Technology
ಭಾರತದ ದೂರದರ್ಶನ ಪ್ರಸಾರದ ಬದಲಾವಣೆ
ಅನಲಾಗ್ನಿಂದ ಡಿಜಿಟಲ್ ಟಿವಿ ಪ್ರಸಾರಕ್ಕೆ ನಡೆದ ಪರಿವರ್ತನೆಯ ಹಾದಿ
Posted On:
20 NOV 2026 12:10PM
ಸಂದರ್ಭದ ಅವಲೋಕನ: ವಿಶ್ವ ದೂರದರ್ಶನ ದಿನ

ಪ್ರಸಾರವು ಎಲೆಕ್ಟ್ರಾನಿಕ್ ಸಂವಹನ ಜಾಲಗಳ ಮೂಲಕ ಬೃಹತ್ ಪ್ರೇಕ್ಷಕ ವರ್ಗಕ್ಕೆ ಧ್ವನಿ ಮತ್ತು ದೃಶ್ಯ ವಿಷಯಗಳನ್ನು ವ್ಯವಸ್ಥಿತವಾಗಿ ತಲುಪಿಸುವ ಪ್ರಕ್ರಿಯೆಯಾಗಿದೆ. ದೂರದರ್ಶನ ಪ್ರಸಾರವು ಸುದ್ದಿ, ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ನೀಡಲು ಧ್ವನಿ ಹಾಗೂ ಚಲಿಸುವ ಚಿತ್ರಗಳನ್ನು ಸಂಯೋಜಿಸುತ್ತದೆ. ದಶಕಗಳ ಅವಧಿಯಲ್ಲಿ, ತಾಂತ್ರಿಕ ಪ್ರಗತಿಗಳು ಭೂಮಿಯ ಮೇಲಿನ, ಉಪಗ್ರಹ, ಕೇಬಲ್ ಮತ್ತು ಇಂಟರ್ನೆಟ್ ಆಧಾರಿತ ವೇದಿಕೆಗಳ ಮೂಲಕ ಇದರ ವ್ಯಾಪ್ತಿಯನ್ನು ವಿಸ್ತರಿಸಿವೆ. ಇದು ದೂರದರ್ಶನವನ್ನು ಸಮೂಹ ಸಂವಹನದ ಒಂದು ಪ್ರಮುಖ ಮಾಧ್ಯಮವನ್ನಾಗಿ ಮಾಡಿದೆ.
ಭಾರತದಲ್ಲಿ, ದೂರದರ್ಶನ ಪ್ರಸಾರವು ಭೌಗೋಳಿಕ ಮತ್ತು ಭಾಷಾ ಗಡಿಗಳನ್ನು ಮೀರಿ ವೈವಿಧ್ಯಮಯ ಸಮುದಾಯಗಳನ್ನು ಬೆಸೆಯುವ ಮೂಲಕ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಶೈಕ್ಷಣಿಕ ಕಾರ್ಯಕ್ರಮಗಳು, ಕೃಷಿ ಮಾಹಿತಿ, ಆರೋಗ್ಯ ಜಾಗೃತಿ ಮತ್ತು ಸಾರ್ವಜನಿಕ ಸೇವಾ ಅಭಿಯಾನಗಳ ಮೂಲಕ ಇದು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡಿದೆ. ಚಲನಚಿತ್ರಗಳು, ಧಾರಾವಾಹಿಗಳು ಮತ್ತು ಕ್ರೀಡೆಗಳನ್ನು ಕೋಟ್ಯಂತರ ಮನೆಗಳಿಗೆ ತಲುಪಿಸುವ ಮೂಲಕ ಇದು ಮನರಂಜನೆಯ ಪ್ರಮುಖ ಮೂಲವಾಗಿ ಹೊರಹೊಮ್ಮಿದ್ದು, ಭಾರತದ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನೂ ಉತ್ತೇಜಿಸಿದೆ. ಸರ್ಕಾರಿ ನೀತಿಗಳು, ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಉಪಕ್ರಮಗಳು ಮತ್ತು ತುರ್ತು ಮಾಹಿತಿಯನ್ನು ಪ್ರಸಾರ ಮಾಡಲು ಅನುವು ಮಾಡಿಕೊಡುವ ಮೂಲಕ ಇದು ಸಾರ್ವಜನಿಕ ಆಡಳಿತವನ್ನು ಮತ್ತಷ್ಟು ಬಲಪಡಿಸಿದೆ; ತನ್ಮೂಲಕ ಸಾರ್ವಜನಿಕ ಜಾಗೃತಿ ಮತ್ತು ಅಗತ್ಯ ಮಾಹಿತಿಯ ಲಭ್ಯತೆಯನ್ನು ಸುಧಾರಿಸಿದೆ.
ಸಾರ್ವಜನಿಕ ಅಭಿಪ್ರಾಯ, ಜಾಗತಿಕ ಸಂವಹನ ಮತ್ತು ಸಾಂಸ್ಕೃತಿಕ ವಿನಿಮಯದ ಮೇಲೆ ದೂರದರ್ಶನದ ಹೆಚ್ಚುತ್ತಿರುವ ಪ್ರಭಾವವನ್ನು ಗುರುತಿಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1996ರಲ್ಲಿ ನವೆಂಬರ್ 21 ಅನ್ನು 'ವಿಶ್ವ ದೂರದರ್ಶನ ದಿನ' ಎಂದು ಘೋಷಿಸಿತು. ಸಮಾಜಗಳಿಗೆ ಮಾಹಿತಿ ನೀಡುವ, ಶಿಕ್ಷಣ ಒದಗಿಸುವ ಮತ್ತು ಅವುಗಳನ್ನು ಬೆಸೆಯುವಲ್ಲಿ ದೂರದರ್ಶನದ ಪಾತ್ರವನ್ನು ಈ ಆಚರಣೆಯು ಸ್ಮರಿಸುತ್ತದೆ. ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಮಾಹಿತಿಯುಕ್ತ ಸಾರ್ವಜನಿಕ ಸಂವಾದವನ್ನು ಬೆಂಬಲಿಸುವಲ್ಲಿ ಜವಾಬ್ದಾರಿಯುತ ಪ್ರಸಾರದ ಮಹತ್ವವನ್ನೂ ಇದು ಎತ್ತಿ ತೋರಿಸುತ್ತದೆ.
ದೂರದರ್ಶನದ ಪರದೆಯು ದೂರದ ಘಟನೆಗಳು, ಹೊಸ ಆಲೋಚನೆಗಳು ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಜನರ ಮನೆಬಾಗಿಲಿಗೆ ತರಬಲ್ಲದು. ಇದು ಪ್ರೇಕ್ಷಕರನ್ನು ಅವರ ಸುತ್ತಮುತ್ತಲಿನ ಪರಿಸರವನ್ನು ಮೀರಿದ ಬೆಳವಣಿಗೆಗಳೊಂದಿಗೆ ಸಂಪರ್ಕಿಸುತ್ತದೆ. ದಶಕಗಳಿಂದ, ದೂರದರ್ಶನವು ಭಾರತದಲ್ಲಿ ಮನರಂಜನೆ, ಮಾಹಿತಿ, ಶಿಕ್ಷಣ ಮತ್ತು ಸಾರ್ವಜನಿಕ ಸಂವಹನದ ಪ್ರಮುಖ ಮಾಧ್ಯಮವಾಗಿದೆ.
ದೂರದರ್ಶನದ ಬದಲಾಗುತ್ತಿರುವ ತಂತ್ರಜ್ಞಾನಗಳು
ಸಂವಹನ ಮತ್ತು ಪ್ರಸಾರ ತಂತ್ರಜ್ಞಾನಗಳಲ್ಲಿನ ಪ್ರಗತಿಯೊಂದಿಗೆ ಭಾರತದಲ್ಲಿ ದೂರದರ್ಶನ ಪ್ರಸಾರವೂ ವಿಕಸನಗೊಂಡಿದೆ. ಪ್ರತಿಯೊಂದು ತಾಂತ್ರಿಕ ಪ್ರಗತಿಯು ದೂರದರ್ಶನ ಕಾರ್ಯಕ್ರಮಗಳ ಪ್ರಸಾರ ಮತ್ತು ವಿತರಣೆಯ ಸ್ವರೂಪವನ್ನು ಬದಲಾಯಿಸಿದ್ದು, ಅವುಗಳ ವ್ಯಾಪ್ತಿ ಮತ್ತು ಲಭ್ಯತೆಯನ್ನು ಮತ್ತಷ್ಟು ವಿಸ್ತರಿಸಿದೆ.

