Farmer's Welfare

ಖೇತ್ ಬಚಾವೋ ಅಭಿಯಾನ - ರಬಿ 2026

“ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಕೃಷಿ”

Posted On: 02 NOV 2026 11:01AM

ಖೇತ್ ಬಚಾವೋ ಅಭಿಯಾನ - ರಬಿ 2026 ಎಂಬುದು 22 ಅಕ್ಟೋಬರ್ ರಿಂದ 30 ನವೆಂಬರ್ 2026 ರವರೆಗೆ ದೇಶಾದ್ಯಂತ ನಡೆಯುವ ಬೃಹತ್ ಅಭಿಯಾನವಾಗಿದೆ. ಇದು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 700 ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು 50,000 ಗ್ರಾಮಗಳಲ್ಲಿ ಸುಮಾರು 50 ಲಕ್ಷ ರೈತರನ್ನು ತಲುಪುವ ಗುರಿಯನ್ನು ಹೊಂದಿದ್ದು, ಮಣ್ಣಿನ ಆರೋಗ್ಯ, ಸಮತೋಲಿತ ಗೊಬ್ಬರ ಬಳಕೆ ಮತ್ತು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸುತ್ತದೆ. ಸಮತೋಲಿತ ಪೋಷಕಾಂಶಗಳ ನಿರ್ವಹಣೆ, ನೈಸರ್ಗಿಕ ಕೃಷಿ, ಬೆಳೆ ತ್ಯಾಜ್ಯ (ತಾಳು) ನಿರ್ವಹಣೆ, ಬೆಳೆ ವೈವಿಧ್ಯೀಕರಣ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿ ಇವು ಈ ಅಭಿಯಾನದ ಪ್ರಮುಖ ಆದ್ಯತೆಗಳಾಗಿವೆ. ಈ ಅಭಿಯಾನಕ್ಕಾಗಿ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಮತ್ತು ಆತ್ಮಾ ಸಂಸ್ಥೆಗಳನ್ನು ಒಳಗೊಂಡ 4,150 ತಂಡಗಳನ್ನು ರೂಪಿಸಲಾಗಿದ್ದು, 12,000 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಆತ್ಮಾ ಸಿಬ್ಬಂದಿ ಬೆಂಬಲ ನೀಡುತ್ತಿದ್ದಾರೆ. ಈ ಉಪಕ್ರಮವು 50,000 ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನುಮತ್ತು 11,750 ಕಾರ್ಯಕ್ರಮಬದ್ಧ ತರಬೇತಿ ಶಿಬಿರಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ಈ ಅಭಿಯಾನವು ಸೋಶಿಯಲ್ ಮೀಡಿಯಾ ಮೂಲಕ 1.5 ಕೋಟಿ ರೈತರನ್ನು ತಲುಪುವ ಮತ್ತು ಒಟ್ಟಾರೆ ಡಿಜಿಟಲ್ ತಲುಪುವಿಕೆಯನ್ನು 2.5 ಕೋಟಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಕೃಷಿಯ ಬುನಾದಿ ಇರುವುದು ನೆಲದಡಿಯಲ್ಲಿ

ಕೃಷಿ ಉತ್ಪಾದಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಮಣ್ಣಿನ ಆರೋಗ್ಯವು ಅತ್ಯಂತ ಮೂಲಭೂತವಾಗಿದೆ. ಭಾರತದ ಶೇಕಡಾ 46 ಕ್ಕೂ ಹೆಚ್ಚು ಶ್ರಮಶಕ್ತಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಮಣ್ಣಿನ ಆರೋಗ್ಯವು ಆಹಾರ ವ್ಯವಸ್ಥೆಗಳು ಮತ್ತು ಆರ್ಥಿಕ ಸ್ಥಿರತೆಯ ಮೇಲೆ ನೇರ ಪ್ರಭಾವ ಬೀರುತ್ತದೆ. ಆರೋಗ್ಯಕರ ಮಣ್ಣು ಹೆಚ್ಚಿನ ಬೆಳೆ ಇಳುವರಿಯನ್ನು ಬೆಂಬಲಿಸುತ್ತದೆ ಮತ್ತು ಬಾಹ್ಯ ಪರಿಕರಗಳ (ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಮಣ್ಣಿನ ಆರೋಗ್ಯದ ಪ್ರಾಮುಖ್ಯತೆಯನ್ನು ಗುರುತಿಸಿ, ಖೇತ್ ಬಚಾವೋ ಅಭಿಯಾನ - ರಬಿ 2026 “ಸ್ವಸ್ಥ ಧರಾ, ಸಮೃದ್ಧ ಕಿಸಾನ್” ಅನ್ನು 22 ಅಕ್ಟೋಬರ್ ರಿಂದ 30 ನವೆಂಬರ್ 2026 ರವರೆಗೆ ದೇಶಾದ್ಯಂತ ನಡೆಸುವ ಬೃಹತ್ ಅಭಿಯಾನವಾಗಿ ರೂಪಿಸಲಾಗಿದೆ. ಇದು ಸಮನ್ವಯ ಆಧಾರಿತ ವಿಧಾನವನ್ನು ಅನುಸರಿಸಲಿದ್ದು, ಸಮತೋಲಿತ ಹಾಗೂ ವಿವೇಚನಾಯುಕ್ತ ಗೊಬ್ಬರ ಬಳಕೆ ಮತ್ತು ಸುಸ್ಥಿರ ಪೋಷಕಾಂಶ ನಿರ್ವಹಣೆಯನ್ನು ಉತ್ತೇಜಿಸಲು ಕೃಷಿ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕ್ಷೇತ್ರ ಮಟ್ಟದ ಸಿಬ್ಬಂದಿಯನ್ನು ಒಂದೆಡೆ ತರುತ್ತದೆ. ಈ ಅಭಿಯಾನವು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು, ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕೃಷಿ ಸಂಪನ್ಮೂಲಗಳ ಸೂಕ್ತ ಬಳಕೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು ನೈಸರ್ಗಿಕ ಕೃಷಿ, ಜಲ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ದಕ್ಷ ಬಳಕೆಯನ್ನು ಸಹ ಉತ್ತೇಜಿಸುತ್ತದೆ. ಅಸಮತೋಲಿತ ಪೋಷಕಾಂಶಗಳ ಬಳಕೆ, ಮಣ್ಣಿನ ಜೈವಿಕಾಂಶದ ಕುಸಿತ, ಹೆಚ್ಚುತ್ತಿರುವ ಬೇಸಾಯ ವೆಚ್ಚ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕ್ಷೀಣಿಸುವಿಕೆಯಂತಹ ಕಳವಳಗಳಿಗೆ ಇದು ಪರಿಹಾರ ಒದಗಿಸುತ್ತದೆ.

