯದ ಮೇಲ್ವಿಚಾರಣೆ ಮತ್ತು ನಿಖರ ಕಣ್ಗಾವಲಿಗೆ ಅನುವು ಮಾಡಿಕೊಟ್ಟಿತು. ಸುಧಾರಿತ ಸ್ಥಳ-ಪತ್ತೆ ವ್ಯವಸ್ಥೆಗಳು, ವೈಜ್ಞಾನಿಕ ಕರೆ-ವಿವರ ವಿಶ್ಲೇಷಣೆ, ಮೊಬೈಲ್ ದತ್ತಾಂಶ ವಿಶ್ಲೇಷಣೆ ಮತ್ತು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆಯನ್ನು ಕಾರ್ಯಗತಗೊಳಿಸಲಾಯಿತು. ಸಂಚಾರವನ್ನು ಪತ್ತೆಹಚ್ಚಲು, ಸಂವಹನ ಮಾದರಿಗಳನ್ನು ವಿಶ್ಲೇಷಿಸಲು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಗೃಹ ವ್ಯವಹಾರಗಳ ಸಚಿವಾಲಯವು ತಂತ್ರಜ್ಞಾನ-ಆಧಾರಿತ ಮಾಹಿತಿಗಳನ್ನು ಬಳಸಿಕೊಂಡಿತು.

ಪತ್ತೆ, ಗುರಿ, ನಿಷ್ಕ್ರಿಯಗೊಳಿಸುವ ನಿರ್ಣಾಯಕ ಕಾರ್ಯಾಚರಣೆಗಳು

ಸರ್ಕಾರದ 'ಪತ್ತೆಹಚ್ಚು, ಗುರಿಯಾಗಿಸು, ನಿಷ್ಕ್ರಿಯಗೊಳಿಸು' ತತ್ವವು ಗಮನಾರ್ಹ ಫಲಿತಾಂಶಗಳನ್ನು ನೀಡಿತು. ನಿರಂತರ ಸುರಕ್ಷತಾ ಕಾರ್ಯಾಚರಣೆಗಳು ಮತ್ತು ಕೇಂದ್ರೀಕೃತ ಗುಪ್ತಚರ-ಆಧಾರಿತ ತಂತ್ರಗಳ ಮೂಲಕ, ಮೂರು ದಶಕಗಳಿಗೂ ಹೆಚ್ಚು ಕಾಲ ಎಲ್‌ಡಬ್ಲ್ಯೂಇ ಪ್ರಭಾವದಲ್ಲಿದ್ದ ಪ್ರದೇಶಗಳನ್ನು ಸರ್ಕಾರ ಮರಳಿ ತನ್ನ ವಶಕ್ಕೆ ಪಡೆಯಿತು.

ಆಪರೇಷನ್ ಬ್ಲ್ಯಾಕ್ ಫಾರೆಸ್ಟ್, ಆಪರೇಷನ್ ಆಕ್ಟೋಪಸ್, ಆಪರೇಷನ್ ಡಬಲ್ ಬುಲ್, ಆಪರೇಷನ್ ಥಂಡರ್‌ಸ್ಟಾರ್ಮ್, ಆಪರೇಷನ್ ಭೀಮ್‌ಬಂದ್ ಮತ್ತು ಆಪರೇಷನ್ ಚಕ್ರಬಂಧ ಸೇರಿದಂತೆ ಸರಣಿ ಸಂಘಟಿತ ಕಾರ್ಯಾಚರಣೆಗಳು ಬಾಧಿತ ಪ್ರದೇಶಗಳಲ್ಲಿ ಮಾವೋವಾದಿ ಜಾಲಗಳನ್ನು ಗಣನೀಯವಾಗಿ ದುರ್ಬಲಗೊಳಿಸಿದವು. ಇವುಗಳಲ್ಲಿ ಆಪರೇಷನ್ ಬ್ಲ್ಯಾಕ್ ಫಾರೆಸ್ಟ್ ಪ್ರಮುಖ ಯಶಸ್ಸಾಗಿ ಹೊರಹೊಮ್ಮಿತು; ಇದು ಮಾವೋವಾದಿಗಳ ಪ್ರಮುಖ ಭದ್ರಕೋಟೆಯನ್ನು ಧ್ವಂಸಗೊಳಿಸಿತು, 30 ಕ್ಕೂ ಹೆಚ್ಚು ಮಾವೋವಾದಿಗಳ ನಿರ್ಮೂಲನೆಗೆ ಕಾರಣವಾಯಿತು ಮತ್ತು ಬಂಧನಗಳು ಹಾಗೂ ಶರಣಾಗತಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಗೆ ನಾಂದಿ ಹಾಡಿತು. ಆಪರೇಷನ್ ಡಬಲ್ ಬುಲ್ ಕಾರ್ಯಾಚರಣೆಯಿಂದಾಗಿ ಗುಮ್ಲಾ, ಲೋಹರ್ದಗ ಮತ್ತು ಲತೇಹರ್ ಜಿಲ್ಲೆಗಳು ನಕ್ಸಲ್‌ಮುಕ್ತವಾದವು. ಒಟ್ಟಾರೆಯಾಗಿ, ಈ ಕಾರ್ಯಾಚರಣೆಗಳು ದೀರ್ಘಕಾಲದಿಂದ ಬಾಧಿತವಾಗಿದ್ದ ಪ್ರದೇಶಗಳಲ್ಲಿ ಸರ್ಕಾರದ ಉಪಸ್ಥಿತಿಯನ್ನು ಮರುಸ್ಥಾಪಿಸಿದವು, ಉಗ್ರಗಾಮಿ ಪ್ರಭಾವವನ್ನು ಕಡಿಮೆ ಮಾಡಿದವು ಮತ್ತು ಸುಧಾರಿತ ಭದ್ರತೆ, ಆಡಳಿತ ಹಾಗೂ ಅಭಿವೃದ್ಧಿ ತಲುಪಿಸುವಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿದವು.

ಸಿಪಿಐ (ಮಾವೋವಾದಿ) ಪಕ್ಷದ ಎಲ್ಲಾ ಪೊಲಿಟ್ ಬ್ಯೂರೋ ಸದಸ್ಯರು / ಕೇಂದ್ರ ಸಮಿತಿ ಸದಸ್ಯರನ್ನು ನಿಷ್ಕ್ರಿಯಗೊಳಿಸಲಾಗಿದೆ. 2014 ರಿಂದ ಇಲ್ಲಿಯವರೆಗೆ ಒಟ್ಟು 41 ಪಿಬಿಎಂ/ಸಿಸಿಎಂ ಸದಸ್ಯರನ್ನು ನಿಷ್ಕ್ರಿಯಗೊಳಿಸಲಾಗಿದೆ.

ಬೆಂಬಲ ವ್ಯವಸ್ಥೆಯ ನಿರ್ಬಂಧ

ಕೇವಲ ಶಸ್ತ್ರಸಜ್ಜಿತ ಕಾರ್ಯಕರ್ತರನ್ನಷ್ಟೇ ಅಲ್ಲದೆ, ಅವರಿಗೆ ಬೆಂಬಲ ನೀಡುತ್ತಿದ್ದ ಇಡೀ ವ್ಯವಸ್ಥೆಯನ್ನೇ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಸಮಗ್ರ ಸರ್ವ-ಸಂಸ್ಥೆಗಳ ವಿಧಾನವನ್ನು ಅಳವಡಿಸಿಕೊಂಡಿತು. ಅಭಿವೃದ್ಧಿಗಾಗಿ ಇದು ಇಡೀ-ಸರ್ಕಾರದ ವಿಧಾನವಾಗಿತ್ತು. ಭದ್ರತಾ ಕಾರ್ಯಾಚರಣೆಗಳಿಗಾಗಿ ಇದು ಸಮಗ್ರ-ಸಂಸ್ಥೆಗಳ ತಂತ್ರವಾಗಿತ್ತು. ನಕ್ಸಲ್ ಹಣಕಾಸು ಜಾಲಗಳನ್ನು ಭೇದಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಲಾಯಿತು. ಡಿಸೆಂಬರ್ 2025 ರ ವೇಳೆಗೆ, ಎನ್‌ಐಎ ₹40 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು. ಜಾರಿ ನಿರ್ದೇಶನಾಲಯವು ₹12 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದರೆ, ರಾಜ್ಯ ಸಂಸ್ಥೆಗಳು ಹೆಚ್ಚುವರಿಯಾಗಿ ₹40 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ಜೂನ್ 2026 ರ ವೇಳೆಗೆ, ಎನ್‌ಐಎ ದಾಖಲಿಸಿದ ಒಟ್ಟು ಎಡಪಂಥೀಯ ಉಗ್ರವಾದ ಪ್ರಕರಣಗಳ ಸಂಖ್ಯೆ 112 ತಲುಪಿದ್ದು, 100 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ.

