Rural Prosperity

ಸರಸ್ ಮೇಳ 2026

ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವುದು

Posted On: 21 OCT 2026 11:03AM

ಕೇಂದ್ರ ಸರ್ಕಾರದ 'ಡಿಎವೈ-ಎನ್‌ಆರ್‌ಎಲ್‌ಎಂ' ಅಡಿಯಲ್ಲಿ ಆಯೋಜಿಸಲಾಗುವ ಸರಸ್ ಮೇಳಗಳು ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ವಿಶಾಲ ಮಾರುಕಟ್ಟೆಗಳು, ಖರೀದಿದಾರರು ಮತ್ತು ಉದ್ಯಮ ಅವಕಾಶಗಳೊಂದಿಗೆ ಜೋಡಿಸುತ್ತವೆ. ವಿಜಯವಾಡ ಆವೃತ್ತಿಯು ದೆಹಲಿ-ಎನ್‌ಸಿಆರ್ ಹೊರಗೆ ನಡೆಯುತ್ತಿರುವ ಮೊದಲ ರಾಷ್ಟ್ರೀಯ ಸರಸ್ ಮೇಳವಾಗಿದ್ದು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 34 ರಾಜ್ಯಗಳು ಮಹಿಳಾ ಉದ್ಯಮಿಗಳನ್ನು ಒಂದೆಡೆ ತರುತ್ತದೆ. ಈ ವೇದಿಕೆಯು ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವ 'ಡಿಎವೈ-ಎನ್‌ಆರ್‌ಎಲ್‌ಎಂ'ನ ಪ್ರಯತ್ನಗಳನ್ನು ಬಲಪಡಿಸುತ್ತದೆ ಮತ್ತು ಆದಾಯ ಹೆಚ್ಚಳದ 'ಲಕ್ಷಾಧಿಪತಿ ದೀದಿ' ಪರಿಕಲ್ಪನೆಗೆ ಬೆಂಬಲ ನೀಡುತ್ತದೆ. ಇಲ್ಲಿನ ವಿಶೇಷ ಪೆವಿಲಿಯನ್‌ಗಳು ವ್ಯವಹಾರ ಕಲಿಕೆ, ಸಾಂಸ್ಥಿಕ ಬೆಂಬಲ ಮತ್ತು ಉದ್ಯಮ ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸುತ್ತವೆ. 'ಇ-ಸರಸ್' ನಂತಹ ಡಿಜಿಟಲ್ ವೇದಿಕೆಗಳು ಭೌತಿಕ ಕಾರ್ಯಕ್ರಮಗಳನ್ನು ಮೀರಿದ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲಿದ್ದು, ಗ್ರಾಮೀಣ ಮಹಿಳೆಯರು ತಮ್ಮ ಉತ್ಪನ್ನಗಳನ್ನು ಮತ್ತಷ್ಟು ವಿಶಾಲ ಮಾರುಕಟ್ಟೆಗೆ ಕೊಂಡೊಯ್ಯಲು ಸಹಾಯ ಮಾಡುತ್ತಿವೆ.

