Technology
ಭಾರತದ ಹೊಸ ಯುಗದ ಬಾಹ್ಯಾಕಾಶ ತಂತ್ರಜ್ಞಾನಗಳು
ಸ್ವಾವಲಂಬನೆಯತ್ತ ಹೆಜ್ಜೆ
Posted On:
28 OCT 2026 12:13PM
|
ಭಾರತದ ಬಾಹ್ಯಾಕಾಶ ಪಯಣವು 1963ರಲ್ಲಿ ಕೇರಳದ ತುಂಬಾದಿಂದ ಉಡಾವಣೆಗೊಂಡ ಸೌಂಡಿಂಗ್ ರಾಕೆಟ್ನೊಂದಿಗೆ ಆರಂಭವಾಯಿತು. ಈಗ ಇದು ಮುಂಬರುವ 'ಭಾರತೀಯ ಬಾಹ್ಯಾಕಾಶ ನಿಲ್ದಾಣ'ದ ಕಡೆಗೆ ದೃಷ್ಟಿ ಹರಿಸಿದೆ. ಹೊಸ ತಂತ್ರಜ್ಞಾನಗಳು ಈ ಪ್ರಗತಿಗೆ ಚಾಲನೆ ನೀಡುತ್ತಿವೆ. ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳು, ಎಲೆಕ್ಟ್ರಿಕ್, ಹಸಿರು ಮತ್ತು ಪರಮಾಣು ಪ್ರೊಪಲ್ಷನ್ (ಚಾಲನಾ ವ್ಯವಸ್ಥೆ) ಹಾಗೂ ಕಕ್ಷೆಯಲ್ಲಿಯೇ ಸೇವಾ ಸೌಲಭ್ಯ ಒದಗಿಸುವುದು ಇವುಗಳಲ್ಲಿ ಸೇರಿವೆ. 'ಸ್ಪೇಡೆಕ್ಸ್' ಮೂಲಕ, ಕಕ್ಷೆಯಲ್ಲಿ ಎರಡು ಬಾಹ್ಯಾಕಾಶ ನೌಕೆಗಳ ಸ್ವಾಯತ್ತ ಡಾಕಿಂಗ್ ಸಾಧಿಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು. ಈ ಪ್ರಗತಿಗಳು ಸ್ವಾವಲಂಬನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಇದರ ಜೊತೆಗೆ, 'ಗಗನಯಾನ' ಯೋಜನೆಯು ಭಾರತದ ಮಾನವ ಸಹಿತ ಬಾಹ್ಯಾಕಾಶಯಾನದ ಗುರಿಗಳನ್ನು ಮುನ್ನಡೆಸುತ್ತಿದೆ.
|
ಬಾಹ್ಯಾಕಾಶ ವಿಜ್ಞಾನ ಮತ್ತು ಇಂದಿನ ಪ್ರಸ್ತುತತೆ
ಡಾ. ವಿಕ್ರಮ್ ಎ. ಸಾರಾಭಾಯ್ ಅವರ ದೂರದೃಷ್ಟಿಯಡಿ 1962ರಲ್ಲಿ 'ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ' ಸ್ಥಾಪನೆಯೊಂದಿಗೆ ಭಾರತದ ವ್ಯವಸ್ಥಿತ ಬಾಹ್ಯಾಕಾಶ ಚಟುವಟಿಕೆಗಳು ಆರಂಭವಾದವು. ಕೇರಳದ ತುಂಬಾದಿಂದ ಮೊದಲ ಸೌಂಡಿಂಗ್ ರಾಕೆಟ್ ಅನ್ನು ನವೆಂಬರ್ 21, 1963 ರಂದು ಉಡಾವಣೆ ಮಾಡಲಾಯಿತು. ಐಎನ್ಸಿಒಪಿಎಆರ್ ಬದಲಿಗೆ ಆಗಸ್ಟ್ 15, 1969 ರಂದು 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ' ರಚನೆಯಾಯಿತು ಮತ್ತು ನಂತರ 1972ರಲ್ಲಿ ಇದನ್ನು ಬಾಹ್ಯಾಕಾಶ ಇಲಾಖೆಯ ನೇರ ನಿಯಂತ್ರಣಕ್ಕೆ ತರಲಾಯಿತು. ಆರಂಭದಿಂದಲೂ ಇಸ್ರೋ ಅಭಿವೃದ್ಧಿ-ಮೊದಲ ತತ್ವವನ್ನು ಅನುಸರಿಸಿದೆ: ಅಂದರೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಭೂಮಿಯ ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ಬಳಸುವುದು. ದಶಕಗಳಲ್ಲಿ ಇದು ಕೇವಲ ಉಡಾವಣಾ ಸೇವಾ ಪೂರೈಕೆದಾರನಾಗಿ ಮಾತ್ರವಲ್ಲದೆ, ತನ್ನ ದಕ್ಷತೆ ಮತ್ತು ತಾಂತ್ರಿಕ ಉತ್ಕೃಷ್ಟತೆಯಿಂದ ಜಾಗತಿಕ ಮನ್ನಣೆಯನ್ನು ಗಳಿಸಿದೆ. ಈ ಖ್ಯಾತಿಯು ಈಗ ಒಂದು ಸರಳ ಭರವಸೆಯ ಮೇಲೆ ನಿಂತಿದೆ: ಪ್ರತಿ ಮಿಷನ್ ಸಾಮಾನ್ಯ ನಾಗರಿಕನಿಗೆ ಸೇವೆ ಸಲ್ಲಿಸಬೇಕು.
ಈ ದೂರದೃಷ್ಟಿಯು ಈಗ ದೇಶಾದ್ಯಂತ ದೈನಂದಿನ ಜೀವನವನ್ನು ರೂಪಿಸುತ್ತಿದೆ. ಸಂವಹನ ಉಪಗ್ರಹಗಳು ದೂರದ ಮತ್ತು ಹಿಂದುಳಿದ ಪ್ರದೇಶಗಳಿಗೆ ಸಂಪರ್ಕವನ್ನು ವಿಸ್ತರಿಸುತ್ತವೆ. ಭೂಮಿ ವೀಕ್ಷಣಾ ಡೇಟಾವು ಕೃಷಿ, ವಿಪತ್ತು ಮೌಲ್ಯಮಾಪನ, ಯೋಜನೆ, ಪರಿಸರ ಮೇಲ್ವಿಚಾರಣೆ ಮತ್ತು ಇತರ ರಾಷ್ಟ್ರೀಯ ಅವಶ್ಯಕತೆಗಳನ್ನು ಬೆಂಬಲಿಸುತ್ತದೆ. ಹವಾಮಾನ ಉಪಗ್ರಹಗಳು ಚಂಡಮಾರುತಗಳು ಮತ್ತು ಮಾನ್ಸೂನ್ಗಳನ್ನು ಪತ್ತೆಹಚ್ಚುತ್ತವೆ, ಜೀವಗಳನ್ನು ಉಳಿಸುವ ಮುಂಚಿತ ಎಚ್ಚರಿಕೆಗಳನ್ನು ನೀಡುತ್ತವೆ. ಮೀನುಗಾರರು, ರೈತರು ಮತ್ತು ಕರಾವಳಿ ಸಮುದಾಯಗಳು ತಮ್ಮ ಜೀವೂವನವನ್ನು ರಕ್ಷಿಸಿಕೊಳ್ಳಲು ಈ ಎಚ್ಚರಿಕೆಗಳನ್ನು ಅವಲಂಬಿಸಿವೆ. ಈ ವ್ಯವಸ್ಥೆಗಳು ನಾಗರಿಕರನ್ನು ಸಂಪರ್ಕಿಸುತ್ತವೆ, ಸಮುದಾಯಗಳನ್ನು ರಕ್ಷಿಸುತ್ತವೆ, ಆಡಳಿತವನ್ನು ಬಲಪಡಿಸುತ್ತವೆ ಮತ್ತು ಸಮಗ್ರ, ಸುಸ್ಥಿರ ಬೆಳವಣಿಗೆಯನ್ನು ಚಾಲನೆ ಮಾಡುತ್ತವೆ. ಈ ಸೇವೆಗಳ ಹೊರತಾಗಿ, ಬಾಹ್ಯಾಕಾಶವು ಭಾರತದ ಗಡಿಗಳನ್ನು ರಕ್ಷಿಸುತ್ತದೆ ಮತ್ತು ಅದರ ಭವಿಷ್ಯವನ್ನು ರೂಪಿಸುತ್ತದೆ. ಬಾಹ್ಯಾಕಾಶ ಆಧಾರಿತ ಸಂವಹನ ವ್ಯವಸ್ಥೆಗಳು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ಅವಶ್ಯಕತೆಗಳನ್ನು ಬೆಂಬಲಿಸುತ್ತವೆ.
