Technology

ಹಸಿರು ಜಲಜನಕ

ಭಾರತದ ನವ ಇಂಧನ ಕ್ರಾಂತಿಯ ಪ್ರಮುಖ ಆಧಾರಸ್ತಂಭ

Posted On: 02 NOV 2026 4:13PM

ಹಸಿರು ಜಲಜನಕವು ಭಾರತದ ಸ್ವಚ್ಛ ಇಂಧನ ಪರಿವರ್ತನೆಯ ಪ್ರಮುಖ ಸ್ತಂಭವಾಗಿ ಹೊರಹೊಮ್ಮುತ್ತಿದೆ. ನವೀಕರಿಸಬಹುದಾದ ವಿದ್ಯುತ್ ಬಳಸಿ ನೀರನ್ನು ವಿಭಜಿಸುವ ಮೂಲಕ ಇದನ್ನು ಉತ್ಪಾದಿಸಲಾಗುತ್ತದೆ. ರಸಗೊಬ್ಬರ ಉತ್ಪಾದನೆ, ಪೆಟ್ರೋಲಿಯಂ ಪರಿಷ್ಕರಣೆ, ಕಬ್ಬಿಣ ಮತ್ತು ಉಕ್ಕು ತಯಾರಿಕೆ, ಭಾರಿ ವಾಹನ ಸಾರಿಗೆ ಮತ್ತು ಹಡಗು ರಂಗದಂತಹ ಕ್ಷೇತ್ರಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ರಾಷ್ಟ್ರೀಯ ಹಸಿರು ಜಲಜನಕ ಮಿಷನ್ (ಎನ್‌ಜಿಎಚ್‌ಎಂ) ದೇಶೀಯ ಉತ್ಪಾದನೆ, ಖಚಿತ ಬೇಡಿಕೆ ಮತ್ತು ವಿಶ್ವಾಸಾರ್ಹ ಪ್ರಮಾಣೀಕರಣಕ್ಕೆ ಬೆಂಬಲ ನೀಡುತ್ತದೆ. ಹಸಿರು ಅಮೋನಿಯಾ ಹರಾಜಿನಿಂದ ಹಿಡಿದು ಭಾರತದ ಮೊದಲ ಹಡೋಜನ್ ರೈಲಿನವರೆಗೆ, ಆರಂಭಿಕ ಯೋಜನೆಗಳು ಭರವಸೆಯ ಹಾದಿಯನ್ನು ತೋರುತ್ತಿವೆ.

ಹಸಿರು ಜಲಜನಕವನ್ನೇ ಏಕೆ ಆಯ್ಕೆ ಮಾಡಬೇಕು?

ಜಲಜನಕ ಎನ್ನುವುದು ಇಂಧನವನ್ನು ಸಂಗ್ರಹಿಸಿ, ಅದನ್ನು ವಿವಿಧ ಅಗತ್ಯಗಳಿಗೆ ತಲುಪಿಸುವ ಒಂದು ಶಕ್ತಿ ವಾಹಕವಾಗಿದೆ. ಫ್ಯೂಯಲ್ ಸೆಲ್‌ನಲ್ಲಿ ಇದು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ ವಿದ್ಯುತ್ ಅನ್ನು ಉತ್ಪಾದಿಸುತ್ತದೆ; ಈ ಪ್ರಕ್ರಿಯೆಯಲ್ಲಿ ನೀರು ಮತ್ತು ಕಾವು (ಶಾಖ) ಮಾತ್ರ ಉಪ-ಉತ್ಪನ್ನಗಳಾಗಿ ಹೊರಬರುತ್ತವೆ ಮತ್ತು ಯಾವುದೇ ಕಲುಷಿತ ಸಂಯುಕ್ತಗಳು ಅಥವಾ ಹಸಿರುಮನೆ ಅನಿಲಗಳು ಬಿಡುಗಡೆಯಾಗುವುದಿಲ್ಲ. ಶುದ್ಧ ಜಲಜನಕವು ಪ್ರಕೃತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದಿಲ್ಲವಾದರೂ, ನೀರು ಅಥವಾ ನೈಸರ್ಗಿಕ ಅನಿಲದಂತಹ ಸಂಯುಕ್ತಗಳಿಂದ ಇದನ್ನು ಹೊರತೆಗೆಯಬಹುದು. ಆದ್ದರಿಂದ ಇದರ ಪರಿಸರ ಪರಿಣಾಮವು ಇದನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಮೇಲೆ ಆಧಾರಪಟ್ಟಿರುತ್ತದೆ. ಸಾಂಪ್ರದಾಯಿಕ ವಿಧಾನಗಳು ಪಳೆಯುಳಿಕೆ ಇಂಧನಗಳನ್ನು ಅವಲಂಬಿಸಿದ್ದು, ಇಂಗಾಲದ ಹೊರಸೂಸುವಿಕೆಯನ್ನುಂಟುಮಾಡುತ್ತವೆ.

ಸೌರ ಮತ್ತು ಪವನ ಶಕ್ತಿಯಿಂದ ಪಡೆಯುವ ನವೀಕರಿಸಬಹುದಾದ ವಿದ್ಯುತ್ ಬಳಸಿ ಮಾಡುವ ಉತ್ಪಾದನೆಯು ಈ ಇಂಗಾಲದ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನವೀಕರಿಸಬಹುದಾದ ವಿದ್ಯುತ್ ಬಳಸಿ ನೀರನ್ನು ವಿಭಜಿಸುವುದರ ಮೂಲಕ ತಯಾರಿಸುವ ಜಲಜನಕವನ್ನು 'ಹಸಿರು ಜಲಜನಕ' ಎಂದು ಕರೆಯಲಾಗುತ್ತದೆ. ಪಳೆಯುಳಿಕೆ-ಆಧಾರಿತ ಮಾರ್ಗಗಳಿಗಿಂತ ಭಿನ್ನವಾಗಿ, ಈ ಪ್ರಕ್ರಿಯೆಯು ಅತ್ಯಂತ ಕಡಿಮೆ ಇಂಗಾಲವನ್ನು ಹೊರಸೂಸುತ್ತದೆ. ಭಾರತದ ಹೇರಳವಾದ ಸೌರ ಮತ್ತು ಪವನ ಸಂಪನ್ಮೂಲಗಳು ದೇಶೀಯ ಉತ್ಪಾದನೆಯನ್ನು ಸಾಧ್ಯವಾಗಿಸುತ್ತವೆ. ಇದು ದೇಶದ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುತ್ತದೆ ಮತ್ತು ಇಂಧನ ಭದ್ರತೆಯನ್ನು ಬಲಪಡಿಸುತ್ತದೆ.

ಇದು 2070ರ ವೇಳೆಗೆ 'ಶೂನ್ಯ ಇಂಗಾಲ ಹೊರಸೂಸುವಿಕೆ' ತಲುಪುವ ಭಾರತದ ಗುರಿಗೆ ಬೆಂಬಲ ನೀಡುತ್ತದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಕಷ್ಟಕರವಾಗಿರುವ ಕ್ಷೇತ್ರಗಳಲ್ಲಿ ಹಸಿರು ಜಲಜನಕವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಗರಿಷ್ಠ ತಾಪಮಾನದ ಶಾಖದ ಅಗತ್ಯತೆಗಳು, ರಾಸಾಯನಿಕ ಪ್ರಕ್ರಿಯೆಗಳು ಮತ್ತು ಪಳೆಯುಳಿಕೆ ಇಂಧನಗಳಿಗೆ ಕೆಲವೇ ಪರ್ಯಾಯಗಳಿರುವುದು ಇದಕ್ಕೆ ಕಾರಣಗಳಾಗಿವೆ. ಈ ಕಠಿಣ ಕ್ಷೇತ್ರಗಳಲ್ಲಿ ರಸಗೊಬ್ಬರ, ಪೆಟ್ರೋಲಿಯಂ ಪರಿಷ್ಕರಣೆ, ಕಬ್ಬಿಣ ಮತ್ತು ಉಕ್ಕು, ಭಾರಿ ವಾಹನ ರಸ್ತೆ ಸಾರಿಗೆ ಮತ್ತು ಹಡಗು ರಂಗಗಳು ಸೇರಿವೆ. ರಸಗೊಬ್ಬರ ಮತ್ತು ಸಂಸ್ಕರಣಾ ಘಟಕಗಳು ಈಗಾಗಲೇ ಜಲಜನಕವನ್ನು ಬಳಸುತ್ತಿರುವುದರಿಂದ, ಹಸಿರು ಜಲಜನಕವು ಪಳೆಯುಳಿಕೆ-ಆಧಾರಿತ ಸರಬರಾಜನ್ನು ಬದಲಾಯಿಸಬಹುದು. ಇದು ಕಡಿಮೆ-ಹೊರಸೂಸುವಿಕೆಯ ಉಕ್ಕು ತಯಾರಿಕೆ, ಆಯ್ದ ಸಾರಿಗೆ ಬಳಕೆಗಳು ಮತ್ತು ಇಂಧನ ಸಂಗ್ರಹಣೆಯನ್ನೂ ಬೆಂಬಲಿಸುತ್ತದೆ. ನೇರ ವಿದ್ಯುದ್ದೀಕರಣವು ಕಷ್ಟಕರವಾಗಿರುವ ಅಥವಾ ಕಡಿಮೆ ಪ್ರಾಯೋಗಿಕವಾಗಿರುವ ಕಡೆಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ.

ಜಲಜನಕವು "ಹಸಿರು" ಎನಿಸಿಕೊಳ್ಳುವುದು ಹೇಗೆ?

