Social Welfare
ಬಾಲ್ಯ ವಿವಾಹ ಮುಕ್ತ ಭಾರತ
ಬಾಲ್ಯ ವಿವಾಹ ಮುಕ್ತ ಭಾರತದತ್ತ ಎರಡು ವರ್ಷಗಳ ಸಾಮೂಹಿಕ ಶ್ರಮ
Posted On:
06 NOV 2026 5:39PM
|
ಬಾಲ್ಯ ವಿವಾಹವು ಭಾರತದಲ್ಲಿ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯದ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರುವ ಒಂದು ಸವಾಲಾಗಿ ಉಳಿದಿದೆ. ಆದಾಗ್ಯೂ, 18 ವರ್ಷ ತಲುಪುವ ಮೊದಲೇ ವಿವಾಹವಾದ 20-24 ವಯೋಮಾನದ ಮಹಿಳೆಯರ ಪ್ರಮಾಣವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್-5: 2019-21) ಯಲ್ಲಿ ಶೇಕಡಾ 23.3 ರಷ್ಟಿದ್ದು, ಅದು (ಎನ್ಎಫ್ಎಚ್ಎಸ್-6: 2023-24) ರಲ್ಲಿ ಶೇಕಡಾ 20.1 ಕ್ಕೆ ಕುಸಿದಿದೆ.2024ರ ನವೆಂಬರ್ 27 ರಂದು ಚಾಲನೆ ನೀಡಲಾದ 'ಬಾಲ್ಯ ವಿವಾಹ ಮುಕ್ತ ಭಾರತ' ಅಭಿಯಾನವು ಕಾನೂನು ರಕ್ಷಣೆ, ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಬಾಲ್ಯ ವಿವಾಹ ತಡೆಯುವ ಪ್ರಯತ್ನಗಳನ್ನು ಬಲಪಡಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಈ ಅಭಿಯಾನದಡಿಯಲ್ಲಿ 6.85 ಲಕ್ಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 12.47 ಕೋಟಿ ಜನರು ಪಾಲ್ಗೊಂಡಿದ್ದಾರೆ ಹಾಗೂ 42.01 ಲಕ್ಷ ಸಂಕಲ್ಪಗಳನ್ನು ನೋಂದಾಯಿಸಲಾಗಿದೆ. ಪ್ರಸ್ತುತ ಎರಡು ವರ್ಷಗಳನ್ನು ಪೂರೈಸಿರುವ ಈ ಅಭಿಯಾನವು, 2030 ರ ವೇಳೆಗೆ ಬಾಲ್ಯ ವಿವಾಹ ರಹಿತ ಭಾರತವನ್ನು ನಿರ್ಮಿಸುವ ರಾಷ್ಟ್ರೀಯ ಗುರಿಯನ್ನು ಸಾಕಾರಗೊಳಿಸುವತ್ತ ನಿರಂತರವಾಗಿ ಮುನ್ನಡೆಯುತ್ತಿದೆ.
|
ಭಾರತದಲ್ಲಿ ಕಾನೂನಿನ ಮೂಲಕ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿದ್ದರೂ, ಬಾಲ್ಯ ವಿವಾಹವು ಇಂದಿಗೂ ಒಂದು ನಿರಂತರ ಸಾಮಾಜಿಕ ಸವಾಲಾಗಿ ಉಳಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್ಎಫ್ಎಚ್ಎಸ್-6, 202-24) ವರದಿಯ ಪ್ರಕಾರ, 18 ವರ್ಷ ತುಂಬುವ ಮೊದಲೇ ವಿವಾಹವಾದ 20 ರಿಂದ 24 ವಯೋಮಾನದ ಮಹಿಳೆಯರ ಪ್ರಮಾಣವು ಶೇಕಡಾ 20.1 ರಷ್ಟಿದೆ. ಇದು ಎನ್ಎಫ್ಹೆಚ್ಎಸ್-5 (2019-21) ರ ಶೇಕಡಾ 23.3 ಕ್ಕೆ ಹೋಲಿಸಿದರೆ ಶೇಕಡಾ 3.2 ರಷ್ಟು ಇಳಿಕೆಯಾಗಿರುವುದನ್ನು ಸೂಚಿಸುತ್ತದೆ.
ಈ ಆಚಾರವು ಹೆಣ್ಣುಮಕ್ಕಳನ್ನು ವಿಶೇಷವಾಗಿ ಅಲ್ಪವಯಸ್ಸಿನ ಗರ್ಭಧಾರಣೆಯಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳಿಗೆ ಒಡ್ಡುತ್ತದೆ; ಗೃಹಹಿಂಸೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಶಿಕ್ಷಣವನ್ನು ಮೊಟಕುಗೊಳಿಸುತ್ತದೆ ಹಾಗೂ ಬಡತನ ಮತ್ತು ಲಿಂಗ ಅಸಮಾನತೆಯಂತಹ ಪಿಡುಗುಗಳನ್ನು ಮುಂದುವರಿಸುತ್ತದೆ.
ಆದ್ದರಿಂದ, ಭಾರತ ಸರ್ಕಾರವು ಇದಕ್ಕೆ ಬಹುವಿಧದ ತಂತ್ರಗಳ ಮೂಲಕ ಸ್ಪಂದಿಸಿದೆ: ಬಾಲ್ಯ ವಿವಾಹವನ್ನು ನಿಷೇಧಿಸುವ ಮತ್ತು ಶಿಕ್ಷಿಸುವ ಕಟ್ಟುನಿಟ್ಟಿನ ಕಾನೂನು, ಹೆಣ್ಣುಮಕ್ಕಳ ಮೌಲ್ಯ ಹಾಗೂ ಗೌರವವನ್ನು ಹೆಚ್ಚಿಸುವ ಕಲ್ಯಾಣ ಯೋಜನೆಗಳು ಮತ್ತು 2024ರ ನವೆಂಬರ್ನಿಂದ ಜಾರಿಗೆ ಬಂದಿರುವ 'ಬಾಲ್ಯ ವಿವಾಹ ಮುಕ್ತ ಭಾರತ' (ಬಿವಿಎಂಬಿ) ರಾಷ್ಟ್ರೀಯ ಅಭಿಯಾನ. ಈ ಅಭಿಯಾನವು ಕಾನೂನು ನಿಯಮಗಳು ಮತ್ತು ಯೋಜನೆಗಳನ್ನು ಸಮುದಾಯದ ಸಾಮೂಹಿಕ ಜಾಗೃತಿಯೊಂದಿಗೆ ಒಗ್ಗೂಡಿಸಿ ಕಾರ್ಯನಿರ್ವಹಿಸುತ್ತಿದೆ.

