Technology
ಪಂಪ್ಡ್ ಸ್ಟೋರೇಜ್ ಜಲವಿದ್ಯುತ್
ಭಾರತದ ಶುದ್ಧ ಇಂಧನ ಪರಿವರ್ತನೆಗೆ ಶಕ್ತಿ ತುಂಬುವುದು
Posted On:
02 NOV 2026 4:31PM
|
ಸ್ವಚ್ಛ ಇಂಧನವು ಭಾರತದ ವಿದ್ಯುತ್ ರಂಗವನ್ನು ಬದಲಾಯಿಸುತ್ತಿರುವಂತೆ, ಒಂದು ಕಾಲಾತೀತ ತಂತ್ರಜ್ಞಾನವು ಪ್ರಬಲವಾದ ಹೊಸ ಇಂಧನ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿದೆ. "ನೀರಿನ ಬ್ಯಾಟರಿ" ಎಂದೇ ಹೆಚ್ಚಾಗಿ ವರ್ಣಿಸಲ್ಪಡುವ ಪಂಪ್ಡ್ ಸ್ಟೋರೇಜ್, ವಿದ್ಯುತ್ ಉತ್ಪಾದನೆಯಾಗುವ ಸಮಯ ಮತ್ತು ಅದು ಬಳಕೆಯಾಗುವ ಸಮಯದ ನಡುವಿನ ಅಂತರವನ್ನು ಕಡಿಮೆ ಮಾಡಲು ನೀರು ಮತ್ತು ಗುರುತ್ವಾಕರ್ಷಣೆಯನ್ನು ಬಳಸಿ ವಿದ್ಯುತ್ ಅನ್ನು ಸಂಗ್ರಹಿಸುತ್ತದೆ. ಜಲಾಶಯಗಳಿಂದ ಹಿಡಿದು ಆಧುನಿಕ ಗ್ರಿಡ್ಗಳವರೆಗೆ, ಇದು ಸ್ವಚ್ಛವಾದ, ಹೆಚ್ಚು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಇಂಧನ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತಿದೆ.
|
ಶೇಖರಣೆಯೊಂದಿಗೆ ಭಾರತದ ಇಂಧನ ಭವಿಷ್ಯವನ್ನು ನಿರ್ಮಿಸುವುದು
ಇಂಧನ ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸಲು ಭಾರತದ ಇಂಧನ ಪರಿವರ್ತನೆಯು ಹೆಚ್ಚಾಗಿ ನವೀಕರಿಸಬಹುದಾದ ಇಂಧನವನ್ನು ನೆಚ್ಚಿಕೊಂಡಿದೆ. ಸ್ವಚ್ಛ ಮೂಲಗಳೊಂದಿಗೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ದೇಶವು ಸೌರ ಮತ್ತು ಪವನ ಸಾಮರ್ಥ್ಯವನ್ನು ವೇಗವಾಗಿ ವಿಸ್ತರಿಸುತ್ತಿದೆ. ಸೆಪ್ಟೆಂಬರ್ 2026 ರ ವೇಳೆಗೆ, ಭಾರತವು 308.027 ಜಿಡಬ್ಲು ನವೀಕರಿಸಬಹುದಾದ (ಅಂದರೆ ಪಳೆಯುಳಿಕೆ ಇಂಧನ ರಹಿತ) ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. 2025-26 ನೇ ಹಣಕಾಸು ವರ್ಷದಲ್ಲಿ, ಭಾರತವು ಸುಮಾರು 55.29 ಜಿಡಬ್ಲು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸಿದೆ. ಅಲ್ಲದೆ, 2030 ರ ವೇಳೆಗೆ 500 ಜಿಡಬ್ಲು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಭಾರತ ಹೊಂದಿದೆ. ಈ ಗುರಿಯನ್ನು ಸಾಧಿಸುವಲ್ಲಿ ಸೌರ ಮತ್ತು ಪವನ ಶಕ್ತಿಯು ಪ್ರಮುಖ ಕೊಡುಗೆಯನ್ನು ನೀಡಲಿವೆ.
ಆದಾಗ್ಯೂ, ನವೀಕರಿಸಬಹುದಾದ ಇಂಧನ ಉತ್ಪಾದನೆಯು ಸೂರ್ಯನ ಬೆಳಕು, ಹವಾಮಾನ ಮತ್ತು ದೈನಂದಿನ ಬೇಡಿಕೆಯ ಮಾದರಿಗಳಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಈ ಅಸ್ಥಿರತೆಯು ನವೀಕರಿಸಬಹುದಾದ ಉತ್ಪಾದನೆಯು ಬೇಡಿಕೆಯನ್ನು ಮೀರಿದಾಗ ವಿದ್ಯುತ್ ಅನ್ನು ಸಂಗ್ರಹಿಸುವ ಅಗತ್ಯವನ್ನು ಹೆಚ್ಚಿಸುತ್ತದೆ. ನವೀಕರಿಸಬಹುದಾದ ಉತ್ಪಾದನೆ ಕಡಿಮೆಯಿರುವಾಗ ಅಥವಾ ಗರಿಷ್ಠ ಬೇಡಿಕೆಯ ಸಮಯದಲ್ಲಿ ಶೇಖರಿಸಿಟ್ಟ ಇಂಧನವನ್ನು ವಿದ್ಯುತ್ ಪೂರೈಸಲು ಬಳಸಬಹುದು.
ನವೀಕರಿಸಬಹುದಾದ ಸಾಮರ್ಥ್ಯವು ವಿಸ್ತರಿಸುತ್ತಿದ್ದಂತೆ, ಶೇಖರಣೆಯ ಅವಶ್ಯಕತೆಯೂ ವೇಗವಾಗಿ ಹೆಚ್ಚಾಗುತ್ತದೆ. 2031-32 ರ ವೇಳೆಗೆ 73.93 ಜಿಡಬ್ಲು ಶೇಖರಣಾ ಸಾಮರ್ಥ್ಯವಿರುತ್ತದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಅಂದಾಜಿಸಿದೆ. ಇದರಲ್ಲಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ಗಳಿಂದ (ಪಿಎಸ್ಪಿs) 26.69 ಜಿಡಬ್ಲು ಮತ್ತು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಗಳಿಂದ 47.24 ಜಿಡಬ್ಲು ಸೇರಿದೆ.