ಈ ಉಪಕ್ರಮಗಳು ಸಾಮರ್ಥ್ಯ ವರ್ಧನೆ, ಕೃಷಿ ಯಾಂತ್ರೀಕರಣ ಮತ್ತು ಮಣ್ಣಿನ ಆರೋಗ್ಯವನ್ನು ಮರುಸ್ಥಾಪಿಸುವ ಹಾಗೂ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವ ವಿಧಾನಗಳನ್ನೊಳಗೊಂಡ ಪುನರುಜ್ಜೀವನ ಕೃಷಿ ಪದ್ಧತಿಗಳು ಸೇರಿದಂತೆ ಸುಧಾರಿತ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳಿಗೆ ಒತ್ತು ನೀಡುತ್ತವೆ.

ಈ ಅಭಿಯಾನವು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 700 ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು 50,000 ಗ್ರಾಮಗಳನ್ನು ಒಳಗೊಳ್ಳುತ್ತದೆ. ಸಂಘಟಿತ ಚಟುವಟಿಕೆಗಳ ಮೂಲಕ ಸುಮಾರು 50 ಲಕ್ಷ ರೈತರನ್ನು ತಲುಪುವ ಗುರಿಯನ್ನು ಹೊಂದಿದೆ. ಪ್ರಚಾರವನ್ನು ಬಲಪಡಿಸಲು ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಉತ್ತೇಜಿಸಲು ಅಧಿಕ ರಾಸಾಯನಿಕ ಗೊಬ್ಬರ ಬಳಸುವ 100 ಜಿಲ್ಲೆಗಳಿಗೆ ಆದ್ಯತೆ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ತನ್ನ ವ್ಯಾಪಕ ಪ್ರಸಾರ ಮತ್ತು ಕ್ಷೇತ್ರ ಮಟ್ಟದ ಚಟುವಟಿಕೆಗಳ ಮೂಲಕ, ಈ ಅಭಿಯಾನವು ರೈತರು, ವಿಜ್ಞಾನಿಗಳು ಮತ್ತು ಕೃಷಿ ಸಂಸ್ಥೆಗಳನ್ನು ಒಂದೆಡೆ ತರಲು ಶ್ರಮಿಸುತ್ತದೆ. ಈ ಸಂಘಟಿತ ಪ್ರಯತ್ನವು ರೈತರು ಮಾಹಿತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ನಿರೀಕ್ಷೆಯಿದೆ.

ಖೇತ್ ಬಚಾವೋ ಅಭಿಯಾನ

(1 ರಿಂದ 30 ಜೂನ್ 2026 ರವರೆಗೆ)

ಮಣ್ಣಿನ ಆರೋಗ್ಯ, ಸಮತೋಲಿತ ಗೊಬ್ಬರ ಬಳಕೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸಲು ಒಂದು ತಿಂಗಳ ಸುದೀರ್ಘ ಅಭಿಯಾನವಾಗಿ ಖೇತ್ ಬಚಾವೋ ಅಭಿಯಾನವನ್ನು 1 ಜೂನ್ 2026 ರಂದು ದೇಶಾದ್ಯಂತ ಚಾಲನೆಗೊಳಿಸಲಾಯಿತು. ಈ ಅಭಿಯಾನವು ನೇರ ಕ್ಷೇತ್ರ ಮಟ್ಟದ ತೊಡಗಿಸಿಕೊಳ್ಳುವಿಕೆಗಾಗಿ 1,657 ಬಹುಶಿಸ್ತೀಯ ತಂಡಗಳನ್ನು ನಿಯೋಜಿಸಿತ್ತು. ಈ ಉಪಕ್ರಮವು ಅತ್ಯಂತ ಗಮನಾರ್ಹ ತಲುಪುವಿಕೆಯನ್ನು ಸಾಧಿಸಿದ್ದು, 92.44 ಲಕ್ಷ ರೈತರಿಗಾಗಿ 1.34 ಲಕ್ಷಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಕುರಿತು 6,685 ತರಬೇತಿ ಶಿಬಿರಗಳನ್ನು ನಡೆಸಿ, 4.94 ಲಕ್ಷ ರೈತರಿಗೆ ಪ್ರಯೋಜನ ತಲುಪಿಸಿದೆ.

ಇದರ ಜೊತೆಗೆ, 3,167 ಕ್ಷೇತ್ರ ಪ್ರಾತ್ಯಕ್ಷಿಕೆಗಳು ಮತ್ತು 4,779 ಸಂವಾದಾತ್ಮಕ ಕಾರ್ಯಕ್ರಮಗಳು ಪ್ರಾಯೋಗಿಕ ಕಲಿಕೆಯನ್ನು ಒದಗಿಸಿದವು. ಗೊಬ್ಬರ ಮತ್ತು ಕೃಷಿ ಪರಿಕರ ಮಾರಾಟಗಾರರನ್ನು ಒಳಗೊಂಡಂತೆ ಇನ್ನುಳಿದ 4,916 'ಜನಪ್ರತಿನಿಧಿ ಸಮ್ಮೇಳನಗಳು' ತಳಮಟ್ಟದ ಸಕ್ರಿಯ പങ്കಾಳಿಷಿಕೆಯನ್ನು ಬಲಪಡಿಸಿದವು. ಒಟ್ಟಾರೆಯಾಗಿ, ಈ ಅಭಿಯಾನವು ನೇರವಾಗಿ ಸುಮಾರು 1.07 ಕೋಟಿ ರೈತರು ಮತ್ತು ಇತರ ಪಾಲುದಾರರನ್ನು ತಲುಪಿದೆ, ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಸುಮಾರು 4.5 ಕೋಟಿ ನಾಗರಿಕರನ್ನು ತಲುಪಿದೆ.

ಖೇತ್ ಬಚಾವೋ ಅಭಿಯಾನ - ರಬಿ 2026 ರ ಪ್ರಮುಖ ಉದ್ದೇಶಗಳು

 ಇನ್‌ಪುಟ್-ಬಳಕೆಯ ದಕ್ಷತೆಯನ್ನು ಸುಧಾರಿಸುವ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಯನ್ನು ಬೆಂಬಲಿಸುವ ಸ್ಥಳ-ನಿರ್ದಿಷ್ಟ, ವಿಜ್ಞಾನ-ಆಧಾರಿತ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಈ ಅಭಿಯಾನವು ರೈತರನ್ನು ಪ್ರೋತ್ಸಾಹಿಸುತ್ತದೆ.