ಬಾಲ್ಯವಿವಾಹ ನಿಷೇಧ ಕಾಯ್ದೆ, 2006
ಈ ಸವಾಲಿಗೆ ಕಾನೂನಾತ್ಮಕ ಉತ್ತರವೇ ಬಾಲ್ಯವಿವಾಹ ನಿಷೇಧ ಕಾಯ್ದೆ, 2006. ಇದು ಬಾಲ್ಯವಿವಾಹದ ವಿರುದ್ಧದ ಕ್ರಮಕ್ಕೆ ಶಾಸನಬದ್ಧ ಅಡಿಪಾಯವಾಗಿದೆ. ಇದು ಬಾಲ್ಯವಿವಾಹ ತಡೆ ಕಾಯ್ದೆ, 1929 (ಶಾರದಾ ಕಾಯ್ದೆ) ಅನ್ನು ರದ್ದುಗೊಳಿಸಿ, ಕಾನೂನು ದೃಷ್ಟಿಕೋನವನ್ನು ಕೇವಲ ಬಾಲ್ಯವಿವಾಹವನ್ನು ತಡೆಯುವುದರಿಂದ ಅದನ್ನು ಸಂಪೂರ್ಣವಾಗಿ ನಿಷೇಧಿಸುವತ್ತ ಬದಲಾಯಿಸಿತು, ಜೊತೆಗೆ ಸಂತ್ರಸ್ತರಿಗೆ ಬಲವಾದ ರಕ್ಷಣೆ ಮತ್ತು ಪರಿಹಾರವನ್ನು ನೀಡುತ್ತದೆ.
"ಮಗು" ಎಂದರೆ ಯಾರು:
21 ವರ್ಷ ಪೂರ್ಣಗೊಳಿಸದ ಯುವಕ ಮತ್ತು 18 ವರ್ಷ ಪೂರ್ಣಗೊಳಿಸದ ಯುವತಿ. ಮದುವೆಯಾಗುವ ಯಾವುದೇ ಒಪ್ಪಂದದ ಪಕ್ಷಕಾರರಲ್ಲಿ ಒಬ್ಬರು ಮಗುವಾಗಿದ್ದರೆ ಅದನ್ನು ಬಾಲ್ಯವಿವಾಹ ಎನ್ನಲಾಗುತ್ತದೆ.
ಮದುವೆಯ ಸ್ಥಿತಿ (ಸ್ಥಾನಮಾನ):
ಬಾಲ್ಯವಿವಾಹವು ಮಗುವಾಗಿದ್ದ ಪಕ್ಷಕಾರನ ಇಷ್ಟದಂತೆ ರದ್ದುಗೊಳಿಸಬಹುದಾದ ಮದುವೆಯಾಗಿರುತ್ತದೆ. ಅವರು ಸಾಮಾನ್ಯವಾಗಿ ವಯಸ್ಕರಾದ (ಅಪ್ರಾಪ್ತತೆಯಿಂದ ಮುಕ್ತರಾದ) ಎರಡು ವರ್ಷಗಳ ಒಳಗೆ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮಗುವನ್ನು ಮಾನವ ಕಳ್ಳಸಾಗಣಿಕೆಗೆ ಒಳಪಡಿಸಿದ್ದರೆ, ಬಲವಂತವಾಗಿ ಅಥವಾ ವಂಚನೆಯಿಂದ ಕರೆದೊಯ್ದಿದ್ದರೆ ಅಥವಾ ಅನೈತಿಕ ಉದ್ದೇಶಗಳಿಗಾಗಿ ಬಳಸಿದ್ದರೆ ಅಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮದುವೆಯು ಸಂಪೂರ್ಣವಾಗಿ ಅಸಿಂಧುವಾಗಿರುತ್ತದೆ.
ಅಪರಾಧಗಳು ಮತ್ತು ಶಿಕ್ಷೆಗಳು:
ಈ ಕಾಯ್ದೆಯಡಿಯಲ್ಲಿನ ಅಪರಾಧಗಳು ಸಂಜ್ಞೇಯ ಮತ್ತು ಜಾಮೀನು ರಹಿತ ಆಗಿರುತ್ತವೆ. ಮಗುವನ್ನು ಮದುವೆಯಾಗುವ ವಯಸ್ಕ ಪುರುಷ, ಹಾಗೂ ಬಾಲ್ಯವಿವಾಹವನ್ನು ನೆರವೇರಿಸುವ, ನಿರ್ವಹಿಸುವ, ಪ್ರಚೋದಿಸುವ, ಉತ್ತೇಜಿಸುವ ಅಥವಾ ಅದರಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು (ಪೋಷಕರು ಮತ್ತು ರಕ್ಷಕರು ಸೇರಿದಂತೆ), 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು/ಅಥವಾ ₹1 ಲಕ್ಷದವರೆಗೆ ದಂಡಕ್ಕೆ ಬದ್ಧರಾಗುತ್ತಾರೆ. ಮಹಿಳಾ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ.
ಸಂತ್ರಸ್ತರಿಗೆ ಪರಿಹಾರ:
ಈ ಕಾಯ್ದೆಯು ಜೀವನಾಂಶ, ವಸತಿ ಮತ್ತು ಮಗುವಿನ ರಕ್ಷಣೆಯ ವ್ಯವಸ್ಥೆಗಳನ್ನು ಒದಗಿಸುತ್ತದೆ, ಹಾಗೂ ಇಂತಹ ಮದುವೆಗಳಿಂದ ಜನಿಸಿದ ಮಕ್ಕಳು ಕಾನೂನುಬದ್ಧ ಮಕ್ಕಳಾಗಿಯೇ ಉಳಿಯುತ್ತಾರೆ.
ತಡೆ ಆಜ್ಞೆಗಳ ಮೂಲಕ ತಡೆಗಟ್ಟುವಿಕೆ:
ನಡೆಯಲಿರುವ ಬಾಲ್ಯವಿವಾಹವನ್ನು ತಡೆಯಲು ತಡೆ ಆಜ್ಞೆಗಳನ್ನು ಹೊರಡಿಸಲು ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ವಿಶೇಷವಾಗಿ ಅಕ್ಷಯ ತೃತೀಯದಂತಹ ಸಾಮೂಹಿಕ ಮದುವೆ ಸಂದರ್ಭಗಳು ಮತ್ತು ಹಬ್ಬಗಳ ಸಮಯದಲ್ಲಿ. ಅವರು ಸಮಯೋಚಿತ ಮಧ್ಯಸ್ಥಿಕೆ, ಜಾಗೃತಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದ ಮೂಲಕ ಇದನ್ನು ಮಾಡುತ್ತಾರೆ.