ಆರಂಭಿಕ ಪ್ರಸಾರ ಯುಗ: ಭೂಮಿಯ ಮೇಲಿನ (ಟೆರೆಸ್ಟ್ರಿಯಲ್) ದೂರದರ್ಶನ (1959–1975)
ಭಾರತದ ದೂರದರ್ಶನ ಪಯಣವು 1959ರ ಸೆಪ್ಟೆಂಬರ್ 15ರಂದು ದೆಹಲಿಯಲ್ಲಿ ಪ್ರಾಯೋಗಿಕ ಪ್ರಸಾರದೊಂದಿಗೆ ಪ್ರಾರಂಭವಾಯಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಆಕಾಶವಾಣಿಯು ಈ ಉಪಕ್ರಮವನ್ನು ಆರಂಭಿಸಿತು. ತಾತ್ಕಾಲಿಕ ಸ್ಟುಡಿಯೋದಿಂದ ಸಣ್ಣ ಟ್ರಾನ್ಸ್ಮಿಟರ್ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಆರಂಭದಲ್ಲಿ, ಈ ಪ್ರಸಾರವು ದೆಹಲಿಯ ಸುತ್ತಮುತ್ತಲಿನ ಸೀಮಿತ ಪ್ರದೇಶಕ್ಕೆ ಮಾತ್ರ ತಲುಪುತ್ತಿತ್ತು. 1965ರಲ್ಲಿ ಈ ಪ್ರಯೋಗವು ನಿಯಮಿತ ದೂರದರ್ಶನ ಸೇವೆಯಾಗಿ ವಿಕಸನಗೊಂಡಿತು. 1965ರ ಆಗಸ್ಟ್ 15ರಂದು ದೂರದರ್ಶನವು ದೈನಂದಿನ ಹಿಂದಿ ವಾರ್ತಾ ಪ್ರಸಾರವನ್ನು ಆರಂಭಿಸಿತು. 1972ರ ವೇಳೆಗೆ, ಈ ಸೇವೆಗಳನ್ನು ಮುಂಬೈ ಮತ್ತು ಅಮೃತಸರಕ್ಕೆ ವಿಸ್ತರಿಸಲಾಯಿತು ಹಾಗೂ 1975ರ ವೇಳೆಗೆ ಇತರ ಏಳು ನಗರಗಳಿಗೆ ವಿಸ್ತರಿಸಲಾಯಿತು. ಈ ಎಲ್ಲಾ ಅವಧಿಯಲ್ಲಿ ಇದು ರಾಷ್ಟ್ರೀಯ ಪ್ರಸಾರ ಸಂಸ್ಥೆಯಾದ ಆಕಾಶವಾಣಿಯ ಭಾಗವಾಗಿತ್ತು. 1976ರ ಏಪ್ರಿಲ್ 1ರಂದು ಇದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಪ್ರತ್ಯೇಕ ಇಲಾಖೆಯಾಗಿ ರೂಪುಗೊಂಡಿತು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: ದೂರದರ್ಶನದ ಪರಂಪರೆ
ಈ ಅವಧಿಯಲ್ಲಿ ದೂರದರ್ಶನ ಪ್ರಸಾರವು ಪ್ರಮುಖವಾಗಿ ಅನಲಾಗ್ ಟೆರೆಸ್ಟ್ರಿಯಲ್ ಪ್ರಸಾರವನ್ನು ಅವಲಂಬಿಸಿತ್ತು. ಈ ವ್ಯವಸ್ಥೆಯು ರೇಡಿಯೊ ತರಂಗಗಳ ಮೂಲಕ ದೂರದರ್ಶನ ಸಂಕೇತಗಳನ್ನು ಕಳುಹಿಸಲು ಭೂ-ಆಧಾರಿತ ಟ್ರಾನ್ಸ್ಮಿಟರ್ಗಳನ್ನು ಬಳಸುತ್ತಿತ್ತು. ಎತ್ತರದ ಗೋಪುರಗಳ ಮೇಲೆ ಅಳವಡಿಸಲಾದ ಆಂಟೆನಾಗಳಿಂದ ಟ್ರಾನ್ಸ್ಮಿಟರ್ಗಳು ಸಂಕೇತಗಳನ್ನು ಪ್ರಸಾರ ಮಾಡುತ್ತಿದ್ದವು. ಮನೆಗಳಲ್ಲಿನ ದೂರದರ್ಶನ ಸೆಟ್ಗಳು ಒಳಾಂಗಣ ಅಥವಾ ಹೊರಾಂಗಣ ಆಂಟೆನಾಗಳ ಮೂಲಕ ಈ ಸಂಕೇತಗಳನ್ನು ಸ್ವೀಕರಿಸುತ್ತಿದ್ದವು.
ಆದಾಗ್ಯೂ, ಟೆರೆಸ್ಟ್ರಿಯಲ್ ಪ್ರಸಾರವು ಭೌಗೋಳಿಕ ಮತ್ತು ತಾಂತ್ರಿಕ ಮಿತಿಗಳನ್ನು ಹೊಂದಿತ್ತು. ಸಂಕೇತಗಳ ಸ್ವೀಕೃತಿಯು ಮನೆಗಳು ಮತ್ತು ಟ್ರಾನ್ಸ್ಮಿಟರ್ಗಳ ನಡುವಿನ ಅಂತರವನ್ನು ಅವಲಂಬಿಸಿತ್ತು. ಬೆಟ್ಟಗಳು, ಕಟ್ಟಡಗಳು ಮತ್ತು ಇತರ ಭೌತಿಕ ಅಡೆತಡೆಗಳು ಸಂಕೇತಗಳನ್ನು ದುರ್ಬಲಗೊಳಿಸಬಹುದು ಅಥವಾ ತಡೆಯಬಹುದಾಗಿತ್ತು. ಪರಿಣಾಮವಾಗಿ, ಸ್ಥಳದಿಂದ ಸ್ಥಳಕ್ಕೆ ಪ್ರಸಾರದ ಗುಣಮಟ್ಟವು ಭಿನ್ನವಾಗಿರುತ್ತಿತ್ತು.

ಅನಲಾಗ್ ಪ್ರಸಾರವು ಸೀಮಿತ ಚಾನೆಲ್ ಸಾಮರ್ಥ್ಯವನ್ನೂ ಹೊಂದಿತ್ತು. ನಿಗದಿಪಡಿಸಲಾದ ಪ್ರತಿಯೊಂದು ದೂರದರ್ಶನ ಆವರ್ತನ ಚಾನೆಲ್ ಸಾಮಾನ್ಯವಾಗಿ ಒಂದು ಕಾರ್ಯಕ್ರಮವನ್ನು ಮಾತ್ರ ಪ್ರಸಾರ ಮಾಡುತ್ತಿತ್ತು. ಆದ್ದರಿಂದ ಸೇವೆಗಳನ್ನು ವಿಸ್ತರಿಸಲು ಹೆಚ್ಚುವರಿ ಆವರ್ತನಗಳು, ಟ್ರಾನ್ಸ್ಮಿಟರ್ಗಳು ಮತ್ತು ಪೂರಕ ಮೂಲಸೌಕರ್ಯಗಳ ಅಗತ್ಯವಿತ್ತು. ಈ ಮಿತಿಗಳು ದೇಶಾದ್ಯಂತ ದೂರದರ್ಶನ ಸೇವೆಗಳ ಹಂತಹಂತದ ವಿಸ್ತರಣೆಗೆ ಕಾರಣವಾದವು.