  • ಸಮತೋಲಿತ ಪೋಷಕಾಂಶಗಳ ನಿರ್ವಹಣೆ: ಸಾಮಾನ್ಯ ಗೊಬ್ಬರ ಶಿಫಾರಸುಗಳ ಆಧಾರಿತ ಪೋಷಕಾಂಶ ನಿರ್ವಹಣೆ ಮತ್ತು ಗೊಬ್ಬರ ಬಳಕೆಯ '4R ತತ್ವ'ವನ್ನು – ಅಂದರೆ ಸರಿಯಾದ ಮೂಲ, ಸರಿಯಾದ ಪ್ರಮಾಣ, ಸರಿಯಾದ ಸಮಯ, ಮತ್ತು ಸರಿಯಾದ ಸ್ಥಳ – ಪ್ರಚಾರ ಮಾಡುವುದು. ಈ ವಿಧಾನವು ರಬಿ ಬೆಳೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಸಮತೋಲಿತ ಮತ್ತು ಪರಿಣಾಮಕಾರಿ ಗೊಬ್ಬರ ಬಳಕೆಯನ್ನು ಖಚಿತಪಡಿಸುತ್ತದೆ.
  • ನೈಸರ್ಗಿಕ ಕೃಷಿ: ಜಾಗೃತಿ ಅಭಿಯಾನಗಳು, ಸಾಮರ್ಥ್ಯ ವರ್ಧನೆ, ಪ್ರಾತ್ಯಕ್ಷಿಕೆಗಳು ಮತ್ತು ರೈತರಿಂದ ರೈತರಿಗೆ ಕಲಿಕೆಯ ಮೂಲಕ ನೈಸರ್ಗಿಕ ಕೃಷಿಯ ಅಳವಡಿಕೆಯನ್ನು ಪ್ರೋತ್ಸಾಹಿಸುವುದು.
  • ಸಮಗ್ರ ಪೋಷಕಾಂಶ ನಿರ್ವಹಣೆ: ಜಾಗೃತಿ, ಸಾಮರ್ಥ್ಯ ವರ್ಧನೆ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸೂಕ್ತ ಸಾವಯವ ಮತ್ತು ಜೈವಿಕ ಪರಿಕರಗಳ ಬಳಕೆಯನ್ನು ಉತ್ತೇಜಿಸುವುದು.
  • ಬೆಳೆ ತ್ಯಾಜ್ಯ ನಿರ್ವಹಣೆ: ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವುದು ಮತ್ತು ಬೆಳೆ ತ್ಯಾಜ್ಯ ಸುಡುವುದನ್ನು ನಿರುತ್ಸಾಹಗೊಳಿಸುವುದು.
  • ಬೆಳೆ ವೈವಿಧ್ಯೀಕರಣ: ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಬಲಪಡಿಸುವುದು, ಬೆಳೆ ವೈವಿಧ್ಯೀಕರಣವನ್ನು ಪ್ರೋತ್ಸಾಹಿಸುವುದು ಮತ್ತು ಜಾಗೃತಿ, ಸಾಮರ್ಥ್ಯ ವರ್ಧನೆ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಭತ್ತದ ಬೆಳೆಯ ನಂತರ ಖಾಳಬಿಡುವ ಭೂಮಿಯ ಉತ್ಪಾದಕ ಬಳಕೆಯನ್ನು ಉತ್ತೇಜಿಸುವುದು.

.

  • ಹವಾಮಾನ ಸ್ಥಿತಿಸ್ಥಾಪಕ ಕೃಷಿ: ಹವಾಮಾನ ಸ್ಥಿತಿಸ್ಥಾಪಕ ಬೆಳೆ ಮತ್ತು ಸಂಪನ್ಮೂಲ ನಿರ್ವಹಣೆಯನ್ನು ಬೆಂಬಲಿಸಲು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜಸ್ಥಾನದ ಬರಪೀಡಿತ ಪ್ರದೇಶಗಳಲ್ಲಿ ಸ್ಥಳ-ನಿರ್ದಿಷ್ಟ ತುರ್ತು ನಿರ್ವಹಣಾ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
  • ಕೃಷಿ ಯೋಜನೆಗಳ ಜಾಗೃತಿ: ಕೃಷಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವುದು.
  • ಸಮಗ್ರ ಕೀಟ ನಿರ್ವಹಣೆ ಮತ್ತು ಕೀಟನಾಶಕಗಳ ಜವಾಬ್ದಾರಿಯುತ ಬಳಕೆ: ಕೀಟನಾಶಕಗಳ ಗುಣಮಟ್ಟ ಮತ್ತು ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಪ್ರೋತ್ಸಾಹಿಸುವುದು, ಸಮಗ್ರ ಕೀಟ ನಿರ್ವಹಣೆ ಹಾಗೂ ಸುರಕ್ಷಿತ, ಅಗತ್ಯ ಆಧಾರಿತ ಮತ್ತು ಲೇಬಲ್-ಅನುಸರಣೆಯ ಕೀಟನಾಶಕ ಬಳಕೆಯನ್ನು ಉತ್ತೇಜಿಸುವುದು ಮತ್ತು ಅವಿಚಾರಿತ/ಯಾದೃಚ್ಛಿಕ ಬಳಕೆಯನ್ನು నిರುತ್ಸಾಹಗೊಳಿಸುವುದು.

ಢೈಂಚಾ (ಸೆಸ್ಬೇನಿಯಾ) ಮತ್ತು ಹೆಸರುಕಾಳು: ಆರೋಗ್ಯಕರ ಮಣ್ಣಿನ ನಿರ್ಮಾಣಕ್ಕೆ ಹೊಸ ದಾರಿ

ಬಿಹಾರದ ಪೂರ್ವ ಚಂಪಾರಣ್‌ನ ಭತ್ತ ಬೆಳೆಯುವ ಪ್ರದೇಶಗಳಲ್ಲಿ, ಗೊಬ್ಬರದ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳುವುದು ರೈತರಿಗೆ ಅತ್ಯಂತ ಪ್ರಮುಖ ಸವಾಲಾಗಿದೆ. ಮಣ್ಣಿನಲ್ಲಿ ಜೈವಿಕ ಇಂಗಾಲದ ಪ್ರಮಾಣ ಕುಸಿಯುತ್ತಿರುವುದು ಮತ್ತು ಸೂಕ್ಷ್ಮ ಪೋಷಕಾಂಶಗಳ ಅಭಾವವು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಖೇತ್ ಬಚಾವೋ ಅಭಿಯಾನ-2026ರ ಅಡಿಯಲ್ಲಿ, ಬಿಹಾರದ ಮೋತಿಹಾರಿಯಲ್ಲಿರುವ ಐಸಿಎಆರ್‌-ಮಹಾತ್ಮ ಗಾಂಧಿ ಸಮಗ್ರ ಕೃಷಿ ಸಂಶೋಧನಾ ಸಂಸ್ಥೆಯು, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಸಾರಜನಕ ಸ್ಥಿರೀಕರಣವು ಮಣ್ಣಿನ ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ ಎಂಬುದನ್ನು ಪ್ರಮುಖವಾಗಿ ಎತ್ತಿಹಿಡಿಯಿತು.