ಬಾಲ್ಯವಿವಾಹ ನಿಷೇಧ ಅಧಿಕಾರಿಗಳು (ಸಿಎಂಪಿಒಗಳು):
ಕಾಯ್ದೆಯ ಕಲಂ 16 ರಾಜ್ಯ ಸರ್ಕಾರಗಳಿಗೆ ಅಧಿಕೃತ ಗೆಜೆಟ್ನಲ್ಲಿ ಸೂಚನೆ ಹೊರಡಿಸುವ ಮೂಲಕ ಬಾಲ್ಯವಿವಾಹ ನಿಷೇಧ ಅಧಿಕಾರಿಗಳನ್ನು (ಸಿಎಂಪಿಒಗಳು) ನೇಮಿಸಲು ಅಧಿಕಾರ ನೀಡುತ್ತದೆ. ಅವರ ಶಾಸನಬದ್ಧ ಕರ್ತವ್ಯಗಳಲ್ಲಿ ಬಾಲ್ಯವಿವಾಹಗಳು ನೆರವೇರದಂತೆ ತಡೆಯುವುದು, ಅಭಿಯೋಗಕ್ಕೆ ಸಾಕ್ಷ್ಯಗಳನ್ನು ಸಂಗ್ರಹಿಸುವುದು, ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಆಪ್ತಸಲಹೆ ನೀಡುವುದು, ಜಾಗೃತಿ ಮೂಡಿಸುವುದು, ಸಮುದಾಯಗಳನ್ನು ಸಂವೇದನಾಶೀಲಗೊಳಿಸುವುದು ಮತ್ತು ನಿಯತಕಾಲಿಕ ವರದಿಗಳು ಹಾಗೂ ಅಂಕಿಅಂಶಗಳನ್ನು ಒದಗಿಸುವುದು ಸೇರಿವೆ. ಆದ್ದರಿಂದ ಪರಿಣಾಮಕಾರಿ ಅನುಷ್ಠಾನಕ್ಕೆ ಕೇವಲ ಉಲ್ಲಂಘನೆಯ ನಂತರದ ಕಾನೂನು ಜಾರಿಯಷ್ಟೇ ಅಲ್ಲದೆ, ಪೂರ್ವಭಾವಿ ಜಾಗೃತಿ ಪ್ರಸಾರ, ಸಮುದಾಯದ ಜಾಗರೂಕತೆ ಮತ್ತು ಮದುವೆ ನಡೆಯುವ ಮುನ್ನವೇ ತಕ್ಷಣದ ಮಧ್ಯಸ್ಥಿಕೆ ಅಗತ್ಯವಾಗಿರುತ್ತದೆ.
|
ಉಚ್ಚ ನ್ಯಾಯಾಲಯದ (ಸುಪ್ರೀಂ ಕೋರ್ಟ್) ಮಾರ್ಗದರ್ಶಿ ಚೌಕಟ್ಟು: ಅಕ್ಟೋಬರ್ 18, 2024 ರಂದು ಸೊಸೈಟಿ ಫಾರ್ ಎನ್ಲೈಟನ್ಮೆಂಟ್ ಅಂಡ್ ವಾಲಂಟರಿ ಆಕ್ಷನ್ ಮತ್ತು ಇನ್ನೊಬ್ಬರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು (W.P. (C) No. 1234 of 2017) ಪ್ರಕರಣದ ತೀರ್ಪಿನಲ್ಲಿ, ಗೌರವಾನ್ವಿತ ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಗ್ರ ಮಾರ್ಗದರ್ಶಿ ಚೌಕಟ್ಟನ್ನು ನೀಡಿದೆ. ಇದು ಜಿಲ್ಲಾ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ಮೀಸಲಾದ, ಪೂರ್ಣಕಾಲಿಕ ಬಾಲ್ಯವಿವಾಹ ನಿಷೇಧ ಅಧಿಕಾರಿಗಳನ್ನು (ಸಿಎಂಪಿಒs) ನೇಮಿಸುವುದನ್ನು ಒತ್ತು ನೀಡಿದೆ. ಸಮನ್ವಯ, ಮೇಲ್ವಿಚಾರಣೆ ಮತ್ತು ಕುಂದುಕೊರತೆ ನಿವಾರಣೆಗಾಗಿ ವಿಶೇಷ ಘಟಕಗಳನ್ನು ರಚಿಸುವುದು, ಬಹು-ವಲಯ ಜಾಗೃತಿ ಅಭಿಯಾನಗಳನ್ನು ನಡೆಸುವುದು ಮತ್ತು ಪ್ರಮುಖ ಅಧಿಕಾರಿಗಳಿಗೆ ತರಬೇತಿ ನೀಡುವುದನ್ನೂ ಇದು ಪ್ರತಿಪಾದಿಸಿದೆ. ಇದರೊಂದಿಗೆ, ತಂತ್ರಜ್ಞಾನ ಆಧಾರಿತ ವರದಿ ಸಲ್ಲಿಕೆ ವ್ಯವಸ್ಥೆ ಮತ್ತು ಅಪಾಯದಲ್ಲಿರುವ (ಬಾಲ್ಯವಿವಾಹ ಹೆಚ್ಚಿರುವ) ಪ್ರದೇಶಗಳ ದತ್ತಾಂಶಸಂಚಯಗಳನ್ನು ಸಿದ್ಧಪಡಿಸುವುದಕ್ಕೂ ಒತ್ತು ನೀಡಲಾಗಿದೆ.