ಗ್ರಾಮೀಣ ಉದ್ಯಮ ಮತ್ತು ಅವಕಾಶಗಳ ಸಂಗಮ

ಭಾರತದ ಗ್ರಾಮೀಣ ಅರ್ಥವ್ಯವಸ್ಥೆಯು ಪಾರಂಪರಿಕ ಕೌಶಲ್ಯಗಳು, ಕರಕುಶಲ ಕಲೆ ಹಾಗೂ ಉದ್ಯಮಶೀಲತೆಯ ಪ್ರತಿಭೆಯಿಂದ ಸಮೃದ್ಧವಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳು ಈ ಪ್ರತಿಭೆಯನ್ನು ಸ್ಥಳೀಯ ಅರ್ಥವ್ಯವಸ್ಥೆಗೆ ತರಲು ನೆರವಾಗುತ್ತಿವೆ. ಅವರ ಉತ್ಪನ್ನಗಳು ಕೈಮಗ್ಗ ಮತ್ತು ಕರಕುಶಲ ವಸ್ತುಗಳಿಂದ ಹಿಡಿದು ಸಂಸ್ಕರಿಸಿದ ಆಹಾರ ಹಾಗೂ ಇತರ ಸ್ಥಳೀಯವಾಗಿ ತಯಾರಿಸಿದ ವಸ್ತುಗಳವರೆಗೆ ವಿಸ್ತರಿಸಿವೆ. ಆದರೆ, ಉತ್ಪನ್ನವನ್ನು ತಯಾರಿಸುವುದು ಮೊದಲ ಹೆಜ್ಜೆ ಮಾತ್ರ. ಗ್ರಾಮೀಣ ಉದ್ಯಮಿಗಳಿಗೆ ಗ್ರಾಹಕರು, ಮಾರುಕಟ್ಟೆಯ ಮಾಹಿತಿ ಮತ್ತು ಬೆಳೆಯಲು ಸೂಕ್ತ ಅವಕಾಶಗಳ ಅಗತ್ಯವೂ ಇದೆ.

ಸರಸ್ ಮೇಳಗಳು ಮಹಿಳಾ ನೇತೃತ್ವದ ಉದ್ಯಮಗಳನ್ನು ಗ್ರಾಹಕರು, ಖರೀದಿದಾರರು ಮತ್ತು ಸಂಸ್ಥೆಗಳಿಗೆ ಹತ್ತಿರ ತರುವ ಮೂಲಕ ಈ ಅಂತರವನ್ನು ನಿವಾರಿಸಲು ನೆರವಾಗುತ್ತವೆ. 'ದೀನ್‌ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್' ಅಡಿಯಲ್ಲಿ ಸರ್ಕಾರದಿಂದ ಆಯೋಜಿಸಲ್ಪಡುವ ಸರಸ್ ಮೇಳಗಳು ಕಳೆದ ಸುಮಾರು ಮೂರು ದಶಕಗಳಲ್ಲಿ ಗಮನಾರ್ಹವಾಗಿ ಅಭಿವೃದ್ಧಿ ಹೊಂದಿವೆ. ಅವು ಈಗ ಕೇವಲ ಪ್ರದರ್ಶನಗಳಾಗಿ ಉಳಿದಿಲ್ಲ. ಬದಲಾಗಿ, ಉತ್ಪನ್ನಗಳನ್ನು ಮಾರಾಟ ಮಾಡಲು, ಗ್ರಾಹಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು, ಉದ್ಯಮ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಹಾಗೂ ವಿಶಾಲ ಮಾರುಕಟ್ಟೆಗಳನ್ನು ಅನ್ವೇಷಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತವೆ.

.

ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ 'ರಾಷ್ಟ್ರೀಯ ಸರಸ್ ಮೇಳ'ವು ಈ ಪಯಣದಲ್ಲಿ ಒಂದು ಹೊಸ ಹೆಜ್ಜೆಯಾಗಿದೆ. ದೆಹಲಿ-ಎನ್‌ಸಿಆರ್ ಪ್ರದೇಶದ ಹೊರಗೆ ಆಯೋಜಿಸಲಾಗುತ್ತಿರುವ ಮೊದಲ ರಾಷ್ಟ್ರೀಯ ಸರಸ್ ಮೇಳ ಇದಾಗಿದೆ. ಈ ಕಾರ್ಯಕ್ರಮವು ವಿಜಯವಾಡದ ಪುನ್ನಮಿ ಘಾಟ್‌ನಲ್ಲಿ 2026ರ ಅಕ್ಟೋಬರ್ 13 ರಿಂದ ಅಕ್ಟೋಬರ್ 31 ರವರೆಗೆ ನಡೆಯುತ್ತಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು34 ರಾಜ್ಯಗಳ ಸುಮಾರು 1,500 ಮಹಿಳಾ ಸ್ವಸಹಾಯ ಗುಂಪಿನ ಉದ್ಯಮಿಗಳು ಹಾಗೂ 'ಲಖ್‌ಪತಿ ದೀದಿ'ಯರು 650ಕ್ಕೂ ಹೆಚ್ಚು ಮಳಿಗೆಗಳ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಮೇಳವು ಪ್ರಾದೇಶಿಕ ಜವಳಿ, ಕರಕುಶಲ ವಸ್ತುಗಳು, ನೈಸರ್ಗಿಕ ಹಾಗೂ ಸಂಸ್ಕರಿಸಿದ ಆಹಾರ ಮತ್ತು ಇತರ ಗ್ರಾಮೀಣ ಉತ್ಪನ್ನಗಳನ್ನು ಒಳಗೊಂಡಿದೆ. 'ಇಂಡಿಯಾ ಫುಡ್ ಕೋರ್ಟ್', ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ವಿಶೇಷ ಕಲಿಕಾ ಪ್ರದೇಶಗಳು ಈ ಅನುಭವವನ್ನು ಮತ್ತಷ್ಟು ಸಮೃದ್ಧಗೊಳಿಸುತ್ತವೆ.