ಈ ಸಾಮರ್ಥ್ಯಗಳ ಮೇಲೆ ನಿರ್ಮಿಸಲಾದ ಉದಯೋನ್ಮುಖ ತಂತ್ರಜ್ಞಾನಗಳು ನಾವೀನ್ಯತೆ, ಸಂಪರ್ಕ ಮತ್ತು ಸೇವಾ ವಿತರಣೆಗೆ ಹೊಸ ಮಾರ್ಗಗಳನ್ನು ತೆರೆಯುತ್ತಿವೆ. ಖಾಸಗಿ ಉದ್ಯಮಗಳು ಮತ್ತು ಸ್ಟಾರ್ಟ್ಅಪ್ಗಳು ಈಗ ಈ ಪಯಣದಲ್ಲಿ ಕೈಜೋಡಿಸುತ್ತಿವೆ. ಇದು ಭಾರತವನ್ನು ವಿಶ್ವಾಸಾರ್ಹ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಗೌರವಿಸಲ್ಪಟ್ಟ ಬಾಹ್ಯಾಕಾಶ ಶಕ್ತಿಯನ್ನಾಗಿ ನೆಲೆಗೊಳಿಸುತ್ತದೆ. ಹೆಚ್ಚಿನ ವಿವರಗಳಿಗೆ ವಿವರವಾಗಿ ಓದಿ: ಭಾರತದ ಬಾಹ್ಯಾಕಾಶ ಒಡಿಸ್ಸಿ ಕ್ಲಿಕ್ ಮಾಡಿ
|
ಸೃಜನಶೀಲ ಮನಸ್ಸುಗಳು, ವಿಜ್ಞಾನದ ಪ್ರೇರಕ ಶಕ್ತಿ, ತಂತ್ರಜ್ಞಾನಗಳ ಸಬಲೀಕರಣ

ಇಎಸ್ಟಿಐಸಿ-2026 ಭಾರತದ ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನ, ಭಾರತದ ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನದ (ESTIC 2026) ಎರಡನೇ ಆವೃತ್ತಿಯು 2026ರ ಅಕ್ಟೋಬರ್ 27 ರಿಂದ 29 ರವರೆಗೆ ನವದೆಹಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದ ವಿಷಯಾಧಾರಿತ ಕಾರ್ಯಕ್ರಮಗಳಲ್ಲಿ ಒಂದಾದ 'ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನಗಳು' ಕುರಿತ ವಿಷಯಾಧಾರಿತ ಗೋಷ್ಠಿಯನ್ನು ಬಾಹ್ಯಾಕಾಶ ಇಲಾಖೆ / ಇಸ್ರೋ ಅಕ್ಟೋಬರ್ 29, 2026 ರಂದು ಆಯೋಜಿಸುತ್ತಿದೆ. ಹೆಚ್ಚಿನ ವಿವರಗಳಿಗೆ ಕಾರ್ಯಸೂಚಿಯನ್ನು ಓದಿ: ಇಎಸ್ಟಿಐಸಿ 2026
|
ಉದಯೋನ್ಮುಖ ಬಾಹ್ಯಾಕಾಶ ತಂತ್ರಜ್ಞಾನಗಳು
ಭಾರತವು ಹೆಚ್ಚಿನ ಸ್ವಾವಲಂಬನೆ ಮತ್ತು ದಿಟ್ಟ ಗುರಿಗಳತ್ತ ಸಾಗುತ್ತಿರುವಂತೆ, ಈ ಪಯಣಕ್ಕೆ ಶಕ್ತಿ ತುಂಬಲು ಹೊಸ ಪೀಳಿಗೆಯ ತಂತ್ರಜ್ಞಾನಗಳು ರೂಪುಗೊಳ್ಳುತ್ತಿವೆ. ಈ ನಾವೀನ್ಯತೆಗಳು ಮುಂದಿನ ಪೀಳಿಗೆಯ ಉಡಾವಣಾ ವ್ಯವಸ್ಥೆಗಳು, ಬಾಹ್ಯಾಕಾಶ ಕಾರ್ಯಾಚರಣೆಗಳು, ಮಾನವ ಸಹಿತ ಬಾಹ್ಯಾಕಾಶಯಾನ ಮತ್ತು ಸುಧಾರಿತ ನ್ಯಾವಿಗೇಷನ್ ಹಾಗೂ ಸಂವಹನಗಳನ್ನು ಒಳಗೊಂಡಿವೆ. ಇವು ಭಾರತದ ಆರಂಭಿಕ ಸಾಧನೆಗಳಿಂದ ಭವಿಷ್ಯಕ್ಕೆ ಸಿದ್ಧವಿರುವ ಬಾಹ್ಯಾಕಾಶ ಕಾರ್ಯಕ್ರಮದತ್ತ ಆದ ಬದಲಾವಣೆಯನ್ನು ಸೂಚಿಸುತ್ತವೆ. ಮುಂಬರುವ ದಶಕಗಳಿಗಾಗಿ ನಿರ್ಮಿಸಲಾದ ಈ ಸಂಬಂಧಿತ ಕಾರ್ಯಕ್ರಮಗಳು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ, ನಿರಂತರ ಸಂಪರ್ಕದಲ್ಲಿ ಮತ್ತು ಸಂಪೂರ್ಣ ಸ್ವಾವಲಂಬಿಯಾಗಿಡುವ ಗುರಿಯನ್ನು ಹೊಂದಿವೆ.

ಮುಂದಿನ ಪೀಳಿಗೆಯ ಉಡಾವಣಾ ವಾಹನಗಳು
ಬಾಹ್ಯಾಕಾಶ ಪ್ರವೇಶವು ಉಡಾವಣೆ ಮಾಡುವ ಸಾಮರ್ಥ್ಯದೊಂದಿಗೆ ಪ್ರಾರಂಭವಾಗುತ್ತದೆ. ಸ್ವಂತ ರಾಕೆಟ್ಗಳನ್ನು ನಿರ್ಮಿಸಿ ಹಾರಿಸಬಲ್ಲ ದೇಶವು ಯಾವಾಗ, ಹೇಗೆ ಮತ್ತು ಎಷ್ಟು ವೆಚ್ಚದಲ್ಲಿ ಬಾಹ್ಯಾಕಾಶ ತಲುಪಬೇಕು ಎಂಬುದನ್ನು ತಾನೇ ನಿರ್ಧರಿಸುತ್ತದೆ. ಭಾರತದ ಉಡಾವಣಾ ಪಯಣವು ಸಣ್ಣ, ಒಮ್ಮೆ ಮಾತ್ರ ಬಳಸಬಹುದಾದ ರಾಕೆಟ್ಗಳಿಂದ ಭಾರೀ ಉಪಗ್ರಹಗಳನ್ನು ಹೊರಬಲ್ಲ ವಾಹನಗಳವರೆಗೆ ಬೆಳೆದಿದ್ದು, ಈಗ ಮರುಬಳಕೆ ಮಾಡಬಹುದಾದ ವ್ಯವಸ್ಥೆಗಳತ್ತ ಹೆಜ್ಜೆ ಇಡುತ್ತಿದೆ.
|
ಭಾರತದ ಸಾಂಪ್ರದಾಯಿಕ ಉಡಾವಣಾ ವಾಹನಗಳು
- ಪಿಎಸ್ಎಲ್ವಿ (ಪಿಎಸ್ಎಲ್ವಿ): ಇಸ್ರೋದ ಅತ್ಯಂತ ವಿಶ್ವಾಸಾರ್ಹ ಕಾರ್ಯಕುದುರೆ ಎಂದೇ ಹೆಸರು ಪಡೆದಿರುವ ಪಿಎಸ್ಎಲ್ವಿ, ಮಿಷನ್ನ ಸಂರಚನೆಗೆ ಅನುಗುಣವಾಗಿ 600 ಕಿಮೀ ಸೂರ್ಯ-ಸಮಕಾಲಿಕ ಧ್ರುವೀಯ ಕಕ್ಷೆಗೆ 1,750 ಕೆಜಿ ವರೆಗೆ ಮತ್ತು ಉಪ-ಭೂಸಮಕಾಲಿಕ ವರ್ಗಾವಣೆ ಕಕ್ಷೆಗೆ 1,425 ಕೆಜಿ ವರೆಗೆ ಹೊತ್ತೊಯ್ಯಬಲ್ಲದು.
- ಜಿಎಸ್ಎಲ್ವಿ ಇದು ಸ್ವದೇಶಿ ಕ್ರಯೋಜೆನಿಕ್ ಮೇಲ್ಹಂತವನ್ನು ಬಳಸುತ್ತದೆ ಮತ್ತು 2-ಟನ್ ವರ್ಗದವರೆಗಿನ ಸಂವಹನ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು.
- ಎಲ್ವಿಎಂ3 : ಇದು ಭಾರತದ ಭಾರೀ ಉಪಗ್ರಹಗಳನ್ನು ಹೊರಬಲ್ಲ ಉಡಾವಣಾ ವಾಹನವಾಗಿದೆ. ಇದು ಭೂಸಮಕಾಲಿಕ ವರ್ಗಾವಣೆ ಕಕ್ಷೆಗೆ 4-ಟನ್ ವರ್ಗದ ಸಂವಹನ ಉಪಗ್ರಹಗಳನ್ನು ಮತ್ತು ಕೆಳ ಭೂಮಿ ಕಕ್ಷೆಗೆ 10-ಟನ್ ವರ್ಗದ ಪೇಲೋಡ್ಗಳನ್ನು ಕೊಂಡೊಯ್ಯಬಲ್ಲದು.