ಈ ತೀರ್ಪು ಶಿಕ್ಷೆ ವಿಧಿಸುವುದಕ್ಕಿಂತ ಹೆಚ್ಚಾಗಿ ತಡೆಗಟ್ಟುವಿಕೆ, ರಕ್ಷಣೆ ಮತ್ತು ಸಬಲೀಕರಣದತ್ತ ತನ್ನ ಗಮನವನ್ನು ನಿರ್ಣಾಯಕವಾಗಿ ಬದಲಾಯಿಸುತ್ತದೆ. ಆದಾಗ್ಯೂ, ಬಾಲ್ಯವಿವಾಹದ ಆಚರಣೆಯನ್ನು ಪೋಷಿಸುವ ಸಾಮಾಜಿಕ ನಿಯಮಗಳನ್ನು ಕೇವಲ ಕಾನೂನಿನಿಂದ ಮಾತ್ರ ಬದಲಾಯಿಸಲು ಸಾಧ್ಯವಿಲ್ಲ; ಆದ್ದರಿಂದಲೇ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣ ಅತ್ಯಂತ ಅಗತ್ಯವಾಗಿದೆ.
|
ಬೇಟಿ ಬಚಾವೋ ಬೇಟಿ ಪಢಾವೋ (ಬಿಬಿಬಿಪಿ)
ಕಾನೂನು ಬಾಲ್ಯವಿವಾಹವನ್ನು ನಿಷೇಧಿಸಿದರೆ, ಬೇಟಿ ಬಚಾವೋ ಬೇಟಿ ಪಢಾವೋ (ಬಿಬಿಬಿಪಿ) ಅದನ್ನು ಪೋಷಿಸುವ ಸಾಮಾಜಿಕ ಮನೋಭಾವವನ್ನು ಬದಲಾಯಿಸಲು ಕೆಲಸ ಮಾಡುತ್ತದೆ. ಬಾಲಕರ ಮತ್ತು ಬಾಲಕಿಯರ ಅನುಪಾತ ಮತ್ತು ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಒಟ್ಟಾರೆ ಸಬಲೀಕರಣವನ್ನು ಉತ್ತೇಜಿಸಲು 2015 ರ ಜನವರಿ 22 ರಂದು ಬಿಬಿಬಿಪಿ ಯನ್ನು ಪ್ರಾರಂಭಿಸಲಾಯಿತು.
ಬಿಬಿಬಿಪಿ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನೇತೃತ್ವದ ಬಹು-ವಲಯದ ಯೋಜನೆಯಾಗಿದೆ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಶಿಕ್ಷಣ ಸಚಿವಾಲಯ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯನ್ನು 'ಮಿಷನ್ ಶಕ್ತಿ'ಯ ಒಂದು ಭಾಗವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ಜಾಗೃತಿ ಮೂಡಿಸುವಿಕೆ, ಪ್ರಚಾರ, ಸಮುದಾಯ ಸಂಘಟನೆ ಮತ್ತು ನಡವಳಿಕೆಯ ಬದಲಾವಣೆಯತ್ತ ಗಮನ ಹರಿಸುತ್ತದೆ. ಅಲ್ಲದೆ, ಇದು ಹೆಣ್ಣು ಮಗುವಿನ ಉಳಿವು, ರಕ್ಷಣೆ ಮತ್ತು ಶಿಕ್ಷಣವನ್ನು ಉತ್ತೇಜಿಸುತ್ತದೆ.
ಬಾಲ್ಯವಿವಾಹ ತಡೆಗಟ್ಟುವಿಕೆಯು ಈ ಉದ್ದೇಶಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು, ಶಾಲೆ ಬಿಡುವಿಕೆಯನ್ನು ತಡೆಯುವುದು, ತಾರತಮ್ಯದ ಸಾಮಾಜಿಕ ನಿಯಮಗಳನ್ನು ಸವಾಲು ಮಾಡುವುದು ಮತ್ತು ಕುಟುಂಬಗಳು ಹೆಣ್ಣು ಮಗುವಿಗೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸುವುದು ಮದುವೆಯನ್ನು ವಿಳಂಬಗೊಳಿಸಲು ಮತ್ತು ಹದಿಹರೆಯದ ಹೆಣ್ಣುಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ವಿಸ್ತರಿಸಲು ನೆರವಾಗುತ್ತವೆ.
ಬಾಲ್ಯ ವಿವಾಹ ಮುಕ್ತ ಭಾರತ (ಬಿವಿಎಂಬಿ) ಅಭಿಯಾನವು ಈ ಅಡಿಪಾಯದ ಮೇಲೆ ರೂಪುಗೊಂಡಿದ್ದು, ಬಾಲ್ಯವಿವಾಹದ ಮೇಲೆ ತೀವ್ರ ಕಾರ್ಯಾಚರಣೆಯ ಗಮನವನ್ನು ಹರಿಸುತ್ತದೆ ಹಾಗೂ ಶಾಸನಬದ್ಧ ಮತ್ತು ಸಮುದಾಯ ಮಟ್ಟದ ಸಂಘಟಿತ ಪ್ರತಿಕ್ರಿಯೆಯನ್ನು ನೀಡುತ್ತದೆ. ಕಾನೂನು, ಯೋಜನೆ ಮತ್ತು ಸಮುದಾಯದ ಕ್ರಿಯೆಗಳು ಒಂದಾಗಿ ಸೇರಿ ಈ ರಾಷ್ಟ್ರೀಯ ಅಭಿಯಾನದ ಹುಟ್ಟಿಗೆ ಕಾರಣವಾದವು.
ಬಾಲ್ಯವಿವಾಹ ಕೊನೆಗೊಳಿಸಲು ಸಾಪೇಕ್ಷ ಬದ್ಧತೆ
ಕಾನೂನಾತ್ಮಕ ಚೌಕಟ್ಟು ಮತ್ತು ಬಿಬಿಬಿಪಿ ಯ ಸಮುದಾಯ ಕೇಂದ್ರೀಕೃತ ಗಮನವನ್ನು ಆಧರಿಸಿ, ಭಾರತವನ್ನು ಬಾಲ್ಯವಿವಾಹ ಮುಕ್ತಗೊಳಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (ಎಂಡಬ್ಲುಸಿಡಿ) 2024 ರ ನವೆಂಬರ್ 27 ರಂದು ರಾಷ್ಟ್ರೀಯ ಬಿವಿಎಂಬಿ ಅಭಿಯಾನವನ್ನು ಪ್ರಾರಂಭಿಸಿತು.