ಟೆರೆಸ್ಟ್ರಿಯಲ್ ಟ್ರಾನ್ಸ್ಮಿಟರ್ಗಳ ವ್ಯಾಪ್ತಿಯನ್ನು ಮೀರಿ ದೂರದರ್ಶನವನ್ನು ವಿಸ್ತರಿಸಲು ವಿಭಿನ್ನ ತಾಂತ್ರಿಕ ವಿಧಾನದ ಅಗತ್ಯವಿತ್ತು. ಉಪಗ್ರಹ ಸಂವಹನವು ಅತ್ಯಂತ ವಿಶಾಲವಾದ ಭೌಗೋಳಿಕ ಪ್ರದೇಶಗಳಲ್ಲಿ ದೂರದರ್ಶನ ಸಂಕೇತಗಳನ್ನು ಪ್ರಸಾರ ಮಾಡುವ ಸಾಧ್ಯತೆಯನ್ನು ಒದಗಿಸಿತು. ಇದು ಉಪಗ್ರಹ ಆಧಾರಿತ ಪ್ರಸಾರ ಮತ್ತು ವಿಸ್ತೃತ ರಾಷ್ಟ್ರೀಯ ದೂರದರ್ಶನ ಜಾಲಕ್ಕೆ ದಾರಿ ಮಾಡಿಕೊಟ್ಟಿತು.
ಉಪಗ್ರಹ ಮತ್ತು ಬಣ್ಣದ (ಕಲರ್) ಪ್ರಸಾರ: ದೂರದರ್ಶನದ ವ್ಯಾಪ್ತಿಯ ವಿಸ್ತರಣೆ (1975–1988)
1970ರ ದಶಕದ ಮಧ್ಯಭಾಗವು ಭಾರತದ ದೂರದರ್ಶನ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ನೀಡಿತು. 1976ರ ವೇಳೆಗೆ, ಭಾರತದ ಟೆರೆಸ್ಟ್ರಿಯಲ್ ಜಾಲವು ಎಂಟು ಕೇಂದ್ರಗಳನ್ನು ಹೊಂದಿದ್ದು, 75,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 45 ಮಿಲಿಯನ್ (4.5 ಕೋಟಿ) ಜನರನ್ನು ತಲುಪುತ್ತಿತ್ತು. ಉಪಗ್ರಹ ತಂತ್ರಜ್ಞಾನ ಮತ್ತು ಬಣ್ಣದ ಪ್ರಸಾರವು ದೂರದರ್ಶನದ ವ್ಯಾಪ್ತಿ ಮತ್ತು ವೀಕ್ಷಣೆಯ ಅನುಭವವನ್ನೇ ಬದಲಾಯಿಸಿತು. ನಗರ ಕೇಂದ್ರಗಳನ್ನು ಮೀರಿ ದೂರದರ್ಶನವನ್ನು ಕೊಂಡೊಯ್ಯಲು ಎರಡು ಪ್ರಮುಖ ಬೆಳವಣಿಗೆಗಳು ವೇಗ ನೀಡಿದವು.
ಮೊದಲ ಪ್ರಮುಖ ಮೈಲಿಗಲ್ಲು ಎಂದರೆ 1975ರ ಆಗಸ್ಟ್ ಮತ್ತು 1976ರ ಜುಲೈ ನಡುವೆ ನಡೆಸಲಾದ 'ಉಪಗ್ರಹ ಶಿಕ್ಷಣ ದೂರದರ್ಶನ ಪ್ರಯೋಗ'. ಇದು ಆರು ರಾಜ್ಯಗಳ ಹಳ್ಳಿಗಳಿಗೆ ನೇರವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಂಡಿತು. ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ದೂರದರ್ಶನವನ್ನು ಬಳಸಿಕೊಳ್ಳುವುದು ಈ ಪ್ರಯೋಗದ ಉದ್ದೇಶವಾಗಿತ್ತು. ಉಪಗ್ರಹ ತಂತ್ರಜ್ಞಾನವು ಭೌಗೋಳಿಕ ಅಡೆತಡೆಗಳನ್ನು ಹೇಗೆ ನಿವಾರಿಸಬಲ್ಲದು ಎಂಬುದನ್ನು 'ಸೈಟ್' ತೋರಿಸಿಕೊಟ್ಟಿತು. ಇದು ಶಿಕ್ಷಣ ಮತ್ತು ಸಾರ್ವಜನಿಕ ಸಂವಹನದ ಸಾಧನವಾಗಿ ದೂರದರ್ಶನದ ಸಾಮರ್ಥ್ಯವನ್ನು ಸಾಬೀತುಪಡಿಸಿತು.
ಮುಂದಿನ ಪ್ರಮುಖ ಬೆಳವಣಿಗೆಯು 'ಭಾರತೀಯ ರಾಷ್ಟ್ರೀಯ ಉಪಗ್ರಹ' ವ್ಯವಸ್ಥೆಯ ಪರಿಚಯದೊಂದಿಗೆ ಬಂದಿತು. 1982ರ ಏಪ್ರಿಲ್ನಲ್ಲಿ ಉಡಾವಣೆಗೊಂಡ 'ಇನ್ಸಾಟ್-1ಎ', ಭಾರತದ ಮೊದಲ ತಲೆಮಾರಿನ ಕಾರ್ಯಾಚರಣೆಯ ದೇಶೀಯ ಸಂವಹನ ಉಪಗ್ರಹವಾಗಿತ್ತು. ಇದು ದೆಹಲಿಯಿಂದ ದೇಶಾದ್ಯಂತ ಇರುವ ಪ್ರಾದೇಶಿಕ ಕೇಂದ್ರಗಳಿಗೆ ಏಕರೂಪದ ಕಾರ್ಯಕ್ರಮ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿತು. ಆದಾಗ್ಯೂ, 1983ರಲ್ಲಿ ಇನ್ಸಾಟ್-1ಎ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
1983ರ ಆಗಸ್ಟ್ನಲ್ಲಿ ಉಡಾವಣೆಗೊಂಡ 'ಇನ್ಸಾಟ್-1ಬಿ', ಈ ಉದಯೋನ್ಮುಖ ರಾಷ್ಟ್ರೀಯ ಪ್ರಸಾರ ಜಾಲವನ್ನು ಮತ್ತಷ್ಟು ಬಲಪಡಿಸಿತು. ಇದು 1983ರ ಅಕ್ಟೋಬರ್ನಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪಡೆಯಿತು. ಈ ಉಪಗ್ರಹವು ದೂರದರ್ಶನ ಪ್ರಸಾರ ಮತ್ತು ಇತರ ಸಂವಹನ ಸೇವೆಗಳಿಗೆ ಬೆಂಬಲ ನೀಡಿತು ಹಾಗೂ ದೂರದರ್ಶನದ ಪ್ರಾದೇಶಿಕ ಕೇಂದ್ರಗಳಾದ್ಯಂತ ಉಪಗ್ರಹ ಆಧಾರಿತ ಸಂಪರ್ಕವನ್ನು ಗಟ್ಟಿಗೊಳಿಸಲು ಸಹಾಯ ಮಾಡಿತು.
|
ಇದು ನಿಮಗಿದು ಗೊತ್ತೇ?
ಉಪಗ್ರಹ ವಿಸ್ತರಣೆಯ ಜೊತೆಗೆ, ಬಣ್ಣದ (ಕಲರ್) ಪ್ರಸಾರವು ದೂರದರ್ಶನ ವೀಕ್ಷಣೆಯ ಅನುಭವವನ್ನೇ ಬದಲಾಯಿಸಿತು. ದೂರದರ್ಶನದ ಮೊದಲ ಬಣ್ಣದ ಪ್ರಸಾರವು 1982ರ ಆಗಸ್ಟ್ 15ರಂದು ನಡೆಯಿತು; ಇದು ತನ್ನ ರಾಷ್ಟ್ರೀಯ ಕಾರ್ಯಕ್ರಮದ ಆರಂಭದೊಂದಿಗೆ ಸೇರಿಕೊಂಡಿತು. ಅದೇ ವರ್ಷದ ನಂತರ, 1982ರ ನವೆಂಬರ್ನಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ನೇರ ಪ್ರಸಾರದ ಮೂಲಕ ಬಣ್ಣದ ದೂರದರ್ಶನವು ಸಾರ್ವಜನಿಕರಲ್ಲಿ ಹೆಚ್ಚಿನ ಜನಪ್ರಿಯತೆ ಮತ್ತು ಗೋಚರತೆಯನ್ನು ಪಡೆಯಿತು. ಈ ಮೈಲಿಗಲ್ಲು ಕಪ್ಪು-ಬಿಳುಪು ಪ್ರಸಾರದಿಂದ ಬಣ್ಣದ ಪ್ರಸಾರದತ್ತ ನಡೆದ ಬದಲಾವಣೆಯನ್ನು ಗುರುತಿಸಿತು.