ಶರಣಾಗತಿಗೆ ರೆಡ್ ಕಾರ್ಪೆಟ್

ಸರ್ಕಾರದ ದೃಢ ಭದ್ರತಾ ಕ್ರಮಗಳಿಗೆ ಪುನರ್ವಸತಿ-ಕೇಂದ್ರಿತ ವಿಧಾನವು ಪೂರಕವಾಗಿದ್ದು, "ಶಸ್ತ್ರಾಸ್ತ್ರ ತ್ಯಜಿಸುವವರಿಗೆ ರೆಡ್ ಕಾರ್ಪೆಟ್ ಸ್ವಾಗತವಿದೆ" ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ. ಶರಣಾಗುವ ಕಾರ್ಯಕರ್ತರಿಗೆ ಉನ್ನತ ಶ್ರೇಣಿಯ ಕಾರ್ಯಕರ್ತರಿಗೆ ₹5 ಲಕ್ಷ ಮತ್ತು ಇತರರಿಗೆ ₹2.5 ಲಕ್ಷ ತಕ್ಷಣದ ಅನುದಾನದ ಜೊತೆಗೆ 36 ತಿಂಗಳವರೆಗೆ ಪ್ರತಿ ತಿಂಗಳು ₹10,000 ಶಿಷ್ಯವೇತನ (ಸ್ಟೈಫಂಡ್) ದೊರೆಯುತ್ತದೆ. ಶರಣಾಗತಿಗೆ ಹೆಚ್ಚುವರಿಯಾಗಿ ₹50,000 ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಗುಂಪು ಶರಣಾಗತಿ ಪ್ರಕರಣಗಳಲ್ಲಿ ಇದು ದ್ವಿಗುಣಗೊಳ್ಳುತ್ತದೆ; ಜೊತೆಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಕ್ಕೆ ಹೆಚ್ಚುವರಿ ಪರಿಹಾರವೂ ಲಭ್ಯವಿದೆ.

ಪುನರ್ವಸತಿ ನೀತಿಯು ಶರಣಾಗತಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಗೆ ಕಾರಣವಾಗಿದೆ. 2026 ರ ನವೆಂಬರ್ ವರೆಗೆ, ಸುಮಾರು 8,526 ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. ನಾಗರಿಕ ಸಮಾಜದ ಸದಸ್ಯರು, ಪತ್ರಕರ್ತರು, ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳು ಪುನರ್ವಸತಿ ಕ್ರಮಗಳಲ್ಲಿ ವಿಶ್ವಾಸ ಮೂಡಿಸಲು ಮತ್ತು ಬಾಧಿತ ವ್ಯಕ್ತಿಗಳು ಮುಖ್ಯವಾಹಿನಿಗೆ ಮರಳಲು ಪ್ರೋತ್ಸಾಹ ನೀಡುವ ಮೂಲಕ ಈ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಿದ್ದಾರೆ.

ನಿರಂತರ ಭದ್ರತಾ ಕಾರ್ಯಾಚರಣೆಗಳು ಮತ್ತು ಪುನರ್ವಸತಿಯ ಈ ಸಂಯೋಜಿತ ತಂತ್ರದ ಪರಿಣಾಮಕಾರಿತ್ವವನ್ನು ಇತ್ತೀಚಿನ ಬೆಳವಣಿಗೆಗಳು ಮತ್ತಷ್ಟು ದೃಢಪಡಿಸಿವೆ. 2026 ರ ಜುಲೈ 28 ರಂದು, 'ನಯಿ ದಿಶಾ, ನಯಿ ಪಹಲ್' ನಕ್ಸಲ್ ವಿರೋಧಿ ಅಭಿಯಾನದ ಅಡಿಯಲ್ಲಿ, ಕೋಲ್ಹಾನ್ ಮತ್ತು ಲತೇಹರ್ ಪ್ರದೇಶಗಳ 16 ಸಕ್ರಿಯ ಮಾವೋವಾದಿಗಳು ರಾಂಚಿಯಲ್ಲಿ ಶರಣಾದರು. ಶರಣಾದ ಕಾರ್ಯಕರ್ತರಲ್ಲಿ ಒಬ್ಬ ಪ್ರಾದೇಶಿಕ ಕಮಾಂಡರ್, ಮೂವರು ವಲಯ ಕಮಾಂಡರ್‌ಗಳು, ಮೂವರು ಉಪ-ವಲಯ ಕಮಾಂಡರ್‌ಗಳು, ಆರು ಪ್ರದೇಶ ಕಮಾಂಡರ್‌ಗಳು ಮತ್ತು ಮೂವರು ಕಾರ್ಯಕರ್ತ ಮಟ್ಟದ ಸದಸ್ಯರು ಸೇರಿದ್ದರು. ಅವರು 11 ಆಧುನಿಕ ಬಂದೂಕುಗಳು, 38 ಮ್ಯಾಗಜೀನ್‌ಗಳು ಮತ್ತು 1,562 ಸುತ್ತು ಮದ್ದುಗುಂಡುಗಳೊಂದಿಗೆ ಶರಣಾದರು.

ಇದಲ್ಲದೆ, 2026 ರ ಜುಲೈ 29 ರಂದು, ಒಟ್ಟು ₹49 ಲಕ್ಷ ಬಹುಮಾನ ಘೋಷಿಸಲಾಗಿದ್ದ ಎಂಟು ಮಂದಿ ಮಾವೋವಾದಿಗಳು ಬಿಜಾಪುರ ಪೊಲೀಸರ ಮುಂದೆ ಶರಣಾದರು; ಇದು ಎಡಪಂಥೀಯ ಉಗ್ರವಾದದ ವಿರುದ್ಧದ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಯಶಸ್ಸಾಗಿದೆ. ಅದೇ ದಿನ, ₹1 ಕೋಟಿ ಬಹುಮಾನ ಹೊಂದಿದ್ದ ಉನ್ನತ ಮಾವೋವಾದಿ ನಾಯಕ ಮತ್ತು ಪೊಲಿಟ್‌ಬ್ಯೂರೋ ಸದಸ್ಯನನ್ನು ಧನ್‌ಬಾದ್-ಗಿರಿಡಿಹ್ ಗಡಿಯಿಂದ ಭದ್ರತಾ ಪಡೆಗಳು ಬಂಧಿಸಿದವು. ಗುಪ್ತಚರ ಮಾಹಿತಿ ಆಧಾರಿತ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ, ₹15 ಲಕ್ಷ ಬಹುಮಾನ ಘೋಷಿಸಲಾಗಿದ್ದ ಪ್ರಾದೇಶಿಕ ಸಮಿತಿ ಸದಸ್ಯ, ಒಬ್ಬ ಮಾವೋವಾದಿ ಕಾರ್ಯಕರ್ತ ಮತ್ತು ಇಬ್ಬರು ಗ್ರಾಮಸ್ಥರನ್ನೂ ವಶಕ್ಕೆ ಪಡೆಯಲಾಯಿತು.

ಈ ಭದ್ರತಾ ಸಾಧನೆಗಳು ಕೇವಲ ಕಾನೂನು-ಸುವ್ಯವಸ್ಥೆ ಮರುಸ್ಥಾಪನೆಗಷ್ಟೇ ಸೀಮಿತವಾಗಲಿಲ್ಲ. ಅವು ದೀರ್ಘಾವಧಿಯ ಅಭಿವೃದ್ಧಿಗೆ ಅಡಿಪಾಯ ಹಾಕಿದವು. ಪ್ರತಿಯೊಂದು ಸುಭದ್ರ ಪೊಲೀಸ್ ಠಾಣೆ, ಪ್ರತಿಯೊಂದು ಸಿಎಪಿಎಫ್ ಶಿಬಿರ ಮತ್ತು ಪ್ರತಿಯೊಬ್ಬ ಶರಣಾದ ಕಾರ್ಯಕರ್ತರು ಈ ಹಿಂದೆ ತಲುಪಲು ಕಷ್ಟವಾಗಿದ್ದ ಪ್ರದೇಶಗಳಿಗೆ ಆಡಳಿತದ ವ್ಯಾಪ್ತಿಯನ್ನು ವಿಸ್ತರಿಸಿದರು. ಬುಡಕಟ್ಟು ಸಮುದಾಯಗಳಿಗೆ ರಸ್ತೆಗಳು, ಶಾಲೆಗಳು, ಆರೋಗ್ಯ ಸೌಲಭ್ಯಗಳು, ಬ್ಯಾಂಕಿಂಗ್ ಸೇವೆಗಳು ಮತ್ತು ಡಿಜಿಟಲ್ ಸಂಪರ್ಕ ದೊರೆಯಲು ಭದ್ರತೆಯು ದಾರಿ ಮಾಡಿಕೊಟ್ಟಿತು. ಇದೇ ಸ್ಥಿರತೆ ಮತ್ತು ವಿಶ್ವಾಸದ ಮರುಸ್ಥಾಪನೆಯು ನಂತರ ನಡೆದ ಮೂಲಸೌಕರ್ಯ ಪರಿವರ್ತನೆಗೆ ತಳಹದಿಯಾಯಿತು.

ಹೊಸ ಭವಿಷ್ಯದ ನಿರ್ಮಾಣ: ಮೂಲಸೌಕರ್ಯ ಮತ್ತು ಸಂಪರ್ಕ

ನಕ್ಸಲಿಸಂ ಅನ್ನು ಕೊನೆಗೊಳಿಸುವ ಸಂಕಲ್ಪವು ಕೇವಲ ನಕ್ಸಲರನ್ನು ನಿರ್ಮೂಲನೆ ಮಾಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ದೊಡ್ಡ ನಗರಗಳಲ್ಲಿ ಲಭ್ಯವಿರುವ ಪ್ರತಿಯೊಂದು ಸೌಲಭ್ಯವೂ ಈ ಪ್ರದೇಶದ ಬಡ ಬುಡಕಟ್ಟು ಜನರಿಗೆ ತಲುಪಬೇಕು, ಆ ಮೂಲಕ ಅವರ ಮಕ್ಕಳೂ ಉಜ್ವಲ ಭವಿಷ್ಯವನ್ನು ಹೊಂದಬೇಕು ಎಂಬುದು ಇದರ ಉದ್ದೇಶವಾಗಿತ್ತು. ಈ ಹಂತವು ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯ, ಸಂಪರ್ಕ ಮತ್ತು ಆಡಳಿತದ ತಲುಪಿಸುವಿಕೆಯನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು. ಇದು ಅಗತ್ಯ ಸೇವೆಗಳು, ರಸ್ತೆಗಳು ಮತ್ತು ಡಿಜಿಟಲ್ ಜಾಲಗಳ ಲಭ್ಯತೆಯನ್ನು ಸುಧಾರಿಸಿತು. ಈ ಪ್ರಯತ್ನಗಳು ಈ ಹಿಂದೆ ಹಿಂದುಳಿದಿದ್ದ ಪ್ರದೇಶಗಳನ್ನು ಮುಖ್ಯವಾಹಿನಿಯ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು ನೆರವಾದವು.