ಬಳಕೆಯ ಸಮಯದಲ್ಲಿ ಜಲಜನಕವು ಯಾವುದೇ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದಿಲ್ಲ, ಆದ್ದರಿಂದ ಇದರ ಹವಾಮಾನದ ಪ್ರಭಾವವು ಇದನ್ನು ಹೇಗೆ ಉತ್ಪಾದಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಗಸ್ಟ್ 2023 ರಲ್ಲಿ, ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್‌ಆರ್‌ಇ) ಭಾರತದ 'ಹಸಿರು ಜಲಜನಕ ಮಾನದಂಡ'ವನ್ನು ಅಧಿಸೂಚಿಸಿದೆ. 12 ತಿಂಗಳ ಸರಾಸರಿಯಾಗಿ ಅಳೆಯಲಾದ 'ವೆಲ್-ಟು-ಗೇಟ್' ಆಧಾರದ ಮೇಲೆ, ಪ್ರತಿ ಕೆಜಿ ಜಲಜನಕಕ್ಕೆ 2 ಕೆಜಿಗಿಂತ ಹೆಚ್ಚು CO₂ ಸಮಾನ ಇಂಗಾಲದ ಹೊರಸೂಸುವಿಕೆ ಇಲ್ಲದಿದ್ದರೆ ಆ ಜಲಜನಕವನ್ನು ಹಸಿರು ಎಂದು ಪರಿಗಣಿಸಲಾಗುತ್ತದೆ. ಈ ಮೂಲಕ ಭಾರತವು ಹಸಿರು ಜಲಜನಕವನ್ನು ಔಪಚಾರಿಕವಾಗಿ ವ್ಯಾಖ್ಯಾನಿಸಿದ ಮೊಟ್ಟಮೊದಲ ಕೆಲವು ದೇಶಗಳಲ್ಲಿ ಒಂದಾಗಿದೆ.

.

ಭಾರತಕ್ಕೆ, ಇದರ ವ್ಯಾಪಕ ಬಳಕೆಯು ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಇದು ಜಾಗತಿಕ ಇಂಧನ ಬೆಲೆಯ ಏರಿಳಿತಗಳಿಗೆ ಒಡ್ಡಿಕೊಳ್ಳುವುದನ್ನೂ ತಗ್ಗಿಸುತ್ತದೆ. ಈ ಕ್ಷೇತ್ರವು ಉತ್ಪಾದನೆಯಲ್ಲಿ ಹೊಸ ಅವಕಾಶಗಳನ್ನು ತೆರೆಯಬಹುದು, ಹೂಡಿಕೆಯನ್ನು ಆಕರ್ಷಿಸಬಹುದು, ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ರಫ್ತನ್ನು ವಿಸ್ತರಿಸಬಹುದು. ಮೌಲ್ಯ ಸರಪಳಿಯಾದ್ಯಂತ ಸಾಮರ್ಥ್ಯಗಳನ್ನು ನಿರ್ಮಿಸುವುದು ದೇಶೀಯ ಸರಪಣಿಗಳನ್ನು ಬಲಪಡಿಸುತ್ತದೆ ಮತ್ತು ಕೈಗಾರಿಕಾ ನಾವೀನ್ಯತೆಗೆ ಉತ್ತೇಜನ ನೀಡುತ್ತದೆ. ಹೀಗಾಗಿ, ಹಸಿರು ಜಲಜನಕವು ಸ್ವಾವಲಂಬನೆ, ಸುಸ್ಥಿರ ಕೈಗಾರಿಕಾ ಬೆಳವಣಿಗೆ ಮತ್ತು ಕಡಿಮೆ-ಇಂಗಾಲದ ಭವಿಷ್ಯವನ್ನು ಬೆಂಬಲಿಸುತ್ತದೆ.

.

ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026, ನವದೆಹಲಿಯ ಭಾರತ್ ಮಂಟಪದಲ್ಲಿ ನವೆಂಬರ್ 2–5, 2026 ರವರೆಗೆ 'ಹೂಡಿಕೆ ಮಾಡಿ. ನಾವೀನ್ಯತೆ ತನ್ನಿ. ಸ್ಫೂರ್ತಿ ನೀಡಿ' ಎಂಬ ಥೀಮ್‌ನೊಂದಿಗೆ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026 ನಡೆಯುತ್ತಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಶೃಂಗಸಭೆಯು 40ಕ್ಕೂ ಹೆಚ್ಚು ಸಚಿವರು, ನೀತಿ ನಿರೂಪಕರು, ಹೂಡಿಕೆದಾರರು, ಹಣಕಾಸು ಸಂಸ್ಥೆಗಳು ಮತ್ತು ಉದ್ಯಮದ ಮುಂಚೂಣಿ ನಾಯಕರು ಸೇರಿದಂತೆ 130 ಕ್ಕೂ ಹೆಚ್ಚು ದೇಶಗಳ ಭಾಗಿದಾರರನ್ನು ಒಂದೆಡೆ ತಂದಿದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಯುರೋಪಿಯನ್ ಒಕ್ಕೂಟ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್‌ಡಮ್ - ಈ ಒಂಬತ್ತು ದೇಶಗಳು 'ದೇಶದ ಪಾಲುದಾರರಾಗಿ' ಭಾಗವಹಿಸುತ್ತಿವೆ. 13 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಹೂಡಿಕೆಯ ಅವಕಾಶಗಳು ಮತ್ತು ಸ್ವಚ್ಛ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿವೆ. ಸೌರ ಮತ್ತು ಪವನ ಶಕ್ತಿ, ಹಸಿರು ಜಲಜನಕ, ಇಂಧನ ಸಂಗ್ರಹಣೆ, ಗ್ರಿಡ್ ಏಕೀಕರಣ, ದೇಶೀಯ ಉತ್ಪಾದನೆ, ಹಾಗೂ ಇಂಧನ ಕ್ಷೇತ್ರದಲ್ಲಿ ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆಯ ಅನ್ವಯಗಳು ಈ ಶೃಂಗಸಭೆಯ ಪ್ರಮುಖ ಗಮನಹರಿಸುವ ಕ್ಷೇತ್ರಗಳಾಗಿವೆ.

ಈ ಶೃಂಗಸಭೆಯು ಶುದ್ಧ ಇಂಧನ ಹೂಡಿಕೆ, ತಂತ್ರಜ್ಞಾನ ಪಾಲುದಾರಿಕೆ ಮತ್ತು ಉದ್ಯಮ ಸಹಯೋಗಕ್ಕಾಗಿ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ. ಇದು ಸಚಿವರ ಮಟ್ಟದ ಚರ್ಚೆಗಳು, ಸಿಇಒ ರೌಂಡ್‌ಟೇಬಲ್‌ಗಳು, ಹೂಡಿಕೆದಾರರ ಸಂವಾದಗಳು ಮತ್ತು 400 ಕ್ಕೂ ಹೆಚ್ಚು ಪ್ರದರ್ಶಕರನ್ನೊಳಗೊಂಡ ಪ್ರದರ್ಶನವನ್ನು ಒಳಗೊಂಡಿದೆ. ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಸಲುವಾಗಿ, 9 ನೇ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಸೆಂಬ್ಲಿ ಮತ್ತು 4 ನೇ ಅಂತಾರಾಷ್ಟ್ರೀಯ ಹಸಿರು ಜಲಜನಕ ಸಮ್ಮೇಳನದ ಜೊತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. [ಮತ್ತಷ್ಟು ಓದಲು ಕ್ಲಿಕ್ ಮಾಡಿ: ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026]

ಹಸಿರು ಜಲಜನಕವನ್ನು ಹೇಗೆ ಉತ್ಪಾದಿಸಲಾಗುತ್ತದೆ?

.

ಹಸಿರು ಜಲಜನಕವನ್ನು ಮುಖ್ಯವಾಗಿ ನೀರಿನ (H2O) ವಿದ್ಯುತ್ ವಿಭಜನೆ ಮೂಲಕ ಉತ್ಪಾದಿಸಲಾಗುತ್ತದೆ. ವಿದ್ಯುತ್ ವಿಭಜನೆಯು ವಿದ್ಯುತ್ ಬಳಸಿ ಸಂಯುಕ್ತವೊಂದನ್ನು ಸರಳ ಪದಾರ್ಥಗಳಾಗಿ ವಿಭಜಿಸುತ್ತದೆ. ಇಲ್ಲಿ, ನವೀಕರಿಸಬಹುದಾದ ವಿದ್ಯುತ್ ಪ್ರವಾಹವು ನೀರನ್ನು ಜಲಜನಕ (H2) ಮತ್ತು ಆಮ್ಲಜನಕವಾಗಿ (O2) ವಿಭಜಿಸುತ್ತದೆ, ಮತ್ತು ಇದರಿಂದ ಕನಿಷ್ಠ ಪ್ರಮಾಣದ ಇಂಗಾಲ ಮಾತ್ರ ಹೊರಸೂಸುತ್ತದೆ.