ದೀರ್ಘಕಾಲೀನ ಶೇಖರಣಾ ಅವಶ್ಯಕತೆಗಳನ್ನು ಪೂರೈಸುವಲ್ಲಿ ಪಿಎಸ್ಎಚ್ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುವ ಅವಧಿಯಲ್ಲಿ ಮೇಲಿನ ಜಲಾಶಯಕ್ಕೆ ನೀರನ್ನು ಪಂಪ್ ಮಾಡುವ ಮೂಲಕ ಪಿಎಸ್ಪಿ ಗಳು ವಿದ್ಯುತ್ ಅನ್ನು ಸಂಗ್ರಹಿಸುತ್ತವೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಸಂಗ್ರಹಿಸಿದ ನೀರನ್ನು ಟರ್ಬೈನ್ಗಳ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಇದು ನವೀಕರಿಸಬಹುದಾದ ವಿದ್ಯುತ್ ಅನ್ನು ಕಾಲಾನಂತರದಲ್ಲಿ ವರ್ಗಾಯಿಸಲು ಮತ್ತು ಗ್ರಿಡ್ ಸ್ಥಿರತೆಯನ್ನು ಬೆಂಬಲಿಸಲು ಪಿಎಸ್ಪಿ ಗಳಿಗೆ ಅನುವು ಮಾಡಿಕೊಡುತ್ತದೆ. ಅಲ್ಲದೆ, ಅವು ದೀರ್ಘಕಾಲೀನ ಶೇಖರಣೆ ಮತ್ತು ಗರಿಷ್ಠ ಬೇಡಿಕೆಯ ಬೆಂಬಲವನ್ನು ಒದಗಿಸುತ್ತವೆ, ಇದು ದೊಡ್ಡ ಪ್ರಮಾಣದ ನವೀಕರಿಸಬಹುದಾದ ಸಾಮರ್ಥ್ಯಗಳನ್ನು ಸಂಯೋಜಿಸಲು ಅತ್ಯಂತ ಮುಖ್ಯವನ್ನಾಗಿ ಮಾಡುತ್ತದೆ.
|
ಇಂಧನ ಶೇಖರಣೆಯ ವಿಧಗಳು
ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಮತ್ತು ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ಗಳು (ಪಿಎಸ್ಪಿs) ನವೀಕರಿಸಬಹುದಾದ ಇಂಧನವನ್ನು ಗ್ರಿಡ್ಗೆ ಸಂಯೋಜಿಸಲು ಪೂರಕ ಪರಿಹಾರಗಳನ್ನು ಒದಗಿಸುತ್ತವೆ. BESS ಕಡಿಮೆ ಅವಧಿಯ ಅವಶ್ಯಕತೆಗಳಿಗೆ ವೇಗವಾಗಿ ಪ್ರತಿಕ್ರಿಯಿಸಬಹುದು, ಆವರ್ತನ ನಿಯಂತ್ರಣ, ಗರಿಷ್ಠ ನಿರ್ವಹಣೆ ಮತ್ತು ಗ್ರಿಡ್ ಸಮತೋಲನವನ್ನು ಬೆಂಬಲಿಸುತ್ತದೆ. ಪಿಎಸ್ಪಿ ಗಳು ದೀರ್ಘಕಾಲೀನ ಶೇಖರಣೆಯನ್ನು ಒದಗಿಸುತ್ತವೆ, ಇದು ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ಮಿಗುತಾಯ ಮತ್ತು ಬೇಡಿಕೆಯ ಅವಧಿಗಳ ನಡುವೆ ವರ್ಗಾಯಿಸುತ್ತದೆ. ಬಿಇಎಸ್ಎಸ್ಅನ್ನು ತುಸು ಬೇಗನೆ ಮತ್ತು ನವೀಕರಿಸಬಹುದಾದ ಉತ್ಪಾದನೆ ಅಥವಾ ಬಳಕೆಯ ಕೇಂದ್ರಗಳ ಹತ್ತಿರ ನಿಯೋಜಿಸಬಹುದು. ಪಿಎಸ್ಪಿ ಗಳಿಗೆ ಸೂಕ್ತವಾದ ಭೌಗೋಳಿಕ ಪರಿಸ್ಥಿತಿಗಳು ಬೇಕಾಗುತ್ತವೆ ಆದರೆ ಇವು ವಿಸ್ತೃತ ಅವಧಿಯಲ್ಲಿ ದೊಡ್ಡ ಪ್ರಮಾಣದ ಶೇಖರಣೆಯನ್ನು ಒದಗಿಸಬಲ್ಲವು. ಅವುಗಳ ದೀರ್ಘಾವಧಿಯ ಕಾರ್ಯಾಚರಣೆಯು ನಿರಂತರ ಗ್ರಿಡ್ ಮೂಲಸೌಕರ್ಯ ಅಗತ್ಯಗಳನ್ನು ಬೆಂಬಲಿಸುತ್ತದೆ.