ರಸ್ತೆ ಸಂಪರ್ಕ

ಬಾಧಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ಬಲಪಡಿಸಲು ರಸ್ತೆ ಅಗತ್ಯತೆ ಯೋಜನೆ ಮತ್ತು ಎಲ್‌ಡಬ್ಲ್ಯೂಇ ಬಾಧಿತ ಪ್ರದೇಶಗಳ ರಸ್ತೆ ಸಂಪರ್ಕ ಯೋಜನೆ ಎಂಬ ಎರಡು ಎಲ್‌ಡಬ್ಲ್ಯೂಇ-ನಿರ್ದಿಷ್ಟ ಯೋಜನೆಗಳ ಅಡಿಯಲ್ಲಿ ಒಟ್ಟು 15,189 ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ.

ಹಿಂದೆ ಎಲ್‌ಡಬ್ಲ್ಯೂಇ ಬಾಧಿತವಾಗಿದ್ದ ಪ್ರದೇಶಗಳಲ್ಲಿನ ಹಲವು ಮೂಲಸೌಕರ್ಯ ಯೋಜನೆಗಳು ಮಾವೋವಾದಿ ಬೆದರಿಕೆಗಳು ಮತ್ತು ಭದ್ರತಾ ಸಂಬಂಧಿತ ಸವಾಲುಗಳಿಂದಾಗಿ ಸ್ಥಗಿತಗೊಂಡಿದ್ದವು; ಇಂತಹ ಕಾಮಗಾರಿಗಳ ಟೆಂಡರ್‌ಗಳಲ್ಲಿ ಭಾಗವಹಿಸಲು ಗುತ್ತಿಗೆದಾರರು ಹಿಂಜರಿಯುತ್ತಿದ್ದರು. ಈ ಪ್ರದೇಶಗಳಲ್ಲಿ ನಿರ್ಣಾಯಕ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಗಡಿ ರಸ್ತೆಗಳ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ.

ಡಿಜಿಟಲ್ ಮತ್ತು ಮೊಬೈಲ್ ಸಂಪರ್ಕ

ಆಧುನಿಕ ಸಮಾಜಗಳಲ್ಲಿ ಪ್ರಗತಿಯ ಮೂಲಾಧಾರವಾಗಿ ದೂರಸಂಪರ್ಕ ಸಂಪರ್ಕ ಹೊರಹೊಮ್ಮಿದೆ. ಗ್ರಾಮೀಣ ಬುಡಕಟ್ಟು ಸಮುದಾಯಗಳ ವಿಷಯದಲ್ಲಿ ಇದು ಇನ್ನಷ್ಟು ಮಹತ್ವದ್ದಾಗಿದೆ; ಏಕೆಂದರೆ ಇದು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಡಿಜಿಟಲ್ ಅಂತರವನ್ನು ಕಡಿಮೆ ಮಾಡುತ್ತದೆ, ಶಿಕ್ಷಣ ಮತ್ತು ಆರೋಗ್ಯದ ಲಭ್ಯತೆಯನ್ನು ಒದಗಿಸುತ್ತದೆ ಹಾಗೂ ಆರ್ಥಿಕ ಅವಕಾಶಗಳನ್ನು ಉತ್ತೇಜಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, 9,561 ಟವರ್‌ಗಳನ್ನು ಕಾರ್ಯಾರಂಭ ಮಾಡಲಾಗಿದೆ. ಅತ್ಯಂತ ಹೆಚ್ಚಿನ ಎಲ್‌ಡಬ್ಲ್ಯೂಇ ಬಾಧಿತ ಪ್ರದೇಶಗಳಲ್ಲಿ, ಶೇ. 96 ರಷ್ಟು ಗ್ರಾಮಗಳು (46,592 ಗ್ರಾಮಗಳಲ್ಲಿ 44,728 ಗ್ರಾಮಗಳು) ಈಗ ಮೊಬೈಲ್ ಸಂಪರ್ಕವನ್ನು ಹೊಂದಿದ್ದು, ಶಿಕ್ಷಣ, ಆನ್‌ಲೈನ್ ಸೇವೆಗಳ ವಿತರಣೆ ಮತ್ತು ಆರ್ಥಿಕ ಬೆಳವಣಿಗೆಗೆ ದಾರಿ ತೆರೆದಿವೆ.

ರೈಲು ಸಂಪರ್ಕ

ಹಿಂದಿನ ಎಲ್‌ಡಬ್ಲ್ಯೂಇ ಪ್ರದೇಶಗಳಲ್ಲಿ ಆರ್ಥಿಕ ಏಕೀಕರಣದ ಪ್ರಮುಖ ಚಾಲಕ ಶಕ್ತಿಯಾಗಿ ರೈಲು ಸಂಪರ್ಕ ಹೊರಹೊಮ್ಮಿದೆ. ದಲ್ಲಿ ರಾಜ್‌ಹರಾ ಮತ್ತು ರಾವ್‌ಘಾಟ್ ನಡುವಿನ 95 ಕಿ.ಮೀ. ರೈಲು ಮಾರ್ಗ ಈಗಾಗಲೇ ಪೂರ್ಣಗೊಂಡಿದ್ದು, 140 ಕಿ.ಮೀ. ಉದ್ದದ ರಾವ್‌ಘಾಟ್–ಜಗದಲ್ಪುರ ಹಂತಕ್ಕೆ ಅನುಮೋದನೆ ದೊರೆತಿದೆ. ಇದಲ್ಲದೆ, ದಾಂತೇವಾಡ ಮತ್ತು ಮನುಗುರು ನಡುವಿನ 153 ಕಿ.ಮೀ. ರೈಲು ಮಾರ್ಗಕ್ಕೂ ಮಂಜೂರಾತಿ ನೀಡಲಾಗಿದೆ. 150 ಕಿ.ಮೀ. ಉದ್ದದ ಕಿರಂದೂಲ್–ಜಗದಲ್ಪುರ ಜೋಡಿ ಮಾರ್ಗ ಯೋಜನೆಯು ಗಮನಾರ್ಹ ಪ್ರಗತಿ ಸಾಧಿಸಿದ್ದು, ಜಗದಲ್ಪುರ–ಕಮಲೂರ್ ಮತ್ತು ಬಚೇಲಿ–ಕಿರಂದೂಲ್ ವಿಭಾಗಗಳು (ಒಟ್ಟು 130 ಕಿ.ಮೀ.) ಈಗಾಗಲೇ ಕಾರ್ಯಾರಂಭ ಮಾಡಿದ್ದು, ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದೆ.

ಹಣಕಾಸು ಸೇರ್ಪಡೆ

ಕಳೆದ ಹನ್ನೆರಡು ವರ್ಷಗಳಲ್ಲಿ ಎಲ್‌ಡಬ್ಲ್ಯೂಇ ಬಾಧಿತ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರವು ಹಣಕಾಸು ಸೇರ್ಪಡೆಯನ್ನು ಗಣನೀಯವಾಗಿ ವಿಸ್ತರಿಸಿದೆ. 2015 ರ ಏಪ್ರಿಲ್‌ನಿಂದ 2026 ರ ಮಾರ್ಚ್ ಅವಧಿಯಲ್ಲಿ, 1,804 ಬ್ಯಾಂಕ್ ಶಾಖೆಗಳನ್ನು ತೆರೆಯಲಾಗಿದೆ, 1,321 ಎಟಿಎಂಗಳನ್ನು ಅಳವಡಿಸಲಾಗಿದೆ, 74,720 ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳನ್ನು ನೇಮಿಸಲಾಗಿದೆ ಮತ್ತು 6,025 ಅಂಚೆ ಕಚೇರಿಗಳನ್ನು ಸ್ಥಾಪಿಸಲಾಗಿದೆ.