|
ಭೂಮಿಯ ಮೇಲಿನ (ಟೆರೆಸ್ಟ್ರಿಯಲ್) ಪ್ರಸಾರವು ಭೌಗೋಳಿಕವಾಗಿ ಸೀಮಿತ ವ್ಯಾಪ್ತಿಯನ್ನು ಹೊಂದಿರುವ ಭೂ-ಆಧಾರಿತ ಟ್ರಾನ್ಸ್ಮಿಟರ್ಗಳನ್ನು ಅವಲಂಬಿಸಿದ್ದರೆ, ಅದಕ್ಕೆ ಭಿನ್ನವಾಗಿ ಉಪಗ್ರಹ ಸಂವಹನವು ದೂರದರ್ಶನ ಸಂಕೇತಗಳು ಅತ್ಯಂತ ವಿಶಾಲವಾದ ಪ್ರದೇಶಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ. ಒಂದೇ ಒಂದು ಉಪಗ್ರಹವು ತನ್ನ ಸಂವಹನ ವ್ಯಾಪ್ತಿಯ ಮೂಲಕ ಹಲವಾರು ಪ್ರದೇಶಗಳಿಗೆ ಸೇವೆ ಸಲ್ಲಿಸಬಲ್ಲದು. ಈ ಸಾಮರ್ಥ್ಯವು ದೂರದ ಮತ್ತು ಈ ಹಿಂದೆ ಸೌಲಭ್ಯ ವಂಚಿತವಾಗಿದ್ದ ಪ್ರದೇಶಗಳಿಗೂ ದೂರದರ್ಶನ ಸೇವೆಗಳನ್ನು ವಿಸ್ತರಿಸಲು ಸಹಾಯ ಮಾಡಿತು.

ಉಪಗ್ರಹ ಸಂವಹನ ವ್ಯವಸ್ಥೆಯು ಎರಡು ಪ್ರಮುಖ ಭಾಗಗಳನ್ನು ಹೊಂದಿದೆ: ಭೂ ವಿಭಾಗ ಮತ್ತು ಬಾಹ್ಯಾಕಾಶ ವಿಭಾಗ. ಭೂ ವಿಭಾಗವು ಭೂ ಕೇಂದ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪ್ರಸಾರ ಮತ್ತು ಸ್ವೀಕೃತಿ ಉಪಕರಣಗಳನ್ನು ಒಳಗೊಂಡಿರುತ್ತದೆ. ಬಾಹ್ಯಾಕಾಶ ವಿಭಾಗವು ಉಪಗ್ರಹ ಮತ್ತು ಅದರಲ್ಲಿರುವ ಟ್ರಾನ್ಸ್ಪಾಂಡರ್ಗಳನ್ನು ಒಳಗೊಂಡಿದ್ದು, ಇವು ಸಂವಹನ ಸಂಕೇತಗಳನ್ನು ಸ್ವೀಕರಿಸಿ ಮರುಪ್ರಸಾರ ಮಾಡುತ್ತವೆ.
ಪ್ರಸಾರ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, 'ಅಪ್ಲಿಂಕ್' ಭೂ ಕೇಂದ್ರದಿಂದ ಉಪಗ್ರಹಕ್ಕೆ ದೂರದರ್ಶನ ಸಂಕೇತವನ್ನು ರವಾನಿಸುತ್ತದೆ. ಭೂ ಕೇಂದ್ರವು ಅಪ್ಲಿಂಕ್ ಆವರ್ತನವನ್ನು ಬಳಸಿಕೊಂಡು ಉಪಗ್ರಹದತ್ತ ಸಂಕೇತವನ್ನು ಕಳುಹಿಸುತ್ತದೆ. ಉಪಗ್ರಹದ ಟ್ರಾನ್ಸ್ಪಾಂಡರ್ ಆ ಸಂಕೇತವನ್ನು ಸ್ವೀಕರಿಸಿ, ಅದನ್ನು ವರ್ಧಿಸುತ್ತದೆ ಮತ್ತು ಬೇರೊಂದು ಆವರ್ತನಕ್ಕೆ ಪರಿವರ್ತಿಸುತ್ತದೆ. ನಂತರ ಅದು 'ಡೌನ್ಲಿಂಕ್' ಮೂಲಕ ಭೂಮಿಯತ್ತ ಸಂಕೇತವನ್ನು ಮರುಪ್ರಸಾರ ಮಾಡುತ್ತದೆ.
ಮುಂದಿನ ಹಂತದಲ್ಲಿ, ಸ್ವೀಕರಿಸುವ ಭೂ ಕೇಂದ್ರಗಳು ಡೌನ್ಲಿಂಕ್ ಆದ ಸಂಕೇತವನ್ನು ಸೆರೆಹಿಡಿಯುತ್ತವೆ. ವೀಕ್ಷಕರಿಗೆ ತಲುಪಿಸಲು ಈ ಸಂಕೇತವನ್ನು ದೂರದರ್ಶನ ಟ್ರಾನ್ಸ್ಮಿಟರ್ಗಳು ಅಥವಾ ಕೇಬಲ್ ವಿತರಣಾ ಜಾಲಗಳಿಗೆ ವಿತರಿಸಲಾಗುತ್ತದೆ. ಚಂದಾದಾರರ (ವೀಕ್ಷಕರ) ಮನೆಯ ಆವರಣದಲ್ಲಿರುವ ಡಿಶ್ ಆಂಟೆನಾವು ಉಪಗ್ರಹದ ಸಂಕೇತವನ್ನು ನೇರವಾಗಿ ಸ್ವೀಕರಿಸುತ್ತದೆ. ಹೀಗಾಗಿ, ಉಪಗ್ರಹ ಸಂವಹನವು ದೂರದ ಸಂಪರ್ಕ ಕೊಂಡಿಯನ್ನು ಒದಗಿಸಿದರೆ, ಭೂ-ಆಧಾರಿತ ಟ್ರಾನ್ಸ್ಮಿಟರ್ಗಳು ಮತ್ತು ಕೇಬಲ್ ಜಾಲಗಳು ಅದರ ಅಂತಿಮ ವಿತರಣೆಗೆ ಬೆಂಬಲ ನೀಡುತ್ತವೆ.
ಉಪಗ್ರಹ ಸಂಪರ್ಕ ಮತ್ತು ಬಣ್ಣದ (ಕಲರ್) ಪ್ರಸಾರದ ಈ ಸಂಯೋಜನೆಯು ಭಾರತದ ದೂರದರ್ಶನ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿತು. ಇದು ದೂರದರ್ಶನದ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿತು ಮತ್ತು ವೀಕ್ಷಣೆಯ ಅನುಭವವನ್ನು ಹೆಚ್ಚಿಸಿತು. ಮುಂದಿನ ಹಂತದಲ್ಲಿ 1990ರ ದಶಕದ ಆರಂಭದಲ್ಲಿ ಖಾಸಗಿ ಉಪಗ್ರಹ ದೂರದರ್ಶನ ಚಾನೆಲ್ಗಳು ಪ್ರವೇಶಿಸಿದವು. 1990ರ ದಶಕದ ಮಧ್ಯಭಾಗದಿಂದ, ಕೇಬಲ್ ದೂರದರ್ಶನ ಜಾಲಗಳು ಭಾರತೀಯ ಮನೆಗಳಲ್ಲಿ ವೀಕ್ಷಣೆಯ ಆಯ್ಕೆಗಳನ್ನು ಮತ್ತಷ್ಟು ವಿಸ್ತರಿಸಿದವು.
|
ಇದು ನಿಮಗಿದು ಗೊತ್ತೇ?