|
|

ಭಾರತ್ ರಿನ್ಯೂವಬಲ್ ಎನರ್ಜಿ ಸಮಿತ್ & ಎಕ್ಸ್ಪೋ (ಭಾರತ್ ಆರ್ಇ) 2026 ಅನ್ನು ಹೂಡಿಕೆ ಮಾಡಿ. ನಾವೀನ್ಯತೆ ತನ್ನಿ. ಪ್ರೇರೇಪಿಸಿ. ಎಂಬ ಥೀಮ್ನಡಿಯಲ್ಲಿ 2026 ರ ನವೆಂಬರ್ 2 ರಿಂದ 5 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗುತ್ತಿದೆ. ಈ ನಾಲ್ಕು ದಿನಗಳ ಶೃಂಗಸಭೆಯು 40 ಕ್ಕೂ ಹೆಚ್ಚು ಸಚಿವರು, ನೀತಿ ನಿರೂಪಕರು, ಹೂಡಿಕೆದಾರರು, ಹಣಕಾಸು ಸಂಸ್ಥೆಗಳು ಮತ್ತು ಉದ್ಯಮದ ನಾಯಕರನ್ನು ಒಳಗೊಂಡಂತೆ 130 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವವರನ್ನು ಒಂದೆಡೆ ತರುತ್ತದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್ಡಮ್ ಎಂಬ ಒಂಬತ್ತು ದೇಶಗಳು ದೇಶದ ಪಾಲುದಾರರಾಗಿ ಭಾಗವಹಿಸಲಿವೆ. 13 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸುತ್ತಿದ್ದು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಹೂಡಿಕೆ ಅವಕಾಶಗಳು ಮತ್ತು ಸ್ವಚ್ಛ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿವೆ. ಸೌರ ಮತ್ತು ಪವನ ಶಕ್ತಿ, ಹಸಿರು ಹೈಡ್ರೋಜನ್, ಇಂಧನ ಶೇಖರಣೆ, ಗ್ರಿಡ್ ಏಕೀಕರಣ, ದೇಶೀಯ ಉತ್ಪಾದನೆ, ಡಿಜಿಟಲೀಕರಣ ಮತ್ತು ಇಂಧನ ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯಿಕೆಗಳು ಈ ಶೃಂಗಸಭೆಯ ಪ್ರಮುಖ ಗಮನಾರ್ಹ ಕ್ಷೇತ್ರಗಳಾಗಿವೆ. ಈ ಶೃಂಗಸಭೆಯು ಸ್ವಚ್ಛ ಇಂಧನ ಹೂಡಿಕೆ, ತಂತ್ರಜ್ಞಾನ ಸಹಭಾಗಿತ್ವ ಮತ್ತು ಉದ್ಯಮದ ಸಹಯೋಗಕ್ಕಾಗಿ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ. ಇದು ಸಚಿವರ ಮಟ್ಟದ ಚರ್ಚೆಗಳು, ಸಿಇಒ ರೌಂಡ್ಟೇಬಲ್ಗಳು, ಹೂಡಿಕೆದಾರರ ತೊಡಗಿಸಿಕೊಳ್ಳುವಿಕೆಗಳು ಮತ್ತು 400 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡ ಪ್ರದರ್ಶನವನ್ನು ಹೊಂದಿದೆ. ಸ್ವಚ್ಛ ಇಂಧನ ವಲಯದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ, ಈ ಕಾರ್ಯಕ್ರಮವನ್ನು 9 ನೇ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಸೆಂಬ್ಲಿ ಮತ್ತು ಹಸಿರು ಹೈಡ್ರೋಜನ್ ಮೇಲಿನ 4ನೇ ಅಂತರರಾಷ್ಟ್ರೀಯ ಸಮ್ಮೇಳನದೊಂದಿಗೆ ಜಂಟಿಯಾಗಿ ಆಯೋಜಿಸಲಾಗುತ್ತಿದೆ.[1] ಮತ್ತಷ್ಟು ಓದಲು ಕ್ಲಿಕ್ ಮಾಡಿ: ಭಾರತ್ ರಿನ್ಯೂವಬಲ್ ಎನರ್ಜಿ ಸಮಿತ್ & ಎಕ್ಸ್ಪೋ 2026
|
ಪಿಎಸ್ಪಿ ಗಳನ್ನು ಅರ್ಥಮಾಡಿಕೊಳ್ಳುವುದು: ಇಂಧನ ಶೇಖರಣೆ ಮತ್ತು ಪೂರೈಕೆಯ ಚಕ್ರ
ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (ಪಿಎಸ್ಪಿ) ಸಾಮಾನ್ಯವಾಗಿ ವಿಭಿನ್ನ ಎತ್ತರಗಳಲ್ಲಿ ಇರುವ ಎರಡು ಜಲಾಶಯಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿ ವಿದ್ಯುತ್ ಇರುವ ಅವಧಿಯಲ್ಲಿ, ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ, ಅಲ್ಲಿ ಶಕ್ತಿಯನ್ನು ಪ್ರಚ್ಛನ್ನ ಶಕ್ತಿಯಾಗಿ ಸಂಗ್ರಹಿಸಲಾಗುತ್ತದೆ. ವಿದ್ಯುತ್ ಅಗತ್ಯವಿದ್ದಾಗ, ವಿದ್ಯುತ್ ಉತ್ಪಾದಿಸಲು ಮೇಲಿನ ಜಲಾಶಯದಿಂದ ಟರ್ಬೈನ್ಗಳ ಮೂಲಕ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ವಿದ್ಯುತ್ ಬೇಡಿಕೆ ಕಡಿಮೆಯಾದ ನಂತರ, ಹೆಚ್ಚುವರಿ ವಿದ್ಯುತ್ ಲಭ್ಯವಿರುವ ಸಮಯದಲ್ಲಿ ನೀರನ್ನು ಮತ್ತೆ ಮೇಲಿನ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ, ಇದು ಶೇಖರಣಾ ಚಕ್ರವನ್ನು ಪೂರ್ಣಗೊಳಿಸುತ್ತದೆ. ಆದ್ದರಿಂದ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ಗಳು ಬೃಹತ್ ಪ್ರಮಾಣದ ಇಂಧನ ಶೇಖರಣಾ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಗ್ರಿಡ್ ಸ್ಥಿರತೆ ಹಾಗೂ ನವೀಕರಿಸಬಹುದಾದ ಇಂಧನ ಏಕೀಕರಣಕ್ಕೆ ಕೊಡುಗೆ ನೀಡುತ್ತವೆ.

ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ಗಳ ವರ್ಗೀಕರಣ
ಪಿಎಸ್ಪಿ ಗಳನ್ನು ಅವುಗಳ ಜಲಾಶಯಗಳು ನೈಸರ್ಗಿಕ ಜಲಮೂಲಗಳೊಂದಿಗೆ ಹೇಗೆ ಸಂಪರ್ಕ ಹೊಂದಿವೆ ಅಥವಾ ಸ್ಥಾಪಿತವಾಗಿವೆ ಎಂಬುದರ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಅವುಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ಆನ್-ಸ್ಟ್ರೀಮ್, ಆಫ್-ಸ್ಟ್ರೀಮ್ ಓಪನ್-ಲೂಪ್ ಮತ್ತು ಆಫ್-ಸ್ಟ್ರೀಮ್ ಕ್ಲೋಸ್ಡ್-ಲೂಪ್ ಯೋಜನೆಗಳು. ಈ ಸಂರಚನೆಗಳು ಯೋಜನೆಯ ಜಲಾಶಯಗಳು ಮತ್ತು ನೈಸರ್ಗಿಕ ಜಲಮೂಲಗಳ ನಡುವಿನ ವಿಭಿನ್ನ ಸಂಬಂಧವನ್ನು ಪ್ರತಿಫಲಿಸುತ್ತವೆ.

ಆನ್-ಸ್ಟ್ರೀಮ್ ಪಂಪ್ಡ್ ಸ್ಟೋರೇಜ್:
ಆನ್-ಸ್ಟ್ರೀಮ್ ಪಂಪ್ಡ್ ಸ್ಟೋರೇಜ್ ಯೋಜನೆಗಳಲ್ಲಿ ಎರಡೂ ಜಲಾಶಯಗಳು ನದಿ, ಹಳ್ಳ ಅಥವಾ ಹಳ್ಳಕೊಳ್ಳಗಳ ಮೇಲೆ ಇರುತ್ತವೆ. ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಮೇಲಿನ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಟರ್ಬೈನ್ಗಳ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಕಡಿಮೆ ವಿದ್ಯುತ್ ಬೇಡಿಕೆ ಅಥವಾ ಹೆಚ್ಚುವರಿ ವಿದ್ಯುತ್ ಇರುವ ಅವಧಿಯಲ್ಲಿ, ಪುನಃ ಬಳಸಲು ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ.
ಆಫ್-ಸ್ಟ್ರೀಮ್ ಓಪನ್-ಲೂಪ್ ಪಂಪ್ಡ್ ಸ್ಟೋರೇಜ್:
ಆಫ್-ಸ್ಟ್ರೀಮ್ ಓಪನ್-ಲೂಪ್ ಪಂಪ್ಡ್ ಸ್ಟೋರೇಜ್ ಯೋಜನೆಗಳಲ್ಲಿ ಒಂದು ಜಲಾಶಯವು ನದಿ, ಹಳ್ಳ ಅಥವಾ ಹಳ್ಳಕೊಳ್ಳದ ಮೇಲೆ ಇರುತ್ತದೆ. ಆದರೆ, ಇನ್ನೊಂದು ಜಲಾಶಯವು ನದಿ, ಜೀವನದಿ ಅಥವಾ ಶಾಶ್ವತ ಹಳ್ಳಕೊಳ್ಳಗಳ ಮೇಲೆ ಇರುವುದಿಲ್ಲ. ವಿದ್ಯುತ್ ಅಗತ್ಯವಿದ್ದಾಗ, ವಿದ್ಯುತ್ ಉತ್ಪಾದಿಸಲು ನೀರು ಮೇಲಿನ ಜಲಾಶಯದಿಂದ ಟರ್ಬೈನ್ಗಳ ಮೂಲಕ ಹರಿಯುತ್ತದೆ. ತದನಂತರ, ಹೆಚ್ಚುವರಿ ವಿದ್ಯುತ್ ಅನ್ನು ಬಳಸಿಕೊಂಡು ನೀರನ್ನು ಮತ್ತೆ ಮೇಲೆ ಪಂಪ್ ಮಾಡಲಾಗುತ್ತದೆ, ಇದು ಇನ್ನೊಂದು ಚಕ್ರಕ್ಕಾಗಿ ವ್ಯವಸ್ಥೆಯನ್ನು ಮರುಸ್ಥಾಪಿಸುತ್ತದೆ.
ಆಫ್-ಸ್ಟ್ರೀಮ್ ಕ್ಲೋಸ್ಡ್-ಲೂಪ್ ಪಂಪ್ಡ್ ಸ್ಟೋರೇಜ್:
ಆಫ್-ಸ್ಟ್ರೀಮ್ ಕ್ಲೋಸ್ಡ್-ಲೂಪ್ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಎರಡೂ ಜಲಾಶಯಗಳು ನದಿ, ಜೀವನದಿ ಅಥವಾ ಶಾಶ್ವತ ಹಳ್ಳಕೊಳ್ಳಗಳ ಮೇಲೆ ಇರುವುದಿಲ್ಲ. ಎರಡೂ ಜಲಾಶಯಗಳು ಶಾಶ್ವತ ನೈಸರ್ಗಿಕ ಜಲಮೂಲಗಳಿಂದ ದೂರದಲ್ಲಿವೆ. ವಿದ್ಯುತ್ ಅಗತ್ಯವಿದ್ದಾಗ, ವಿದ್ಯುತ್ ಉತ್ಪಾದಿಸುವ ಟರ್ಬೈನ್ಗಳ ಮೂಲಕ ನೀರು ಮೇಲಿನ ಜಲಾಶಯದಿಂದ ಹರಿಯುತ್ತದೆ, ಮತ್ತು ಕಡಿಮೆ ವಿದ್ಯುತ್ ಬೇಡಿಕೆ ಅಥವಾ ಹೆಚ್ಚುವರಿ ವಿದ್ಯುತ್ ಇರುವ ಅವಧಿಯಲ್ಲಿ ನೀರನ್ನು ಮತ್ತೆ ಮೇಲಿನ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ.