2H2O→2H2+O2

ಇದರಲ್ಲಿ ಬಳಕೆಯಾಗುವ ಪ್ರಮುಖ ಉಪಕರಣವೆಂದರೆ ಎಲೆಕ್ಟ್ರೋಲೈಜರ್. ಇದು ವಿದ್ಯುತ್ ಮೂಲಕ್ಕೆ ಸಂಪರ್ಕಿಸಲ್ಪಟ್ಟ ಕ್ಯಾಥೋಡ್ ಮತ್ತು ಆನೋಡ್ ಎಂಬ ಎರಡು ಎಲೆಕ್ಟ್ರೋಡ್‌ಗಳನ್ನು ಒಳಗೊಂಡಿರುತ್ತದೆ. ಇವು ಎಲೆಕ್ಟ್ರೋಲೈಟ್ ಒಳಗೆ ಕಾರ್ಯನಿರ್ವಹಿಸುತ್ತವೆ, ಇದು ಅಯಾನ್‌ಗಳು ಕೋಶದ ಮೂಲಕ ಚಲಿಸಲು ಸಹಾಯ ಮಾಡುತ್ತದೆ. ಒಂದು ಡಯಾಫ್ರಮ್ ಅಯಾನ್‌ಗಳು ಹಾದುಹೋಗಲು ಅವಕಾಶ ನೀಡುತ್ತಲೇ ಅನಿಲಗಳನ್ನು ಪ್ರತ್ಯೇಕವಾಗಿರಿಸುತ್ತದೆ. ವಿದ್ಯುತ್ ಪ್ರವೇಶಿಸಿದಾಗ, ಕ್ಯಾಥೋಡ್‌ನಲ್ಲಿ ಜಲಜನಕ ಮತ್ತು ಆನೋಡ್‌ನಲ್ಲಿ ಆಮ್ಲಜನಕ ರೂಪುಗೊಳ್ಳುತ್ತವೆ. ಈ ಅನಿಲಗಳನ್ನು ಮುಂದಿನ ಬಳಕೆಗಾಗಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಹೀಗಾಗಿ, ಎಲೆಕ್ಟ್ರೋಲೈಜರ್ ನವೀಕರಿಸಬಹುದಾದ ವಿದ್ಯುತ್ ಮತ್ತು ನೀರನ್ನು ಕೈಗಾರಿಕೆ, ಸಾರಿಗೆ ಮತ್ತು ಇತರ ಬಳಕೆಗಳಿಗೆ ಕಡಿಮೆ-ಇಂಗಾಲದ ಇಂಧನವನ್ನಾಗಿ ಪರಿವರ್ತಿಸುತ್ತದೆ.

ನಿಮಗಿದು ಗೊತ್ತೇ?

ವಿದ್ಯುತ್ ವಿಭಜನೆಗೆ ಒಳಪಡಿಸುವ ಮೊದಲು ನೀರನ್ನು ಶುದ್ಧೀಕರಿಸಲಾಗುತ್ತದೆ, ಏಕೆಂದರೆ ಅದರಲ್ಲಿರುವ ಕಲ್ಮಶಗಳು ಕೋಶಗಳನ್ನು ಹಾನಿಗೊಳಿಸಬಹುದು ಮತ್ತು ಅವುಗಳ ಆಯುಷ್ಯವನ್ನು ಕಡಿಮೆ ಮಾಡಬಹುದು. ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್‌ಆರ್‌ಇ) ಪ್ರಕಾರ, ಪ್ರತಿ ಕೆಜಿ ಜಲಜನಕದ ಉತ್ಪಾದನೆಗೆ ಸುಮಾರು ಒಂಬತ್ತು ಲೀಟರ್ ಖನಿಜರಹಿತ ನೀರು ಬೇಕಾಗುತ್ತದೆ. ಇದರ ನಂತರ, ಜಲಜನಕವನ್ನು ಸಂಕುಚಿಸುವ ಮುಂಚಿತವಾಗಿ ಒಣಗಿಸಿ ಶುದ್ಧೀಕರಿಸಲಾಗುತ್ತದೆ. ಭಾರತದ ಹಸಿರು ಜಲಜನಕ ಮಾನದಂಡವು ಈ ಪ್ರತಿಯೊಂದು ಹಂತದಿಂದ ಆಗುವ ಇಂಗಾಲದ ಹೊರಸೂಸುವಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

.

ಹಸಿರು ಜಲಜನಕದ ಅನ್ವಯಗಳು

  • ರಸಗೊಬ್ಬರಗಳು: ಜಲಜನಕ ಮತ್ತು ಸಾರಜನಕದಿಂದ ತಯಾರಾಗುವ ಅಮೋನಿಯಾವು ಯೂರಿಯಾದಂತಹ ಸಾರಜನಕ ರಸಗೊಬ್ಬರಗಳಿಗೆ ಮೂಲ ವಸ್ತುವಾಗಿದೆ. ಪ್ರಸ್ತುತ ಈ ಜಲಜನಕದ ಹೆಚ್ಚಿನ ಭಾಗವು ನೈಸರ್ಗಿಕ ಅನಿಲದಿಂದ ಬರುತ್ತದೆ. ಹಸಿರು ಜಲಜನಕವು ಇದನ್ನು ಬದಲಾಯಿಸಬಲ್ಲದು ಮತ್ತು ಬಹಳ ಕಡಿಮೆ ಇಂಗಾಲದ ಹೊರಸೂಸುವಿಕೆಯೊಂದಿಗೆ 'ಹಸಿರು ಅಮೋನಿಯಾ'ವನ್ನು ಒದಗಿಸುತ್ತದೆ.
  • ಪೆಟ್ರೋಲಿಯಂ ಪರಿಷ್ಕರಣಾ ಘಟಕಗಳು: ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಗಂಧಕವನ್ನು ತೆಗೆದುಹಾಕಲು ರಿಫೈನರಿಗಳು ಜಲಜನಕವನ್ನು ಬಳಸುತ್ತವೆ, ಇದರಿಂದ ಇಂಧನಗಳು ಹೆಚ್ಚು ಸ್ವಚ್ಛವಾಗಿ ಉರಿಯುತ್ತವೆ. ಭಾರವಾದ ತೈಲವನ್ನು ಡೀಸೆಲ್, ವಿಮಾನ ಇಂಧನ ಮತ್ತು ನ್ಯಾಫ್ತಾದಂತಹ ಹಗುರವಾದ ಇಂಧನಗಳಾಗಿ ಉನ್ನತೀಕರಿಸಲು ಸಹ ಇದನ್ನು ಬಳಸಲಾಗುತ್ತದೆ. ಈ ಇಂಧನಗಳು ರಸ್ತೆ ಸಾರಿಗೆ, ವಿಮಾನಯಾನ ಮತ್ತು ಕೈಗಾರಿಕೆಗೆ ಸೇವೆ ಸಲ್ಲಿಸುತ್ತವೆ. ಹೆಚ್ಚಿನ ರಿಫೈನರಿ ಜಲಜನಕವು ಪಳೆಯುಳಿಕೆ ಇಂಧನಗಳಿಂದ ಬರುವುದರಿಂದ, ಹಸಿರು ಪೂರೈಕೆಯು ಪರಿಷ್ಕರಣಾ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು.
  • ಉಕ್ಕು: ಸಾಂಪ್ರದಾಯಿಕ ಉಕ್ಕು ತಯಾರಿಕೆಯಲ್ಲಿ ಕಲ್ಲಿದ್ದಲನ್ನು ಬಳಸಿ ಅದಿರಿನಿಂದ ಆಮ್ಲಜನಕವನ್ನು ಬೇರ್ಪಡಿಸಲಾಗುತ್ತದೆ, ಇದರಿಂದ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ನೇರ ಅಪಕರ್ಷಿತ ಕಬ್ಬಿಣದ ಮಾರ್ಗಗಳಲ್ಲಿ, ಹಸಿರು ಜಲಜನಕವು ಈ ಕೆಲಸವನ್ನು ಮಾಡಬಹುದು. ಆಗ ಅಪಕರ್ಷಣ ಹಂತದಲ್ಲಿ ಇಂಗಾಲದ ಡೈಆಕ್ಸೈಡ್ ಬದಲಿಗೆ ನೀರಾವಿ ಬಿಡುಗಡೆಯಾಗುತ್ತದೆ.
  • ನಗರ ಅನಿಲ ಜಾಲಗಳು: ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯ ಹೊಂದಾಣಿಕೆಗೆ ಒಳಪಟ್ಟು, ಸೀಮಿತ ಪ್ರಮಾಣದಲ್ಲಿ ನೈಸರ್ಗಿಕ ಅನಿಲದೊಂದಿಗೆ ಹಸಿರು ಜಲಜನಕವನ್ನು ಬೆರೆಸಬಹುದು. ಇದು ಅಸ್ತಿತ್ವದಲ್ಲಿರುವ ಅನಿಲ ಜಾಲಗಳು ಮನೆಗಳು, ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಜಲಜನಕ-ನೈಸರ್ಗಿಕ ಅನಿಲ ಮಿಶ್ರಣವನ್ನು ಪೂರೈಸಲು ಅನುವು ಮಾಡಿಕೊಡುತ್ತದೆ. ಇಂತಹ ಮಿಶ್ರಣವು ಅಸ್ತಿತ್ವದಲ್ಲಿರುವ ವಿತರಣಾ ಮೂಲಸೌಕರ್ಯವನ್ನು ಬಳಸಿಕೊಳ್ಳುವಾಗ ಪಳೆಯುಳಿಕೆ ಇಂಧನ ಬಳಕೆ ಮತ್ತು ಸಂಬಂಧಿತ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
  • ರಸ್ತೆ ಮತ್ತು ರೈಲು ಸಾರಿಗೆ: ಫ್ಯೂಯಲ್-ಸೆಲ್ ವಾಹನಗಳು ಹಸಿರು ಜಲಜನಕವನ್ನು ವಾಹನದ ಒಳಗೆಯೇ ವಿದ್ಯುತ್ ಆಗಿ ಪರಿವರ್ತಿಸುತ್ತವೆ, ಇದು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಚಲಾಯಿಸುತ್ತದೆ. ಬಳಕೆಯ ಸ್ಥಳದಲ್ಲಿ ಇದರ ಏಕೈಕ ಹೊರಸೂಸುವಿಕೆಯೆಂದರೆ ನೀರಾವಿ. ಇದು ದೀರ್ಘ ವ್ಯಾಪ್ತಿ ಮತ್ತು ತ್ವರಿತ ಮರುಪೂರಣದ ಅಗತ್ಯವಿರುವ ಬಸ್‌ಗಳು, ಟ್ರಕ್‌ಗಳು ಮತ್ತು ರೈಲುಗಳಿಗೆ ಅತ್ಯಂತ ಸೂಕ್ತವಾಗಿದೆ.