ಸ್ಪಂದನಾಶೀಲ ಮತ್ತು ಒಳಗೊಳ್ಳುವ ಆಡಳಿತ

ಬುಡಕಟ್ಟು ಪ್ರದೇಶಗಳಲ್ಲಿ ಅನುಷ್ಠಾನದ ಸವಾಲುಗಳಿಗೆ ಕಠಿಣ ನಿಯಮಾವಳಿಗಳಿಗಿಂತ ಹೆಚ್ಚಾಗಿ ನಮ್ಯತೆ ಮತ್ತು ಸ್ಥಳೀಯ ಹೊಂದಾಣಿಕೆಯ ಅಗತ್ಯವಿದೆ ಎಂಬುದನ್ನು ಸರ್ಕಾರ ಮನಗಂಡಿತು. ದೂರದ ಬುಡಕಟ್ಟು ಪ್ರದೇಶಗಳಲ್ಲಿ ಆಧಾರ್ ನೋಂದಣಿ ವ್ಯಾಪ್ತಿಯನ್ನು ಖಚಿತಪಡಿಸಲು ಯುಐಡಿಎಐ ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ವಿಶೇಷ ಅಭಿಯಾನಗಳನ್ನು ಆಯೋಜಿಸಲಾಯಿತು. ಛತ್ತೀಸ್‌ಗಢದ ಬಸ್ತಾರ್ ವಿಭಾಗದಲ್ಲಿ, ಆ ಪ್ರದೇಶದ ವಿಶಿಷ್ಟ ಭೌಗೋಳಿಕ ಮತ್ತು ಭೂಪ್ರದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಿದ ಭೌತಿಕ ಸಮೀಕ್ಷೆಗಳ ನಂತರ 294 ಅಂಚೆ ಕಚೇರಿಗಳನ್ನು ತೆರೆಯಲಾಯಿತು. ದುರ್ಬಲ ಇಂಟರ್ನೆಟ್ ಸಂಪರ್ಕ ಮತ್ತು ಬ್ಯಾಂಕಿಂಗ್ ಮೂಲಸೌಕರ್ಯದ ಕಾರಣದಿಂದಾಗಿ, ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯ ಹಿಂದಿನ ಆವೃತ್ತಿಯ ಅಡಿಯಲ್ಲಿ ಕೆಲವು ಎಲ್‌ಡಬ್ಲ್ಯೂಇ ಪ್ರದೇಶಗಳಲ್ಲಿ ನಗದು ವೇತನ ಪಾವತಿ ಮತ್ತು ಆಫ್‌ಲೈನ್ ಹಾಜರಾತಿ ವ್ಯವಸ್ಥೆಗಳಿಗೆ ಅನುಮತಿ ನೀಡಲಾಗಿತ್ತು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ, ಸಮರ್ಪಕ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಗ್ರಾಮ ನೈರ್ಮಲ್ಯ ಸಮಿತಿಗಳ ಮೂಲಕ ಶೌಚಾಲಯ ನಿರ್ಮಾಣ ನಿಧಿಯನ್ನು ರವಾನಿಸಲಾಯಿತು. ದೂರದ ಗ್ರಾಮಗಳಲ್ಲಿ ಅಧಿಕಾರಿಗಳು ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ವಿತರಿಸಲು ಅನುವು ಮಾಡಿಕೊಡಲು ಆಫ್‌ಲೈನ್ ಅಪ್ಲಿಕೇಶನ್ ಅನ್ನೂ ಪರಿಚಯಿಸಲಾಯಿತು.

ಕಲ್ಯಾಣ ಯೋಜನೆಗಳ ಕಟ್ಟಕಡೆಯ ವ್ಯಕ್ತಿಗೂ ತಲುಪುವಿಕೆಯನ್ನು ಖಚಿತಪಡಿಸುವಲ್ಲಿ ಹೊಂದಿಕೊಳ್ಳುವ ಆಡಳಿತದ ಮಹತ್ವವನ್ನು ಈ ಉದಾಹರಣೆಗಳು ತೋರಿಸುತ್ತವೆ.

ಆರೋಗ್ಯ ಸೌಲಭ್ಯ

ಛತ್ತೀಸ್‌ಗಢದ ಬಸ್ತಾರ್ ಪ್ರದೇಶವು ದೂರದ ಪ್ರದೇಶವಾಗಿರುವುದರಿಂದ ಮತ್ತು ಎಲ್‌ಡಬ್ಲ್ಯೂಇ ಹಿಂಸಾಚಾರದಿಂದಾಗಿ ದೀರ್ಘಕಾಲ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಸವಾಲುಗಳನ್ನು ಎದುರಿಸಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿಯಲ್ಲಿ ಜಗದಲ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 240 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಮಂಜೂರಾತಿ ನೀಡಿತು. ಈ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಿದ್ದು, ಮಾನ್ಯ ಕೇಂದ್ರ ಗೃಹ ಸಚಿವರು 2026 ರ ಮೇ 18 ರಂದು ಇದನ್ನು ಉದ್ಘಾಟಿಸಿದರು. ಇದಲ್ಲದೆ, ಭದ್ರತಾ ಸಿಬ್ಬಂದಿಗಾಗಿ ಸ್ಥಾಪಿಸಲಾದ 11 ಸಿಎಪಿಎಫ್ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಳೀಯ ಬುಡಕಟ್ಟು ಸಮುದಾಯಗಳಿಗೂ ತೆರೆಯಲಾಗಿದ್ದು, ಆ ಮೂಲಕ ಸ್ಥಳೀಯ ಜನರಿಗೆ ಆರೋಗ್ಯ ಸೌಲಭ್ಯಗಳ ಲಭ್ಯತೆಯನ್ನು ವಿಸ್ತರಿಸಲಾಗಿದೆ.

ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ

ಕಳೆದ ಹನ್ನೆರಡು ವರ್ಷಗಳಲ್ಲಿ, ಭಾರತ ಸರ್ಕಾರವು 259 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮಂಜೂರಾತಿ ನೀಡಿದೆ. ಜೊತೆಗೆ, 179 ಇಎಂಆರ್‌ಎಸ್ ಶಾಲೆಗಳನ್ನು ಕಾರ್ಯಾರಂಭ ಮಾಡಲಾಗಿದೆ. ಇದಲ್ಲದೆ, ಈ ಪ್ರದೇಶಗಳಲ್ಲಿ 47 ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು 49 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಇವೆಲ್ಲಕ್ಕೂ ಒಟ್ಟಾಗಿ ಸುಮಾರು ₹800 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇವು ಬುಡಕಟ್ಟು ಯುವಕರಿಗೆ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಿ, ದೂರದ ಸಮುದಾಯಗಳನ್ನು ಮುಖ್ಯವಾಹಿನಿಯ ಆರ್ಥಿಕತೆಯೊಂದಿಗೆ ಸಂಯೋಜಿಸಲು ನೆರವಾದವು. 90,000 ಕ್ಕೂ ಹೆಚ್ಚು ಯುವಕರು ಮತ್ತು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಯಿತು.

ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ, ರಾಷ್ಟ್ರೀಯ ಏಕೀಕರಣ, ಸಾಂಸ್ಕೃತಿಕ ಅರಿವು ಮತ್ತು ಅಭಿವೃದ್ಧಿಯ ಅನುಭವವನ್ನು ಉತ್ತೇಜಿಸಲು ಹಿಂದಿನ ಎಲ್‌ಡಬ್ಲ್ಯೂಇ ಬಾಧಿತ ಪ್ರದೇಶಗಳ ಬುಡಕಟ್ಟು ಯುವಕರನ್ನು ದೇಶದಾದ್ಯಂತ ಅಧ್ಯಯನ ಪ್ರವಾಸಗಳಿಗೆ ಕರೆದೊಯ್ಯಲಾಗುತ್ತದೆ. 2014 ರಿಂದ ಇಲ್ಲಿಯವರೆಗೆ ಒಟ್ಟು 37,655 ಬುಡಕಟ್ಟು ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ನಾಗರಿಕ ಕ್ರಿಯಾ ಕಾರ್ಯಕ್ರಮಗಳು

ನಾಗರಿಕ ಕ್ರಿಯಾ ಕಾರ್ಯಕ್ರಮದ ಅಡಿಯಲ್ಲಿ, ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣಾ ಪ್ರದೇಶಗಳಲ್ಲಿ ಕಲ್ಯಾಣ-ಆಧಾರಿತ ಚಟುವಟಿಕೆಗಳನ್ನು ಕೈಗೊಳ್ಳಲು ಭಾರತ ಸರ್ಕಾರವು ಸಿಎಪಿಎಫ್‌ಗಳಿಗೆ ಆರ್ಥಿಕ ನೆರವು ನೀಡುತ್ತದೆ. ಇವುಗಳಲ್ಲಿ ವೈದ್ಯಕೀಯ ಶಿಬಿರಗಳು, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದು ಮತ್ತು ಸ್ಥಳೀಯ ಸಮುದಾಯಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುವುದು ಸೇರಿವೆ. 2014 ರಿಂದ ಇಲ್ಲಿಯವರೆಗೆ, ಈ ಕಾರ್ಯಕ್ರಮದ ಅಡಿಯಲ್ಲಿ ₹221.88 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದು ಭದ್ರತಾ ಪಡೆಗಳು ಮತ್ತು ಸ್ಥಳೀಯ ಸಮುದಾಯಗಳ ನಡುವಿನ ವಿಶ್ವಾಸವನ್ನು ಬಲಪಡಿಸಲು ಮತ್ತು ಅಂತರವನ್ನು ಕಡಿಮೆ ಮಾಡಲು ನೆರವಾಗಿದೆ.

ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು, ಸಂವಹನಕ್ಕೆ ಅನುವು ಮಾಡಿಕೊಡುವ ಮೊಬೈಲ್ ಟವರ್‌ಗಳು, ಆರ್ಥಿಕ ಪಾಲ್ಗೊಳ್ಳುವಿಕೆಗೆ ನೆರವಾಗುವ ಬ್ಯಾಂಕುಗಳು ಮತ್ತು ಬುಡಕಟ್ಟು ಯುವಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಶಾಲೆಗಳು — ಈ ಮೂಲಸೌಕರ್ಯವು ನೇರವಾಗಿ ನೆಲಮಟ್ಟದಲ್ಲಿ ಕಲ್ಯಾಣವಾಗಿ ಪರಿವರ್ತನೆಯಾಯಿತು. ನಿಜವಾದ ಕಲ್ಯಾಣ, ಘನತೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನವನ್ನು ಅಂತಿಮವಾಗಿ ತಲುಪಿಸಲು ಅಗತ್ಯವಾದ ಭೌತಿಕ ಮತ್ತು ಸಾಂಸ್ಥಿಕ ವೇದಿಕೆಯನ್ನು ಇದು ನಿರ್ಮಿಸಿತು.