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸೌಲ್ ಬ್ಲಾಕ್‌ನ ಪಂತೋಕಾ ಪಂಚಾಯತ್‌ನಲ್ಲಿ ನಡೆದ ರೈತರ ಸಂಪರ್ಕ ಕಾರ್ಯಕ್ರಮದಲ್ಲಿ, ಶಿಫಾರಸು ಮಾಡಿದ ಗೊಬ್ಬರದ ಪ್ರಮಾಣದೊಂದಿಗೆ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಜೈವಿಕ ಗೊಬ್ಬರಗಳು ಮತ್ತು ಬೆಳೆ ತ್ಯಾಜ್ಯಗಳನ್ನು ಸಂಯೋಜಿಸಿ ಬಳಸುವಂತೆ ರೈತರನ್ನು ಪ್ರೋತ್ಸಾಹಿಸಲಾಯಿತು. ಈ ಚರ್ಚೆಗಳು ಭತ್ತದ ಸಸಿಮಡಿ ನಿರ್ವಹಣೆ ಹಾಗೂ ಬೆಳೆ ತ್ಯಾಜ್ಯ ಸುಡುವುದಕ್ಕೆ ಪರ್ಯಾಯ ಮಾರ್ಗಗಳಾದ ಕಾಂಪೋಸ್ಟಿಂಗ್ (ಗೊಬ್ಬರ ತಯಾರಿಕೆ), ಹೊದಿಕೆ ಕೃಷಿ ಮತ್ತು ಎರೆಹುಳು ಗೊಬ್ಬರ ತಯಾರಿಕೆಯನ್ನು ಒಳಗೊಂಡಿದ್ದವು.

.

ವಿಜ್ಞಾನಿಗಳು ಭತ್ತ ಆಧಾರಿತ ಬೆಳೆ ಪದ್ಧತಿಗಳಲ್ಲಿ ಢೈಂಚಾ ಮತ್ತು ಬೇಸಿಗೆಯ ಹೆಸರುಕಾಳಿನ ಬಳಕೆಯನ್ನು ಪ್ರಮುಖವಾಗಿ ಒತ್ತಿಹೇಳಿದರು. ಢೈಂಚಾ ಬೆಳೆಯು ಪ್ರತಿ ಹೆಕ್ಟೇರ್‌ಗೆ ಸುಮಾರು 50-60 ಕೆಜಿ ಸಾರಜನಕವನ್ನು ಮಣ್ಣಿಗೆ ನೀಡಬಲ್ಲದು, ಇದು 110-130 ಕೆಜಿ ಯೂರಿಯಾಕ್ಕೆ ಸಮಾನವಾಗಿದೆ. ಬೇಸಿಗೆಯ ಹೆಸರುಕಾಳು ಪ್ರತಿ ಹೆಕ್ಟೇರ್‌ಗೆ 25-30 ಕೆಜಿ ಸಾರಜನಕವನ್ನು ಒದಗಿಸಬಲ್ಲದು, ಇದು 55-65 ಕೆಜಿ ಯೂರಿಯಾಕ್ಕೆ ಸಮಾನವಾಗಿದೆ. ಈ ಬೆಳೆಗಳು ಮಣ್ಣಿನ ಜೈವಿಕಾಂಶ ಮತ್ತು ಜೈವಿಕ ಚಟುವಟಿಕೆಯನ್ನು ಸುಧಾರಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರಗಳ ಅವಶ್ಯಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಈ ಕಾರ್ಯಕ್ರಮದಲ್ಲಿ 41 ಮಹಿಳೆಯರು ಸೇರಿದಂತೆ ಒಟ್ಟು 62 ರೈತರು ಭಾಗವಹಿಸಿದ್ದರು. ಭಾಗವಹಿಸಿದ ರೈತರು ಹಸಿರೆಲೆ ಗೊಬ್ಬರ ಬಳಕೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಅಳವಡಿಸಿಕೊಳ್ಳಲು ಉತ್ಸುಕತೆ ವ್ಯಕ್ತಪಡಿಸಿದರು.

ರೈತರಿಗೆ ಅಭಿಯಾನವನ್ನು ತಲುಪಿಸುವುದು: ಸಾಂಸ್ಥಿಕ ಪಾತ್ರಗಳು ಮತ್ತು ಜವಾಬ್ದಾರಿಗಳು

  • ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೃಷಿ ಇಲಾಖೆ: ಅಭಿಯಾನದ ಯೋಜನೆ ಮತ್ತು ಅನುಷ್ಠಾನ, ಅಗತ್ಯ ಸೂಚನೆಗಳನ್ನು ಹೊರಡಿಸುವುದು, ಪೂರ್ವಭಾವಿ ಸಭೆಗಳನ್ನು ಕರೆಯುವುದು, ಜಿಲ್ಲಾ ಮಟ್ಟದ ವೇಳಾಪಟ್ಟಿಗಳನ್ನು ಅನುಮೋದಿಸುವುದು, ಕ್ಷೇತ್ರ ಸಿಬ್ಬಂದಿ ಮತ್ತು ಸಮನ್ವಯ ಪಾಲುದಾರರನ್ನು ಸಂಘಟಿಸುವುದು, ಯೋಜನೆಗಳು ಮತ್ತು ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸುವುದು ಹಾಗೂ ವರದಿಗಳನ್ನು ಕ್ರೋಢೀಕರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
  • ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಗಳು ಮತ್ತು ಜಿಲ್ಲಾ ಕೃಷಿ ಆಡಳಿತ: ಜಿಲ್ಲೆ, ಬ್ಲಾಕ್ (ತಾಲೂಕು) ಮತ್ತು ಗ್ರಾಮ ಮಟ್ಟಗಳಲ್ಲಿ ಅಭಿಯಾನದ ಚಟುವಟಿಕೆಗಳನ್ನು ಸಂಯೋಜಿಸುವುದು, ಸೂಕ್ಷ್ಮ-ಯೋಜನೆಗಳನ್ನು ತಯಾರಿಸುವುದು, ರೈತರು ಮತ್ತು ಸಮುದಾಯ ಸಂಸ್ಥೆಗಳನ್ನು ಒಟ್ಟುಗೂಡಿಸುವುದು, ಸಭೆಯ ಸ್ಥಳಗಳು, ಕ್ಷೇತ್ರ ಪ್ರವೇಶ, ಮಾಹಿತಿ-ಶಿಕ್ಷಣ-ಸಂವಹನ ಸಾಮಗ್ರಿಗಳು ಹಾಗೂ ಸಾಗಾಣಿಕೆ/ಸದಭ್ಯಾಸಗಳನ್ನು ಸುಗಮಗೊಳಿಸುವುದು ಮತ್ತು ಹಾಜರಾತಿ ಹಾಗೂ ಚಟುವಟಿಕೆಗಳ ದಾಖಲೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ.
  • ಐಸಿಎಆರ್‌ ಸಂಸ್ಥೆಗಳು, ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆs), ಮತ್ತು ಕೃಷಿ ವಿಶ್ವವಿದ್ಯಾಲಯಗಳು (ಜ್ಞಾನ ಪಾಲುದಾರರು): ವಿಜ್ಞಾನ ಆಧಾರಿತ ತಾಂತ್ರಿಕ ಮಾರ್ಗದರ್ಶನ ಮತ್ತು ಸ್ಥಳ-ನಿರ್ದಿಷ್ಟ ಶಿಫಾರಸುಗಳನ್ನು ಒದಗಿಸುವುದು, ವಿಷಯ ತಜ್ಞರನ್ನು ನಾಮನಿರ್ದೇಶನ ಮಾಡುವುದು, ತರಬೇತಿಗೆ ಬೆಂಬಲ ನೀಡುವುದು, ವಿನಂತಿಸಿದಾಗ ಪ್ರಾತ್ಯಕ್ಷಿಕೆಗಳು ಮತ್ತು ರೈತ-ವಿಜ್ಞಾನಿ ಸಂವಾದಗಳನ್ನು ನಡೆಸುವುದು, ತಾಂತ್ರಿಕ ಐಇಸಿ ಸಾಮಗ್ರಿಗಳು ಹಾಗೂ ಸಲಹೆಗಳನ್ನು ಸಿದ್ಧಪಡಿಸುವುದು ಅಥವಾ ದೃಢೀಕರಿಸುವುದು, ಸಂಶೋಧನಾ ಸಾಕ್ಷ್ಯಗಳನ್ನು ಹಂಚಿಕೊಳ್ಳುವುದು ಮತ್ತು ಅನುಭವಗಳನ್ನು ದಾಖಲಿಸುವುದು ಇವುಗಳ ಪಾತ್ರವಾಗಿದೆ. ಪ್ರತ್ಯೇಕವಾಗಿ ಅಧಿಕಾರ ನೀಡದ ಹೊರತು, ಇವುಗಳ ಪಾತ್ರವು ರಾಜ್ಯ ಮಟ್ಟದ ಅನುಷ್ಠಾನ, ಆಡಳಿತಾತ್ಮಕ ನಿಯಂತ್ರಣ, ಜಾರಿಗೊಳಿಸುವಿಕೆ ಅಥವಾ ವೆಚ್ಚದ ಜವಾಬ್ದಾರಿಗಳಿಗೆ ವಿಸ್ತರಿಸುವುದಿಲ್ಲ.