ನಿಮಗಿದು ಗೊತ್ತೇ?

ಜಿಂದ್–ಸೋನಿಪತ್ ಮಾರ್ಗದಲ್ಲಿ ಜುಲೈ 17, 2026 ರಂದು ಭಾರತದ ಮೊದಲ ದೇಶೀಯ ಜಲಜನಕ ಚಾಲಿತ ರೈಲನ್ನು ಲೋಕಾರ್ಪಣೆ ಮಾಡಲಾಯಿತು. 10 ಕೋಚ್‌ಗಳ ಈ ರೈಲು ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಜಿಂದ್‌ನಲ್ಲಿರುವ ಸೌಲಭ್ಯ ಕೇಂದ್ರವು ಸುಮಾರು 3,000 ಕೆಜಿ ಜಲಜನಕವನ್ನು ಸಂಗ್ರಹಿಸಿಡುತ್ತದೆ. ಈ ರೈಲು ಕೇವಲ ನೀರಾವಿ ಮತ್ತು ಉಷ್ಣವನ್ನು ಮಾತ್ರ ಹೊರಹಾಕುತ್ತದೆ (ಯಾವುದೇ ಇಂಗಾಲದ ಹೊರಸೂಸುವಿಕೆ ಇರುವುದಿಲ್ಲ). [ಮತ್ತಷ್ಟು ಓದಲು ಕ್ಲಿಕ್ ಮಾಡಿ]

.

  • ಹಡಗು ಸಾರಿಗೆ: ಹಸಿರು ಜಲಜನಕವನ್ನು ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್ ಆಗಿ ಪರಿವರ್ತಿಸಬಹುದು, ಇವುಗಳನ್ನು ಹಡಗುಗಳಿಗೆ ಇಂಧನವಾಗಿ ಬಳಸಬಹುದು. ಇವು ದೀರ್ಘ ಸಮುದ್ರ ಪ್ರಯಾಣಗಳಲ್ಲಿ ಸಾಂಪ್ರದಾಯಿಕ ಸಾಗರ ಇಂಧನಗಳನ್ನು ಬದಲಾಯಿಸಬಲ್ಲವು. ಇವುಗಳ ಬಳಕೆ ಎಂಜಿನ್ ಹೊಂದಾಣಿಕೆ, ಸುರಕ್ಷತಾ ಅಗತ್ಯತೆಗಳು ಮತ್ತು ಬಂದರು ಮೂಲಸೌಕರ್ಯವನ್ನು ಅವಲಂಬಿಸಿರುತ್ತದೆ.
  • ರಫ್ತು: ಕಡಿಮೆ-ಇಂಗಾಲದ ಹೊರಸೂಸುವಿಕೆಯ ಇಂಧನಗಳನ್ನು ಹುಡುಕುತ್ತಿರುವ ದೇಶಗಳಿಗೆ ಭಾರತವು ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳಾದ ಹಸಿರು ಅಮೋನಿಯಾ ಹಾಗೂ ಹಸಿರು ಮೆಥನಾಲ್ ಅನ್ನು ಪೂರೈಸಬಹುದು. ಭಾರತದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳು ಈ ಪೂರೈಕೆಗೆ ಬೆಂಬಲ ನೀಡಬಲ್ಲವು. ರಫ್ತುಗಳು ಕೈಗಾರಿಕಾ ಅವಕಾಶಗಳನ್ನು ತೆರೆಯಬಹುದು ಮತ್ತು ಕಡಿಮೆ-ಹೊರಸೂಸುವಿಕೆ ಇಂಧನ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಬಹುದು. [ಓದಲು ಕ್ಲಿಕ್ ಮಾಡಿ: ಭಾರತದ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯ]

ಸರ್ಕಾರಿ ಧೋರಣೆಯಲ್ಲಿ ಸಮನ್ವಯತೆ ತರುವುದು

ಹಸಿರು ಜಲಜನಕದ ಬಳಕೆಯನ್ನು ಎಲ್ಲಾ ಕ್ಷೇತ್ರಗಳಾದ್ಯಂತ ಹೆಚ್ಚಿಸಲು ಸರ್ಕಾರವು ಸಮಗ್ರ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಇದರ ಅನುಷ್ಠಾನವನ್ನು ಉತ್ತೇಜಿಸಲು ಇದು ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳು, ಇಲಾಖೆಗಳು, ಏಜೆನ್ಸಿಗಳು ಹಾಗೂ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಪ್ರತಿಯೊಂದು ಸಚಿವಾಲಯಕ್ಕೂ ನಿರ್ದಿಷ್ಟ ಪಾತ್ರವಿದೆ. ಉದಾಹರಣೆಗೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಿಫೈನರಿಗಳಲ್ಲಿ ಮತ್ತು ನಗರ ಅನಿಲ ವಿತರಣೆಯಲ್ಲಿ ಇದರ ಬಳಕೆಯನ್ನು ಉತ್ತೇಜಿಸುತ್ತದೆ; ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ದೇಶೀಯ ಹಸಿರು ಅಮೋನಿಯಾ ಆಧಾರಿತ ರಸಗೊಬ್ಬರಗಳನ್ನು ಪ್ರೋತ್ಸಾಹಿಸುತ್ತದೆ; ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನಿಯಮಗಳು, ಮಾನದಂಡಗಳು ಮತ್ತು ಕೋಡ್‌ಗಳ ಮೂಲಕ ಸಾರಿಗೆ ಬಳಕೆಯನ್ನು ಸುಲಭಗೊಳಿಸುತ್ತದೆ; ಉಕ್ಕು ಸಚಿವಾಲಯವು ಉಕ್ಕು ತಯಾರಿಕೆಯಲ್ಲಿ ಇದರ ಅಳವಡಿಕೆಯನ್ನು ಮುನ್ನಡೆಸುತ್ತದೆ; ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಾಗತಿಕ ಪಾಲುದಾರರೊಂದಿಗೆ ಸಹಯೋಗವನ್ನು ಸುಗಮಗೊಳಿಸುತ್ತದೆ.

ಭಾರತದ ಹಸಿರು ಜಲಜನಕ ನೀತಿ ಸಂರಚನೆ

ಎನ್‌ಜಿಎಚ್‌ಎಂ: ಸಂಪೂರ್ಣ ಪರಿಸರ ವ್ಯವಸ್ಥೆಗಾಗಿ ಒಂದು ಮಿಷನ್ (ಎನ್‌ಜಿಎಚ್‌ಎಂ)

ಭಾರತವನ್ನು ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಎಂಎನ್‌ಆರ್‌ಇ (ಎಂಎನ್‌ಆರ್‌ಇ) ರಾಷ್ಟ್ರೀಯ ಹಸಿರು ಜಲಜನಕ ಮಿಷನ್ (ಎನ್‌ಜಿಎಚ್‌ಎಂ) ಅನ್ನು ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಸಚಿವ ಸಂಪುಟವು ಜನವರಿ 2023 ರಲ್ಲಿ 19,744 ಕೋಟಿ ರೂ.ಗಳ ವೆಚ್ಚದೊಂದಿಗೆ ಈ ಮಿಷನ್‌ಗೆ ಅನುಮೋದನೆ ನೀಡಿತು. ಇದು 2030 ರ ವೇಳೆಗೆ ವರ್ಷಕ್ಕೆ ಕನಿಷ್ಠ 5 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ರಫ್ತು ಬೇಡಿಕೆಯೊಂದಿಗೆ, ಇದು ವರ್ಷಕ್ಕೆ 10 ಎಂಎಂಟಿ ತಲುಪಬಹುದು. ಈ ಮಿಷನ್ ಈ ಕೆಳಗಿನ ಘಟಕಗಳನ್ನು ಹೊಂದಿದೆ.

ಎಸ್‌ಐಜಿಎಚ್‌ಟಿ: ಮಾರುಕಟ್ಟೆಯ ಎರಡೂ ಬದಿಗಳಿಗೆ ಬೆಂಬಲ

ಹಸಿರು ಜಲಜನಕ ಪರಿವರ್ತನೆಯ ಕಾರ್ಯತಂತ್ರದ ಮಧ್ಯಸ್ಥಿಕೆಗಳು ಕಾರ್ಯಕ್ರಮವು ಎನ್‌ಜಿಎಚ್‌ಎಂ ನ ಪ್ರಮುಖ ಘಟಕವಾಗಿದೆ. 2029-30 ರವರೆಗಿನ ಇದರ ವೆಚ್ಚ 17,490 ಕೋಟಿ ರೂ. ಇದು ಎರಡು ಉದ್ದೇಶಗಳಿಗಾಗಿ ಪ್ರೋತ್ಸಾಹಕಗಳನ್ನು ಒದಗಿಸುತ್ತದೆ: ದೇಶೀಯ ಎಲೆಕ್ಟ್ರೋಲೈಜರ್ ತಯಾರಿಕೆ ಮತ್ತು ಹಸಿರು ಜಲಜನಕ ಉತ್ಪಾದನೆ. ಒಟ್ಟಾಗಿ, ಅವು ದೇಶೀಯ ಸಾಮರ್ಥ್ಯವನ್ನು ಬಲಪಡಿಸುತ್ತವೆ ಮತ್ತು ಉತ್ಪಾದನೆಯನ್ನು ವೇಗಗೊಳಿಸುತ್ತವೆ.