ಎಲ್ಲಾ ಮೂರು ರೀತಿಯ ಪಂಪ್ಡ್ ಸ್ಟೋರೇಜ್ ಯೋಜನೆಗಳು ಸ್ಥಳ-ನಿರ್ದಿಷ್ಟ ಭೌಗೋಳಿಕ ಮತ್ತು ತಾಂತ್ರಿಕ ಪರಿಸ್ಥಿತಿಗಳ ಆಧಾರದ ಮೇಲೆ ತಮ್ಮದೇ ಆದ ಪಾತ್ರವನ್ನು ಹೊಂದಿವೆ. ಆದಾಗ್ಯೂ, ಯೋಜನೆಗಳ ಶೀಘ್ರ ಜಾರಿಗೆ ಮತ್ತು ಜಲಚರ ಪರಿಸರ ವಿಜ್ಞಾನ ಹಾಗೂ ಸುತ್ತಮುತ್ತಲಿನ ಪರಿಸರದ ಮೇಲಿನ ಪರಿಣಾಮಗಳನ್ನು ಕಡಿಮೆ ಮಾಡಲು ನದಿಗಳಿಂದ ದೂರದಲ್ಲಿರುವ ಹೆಚ್ಚಿನ ಆಫ್-ಸ್ಟ್ರೀಮ್ ಯೋಜನೆಗಳನ್ನು ಗುರುತಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಇಂಧನ ಶೇಖರಣೆಯ ವಿಸ್ತರಣೆ: ಭಾರತದ ಪಂಪ್ಡ್ ಸ್ಟೋರೇಜ್ ವೇಗ
ಭಾರತವು ತನ್ನ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಬೆಂಬಲ ನೀಡಲು ತನ್ನ ಪಂಪ್ಡ್ ಸ್ಟೋರೇಜ್ ಸಾಮರ್ಥ್ಯವನ್ನು ವೇಗವಾಗಿ ವಿಸ್ತರಿಸುತ್ತಿದೆ. ಪ್ರಸ್ತುತ ಕಾರ್ಯಾಚರಣೆ, ನಿರ್ಮಾಣ ಮತ್ತು ನಿರ್ಮಾಣ-ಪೂರ್ವ ಹಂತಗಳಲ್ಲಿ ಈ ಅಭಿವೃದ್ಧಿಯು ಪ್ರಗತಿಯಲ್ಲಿದೆ. ವಿಸ್ತರಿಸುತ್ತಿರುವ ಈ ಯೋಜನಾ ಶ್ರೇಣಿಯು ಭಾರತದ ದೀರ್ಘಾವಧಿಯ ಇಂಧನ ಶೇಖರಣಾ ಮೂಲಸೌಕರ್ಯವನ್ನು ಬಲಪಡಿಸುತ್ತಿದೆ.
- ಕಾರ್ಯಾಚರಣೆಯ ಸಾಮರ್ಥ್ಯ: ಆಗಸ್ಟ್ 2026 ರ ಹೊತ್ತಿಗೆ, ಭಾರತವು 10 ಯೋಜನೆಗಳಲ್ಲಿ 7.43 ಜಿಡಬ್ಲು ಕಾರ್ಯಾಚರಣೆಯ ಪಂಪ್ಡ್ ಸ್ಟೋರೇಜ್ (ಪಿಎಸ್ಪಿ) ಸಾಮರ್ಥ್ಯವನ್ನು ಹೊಂದಿದೆ. ಈ ಯೋಜನೆಗಳು 25 ಎಂಡಬ್ಲು ಗಿಂತ ಹೆಚ್ಚಿನ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿವೆ.
- ನಿರ್ಮಾಣ/ಅನುಷ್ಠಾನ ಹಂತದಲ್ಲಿದೆ: ದೇಶಾದ್ಯಂತ 11 ಪಿಎಸ್ಪಿ ಗಳಲ್ಲಿ 15.87 ಜಿಡಬ್ಲು ಸಾಮರ್ಥ್ಯವು ನಿರ್ಮಾಣ ಮತ್ತು/ಅಥವಾ ಅನುಷ್ಠಾನದ ಹಂತದಲ್ಲಿದೆ.
- ಮುಂದಿನ ಹಂತದ ಯೋಜನೆಗಳು: 8 ಯೋಜನೆಗಳಲ್ಲಿ 10.40 ಜಿಡಬ್ಲು ಸಾಮರ್ಥ್ಯಕ್ಕೆ ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಒಪ್ಪಿಗೆ ಅಥವಾ ಮೌಲ್ಯಮಾಪನ ನೀಡಿದೆ.
ಭಾರತದ ಪ್ರಾದೇಶಿಕ ವೈವಿಧ್ಯಮಯ ಪಂಪ್ಡ್ ಸ್ಟೋರೇಜ್ ಸಾಮರ್ಥ್ಯ

|
ವರ್ಷ
|
ಸೇರ್ಪಡೆ
|
ಒಟ್ಟು ಸಾಮರ್ಥ್ಯ (ಜಿಡಬ್ಲು ಗಳಲ್ಲಿ)
|
|
2024-25 ರವರೆಗೆ
|
–
|
4.745
|
|
2025-26
|
2.68
|
7.425
|
|
2026-27
|
2.92
|
10.345
|
|
2027-28
|
1.6
|
11.945
|
|
2028-29
|
6.35
|
18.295
|
|
2029-30
|
13.5
|
31.795
|
|
2030-31
|
21.19
|
52.985
|
|
2031-32
|
8.8
|
61.785
|
|
2032-33
|
14.59
|
76.375
|
|
2033-34
|
11.88
|
88.255
|
|
2034-35
|
5.7
|
93.955
|
|
2035-36
|
11.6
|
105.555
|
|
ಒಟ್ಟು (Total)
|
100.81
|
–
|
|

ಜಾಗತಿಕವಾಗಿ ಸ್ಥಾಪಿತವಾದ ಪಿಎಸ್ಪಿ ಸಾಮರ್ಥ್ಯ