ರಾಷ್ಟ್ರೀಯ ಸರಸ್ ಮೇಳದ ವಿಕೇಂದ್ರೀಕರಣವು ಒಂದು ವಿಶಾಲವಾದ ಅಭಿವೃದ್ಧಿ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ: ರಾಷ್ಟ್ರೀಯ ವೇದಿಕೆಗಳನ್ನು ಭಾರತದಾದ್ಯಂತ ಇರುವ ಉತ್ಪಾದಕರು ಮತ್ತು ಗ್ರಾಹಕರಿಗೆ ಹತ್ತಿರ ತರುವುದು. ಇದು ಸ್ಥಳೀಯ ಕೌಶಲ್ಯಗಳನ್ನು ಹೊಸ ಮಾರುಕಟ್ಟೆಗಳೊಂದಿಗೆ ಜೋಡಿಸುವುದಲ್ಲದೆ, ಮಹಿಳಾ ನೇತೃತ್ವದ ಉದ್ಯಮಗಳ ಬೆಳವಣಿಗೆಗೆ ಬೆಂಬಲ ನೀಡುತ್ತದೆ. ಈ ಕಾರ್ಯಕ್ರಮವು ಇತರ ರಾಷ್ಟ್ರೀಯ ಕಾರ್ಯಕ್ರಮಗಳ ವಿಕೇಂದ್ರೀಕರಣಕ್ಕೆ ಹಾದಿಮಾಡಿಕೊಡುತ್ತದೆ ಹಾಗೂ ಬ್ರಿಕ್ಸ್ ಮತ್ತು ಜಿ20 ನಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರಾದೇಶಿಕ ಮಟ್ಟದಲ್ಲಿ ಆಯೋಜಿಸುವ ವಿಧಾನಕ್ಕೆ ಅನುಗುಣವಾಗಿದೆ.

ಗ್ರಾಮೀಣ ಜೀವನೋಪಾಯದಿಂದ ಮಾರುಕಟ್ಟೆ ಪ್ರವೇಶದವರೆಗೆ: ಡಿಎವೈ-ಎನ್‌ಆರ್‌ಎಲ್‌ಎಂ  ಪಾತ್ರ

'ಡಿಎವೈ-ಎನ್‌ಆರ್‌ಎಲ್‌ಎಂ' ಗ್ರಾಮೀಣ ಬಡತನವನ್ನು ಕಡಿಮೆ ಮಾಡಲು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸಲು ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಹಣಕಾಸು ಸೇರ್ಪಡೆ ಮತ್ತು ಸುಸ್ಥಿರ ಜೀವನೋಪಾಯಗಳನ್ನು ಬೆಂಬಲಿಸುತ್ತಾ, ಸ್ವಸಹಾಯ ಗುಂಪುಗಳು ಹಾಗೂ ಅವುಗಳ ಒಕ್ಕೂಟಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಮಿಷನ್ ಮಹಿಳೆಯರಿಗೆ ಕೌಶಲ್ಯ, ಹಣಕಾಸು, ತಂತ್ರಜ್ಞಾನ ಮತ್ತು ಜೀವನೋಪಾಯದ ಅವಕಾಶಗಳನ್ನು ಪಡೆಯಲು ನೆರವಾಗುತ್ತದೆ. ಇದು ಉತ್ಪನ್ನಗಳ ಪ್ರದರ್ಶನ, ಬ್ರ್ಯಾಂಡಿಂಗ್ ಮತ್ತು ಭೌತಿಕ, ಡಿಜಿಟಲ್ ಹಾಗೂ ಸಾಂಸ್ಥಿಕ ಮಾರುಕಟ್ಟೆಗಳ ಸಂಪರ್ಕದ ಮೂಲಕ ಮಹಿಳಾ ನೇತೃತ್ವದ ಉದ್ಯಮಗಳ ಸುತ್ತಲಿನ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುತ್ತದೆ.