ಪ್ರಮುಖ ಪ್ರಗತಿ

  • 15 ಕಂಪನಿಗಳಿಗೆ ವರ್ಷಕ್ಕೆ 3,000 ಎಂಡಬ್ಲು ಸಾಮರ್ಥ್ಯದ ಎಲೆಕ್ಟ್ರೋಲೈಜರ್ ತಯಾರಿಕೆಗಾಗಿ ಪ್ರೋತ್ಸಾಹಕಗಳನ್ನು ನೀಡಲಾಗಿದೆ. ಇದು ಆಮದು ಮಾಡಿಕೊಳ್ಳುವ ಪೂರೈಕೆ ಸರಪಳಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
  • ಫೆಬ್ರವರಿ 2026ರ ವೇಳೆಗೆ ವರ್ಷಕ್ಕೆ ಸುಮಾರು 8,000 ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವನ್ನು ಕಮಿಷನ್ (ಆರಂಭ) ಮಾಡಲಾಗಿದೆ.
  • ವರ್ಷಕ್ಕೆ 8,62,000 ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯಕ್ಕಾಗಿ ಪ್ರೋತ್ಸಾಹಕಗಳನ್ನು ನೀಡಲಾಗಿದೆ.
  • ಅಕ್ಟೋಬರ್ 2026 ರವರೆಗೆ, ಭಾರತೀಯ ಕಂಪನಿಗಳು ಒಟ್ಟು 5.5 ಲಕ್ಷ ಎಂಟಿಪಿಎ ಗಿಂತ ಹೆಚ್ಚಿನ ವಿಶ್ವದ ಅತಿದೊಡ್ಡ ಹಸಿರು ಜಲಜನಕ ಖರೀದಿ ಬದ್ಧತೆಗಳಿಗೆ ಸಹಿ ಹಾಕಿವೆ - ಇದು ಹಸಿರು ಜಲಜನಕ ಪೂರೈಕೆ ಬದ್ಧತೆಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ರೂಪಿಸಿದೆ.

ಪೈಲಟ್ ಯೋಜನೆಗಳು

ಎನ್‌ಜಿಎಚ್‌ಎಂ ಕಡಿಮೆ-ಮಾಡಲು ಕಷ್ಟಕರವಾಗಿರುವ ಕ್ಷೇತ್ರಗಳಲ್ಲಿ ಪಳೆಯುಳಿಕೆ ಇಂಧನಗಳು ಮತ್ತು ಕಚ್ಚಾವಸ್ತುಗಳನ್ನು ಬದಲಾಯಿಸುವ ಪೈಲಟ್ ಯೋಜನೆಗಳನ್ನು ಬೆಂಬಲಿಸುತ್ತದೆ. ಇವುಗಳಲ್ಲಿ ಉಕ್ಕು, ಭಾರಿ ವಾಹನ ಸಾರಿಗೆ ಮತ್ತು ಹಡಗು ರಂಗಗಳು ಸೇರಿವೆ. ಈ ಪೈಲಟ್ ಯೋಜನೆಗಳು ತಾಂತ್ರಿಕ, ನಿಯಂತ್ರಣ ಮತ್ತು ಮೂಲಸೌಕರ್ಯಗಳ ಕೊರತೆಗಳನ್ನು ಗುರುತಿಸುವ ಗುರಿಯನ್ನು ಹೊಂದಿವೆ. ಅವು ಪೂರೈಕೆ ಸರಪಳಿಗಳು ಮತ್ತು ತಂತ್ರಜ್ಞಾನದ ಏಕೀಕರಣವನ್ನೂ ಪರೀಕ್ಷಿಸುತ್ತವೆ. ಅವುಗಳ ಸಂಶೋಧನಾ ಫಲಿತಾಂಶಗಳು ವಾಣಿಜ್ಯ-ಮಟ್ಟದ ಅನುಷ್ಠಾನ ಮತ್ತು ಅಗತ್ಯವಿರುವ ನೀತಿ ಬೆಂಬಲಕ್ಕೆ ಮಾರ್ಗದರ್ಶನ ನೀಡುತ್ತವೆ. ಈ ಮಿಷನ್ 2029-30 ರವರೆಗೆ ಕಡಿಮೆ-ಇಂಗಾಲದ ಉಕ್ಕು ತಯಾರಿಕೆಗಾಗಿ 455 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಅಲ್ಲದೆ, 2025-26 ರವರೆಗೆ ಸಾರಿಗೆ ಕ್ಷೇತ್ರಕ್ಕೆ 496 ಕೋಟಿ ರೂ. ಮತ್ತು ಹಡಗು ರಂಗಕ್ಕೆ 115 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ಪ್ರಮುಖ ಬೆಳವಣಿಗೆಗಳು

  • ಉಕ್ಕು ಕ್ಷೇತ್ರದಲ್ಲಿ ಐದು ಪೈಲಟ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಶೇ. 100 ರಷ್ಟು ಹಸಿರು ಜಲಜನಕದ ಚುಚ್ಚುಮದ್ದನ್ನು ಪರೀಕ್ಷಿಸಲು 84 ಕೋಟಿ ರೂ. ಅನುಮೋದಿಸಲಾಗಿದೆ.
  • ಹನ್ನೆರಡು ಯೋಜನೆಗಳು 70 ಜಲಜನಕ ವಾಹನಗಳನ್ನು ನಿಯೋಜಿಸಲಿವೆ: 27 ಬಸ್‌ಗಳು ಮತ್ತು 43 ಟ್ರಕ್‌ಗಳು. ಇವುಗಳಲ್ಲಿ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಇಂಟರ್ನಲ್ ಕಂಬಶ್ಚನ್ ಇಂಜಿನ್ (H₂-ICE) ವಾಹನಗಳು ಸೇರಿವೆ.
  • ಈ ಯೋಜನೆಗಳು 21 ಮಾರ್ಗಗಳಲ್ಲಿ 16 ಜಲಜನಕ ಮರುಪೂರಣ ಕೇಂದ್ರಗಳನ್ನು ಸಹ ಒಳಗೊಂಡಿವೆ. 41.58 ಕೋಟಿ ರೂ.ಗಳ ಹಣಕಾಸಿನ ನೆರವನ್ನು ಬಿಡುಗಡೆ ಮಾಡಲಾಗಿದೆ.
  • ವಿ.ಒ. ಚಿದಂಬರನಾರ್ ಪೋರ್ಟ್ ಅಥಾರಿಟಿಯು ಹಸಿರು ಮೆಥನಾಲ್‌ಗಾಗಿ ಬಂಕರಿಂಗ್ ಮತ್ತು ಮರುಪೂರಣ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಪೈಲಟ್ ಯೋಜನೆಯನ್ನು ನೀಡಿದೆ. ಎಂಎನ್‌ಆರ್‌ಇ ಅನುದಾನದ 35 ಕೋಟಿ ರೂ. ಸೇರಿದಂತೆ ಈ ಯೋಜನೆಯ ಒಟ್ಟು ವೆಚ್ಚ 38.12 ಕೋಟಿ ರೂ. ಆಗಿದೆ.

ಹಸಿರು ಜಲಜನಕ ಕೇಂದ್ರಗಳು ಮತ್ತು ಹೈಡ್ರೋಜನ್ ವ್ಯಾಲಿ ನಾವೀನ್ಯತಾ ಕ್ಲಸ್ಟರ್‌ಗಳು

ಜಲಜನಕವನ್ನು ಸಾಗಿಸುವುದು ಕಷ್ಟಕರವಾದ ಕೆಲಸವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಮಿಷನ್ ಹಸಿರು ಜಲಜನಕ ಕೇಂದ್ರಗಳು ಮತ್ತು ಎಚ್‌ವಿಐಸಿ ಗಳನ್ನು ಪ್ರೋತ್ಸಾಹಿಸುತ್ತದೆ. ಈ ಕ್ಲಸ್ಟರ್ ವಿಧಾನವು ಉತ್ಪಾದನೆ, ಬಳಕೆ ಮತ್ತು ಮೂಲಸೌಕರ್ಯಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ. ಇದು ಯೋಜನೆಯ ಕಾರ್ಯಸಾಧ್ಯತೆಯನ್ನು ಸುಧಾರಿಸುತ್ತದೆ ಮತ್ತು ದೊಡ್ಡ ಪ್ರಮಾಣದ ಆರ್ಥಿಕತೆಯನ್ನು ಸಕ್ರಿಯಗೊಳಿಸುತ್ತದೆ. ಗೊತ್ತುಪಡಿಸಿದ ಕೇಂದ್ರಗಳಲ್ಲಿರುವ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದು. ಕೇಂದ್ರಗಳು ಮತ್ತು ಸಂಬಂಧಿತ ಯೋಜನೆಗಳಿಗಾಗಿ ಮಿಷನ್ 2025-26 ರವರೆಗೆ 400 ಕೋಟಿ ರೂ.ಗಳ ವೆಚ್ಚವನ್ನು ಹೊಂದಿದೆ. ಈ ಉಕ್ರಮಗಳು ಹಸಿರು ಹೂಡಿಕೆಯನ್ನು ಆಕರ್ಷಿಸುವ ಮತ್ತು ನಾವೀನ್ಯತೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿವೆ.