ಈ ಅಭಿಯಾನವು ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಮತ್ತು ಆತ್ಮಾ ಸಂಸ್ಥೆಗಳನ್ನು ಒಳಗೊಂಡ 4,150 ತಂಡಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. ಇದನ್ನು ಅನುಷ್ಠಾನಗೊಳಿಸಲು 12,000 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಆತ್ಮಾ ಸಿಬ್ಬಂದಿ ನೆರವಾಗುವ ನಿರೀಕ್ಷೆಯಿದೆ. ಆತ್ಮಾ ಮತ್ತು ಐಸಿಎಆರ್‌ ಮೂಲಕ, ಅಭಿಯಾನವು ಸುಮಾರು ಒಂದು ಕೋಟಿ ಭಾಗವಹಿಸುವವರನ್ನು ತಲುಪುವ ಗುರಿಯನ್ನು ಹೊಂದಿದೆ.

.

  • ಇತರ ರಾಜ್ಯ ಇಲಾಖೆಗಳು ಮತ್ತು ಸಂಸ್ಥೆಗಳು: ತೋಟಗಾರಿಕೆ, ಮಣ್ಣು ಮತ್ತು ಜಲ ಸಂರಕ್ಷಣೆ, ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ಸಹಕಾರ, ಪಂಚಾಯತ್ ರಾಜ್, ಪರಿಸರ, ಕೃಷಿ ಮಾರುಕಟ್ಟೆ ಮತ್ತು ಸಂಬಂಧಿತ ಕ್ಷೇತ್ರಗಳ ಜವಾಬ್ದಾರಿ ಹೊತ್ತಿರುವ ಇಲಾಖೆಗಳು ಹಾಗೂ ಸಂಸ್ಥೆಗಳ ಸಂಘಟಿತ ತೊಡಗಿಸಿಕೊಳ್ಳುವಿಕೆಯ ಮೂಲಕ, ತಮ್ಮ ತಮ್ಮ ವ್ಯಾಪ್ತಿಗೆ ಅನುಗುಣವಾಗಿ ಅಭಿಯಾನದ ಚಟುವಟಿಕೆಗಳಿಗೆ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸುವುದು.
  • ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು ಮತ್ತು ಪ್ರಗತಿಪರ ರೈತರು: ಸ್ಥಳೀಯ ಮಟ್ಟದಲ್ಲಿ ರೈತರನ್ನು ಒಟ್ಟುಗೂಡಿಸುವುದು, ಸಹಪಾಠಿ ಕಲಿಕೆ, ಪ್ರಾತ್ಯಕ್ಷಿಕೆ ಭೇಟಿಗಳು ಮತ್ತು ರೈತರಲ್ಲಿ ಧೃಡೀಕರಿಸಲ್ಪಟ್ಟ ತಾಂತ್ರಿಕ ಸಲಹೆಗಳನ್ನು ಪ್ರಸಾರ ಮಾಡಲು ಬೆಂಬಲ ನೀಡುವುದು.
  • ಮಾಧ್ಯಮ ಮತ್ತು ಸಂವಹನ ಪಾಲುದಾರರು: ರೈತರೊಂದಿಗೆ ಹಂಚಿಕೊಳ್ಳುವ ಕೃಷಿ ಮಾಹಿತಿಯ ನಿಖರತೆ ಮತ್ತು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸ್ಥಳೀಯ ಮಾಧ್ಯಮಗಳು, ಸಮುದಾಯ ರೇಡಿಯೋ, ವಾಟ್ಸಾಪ್, ಕಿಸಾನ್ ಸಾರಥಿ ಮತ್ತು ಇತರ ಸೂಕ್ತ ಸಂವಹನ ವೇದಿಕೆಗಳ ಮುಖಾಂತರ ಅನುಮೋದಿತ ಅಭಿಯಾನದ ಸಂದೇಶಗಳನ್ನು ಪ್ರಸಾರ ಮಾಡಲು ನೆರವಾಗುವುದು.

ರೈತರ ಜಾಗೃತಿ ಮತ್ತು ತಲುಪುವಿಕೆಯನ್ನು ಹೆಚ್ಚಿಸುವುದು

ಈ ಅಭಿಯಾನವು ಸುಧಾರಿತ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು, ತಾಂತ್ರಿಕ ಜ್ಞಾನವನ್ನು ಬಲಪಡಿಸಲು ಮತ್ತು ಅಭಿಯಾನದ ಸಂದೇಶಗಳನ್ನು ರೈತರಿಗೆ ವ್ಯಾಪಕವಾಗಿ ತಲುಪಿಸಲು ರೈತರ ಜಾಗೃತಿ, ಸಾಮರ್ಥ್ಯ ವರ್ಧನೆ, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ಪ್ರಾಯೋಗಿಕ ಶೈಕ್ಷಣಿಕ ಪ್ರವಾಸಗಳು ಮತ್ತು ಡಿಜಿಟಲ್ ಮಾಧ್ಯಮಗಳ ಬಳಕೆಯನ್ನು ಒಂದೆಡೆ ಸಂಯೋಜಿಸುತ್ತದೆ.