ಉಪಗ್ರಹದ 'ಫುಟ್ಪ್ರಿಂಟ್' ಎಂದರೆ ಅದರ ಸಂಕೇತವನ್ನು ಸ್ವೀಕರಿಸಬಹುದಾದ ಭೂಮಿಯ ಮೇಲಿನ ಪ್ರದೇಶ. ಆ ವ್ಯಾಪ್ತಿಯೊಳಗೆ ಎಲ್ಲಿಯೇ ಡಿಶ್ ಅಳವಡಿಸಿದರೂ, ಅದು ಉಪಗ್ರಹದ ಪ್ರಸಾರವನ್ನು ಸುಲಭವಾಗಿ ಗ್ರಹಿಸಬಲ್ಲದು. ಆದರೆ ಅದರ ಹೊರಗಿರುವ ಡಿಶ್ಗೆ ಅತ್ಯಂತ ದುರ್ಬಲ ಸಂಕೇತ ದೊರೆಯುತ್ತದೆ ಅಥವಾ ಯಾವುದೇ ಸಂಕೇತ ಸಿಗುವುದಿಲ್ಲ.
|
ಬಹು-ಚಾನೆಲ್ ಯುಗ: ಕೇಬಲ್ ಮತ್ತು ಉಪಗ್ರಹ (ಸ್ಯಾಟಲೈಟ್) ದೂರದರ್ಶನ (1990–2005)

ಈ ಅವಧಿಯು ಭಾರತದ ದೂರದರ್ಶನ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ಸಾಕ್ಷಿಯಾಯಿತು. ಸಿಎನ್ಎನ್ ಮೂಲಕ ಆರಂಭವಾಗಿ, ಅಂತಾರಾಷ್ಟ್ರೀಯ ಉಪಗ್ರಹ ಚಾನೆಲ್ಗಳು ಭಾರತೀಯ ಪ್ರೇಕ್ಷಕರನ್ನು ತಲುಪಲು ಪ್ರಾರಂಭಿಸಿದವು. ಸ್ಟಾರ್ ಟಿವಿ ಮತ್ತು ಝೀ ಟಿವಿ ಆರಂಭವು ಉಪಗ್ರಹ ದೂರದರ್ಶನದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಿತು. ಸನ್ ಟಿವಿ ಸೇರಿದಂತೆ ದೇಶೀಯ ಪ್ರಸಾರ ಸಂಸ್ಥೆಗಳೂ ಸಹ ಈ ಉದಯೋನ್ಮುಖ ಬಹು-ಚಾನೆಲ್ ಮಾರುಕಟ್ಟೆಯನ್ನು ಪ್ರವೇಶಿಸಿದವು.
ಉಪಗ್ರಹ ಚಾನೆಲ್ಗಳ ಆಗಮನವು ಕೇಬಲ್ ದೂರದರ್ಶನಕ್ಕೆ ದೊಡ್ಡ ಉತ್ತೇಜನ ನೀಡಿತು. ಪ್ರಸಾರಕರು ಅಪ್ಲಿಂಕ್ಗಳ ಮೂಲಕ ಉಪಗ್ರಹಗಳಿಗೆ ಕಾರ್ಯಕ್ರಮದ ಸಂಕೇತಗಳನ್ನು ರವಾನಿಸುತ್ತಿದ್ದರು. ಉಪಗ್ರಹಗಳು ಈ ಸಂಕೇತಗಳನ್ನು ಭೂಮಿಯತ್ತ ಮರುಪ್ರಸಾರ ಮಾಡುತ್ತಿದ್ದವು; ಅಲ್ಲಿ ಸ್ಥಳೀಯ ಕೇಬಲ್ ಆಪರೇಟರ್ಗಳು ತಮ್ಮ ಹೆಡ್-ಎಂಡ್ಗಳಲ್ಲಿ ಡಿಶ್ ಆಂಟೆನಾಗಳನ್ನು ಬಳಸಿ ಅವುಗಳನ್ನು ಸ್ವೀಕರಿಸುತ್ತಿದ್ದರು. ಆಪರೇಟರ್ಗಳು ಚಾನೆಲ್ಗಳನ್ನು ಸಂಸ್ಕರಿಸಿ, ವ್ಯವಸ್ಥಿತಗೊಳಿಸಿದ ನಂತರ ಕೇಬಲ್ ಜಾಲಗಳ ಮೂಲಕ ಮನೆಗಳಿಗೆ ವಿತರಿಸುತ್ತಿದ್ದರು. ಉಪಗ್ರಹ ತಂತ್ರಜ್ಞಾನವು ದೂರದ ಪ್ರಸಾರಕ್ಕೆ ಅನುವು ಮಾಡಿಕೊಟ್ಟರೆ, ಕೇಬಲ್ ಜಾಲಗಳು ಸ್ಥಳೀಯ ವಿತರಣೆಗೆ ನೆರವಾದವು. ಈ ಸಂಯೋಜನೆಯು ದೂರದರ್ಶನದ ಟೆರೆಸ್ಟ್ರಿಯಲ್ ಸೇವೆಗಳ ವ್ಯಾಪ್ತಿಯನ್ನು ಮೀರಿ, ವ್ಯಾಪಕ ಶ್ರೇಣಿಯ ಸುದ್ದಿ, ಮನರಂಜನೆ, ಕ್ರೀಡೆ ಮತ್ತು ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳನ್ನು ಭಾರತೀಯ ಮನೆಗಳಿಗೆ ತಲುಪಿಸಿತು.
ಆದಾಗ್ಯೂ, ಕೇಬಲ್ ದೂರದರ್ಶನವು ಆಪರೇಟರ್ಗಳನ್ನು ಮನೆಗಳೊಂದಿಗೆ ಸಂಪರ್ಕಿಸಲು ಭೌತಿಕ ಮೂಲಸೌಕರ್ಯವನ್ನು ಅವಲಂಬಿಸಿತ್ತು. ದೂರದ ಮತ್ತು ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಿಗೆ ಈ ಜಾಲಗಳನ್ನು ವಿಸ್ತರಿಸುವುದು ಕಷ್ಟಕರವಾಗಿತ್ತು. ಇದಕ್ಕೆ ಪರ್ಯಾಯ ವಿತರಣಾ ವೇದಿಕೆಯಾಗಿ 'ಡೈರೆಕ್ಟ್-ಟು-ಹೋಮ್' ಪ್ರಸಾರವು ಹೊರಹೊಮ್ಮಿತು. ಕೇಬಲ್ ದೂರದರ್ಶನಕ್ಕಿಂತ ಭಿನ್ನವಾಗಿ, ಡಿಟಿಎಚ್ ಉಪಗ್ರಹ ಸಂಕೇತಗಳನ್ನು ನೇರವಾಗಿ ಚಂದಾದಾರರ ಮನೆಯ ಆವರಣದಲ್ಲಿ ಅಳವಡಿಸಲಾದ ಡಿಶ್ ಆಂಟೆನಾಕ್ಕೆ ತಲುಪಿಸುತ್ತದೆ.
ಡೈರೆಕ್ಟ್-ಟು-ಹೋಮ್ ಮತ್ತು ಡಿಜಿಟಲ್ ಪ್ರಸಾರ (2003–2017)
ಭಾರತದ ದೂರದರ್ಶನ ವಿಕಾಸದ ಮುಂದಿನ ಹಂತವು ಡಿಟಿಎಚ್ ಸೇವೆಗಳ ವಿಸ್ತರಣೆ ಮತ್ತು ಅನಲಾಗ್ನಿಂದ ಡಿಜಿಟಲ್ ಪ್ರಸಾರಕ್ಕೆ ನಡೆದ ಪರಿವರ್ತನೆಯಿಂದ ಗುರುತಿಸಲ್ಪಟ್ಟಿದೆ. ಡಿಶ್ ಟಿವಿ 2003ರ ಅಕ್ಟೋಬರ್ನಲ್ಲಿ ಭಾರತದ ಮೊದಲ ವಾಣಿಜ್ಯ ಡಿಟಿಎಚ್ ಸೇವೆಯನ್ನು ಪ್ರಾರಂಭಿಸಿತು. 2004ರ ಡಿಸೆಂಬರ್ನಲ್ಲಿ ಪ್ರಸಾರ ಭಾರತಿಯು ದೂರದರ್ಶನದ 'ಡಿಡಿ ಡೈರೆಕ್ಟ್ ಪ್ಲಸ್' ಅನ್ನು ಪ್ರಾರಂಭಿಸಿತು, ಇದನ್ನು ಈಗ 'ಡಿಡಿ ಫ್ರೀ ಡಿಶ್' ಎಂದು ಕರೆಯಲಾಗುತ್ತದೆ. ಇದು ಮಾಸಿಕ ಚಂದಾದಾರಿಕೆಯ ಅಗತ್ಯವಿಲ್ಲದ ಉಚಿತ ಡಿಟಿಎಚ್ ವೇದಿಕೆಯನ್ನು ಪರಿಚಯಿಸಿತು. ಈ ಬೆಳವಣಿಗೆಗಳು ಸೀಮಿತ ಕೇಬಲ್ ಸಂಪರ್ಕವಿರುವ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ಉಪಗ್ರಹ ದೂರದರ್ಶನದ ಲಭ್ಯತೆಯನ್ನು ವಿಸ್ತರಿಸಿದವು.