ಪ್ರಮುಖ ಪ್ರಗತಿ

  •  ಎಂಎನ್‌ಆರ್‌ಇ ದೀನ್‌ದಯಾಳ್ ಪೋರ್ಟ್ (ಕಾಂಡ್ಲಾ, ಗುಜರಾತ್), ವಿ.ಒ. ಚಿದಂಬರನಾರ್ ಪೋರ್ಟ್ (ತುತಿಕೊರಿನ್, ತಮಿಳುನಾಡು) ಮತ್ತು ಪರದೀಪ್ ಪೋರ್ಟ್ (ಒಡಿಶಾ) ಅನ್ನು ಹಸಿರು ಜಲಜನಕ ಕೇಂದ್ರಗಳಾಗಿ ಗುರುತಿಸಿದೆ.
  • ಜುಲೈ 2025 ರಲ್ಲಿ ಕಾಂಡ್ಲಾ ಬಂದರಿನಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ 1 ಎಂಡಬ್ಲು ಹಸಿರು ಜಲಜನಕ ಘಟಕವನ್ನು ಕಾರ್ಯಾರಂಭ ಮಾಡಲಾಯಿತು.
  • ಜೋಧ್‌ಪುರ್, ಒಡಿಶಾ, ಪುಣೆ ಮತ್ತು ಕೇರಳ - ಈ ನಾಲ್ಕು ಪ್ರದೇಶಗಳಲ್ಲಿ ಹೈಡ್ರೋಜನ್ ವ್ಯಾಲಿ ನಾವೀನ್ಯತಾ ಕ್ಲಸ್ಟರ್‌ಗಳಿಗೆ ಅನುಮೋದನೆ ನೀಡಲಾಗಿದೆ.

ಸಬಲೀಕರಣ ನೀತಿ ಚೌಕಟ್ಟು

ಹಸಿರು ಜಲಜನಕವನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮಿಷನ್ ಸಮಗ್ರ ಸರ್ಕಾರಿ ವಿಧಾನವನ್ನು ಅನುಸರಿಸುತ್ತದೆ. ಸವಲುಗಳು ಮತ್ತು ಯೋಜನೆಗಳ ಸುಲಭೀಕರಣಕ್ಕಾಗಿ ಎಂಎನ್‌ಆರ್‌ಇ ಕೇಂದ್ರ ಮತ್ತು ರಾಜ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಪ್ರಮುಖ ಕ್ರಮಗಳಲ್ಲಿ ಅಂತರರಾಜ್ಯ ಪ್ರಸರಣ ಶುಲ್ಕಗಳನ್ನು ಮನ್ನಾ ಮಾಡುವುದು ಮತ್ತು ನವೀಕರಿಸಬಹುದಾದ ಇಂಧನ ಬ್ಯಾಂಕಿಂಗ್ ಅನ್ನು ಸುಲಭಗೊಳಿಸುವುದು ಸೇರಿವೆ. ಅವು ಸಮಯಕ್ಕೆ ಬದ್ಧವಾದ ಮುಕ್ತ ಪ್ರವೇಶ   ಮತ್ತು ಗ್ರಿಡ್ ಸಂಪರ್ಕವನ್ನು ಸಹ ಒಳಗೊಂಡಿವೆ. ನವೀಕರಿಸಬಹುದಾದ ಸಾಮರ್ಥ್ಯ, ಪ್ರಸರಣ, ಬ್ಯಾಂಕಿಂಗ್ ಮತ್ತು ಶೇಖರಣೆಗಾಗಿ ಸರ್ಕಾರವು ಯೋಜನೆಯನ್ನು ಸಮನ್ವಯಗೊಳಿಸುತ್ತದೆ. ಸೌರ ಉದ್ಯಾನವನಗಳು, ಉತ್ಪಾದನಾ ವಲಯಗಳು ಮತ್ತು ವಿಶೇಷ ಆರ್ಥಿಕ ವಲಯಗಳನ್ನು (ಎಸ್‌ಇಝಡ್‌ಗಳು) ಜಲಜನಕ ಸೌಲಭ್ಯಗಳಿಗೂ ವಿಸ್ತರಿಸಬಹುದು. ಮಿಷನ್ ಅಂತಾರಾಷ್ಟ್ರೀಯ ಹಸಿರು ಹಣಕಾಸು, ಹಸಿರು ಬಾಂಡ್‌ಗಳು ಮತ್ತು ನವೀನ ಹಣಕಾಸು ವ್ಯವಸ್ಥೆಗಳನ್ನೂ ಅನ್ವೇಷಿಸುತ್ತದೆ.

ಪ್ರಮುಖ ಪ್ರಗತಿ

  • 2030ರ ಡಿಸೆಂಬರ್ 31ರೊಳಗೆ ಕಾರ್ಯಾರಂಭಗೊಳ್ಳುವ ಹಸಿರು ಜಲಜನಕ ಮತ್ತು ಹಸಿರು ಅಮೋನಿಯಾ ಸ್ಥಾವರಗಳಿಗೆ 25 ವರ್ಷಗಳವರೆಗೆ ಅಂತರ್-ರಾಜ್ಯ ಪ್ರಸರಣ ವ್ಯವಸ್ಥೆ ಶುಲ್ಕಗಳಿಂದ ವಿನಾಯತಿ ನೀಡಲಾಗಿದೆ. ISTS ಎಂದರೆ ರಾಜ್ಯ ಗಡಿಗಳ ಮೂಲಕ ವಿದ್ಯುತ್ ಸಾಗಿಸಲು ವಿಧಿಸುವ ಶುಲ್ಕಗಳು. ಈ ವಿನಾಯತಿಯು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆ.
  • ಹಸಿರು ಶಕ್ತಿ ಕಾರಿಡಾರ್ ಯೋಜನೆಯು ಗ್ರಿಡ್‌ಗೆ ನವೀಕರಿಸಬಹುದಾದ ವಿದ್ಯುತ್ ಅನ್ನು ಕೊಂಡೊಯ್ಯುವ ವಿದ್ಯುತ್ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳನ್ನು ಬೆಂಬಲಿಸುತ್ತದೆ. ರಾಷ್ಟ್ರೀಯ ಪ್ರಸರಣ ಯೋಜನೆಯು ಉತ್ಪಾದನಾ ಮತ್ತು ಬಳಕೆಯ ಕೇಂದ್ರಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. [ಮತ್ತಷ್ಟು ಓದಲು ಕ್ಲಿಕ್ ಮಾಡಿ]
  • ವಿಶೇಷ ಆರ್ಥಿಕ ವಲಯ ಕಾಯ್ದೆ, 2005ರ ಸೆಕ್ಷನ್ 26ರ ಅಡಿಯಲ್ಲಿರುವ ಸುಂಕದ ಸೌಲಭ್ಯಗಳನ್ನು, ಸ್ವಂತ ಬಳಕೆಗಾಗಿ ಮಾತ್ರ ನವೀಕರಿಸಬಹುದಾದ ಇಂಧನ ಉಪಕರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಅರ್ಹ ಘಟಕಗಳಿಗೆ ವಿಸ್ತರಿಸಲಾಗಿದೆ. ಇದು ತಮ್ಮ ಸ್ವಂತ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಎಸ್‌ಇಝಡ್‌ ಗಳ ಒಳಗೆ ನವೀಕರಿಸಬಹುದಾದ ಇಂಧನ ಸೌಲಭ್ಯಗಳನ್ನು ಸ್ಥಾಪಿಸುವ ವೆಚ್ಚವನ್ನು ಕಡಿಮೆ ಮಾಡಬಹುದು.
  • ನವೀಕರಿಸಬಹುದಾದ ಇಂಧನವನ್ನು ಬಳಸಿ ನೀರಿನ ವಿದ್ಯುತ್ ವಿಭಜನೆಯ ಮೂಲಕ ಹಸಿರು ಜಲಜನಕ ಅಥವಾ ಹಸಿರು ಅಮೋನಿಯಾವನ್ನು ಉತ್ಪಾದಿಸುವ ಸ್ವತಂತ್ರ ಸ್ಥಾವರಗಳನ್ನು ಪರಿಸರ ಪ್ರಭಾವ ಮೌಲ್ಯಮಾಪನ ಅಧಿಸೂಚನೆ, 2006ರ ಅಡಿಯಲ್ಲಿ ಮುಂಗಡ ಪರಿಸರ ಅನುಮೋದನೆಯಿಂದ ವಿನಾಯತಿ ನೀಡಲಾಗಿದೆ. ಇದು ಅರ್ಹ ಯೋಜನೆಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.
  • ವಿಶೇಷ ಆರ್ಥಿಕ ವಲಯ ಅಥವಾ ರಫ್ತು ಆಧಾರಿತ ಘಟಕದ ಒಳಗೆ ಇರುವ ನವೀಕರಿಸಬಹುದಾದ ಇಂಧನ ಸ್ಥಾವರಗಳು, ಹಸಿರು ಜಲಜನಕ ಉತ್ಪಾದನಾ ಸ್ಥಾವರಗಳು ಅಥವಾ ಅವುಗಳ ಉತ್ಪನ್ನಗಳಿಗೆ ಮಾತ್ರ ವಿದ್ಯುತ್ ಪೂರೈಸುವಾಗ ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ ಹಾಗೂ ಪರಿಷ್ಕೃತ ಮಾದರಿಗಳು ಮತ್ತು ತಯಾರಕರ ಪಟ್ಟಿ ಅವಶ್ಯಕತೆಗಳಿಂದ ವಿನಾಯತಿ ಪಡೆದಿರುತ್ತವೆ. ಇದು ಅನ್ವಯವಾಗುವ ವಿನಾಯತಿ ಷರತ್ತುಗಳಿಗೆ ಒಳಪಟ್ಟು, ಅರ್ಹ ಯೋಜನೆಗಳಿಗೆ ನವೀಕರಿಸಬಹುದಾದ ಇಂಧನ ಉಪಕರಣಗಳನ್ನು ಪಡೆದುಕೊಳ್ಳುವಲ್ಲಿ ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತದೆ.
  • ಹಸಿರು ಜಲಜನಕ ಮತ್ತು ಹಸಿರು ಅಮೋನಿಯಾ ನೀತಿಯು ಅನ್ವಯವಾಗುವ ನಿಬಂಧನೆಗಳಿಗೆ ಒಳಪಟ್ಟು, 15 ದಿನಗಳಲ್ಲಿ ಮುಕ್ತ ಪ್ರವೇಶ ಮತ್ತು 30 ದಿನಗಳವರೆಗೆ ಹೆಚ್ಚುವರಿ ನವೀಕರಿಸಬಹುದಾದ ವಿದ್ಯುತ್ ಅನ್ನು ಬ್ಯಾಂಕ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಮುಕ್ತ ಪ್ರವೇಶವು ಉತ್ಪಾದಕರಿಗೆ ತಮ್ಮ ಸ್ಥಳೀಯ ವಿದ್ಯುತ್ ವಿತರಣಾ ಕಂಪನಿಯಲ್ಲದೆ ಇತರ ಮೂಲಗಳಿಂದ ನವೀಕರಿಸಬಹುದಾದ ವಿದ್ಯುತ್ ಅನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಬ್ಯಾಂಕಿಂಗ್ ಎಂದರೆ ಹೆಚ್ಚುವರಿ ವಿದ್ಯುತ್ ಅನ್ನು ಕ್ರೆಡಿಟ್ ರೂಪದಲ್ಲಿ ಸಂಗ್ರಹಿಸಿ ನಂತರ ಬಳಸುವುದು.