.

ವಿವಿಧ ಚಟುವಟಿಕೆಗಳಿಗಾಗಿ ಜಾಗೃತಿ ಮೂಡಿಸುವಿಕೆ

ಸಾಮಾನ್ಯ ಗೊಬ್ಬರ ಶಿಫಾರಸುಗಳ ಆಧಾರಿತ ಪೋಷಕಾಂಶ ನಿರ್ವಹಣೆ, ನೈಸರ್ಗಿಕ ಕೃಷಿ, ಸಮಗ್ರ ಪೋಷಕಾಂಶ ನಿರ್ವಹಣೆ, ಬೆಳೆ ತ್ಯಾಜ್ಯ ನಿರ್ವಹಣೆ ಮತ್ತು ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯಗಳ ಉತ್ಪಾದನೆಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳ ಕುರಿತು ರೈತರಲ್ಲಿ ಜಾಗೃತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಈ ಅಭಿಯಾನವು ಶ್ರಮಿಸುತ್ತದೆ. ಇದು ಬರಪೀಡಿತ ಜಿಲ್ಲೆಗಳಲ್ಲಿ ತುರ್ತು ನಿರ್ವಹಣಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಗಳು ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಸಹ ಪ್ರಸಾರ ಮಾಡುತ್ತದೆ.

  • 950 ಐಸಿಎಆರ್‌ ಸಂಸ್ಥೆಯ ಪ್ರತಿಯೊಂದು ತಂಡಕ್ಕೆ ವಾರಕ್ಕೆ ಮೂರು ಗ್ರಾಮಗಳ ಭೇಟಿಯನ್ನು ನೀಡಲಾಗಿದ್ದು, 700 ಕೆವಿಕೆ ತಂಡಗಳು ವಾರಕ್ಕೆ ನಾಲ್ಕು ಭೇಟಿಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಪ್ರತಿಯೊಂದು ಭೇಟಿಯು 100 ರೈತರ ಭಾಗವಹಿಸುವಿಕೆಯನ್ನು ಗುರಿಯಾಗಿರಿಸಿಕೊಂಡಿದೆ.
  • ಐದು ವಾರಗಳ ಅವಧಿಯಲ್ಲಿ, ಈ ಅಭಿಯಾನವು 5,650 ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅಂದಾಜು 28.25 ಲಕ್ಷ ರೈತರನ್ನು ತಲುಪುವ ಗುರಿ ಹೊಂದಿದೆ.

ರೈತರ ಸಾಮರ್ಥ್ಯ ವರ್ಧನೆ

ಸಮಗ್ರ ಪೋಷಕಾಂಶ ನಿರ್ವಹಣೆ, ಬೆಳೆ ತ್ಯಾಜ್ಯ ನಿರ್ವಹಣೆ, ನೈಸರ್ಗಿಕ ಕೃಷಿ, ಸುಧಾರಿತ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯ ಉತ್ಪಾದನಾ ಪದ್ಧತಿಗಳು, ಸಮಗ್ರ ಕೀಟ ನಿರ್ವಹಣೆ ಹಾಗೂ ಇತರ ಸೂಕ್ತ ವಿಷಯಾಧಾರಿತ ಕ್ಷೇತ್ರಗಳಲ್ಲಿ ರೈತರ ಜ್ಞಾನ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸಲು ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ.

  • 950 ಐಸಿಎಆರ್‌ ಸಂಸ್ಥೆಯ ಪ್ರತಿಯೊಂದು ತಂಡವು ವಾರಕ್ಕೆ ಒಂದು ತರಬೇತಿ ಕಾರ್ಯಕ್ರಮವನ್ನು ನಡೆಸುವ ನಿರೀಕ್ಷೆಯಿದ್ದು, 700 ಕೆವಿಕೆ ತಂಡಗಳಿಗೆ ವಾರಕ್ಕೆ ಎರಡು ಕಾರ್ಯಕ್ರಮಗಳನ್ನು ನೀಡಲಾಗಿದೆ. ಪ್ರತಿಯೊಂದು ಕಾರ್ಯಕ್ರಮವು 40 ಭಾಗವಹಿಸುವವರನ್ನು ಗುರಿಯಾಗಿರಿಸಿಕೊಂಡಿದೆ.
  • ಐದು ವಾರಗಳ ಅವಧಿಯಲ್ಲಿ, ಅಭಿಯಾನವು 11,750 ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅಂದಾಜು 4.70 ಲಕ್ಷ ರೈತರನ್ನು ತಲುಪುವ ಗುರಿಯನ್ನು ಹೊಂದಿದೆ.

ರೈತರ ಜಮೀನುಗಳಲ್ಲಿ ಪ್ರಾತ್ಯಕ್ಷಿಕೆಗಳು

 ಐಸಿಎಆರ್‌ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಸುಧಾರಿತ ಕೃಷಿ ತಂತ್ರಜ್ಞಾನಗಳ ಸಾಮರ್ಥ್ಯ ಮತ್ತು ಪ್ರಯೋಜನಗಳನ್ನು ಪ್ರದರ್ಶಿಸಲು ಆಯ್ಕೆ ಮಾಡಿದ ರೈತರ ಜಮೀನುಗಳಲ್ಲಿ ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುತ್ತವೆ. ಈ ಪ್ರಾತ್ಯಕ್ಷಿಕೆಗಳು ರೈತರಿಗೆ ವೈಜ್ಞಾನಿಕ ಮಧ್ಯಸ್ಥಿಕೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅವುಗಳ ಫಲಿತಾಂಶಗಳನ್ನು ಅಸ್ತಿತ್ವದಲ್ಲಿರುವ ಕೃಷಿ ಪದ್ಧತಿಗಳೊಂದಿಗೆ ಹೋಲಿಸಲು ಅನುವು ಮಾಡಿಕೊಡುತ್ತವೆ. ಹಸಿರು ಅಮೋನಿಯಾ, ಬೆಳೆ ತ್ಯಾಜ್ಯ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ, ನೈಸರ್ಗಿಕ ಕೃಷಿ, ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಿಗಾಗಿ ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರಗಳು ಹಾಗೂ ಸಾವಯವ ಮತ್ತು ಜೈವಿಕ ಪರಿಕರಗಳು ಇದರಲ್ಲಿ ಒಳಗೊಂಡಿರುವ ಪ್ರಮುಖ ಕ್ಷೇತ್ರಗಳಾಗಿವೆ.