ಬಾಧಿತ ಪ್ರದೇಶದಲ್ಲಿ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯು ನಿರಂತರ ಮೂಲಸೌಕರ್ಯ ನಿರ್ಮಾಣದ ಮೂಲಕ ಪ್ರಾದೇಶಿಕ ಏಕೀಕರಣವನ್ನು ಬಲಪಡಿಸುತ್ತದೆ. ಸುಧಾರಿತ ಸಂಪರ್ಕವು ಆರ್ಥಿಕ ಅವಕಾಶಗಳು ಮತ್ತು ಚಲನಶೀಲತೆಗೆ ಚಾಲನೆ ನೀಡುತ್ತದೆ. ದೀರ್ಘಾವಧಿಯ ಹೂಡಿಕೆಗಳು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯ ಮಾರ್ಗಗಳನ್ನು ಖಚಿತಪಡಿಸುತ್ತವೆ.

ನಿಮಗಿದು ಗೊತ್ತೇ?

 

ಪ್ರಸ್ತುತ, ಭಾರತದ 38 ಜಿಲ್ಲೆಗಳನ್ನು 'ಲೆಗಸಿ ಮತ್ತು ಥ್ರಸ್ಟ್ ಜಿಲ್ಲೆಗಳು' ಎಂದು ವರ್ಗೀಕರಿಸಲಾಗಿದ್ದು, ಅಲ್ಲಿ ನಿರಂತರ ಭದ್ರತೆ ಮತ್ತು ಅಭಿವೃದ್ಧಿ ಬೆಂಬಲವನ್ನು ನೀಡಲಾಗುತ್ತಿದೆ.

ಜನರ ಕಲ್ಯಾಣ ಮತ್ತು ಘನತೆ

ಈ ತಂತ್ರದ ಅಂತಿಮ ಅಂಶವು ಘನತೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸುವುದಕ್ಕೆ ಒತ್ತು ನೀಡುತ್ತದೆ. ಇದು ಹಿಂದುಳಿದ ಸಮುದಾಯಗಳಿಗೆ ಕಟ್ಟಕಡೆಯ ಹಂತದ ಸೇವಾ ವಿತರಣೆಯನ್ನು ಬಲಪಡಿಸುತ್ತದೆ. ಈ ವಿಧಾನವು ಅಗತ್ಯ ಸಾರ್ವಜನಿಕ ಸೇವೆಗಳಿಗೆ ಸಮಾನ ಅವಕಾಶವನ್ನು ಖಚಿತಪಡಿಸುತ್ತದೆ.

ಬುಡಕಟ್ಟು ಜೀವನೋಪಾಯದ ಬಲವರ್ಧನೆ

ಅಭಿವೃದ್ಧಿಯನ್ನು ವಿಸ್ತರಿಸುವ ಮೂಲಕ, ಅವಕಾಶಗಳ ಲಭ್ಯತೆಯನ್ನು ಸುಧಾರಿಸುವ ಮೂಲಕ ಮತ್ತು ಬುಡಕಟ್ಟು ಸಮುದಾಯಗಳು ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮೂಲಕ ಬುಡಕಟ್ಟು ಕಲ್ಯಾಣದ ಮೇಲಿನ ನಿರಂತರ ಗಮನವು ಎಲ್‌ಡಬ್ಲ್ಯೂಇ ಪ್ರಭಾವವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭದ್ರತಾ ಕ್ರಮಗಳ ಜೊತೆಜೊತೆಗೆ, ಉತ್ತಮ ಶಿಕ್ಷಣ, ಮೂಲಸೌಕರ್ಯ, ಆರೋಗ್ಯ ಸೇವೆ, ವಸತಿ ಮತ್ತು ಜೀವನೋಪಾಯ ಬೆಂಬಲದ ಮೂಲಕ ದೂರದ ಬುಡಕಟ್ಟು ಪ್ರದೇಶಗಳಿಗೆ ಅಭಿವೃದ್ಧಿ ತಲುಪುವಂತೆ ಸರ್ಕಾರ ಖಚಿತಪಡಿಸಿದೆ.

ಶರಣಾದ ಕಾರ್ಯಕರ್ತರ ಪುನರ್ವಸತಿ ಚೌಕಟ್ಟು ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ನೆರವು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಬೆಂಬಲ ಮತ್ತು ಸ್ವಯಂ-ಉದ್ಯೋಗಕ್ಕೆ ಆರ್ಥಿಕ ನೆರವಿನ ಮೂಲಕ ಅವರನ್ನು ಮುಖ್ಯವಾಹಿನಿಯ ಸಮಾಜದೊಂದಿಗೆ ಸಂಯೋಜಿಸಲು ಪ್ರೋತ್ಸಾಹ ನೀಡಿದೆ. ನಕ್ಸಲ್ ಪ್ರಭಾವವನ್ನು ನಿರ್ಮೂಲನೆ ಮಾಡಿ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪಂಚಾಯತ್‌ಗಳನ್ನು ಸ್ಥಾಪಿಸಿದ ಗ್ರಾಮಗಳಿಗೆ ಅಭಿವೃದ್ಧಿ ಅನುದಾನಗಳನ್ನು ನೀಡಲಾಯಿತು. ಶರಣಾದ ಕಾರ್ಯಕರ್ತರ ಮಕ್ಕಳಿಗೆ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗಿದ್ದು, ಇದು ಕುಟುಂಬಗಳು ಹೆಚ್ಚು ಸುರಕ್ಷಿತ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಿದೆ.

ಹಲವು ಉದ್ದೇಶಿತ ಉಪಕ್ರಮಗಳು ಈ ಪರಿವರ್ತನೆಯ ವೇಗವನ್ನು ಹೆಚ್ಚಿಸಿದವು. ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯು ಭದ್ರತೆ, ಅಭಿವೃದ್ಧಿ, ಸಮುದಾಯ ಹಕ್ಕುಗಳ ರಕ್ಷಣೆ ಮತ್ತು ಗ್ರಹಿಕೆ ನಿರ್ವಹಣೆಯನ್ನು ಸಂಯೋಜಿಸಿತು. ಅರಣ್ಯ ಹಕ್ಕುಗಳ ಕಾಯ್ದೆಯಡಿ ಒಟ್ಟು 21,26,273 ಹಕ್ಕುಪತ್ರಗಳನ್ನು ವಿತರಿಸಲಾಯಿತು. ವಿಶೇಷ ಕೇಂದ್ರ ನೆರವು ಅತ್ಯಂತ ಬಾಧಿತ ಜಿಲ್ಲೆಗಳಲ್ಲಿ ನಿರ್ಣಾಯಕ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಿತು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ಆರೋಗ್ಯ, ಶಿಕ್ಷಣ, ಹಣಕಾಸು ಸೇರ್ಪಡೆ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಫಲಿತಾಂಶಗಳನ್ನು ಸುಧಾರಿಸಲು ಹಲವು ಕಲ್ಯಾಣ ಯೋಜನೆಗಳನ್ನು ಒಗ್ಗೂಡಿಸಿತು.

ಶಿಕ್ಷಣವು ಪರಿವರ್ತನೆಯ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿತು. ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಹೆಚ್ಚಿನ ಬೆಂಬಲವು ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳೂ ಸೇರಿದಂತೆ ಪರಿಶಿಷ್ಟ ಪಂಗಡದ ಮಕ್ಕಳಿಗೆ ಗುಣಮಟ್ಟದ ವಸತಿ ಶಿಕ್ಷಣದ ಲಭ್ಯತೆಯನ್ನು ವಿಸ್ತರಿಸಿತು. ಪಿಎಂ-ಜನ್‌ಮನ್ ಉಪಕ್ರಮವು ವಸತಿ, ಸುರಕ್ಷಿತ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇವೆ ಮತ್ತು ಅಗತ್ಯ ಸಂಪರ್ಕದ ಲಭ್ಯತೆಯನ್ನು ಸುಧಾರಿಸುವ ಮೂಲಕ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಮೇಲೆ ಮತ್ತಷ್ಟು ಗಮನ ಕೇಂದ್ರೀಕರಿಸಿ, ಹಿಂದುಳಿದ ಸಮುದಾಯಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ನೆರವಾಯಿತು.

ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದ ಆರಂಭವು ಬುಡಕಟ್ಟು ಗ್ರಾಮಗಳಲ್ಲಿನ ಮೂಲಸೌಕರ್ಯ ಕೊರತೆಗಳನ್ನು ನೀಗಿಸುವ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಿತು.

ಹಲವು ಸಚಿವಾಲಯಗಳ ಸಂಘಟಿತ ಮಧ್ಯಪ್ರವೇಶಗಳ ಮೂಲಕ, ಈ ಕಾರ್ಯಕ್ರಮವು ಜೀವನಮಟ್ಟವನ್ನು ಸುಧಾರಿಸುವುದು, ಆರ್ಥಿಕ ಅವಕಾಶಗಳನ್ನು ವಿಸ್ತರಿಸುವುದು ಮತ್ತು ಭಾರತದ ಅಭಿವೃದ್ಧಿ ಪಯಣದಲ್ಲಿ ಬುಡಕಟ್ಟು ಸಮುದಾಯಗಳು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸುವ ಗುರಿ ಹೊಂದಿದೆ.