ಜಲಜನಕದ ಶೇಖರಣೆ ಮತ್ತು ಸುರಕ್ಷತೆ

ಜಲಜನಕವು ಹಗುರವಾದ ಅಂಶವಾಗಿದೆ ಮತ್ತು ಸುಲಭವಾಗಿ ಉರಿಯುತ್ತದೆ, ಆದ್ದರಿಂದ ಶೇಖರಣೆ, ನಿರ್ವಹಣೆ ಮತ್ತು ಸೋರಿಕೆ ಪತ್ತೆಗೆ ಕಟ್ಟುನಿಟ್ಟಿನ ಮಾನದಂಡಗಳ ಅಗತ್ಯವಿದೆ. ಸುರಕ್ಷಿತ ಉದ್ಯಮ ಪದ್ಧತಿಗಳಿಗೆ ಮಾರ್ಗದರ್ಶನ ನೀಡಲು ಭಾರತವು ಹಸಿರು ಜಲಜನಕ, ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್‌ಗಾಗಿ ಮಾನದಂಡಗಳನ್ನು ಅಧಿಸೂಚಿಸಿದೆ.

ನಿಯಮಗಳು ಮತ್ತು ಮಾನದಂಡಗಳು

ಮಿಷನ್ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ನಿಯಮಗಳು ಮತ್ತು ಮಾನದಂಡಗಳನ್ನು ರೂಪಿಸುತ್ತಿದೆ. ಉದ್ಯಮದ ಬೆಳವಣಿಗೆಯನ್ನು ಸಕ್ರಿಯಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳೊಂದಿಗೆ ಸಮನ್ವಯಗೊಳಿಸುವುದು ಮುಖ್ಯ ಉದ್ದೇಶವಾಗಿದೆ.

ಪ್ರಮುಖ ಪ್ರಗತಿ

  • ಭಾರತದ ಹಸಿರು ಜಲಜನಕದ ಮಾನದಂಡವನ್ನು ಅಧಿಸೂಚಿಸಲಾಗಿದೆ. ಇದು 12 ತಿಂಗಳ ಅವಧಿಯಲ್ಲಿ ಸರಾಸರಿಯಾಗಿ, ಉತ್ಪಾದನಾ ಪ್ರಕ್ರಿಯೆಯ ಹಂತದವರೆಗೆ ಪ್ರತಿ ಕೆಜಿ ಜಲಜನಕಕ್ಕೆ ಗರಿಷ್ಠ 2 ಕೆಜಿ CO₂ ಸಮಾನವಾದ ಮಿತಿಯನ್ನು ನಿಗದಿಪಡಿಸುತ್ತದೆ. ಇದು ಒಂದು ಸಾಮಾನ್ಯ ಮಾನದಂಡವನ್ನು ಸೃಷ್ಟಿಸಿದೆ.
  • ಪರೀಕ್ಷಾ ಸೌಲಭ್ಯಗಳು, ಮೂಲಸೌಕರ್ಯಗಳು ಮತ್ತು ಮಾನದಂಡಗಳಿಗಾಗಿ ಸಾಂಸ್ಥಿಕ ಬೆಂಬಲವನ್ನು ನಿಧಿ ಒದಗಿಸಲು ಯೋಜನೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
  • ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್‌ಗಾಗಿ ಮಾನದಂಡಗಳನ್ನು ಅಧಿಸೂಚಿಸಲಾಗಿದೆ. ಇವು ಉತ್ಪಾದನೆ ಮತ್ತು ವ್ಯಾಪಾರವನ್ನು ಬೆಂಬಲಿಸುವ ಮೂಲಕ ಹೊರಸೂಸುವಿಕೆ ಮಿತಿಗಳು ಮತ್ತು ಅರ್ಹತಾ ಷರತ್ತುಗಳನ್ನು ನಿಗದಿಪಡಿಸುತ್ತವೆ.
  • ಎಂಎನ್‌ಆರ್‌ಇಯು ಏಪ್ರಿಲ್ 2025 ರಲ್ಲಿ ಭಾರತದ ಹಸಿರು ಜಲಜನಕ ಪ್ರಮಾಣೀಕರಣ ಯೋಜನೆಯನ್ನು ಪ್ರಾರಂಭಿಸಿತು. ಇಂಧನ ದಕ್ಷತೆಯ ಬ್ಯೂರೋ ಮೇಲ್ವಿಚಾರಣೆ, ಪರಿಶೀಲನೆ ಮತ್ತು ಪ್ರಮಾಣೀಕರಣಕ್ಕಾಗಿ ಸಂಸ್ಥೆಗಳಿಗೆ ಮಾನ್ಯತೆ ನೀಡುತ್ತದೆ.
  • ಪಾರದರ್ಶಕ ಪ್ರಮಾಣೀಕರಣ ಮತ್ತು ಅನುಸರಣೆಗಾಗಿ ಜೂನ್ 2026 ರಲ್ಲಿ ಮೀಸಲಾದ ಪೋರ್ಟಲ್ ಕಾರ್ಯಾರಂಭ ಮಾಡಿತು. ವಿಶ್ವಾಸಾರ್ಹ ಪ್ರಮಾಣೀಕರಣವು ಭಾರತೀಯ ಉತ್ಪಾದಕರಿಗೆ ಜಾಗತಿಕವಾಗಿ ವಿಶ್ವಾಸದಿಂದ ಸ್ಪರ್ಧಿಸಲು ಸಹಾಯ ಮಾಡುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿ

ಹಸಿರು ಜಲಜನಕವನ್ನು ಹೆಚ್ಚು ಕೈಗೆಟುಕುವಂತೆ, ಪರಿಣಾಮಕಾರಿಯಾಗಿ, ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿಸಲು ಮಿಷನ್ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಸ್ಟ್ರಾಟೆಜಿಕ್ ಹೈಡ್ರೋಜನ್ ಇಕೋಸಿಸ್ಟಮ್ ಇಂಟರ್‌ನ್ಯಾಷನಲ್ ಪಾರ್ಟ್‌ನರ್‌ಶಿಪ್ ಅಥವಾ ವ್ಯೂಹಾತ್ಮಕ ಹೈಡ್ರೋಜನ್ ನಾವೀನ್ಯತೆ ಪಾಲುದಾರಿಕೆಯು ಉದ್ಯಮ ಮತ್ತು ಸರ್ಕಾರದ ಮೀಸಲಾದ R&D ನಿಧಿಯನ್ನು ಹೊಂದಿರುವ ಒಂದು ಸಾರ್ವಜನಿಕ-ಖಾಸಗಿ ಚೌಕಟ್ಟಾಗಿದೆ. R&D ಗಾಗಿ ಯೋಜನೆ ಮಾರ್ಗಸೂಚಿಗಳನ್ನು ಮಾರ್ಚ್ 2024 ರಲ್ಲಿ 400 ಕೋಟಿ ರೂ.ಗಳ ವೆಚ್ಚದೊಂದಿಗೆ ಅಧಿಸೂಚಿಸಲಾಯಿತು. ಜೂನ್ 2026 ರ ವೇಳೆಗೆ, 113 ಕೋಟಿ ರೂ. ಮೌಲ್ಯದ ಆರಂಭಿಕ R&D ರೋಡ್‌ಮ್ಯಾಪ್ ಜಲಜನಕ ಉತ್ಪಾದನೆ, ಶೇಖರಣೆ ಮತ್ತು ಸುರಕ್ಷತಾ ತಂತ್ರಜ್ಞಾನಗಳಾದ್ಯಂತ ಅನುಮೋದಿತ ಯೋಜನೆಗಳನ್ನು ಬೆಂಬಲಿಸುತ್ತಿದೆ.