- ಎಸ್ಎಸ್ಎಲ್ವಿ: ಎಸ್ಎಸ್ಎಲ್ವಿ ಮೂರು ಹಂತದ ವಾಹನವಾಗಿದ್ದು, ಉಡಾವಣೆಯ ಸಮಯದಲ್ಲಿ ಸುಮಾರು 120 ಟನ್ ತೂಕ ಹೊಂದಿರುತ್ತದೆ. ಇದು ಸುಮಾರು 500-ಕೆಜಿ ವರ್ಗದವರೆಗಿನ ಉಪಗ್ರಹಗಳನ್ನು 500 ಕಿಮೀ ಸಮತಲ ಕಕ್ಷೆಗೆ ಉಡಾವಣೆ ಮಾಡಬಲ್ಲದು.
|
ಸೆಪ್ಟೆಂಬರ್ 2024ರಲ್ಲಿ, ಕೇಂದ್ರ ಸಚಿವ ಸಂಪುಟವು 'ಮುಂದಿನ ಪೀಳಿಗೆಯ ಉಡಾವಣಾ ವಾಹನ' ಅಭಿವೃದ್ಧಿಗೆ ಅನುಮೋದನೆ ನೀಡಿತು. ಅನುಮೋದಿತ ₹8,240 ಕೋಟಿ ವೆಚ್ಚವು ಅಭಿವೃದ್ಧಿ ವೆಚ್ಚಗಳು, ಮೂರು ಅಭಿವೃದ್ಧಿ ಪರೀಕ್ಷಾರ್ಥ ಹಾರಾಟಗಳು, ಅತ್ಯಗತ್ಯ ಸೌಲಭ್ಯಗಳು, ಕಾರ್ಯಕ್ರಮ ನಿರ್ವಹಣೆ ಮತ್ತು ಉಡಾವಣಾ ಅಭಿಯಾನವನ್ನು ಒಳಗೊಂಡಿದೆ. ಕೆಳ ಭೂಮಿ ಕಕ್ಷೆಗೆ ಗರಿಷ್ಠ 30 ಟನ್ಗಳಷ್ಟು ಸಾಮರ್ಥ್ಯಕ್ಕಾಗಿ ವಿನ್ಯಾಸಗೊಳಿಸಲಾದ ಎನ್ಜಿಎಲ್ವಿ, ಎಲ್ವಿಎಂ ನ 10-ಟನ್ ಲಿಯೋ ಮಿತಿಗೆ ಹೋಲಿಸಿದರೆ ಭಾರತದ ಪ್ರಸ್ತುತ ಉಡಾವಣಾ ಪೇಲೋಡ್ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ. ಇದಲ್ಲದೆ, ಬಾಹ್ಯಾಕಾಶ ಪ್ರವೇಶದ ವೆಚ್ಚವನ್ನು ಕಡಿಮೆ ಮಾಡಲು 14-ಟನ್ ಲಿಯೋ ಪೇಲೋಡ್ ಸಾಮರ್ಥ್ಯವನ್ನು ಹೊಂದಿರುವ ಭಾಗಶಃ ಮರುಬಳಕೆ ಮಾಡಬಹುದಾದ ಎನ್ಜಿಎಲ್ವಿ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಮರುಬಳಕೆಯ ವೈಶಿಷ್ಟ್ಯವು ಬಾಹ್ಯಾಕಾಶವನ್ನು ತಲುಪುವ ವೆಚ್ಚವನ್ನು ಮತ್ತಷ್ಟು ತಗ್ಗಿಸುತ್ತದೆ.
ಎನ್ಜಿಎಲ್ವಿ ರಾಷ್ಟ್ರೀಯ ಮತ್ತು ವಾಣಿಜ್ಯ ಎರಡೂ ಮಿಷನ್ಗಳನ್ನು ಸಕ್ರಿಯಗೊಳಿಸುತ್ತದೆ. ಇವುಗಳಲ್ಲಿ 'ಭಾರತೀಯ ಬಾಹ್ಯಾಕಾಶ ನಿಲ್ದಾಣ'ಕ್ಕೆ ಮಾನವ ಸಹಿತ ಬಾಹ್ಯಾಕಾಶಯಾನ ಮಿಷನ್ಗಳು, ಹಾಗೆಯೇ ಚಂದ್ರ ಮತ್ತು ಗ್ರಹಾಂತರ ಸಂಶೋಧನೆಗಳು ಸೇರಿವೆ. ಇದು ಕೆಳ ಭೂಮಿ ಕಕ್ಷೆಗೆ ಸಂವಹನ ಮತ್ತು ಭೂಮಿ ವೀಕ್ಷಣಾ ಉಪಗ್ರಹಗಳ ಸಮೂಹಗಳನ್ನು ಸಹ ಉಡಾವಣೆ ಮಾಡಲಿದೆ. ಈ ಮಿಷನ್ಗಳು ಸಂಪೂರ್ಣ ಬಾಹ್ಯಾಕಾಶ ಪರಿಸರ ವ್ಯವಸ್ಥೆಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ದೇಶದ ಸಾಮರ್ಥ್ಯ ಹಾಗೂ ದಕ್ಷತೆಯನ್ನು ಹೆಚ್ಚಿಸುತ್ತವೆ.
|
ಪ್ರಮುಖ ಪದಗಳ ಅರ್ಥೈಸಿಕೊಳ್ಳುವಿಕೆ
ಸೂರ್ಯ-ಸಮಕಾಲಿಕ ಕಕ್ಷೆ: ಸೂರ್ಯ-ಸಮಕಾಲಿಕ ಕಕ್ಷೆಯು ಧ್ರುವ ಸಮೀಪದ ಕಕ್ಷೆಯಾಗಿದ್ದು, ಇದರಲ್ಲಿ ಉಪಗ್ರಹವು ಸರಿಸುಮಾರು ಒಂದೇ ರೀತಿಯ ಸ್ಥಳೀಯ ಸೌರ ಸಮಯದಲ್ಲಿ ನಿರ್ದಿಷ್ಟ ಪ್ರದೇಶದ ಮೇಲಿಂದ ಹಾದುಹೋಗುತ್ತದೆ. ಇದು ಒಂದೇ ರೀತಿಯ ಬೆಳಕಿನ ಪರಿಸ್ಥಿತಿಯಲ್ಲಿ ಹೋಲಿಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಒಂದು ನಿರ್ದಿಷ್ಟ ಸ್ಥಳದ ಪುನರಾವರ್ತಿತ ವೀಕ್ಷಣೆಗಳ ನಡುವಿನ ಕಾಲಾವಧಿಯು ಉಪಗ್ರಹ ಮತ್ತು ಅದರ ಕಕ್ಷೆಯನ್ನು ಅವಲಂಬಿಸಿ ಬದಲಾಗುತ್ತದೆ.
ಭೂಸಮಕಾಲಿಕ ವರ್ಗಾವಣೆ ಕಕ್ಷೆ: ಜಿಟಿಒ ಎಂಬುದು ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ವರ್ಗಾಯಿಸಲು ಬಳಸಲಾಗುವ ದೀರ್ಘವೃತ್ತದ ಮಧ್ಯಂತರ ಕಕ್ಷೆಯಾಗಿದೆ. ಇದರ ಅತ್ಯಂತ ಕೆಳ ಬಿಂದುವು (ಪೆರಿಜಿ) ಸಾಮಾನ್ಯವಾಗಿ ಭೂಮಿಯ ಮೇಲ್ಮೈಯಿಂದ ಕೆಲವು ನೂರು ಕಿಲೋಮೀಟರ್ ಎತ್ತರದಲ್ಲಿದ್ದರೆ, ಅತ್ಯುನ್ನತ ಬಿಂದುವು (ಅಪೋಜಿ) ಭೂಮಿಯ ಮೇಲ್ಮೈಯಿಂದ ಸುಮಾರು 35,786 ಕಿಮೀ ಹತ್ತಿರದಲ್ಲಿರುತ್ತದೆ. ಉಡಾವಣಾ ವಾಹನವು ಸಾಮಾನ್ಯವಾಗಿ ಉಪಗ್ರಹವನ್ನು ನೇರವಾಗಿ ಜಿಇಒಗೆ ತಲುಪಿಸುವ ಬದಲು ಜಿಟಿಒ ನಲ್ಲಿ ಇರಿಸುತ್ತದೆ. ಅಪೋಜಿ ಸಮೀಪಿಸುತ್ತಿದ್ದಂತೆ, ಉಪಗ್ರಹವು ತನ್ನ ಪೆರಿಜಿಯನ್ನು ಹೆಚ್ಚಿಸಲು ಮತ್ತು ಕಕ್ಷೆಯನ್ನು ವೃತ್ತಾಕಾರಗೊಳಿಸಲು ತನ್ನಲ್ಲಿರುವ ಅಪೋಜಿ ಮೋಟಾರ್ ಅನ್ನು ಪ್ರಚೋದಿಸುತ್ತದೆ. ಕಕ್ಷೆಯನ್ನು ಭೂಮಿಯ ಸಮಭಾಜಕ ವೃತ್ತದ ಸಮತಲಕ್ಕೆ ಜೋಡಿಸಲು ಹೆಚ್ಚುವರಿ ಪಥ ಬದಲಾವಣೆಗಳ ಅಗತ್ಯವಿರಬಹುದು. ಜಿಇಒ ನಲ್ಲಿ, ಉಪಗ್ರಹವು ಭೂಮಿಯ ಆವರ್ತನಕ್ಕೆ ಹೊಂದುವಂತೆ ಸಮಭಾಜಕ ವೃತ್ತದ ಮೇಲೆ ಕಕ್ಷೆಯಲ್ಲಿ ಸುತ್ತುತ್ತದೆ, ಹೀಗಾಗಿ ಇದು ನೆಲದ ಮೇಲಿಂದ ನೋಡಿದಾಗ ಸ್ಥಿರವಾಗಿರುವಂತೆ ಕಾಣುತ್ತದೆ.