ಇದು ಸರ್ಕಾರಿ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಮುಂಚೂಣಿ ಸಿಬ್ಬಂದಿ, ನಾಗರಿಕ ಸಮಾಜ ಸಂಸ್ಥೆಗಳು, ಧಾರ್ಮಿಕ ಮುಖಂಡರು, ಯುವಕರು ಮತ್ತು ನಾಗರಿಕರನ್ನು ಒಂದೇ ರಾಷ್ಟ್ರೀಯ ಬದ್ಧತೆಯಡಿ ಒಟ್ಟುಗೂಡಿಸಿತು. ಈ ಅಭಿಯಾನವು ಸಮುದಾಯ ಮಟ್ಟದ ತಡೆಗಟ್ಟುವಿಕೆಯನ್ನು ಬಲಪಡಿಸಲು, ಸಿಎಂಪಿಒ ಗಳ ಸಾರ್ವಜನಿಕ ಲಭ್ಯತೆಯನ್ನು ಸುಧಾರಿಸಲು, ಬಾಲ್ಯವಿವಾಹದ ವರದಿ ಮಾಡುವಿಕೆಯನ್ನು ಹೆಚ್ಚಿಸಲು ಮತ್ತು ಅಪಾಯದಲ್ಲಿರುವ ಹೆಣ್ಣುಮಕ್ಕಳಿಗೆ ಬೆಂಬಲ ನೀಡಲು ಶ್ರಮಿಸುತ್ತದೆ.
ಸುಸ್ಥಿರ ಅಭಿವೃದ್ಧಿ ಗುರಿ 5.3 ಕ್ಕೆ ಅನುಗುಣವಾಗಿ, ಬಾಲ್ಯವಿವಾಹದ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು 2030 ರ ವೇಳೆಗೆ ಭಾರತವನ್ನು ಬಾಲ್ಯವಿವಾಹ ಮುಕ್ತಗೊಳಿಸಲು ಈ ಅಭಿಯಾನವು ಗುರಿ ಹೊಂದಿದೆ. ಎನ್ಎಫ್ಎಚ್ಎಸ್-5 ದತ್ತಾಂಶದ ಮೂಲಕ ಗುರುತಿಸಲಾದ 257 ಹೆಚ್ಚಿನ ಬಾಲ್ಯವಿವಾಹದ ಹೊರೆಯಿರುವ (ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಪ್ರಮಾಣವಿರುವ) ಜಿಲ್ಲೆಗಳಿಗೆ ಆದ್ಯತೆ ನೀಡಿ, ಅಭಿಯಾನಕ್ಕೆ ಸಂಪೂರ್ಣ ಧನಸಹಾಯ ನೀಡಲು ಎಂಡಬ್ಲುಸಿಡಿ ಬದ್ಧವಾಗಿದೆ.
ಬಿವಿಎಂಬಿ ಪೋರ್ಟಲ್: ನಾಗರಿಕರನ್ನು ಕಾರ್ಯಾಚರಣೆಯೊಂದಿಗೆ ಜೋಡಿಸುವುದು
ಬಿವಿಎಂಬಿ ಪೋರ್ಟಲ್ (stopchildmarriage.wcd.gov.in) ಅನ್ನು ಅಭಿಯಾನದ ಡಿಜಿಟಲ್ ಬೆನ್ನೆಲುಬಾಗಿ ಅಭಿವೃದ್ಧಿಪಡಿಸಲಾಗಿದ್ದು, ಬಿವಿಎಂಬಿ ಯ ಪರಿಣಾಮಕಾರಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಜಾಗೃತಿಗಾಗಿ ಕೇಂದ್ರೀಕೃತ ವೇದಿಕೆಯನ್ನು ಒದಗಿಸುತ್ತದೆ.
ಈ ಪೋರ್ಟಲ್ ಬಾಲ್ಯವಿವಾಹ ನಿಷೇಧ ಅಧಿಕಾರಿಗಳ (ಸಿಎಂಪಿಒಗಳು) ವಿವರಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಇದು ಬಾಲ್ಯವಿವಾಹ ಘಟನೆಗಳನ್ನು ವರದಿ ಮಾಡಲು ಅನುಕೂಲ ಮಾಡಿಕೊಡುತ್ತದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕ್ಷೇತ್ರ ಮಟ್ಟದ ಸಿಬ್ಬಂದಿ ಜಾಗೃತಿ ಚಟುವಟಿಕೆಗಳು ಮತ್ತು ಸಮುದಾಯ ಸಂಘಟನೆಯ ಪ್ರಯತ್ನಗಳನ್ನು ದಾಖಲಿಸಬಹುದು.
ನಾಗರಿಕರು, ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಬಿವಿಎಂಬಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಪೋರ್ಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಪ್ರತಿಜ್ಞೆ ಕಾರ್ಯಕ್ರಮವನ್ನು ಮೈ ಗೌ ಮೂಲಕವೂ ಸುಗಮಗೊಳಿಸಲಾಗಿದೆ. ಹೀಗಾಗಿ, ಈ ಪೋರ್ಟಲ್ ಮಾಹಿತಿ ಮತ್ತು ವರದಿ ಮಾಡುವಿಕೆಗಾಗಿ ನಾಗರಿಕ ಸ್ನೇಹಿ ವೇದಿಕೆಯಾಗಿ ಹಾಗೂ ದೇಶದಾದ್ಯಂತ ಅಭಿಯಾನದ ಪ್ರಗತಿ ಮತ್ತು ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
100-ದಿನಗಳ ವಿಶೇಷ ಜಾಗೃತಿ ಅಭಿಯಾನ
ಅಭಿಯಾನದ ಮೊದಲ ವರ್ಷದ ಕೊನೆಯಲ್ಲಿ ರಾಷ್ಟ್ರೀಯ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸಲು, ಎಂಡಬ್ಲುಸಿಡಿ ಯು 2025 ರ ಡಿಸೆಂಬರ್ 4 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಸಮಕಾಲಿಕ ರಾಷ್ಟ್ರೀಯ ಪ್ರತಿಜ್ಞೆ ಸ್ವೀಕಾರ ಸಮಾರಂಭದೊಂದಿಗೆ 100-ದಿನಗಳ ತೀವ್ರ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿತು.