ಕೌಶಲ್ಯ ಅಭಿವೃದ್ಧಿ

ಸಮಯೋಜಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಪ್ರಗತಿಯಲ್ಲಿದೆ. 2030ರ ವೇಳೆಗೆ ಮೌಲ್ಯ ಸರಪಳಿಯಾದ್ಯಂತ 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಮಿಷನ್ ಹೊಂದಿದೆ. ಇದುವರೆಗೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲಜನಕಕ್ಕೆ ಸಂಬಂಧಿಸಿದ ಅರ್ಹತೆಗಳ ಕುರಿತು 8,149 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 7,248 ಜನರಿಗೆ ಪ್ರಮಾಣೀಕರಿಸಲಾಗಿದೆ. ತರಬೇತಿಯು ಎಲೆಕ್ಟ್ರೋಲೈಜರ್‌ಗಳಿಗಾಗಿ ನವೀಕರಿಸಬಹುದಾದ ವಿದ್ಯುತ್, ಎಲೆಕ್ಟ್ರೋಲಿಸಿಸ್, ಶೇಖರಣೆ, ಸಾರಿಗೆ, ಸುರಕ್ಷತಾ ಮಾನದಂಡಗಳು ಮತ್ತು ಉಕ್ಕು, ಸಾರಿಗೆ ಹಾಗೂ ರಿಫೈನಿಂಗ್‌ನಂತಹ ಅಂತಿಮ ಬಳಕೆಗಳನ್ನು ಒಳಗೊಂಡಿದೆ. ನಾವೀನ್ಯತೆಗಾಗಿ, ಹಸಿರು ಜಲಜನಕ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 22 ಕೋಟಿ ರೂ.ಗಳ ನಿಧಿಯೊಂದಿಗೆ ಮೊದಲ ಒಂಭತ್ತು ಸ್ಟಾರ್ಟ್‌ಅಪ್‌ಗಳನ್ನು ಅನುಮೋದಿಸಲಾಗಿದೆ.

ಅಂತಾರಾಷ್ಟ್ರೀಯ ಸಹಕಾರ

ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು, ಹೂಡಿಕೆಯನ್ನು ಕ್ರೋಢೀಕರಿಸಲು, ರಫ್ತು ಮಾರುಕಟ್ಟೆಗಳನ್ನು ನಿರ್ಮಿಸಲು ಮತ್ತು ಮಾನದಂಡಗಳನ್ನು ಸರಳೀಕರಿಸಲು ಮಿಷನ್ ಪಾಲುದಾರಿಕೆಗಳನ್ನು ಉತ್ತೇಜಿಸುತ್ತದೆ.

ಪ್ರಮುಖ ಪ್ರಗತಿ

  • ಎಂಎನ್‌ಆರ್‌ಇ ನೇರವಾಗಿ ಅಥವಾ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆಯ ಮೂಲಕ ಒಪ್ಪಂದದ ಜ್ಞಾಪಕ ಪತ್ರಗಳು, ಉದ್ದೇಶಪೂರ್ವಕ ಪತ್ರಗಳು ಅಥವಾ ಜಂಟಿ ಘೋಷಣೆಗಳಿಗೆ ಸಹಿ ಹಾಕಿದೆ. ಆಸ್ಟ್ರೇಲಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಸೌದಿ ಅರೇಬಿಯಾ, ಯುಎಇ ಮತ್ತು ಉಜ್ಬೇಕಿಸ್ತಾನ್ ಇದರ ಪಾಲುದಾರ ದೇಶಗಳಾಗಿವೆ.
  • ನೆದರ್‌ಲ್ಯಾಂಡ್ಸ್ ಜೊತೆಗೆ ನವೀಕರಿಸಬಹುದಾದ ಇಂಧನದ ಕುರಿತು ಒಪ್ಪಂದದ ಜ್ಞಾಪಕ ಪತ್ರಕ್ಕೆ ಸಹಿ ಹಾಕಲಾಗಿದೆ.
  • ವ್ಯೂಹಾತ್ಮಕ ಶುದ್ಧ ಇಂಧನ ಪಾಲುದಾರಿಕೆಯ ಅಡಿಯಲ್ಲಿ ಭಾರತ-ಯುಎಸ್ ಹೈಡ್ರೋಜನ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗಿದೆ.
  • ಭಾರತ-ಯುಎಸ್ ಹೊಸ ಮತ್ತು ಉದಯೋನ್ಮುಖ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಕ್ರಿಯಾ ವೇದಿಕೆಯ ಪ್ರಮುಖ ಕ್ಷೇತ್ರಗಳಲ್ಲಿ ಹಸಿರು ಜಲಜನಕವೂ ಒಂದಾಗಿದೆ.

ರಾಜ್ಯ ಮಟ್ಟದ ಉಪಕ್ರಮಗಳು

ರಾಷ್ಟ್ರೀಯ ಹಸಿರು ಜಲಜನಕ ಮಿಷನ್‌ಗೆ ಪೂರಕವಾಗಿ ಆರು ರಾಜ್ಯಗಳು ಮೀಸಲಾದ ಹಸಿರು ಜಲಜನಕ ನೀತಿಗಳನ್ನು ಅಧಿಸೂಚಿಸಿವೆ. ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಈ ಮೀಸಲಾದ ನೀತಿಗಳನ್ನು ಹೊಂದಿರುವ ರಾಜ್ಯಗಳಾಗಿವೆ. ಇನ್ನಷ್ಟು ನಾಲ್ಕು ರಾಜ್ಯಗಳು ತಮ್ಮ ಮೀಸಲಾದ ಹಸಿರು ಜಲಜನಕ ನೀತಿಗಳನ್ನು ಅಂತಿಮಗೊಳಿಸುತ್ತಿವೆ. ಹರಿಯಾಣ, ಪಂಜಾಬ್, ಬಿಹಾರ ಮತ್ತು ಕೇರಳ ಕರಡು ನೀತಿಗಳ ಮೇಲೆ ಕೆಲಸ ಮಾಡುತ್ತಿವೆ. ಏಳು ರಾಜ್ಯಗಳು ಹೈಡ್ರೋಜನ್ ಅನ್ನು ತಮ್ಮ ಅಸ್ತಿತ್ವದಲ್ಲಿರುವ ಕೈಗಾರಿಕಾ ಮತ್ತು ನವೀಕರಿಸಬಹುದಾದ ಇಂಧನ ನೀತಿ ಚೌಕಟ್ಟುಗಳಲ್ಲಿ ಸಂಯೋಜಿಸಿವೆ. ಇವುಗಳಲ್ಲಿ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಛತ್ತೀಸ್‌ಗಢ ಸೇರಿವೆ.

ಮುಂದಿನ ಹಾದಿ

ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಸ್ವಚ್ಛವಾದ, ಹೆಚ್ಚು ಸ್ವಾವಲಂಬ ಜಾಗತಿಕವಾಗಿ ಸ್ಪರ್ಧಾತ್ಮಕ ಇಂಧನ ಆರ್ಥಿಕತೆಯನ್ನು ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. 2030 ರ ವೇಳೆಗೆ, ಭಾರತವು ವಾರ್ಷಿಕ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಪರಿವರ್ತನೆಯು ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಶದ ದೀರ್ಘಕಾಲೀನ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. ಈ ಮಿಷನ್ 2030ರ ವೇಳೆಗೆ ಸಂಚಿತ ಪಳೆಯುಳಿಕೆ ಇಂಧನ ಆಮದುಗಳನ್ನು ಅಂದಾಜು 1 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ಇಂಧನ ಭದ್ರತೆಯನ್ನು ಮೀರಿ, ಈ ಮಿಷನ್ ಕೈಗಾರಿಕಾ ಬೆಳವಣಿಗೆ, ಹೂಡಿಕೆ ಮತ್ತು ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಇದು 8 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹೂಡಿಕೆಯನ್ನು ಕ್ರೋಢೀಕರಿಸುವ ಮತ್ತು ಉತ್ಪಾದನೆ, ಮೂಲಸೌಕರ್ಯ, ಸಂಶೋಧನೆ ಹಾಗೂ ಯೋಜನೆ ಅಭಿವೃದ್ಧಿಯಾದ್ಯಂತ 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಗುರಿಪಡಿಸಿದ ಹಸಿರು ಜಲಜನಕದ ಪ್ರಮಾಣದ ಉತ್ಪಾದನೆ ಮತ್ತು ಬಳಕೆಯು ಪ್ರತಿವರ್ಷ ಸುಮಾರು 50 MMT ರಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಪ್ರಯತ್ನಗಳ ಮೂಲಕ, ಕೈಗಾರಿಕಾ ಡಿಕಾರ್ಬನೈಸೇಷನ್ ಅನ್ನು ವೇಗಗೊಳಿಸಲು, ದೇಶೀಯ ಉತ್ಪಾದನೆಯನ್ನು ಬಲಪಡಿಸಲು ಮತ್ತು ಹಸಿರು ಜಲಜನಕ ಉತ್ಪಾದನೆ, ಬಳಕೆ ಹಾಗೂ ರಫ್ತಿನಲ್ಲಿ ಭಾರತವನ್ನು ಜಾಗತಿಕ ಕೇಂದ್ರವಾಗಿ ನೆಲೆಗೊಳಿಸಲು ಸರ್ಕಾರವು ಗುರಿ ಹೊಂದಿದೆ. ಇದು 2047 ರ ವೇಳೆಗೆ ವಿಕಸಿತ ಭಾರತದ ವಿಶಾಲ ದೃಷ್ಟಿಕೋನಕ್ಕೆ ಮತ್ತು 2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ತನ್ನ ಬದ್ಧತೆಗೆ ಕೊಡುಗೆ ನೀಡುತ್ತದೆ.

References

Cabinet

Ministry of New and Renewable Energy (MNRE)

Ministry of Chemicals and Fertilisers

Ministry of Ports, Shipping and Waterways

Ministry of Railways

Ministry of Power

Ministry of Petroleum and Natural Gas (HPCL)

Ministry of Science and Technology (CSIR)

Parliament of India

Press Information Bureau (PIB)

Other sources

 

Click to see pdf

 

*****

(Explainer ID: 160696) आगंतुक पटल : 4
Provide suggestions / comments
इस विज्ञप्ति को इन भाषाओं में पढ़ें: English , हिन्दी