ಪ್ರಕರಣ ಅಧ್ಯಯನ: ನಕ್ಸಲಿಸಂನಿಂದ ಅಭಿವೃದ್ಧಿಯತ್ತ ಛತ್ತೀಸ್‌ಗಢದ ಪಯಣ

ದಶಕಗಳ ಕಾಲ, ಛತ್ತೀಸ್‌ಗಢದ ಬಸ್ತಾರ್ ದೇಶದ ಅತ್ಯಂತ ಹೆಚ್ಚು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿ ಉಳಿದಿತ್ತು. ಸೀಮಿತ ಸಂಪರ್ಕ, ದುರ್ಬಲ ಆಡಳಿತ ಉಪಸ್ಥಿತಿ ಮತ್ತು ಕಠಿಣ ಭೂಪ್ರದೇಶವು ಉಗ್ರಗಾಮಿ ಗುಂಪುಗಳಿಗೆ ಬಲವಾದ ನೆಲೆ ಸ್ಥಾಪಿಸಲು ಅನುವು ಮಾಡಿಕೊಟ್ಟಿತು. ಕಳೆದ 12 ವರ್ಷಗಳಲ್ಲಿ, ಭದ್ರತೆ, ಅಭಿವೃದ್ಧಿ ಮತ್ತು ಬುಡಕಟ್ಟು ಪಾಲ್ಗೊಳ್ಳುವಿಕೆಯನ್ನು ಸಂಯೋಜಿಸಿದ ಸಂಘಟಿತ ತಂತ್ರವು ಈ ಪ್ರದೇಶದ ಬೆಳವಣಿಗೆಯ ದಿಕ್ಕನ್ನೇ ಬದಲಾಯಿಸಿತು.

2017 ರಲ್ಲಿ 'ಬಸ್ತಾರಿಯಾ ಬೆಟಾಲಿಯನ್' ರಚನೆಯೊಂದಿಗೆ ಪ್ರಮುಖ ತಿರುವು ದೊರೆಯಿತು. ಈ ಬೆಟಾಲಿಯನ್‌ಗೆ ಬಿಜಾಪುರ, ಸುಕ್ಮಾ ಮತ್ತು ದಾಂತೇವಾಡದ ಸುಮಾರು 400 ಸ್ಥಳೀಯ ಯುವಕರು ಸೇರಿದಂತೆ 1,143 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಯಿತು. ಸ್ಥಳೀಯ ಪಾಲ್ಗೊಳ್ಳುವಿಕೆಯು ಗುಪ್ತಚರ ಜಾಲಗಳನ್ನು ಬಲಪಡಿಸಿತು, ಭದ್ರತಾ ಪಡೆಗಳು ಮತ್ತು ಬುಡಕಟ್ಟು ಸಮುದಾಯಗಳ ನಡುವಿನ ವಿಶ್ವಾಸವನ್ನು ಸುಧಾರಿಸಿತು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ನೆರವಾಯಿತು.

ಭದ್ರತಾ ಪರಿಸ್ಥಿತಿ ಸುಧಾರಿಸಿದಂತೆ, ಅಭಿವೃದ್ಧಿಯೂ ವೇಗ ಪಡೆಯಿತು. ಬಸ್ತಾರ್, ಬಿಜಾಪುರ, ದಾಂತೇವಾಡ, ಸುಕ್ಮಾ, ನಾರಾಯಣಪುರ, ಕಾಂಕೇರ್ ಮತ್ತು ಕೊಂಡಗಾಂವ್ ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ಪ್ರದೇಶದಾದ್ಯಂತ 3,240 ಕಿಲೋಮೀಟರ್‌ಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಯಿತು. ಡಿಜಿಟಲ್ ಸಂಪರ್ಕವನ್ನು ಸುಧಾರಿಸಲು 889 ಮೊಬೈಲ್ ಟವರ್‌ಗಳನ್ನೂ ಅಳವಡಿಸಲಾಯಿತು. ಒಂದು ಕಾಲದಲ್ಲಿ ಪ್ರತ್ಯೇಕವಾಗಿದ್ದ ಗ್ರಾಮಗಳು ಈಗ ಮಾರುಕಟ್ಟೆಗಳು, ಶಾಲೆಗಳು, ಆರೋಗ್ಯ ಸೌಲಭ್ಯಗಳು, ಬ್ಯಾಂಕಿಂಗ್ ಸೇವೆಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಸಂಪರ್ಕ ಹೊಂದಿವೆ.

ಸರ್ಕಾರವು ಪುನರ್ವಸತಿ ಮತ್ತು ಮುಖ್ಯವಾಹಿನಿಗೆ ಮರುಸೇರ್ಪಡೆಯ ಮೇಲೂ ಗಮನ ಹರಿಸಿತು. ಕೌಶಲ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳಿಗಾಗಿ ₹20 ಕೋಟಿ ರೂ. ಆರಂಭಿಕ ಹಂಚಿಕೆಯೊಂದಿಗೆ ಸುಮಾರು 3,000 ಶರಣಾದ ಕಾರ್ಯಕರ್ತರಿಗಾಗಿ ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸಲಾಯಿತು. ಹಿಂಸಾಚಾರದ ಚಕ್ರವನ್ನು ಬದಲಿಸಿ ಆರ್ಥಿಕ ಸಬಲೀಕರಣದ ಮಾರ್ಗಗಳನ್ನು ಕಲ್ಪಿಸುವುದು ಈ ಉಪಕ್ರಮದ ಉದ್ದೇಶವಾಗಿತ್ತು.

ಮೇ 2026 ರಲ್ಲಿ, ಭದ್ರತಾ ಸಾಧನೆಗಳನ್ನು ಶಾಶ್ವತ ಅಭಿವೃದ್ಧಿಯಾಗಿ ಪರಿವರ್ತಿಸಲು ಛತ್ತೀಸ್‌ಗಢದಲ್ಲಿ 'ಶಹೀದ್ ವೀರ ಗುಂಡಾ ಧೂರ್ ಸೇವಾ ದೇರಾ' ಉಪಕ್ರಮವನ್ನು ಆರಂಭಿಸಲಾಯಿತು. ಸರ್ಕಾರಿ ಯೋಜನೆಗಳು, ಆರೋಗ್ಯ ಸೇವೆ, ಬ್ಯಾಂಕಿಂಗ್, ಕೃಷಿ ಬೆಂಬಲ, ಕೌಶಲ್ಯ ಅಭಿವೃದ್ಧಿ ಮತ್ತು ಇತರ ನಾಗರಿಕ ಸೇವೆಗಳನ್ನು ಒದಗಿಸುವ ಸಮಗ್ರ ಅಭಿವೃದ್ಧಿ ಕೇಂದ್ರಗಳಾಗಿ ಸುಮಾರು ಮೂರನೇ ಒಂದು ಭಾಗದಷ್ಟು (1/3rd) ಸಿಎಪಿಎಫ್ ಶಿಬಿರಗಳನ್ನು ಪರಿವರ್ತಿಸಲಾಗುತ್ತಿದೆ. ವೀರ ಗುಂಡಾ ಧೂರ್ ಅವರ ಜನ್ಮಸ್ಥಳವಾದ ನೇತನಾರ್‌ನಲ್ಲಿ ಇಂತಹ ಒಂದು ಕೇಂದ್ರವನ್ನು ಸ್ಥಾಪಿಸಿರುವುದು, ಒಂದು ಕಾಲದಲ್ಲಿ ಉಗ್ರವಾದದಿಂದ ಬಾಧಿತವಾಗಿದ್ದ ಪ್ರದೇಶಗಳಿಗೆ ಆಡಳಿತ ಮರಳಿರುವುದರ ಸಂಕೇತವಾಗಿದೆ.

ಮೂಲಸೌಕರ್ಯ ಮತ್ತು ಕಲ್ಯಾಣದ ಜೊತೆಗೆ, 'ಬಸ್ತಾರ್ ಪಂಡುಮ್' ಮತ್ತು 'ಬಸ್ತಾರ್ ಒಲಿಂಪಿಕ್ಸ್' ನಂತಹ ಸಾಂಸ್ಕೃತಿಕ ಉಪಕ್ರಮಗಳು ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಬುಡಕಟ್ಟು ಅಸ್ಮಿತೆಯನ್ನು ಬಲಪಡಿಸಿದವು. ಈ ವೇದಿಕೆಗಳು ಲಕ್ಷಾಂತರ ಬುಡಕಟ್ಟು ಯುವಕರು ಮತ್ತು ಕಲಾವಿದರನ್ನು ಒಗ್ಗೂಡಿಸಿ, ಸಾಮಾಜಿಕ ಏಕೀಕರಣವನ್ನು ಉತ್ತೇಜಿಸಿದವು ಹಾಗೂ ತೊಡಗಿಸಿಕೊಳ್ಳುವಿಕೆ ಮತ್ತು ನಾಯಕತ್ವಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದವು.

ಭದ್ರತಾ ಕ್ರಮಗಳ ನಂತರ ಅಭಿವೃದ್ಧಿ, ಕಲ್ಯಾಣ ಸೇವೆಗಳ ತಲುಪಿಸುವಿಕೆ ಮತ್ತು ಸಮುದಾಯ ಸಬಲೀಕರಣ ನಡೆದಾಗ ಮಾತ್ರ ಶಾಶ್ವತ ಶಾಂತಿ ಸಾಧ್ಯ ಎಂಬುದನ್ನು ಬಸ್ತಾರ್‌ನ ಪರಿವರ್ತನೆಯು ತೋರಿಸುತ್ತದೆ. ನಿರಂತರ ಸರ್ಕಾರಿ ಉಪಸ್ಥಿತಿ, ಸ್ಥಳೀಯ ಪಾಲ್ಗೊಳ್ಳುವಿಕೆ ಮತ್ತು ಸಮಗ್ರ ಬೆಳವಣಿಗೆಯು ಸಂಘರ್ಷಪೀಡಿತ ಪ್ರದೇಶವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಹಾದಿಯನ್ನಾಗಿ ಹೇಗೆ ಪರಿವರ್ತಿಸಬಲ್ಲದು ಎಂಬುದನ್ನು ಛತ್ತೀಸ್‌ಗಢದ ಅನುಭವ ತೋರಿಸುತ್ತದೆ.