ಕ್ರಯೋಜೆನಿಕ್ ಮೇಲ್ಹಂತ: ಕ್ರಯೋಜೆನಿಕ್ ಮೇಲ್ಹಂತವು ಉಡಾವಣಾ ವಾಹನದ ಅಂತಿಮ ಹಂತವಾಗಿದ್ದು, ಉಪಗ್ರಹಗಳನ್ನು ಅವುಗಳ ಉದ್ದೇಶಿತ ಕಕ್ಷೆಗಳಿಗೆ ತಲುಪಿಸಲು ಅಗತ್ಯವಿರುವ ಹೆಚ್ಚಿನ ದಕ್ಷತೆಯನ್ನು ಒದಗಿಸಲು ಈ ಇಂಧನಗಳನ್ನು ಬಳಸುತ್ತದೆ. ಜಿಎಸ್ಎಲ್ವಿಯಲ್ಲಿ ಬಳಸಲಾದ ಇಸ್ರೋದ ಸ್ವದೇಶಿ ಕ್ರಯೋಜೆನಿಕ್ ಮೇಲ್ಹಂತವು ದ್ರವ ಹೈಡ್ರೋಜನ್ (LH₂) ಅನ್ನು ಇಂಧನವಾಗಿ ಮತ್ತು ದ್ರವ ಆಮ್ಲಜನಕವನ್ನು ಆಕ್ಸಿಡೈಸರ್ ಆಗಿ ಬಳಸುತ್ತದೆ, ಇವೆರಡನ್ನೂ ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಇದು ಹಿಂದಿನ ಜಿಎಸ್ಎಲ್ವಿ ಹಾರಾಟಗಳಲ್ಲಿ ಬಳಸಲಾಗಿದ್ದ ರಷ್ಯಾ ಪೂರೈಸಿದ ಹಂತವನ್ನು ಭರ್ತಿ ಮಾಡಿದ್ದು, ಸುಧಾರಿತ ಉಡಾವಣಾ ವಾಹನ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆಯನ್ನು ಬಲಪಡಿಸಿದೆ.
|
ಪುಷ್ಪಕ್-ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್ಎಲ್ವಿ)
ಪುನರ್ಬಳಕೆಯ ಉಡಾವಣಾ ವಾಹನ (ಆರ್ಎಲ್ವಿ) ತಂತ್ರಜ್ಞಾನಗಳು ಉಡಾವಣಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಸಾಂಪ್ರದಾಯಿಕ ಏಕ-ಬಳಕೆಯ ಉಡಾವಣಾ ವಾಹನಗಳಿಗಿಂತ ಭಿನ್ನವಾಗಿ, ಮರುಬಳಕೆ ಮಾಡಬಹುದಾದ ವ್ಯವಸ್ಥೆಗಳನ್ನು ಮುಂದಿನ ಕಾರ್ಯಾಚರಣೆಗಳಿಗಾಗಿ ಅವುಗಳ ಪ್ರಮುಖ ಭಾಗಗಳನ್ನು ಮರಳಿ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳ ಅಭಿವೃದ್ಧಿಗೆ ನಿಯಂತ್ರಿತ ವಾತಾವರಣದ ಮರು-ಪ್ರವೇಶ, ಸ್ವಾಯತ್ತ ನ್ಯಾವಿಗೇಷನ್, ಏರೋಡೈನಾಮಿಕ್ ಹಾರಾಟ ಮತ್ತು ನಿಖರವಾದ ಲ್ಯಾಂಡಿಂಗ್ ಅಗೌತ್ಯವಿರುತ್ತದೆ. ಇಸ್ರೋ ತನ್ನ ರೆಕ್ಕೆಗಳನ್ನು ಹೊಂದಿರುವ ಮರುಬಳಕೆಯ ಉಡಾವಣಾ ವಾಹನ ತಂತ್ರಜ್ಞಾನದ ಪ್ರದರ್ಶಕ 'ಪುಷ್ಪಕ್' ಅನ್ನು ಬಳಸಿ ಸ್ವಾಯತ್ತ ರನ್ವೇ-ಲ್ಯಾಂಡಿಂಗ್ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಆರ್ಎಲ್ವಿ ಯ ಮೂರು ಲ್ಯಾಂಡಿಂಗ್ ಪ್ರಯೋಗಗಳು ಅನುಕ್ರಮವಾಗಿ 2 ಏಪ್ರಿಲ್ 2023, 22 ಮಾರ್ಚ್ 2024 ಮತ್ತು 23 ಜೂನ್ 2024 ರಂದು ಪೂರ್ಣಗೊಂಡವು. ಇದರಲ್ಲಿ ಲೆಕ್ಸ್-03 ಪ್ರಯೋಗವು ಹೆಚ್ಚು ಸವಾಲಿನ ಅಡ್ಡ-ಗಾಳಿ ಪರಿಸ್ಥಿತಿಗಳಲ್ಲಿ ಸ್ವಾಯತ್ತ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಬೀತುಪಡಿಸಿತು.
|
ಸ್ಕ್ರಾಮ್ಜೆಟ್ ತಂತ್ರಜ್ಞಾನ: ಭಾರತದ ಮರುಬಳಕೆಯ ಬಾಹ್ಯಾಕಾಶ ಸಾರಿಗೆಗೆ ಶಕ್ತಿ ತುಂಬುವುದು
ಸ್ಕ್ರಾಮ್ಜೆಟ್ (ಸೂಪರ್ಸಾನಿಕ್ ಕಂಬಸ್ಚನ್ ರಾಮ್ಜೆಟ್) ಎಂಬುದು ವಾಯು-ಉಸಿರಾಟದ ಜೆಟ್ ಎಂಜಿನ್ ಆಗಿದೆ. ಇದು ಕೇವಲ ಇಂಧನವನ್ನು ಒಯ್ಯುತ್ತದೆ ಮತ್ತು ಸುತ್ತಮುತ್ತಲಿನ ಗಾಳಿಯಿಂದ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಸಾಂಪ್ರದಾಯಿಕ ರಾಕೆಟ್ಗಳು ಇಂಧನ ಮತ್ತು ಆಕ್ಸಿಡೈಸರ್ (ಆಕ್ಸಿಡಿಕಾರಕ) ಎರಡನ್ನೂ ಹೊತ್ತೊಯ್ಯುತ್ತವೆ. ಆದ್ದರಿಂದ ಸ್ಕ್ರಾಮ್ಜೆಟ್ ಹಗುರವಾಗಿರುತ್ತದೆ ಮತ್ತು ಅಷ್ಟೇ ಉಡಾವಣಾ ತೂಕಕ್ಕೆ ಹೆಚ್ಚಿನ ಪೇಲೋಡ್ ಅನ್ನು ತಲುಪಿಸಬಲ್ಲದು. ಇದು ಅತ್ಯಂತ ಹೆಚ್ಚಿನ ವೇಗದಲ್ಲಿ ವಾತಾವರಣದ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಬೂಸ್ಟರ್ ರಾಕೆಟ್ ಮೊದಲು ಇದನ್ನು ವೇಗಗೊಳಿಸಬೇಕಾಗುತ್ತದೆ. ಇದರ ವೇಗವನ್ನು 'ಮ್ಯಾಕ್ ಸಂಖ್ಯೆ'ಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಮ್ಯಾಕ್ 1 ಅಂದರೆ ಶಬ್ದದ ವೇಗಕ್ಕೆ ಸಮನಾಗಿರುತ್ತದೆ. ಮ್ಯಾಕ್ 5 ಕ್ಕಿಂತ ಹೆಚ್ಚಿನ ವೇಗವನ್ನು ಹೈಪರ್ಸಾನಿಕ್ ಎಂದು ಕರೆಯಲಾಗುತ್ತದೆ. ವೆಚ್ಚವನ್ನು ಕಡಿಮೆ ಮಾಡಲು ಪ್ರಮುಖ ಭಾಗಗಳನ್ನು ಮರಳಿ ಪಡೆದು ಮತ್ತೆ ಹಾರಿಸುವ ಮರುಬಳಕೆಯ ಉಡಾವಣಾ ವಾಹನಗಳಿಗೆ ಸ್ಕ್ರಾಮ್ಜೆಟ್ಗಳು ಪೂರಕವಾಗಿ ಕೆಲಸ ಮಾಡಬಲ್ಲವು. ಇವು ಕೈಗೆಟುಕುವ ವೆಚ್ಚದಲ್ಲಿ ಬಾಹ್ಯಾಕಾಶ ಪ್ರವೇಶಕ್ಕೆ ಭರವಸೆಯ ಹಾದಿಯನ್ನು ನೀಡುತ್ತವೆ. ಭಾರತವು 28 ಆಗಸ್ಟ್ 2016 ರಂದು ತನ್ನ ಸ್ಕ್ರಾಮ್ಜೆಟ್ ಅನ್ನು ಹಾರಾಟ-ಪರೀಕ್ಷೆಗೆ ಒಳಪಡಿಸಿತು. ಇದು ಮ್ಯಾಕ್ 6 ಎಂಬ ಹೈಪರ್ಸಾನಿಕ್ ವೇಗವನ್ನು ತಲುಪಿತು, ಈ ಮೂಲಕ ಈ ತಂತ್ರಜ್ಞಾನವನ್ನು ಪ್ರದರ್ಶಿಸಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿತು. 22 ಜುಲೈ 2024 ರಂದು, ಇಸ್ರೋ ವಾಯು-ಉಸಿರಾಟದ ಚಾಲನ ವ್ಯವಸ್ಥೆಗಳನ್ನು ಪ್ರದರ್ಶಿಸಲು ಮತ್ತು ಅವುಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಆರ್ಎಚ್-560 ಸೌಂಡಿಂಗ್-ರಾಕೆಟ್ನ ಪ್ರಾಯೋಗಿಕ ಹಾರಾಟವನ್ನು ಪ್ರತ್ಯೇಕವಾಗಿ ನಡೆಸಿತು.
|
ಸ್ವದೇಶಿ ಬಾಹ್ಯಾಕಾಶ ಯಂತ್ರಾಂಶ ಮತ್ತು ನಿರ್ಣಾಯಕ ತಂತ್ರಜ್ಞಾನಗಳು
ಪ್ರತಿಯೊಂದು ಬಾಹ್ಯಾಕಾಶ ಯೋಜನೆಯೂ ಎಂಜಿನ್ಗಳು, ಥ್ರಸ್ಟರ್ಗಳು, ಇಂಧನಗಳು ಮತ್ತು ವಿದ್ಯುತ್ ವ್ಯವಸ್ಥೆಗಳು ಸೇರಿದಂತೆ ನಿರ್ಣಾಯಕ ತಂತ್ರಜ್ಞಾನಗಳನ್ನು ಆಧರಿಸಿರುತ್ತದೆ. ಈ ತಂತ್ರಜ್ಞಾನಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸುವುದರಿಂದ ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಮತ್ತು ಸ್ವತಂತ್ರವಾಗಿ ಗಗನನೌಕೆಗಳನ್ನು ನಿರ್ಮಿಸುವ ಹಾಗೂ ನಿರ್ವಹಿಸುವ ದೇಶದ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇಸ್ರೋ (ISRO) ಎಲೆಕ್ಟ್ರಿಕ್ ಪ್ರೊಪಲ್ಷನ್ ಮತ್ತು ಪರ್ಯಾಯ ಇಂಧನಗಳು ಸೇರಿದಂತೆ ಸ್ವದೇಶಿ ಚಾಲನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಭವಿಷ್ಯದ ಯೋಜನೆಗಳಿಗಾಗಿ ತಂತ್ರಜ್ಞಾನಗಳನ್ನು ಅನ್ವೇಷಿಸುತ್ತಿದೆ. ಈ ಪ್ರಯತ್ನಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆಯ ಭಾರತದ ದೀರ್ಘಕಾಲೀನ ಗುರಿಗೆ ಕೊಡುಗೆ ನೀಡುತ್ತವೆ.