ಡಿಟಿಎಚ್ ಪ್ರಸಾರವು ಸ್ಥಳೀಯ ಕೇಬಲ್ ಜಾಲದ ಅಗತ್ಯವಿಲ್ಲದೆಯೇ, ಉಪಗ್ರಹಗಳಿಂದ ನೇರವಾಗಿ ಪ್ರತ್ಯೇಕ ಮನೆಗಳಿಗೆ ದೂರದರ್ಶನ ಸಂಕೇತಗಳನ್ನು ತಲುಪಿಸುತ್ತದೆ. ಪ್ರಸಾರಕರು ಮೊದಲು ದೂರದರ್ಶನ ವಿಷಯವನ್ನು ಡಿಜಿಟಲ್ ಸಂಕೇತಗಳಾಗಿ ಪರಿವರ್ತಿಸುತ್ತಾರೆ ಮತ್ತು ಸಮರ್ಥ ಪ್ರಸಾರಕ್ಕಾಗಿ ಅವುಗಳನ್ನು ಸಂಕುಚಿತಗೊಳಿಸುತ್ತಾರೆ. ಸಾಮಾನ್ಯವಾಗಿ 'ಕೆ-ಯು ಬ್ಯಾಂಡ್'ನಲ್ಲಿ ನಿಗದಿಪಡಿಸಲಾದ ರೇಡಿಯೊ ಆವರ್ತನಗಳನ್ನು ಬಳಸಿಕೊಂಡು ಈ ಸಂಕೇತಗಳನ್ನು ಉಪಗ್ರಹಗಳಿಗೆ ರವಾನಿಸಲಾಗುತ್ತದೆ. ಉಪಗ್ರಹಗಳು ಈ ಸಂಕೇತಗಳನ್ನು ಸ್ವೀಕರಿಸಿ, ನಿಗದಿತ ವ್ಯಾಪ್ತಿಯ ಪ್ರದೇಶಗಳಲ್ಲಿ ಭೂಮಿಯತ್ತ ಮರುಪ್ರಸಾರ ಮಾಡುತ್ತವೆ.
ಚಂದಾದಾರರ ಮನೆಯ ಆವರಣದಲ್ಲಿ ಅಳವಡಿಸಲಾದ ಸಣ್ಣ ಡಿಶ್ ಆಂಟೆನಾಗಳು ಈ ಸಂಕೇತಗಳನ್ನು ಸ್ವೀಕರಿಸುತ್ತವೆ. ಡಿಜಿಟಲ್ ಸೆಟ್-ಟಾಪ್ ಬಾಕ್ಸ್ ಸ್ವೀಕರಿಸಿದ ಸಂಕೇತಗಳನ್ನು ಸಂಸ್ಕರಿಸುತ್ತದೆ, ಆಯ್ಕೆಮಾಡಿದ ವಿಷಯವನ್ನು ಡಿಕೋಡ್ ಮಾಡುತ್ತದೆ ಮತ್ತು ದೂರದರ್ಶನ ಚಾನೆಲ್ಗಳನ್ನು ವೀಕ್ಷಣೆಗೆ ಲಭ್ಯವಾಗುವಂತೆ ಮಾಡುತ್ತದೆ. ಚಂದಾದಾರಿಕೆ ಆಧಾರಿತ ಸೇವೆಗಳು ಚಂದಾದಾರರಾದ ಚಾನೆಲ್ಗಳಿಗೆ ಮಾತ್ರ ವೀಕ್ಷಣೆಯನ್ನು ಸೀಮಿತಗೊಳಿಸಲು ಎನ್ಕ್ರಿಪ್ಶನ್ ಮತ್ತು ಅಧಿಕೃತ ಪ್ರವೇಶ ವ್ಯವಸ್ಥೆಗಳನ್ನು ಬಳಸುತ್ತವೆ. ಇದಕ್ಕೆ ವಿರುದ್ಧವಾಗಿ, ಡಿಡಿ ಫ್ರೀ ಡಿಶ್ನಂತಹ ಉಚಿತ ಸೇವೆಗಳಿಗೆ ಮಾಸಿಕ ಚಂದಾದಾರಿಕೆಯ ಅಗತ್ಯವಿರುವುದಿಲ್ಲ.
|
ಕೆ-ಯು ಬ್ಯಾಂಡ್ ಎಂದರೇನು?
ಉಪಗ್ರಹ ಆಧಾರಿತ ದೂರದರ್ಶನ ಸೇವೆಗಳು ಉಪಗ್ರಹಗಳು ಮತ್ತು ಭೂಮಿಯ ನಡುವೆ ಸಂಕೇತಗಳನ್ನು ರವಾನಿಸಲು ರೇಡಿಯೊ ಆವರ್ತನ ತರಂಗಾಂತರದ ನಿರ್ದಿಷ್ಟ ಭಾಗಗಳನ್ನು ಬಳಸುತ್ತವೆ. ಕೆ-ಯು ಬ್ಯಾಂಡ್ ಅಂತಹ ಒಂದು ಆವರ್ತನ ಬ್ಯಾಂಡ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಡೈರೆಕ್ಟ್-ಟು-ಹೋಮ್ ಪ್ರಸಾರಕ್ಕಾಗಿ ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ 12–18 GHz ಆವರ್ತನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವ್ಯವಸ್ಥೆ ಮತ್ತು ಪ್ರಾದೇಶಿಕ ಹಂಚಿಕೆಗೆ ಅನುಗುಣವಾಗಿ, ಡಿಟಿಎಚ್ ಸೇವೆಗಳು ಡೌನ್ಲಿಂಕ್ ಪ್ರಸಾರಕ್ಕಾಗಿ ಸಾಮಾನ್ಯವಾಗಿ 10.7–12.75 GHz ಆಸುಪಾಸಿನ ಆವರ್ತನಗಳನ್ನು ಬಳಸುತ್ತವೆ. ಇದರ ತುಲನಾತ್ಮಕವಾಗಿ ಹೆಚ್ಚಿನ ಆವರ್ತನಗಳು ಚಂದಾದಾರರ ಮನೆಯ ಆವರಣದಲ್ಲಿ ಸಣ್ಣ ಡಿಶ್ ಆಂಟೆನಾಗಳನ್ನು ಬಳಸಲು ಅನುವು ಮಾಡಿಕೊಡುತ್ತವೆ. ಆದಾಗ್ಯೂ, ಕೆ-ಯು ಬ್ಯಾಂಡ್ ಸಂಕೇತಗಳು ಭಾರಿ ಮಳೆಯಿಂದ ಪ್ರಭಾವಿತವಾಗಬಹುದು, ಇದು ತಾತ್ಕಾಲಿಕವಾಗಿ ಪ್ರಸಾರ ಸ್ವೀಕೃತಿಗೆ ಅಡ್ಡಿಪಡಿಸಬಹುದು.