ಒಂದು ದಶಕದ ಪರಿವರ್ತನೆಯ ಫಲಿತಾಂಶಗಳು

ಎಡಪಂಥೀಯ ಉಗ್ರವಾದ (LWE) ಬಾಧಿತ ಜಿಲ್ಲೆಗಳ ಸಂಖ್ಯೆಯು 2014 ರಲ್ಲಿ 126 ಇದ್ದದ್ದು, 2026 ರ ಮಾರ್ಚ್–ಏಪ್ರಿಲ್ ವೇಳೆಗೆ ಶೂನ್ಯಕ್ಕೆ ಇಳಿದಿದೆ. ಇದಲ್ಲದೆ, ಅತ್ಯಂತ ಹೆಚ್ಚು ಬಾಧಿತ ಜಿಲ್ಲೆಗಳ ಸಂಖ್ಯೆಯೂ 35 ರಿಂದ ಶೂನ್ಯಕ್ಕೆ ಇಳಿದಿದ್ದು, ಭದ್ರತಾ ಪರಿಸರದಲ್ಲಿ ನಿರ್ಣಾಯಕ ಬದಲಾವಣೆಯನ್ನು ತಂದಿದೆ.

ಹಿಂಸಾಚಾರದ ಎಲ್ಲಾ ಪ್ರಮುಖ ಸೂಚಕಗಳಲ್ಲಿ ಈ ಪರಿಣಾಮ ಗೋಚರಿಸಿದೆ. 1,936 ನಕ್ಸಲ್ ಸಂಬಂಧಿತ ಘಟನೆಗಳು ಮತ್ತು 1,005 ಸಾವು-ನೋವುಗಳು ವರದಿಯಾಗುವುದರೊಂದಿಗೆ 2010 ನೇ ವರ್ಷವು ನಕ್ಸಲಿಸಂ ಇತಿಹಾಸದಲ್ಲಿಯೇ ಅತ್ಯಂತ ಮಾರಕ ಹಂತಗಳಲ್ಲಿ ಒಂದಾಗಿತ್ತು. ಅಂದಿನಿಂದ ನಿರಂತರ ಸುರಕ್ಷತಾ ಕಾರ್ಯಾಚರಣೆಗಳು, ಅಭಿವೃದ್ಧಿ ಮಧ್ಯಪ್ರವೇಶಗಳು ಮತ್ತು ಸುಧಾರಿತ ಆಡಳಿತವು ಎಡಪಂಥೀಯ ಉಗ್ರವಾದ ಜಾಲಗಳನ್ನು ಗಣನೀಯವಾಗಿ ದುರ್ಬಲಗೊಳಿಸಿದವು. ನಕ್ಸಲ್ ಸಂಬಂಧಿತ ಘಟನೆಗಳು 2014 ರಲ್ಲಿ 870 ಇದ್ದದ್ದು, 2026 ರಲ್ಲಿ (2026 ರ ಜುಲೈ 29 ರ ವರೆಗೆ) ಕೇವಲ 33 ಕ್ಕೆ ತೀವ್ರವಾಗಿ ಇಳಿದಿವೆ. ಇದೇ ಅವಧಿಯಲ್ಲಿ ಸಾವು-ನೋವುಗಳ ಸಂಖ್ಯೆಯು 310 ರಿಂದ 12 ಕ್ಕೆ ಇಳಿದಿದೆ. ಹಿಂಸಾಚಾರದಲ್ಲಿನ ಈ ನಿರಂತರ ಇಳಿಕೆಯು ನಕ್ಸಲ್ ಗುಂಪುಗಳ ಕಾರ್ಯಾಚರಣಾ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಿರುವುದನ್ನು ಹಾಗೂ ಬಾಧಿತ ಪ್ರದೇಶಗಳಲ್ಲಿ ಭದ್ರತೆ, ಸಂಪರ್ಕ ಮತ್ತು ಸಾರ್ವಜನಿಕ ವಿಶ್ವಾಸ ಕ್ರಮೇಣ ಮರುಸ್ಥಾಪನೆಯಾಗುತ್ತಿರುವುದನ್ನು ಸೂಚಿಸುತ್ತದೆ. ಈ ಪ್ರವೃತ್ತಿಯು ಭದ್ರತಾ ವಾತಾವರಣದಲ್ಲಿ ಗಮನಾರ್ಹ ಸುಧಾರಣೆಯನ್ನು ಪ್ರತಿಬಿಂಬಿಸುತ್ತದೆ. ಈ ಹಿಂದೆ ಆಗಾಗ್ಗೆ ಹಿಂಸಾಚಾರದಿಂದ ಬಾಧಿತವಾಗಿದ್ದ ಪ್ರದೇಶಗಳು ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿವೆ.

ಸಾಧನೆಗಳ ಬಲವರ್ಧನೆ: ಜೂನ್ 2026 ರಿಂದ ಕೈಗೊಂಡ ಪ್ರಮುಖ ಕ್ರಮಗಳು

ದೇಶವು ಎಲ್‌ಡಬ್ಲ್ಯೂಇ ಮುಕ್ತವಾದ ನಂತರ, ಸರ್ಕಾರವು ತನ್ನ ಗಮನವನ್ನು ಭದ್ರತಾ ಸಾಧನೆಗಳನ್ನು ಬಲಪಡಿಸುವುದು ಮತ್ತು ಅಭಿವೃದ್ಧಿಯನ್ನು ಚುರುಕುಗೊಳಿಸುವತ್ತ ಹರಿಸಿತು. ಈ ಹಿಂದೆ ಬಾಧಿತವಾಗಿದ್ದ ಪ್ರದೇಶಗಳಲ್ಲಿ ಶಾಂತಿ ಮತ್ತು ಪ್ರಗತಿಯನ್ನು ಸುಸ್ಥಿರಗೊಳಿಸಲು ಜೂನ್ 2026 ರ ನಂತರ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಯಿತು.

ಸುರಕ್ಷತಾ ಶಿಬಿರಗಳು ಸಮಗ್ರ ಅಭಿವೃದ್ಧಿ ಕೇಂದ್ರಗಳಾಗಿ (ಸೇವಾ ದೇರಾ ಕೇಂದ್ರಗಳು) ಪರಿವರ್ತನೆ: ಎಲ್‌ಡಬ್ಲ್ಯೂಇ-ಮುಕ್ತ ಪ್ರದೇಶಗಳಲ್ಲಿನ ಮೂರನೇ ಒಂದು ಭಾಗದಷ್ಟು ಸುರಕ್ಷತಾ ಶಿಬಿರಗಳನ್ನು ನಾಗರಿಕ ಸೇವೆಗಳಿಗಾಗಿ ಸೇವಾ ದೇರಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಈ ಹಿಂದೆ ಬಾಧಿತವಾಗಿದ್ದ ಪ್ರದೇಶಗಳಲ್ಲಿ ಭದ್ರತಾ ಬಲವರ್ಧನೆಯಿಂದ ಜನ-ಕೇಂದ್ರಿತ ಆಡಳಿತದತ್ತ ಸ್ಪಷ್ಟ ಬದಲಾವಣೆಯನ್ನು ಸೂಚಿಸುತ್ತದೆ. ಈ ಕೇಂದ್ರಗಳಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಲಾಗುವುದು:
 

  • ಜನ ಸುವಿಧಾ ಕೇಂದ್ರ: ಸ್ಥಳೀಯ ನಿವಾಸಿಗಳಿಗೆ ಎಲ್ಲಾ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಆನ್‌ಲೈನ್ ಡಿಜಿಟಲ್ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವುದು.
  • ಸಮುದಾಯ ಅಭಿವೃದ್ಧಿ: ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗ ಆಧಾರಿತ ತರಬೇತಿ, ಪೋಷಣೆ ಮತ್ತು ಆರೋಗ್ಯ ಸೇವೆಗಳ ಮೂಲಕ ಜೀವನಮಟ್ಟವನ್ನು ಸುಧಾರಿಸುವುದು.
  • ಸಾಮಾಜಿಕ ಅಭಿವೃದ್ಧಿ: ಬುಡಕಟ್ಟು ಸಂಸ್ಕೃತಿ, ಜಾನಪದ ಕಲೆಗಳು ಮತ್ತು ಸಾಂಪ್ರದಾಯಿಕ ಹಬ್ಬಗಳನ್ನು ಉತ್ತೇಜಿಸುವುದರ ಜೊತೆಗೆ ಯುವಕರಿಗೆ ಕ್ರೀಡಾ ಸೌಲಭ್ಯಗಳು ಮತ್ತು ಅವಕಾಶಗಳನ್ನು ಕಲ್ಪಿಸುವುದು.
  • ಆರ್ಥಿಕ ಅಭಿವೃದ್ಧಿ: ಕೃಷಿ ಉತ್ಪನ್ನಗಳು ಹಾಗೂ ಮಹುವಾ, ಹುಣಸೆ ಮತ್ತು ತೆಂಡೂ ಎಲೆಗಳಂತಹ ಕಿರು ಅರಣ್ಯ ಉತ್ಪನ್ನಗಳ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರಾಟದ ಮೂಲಕ ಸ್ಥಳೀಯ ಸಮುದಾಯಗಳಿಗೆ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.