  • ಅಭಿಯಾನವು 50,000 ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ರೂಪಿಸಿದ್ದು, ಇದರಲ್ಲಿ ಕೆವಿಕೆ ಗಳಿಂದ 40,000 ಮತ್ತು ಐಸಿಎಆರ್‌ಸಂಸ್ಥೆಗಳಿಂದ 10,000 ಒಳಗೊಂಡಿವೆ.
  • ಪ್ರತಿ ಪ್ರಾತ್ಯಕ್ಷಿಕೆಯಲ್ಲಿ 20 ರೈತರ ಭಾಗವಹಿಸುವಿಕೆಯೊಂದಿಗೆ, ಈ ಉಪಕ್ರಮವು ಅಂದಾಜು 10 ಲಕ್ಷ ರೈತರನ್ನು ತಲುಪುವ ಗುರಿಯನ್ನು ಹೊಂದಿದೆ.

ಕ್ಷೇತ್ರ ದಿನಗಳು, ಕೊಯ್ಲು ದಿನಗಳು ಮತ್ತು ಶೈಕ್ಷಣಿಕ ಪ್ರವಾಸಗಳು

ಕ್ಷೇತ್ರ ದಿನಗಳು, ಕೊಯ್ಲು ಕಾರ್ಯಕ್ರಮಗಳು ಮತ್ತು ಪ್ರಾತ್ಯಕ್ಷಿಕಾ ಸ್ಥಳಗಳಿಗೆ ಕೈಗೊಳ್ಳುವ ಶೈಕ್ಷಣಿಕ ಪ್ರವಾಸಗಳು ಅಭಿಯಾನದ "ನೋಡಿಯೇ ತಿಳಿಯಿರಿ" ವಿಧಾನದ ಅವಿಭಾಜ್ಯ ಅಂಗವಾಗಿವೆ. ಈ ಚಟುವಟಿಕೆಗಳು ರೈತರಿಗೆ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ವೀಕ್ಷಿಸಲು, ಅವುಗಳ ಪ್ರಾಯೋಗಿಕ ಅನ್ವಯಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕ್ಷೇತ್ರ ಪರಿಸ್ಥಿತಿಗಳಲ್ಲಿ ಅವುಗಳ ಪ್ರಯೋಜನಗಳನ್ನು ಮೌಲ್ಯಮಾಪನ ಮಾಡಲು ನೇರ ಅವಕಾಶಗಳನ್ನು ಒದಗಿಸುತ್ತವೆ.

  • 1,650 ತಂಡಗಳಲ್ಲಿ ಪ್ರತಿಯೊಂದಕ್ಕೂ ಬೆಳೆ ಋತುವಿನಲ್ಲಿ ಮೂರು ಕ್ಷೇತ್ರ ಅಥವಾ ಕೊಯ್ಲು ದಿನಗಳು ಮತ್ತು ಎರಡು ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸಲು ನೀಡಲಾಗಿದ್ದು, ಪ್ರತಿಯೊಂದು ಚಟುವಟಿಕೆಯು ಸುಮಾರು 125 ರೈತರನ್ನು ಗುರಿಯಾಗಿಸಿಕೊಂಡಿದೆ.
  • ಈ ಚಟುವಟಿಕೆಗಳು ಒಟ್ಟಾರೆಯಾಗಿ ಸುಮಾರು 10 ಲಕ್ಷ ರೈತರನ್ನು ತಲುಪುವ ನಿರೀಕ್ಷೆಯಿದೆ.

ಸೋಶಿಯಲ್ ಮೀಡಿಯಾ ತಲುಪುವಿಕೆ

 ಡಿಜಿಟಲ್ ವೇದಿಕೆಗಳು ಸುಧಾರಿತ ಕೃಷಿ ಪದ್ಧತಿಗಳು, ತಾಂತ್ರಿಕ ಸಲಹೆಗಳು ಮತ್ತು ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮಾಹಿತಿಯನ್ನು ಪ್ರಸಾರ ಮಾಡಲು ಪ್ರಮುಖ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ, ಆ ಮೂಲಕ ಅಭಿಯಾನದ ವ್ಯಾಪ್ತಿಯನ್ನು ಕ್ಷೇತ್ರ ಮಟ್ಟದ ಚಟುವಟಿಕೆಗಳಿಂದಾಚೆಗೆ ವಿಸ್ತರಿಸುತ್ತವೆ.

  • ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಮತ್ತು ಇತರ ಸೂಕ್ತ ಡಿಜಿಟಲ್ ವೇದಿಕೆಗಳ ಮೂಲಕ ದಿನನಿತ್ಯದ ನವೀಕರಣಗಳನ್ನು ಪ್ರಸಾರ ಮಾಡಲು ತಂಡಗಳನ್ನು ಸಂಘಟಿಸಲಾಗುತ್ತದೆ.
  • ಅಭಿಯಾನವು ಸೋಶಿಯಲ್ ಮೀಡಿಯಾ ಮೂಲಕ 1.5 ಕೋಟಿ ರೈತರನ್ನು ತಲುಪುವ ಮತ್ತು ಒಟ್ಟಾರೆ ಡಿಜಿಟಲ್ ತಲುಪುವಿಕೆಯನ್ನು 2.5 ಕೋಟಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ರೈತರನ್ನು ಯೋಜನೆಗಳು ಮತ್ತು ಸೇವೆಗಳೊಂದಿಗೆ ಜೋಡಿಸುವುದು

ಪ್ರಮುಖ ಕೃಷಿ ಯೋಜನೆಗಳು, ಸೇವೆಗಳು ಮತ್ತು ಪದ್ಧತಿಗಳ ಬಗ್ಗೆ ರೈತರಿಗೆ ಪರಿಚಯಿಸಲು ಅಭಿಯಾನವು ನಿರ್ದಿಷ್ಟ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳುತ್ತದೆ. ಇವುಗಳಲ್ಲಿ ಪಿಎಂ-ಕಿಸಾನ್, ಸಮತೋಲಿತ ಕೀಟನಾಶಕ ಬಳಕೆ, ಮಣ್ಣಿನ ಆರೋಗ್ಯ ಕಾರ್ಡ್‌ಗಳು, ಅನ್ವಯವಾಗುವ ಗೊಬ್ಬರ ಮಾರಾಟ ಚೌಕಟ್ಟು ಮತ್ತು ವ್ಯಾಪಾರ ಒಪ್ಪಂದಗಳ ಸಂಭಾವ್ಯ ಪ್ರಯೋಜನಗಳು ಸೇರಿವೆ. ಇದು ರೈತರ ಐಡಿಗಳನ್ನು ಸೃಷ್ಟಿಸುವುದು ಹಾಗೂ ನವೀಕರಿಸುವುದನ್ನು ಸುಗಮಗೊಳಿಸುತ್ತದೆ ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ರಕ್ಷಣೆಯ ಮಾಹಿತಿಯನ್ನು ಪ್ರಸಾರ ಮಾಡುತ್ತದೆ. ಹೆಚ್ಚುವರಿಯಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಕೈಗೊಳ್ಳುವ ಸ್ಯಾಚುರೇಶನ್ ಡ್ರೈವ್‌ಗಳು (ಪರಿಪೂರ್ಣತಾ ಪ್ರಚಾರಗಳು) ಅರ್ಹ ರೈತರಿಗೆ ಸಾಂಸ್ಥಿಕ ಸಾಲದ ಲಭ್ಯತೆಯನ್ನು ಸುಗಮಗೊಳಿಸಲು ಶ್ರಮಿಸುತ್ತವೆ.