ಪ್ರಗತಿಯ ಒಂದು ಪ್ರಮುಖ ಕ್ಷೇತ್ರವೆಂದರೆ ಎಲೆಕ್ಟ್ರಿಕ್ ಪ್ರೊಪಲ್ಷನ್ (ವಿದ್ಯುತ್ ಚಾಲನ ವ್ಯವಸ್ಥೆ), ಇದು ನೋದಕವನ್ನು (propellant) ವೇಗಗೊಳಿಸಲು ಮತ್ತು ತೂಕವನ್ನು ತಳ್ಳುವ ಶಕ್ತಿಯನ್ನು ಉತ್ಪಾದಿಸಲು ವಿದ್ಯುತ್ ಶಕ್ತಿಯನ್ನು ಬಳಸುತ್ತದೆ. ಸಾಂಪ್ರದಾಯಿಕ ರಾಸಾಯನಿಕ ಚಾಲನ ವ್ಯವಸ್ಥೆಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಇಂಧನವನ್ನು ಬಳಸಿ ಅದೇ ಕಕ್ಷೆಯ ಬದಲಾವಣೆಗಳನ್ನು ಸಾಧಿಸಬಲ್ಲದು. ಇದು ಉಪಗ್ರಹವು ಹೊತ್ತೊಯ್ಯುವ ಇಂಧನವನ್ನು ಕಡಿಮೆ ಮಾಡುತ್ತದೆ ಮತ್ತು ಸಂಪರ್ಕ ಉಪಕರಣಗಳು ಹಾಗೂ ಇತರ ಪೇಲೋಡ್ಗಳಿಗೆ ಹೆಚ್ಚಿನ ಜಾಗ ಮತ್ತು ತೂಕದ ಸಾಮರ್ಥ್ಯವನ್ನು ಒದಗಿಸುತ್ತದೆ. 27 ಮಾರ್ಚ್ 2025 ರಂದು, ಇಸ್ರೋ ತನ್ನ ಸ್ವದೇಶಿ 300 mN ಸ್ಟೇಷನರಿ ಪ್ಲಾಸ್ಮಾ ಥ್ರಸ್ಟರ್ನ 1,000 ಗಂಟೆಗಳ ಜೀವಿತಾವಧಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದರ 'ಸ್ಪೆಸಿಫಿಕ್ ಇಂಪಲ್ಸ್' (ಚಾಲನ ದಕ್ಷತೆಯ ಅಳತೆ) ಸಾಂಪ್ರದಾಯಿಕ ಚಾಲನ ವ್ಯವಸ್ಥೆಗಳಿಗಿಂತ ಕನಿಷ್ಠ ಆರು ಪಟ್ಟು ಹೆಚ್ಚಾಗಿದೆ. ಇಸ್ರೋ ತನ್ನ ತಂತ್ರಜ್ಞಾನ ಪ್ರದರ್ಶನ ಉಪಗ್ರಹ ಮೂಲಕ ಈ ತಂತ್ರಜ್ಞಾನವನ್ನು ಪರೀಕ್ಷಿಸಲು ಯೋಜಿಸಿದೆ. ಇದು ಕಕ್ಷೆಯನ್ನು ಏರಿಸುವುದು ಮತ್ತು ಕಕ್ಷೆಯನ್ನು ಕಾಯ್ದುಕೊಳ್ಳುವುದು ಸೇರಿದಂತೆ ಭವಿಷ್ಯದ ಎಲೆಕ್ಟ್ರಿಕ್-ಪ್ರೊಪಲ್ಷನ್ ಉಪಗ್ರಹಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ.
ಎಲೆಕ್ಟ್ರಿಕ್ ಪ್ರೊಪಲ್ಷನ್ ಜೊತೆಗೆ, ಇಸ್ರೋ ಪರಿಸರ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಚಾಲನ ದಕ್ಷತೆಯನ್ನು ಸುಧಾರಿಸಲು ಪರ್ಯಾಯ ನೋದಕಗಳನ್ನು (ಹಸಿರು ಚಾಲನ ವ್ಯವಸ್ಥೆ) ಅಭಿವೃದ್ಧಿಪಡಿಸುತ್ತಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ರಾಕೆಟ್ ದರ್ಜೆಯ ಸೀಮೆಎಣ್ಣೆಯಾದ 'ಇಸ್ರೋಸಿನ್'. ಸೆಮಿಕ್ರಯೋಜೆನಿಕ್ ರಾಕೆಟ್-ಎಂಜಿನ್ ಅನ್ವಯಗಳಿಗಾಗಿ ದ್ರವ ಆಮ್ಲಜನಕ-ಸೀಮೆಎಣ್ಣೆ ನೋದಕಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಹಸಿರು ಚಾಲನ ವ್ಯವಸ್ಥೆಯ ಪ್ರಗತಿಯು ಇಸ್ರೋದ ಸ್ವಂತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೀರಿಯೂ ವಿಸ್ತರಿಸಿದೆ. ಡಿಆರ್ಡಿಒದ ತಂತ್ರಜ್ಞಾನ ಅಭಿವೃದ್ಧಿ ನಿಧಿಯ ಅಡಿಯಲ್ಲಿ, ಬೆಂಗಳೂರು ಮೂಲದ 'ಬೆಲ್ಲಾಟ್ರಿಕ್ಸ್ ಏರೋಸ್ಪೇಸ್' ಸೂಕ್ಷ್ಮ ಉಪಗ್ರಹಗಳ ದಿಕ್ಸೂಚಿ ನಿಯಂತ್ರಣ ಮತ್ತು ಕಕ್ಷೆಯ ನಿರ್ವಹಣೆಗಾಗಿ 1 ಎನ್-ಕ್ಲಾಸ್ ಹಸಿರು ಮೊನೊಪ್ರೊಪೆಲ್ಲೆಂಟ್ ಥ್ರಸ್ಟರ್ ಅನ್ನು ಅಭಿವೃದ್ಧಿಪಡಿಸಿದೆ. ಜನವರಿ 2024 ರಲ್ಲಿ ಪಿಎಸ್ಎಲ್ವಿ-ಸಿ58 ಮೂಲಕ ಉಡಾವಣೆ ಮಾಡಲಾದ ಪೇಲೋಡ್ನಲ್ಲಿ ಇದರ ಕಕ್ಷೆಯಲ್ಲಿನ ಕಾರ್ಯಕ್ಷಮತೆಯನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.
ಈ ಬೆಳವಣಿಗೆಗಳು ಸ್ವದೇಶಿ ಎಲೆಕ್ಟ್ರಿಕ್ ಮತ್ತು ಹಸಿರು ಚಾಲನ ತಂತ್ರಜ್ಞಾನಗಳಲ್ಲಿ ಭಾರತದ ಪ್ರಗತಿಯನ್ನು ಬಿಂಬಿಸುತ್ತವೆ. ನಿರಂತರ ಪರೀಕ್ಷೆ ಮತ್ತು ಮೌಲ್ಯಮಾಪನಗಳು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಲ್ಲಿ ಇವುಗಳ ವ್ಯಾಪಕ ಬಳಕೆಯ ಸಿದ್ಧತೆಯನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.
|
ರೇಡಿಯೋಐಸೋಟೋಪ್ ತಾಪನ ಮತ್ತು ವಿದ್ಯುತ್ ತಂತ್ರಜ್ಞಾನಗಳು
ಇಸ್ರೋ ಮತ್ತು ಪರಮಾಣು ಶಕ್ತಿ ಇಲಾಖೆಯು ತಾಪವನ್ನು ಒದಗಿಸುವ ರೇಡಿಯೋಐಸೋಟೋಪ್ ಹೀಟರ್ ಯುನಿಟ್ಗಳು (ಆರ್ಎಚ್ಯು) ಮತ್ತು ರೇಡಿಯೋಐಸೋಟೋಪ್ ತಾಪವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ರೇಡಿಯೋಐಸೋಟೋಪ್ ಥರ್ಮೋಎಲೆಕ್ಟ್ರಿಕ್ ಜನರೇಟರ್ಗಳ (ಆರ್ಟಿಜಿ) ಅಗತ್ಯತೆಗಳಿಗಾಗಿ ಸಹಕರಿಸುತ್ತಿವೆ. ಇಸ್ರೋ ಭವಿಷ್ಯದ ಸಂಭಾವ್ಯ ಚಂದ್ರಯಾನ ಮತ್ತು ಮಂಗಳ ಗ್ರಹದ ಯೋಜನೆಗಳಿಗಾಗಿ ಆರ್ಎಚ್ಯು ಮತ್ತು ಆರ್ಟಿಜಿ ಅಗತ್ಯತೆಗಳ ಕುರಿತು DAE ಜೊತೆ ಸಹಯೋಗ ಹೊಂದುತ್ತಿದೆ.