ಪ್ರಾಯೋಗಿಕ ಯೋಜನೆಯಾಗಿ, ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಐದು ಸುರಕ್ಷತಾ ಶಿಬಿರಗಳನ್ನು 'ಶಹೀದ್ ವೀರ ಗುಂಡಾ ಧೂರ್ ಸೇವಾ ದೇರಾ ಕೇಂದ್ರ'ಗಳಾಗಿ ಪರಿವರ್ತಿಸಲು ಅಹಮದಾಬಾದ್‌ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಎನ್‌ಐಡಿ ಕಾರ್ಯಸಾಧ್ಯತಾ ಅಧ್ಯಯನವನ್ನು ಪೂರ್ಣಗೊಳಿಸಿದ್ದು, ಕಾಮಗಾರಿ ಆರಂಭವಾಗಿದೆ. ಗೃಹ ವ್ಯವಹಾರಗಳ ಸಚಿವಾಲಯದ ವಿಶೇಷ ಕೇಂದ್ರ ನೆರವು ಯೋಜನೆಯು ಈ ವೆಚ್ಚವನ್ನು ಭರಿಸಲಿದೆ.

ಕಲ್ಯಾಣ ಯೋಜನೆಗಳ ಸಮಗ್ರ ತಲುಪುವಿಕೆಯ ಸಮೀಕ್ಷೆ: 2026 ರ ಆಗಸ್ಟ್‌ನಲ್ಲಿ ಸಂಸತ್ತಿಗೆ ವರದಿ ಮಾಡಿದಂತೆ, ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಉಪಕ್ರಮಗಳ ತಲುಪುವಿಕೆಯ ವ್ಯಾಪ್ತಿ ಮತ್ತು ಜೀವನೋಪಾಯ ಸೃಷ್ಟಿಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಗೃಹ ವ್ಯವಹಾರಗಳ ಸಚಿವಾಲಯವು ದಕ್ಷಿಣ ಛತ್ತೀಸ್‌ಗಢದ ಹಿಂದಿನ ಏಳು ಎಲ್‌ಡಬ್ಲ್ಯೂಇ-ಬಾಧಿತ ಜಿಲ್ಲೆಗಳಲ್ಲಿ ಸ್ವತಂತ್ರ ಸಂಸ್ಥೆಯ ಮೂಲಕ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯು ಶಿಕ್ಷಣ ಮಟ್ಟಗಳು, ಆರೋಗ್ಯ ಸೂಚಕಗಳು ಮತ್ತು ಪ್ರಾಥಮಿಕ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ದ್ವಿತೀಯ ಹಂತದ ಆರೋಗ್ಯ ಸೌಲಭ್ಯಗಳಂತಹ ಮೂಲಭೂತ ಸೇವೆಗಳ ಲಭ್ಯತೆಯ ವಿವರಗಳನ್ನು ಸಂಗ್ರಹಿಸಿದೆ. ಅಭಿವೃದ್ಧಿಯ ಕೊರತೆಗಳನ್ನು ನೀಗಿಸುವ ಮತ್ತು ಜೀವನೋಪಾಯವನ್ನು ಖಚಿತಪಡಿಸುವ ಉದ್ದೇಶವನ್ನು ಈಡೇರಿಸಲು ಈ ಸಮೀಕ್ಷೆಯ ಒಳನೋಟಗಳು ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರಕ್ಕೆ ನೆರವಾಗುತ್ತಿವೆ.

ನಕ್ಸಲ್ ಹಿಂಸಾಚಾರದ ಸಂತ್ರಸ್ತರಿಗೆ ಬೆಂಬಲ: 2026 ರ ಅಕ್ಟೋಬರ್ 15 ರಂದು, ದಿವ್ಯಾಂಗರಿಗೆ ಸಹಾಯಕ ಸಾಧನಗಳನ್ನು ವಿತರಿಸುವ ಸಮಾರಂಭವನ್ನು ಉದ್ದೇಶಿಸಿ ಗೃಹ ವ್ಯವಹಾರಗಳ ಸಚಿವರು ಮಾತನಾಡಿದರು. ಚಾಲ್ತಿಯಲ್ಲಿರುವ 'ಸೇವಾ ಸಂಕಲ್ಪ ಅಭಿಯಾನ'ದ ಅಡಿಯಲ್ಲಿ ಕೈಗೊಂಡ ಈ ಉಪಕ್ರಮದ ಫಲಾನುಭವಿಗಳಲ್ಲಿ ನಕ್ಸಲ್ ಹಿಂಸಾಚಾರದ ಸಂತ್ರಸ್ತರೂ ಸೇರಿದ್ದರು.

ನಕ್ಸಲ್‌ಮುಕ್ತ ಭಾರತದಲ್ಲಿ ಮೊದಲ ದೀಪಾವಳಿ: 2026 ರ ನವೆಂಬರ್ 8 ರಂದು, ಬಸ್ತಾರ್‌ನ ಕರಣ್‌ಪುರದಲ್ಲಿರುವ ಕೋಬ್ರಾ ಕಾರ್ಯಾಚರಣಾ ನೆಲೆಯಲ್ಲಿ ಪ್ರಧಾನಮಂತ್ರಿಯವರು ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದರು. ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲಿಸಂನಿಂದ ಮುಕ್ತವಾಗಿರುವ ಮೊದಲ ದೀಪಾವಳಿ ಇದಾಗಿದೆ ಎಂದು ಅವರು ಬಣ್ಣಿಸಿದರು. ಕಳೆದ ಒಂದು ವರ್ಷದಲ್ಲಿ ಕರ್ತವ್ಯದಲ್ಲಿದ್ದಾಗ ಯಾವುದೇ ಸಿಆರ್‌ಪಿಎಫ್ ಯೋಧ ಪ್ರಾಣ ಕಳೆದುಕೊಂಡಿಲ್ಲ; ಇದು 47 ವರ್ಷಗಳಲ್ಲಿ ಇದೇ ಮೊದಲ ಸಾಧನೆಯಾಗಿದೆ ಎಂದು ಅವರು ಉಲ್ಲೇಖಿಸಿದರು.

ಭಾರತದ ಭದ್ರತೆ ಮತ್ತು ಅಭಿವೃದ್ಧಿ ಇತಿಹಾಸದಲ್ಲಿ ಒಂದು ನಿರ್ಣಾಯಕ ಅಧ್ಯಾಯ

ನಕ್ಸಲ್‌ಮುಕ್ತ ಭಾರತದ ಸಾಧನೆಯು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಆಂತರಿಕ ಭದ್ರತಾ ಯಶಸ್ಸುಗಳಲ್ಲಿ ಒಂದಾಗಿದೆ. ಇದು ದಿಟ್ಟ ನಾಯಕತ್ವ, ನಿರಂತರ ನೀತಿ ಅನುಷ್ಠಾನ ಹಾಗೂ ಭದ್ರತೆ, ಅಭಿವೃದ್ಧಿ ಮತ್ತು ಪುನರ್ವಸತಿಯನ್ನು ಸಂಯೋಜಿಸುವ ಬಹು-ಆಯಾಮದ ತಂತ್ರದ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.

ಕಳೆದ ಒಂದು ದಶಕದಲ್ಲಿ, ಭಾರತವು ಎಡಪಂಥೀಯ ಉಗ್ರವಾದದ ವಿರುದ್ಧದ ತನ್ನ ವಿಧಾನವನ್ನು ಪ್ರತಿಕ್ರಿಯಾತ್ಮಕ ನಿಯಂತ್ರಣದಿಂದ ಮುನ್ನೆಚ್ಚರಿಕೆಯ ನಿರ್ಮೂಲನೆಯತ್ತ ಪರಿವರ್ತಿಸಿತು. ಈ ಸಾಧನೆಗಳನ್ನು ಬಲಪಡಿಸುವುದು, ಯಾವುದೇ ಮರುಕಳಿಕೆಯನ್ನು ತಡೆಯುವುದು, ಬಾಧಿತ ಸಮುದಾಯಗಳ ಪುನರ್ವಸತಿಯನ್ನು ಪೂರ್ಣಗೊಳಿಸುವುದು ಹಾಗೂ ಭದ್ರತೆಯಲ್ಲಿನ ಸಾಧನೆಗಳಿಗೆ ತಕ್ಕಂತೆ ನಿರಂತರ ಅಭಿವೃದ್ಧಿ, ಪರಿಣಾಮಕಾರಿ ಆಡಳಿತ ಮತ್ತು ಹಕ್ಕುಗಳು ಹಾಗೂ ಸಾರ್ವಜನಿಕ ಸೇವೆಗಳ ಸಂಪೂರ್ಣ ವಿತರಣೆಯನ್ನು ಖಚಿತಪಡಿಸುವುದು ಮುಂದಿನ ಹಂತವಾಗಿದೆ.

ನಕ್ಸಲ್‌ಮುಕ್ತ ಭಾರತದ ಸಾಧನೆಯು ಕೇವಲ ದಂಗೆಯ ಅಂತ್ಯವಲ್ಲ. ಇದು ಭಾರತದ ಅತ್ಯಂತ ದುರ್ಬಲ ಸಮುದಾಯಗಳಿಗೆ ಶಾಂತಿ, ಒಳಗೊಳ್ಳುವಿಕೆ ಮತ್ತು ಪ್ರಗತಿಯ ಹೊಸ ಅಧ್ಯಾಯದ ಆರಂಭವಾಗಿದೆ.

 

References:

Prime Minister’s Office

Ministry of Home Affairs

Parliament of India

Prasar Bharati

Press Information Bureau (Research Unit)

Social Media

Click here to see PDF

 

*******

 

(Explainer ID: 160912) आगंतुक पटल : 63
Provide suggestions / comments
इस विज्ञप्ति को इन भाषाओं में पढ़ें: Bengali , English , Urdu , हिन्दी , Assamese