|

ಆಧುನಿಕ ಪ್ರಸಾರ: ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಹೊಸ ಆಯಾಮಗಳು (2018–ಪ್ರಸ್ತುತ)
2018ರಿಂದ, ವಿಸ್ತರಿಸುತ್ತಿರುವ ಇಂಟರ್ನೆಟ್ ಸಂಪರ್ಕ, ಡಿಜಿಟಲ್ ವೇದಿಕೆಗಳು ಮತ್ತು ಸಂಪರ್ಕಿತ ಸಾಧನಗಳೊಂದಿಗೆ ಭಾರತದ ಪ್ರಸಾರ ಕ್ಷೇತ್ರವು ಮಹತ್ತರ ಬದಲಾವಣೆ ಕಂಡಿದೆ. ದೂರದರ್ಶನ ವೀಕ್ಷಣೆಯು ಈಗ ಸಾಂಪ್ರದಾಯಿಕ ಟಿವಿ ಸೆಟ್ಗಳು ಅಥವಾ ನಿಗದಿತ ಸಮಯದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ. ವೀಕ್ಷಕರು ಸ್ಮಾರ್ಟ್ಫೋನ್ಗಳು, ಕಂಪ್ಯೂಟರ್ಗಳು ಮತ್ತು ಸ್ಮಾರ್ಟ್ ಟಿವಿಗಳ ಮೂಲಕ ವಿಷಯವನ್ನು ವೀಕ್ಷಿಸಬಹುದು. ಓವರ್-ದಿ-ಟಾಪ್ ವೇದಿಕೆಗಳು ವಿವಿಧ ಸಾಧನಗಳು ಮತ್ತು ಸ್ಥಳಗಳಲ್ಲಿ ಬೇಡಿಕೆಗೆ ಅನುಗುಣವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿವೆ. 2024ರ ನವೆಂಬರ್ನಲ್ಲಿ ಪ್ರಸಾರ ಭಾರತಿಯು ತನ್ನ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಯಾದ 'ವೇವ್ಸ್' ಅನ್ನು ಪ್ರಾರಂಭಿಸಿತು, ಇದು ಸಾರ್ವಜನಿಕ ಸೇವಾ ಪ್ರಸಾರದ ವಿಷಯಗಳನ್ನು ಡಿಜಿಟಲ್ ಪ್ರೇಕ್ಷಕರಿಗೆ ತಲುಪಿಸುತ್ತಿದೆ. 2026ರ ನವೆಂಬರ್ ವೇಳೆಗೆ, ವೇವ್ಸ್ ಸುಮಾರು 1.6 ಕೋಟಿ ನೋಂದಾಯಿತ ಬಳಕೆದಾರರನ್ನು ದಾಖಲಿಸಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: ವೇವ್ಸ್ ಒಟಿಟಿ
ಭೂ-ಆಧಾರಿತ ಗೋಪುರಗಳಿಂದ ಸ್ವೀಕರಿಸುವ ಆಂಟೆನಾಗಳಿಗೆ ದೂರದರ್ಶನ ಸಂಕೇತಗಳನ್ನು ರವಾನಿಸುವ ಸಾಂಪ್ರದಾಯಿಕ ಟೆರೆಸ್ಟ್ರಿಯಲ್ ಪ್ರಸಾರ ಮತ್ತು ಸಂವಹನ ಉಪಗ್ರಹಗಳ ಮೂಲಕ ಡಿಶ್ಗಳಿಗೆ ಸಂಕೇತಗಳನ್ನು ತಲುಪಿಸುವ ಉಪಗ್ರಹ ಪ್ರಸಾರಕ್ಕಿಂತ ಭಿನ್ನವಾಗಿ, ಒಟಿಟಿ ವೇದಿಕೆಗಳು ಇಂಟರ್ನೆಟ್ ಮೂಲಕ ಧ್ವನಿ ಮತ್ತು ದೃಶ್ಯ ವಿಷಯಗಳನ್ನು ತಲುಪಿಸುತ್ತವೆ. ವಿಷಯವನ್ನು ಡೇಟಾ ಸೆಂಟರ್ಗಳಲ್ಲಿರುವ ಸರ್ವರ್ಗಳಲ್ಲಿ ಹೋಸ್ಟ್ ಮಾಡಲಾಗುತ್ತದೆ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕದ ಮೂಲಕ ಪಡೆಯಲಾಗುತ್ತದೆ. 'ಕಂಟೆಂಟ್ ಡೆಲಿವರಿ ನೆಟ್ವರ್ಕ್ಗಳು' ಬಳಕೆದಾರರಿಗೆ ಹತ್ತಿರವಿರುವ ಭೌಗೋಳಿಕವಾಗಿ ವಿತರಿಸಲ್ಪಟ್ಟ ಸರ್ವರ್ಗಳನ್ನು ಬಳಸಿಕೊಂಡು ವಿಷಯವನ್ನು ಸಂಗ್ರಹಿಸಿಡುತ್ತವೆ. ಇದು ವಿಳಂಬವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಿಷಯ ವಿತರಣೆಯನ್ನು ಸುಧಾರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: ಭಾರತದಲ್ಲಿ ಡೇಟಾ ಸೆಂಟರ್ಗಳು; ಭಾರತದಲ್ಲಿ ಕ್ಲೌಡ್ ಪರಿಸರ ವ್ಯವಸ್ಥೆ
ಮತ್ತೊಂದು ಉದಯೋನ್ಮುಖ ತಂತ್ರಜ್ಞಾನವೆಂದರೆ 'ಡೈರೆಕ್ಟ್-ಟು-ಮೊಬೈಲ್' ಪ್ರಸಾರ. ಇದು ಹೊಂದಾಣಿಕೆಯಾಗುವ ಮೊಬೈಲ್ ಸಾಧನಗಳಿಗೆ ನೇರವಾಗಿ ವೀಡಿಯೊ, ಆಡಿಯೊ ಮತ್ತು ಡೇಟಾವನ್ನು ರವಾನಿಸಲು ಭೂ-ಆಧಾರಿತ (ಟೆರೆಸ್ಟ್ರಿಯಲ್) ಮೂಲಸೌಕರ್ಯವನ್ನು ಬಳಸುತ್ತದೆ. ಇದರ ಸ್ವೀಕೃತಿಗೆ ಸಿಮ್ ಕಾರ್ಡ್ ಅಥವಾ ಮೊಬೈಲ್ ಡೇಟಾ ಸಂಪರ್ಕದ ಅಗತ್ಯವಿರುವುದಿಲ್ಲ. ಒಟಿಟಿ ಸ್ಟ್ರೀಮಿಂಗ್ಗಿಂತ ಭಿನ್ನವಾಗಿ, ಡಿ2ಎಂ ಏಕಕಾಲದಲ್ಲಿ ಅನೇಕ ಸಾಧನಗಳನ್ನು ತಲುಪಲು ಪ್ರಸಾರ ತಂತ್ರಜ್ಞಾನವನ್ನು ಬಳಸುತ್ತದೆ.
|
ಇದು ನಿಮಗಿದು ಗೊತ್ತೇ?
ಮುಂದಿನ ಪೀಳಿಗೆಯ ಪ್ರಸಾರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಪ್ರಸಾರ ಭಾರತಿಯು ಐಐಟಿ ಕಾನ್ಪುರದೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ತರುವಾಯ ಐಐಟಿ ಕಾನ್ಪುರವು ಡಿ2ಎಂ ಪ್ರಸಾರದ ಪರಿಕಲ್ಪನೆಯ ಪುರಾವೆಯನ್ನು ಪೂರ್ಣಗೊಳಿಸಿದೆ. ಈ ಪ್ರಯೋಗಗಳು ಹೈ ಪವರ್ ಹೈ ಟವರ್ ಮತ್ತು ಲೋ ಪವರ್ ಲೋ ಟವರ್ ಟ್ರಾನ್ಸ್ಮಿಟರ್ಗಳನ್ನು ಬಳಸುವ ಹೈಬ್ರಿಡ್ ಪ್ರಸಾರವನ್ನೂ ಪರಿಶೀಲಿಸಿವೆ. 2025ರ ನವೆಂಬರ್ನಲ್ಲಿ, ಪ್ರಸಾರ ಭಾರತಿಯು ಮೊಬೈಲ್ ಸಾಧನಗಳ ಮೇಲೆ ಡಿ2ಎಂ ಸ್ವೀಕೃತಿಯ ದೂರಸಂಪರ್ಕ ಹಸ್ತಕ್ಷೇಪ ಮತ್ತು ಉಷ್ಣದ ಪರಿಣಾಮಗಳನ್ನು ಒಳಗೊಂಡ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಿತು. ಈ ಪರೀಕ್ಷೆಗಳಲ್ಲಿ 'ಎಟಿಎಸ್ಸಿ 3.0' ಆಧಾರಿತ ಪ್ರಸಾರ ವ್ಯವಸ್ಥೆಯೂ ಸೇರಿತ್ತು.