|
ಇನ್-ಸ್ಪೇಸ್ ಕಾರ್ಯಾಚರಣೆಗಳು ಮತ್ತು ಮಾನವ ಬಾಹ್ಯಾಕಾಶ ಹಾರಾಟ
ಇನ್-ಸ್ಪೇಸ್ (ಅಂತರಿಕ್ಷದಲ್ಲಿನ) ಕಾರ್ಯಾಚರಣೆಗಳು ಎಂದರೆ ಗಗನನೌಕೆಗಳು ಕಕ್ಷೆಯನ್ನು ತಲುಪಿದ ನಂತರ ಕೈಗೊಳ್ಳುವ ಚಟುವಟಿಕೆಗಳಾಗಿವೆ, ಉದಾಹರಣೆಗೆ ಲ್ಯಾಂಡಿಂಗ್ ಪೂರ್ವ ಸಮೀಪಿಸುವಿಕೆ, ಡಾಕಿಂಗ್ (ಜೋಡಣೆ) ಮತ್ತು ಅನ್ಡಾಕಿಂಗ್ (ಪ್ರತ್ಯೇಕಗೊಳ್ಳುವುದು). ಉಪಗ್ರಹವನ್ನು ಉಡಾವಣೆ ಮಾಡುವುದು ಮೊದಲ ಹಂತ ಮಾತ್ರ: ಬಾಹ್ಯಾಕಾಶ ನಿಲ್ದಾಣ, ಮಾನವಸಹಿತ ಹಾರಾಟ ಅಥವಾ ಚಂದ್ರನ ಮಾದರಿಗಳನ್ನು ಮರಳಿ ತರುವಂತಹ ಸಂಕೀರ್ಣ ಯೋಜನೆಗಳು ಉಡಾವಣೆಯ ನಂತರ ಗಗನನೌಕೆಗಳು ಏನು ಮಾಡಬಲ್ಲವು ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ. ಸಾಮಾನ್ಯ ಕಾರ್ಯಾಚರಣೆಯ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳು ಅಗತ್ಯವಿದ್ದಾಗ ಅಂತರಿಕ್ಷದಲ್ಲಿನ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯವಾಗಿರುತ್ತದೆ. ಇದು ಚಂದ್ರನಿಂದ ಮಾದರಿಗಳನ್ನು ಮರಳಿ ತರುವುದು ಹಾಗೂ 'ಭಾರತೀಯ ಅಂತರಿಕ್ಷ ನಿಲ್ದಾಣ'ದ ನಿರ್ಮಾಣ ಮತ್ತು ನಿರ್ವಹಣೆಯಂತಹ ಆಕಾಂಕ್ಷೆಗಳಿಗೆ ಬಲವಾದ ಅಡಿಪಾಯವಾಗಿದೆ.
ಇಸ್ರೋದ ಸ್ಪೇಸ್ಡೆಕ್ಸ್ ಯೋಜನೆಯು 16 ಜನವರಿ 2025 ರಂದು ತನ್ನ ಎರಡು ಉಪಗ್ರಹಗಳನ್ನು ಮೊದಲ ಬಾರಿಗೆ ಡಾಕ್ (ಸಂಯೋಜನೆ) ಮಾಡಿತು ಮತ್ತು ತದನಂತರ ಅನ್ಡಾಕ್ (ಪ್ರತ್ಯೇಕ) ಮಾಡಿ ಪ್ರದರ್ಶಿಸಿತು. 20 ಏಪ್ರಿಲ್ 2025 ರಂದು ಉಪಗ್ರಹಗಳ ನಡುವಿನ 15 ಮೀಟರ್ ಅಂತರದಿಂದ ಸಂಪೂರ್ಣ ಸ್ವಾಯತ್ತತೆಯೊಂದಿಗೆ ಎರಡನೇ ಡಾಕಿಂಗ್ ಪೂರ್ಣಗೊಂಡಿತು. ಡಾಕ್ ಆದ ಉಪಗ್ರಹಗಳ ನಡುವೆ ದ್ವಿಮುಖ ವಿದ್ಯುತ್ ವರ್ಗಾವಣೆಯನ್ನು 21 ಏಪ್ರಿಲ್ 2025 ರಂದು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಬಾಹ್ಯಾಕಾಶ ಡಾಕಿಂಗ್ ಪ್ರದರ್ಶಿಸಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿತು. ಈ ಸಾಧನೆಯು ಭವಿಷ್ಯದ ಯೋಜನೆಗಳಿಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಮುನ್ನಡೆಸುತ್ತದೆ.
ಗಗನನೌಕೆಗಳನ್ನು ಒಂದಾಗಿಸುವುದರ ಜೊತೆಗೆ, ಡಾಕಿಂಗ್ ತಂತ್ರಜ್ಞಾನವು ಅವು ಕಕ್ಷೆಯಲ್ಲಿ ಒಟ್ಟಿಗೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಕಕ್ಷೆಯಲ್ಲಿನ ಸೇವೆಗಳು ಭವಿಷ್ಯದಲ್ಲಿ ಗಗನನೌಕೆಗಳನ್ನು ಭೂಮಿಗೆ ಮರಳಿ ತರದೆ, ಅಂತರಿಕ್ಷದಲ್ಲೇ ಇಂಧನ ತುಂಬುವುದು, ದುರಸ್ತಿ ಮಾಡುವುದು ಅಥವಾ ನವೀಕರಿಸುವುದನ್ನು ಸಾಧ್ಯವಾಗಿಸಬಹುದು. ಸ್ಪೇಸ್ಡೆಕ್ಸ್ ಯೋಜನೆಯು ಡಾಕಿಂಗ್, ಅನ್ಡಾಕಿಂಗ್ ಮತ್ತು ವಿದ್ಯುತ್ ವರ್ಗಾವಣೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಈ ಪ್ರಕ್ರಿಯೆಗಳು ಉಪಗ್ರಹಗಳ ಜೀವಿತಾವಧಿಯನ್ನು ವಿಸ್ತರಿಸಬಹುದು ಮತ್ತು ಹೊಸ ಉಪಗ್ರಹಗಳ ಉಡಾವಣೆಯ ಅಗತ್ಯವನ್ನು ಕಡಿಮೆ ಮಾಡಬಹುದು. ಈ ಸಾಧನೆಗಳು ಭವಿಷ್ಯದ ಇನ್-ಆರ್ಬಿಟ್ ಸೇವಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಮುಖ ತಾಂತ್ರಿಕ ಅಡಿಪಾಯವನ್ನು ಒದಗಿಸುತ್ತವೆ.

ಮುಂದಿನ ಪೀಳಿಗೆಯ ನ್ಯಾವಿಗೇಷನ್ ಮತ್ತು ಸಂಪರ್ಕ ತಂತ್ರಜ್ಞಾನಗಳು
ಉಪಗ್ರಹ ಆಧಾರಿತ ನ್ಯಾವಿಗೇಷನ್ ಮತ್ತು ಸಂಪರ್ಕ ವ್ಯವಸ್ಥೆಗಳು ಭಾರತದಾದ್ಯಂತ ಅತ್ಯಗತ್ಯ ಸೇವೆಗಳನ್ನು ಬೆಂಬಲಿಸುತ್ತವೆ. ನ್ಯಾವಿಗೇಷನ್ ಉಪಗ್ರಹಗಳು ಸ್ಥಾನ, ಪಥ-ನಿರ್ದೇಶನ ಮತ್ತು ನಿಖರ ಸಮಯದ ಮಾಹಿತಿಯನ್ನು ಒದಗಿಸಿದರೆ, ಸಂಪರ್ಕ ಉಪಗ್ರಹಗಳು ಟೆಲಿವಿಷನ್, ದೂರವಾಣಿ, ಬ್ರಾಡ್ಬ್ಯಾಂಡ್ ಮತ್ತು ಇತರ ಡೇಟಾ ಸಂಕೇತಗಳನ್ನು ಪ್ರಸಾರ ಮಾಡುತ್ತವೆ. ಒಟ್ಟಾಗಿ, ಈ ವ್ಯವಸ್ಥೆಗಳು ಸಾರಿಗೆ, ಹಣಕಾಸು ಸೇವೆಗಳು, ದೂರಸಂಪರ್ಕ, ವಿಕೋಪ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆಂಬಲವಾಗಿ ನಿಲ್ಲುತ್ತವೆ. ಭಾರತವು ಇಸ್ರೋದ ಸ್ವದೇಶಿ 'ನಾವಿಕ್' ನ್ಯಾವಿಗೇಷನ್ ವ್ಯವಸ್ಥೆ ಮತ್ತು ಸಂಪರ್ಕ ಉಪಗ್ರಹಗಳ ಮೂಲಕ ಈ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ.
'ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಶನ್' ಎಂಬುದು ಇಸ್ರೋ ಅಭಿವೃದ್ಧಿಪಡಿಸಿದ ಮತ್ತು ನಿರ್ವಹಿಸುತ್ತಿರುವ ಭಾರತದ ಸ್ವತಂತ್ರ ಪ್ರಾದೇಶಿಕ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾಗಿದೆ. ಇದು ಭಾರತದಾದ್ಯಂತ ಮತ್ತು ಭಾರತದ ಮುಖ್ಯ ಭೂಭಾಗದಿಂದ 1,500 ಕಿಲೋಮೀಟರ್ಗಳಷ್ಟು ಹೊರಗಿನ ಪ್ರದೇಶದವರೆಗೆ ಸ್ಥಾನ, ಪಥ-ನಿರ್ದೇಶನ ಮತ್ತು ನಿಖರ ಸಮಯದ ಸೇವೆಗಳನ್ನು ಒದಗಿಸುತ್ತದೆ. ನಾವಿಕ್ ವ್ಯವಸ್ಥೆಯು ನಾಗರಿಕ ಬಳಕೆದಾರರಿಗಾಗಿ 'ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್' ಮತ್ತು ಅಧಿಕೃತ ಬಳಕೆದಾರರಿಗಾಗಿ ಎನ್ಕ್ರಿಪ್ಟ್ ಮಾಡಲಾದ 'ರೆಸ್ಟ್ರಿಕ್ಟೆಡ್ ಸರ್ವಿಸ್' ಅನ್ನು ಒದಗಿಸುತ್ತದೆ. ಈ ಸಾಮರ್ಥ್ಯಗಳು ಭೂಮಿಯ ಮೇಲಿನ, ನೌಕಾಯಾನದ ಮತ್ತು ವಾಯುಯಾನದ ನ್ಯಾವಿಗೇಷನ್, ಸಮೀಕ್ಷೆ, ವಾಹನ ಟ್ರ್ಯಾಕಿಂಗ್ ಮತ್ತು ನಿಖರ ಸಮಯದ ನಿರ್ವಹಣೆಗೆ ಬೆಂಬಲ ನೀಡುತ್ತವೆ. ನಾವಿಕ್ ವ್ಯವಸ್ಥೆಯು ಭೂಸಂಪರ್ಕ ಜಾಲದ ವ್ಯಾಪ್ತಿಯಿಂದ ಆಚೆಗೆ ಕಾರ್ಯನಿರ್ವಹಿಸುವ ಮೀನುಗಾರರಿಗೆ ತುರ್ತು ಎಚ್ಚರಿಕೆಯ ಸಂದೇಶಗಳನ್ನು ತಲುಪಿಸಲು ಸಹ ಸಹಾಯ ಮಾಡುತ್ತದೆ. ಹೊಂದಾಣಿಕೆಯಾಗುವ ಸಾಧನಗಳು ಮತ್ತು ಅಪ್ಲಿಕೇಶನ್ಗಳಲ್ಲಿ ಇದರ ಸಂಯೋಜನೆಯು ನಾಗರಿಕ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಇದರ ಬಳಕೆಯನ್ನು ಇನ್ನಷ್ಟು ವಿಸ್ತರಿಸಬಹುದು.
ಹೆಚ್ಚುವರಿಯಾಗಿ, ಭಾರತದ ಸಂಪರ್ಕ ಉಪಗ್ರಹಗಳು ಪ್ರಸಾರ, ಬ್ರಾಡ್ಬ್ಯಾಂಡ್ ಸಂಪರ್ಕ ಮತ್ತು ಸುರಕ್ಷಿತ ಸಂಪರ್ಕ ಜಾಲವನ್ನು ಬೆಂಬಲಿಸುತ್ತವೆ. 23 ಜೂನ್ 2022 ರಂದು ಭಾರತೀಯ ಕಾಲಮಾನ ಬೆಳಗಿನ ಜಾವ 03:20 ಕ್ಕೆ (ಸ್ಥಳೀಯ ಸಮಯ ಜೂನ್ 22) ಫ್ರೆಂಚ್ ಗಯಾನಾದ ಕೌರೂನಿಂದ ಅರಿಯೇನ್-5 ಮೂಲಕ ಉಡಾವಣೆಗೊಂಡ ಜಿಸ್ಯಾಟ್-24 ಉಪಗ್ರಹವನ್ನು ಭಾರತದಲ್ಲಿ ಡೈರೆಕ್ಟ್-ಟು-ಹೋಮ್ ಟೆಲಿವಿಷನ್ ಅಗತ್ಯತೆಗಳನ್ನು ಪೂರೈಸಲು ಸಿದ್ಧಪಡಿಸಲಾಯಿತು. ಈ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತಾ, 19 ನವೆಂಬರ್ 2024 ರಂದು ಜಿಸ್ಯಾಟ್-ಎನ್2 (ಜಿಸ್ಯಾಟ್-20) ಅನ್ನು ಉಡಾವಣೆ ಮಾಡಲಾಯಿತು. ಈ ಹೆಚ್ಚಿನ ಸಾಮರ್ಥ್ಯದ ಉಪಗ್ರಹವು ಸುಮಾರು 48 Gbps ಸಾಮರ್ಥ್ಯವನ್ನು ಹೊಂದಿದ್ದು, ದೂರದ ದ್ವೀಪ ಪ್ರದೇಶಗಳು ಸೇರಿದಂತೆ ಭಾರತದಾದ್ಯಂತ ಬ್ರಾಡ್ಬ್ಯಾಂಡ್ ಮತ್ತು ವಿಮಾನದಲ್ಲಿನ ಇಂಟರ್ನೆಟ್ ಸಂಪರ್ಕವನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.
ಸಂಪರ್ಕ ಉಪಗ್ರಹಗಳು ಭಾರತದ ರಕ್ಷಣಾ ಅಗತ್ಯಗಳಿಗೂ ಸೇವೆಯನ್ನು ಸಲ್ಲಿಸುತ್ತವೆ. ಜಿಸ್ಯಾಟ್-7ಆರ್ ಎಂದೂ ಕರೆಯಲ್ಪಡುವ ಸಿಎಂಎಸ್-03 ಉಪಗ್ರಹವನ್ನು 2 ನವೆಂಬರ್ 2025 ರಂದು ಉಡಾವಣೆ ಮಾಡಲಾಯಿತು. ಇದು ಭಾರತೀಯ ನೌಕಾಪಡೆಗೆ ಮೀಸಲಾದ ಸಂಪರ್ಕ ಉಪಗ್ರಹವಾಗಿದೆ. ಈ ಉಪಗ್ರಹಗಳು ಭಾರತದ ಬಾಹ್ಯಾಕಾಶ ಆಧಾರಿತ ಸಂಪರ್ಕ ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ನಾಗರಿಕ ಸಂಪರ್ಕ, ನೌಕಾ ಕಾರ್ಯಾಚರಣೆಗಳು ಹಾಗೂ ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುತ್ತವೆ.
ಸುಧಾರಿತ ಭೂ ವೀಕ್ಷಣಾ ಉಪಗ್ರಹಗಳು
ಭೂ ವೀಕ್ಷಣಾ ಉಪಗ್ರಹಗಳು ಬಾಹ್ಯಾಕಾಶದಿಂದ ಭೂಮಿ, ಸಾಗರಗಳು, ಮಂಜಿನಿಂದ ಆವೃತವಾದ ಪ್ರದೇಶಗಳು ಮತ್ತು ವಾತಾವರಣವನ್ನು ಮೇಲ್ವಿಚಾರಣೆ ಮಾಡುತ್ತವೆ. ಇವುಗಳ ಡೇಟಾ ಕೃಷಿ, ವಿಕೋಪ ನಿರ್ವಹಣೆ, ಜಲಸಂಪನ್ಮೂಲ ಯೋಜನೆ, ಹವಾಮಾನ ಸಂಶೋಧನೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆಂಬಲ ನೀಡುತ್ತದೆ. ಡಿಸೆಂಬರ್ 2020 ಮತ್ತು ಡಿಸೆಂಬರ್ 2025 ರ ನಡುವೆ, ಇಸ್ರೋ ಏಳು ಭೂ ವೀಕ್ಷಣಾ ಉಪಗ್ರಹಗಳು ಸೇರಿದಂತೆ 22 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಉಪಗ್ರಹಗಳು ನೈಸರ್ಗಿಕ ಸಂಪನ್ಮೂಲಗಳ ಮೇಲ್ವಿಚಾರಣೆ, ಪಾರಿಸರಿಕ ಬದಲಾವಣೆಗಳ ಟ್ರ್ಯಾಕಿಂಗ್ ಮತ್ತು ಮಾಹಿತಿ ಆಧಾರಿತ ಯೋಜನೆಗೆ ಬೆಂಬಲ ನೀಡಲು ಚಿತ್ರಗಳು ಹಾಗೂ ಡೇಟಾವನ್ನು ಒದಗಿಸುತ್ತವೆ. ರಾಡಾರ್ ಇಮೇಜಿಂಗ್ ಮತ್ತು ಹೈಪರ್ಸ್ಪೆಕ್ಟ್ರಲ್ ವೀಕ್ಷಣೆ ಸೇರಿದಂತೆ ಸುಧಾರಿತ ತಂತ್ರಜ್ಞಾನಗಳ ಮೂಲಕ ಭಾರತವು ಈ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುವುದನ್ನು ಮುಂದುವರಿಸಿದೆ.
ಭೂ ವೀಕ್ಷಣೆಯ ಪ್ರಮುಖ ಪ್ರಗತಿಯೆಂದರೆ 'ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್' ಯೋಜನೆ. ಇದನ್ನು 30 ಜುಲೈ 2025 ರಂದು ಶ್ರೀಹರಿಕೋಟಾದಿಂದ ಜಿಎಸ್ಎಲ್ವಿ-ಎಫ್16 ಮೂಲಕ ಉಡಾವಣೆ ಮಾಡಲಾಯಿತು. ನಾಸಾದ L-ಬ್ಯಾಂಡ್ ಮತ್ತು ಇಸ್ರೋದ S-ಬ್ಯಾಂಡ್ ಎಂಬ ಎರಡು ರಾಡಾರ್ ಆವರ್ತನಗಳನ್ನು ಒಟ್ಟಿಗೆ ಬಳಸಿದ ಮೊದಲ ಉಪಗ್ರಹ ಯೋಜನೆ ಇದಾಗಿದೆ. ರಾಡಾರ್ ತಂತ್ರಜ್ಞಾನವು ಮೋಡಗಳ ನಡುವೆಯೂ ಮತ್ತು ಕತ್ತಲಲ್ಲಿಯೂ ಡೇಟಾವನ್ನು ಸಂಗ್ರಹಿಸಬಲ್ಲದು, ಇದು ಹಗಲು ಮತ್ತು ರಾತ್ರಿ ಎರಡೂ ಸಮಯಗಳಲ್ಲಿ ಹಾಗೂ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿ ವೀಕ್ಷಣೆಯನ್ನು ಸಾಧ್ಯವಾಗಿಸುತ್ತದೆ. ನಿಸಾರ್ ಉಪಗ್ರಹವನ್ನು ಪ್ರತಿ 12 ದಿನಗಳಿಗೊಮ್ಮೆ ಭೂಮಿಯ ಭೂಭಾಗ ಮತ್ತು ಮಂಜಿನಿಂದ ಆವೃತವಾದ ಮೇಲ್ಮೈಗಳನ್ನು ವೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಇದರ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ರೂಪಾಂತರ, ಹವಾಮಾನ ಹಿಮಪಾತದ ಚಲನೆ, ಸಸ್ಯವರ್ಗದ ಬದಲಾವಣೆಗಳು, ಮಣ್ಣಿನ ತೇವಾಂಶ ಮತ್ತು ನೈಸರ್ಗಿಕ ವಿಕೋಪಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಈ ವೀಕ್ಷಣೆಗಳು ಕರಾವಳಿ ಮೇಲ್ವಿಚಾರಣೆ ಮತ್ತು ವಿಕೋಪ ಸ್ಪಂದನೆಗೂ ಬೆಂಬಲ ನೀಡಬಲ್ಲವು.