2025 ರ ನವೆಂಬರ್ 27 ರಿಂದ 2026 ರ ಮಾರ್ಚ್ 8 ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಂಡ ಈ ಅಭಿಯಾನವು ಮೂರು ಹಂತಗಳಲ್ಲಿ ಸಾಗಿತು: ಸಾಮಾನ್ಯ ಜಾಗೃತಿಯಿಂದ ಆರಂಭವಾಗಿ, ಗುರಿ ಆಧಾರಿತ ಸಾಂಸ್ಥಿಕ ತೊಡಗಿಸಿಕೊಳ್ಳುವಿಕೆ ಮತ್ತು ಅಂತಿಮವಾಗಿ ಸಮುದಾಯ ಮಟ್ಟದ ಬದ್ಧತೆಯವರೆಗೆ ವಿಸ್ತರಿಸಿತು.
|
ಅವಧಿ ಮತ್ತು ಸಾಲು
|
ಗಮನಾರ್ಹ ಗುಂಪು
|
ಪ್ರಮುಖ ಚಟುವಟಿಕೆಗಳು
|
|
ಮೊದಲ ಅವಧಿ: 27 ನವೆಂಬರ್ ನಿಂದ 31 ಡಿಸೆಂಬರ್ 2025
|
ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು
|
ಜಾಗೃತಿ ಮತ್ತು ಸಂವೇದನಾಶೀಲತಾ ಗೋಷ್ಠಿಗಳು, ಚರ್ಚಾಕೂಟಗಳು, ಪ್ರಬಂಧ ಸ್ಪರ್ಧೆಗಳು, ಸಂವಾದಾತ್ಮಕ ಚಟುವಟಿಕೆಗಳು ಮತ್ತು ಪ್ರತಿಜ್ಞಾ ಸಮಾರಂಭಗಳು
|
|
ಎರಡನೇ ಅವಧಿ: 1 ರಿಂದ 31 ಜನವರಿ 2026 (Spell II 1 to 31 January 2026)
|
ಧಾರ್ಮಿಕ ಸಂಸ್ಥೆಗಳು, ಧರ್ಮಗುರುಗಳು, ಸಮುದಾಯದ ಪ್ರಭಾವಿ ವ್ಯಕ್ತಿಗಳು ಮತ್ತು ಮದುವೆ ಸಂಬಂಧಿತ ಸೇವಾದಾರರು
|
ದೇವಾಲಯಗಳು, ಮಸೀದಿಗಳು ಮತ್ತು ಇತರ ಪ್ರಾರ್ಥನಾ ಮಂದಿರಗಳೊಂದಿಗೆ ತೊಡಗಿಸಿಕೊಳ್ಳುವಿಕೆ; ಅಡುಗೆಯವರು, ಟೆಂಟ್ ಹೌಸ್ಗಳು, ಡಿಜೆಗಳು ಮತ್ತು ಇತರ ಸೇವಾದಾರರ ಬಳಿ ತಲುಪುವಿಕೆ; ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ಪ್ರದರ್ಶನ
|
|
ಮೂರನೇ ಅವಧಿ: 1 ಫೆಬ್ರವರಿ ರಿಂದ 8 ಮಾರ್ಚ್ 2026
|
ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆ / ನಗರಸಭೆ ವಾರ್ಡ್ಗಳು
|
ಸಮುದಾಯ ಸಂಘಟನೆ ಮತ್ತು ಪಂಚಾಯತ್/ವಾರ್ಡ್ ವ್ಯಾಪ್ತಿಯನ್ನು ಬಾಲ್ಯವಿವಾಹ ಮುಕ್ತ ಎಂದು ಘೋಷಿಸುವ ನಿರ್ಣಯಗಳಿಗೆ ಚಾಲನೆ ನೀಡುವುದು.
|
ಅಭಿಯಾನದ ಅನುಷ್ಠಾನ ಮತ್ತು ಪ್ರಮುಖ ಸಾಧನೆಗಳು
ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಜಿಲ್ಲಾಡಳಿತಗಳು ಹಾಗೂ ವಿವಿಧ ಸಾಂಸ್ಥಿಕ ಮತ್ತು ಸಮುದಾಯ ಮಟ್ಟದ ಪಾಲುದಾರರ ಸಂಘಟಿತ ಪ್ರಯತ್ನಗಳ ಮೂಲಕ ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಯಿತು. ಬಾಲ್ಯವಿವಾಹ ತಡೆಯುವಲ್ಲಿ ಸಿಎಂಪಿಒ ಗಳ ಪಾತ್ರವನ್ನು ಬಲಪಡಿಸುವುದು, ಸ್ಥಳೀಯ ಸಂಸ್ಥೆಗಳನ್ನು ಸಂಘಟಿಸುವುದು ಮತ್ತು ಸಕ್ರಿಯ ಸಮುದಾಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಲಾಯಿತು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಾಗೃತಿ ಮತ್ತು ಪ್ರಸಾರ ಚಟುವಟಿಕೆಗಳನ್ನು ಕೈಗೊಳ್ಳಲು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಹಾಗೂ ಜಿಲ್ಲಾ ಮತ್ತು ತಳಮಟ್ಟದಲ್ಲಿ ಮೇಲ್ವಿಚಾರಣೆಯನ್ನು ಬಲಪಡಿಸಲು ಪ್ರೋತ್ಸಾಹಿಸಲಾಯಿತು.
ಬಾಲ್ಯ ವಿವಾಹ ಮುಕ್ತ ಭಾರತ: ಪ್ರಮುಖ ಸಾಧನೆಗಳು
ಬಿವಿಎಂಬಿ ಅಭಿಯಾನವು ನಿರಂತರ ಜಾಗೃತಿ ಮೂಡಿಸುವಿಕೆ, ಸಾಂಸ್ಥಿಕ ಸಂಘಟನೆ, ಸಮುದಾಯದ ಭಾಗವಹಿಸುವಿಕೆ ಮತ್ತು ತಡೆಗಟ್ಟುವ ಕ್ರಮಗಳ ಮೂಲಕ ಬಾಲ್ಯವಿವಾಹವನ್ನು ನಿರ್ಮೂಲನೆ ಮಾಡುವ ರಾಷ್ಟ್ರೀಯ ಪ್ರಯತ್ನವನ್ನು ಬಲಪಡಿಸಲು ಕೊಡುಗೆ ನೀಡಿದೆ. ಅಭಿಯಾನದ ಪ್ರಮುಖ ಸಾಧನೆಗಳು ಕೆಳಗಿನಂತಿವೆ:
1. ವ್ಯಾಪಕ ಜಾಗೃತಿ ಮತ್ತು ಸಮುದಾಯ ಸಂಪರ್ಕ
- ದೇಶಾದ್ಯಂತ 6.85 ಲಕ್ಷ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
- ಜಾಗೃತಿ ಮತ್ತು ಸಮುದಾಯ ಸಂಘಟನಾ ಚಟುವಟಿಕೆಗಳ ಮೂಲಕ 12.47 ಕೋಟಿ ಜನರನ್ನು ತಲುಪಲಾಗಿದೆ.