.

ಒಟ್ಟಾರೆಯಾಗಿ, ಈ ಮಧ್ಯಸ್ಥಿಕೆಗಳು ಸರ್ಕಾರಿ ಬೆಂಬಲ ವ್ಯವಸ್ಥೆಗಳ ಕುರಿತು ರೈತರ ಜಾಗೃತಿಯನ್ನು ಬಲಪಡಿಸಲು ಮತ್ತು ಅತ್ಯಗತ್ಯ ಕೃಷಿ ಸೇವೆಗಳು, ಸಾಂಸ್ಥಿಕ ಸಾಲ ಹಾಗೂ ಅಪಾಯ-ತಗ್ಗಿಸುವ ಸಾಧನಗಳ ಲಭ್ಯತೆಯನ್ನು ಸುಧಾರಿಸಲು ಶ್ರಮಿಸುತ್ತವೆ. ಆ ಮೂಲಕ ಕೃಷಿ ಜೀವನೋಪಾಯದ ಸಾಂಸ್ಥಿಕ ಮತ್ತು ಆರ್ಥಿಕ ಬುನಾದಿಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ.

ಸುಸ್ಥಿರ ಕೃಷಿಯ ಬುನಾದಿಯನ್ನು ಬಲಪಡಿಸುವುದು

ಖೇತ್ ಬಚಾವೋ ಅಭಿಯಾನ-ರಬಿ 2026 ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಕೃಷಿ ವಿಕಾಸದ ಕೇಂದ್ರಬಿಂದುವಾಗಿರಿಸಲು ಶ್ರಮಿಸುತ್ತದೆ. ವೈಜ್ಞಾನಿಕ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಕೃಷಿ ವಿಸ್ತರಣಾ ಜಾಲಗಳು ಮತ್ತು ಕೃಷಿಕ ಸಮುದಾಯಗಳ ನಡುವಿನ ಸಮನ್ವಯದ ಮೂಲಕ, ಇದು ವೈಜ್ಞಾನಿಕ ಜ್ಞಾನವನ್ನು ಸ್ಥಳ-ನಿರ್ದಿಷ್ಟ ಕೃಷಿ ಪದ್ಧತಿಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಇದರ ಸಮಗ್ರ ವಿಧಾನವು ಸುಧಾರಿತ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ರೈತರ ಜಾಗೃತಿ, ಸಾಮರ್ಥ್ಯ ವರ್ಧನೆ, ಕ್ಷೇತ್ರ ಪ್ರಾತ್ಯಕ್ಷಿಕೆಗಳು ಮತ್ತು ಡಿಜಿಟಲ್ ತಲುಪುವಿಕೆಯನ್ನು ಒಂದೆಡೆ ಸಂಯೋಜಿಸುತ್ತದೆ. ಸಮತೋಲಿತ ಪೋಷಕಾಂಶ ನಿರ್ವಹಣೆ, ನೈಸರ್ಗಿಕ ಕೃಷಿ ಮತ್ತು ದಕ್ಷ ಪರಿಕರ ಬಳಕೆಯೊಂದಿಗೆ, ಈ ಅಭಿಯಾನವು ಬೆಳೆ ವೈವಿಧ್ಯೀಕರಣ, ತ್ಯಾಜ್ಯ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೇಳುತ್ತದೆ. ಸಾಂಸ್ಥಿಕ ಸಮನ್ವಯ ಮತ್ತು ರೈತರ ಭಾಗವಹಿಸುವಿಕೆಯ ಮೇಲಿನ ಇದರ ಗಮನವು ತಳಮಟ್ಟದ ವಿಸ್ತರಣಾ ವ್ಯವಸ್ಥೆಗಳನ್ನು ಹಾಗೂ ಕೃಷಿ ಸೇವೆಗಳ ಲಭ್ಯತೆಯನ್ನು ಬಲಪಡಿಸುತ್ತದೆ.

ಈ ಮಧ್ಯಸ್ಥಿಕೆಗಳು ಸಂಪನ್ಮೂಲ-ದಕ್ಷ ಕೃಷಿ ವ್ಯವಸ್ಥೆಗಳು, ಆರೋಗ್ಯಕರ ಮಣ್ಣು ಮತ್ತು ಸ್ಥಿತಿಸ್ಥಾಪಕ ಕೃಷಿ ಜೀವನೋಪಾಯಗಳನ್ನು ಬೆಂಬಲಿಸುತ್ತವೆ, ಆ ಮೂಲಕ 'ವಿಕಸಿತ ಭಾರತ'ದ ವ್ಯಾಪಕ ಪರಿಕಲ್ಪನೆಗೆ ಕೊಡುಗೆ ನೀಡುತ್ತವೆ. ಇದಲ್ಲದೆ, ಈ ಅಭಿಯಾನವು ಸುಸ್ಥಿರ ಅಭಿವೃದ್ಧಿ ಗುರಿಗಳ ಕಡೆಗೆ, ವಿಶೇಷವಾಗಿ 'ಶೂನ್ಯ ಹಸಿವು' ಮತ್ತು 'ಹವಾಮಾನ ಕ್ರಿಯೆ' ಕಡೆಗೆ ದಾರಿಸಗಲು ಬೆಂಬಲ ನೀಡುತ್ತದೆ.

References

Ministry of Agriculture and Farmers Welfare

https://www.pib.gov.in/PressNoteDetails.aspx?NoteId=159311&ModuleId=3&reg=48&lang=1

https://www.manage.gov.in/publications/eBooks/DAESI_%20Vol%20I_Study%20Material.pdf

https://vikalp.kisansarathi.in/#home

https://www.pib.gov.in/PressReleaseDetail.aspx?PRID=2302428&reg=48&lang=1

https://www.pib.gov.in/PressReleasePage.aspx?PRID=2326112&reg=48&lang=2

https://www.pib.gov.in/PressReleasePage.aspx?PRID=2266794&lang=1&reg=1

https://www.pib.gov.in/PressReleasePage.aspx?PRID=2288740&reg=48&lang=2

https://icar.gov.in/en/icar-mgifri-motihari-takes-khet-bachao-abhiyan-indias-frontier-villages-promotes-soil-health-and

Indian Council of Agricultural Research

https://icar.org.in/sites/default/files/2026-10/Khet-Bachaao-Abhiyaan-2026.pdf

https://icar.org.in/sites/default/files/Circulars/ICAR%20Insights%20Outcomes%20Booklet%20%28English%29.pdf

https://icar.org.in/sites/default/files/Circulars/Farmers%20Innovations_2025___English.pdf

 

Click to see pdf

 

*****

(Explainer ID: 160675) आगंतुक पटल : 8
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Telugu