ಪಂಪ್ಡ್ ಸ್ಟೋರೇಜ್ ಹೈಡ್ರೋಪವರ್ (ಪಿಎಸ್ಪಿ) ಇತರ ಶೇಖರಣಾ ತಂತ್ರಜ್ಞಾನಗಳಿಗೆ ಹೋಲಿಸಿದರೆ ತನ್ನ ಸ್ಥಾಪಿತ ಪ್ರಮಾಣ ಮತ್ತು ಪ್ರಬುದ್ಧತೆಯನ್ನು ಪ್ರತಿಬಿಂಬಿಸುತ್ತಾ, ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಬೃಹತ್ ಪ್ರಮಾಣದ ಇಂಧನ ಶೇಖರಣಾ ರೂಪವಾಗಿದೆ. ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆಯ ಪ್ರಕಾರ, 2025 ರ ಕೊನೆಯಲ್ಲಿ ಜಾಗತಿಕ ಸ್ಥಾಪಿತ ಪಂಪ್ಡ್ ಹೈಡ್ರೋ ಸಾಮರ್ಥ್ಯವು 159.8 ಗಿಗಾವ್ಯಾಟ್ (ಜಿಡಬ್ಲು) ಆಗಿತ್ತು. ಈ ಸಾಮರ್ಥ್ಯದಲ್ಲಿ ಚೀನಾ ಸುಮಾರು 66 ಗಿಗಾವ್ಯಾಟ್ ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ರಮವಾಗಿ ಸುಮಾರು 22 ಗಿಗಾವ್ಯಾಟ್ ಮತ್ತು 19 ಗಿಗಾವ್ಯಾಟ್ ಸಾಮರ್ಥ್ಯದೊಂದಿಗೆ ಮುಂದಿನ ಸ್ಥಾನಗಳಲ್ಲಿವೆ. ಸ್ಥಾಪಿತ ಪಂಪ್ಡ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಶ್ರೇಣಿಯಲ್ಲಿದ್ದು, 2025 ರ ಕೊನೆಯಲ್ಲಿ 7.18 ಗಿಗಾವ್ಯಾಟ್ ಹೊಂದಿತ್ತು. ಜುಲೈ 2026 ರ ಹೊತ್ತಿಗೆ ದೇಶದ ಸಾಮರ್ಥ್ಯವು 7.43 ಗಿಗಾವ್ಯಾಟ್ಗೆ ಹೆಚ್ಚಾಗಿದ್ದು, ಜಾಗತಿಕ ಪಂಪ್ಡ್ ಸ್ಟೋರೇಜ್ ಭೂದೃಶ್ಯದಲ್ಲಿ ತನ್ನ ಬೆಳೆಯುತ್ತಿರುವ ಪಾತ್ರವನ್ನು ಬಲಪಡಿಸಿದೆ.
|
ಸರ್ಕಾರದ ಉಪಕ್ರಮಗಳು ಮತ್ತು ಕ್ರಮಗಳು
ಭಾರತ ಸರ್ಕಾರವು ಪಿಎಸ್ಪಿ ಗಳ ಅಭಿವೃದ್ಧಿ ಮತ್ತು ನಿಯೋಜನೆಯನ್ನು ಉತ್ತೇಜಿಸಲು ಸಂಘಟಿತ ನೀತಿ, ನಿಯಂತ್ರಣ, ಬೇಡಿಕೆ-ಬದಿ ಮತ್ತು ಪೂರೈಕೆ-ಬದಿಯ ಸರಣಿ ಕ್ರಮಗಳನ್ನು ಕೈಗೊಂಡಿದೆ.
- ಮೀಸಲಾದ ಪಿಎಸ್ಪಿ ಅಭಿವೃದ್ಧಿ ಮಾರ್ಗದರ್ಶಿ ಸೂತ್ರಗಳು: ವಿದ್ಯುತ್ ಸಚಿವಾಲಯವು ಏಪ್ರಿಲ್ 2023 ರಲ್ಲಿ ಭಾರತದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಈ ಮಾರ್ಗದರ್ಶಿ ಸೂತ್ರಗಳು ವೇಗದ ಪಿಎಸ್ಪಿ ಅಭಿವೃದ್ಧಿಗೆ ಪೂರಕವಾದ ನೀತಿ ಚೌಕಟ್ಟನ್ನು ಒದಗಿಸುತ್ತವೆ. ಮಾರ್ಗದರ್ಶನ ಪಡೆಯಲು ಕ್ಲಿಕ್ ಮಾಡಿ
- ಪೂರಕ ಮೂಲಸೌಕರ್ಯಗಳಿಗೆ ಬೆಂಬಲ: ಆಯವ್ಯಯದ (ಬಜೆಟ್) ಬೆಂಬಲವು ಪಿಎಸ್ಪಿ ಅಭಿವೃದ್ಧಿಗೆ ಅಗತ್ಯವಿರುವ ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಇದು ರಸ್ತೆಗಳು, ಸೇತುವೆಗಳು, ರೈಲ್ವೆ ಸೈಡಿಂಗ್ಗಳು, ರೋಪವೇಗಳು, ಸಂಪರ್ಕ ಸೌಲಭ್ಯಗಳು ಮತ್ತು ವಿದ್ಯುತ್ ಪ್ರಸರಣ ಮಾರ್ಗಗಳನ್ನು ಒಳಗೊಂಡಿದೆ. ಈ ಕ್ರಮಗಳು ಯೋಜನೆಯ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಯೋಜನೆಯ ಕಾರ್ಯಸಾಧ್ಯತೆಯನ್ನು ಬಲಪಡಿಸುತ್ತವೆ.
- ಸ್ಪರ್ಧಾತ್ಮಕ ಸಂಗ್ರಹಣೆ ಚೌಕಟ್ಟು: ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಮಾರ್ಗದರ್ಶಿ ಸೂತ್ರಗಳನ್ನು ಫೆಬ್ರವರಿ 2025 ರಲ್ಲಿ ಪ್ರಕಟಿಸಲಾಯಿತು. ಇವು ಪಿಎಸ್ಪಿ ಗಳಿಂದ ಶೇಖರಣಾ ಸಾಮರ್ಥ್ಯ ಮತ್ತು ಸಂಗ್ರಹಿಸಿದ ಇಂಧನವನ್ನು ಸಂಗ್ರಹಿಸಲು ಪಾರದರ್ಶಕ ಮತ್ತು ಪ್ರಮಾಣಿತ ಚೌಕಟ್ಟನ್ನು ಒದಗಿಸುತ್ತವೆ.
- ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಯ ಶುಲ್ಕ ವಿನಾಯಿತಿ: 30 ಜೂನ್ 2028 ರೊಳಗೆ ನಿರ್ಮಾಣಕ್ಕೆ ನೀಡಲಾದ ಪಿಎಸ್ಪಿ ಗಳು 100% ಐಎಸ್ಟಿಎಸ್ ಶುಲ್ಕ ವಿನಾಯಿತಿಗೆ ಅರ್ಹವಾಗಿವೆ. ಈ ವಿನಾಯಿತಿಯು ವಾಣಿಜ್ಯ ಕಾರ್ಯಾಚರಣೆಯಿಂದ 25 ವರ್ಷಗಳವರೆಗೆ ಅನ್ವಯಿಸುತ್ತದೆ. ಈ ಕ್ರಮವು ಪಿಎಸ್ಪಿ ಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಬಲಪಡಿಸುತ್ತದೆ.