|
ಪ್ರಸಾರದ ಭವಿಷ್ಯವನ್ನು ರೂಪಿಸುವುದು
ಭಾರತದ ದೂರದರ್ಶನ ಪರಿಸರ ವ್ಯವಸ್ಥೆಯು ಒಂದು ಸಣ್ಣ ಪ್ರಾಯೋಗಿಕ ಸೇವೆಯಿಂದ ಆರಂಭವಾಗಿ ಇಂದು ವೈವಿಧ್ಯಮಯ, ಬಹು-ವೇದಿಕೆಯ ಜಾಲವಾಗಿ ಬೆಳೆದಿದೆ. ದೂರದರ್ಶನವು ಈಗ 35 ಚಾನೆಲ್ಗಳನ್ನು ನಡೆಸುತ್ತಿದ್ದು, 2010ರಲ್ಲಿ ಈ ಸಂಖ್ಯೆ 17 ಆಗಿತ್ತು [1]. 'ಡಿಡಿ ಫ್ರೀ ಡಿಶ್' ಶೈಕ್ಷಣಿಕ ಚಾನೆಲ್ಗಳೂ ಸೇರಿದಂತೆ 482 ಚಾನೆಲ್ಗಳನ್ನು ಪ್ರಸಾರ ಮಾಡುತ್ತಿದೆ; ಈ ಹಿಂದೆ ಈ ಸಂಖ್ಯೆ 59 ಆಗಿತ್ತು [2]. ಖಾಸಗಿ ಉಪಗ್ರಹ ದೂರದರ್ಶನ ಚಾನೆಲ್ಗಳ ಸಂಖ್ಯೆಯು 2010–11ರಲ್ಲಿ 603 ಇದ್ದದ್ದು, 2026ರ ಮಾರ್ಚ್ ವೇಳೆಗೆ 917 ಅನುಮತಿ ಪಡೆದ ಚಾನೆಲ್ಗಳಿಗೆ ವಿಸ್ತರಿಸಿದೆ. ಇವುಗಳಲ್ಲಿ 908 ಚಾನೆಲ್ಗಳು ಭಾರತದಲ್ಲಿ ಡೌನ್ಲಿಂಕ್ ಮಾಡಲು ಲಭ್ಯವಿದ್ದು, ಅವುಗಳಲ್ಲಿ 342 ಪೇ ಚಾನೆಲ್ಗಳು ಮತ್ತು 566 ಉಚಿತ ಚಾನೆಲ್ಗಳಾಗಿವೆ. ಪೇ ಚಾನೆಲ್ಗಳಲ್ಲಿ 238 ಸ್ಟ್ಯಾಂಡರ್ಡ್-ಡೆಫಿನಿಷನ್ ಮತ್ತು 104 ಹೈ-ಡೆಫಿನಿಷನ್ ಚಾನೆಲ್ಗಳಾಗಿವೆ [3]. 2026ರ ಮಾರ್ಚ್ 31ರ ಅನ್ವಯ, ಖಾಸಗಿ ಪೇ ಡಿಟಿಎಚ್ ಸೇವೆಗಳು 49.05 ಮಿಲಿಯನ್ (4.90 ಕೋಟಿ) ಸಕ್ರಿಯ ಚಂದಾದಾರರಿಗೆ ಸೇವೆ ನೀಡುತ್ತಿವೆ. ದೂರದರ್ಶನದ ಡಿಟಿಎಚ್ ಸೇವೆಯು ದೇಶಾದ್ಯಂತ ಶೇ. 100ರಷ್ಟು ಭೌಗೋಳಿಕ ಮತ್ತು ಜನಸಂಖ್ಯಾ ವ್ಯಾಪ್ತಿಯನ್ನು ಒದಗಿಸುತ್ತದೆ [4].

ಸಾಮೂಹಿಕವಾಗಿ, ಭೂಮಿಯ ಮೇಲಿನ (ಟೆರೆಸ್ಟ್ರಿಯಲ್), ಉಪಗ್ರಹ (ಸ್ಯಾಟಲೈಟ್), ಕೇಬಲ್, ಡಿಟಿಎಚ್ ಮತ್ತು ಡಿಜಿಟಲ್ ವೇದಿಕೆಗಳು ನಗರ, ಗ್ರಾಮೀಣ ಹಾಗೂ ದೂರದ ಮನೆಗಳಿಗೆ ದೂರದರ್ಶನವನ್ನು ತಲುಪಿಸುತ್ತಿವೆ. ತಾಂತ್ರಿಕ ಒಗ್ಗೂಡುವಿಕೆ ಮತ್ತು ವಿಸ್ತರಿಸುತ್ತಿರುವ ಡಿಜಿಟಲ್ ಲಭ್ಯತೆಯು ಪ್ರಸಾರದ ಭವಿಷ್ಯವನ್ನು ಹೆಚ್ಚಿನ ಮಟ್ಟದಲ್ಲಿ ರೂಪಿಸಲಿದೆ. ಹೈ-ಡೆಫಿನಿಷನ್ ಪ್ರಸಾರ, ಡಿಜಿಟಲ್ ವಿತರಣೆ ಮತ್ತು ಇಂಟರ್ನೆಟ್ ಆಧಾರಿತ ವೇದಿಕೆಗಳು ಪ್ರೇಕ್ಷಕರು ವಿಷಯವನ್ನು ಪಡೆಯುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸುತ್ತಿವೆ. ಪ್ರಸಾರ ಕ್ಷೇತ್ರವು ಸಾಂಪ್ರದಾಯಿಕ ದೂರದರ್ಶನ ಜಾಲಗಳನ್ನು ಮೀರಿ, ಹೆಚ್ಚು ಹೊಂದಿಕೊಳ್ಳುವ ಮತ್ತು ಸಂಪರ್ಕಿತ ವಿತರಣಾ ವ್ಯವಸ್ಥೆಗಳತ್ತ ಸಾಗುತ್ತಿದೆ. ಈ ಪರಿವರ್ತನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪ್ರಸಾರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಲಿವೆ. ವಿಸ್ತರಿಸುತ್ತಿರುವ ಮೂಲಸೌಕರ್ಯ, ತಾಂತ್ರಿಕ ನಾವೀನ್ಯತೆ ಮತ್ತು ವ್ಯಾಪಕ ವೇದಿಕೆಗಳ ಏಕೀಕರಣದೊಂದಿಗೆ, ವೈವಿಧ್ಯಮಯ ಪ್ರೇಕ್ಷಕರು ಮತ್ತು ಬದಲಾಗುತ್ತಿರುವ ವೀಕ್ಷಣಾ ಆದ್ಯತೆಗಳಿಗೆ ಸೇವೆ ಸಲ್ಲಿಸಲು ಭಾರತದ ಪ್ರಸಾರ ಪರಿಸರ ವ್ಯವಸ್ಥೆಯು ವಿಕಸನಗೊಳ್ಳುತ್ತಿದೆ. ಈ ಬೆಳವಣಿಗೆಗಳು ಹೆಚ್ಚು ಸುಲಭವಾಗಿ ತಲುಪಬಲ್ಲ, ಸಂಪರ್ಕಿತ ಮತ್ತು ಭವಿಷ್ಯಕ್ಕೆ ಸನ್ನದ್ಧವಾದ ಪ್ರಸಾರ ಕ್ಷೇತ್ರವನ್ನು ರೂಪಿಸುತ್ತಿವೆ.
References
Prasar Bharati
PIB Archives
PIB Backgrounder
ISRO
Ministry of Education
Ministry of Communications
Ministry of Information & Broadcasting
Others
India’s Television Broadcasting Shift
*****
(Explainer ID: 160889)
आगंतुक पटल : 8
Provide suggestions / comments