- ಈ 100-ದಿನಗಳ ಜಾಗೃತಿ ಅಭಿಯಾನವು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಧರ್ಮಗುರುಗಳು, ಮದುವೆ ಸಂಬಂಧಿತ ಸೇವಾದಾರರು, ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಸೂಕ್ತವಾದ ಶಾಸನಬದ್ಧ ಚೌಕಟ್ಟನ್ನು ಒದಗಿಸಿದೆ.
2. ಸಾಂಸ್ಥಿಕ ಚೌಕಟ್ಟಿನ ಬಲವರ್ಧನೆ
- 71,882 ಬಾಲ್ಯವಿವಾಹ ನಿಷೇಧ ಅಧಿಕಾರಿಗಳ (ಸಿಎಂಪಿಒಗಳು) ವಿವರಗಳನ್ನು ಬಿವಿಎಂಬಿ ಪೋರ್ಟಲ್ನಲ್ಲಿ ಸೇರಿಸಲಾಗಿದೆ.
- ಗ್ರಾಮ ಪಂಚಾಯತಿ ಮಟ್ಟದಲ್ಲೇ 59,686 ಸಿಎಂಪಿಒ ಗಳನ್ನು ನೇಮಿಸಲಾಗಿದ್ದು, ಇದು ತಳಮಟ್ಟದಲ್ಲಿ ಬಾಲ್ಯವಿವಾಹ ತಡೆಯುವ ವ್ಯವಸ್ಥೆಯ ತಲುಪುವಿಕೆಯನ್ನು ಇನ್ನಷ್ಟು ಬಲಪಡಿಸಿದೆ.
- ಈ ಪೋರ್ಟಲ್ ಸಿಎಂಪಿಒ ಗಳ ವಿವರಗಳನ್ನು ಪಡೆಯಲು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನಡೆಯುವ ಜಾಗೃತಿ ಮತ್ತು ತಡೆಗಟ್ಟುವ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ವೇದಿಕೆಯನ್ನು ಒದಗಿಸುತ್ತದೆ.
3. ಹೆಚ್ಚಿದ ನಾಗರಿಕ ಭಾಗವಹಿಸುವಿಕೆ
- ಬಿವಿಎಂಬಿ ಪೋರ್ಟಲ್ ಮತ್ತು ಮೈ ಗೌಮೂಲಕ ಒಟ್ಟು 42.01 ಲಕ್ಷ ಪ್ರತಿಜ್ಞೆಗಳು ದಾಖಲಾಗಿವೆ (ಇದರಲ್ಲಿ ಬಿವಿಎಂಬಿ ಪೋರ್ಟಲ್ ಮೂಲಕ 40.96 ಲಕ್ಷ ಪ್ರತಿಜ್ಞೆಗಳು ಮತ್ತು MyGov ಮೂಲಕ 1.05 ಲಕ್ಷ ಪ್ರತಿಜ್ಞೆಗಳು ಸೇರಿವೆ).
- ಈ ಪ್ರತಿಜ್ಞಾ ಕಾರ್ಯಕ್ರಮವು ನಾಗರಿಕರು, ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೆ ಬಾಲ್ಯವಿವಾಹ ಮುಕ್ತ ಭಾರತಕ್ಕಾಗಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಲು ಉತ್ತಮ ಅವಕಾಶವನ್ನು ಒದಗಿಸಿದೆ.

4. ವರದಿ ಮಾಡುವಿಕೆ ಮತ್ತು ತಡೆಗಟ್ಟುವ ಕ್ರಮಗಳು
- ಬಿವಿಎಂಬಿ ಪೋರ್ಟಲ್ನಲ್ಲಿ 4,536 ಬಾಲ್ಯವಿವಾಹ ಘಟನೆಗಳನ್ನು ದಾಖಲಿಸಲಾಗಿದೆ.
- ಅಕ್ಷಯ ತೃತೀಯ ಸೇರಿದಂತೆ ಹೆಚ್ಚಿನ ಅಪಾಯವಿರುವ ಸಮಯಗಳಲ್ಲಿ ತೀವ್ರ ಗಮನ ಹರಿಸಿ, ಜಿಲ್ಲಾಡಳಿತಗಳು, ಸಿಎಂಪಿಒ ಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ಸಮುದಾಯದ ಪಾಲುದಾರರನ್ನು ಒಳಗೊಂಡು ಸಮಯೋಚಿತ ಮಧ್ಯಸ್ಥಿಕೆ ಹಾಗೂ ಸಂಘಟಿತ ಕ್ರಮಗಳ ಮೂಲಕ ಬಾಲ್ಯವಿವಾಹಗಳನ್ನು ತಡೆಯುವ ಪ್ರಯತ್ನಗಳನ್ನು ಮಾಡಲಾಗಿದೆ.
ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಜಿಲ್ಲಾಡಳಿತಗಳು ಹಾಗೂ ತಳಮಟ್ಟದ ಸಂಸ್ಥೆಗಳೊಂದಿಗಿನ ಈ ಒಗ್ಗೂಡುವಿಕೆಯು ಬಾಲ್ಯವಿವಾಹವನ್ನು ನಿರ್ಮೂಲನೆ ಮಾಡುವಲ್ಲಿ "ಸಮಗ್ರ ಸರ್ಕಾರ ಮತ್ತು ಸಮಗ್ರ ಸಮಾಜ" ವಿಧಾನವನ್ನು ಬಲಪಡಿಸಿದೆ.