- ವೇಗದ ಯೋಜನೆ ಅನುಮೋದನೆಗಳು: ಪರಿಷ್ಕೃತ ಸಿಇಎ ಮಾರ್ಗದರ್ಶಿ ಸೂತ್ರಗಳು ವಿವರವಾದ ಯೋಜನಾ ವರದಿ ಸಮ್ಮತಿಯ ಸಮಯವನ್ನು ಕಡಿಮೆಗೊಳಿಸಿವೆ. ಎಲ್ಲಾ ಪಿಎಸ್ಪಿ ಗಳಿಗೆ ಸಮಯದ ಮಿತಿಯನ್ನು 90 ದಿನಗಳಿಂದ 50 ದಿನಗಳಿಗೆ ಇಳಿಸಲಾಗಿದೆ. ಅಂತರ-ರಾಜ್ಯ ಅಂಶಗಳ ತೆರವುಗೊಳಿಸುವಿಕೆಯ ಅಗತ್ಯವನ್ನೂ ತೆಗೆದುಹಾಕಲಾಗಿದೆ. ಈ ಕ್ರಮಗಳು ವೇಗದ ಯೋಜನಾ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ.
- ಸರ ಸರಳೀಕೃತ ಪರಿಸರ ಮೌಲ್ಯಮಾಪನ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಿಎಸ್ಪಿ ಗಳಿಗೆ ವಿಭಿನ್ನ ಮೌಲ್ಯಮಾಪನ ನಿಬಂಧನೆಗಳನ್ನು ಪರಿಚಯಿಸಿದೆ. ಅರ್ಹ ಯೋಜನೆಗಳು ಅನ್ವಯವಾಗುವ ನಿಬಂಧನೆಗಳ ಅಡಿಯಲ್ಲಿ B2 ವರ್ಗೀಕರಣದ ಪ್ರಯೋಜನವನ್ನು ಪಡೆಯಬಹುದು. ಆಫ್-ಸ್ಟ್ರೀಮ್ ಯೋಜನೆಗಳು ಕಡಿಮೆ ಮೂಲಭೂತ ದತ್ತಾಂಶ ಅಗತ್ಯತೆಗಳ ಪ್ರಯೋಜನವನ್ನೂ ಪಡೆಯುತ್ತವೆ. ಈ ಕ್ರಮಗಳು ನಿಯಂತ್ರಕ ನಿಯಮಗಳನ್ನು ಕಾಯ್ದುಕೊಳ್ಳುತ್ತಲೇ ಪರಿಸರ ಮೌಲ್ಯಮಾಪನವನ್ನು ವೇಗಗೊಳಿಸುತ್ತವೆ.
- ಸಮೀಕ್ಷೆ ಮತ್ತು ತನಿಖೆಯನ್ನು ಸುಗಮಗೊಳಿಸುವುದು: MoEF&CC ಅರಣ್ಯ ಭೂಮಿ ಸಮೀಕ್ಷೆ ನಿಬಂಧನೆಗಳನ್ನು ವಿಸ್ತರಿಸಿದೆ ಮತ್ತು ಪಿಎಸ್ಪಿ ಗಳಿಗೆ ಬೋರ್ಹೋಲ್ ಪರಿಶೋಧನೆ ಮಿತಿಗಳನ್ನು ಹೆಚ್ಚಿಸಿದೆ, ಇದು ತಾಂತ್ರಿಕವಾಗಿ ಬಲವಾದ ವಿವರವಾದ ಯೋಜನಾ ವರದಿಗಳ ಸಮಯೋಚಿತ ತಯಾರಿಕೆಗೆ ಅನುಕೂಲ ಮಾಡಿಕೊಡುತ್ತದೆ.
- ಸಂಯೋಜಿತ ಗ್ರಿಡ್ ಮತ್ತು ಪ್ರಸರಣ ಯೋಜನೆ: ರಾಷ್ಟ್ರೀಯ ವಿದ್ಯುತ್ ಯೋಜನೆಯು ಇಂಧನ ಶೇಖರಣೆ ಮತ್ತು ಪ್ರಸರಣ ಅಭಿವೃದ್ಧಿಯನ್ನು ಸಂಯೋಜಿಸುತ್ತದೆ. ಈ ವಿಧಾನವು ನವೀಕರಿಸಬಹುದಾದ ಇಂಧನದ ಏರಿಳಿತಗಳನ್ನು ನಿರ್ವಹಿಸುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಿಡ್ನ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ. 2025-26 ಮತ್ತು 2035-36 ರ ನಡುವೆ 100 ಜಿಡಬ್ಲು ನಷ್ಟು ಪಿಎಸ್ಪಿ ಸಾಮರ್ಥ್ಯವನ್ನು ಸಂಯೋಜಿಸಲು ಮಾರ್ಗಸೂಚಿಯು ಯೋಜಿಸಿದೆ.