ರಾಡಾರ್ ತಂತ್ರಜ್ಞಾನವು ಭೂಮಿಯ ಮೇಲ್ಮೈಯಲ್ಲಿನ ಬದಲಾವಣೆಗಳನ್ನು ವ್ಯಕ್ತಪಡಿಸಿದರೆ, ಹೈಪರ್ಸ್ಪೆಕ್ಟ್ರಲ್ ಇಮೇಜಿಂಗ್ ವಿವಿಧ ಪದಾರ್ಥಗಳು ಮತ್ತು ಮೇಲ್ಮೈ ಗುಣಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇಸ್ರೋ 29 ನವೆಂಬರ್ 2018 ರಂದು ಹೈಪರ್ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಿತು. ಇದು ಭೂಮಿಯ ಮೇಲ್ಮೈಯನ್ನು ದೃಶ್ಯ, ಸಮೀಪ-ಅತಿಕೆಂಪು ಮತ್ತು ಶಾರ್ಟ್ವೇವ್-ಅತಿಕೆಂಪು ತರಂಗಾಂತರಗಳಲ್ಲಿ ವೀಕ್ಷಿಸುತ್ತದೆ. ಬೆಳಕಿನ ಹಲವಾರು ಕಿರಿದಾದ ತರಂಗಾಂತರ ಬ್ಯಾಂಡ್ಗಳಲ್ಲಿ ಮಾಹಿತಿಯನ್ನು ದಾಖಲಿಸುವ ಮೂಲಕ, HysIS ಸಾಧಾರಣ ಇಮೇಜಿಂಗ್ಗೆ ಸುಲಭವಾಗಿ ಗುರುತಿಸಲಾಗದ ವೈಶಿಷ್ಟ್ಯಗಳನ್ನು ಪ್ರತ್ಯೇಕಿಸಿ ತೋರಿಸುತ್ತದೆ. ಇದರ ಡೇಟಾವು ಕೃಷಿ, ಅರಣ್ಯ, ಮಣ್ಣು ಮತ್ತು ಭೂವೈಜ್ಞಾನಿಕ ಅಧ್ಯಯನಗಳು, ಕರಾವಳಿ ಪ್ರದೇಶಗಳು ಮತ್ತು ಒಳನಾಡಿನ ಜಲಮೂಲಗಳ ಅನ್ವಯಿಕೆಗಳಿಗೆ ಬೆಂಬಲ ನೀಡುತ್ತದೆ.
|
ನಿಮಗೆ ತಿಳಿದಿದೆಯೇ? HysIS ಉಪಗ್ರಹವನ್ನು ಎಂಟು ದೇಶಗಳ 30 ವಿದೇಶಿ ಉಪಗ್ರಹಗಳೊಂದಿಗೆ ಉಡಾವಣೆ ಮಾಡಲಾಯಿತು. ಇವುಗಳಲ್ಲಿ ಒಂದು ಮೈಕ್ರೋ-ಉಪಗ್ರಹ ಮತ್ತು 29 ನ್ಯಾನೋ-ಉಪಗ್ರಹಗಳು ಸೇರಿದ್ದವು. ಭಾಗವಹಿಸಿದ ದೇಶಗಳೆಂದರೆ ಆಸ್ಟ್ರೇಲಿಯಾ, ಕೆನಡಾ, ಕೊಲಂಬಿಯಾ, ಫಿನ್ಲ್ಯಾಂಡ್, ಮಲೇಷ್ಯಾ, ನೆದರ್ಲ್ಯಾಂಡ್ಸ್, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್ (ಅಮೆರಿಕ). ಇವುಗಳಲ್ಲಿ 23 ಉಪಗ್ರಹಗಳು ಯುನೈಟೆಡ್ ಸ್ಟೇಟ್ಸ್ಗೆ ಸೇರಿದ್ದವು. ಈ ಉಡಾವಣೆಯು ಅಂತಾರಾಷ್ಟ್ರೀಯ ಗ್ರಾಹಕರಿಗಾಗಿ ಬಹು ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಪಿಎಸ್ಎಲ್ವಿ ರಾಕೆಟ್ನ ಸಾಮರ್ಥ್ಯವನ್ನು ಸಹ ಪ್ರದರ್ಶಿಸಿತು.
|
ಮುಂದಿನ ಹಾದಿ: 44 ಬಿಲಿಯನ್ ಅಮೆರಿಕನ್ ಡಾಲರ್ ಬಾಹ್ಯಾಕಾಶ ಅರ್ಥವ್ಯವಸ್ಥೆಯ ನಿರ್ಮಾಣ
ಭಾರತದ ಬಾಹ್ಯಾಕಾಶ ಕ್ಷೇತ್ರವು ತನ್ನ ವೈಜ್ಞಾನಿಕ ಮತ್ತು ಕಾರ್ಯತಂತ್ರದ ಗುರಿಗಳ ಜೊತೆಗೆ ಆರ್ಥಿಕ ಪ್ರಗತಿ, ಖಾಸಗಿ ಹೂಡಿಕೆ ಹಾಗೂ ಕೈಗಾರಿಕಾ ಸಾಮರ್ಥ್ಯಕ್ಕೆ ಹೆಚ್ಚೆಚ್ಚು ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ಇಲಾಖೆಯ ಪ್ರಕಾರ, ಭಾರತದ ಬಾಹ್ಯಾಕಾಶ ಅರ್ಥವ್ಯವಸ್ಥೆಯು 2033 ರ ವೇಳೆಗೆ 44 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ಗುರಿಯನ್ನು ಹೊಂದಿದೆ. ಮರುಬಳಕೆಯ ಉಡಾವಣಾ ವಾಹನಗಳು, ವಾಯು-ಉಸಿರಾಟದ ಚಾಲನ ವ್ಯವಸ್ಥೆ, ಎಲೆಕ್ಟ್ರಿಕ್ ಪ್ರೊಪಲ್ಷನ್ ಮತ್ತು ಇನ್-ಸ್ಪೇಸ್ ಡಾಕಿಂಗ್ನಂತಹ ಉದಯೋನ್ಮುಖ ತಂತ್ರಜ್ಞಾನಗಳು ಈ ಬೆಳವಣಿಗೆಗೆ ಬೆಂಬಲ ನೀಡುತ್ತಿವೆ.
ಈ ತಾಂತ್ರಿಕ ವೇಗವು ಈಗಾಗಲೇ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಇಸ್ರೋ ಅಭಿವೃದ್ಧಿಪಡಿಸಿದ 83 ತಂತ್ರಜ್ಞಾನಗಳನ್ನು ಭಾರತೀಯ ಉದ್ಯಮಗಳಿಗೆ ಹಸ್ತಾಂತರಿಸಲು 118 ತಂತ್ರಜ್ಞಾನ ಹಸ್ತಾಂತರ ಒಪ್ಪಂದಗಳಿಗೆ ಸಹಿ ಹಾಕಿದೆ. ಪರಿಣಾಮವಾಗಿ, ಹೂಡಿಕೆದಾರರ ಆತ್ಮವಿಶ್ವಾಸವೂ ಬೆಳೆಯುತ್ತಿದೆ. 31 ಮಾರ್ಚ್ 2026 ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳಲ್ಲಿನ ಒಟ್ಟು ಹೂಡಿಕೆಯು ಸರಿಸುಮಾರು 618.5 ಮಿಲಿಯನ್ ಅಮೆರಿಕನ್ ಡಾಲರ್ಗಳನ್ನು ತಲುಪಿದ್ದು, ನಿಧಿಯು ಆರಂಭಿಕ ಹಂತದ ಬೆಂಬಲದಿಂದ ದೊಡ್ಡ ಮಟ್ಟದ ಬೆಳವಣಿಗೆಯ ಹಂತದ ಸರಣಿಗಳಿಗೆ ಸ್ಥಳಾಂತರಗೊಳ್ಳುತ್ತಿದೆ.
ಒಟ್ಟಾರೆಯಾಗಿ, ಈ ಬೆಳವಣಿಗೆಗಳು ಭಾರತದ ಉದಯೋನ್ಮುಖ ಬಾಹ್ಯಾಕಾಶ ತಂತ್ರಜ್ಞಾನಗಳು ರಾಷ್ಟ್ರೀಯ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮುಂಬರುವ ವರ್ಷಗಳಿಗೆ ಬಲವಾದ, ಉದ್ಯಮ-ಚಾಲಿತ ಬಾಹ್ಯಾಕಾಶ ಅರ್ಥವ್ಯವಸ್ಥೆಯನ್ನು ನಿರ್ಮಿಸುತ್ತಿವೆ ಎಂಬುದನ್ನು ತೋರಿಸುತ್ತವೆ.
References:
Department of Space
ISRO
Click here to see pdf
*****
(Explainer ID: 160600)
आगंतुक पटल : 20
Provide suggestions / comments