ಈ ಪೋರ್ಟಲ್ ಸಿಎಂಪಿಒ ವಿವರಗಳ ನಕ್ಷೆ ಮತ್ತು ಸಾರ್ವಜನಿಕ ಲಭ್ಯತೆ, ಘಟನೆಗಳ ವರದಿ ಮಾಡುವಿಕೆ, ಜಾಗೃತಿ ಚಟುವಟಿಕೆಗಳ ದಾಖಲೀಕರಣ, ಸ್ಥಳೀಯ ಸಂಘಟನೆಯ ಮೇಲ್ವಿಚಾರಣೆ ಮತ್ತು ಆನ್ಲೈನ್ ಪ್ರತಿಜ್ಞೆ ಸ್ವೀಕಾರವನ್ನು ಬೆಂಬಲಿಸುತ್ತದೆ. ಒಟ್ಟಾರೆಯಾಗಿ, ಈ ಕಾರ್ಯಗಳು ಪಾರದರ್ಶಕತೆ, ಸಮಯೋಚಿತ ವರದಿ ಸಲ್ಲಿಕೆ, ಆಧಾರಸಹಿತ ಮೇಲ್ವಿಚಾರಣೆ ಮತ್ತು ಹಿಂಬಾಲಿಕೆಯನ್ನು ಉತ್ತೇಜಿಸುತ್ತವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಗತಿ
ರಾಷ್ಟ್ರೀಯ ಮಟ್ಟದ ಬಾಲ್ಯವಿವಾಹದ ಪ್ರಮಾಣವು ಎನ್ಎಫ್ಎಚ್ಎಸ್-5 (2019-21) ರಲ್ಲಿ ಶೇಕಡಾ 23.3 ರಿಂದ ಎನ್ಎಫ್ಎಚ್ಎಸ್-6 (2023-24) ರಲ್ಲಿ ಶೇಕಡಾ 20.1 ಕ್ಕೆ ಕುಸಿದಿದೆ. ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎನ್ಎಫ್ಎಚ್ಎಸ್-5 ಗಿಂತ ಇಳಿಕೆಯನ್ನು ತೋರಿಸಿವೆ. ದಾದ್ರಾ ಮತ್ತು ನಾಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಗರಿಷ್ಠ 10.1 ಶೇಕಡಾವಾರು ಅಂಕಗಳ ಕಡಿತವನ್ನು ದಾಖಲಿಸಿದ್ದು, ನಂತರದ ಸ್ಥಾನಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (7.4 ಶೇಕಡಾವಾರು ಅಂಕಗಳು), ಅಸ್ಸಾಂ (6.5 ಶೇಕಡಾವಾರು ಅಂಕಗಳು), ಬಿಹಾರ (6.2 ಶೇಕಡಾವಾರು ಅಂಕಗಳು) ಮತ್ತು ತ್ರಿಪುರಾ (6.1 ಶೇಕಡಾವಾರು ಅಂಕಗಳು) ಇವೆ. ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಮಿಜೋರಾಂ ಮತ್ತು ಕೇರಳ ಸೇರಿದಂತೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಉತ್ತಮ ಸಾಧನೆ ಮಾಡುತ್ತಿವೆ.
ಬಾಲ್ಯ ವಿವಾಹ ಮುಕ್ತ ಭಾರತದ ಎರಡು ವರ್ಷಗಳು

27 ನವೆಂಬರ್ 2026 ರಂದು ನಡೆಯುವ ರಾಷ್ಟ್ರೀಯ ಆಚರಣೆಯು ಬಿವಿಎಂಬಿ ಅಭಿಯಾನದ ಎರಡು ವರ್ಷಗಳನ್ನು ಪೂರೈಸುತ್ತದೆ. ಬಲವಾದ ಕಾನೂನು ವ್ಯವಸ್ಥೆ, ವ್ಯಾಪಕ ಸಮುದಾಯ ಭಾಗಿತ್ವ ಮತ್ತು ಬೆಳೆಯುತ್ತಿರುವ ದತ್ತಾಂಶದ ಈ ಹಿನ್ನೆಲೆಯಲ್ಲಿ, ಪ್ರಗತಿಯನ್ನು ಪರಿಶೀಲಿಸಲು, ಸಿಎಂಪಿಒ ಗಳು ಮತ್ತು ತಳಮಟ್ಟದ ಪಾಲುದಾರರ ಕೊಡುಗೆಯನ್ನು ಗುರುತಿಸಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅನುಕರಿಸಬಹುದಾದ ಉತ್ತಮ ಆಚರಣೆಗಳನ್ನು ಹಂಚಿಕೊಳ್ಳಲು ಹಾಗೂ ತಡೆಗಟ್ಟುವಿಕೆಗೆ ರಾಷ್ಟ್ರೀಯ ಬದ್ಧತೆಯನ್ನು ನವೀಕರಿಸಲು ಇದು ಸೂಕ್ತ ಅವಕಾಶವನ್ನು ಒದಗಿಸುತ್ತದೆ.
ಮೀಸಲಾದ ಸಿಎಂಪಿಒ ವ್ಯವಸ್ಥೆಯನ್ನು ಬಲಪಡಿಸುವುದು, ಪೋರ್ಟಲ್ ದತ್ತಾಂಶದ ಗುಣಮಟ್ಟ ಮತ್ತು ಪೂರ್ಣತೆಯನ್ನು ಸುಧಾರಿಸುವುದು, ಜಾಗೃತಿ ಮತ್ತು ಪ್ರತಿಜ್ಞೆ ಸಂಘಟನೆಯನ್ನು ವಿಸ್ತರಿಸುವುದು ಹಾಗೂ ಸಮಯೋಚಿತ ವರದಿ ಮಾಡುವಿಕೆ ಮತ್ತು ತಡೆಗಟ್ಟುವ ಮಧ್ಯಸ್ಥಿಕೆಯನ್ನು ಖಚಿತಪಡಿಸುವುದರ ಮೇಲೆ ನಿರಂತರ ಗಮನ ಹರಿಸಲಾಗುತ್ತಿದೆ. ಇದು ಪಂಚಾಯತ್ಗಳು, ನಗರ ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಧರ್ಮಗುರುಗಳು, ಯುವಕರು ಮತ್ತು ನಾಗರಿಕ ಸಮಾಜದ ಭಾಗವಹಿಸುವಿಕೆಯನ್ನು ಇನ್ನಷ್ಟು ಆಳವಾಗಿಸುವುದನ್ನೂ ಒಳಗೊಂಡಿದೆ.
ಎನ್ಎಫ್ಎಚ್ಎಸ್ ಅಂಕಿಅಂಶಗಳು ಬಾಲ್ಯವಿವಾಹದ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ತೋರಿಸುತ್ತವೆ, ಆದರೆ ಇದು ಎಲ್ಲಾ ರಾಜ್ಯಗಳಲ್ಲಿ ಅಸಮಾನವಾಗಿದೆ; ಆದ್ದರಿಂದಲೇ ಈ ಪ್ರಯತ್ನವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕಾಗಿದೆ. ಇದು 2030ರ ವೇಳೆಗೆ ಬಾಲ್ಯವಿವಾಹ ಮುಕ್ತ ಭಾರತದ ರಾಷ್ಟ್ರೀಯ ಉದ್ದೇಶ ಮತ್ತು ಎಸ್ಡಿಜಿ ಗುರಿ 5.3 ರೊಂದಿಗೆ ಹೊಂದಿಕೊಂಡಿದೆ.
References
Ministry of Women and Child Development
Click here for pdf file.
*****
(Explainer ID: 160742)
आगंतुक पटल : 18
Provide suggestions / comments