- ಡಿಜಿಟಲ್ ಪ್ರಾಜೆಕ್ಟ್ ಮಾನಿಟರಿಂಗ್: ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ಜಲ ವಿದ್ಯುತ್ ಡಿಪಿಆರ್ ಪೋರ್ಟಲ್ ಸಮೀಕ್ಷೆ ಮತ್ತು ತನಿಖಾ ಚಟುವಟಿಕೆಗಳ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ. ಇದು ಯೋಜನಾ ತಯಾರಿಕೆಯ ಸಮಯದಲ್ಲಿ ಭಾಗಿದಾರರ ನಡುವೆ ಸಮನ್ವಯವನ್ನು ಸುಗಮಗೊಳಿಸುತ್ತದೆ. ಈ ಡಿಜಿಟಲ್ ವಿಧಾನವು ಅನುಮೋದನೆಗಳನ್ನು ಸರಳೀಕರಿಸಲು ಮತ್ತು ಪಿಎಸ್ಪಿ ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
- ಸಿಇಎ ಸಮ್ಮತಿಯ ಅಗತ್ಯವಿರುವ ಬಂಡವಾಳ ವೆಚ್ಚದ ಮಿತಿಯ ಪರಿಶೀಲನೆ ಭಾರತ ಸರ್ಕಾರವು 01.08.2025 ರ ಗೆಜೆಟ್ ಅಧಿಸೂಚನೆಯ ಮೂಲಕ, ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಸಂಬಂಧಿಸಿದ ಯೋಜನೆಗಳಿಗೆ ಸಿಇಎ ಸಮ್ಮತಿಯ ಅಗತ್ಯವಿರುವ ಬಂಡವಾಳ ವೆಚ್ಚದ ಮಿತಿಯನ್ನು ₹3,000 ಕೋಟಿಗೆ ಪರಿಷ್ಕರಿಸಿದೆ. ಇದಲ್ಲದೆ, ಬಂಡವಾಳ ವೆಚ್ಚದ ಪ್ರಮಾಣವನ್ನು ಲೆಕ್ಕಿಸದೆ, ಆಫ್-ಸ್ಟ್ರೀಮ್ ಕ್ಲೋಸ್ಡ್-ಲೂಪ್ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ಸಿಇಎ ಯ ಸಮ್ಮತಿಯ ಅಗತ್ಯದಿಂದ ವಿನಾಯಿತಿ ನೀಡಲಾಗಿದೆ.
ನೀತಿಯ ಸ್ಪಷ್ಟತೆ, ಹಣಕಾಸಿನ ಬೆಂಬಲ, ಸರಳೀಕೃತ ಅನುಮೋದನೆಗಳು, ಸ್ಪರ್ಧಾತ್ಮಕ ಸಂಗ್ರಹಣೆ ಮತ್ತು ಸಂಯೋಜಿತ ಗ್ರಿಡ್ ಯೋಜನೆಯನ್ನು ಒಳಗೊಂಡಿರುವ ಈ ಕ್ರಮಗಳು ಪಿಎಸ್ಪಿಗಳ ವೇಗವರ್ಧಿತ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸಿವೆ.
ಇಂಧನ ರೂಪಾಂತರದ ಮುಂದಿನ ಅಗತ್ಯತೆ
2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಲಾಗದ ಮೂಲಗಳ ಇಂಧನ ಸಾಮರ್ಥ್ಯವನ್ನು ಸಾಧಿಸುವ ಭಾರತದ ಗುರಿಯು ದೇಶದ ವಿದ್ಯುತ್ ವಲಯದಲ್ಲಿ ಮೂಲಭೂತ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ನವೀಕರಿಸಬಹುದಾದ ಇಂಧನವು ದೊಡ್ಡ ಪಾತ್ರವನ್ನು ವಹಿಸುತ್ತಿದ್ದಂತೆ, ಶಕ್ತಿಯನ್ನು ಸಂಗ್ರಹಿಸುವ ಮತ್ತು ಬೇಡಿಕೆಗೆ ಅನುಗುಣವಾಗಿ ಅದನ್ನು ಬಳಸುವ ಸಾಮರ್ಥ್ಯವು ವಿಶ್ವಾಸಾರ್ಹ ಮತ್ತು ಸಮತೋಲಿತ ವಿದ್ಯುತ್ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹೆಚ್ಚು ಮುಖ್ಯವಾಗುತ್ತದೆ. ಪಂಪ್ಡ್ ಸ್ಟೋರೇಜ್ ಹೈಡ್ರೋಪವರ್ ಬೃಹತ್ ಪ್ರಮಾಣದ, ದೀರ್ಘಾವಧಿಯ ಇಂಧನ ಶೇಖರಣೆಯನ್ನು ಒದಗಿಸುವ ಜೊತೆಗೆ ವಿಶಾಲವಾದ ವಿದ್ಯುತ್ ವ್ಯವಸ್ಥೆಯ ಅಗತ್ಯತೆಗಳನ್ನು ಬೆಂಬಲಿಸುವ ತನ್ನ ಸಾಮರ್ಥ್ಯದ ಮೂಲಕ ಈ ಅಗತ್ಯವನ್ನು ಪೂರೈಸಲು ಸೂಕ್ತ ಸ್ಥಾನದಲ್ಲಿದೆ. ಇದರ ಪಾತ್ರವು ಗರಿಷ್ಠ ಬೇಡಿಕೆಯನ್ನು ನಿರ್ವಹಿಸುವುದು ಮತ್ತು ಏರಿಳಿತದ ನವೀಕರಿಸಬಹುದಾದ ಇಂಧನವನ್ನು ಸಂಯೋಜಿಸುವುದರಿಂದ ಹಿಡಿದು ಗ್ರಿಡ್ ನಮ್ಯತೆ ಮತ್ತು ಸ್ಥಿರತೆಯನ್ನು ಬಲಪಡಿಸುವವರೆಗೆ ವಿಸ್ತರಿಸುತ್ತದೆ. ಸ್ವಚ್ಛ ಇಂಧನ ವ್ಯವಸ್ಥೆಯು ಬೆಳೆಯುತ್ತಾ ಸಾಗಿದಂತೆ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಮೂಲಸೌಕರ್ಯಗಳೊಂದಿಗೆ ಇಂಧನ ಶೇಖರಣೆಯ ಪರಿಣಾಮಕಾರಿ ನಿಯೋಜನೆಯು ಹೆಚ್ಚು ಸ್ವಚ್ಛವಾದ, ನಮ್ಯತೆಯಿಂದ ಕೂಡಿದ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸಲು ಪ್ರಮುಖವಾಗುತ್ತದೆ.
References:
Ministry of Power
Ministry of New and Renewable Energy
Central Electricity Authority
National Thermal Power Corporation Limited
- https://ntpc.co.in/media/employee-blog/role-water-batteries-energy-transition-and-green-energy-integration-india?utm_source
International Renewable Energy Agency
Click to see pdf
*****
(Explainer ID: 160715)
आगंतुक पटल : 7
Provide suggestions / comments