.

ಈ ಮಾರುಕಟ್ಟೆ ಸಂಪರ್ಕವು ಅತ್ಯಂತ ಪ್ರಮುಖವಾಗಿದೆ, ಏಕೆಂದರೆ ಉದ್ಯಮದ ಬೆಳವಣಿಗೆಯು ಕೇವಲ ಉತ್ಪಾದನೆಯನ್ನಷ್ಟೇ ಆಧರಿಸಿಲ್ಲ. ಮಹಿಳೆಯರಿಗೆ ತಮ್ಮ ಸ್ಥಳೀಯ ಸಮುದಾಯಗಳನ್ನು ಮೀರಿ ಮಾರಾಟ ಮಾಡಲು ಅವಕಾಶಗಳ ಅಗತ್ಯವಿದೆ. ಅಲ್ಲದೆ, ಗ್ರಾಹಕರ ಪ್ರತಿಕ್ರಿಯೆ, ಉತ್ಪನ್ನಗಳ ಉತ್ತಮ ಪ್ರಸ್ತುತಿ ಮತ್ತು ಖರೀದಿದಾರರೊಂದಿಗಿನ ಸಂಪರ್ಕಗಳಿಂದಲೂ ಅವರಿಗೆ ಲಾಭವಾಗುತ್ತದೆ.

ಸರಸ್ ಮೇಳಗಳು ಈ ಅಗತ್ಯಗಳು ಮತ್ತು ಮಾರುಕಟ್ಟೆ ಅವಕಾಶಗಳ ನಡುವೆ ಒಂದು ಪ್ರಾಯೋಗಿಕ ಸೇತುವೆಯನ್ನು ಒದಗಿಸುತ್ತವೆ. ಅವು ಸ್ವಸಹಾಯ ಗುಂಪಿನ ಉದ್ಯಮಗಳು, ಗ್ರಾಹಕರು, ಸಾಂಸ್ಥಿಕ ಖರೀದಿದಾರರು ಮತ್ತು ಇತರ ಪಾಲುದಾರರನ್ನು ಒಂದೆಡೆ ತರುತ್ತವೆ. ಇಲ್ಲಿ ಉದ್ಯಮಿಗಳು ನೇರವಾಗಿ ಮಾರಾಟ ಮಾಡಬಹುದು, ಗ್ರಾಹಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಬಹುದು ಹಾಗೂ ಈ ಕಾರ್ಯಕ್ರಮದ ನಂತರವೂ ಮುಂದುವರಿಯಬಹುದಾದ ಸಹಭಾಗಿತ್ವಗಳನ್ನು ಅನ್ವೇಷಿಸಬಹುದು.

65 ಫಲಾನುಭವಿಗಳಿಂದ ರಾಷ್ಟ್ರೀಯ ಮಾರುಕಟ್ಟೆಯವರೆಗೆ

ಸರಸ್‌ನ ಪಯಣವು 1999ರಲ್ಲಿ ದೆಹಲಿಯಲ್ಲಿ ಸುಮಾರು 65 ಫಲಾನುಭವಿಗಳೊಂದಿಗೆ ಮೊದಲ 'ರಾಷ್ಟ್ರೀಯ ಸರಸ್ ಮೇಳ'ವನ್ನು ಆಯೋಜಿಸುವುದರೊಂದಿಗೆ ಪ್ರಾರಂಭವಾಯಿತು. ಅಂದಿನಿಂದ, ಈ ವೇದಿಕೆಯು ರಾಷ್ಟ್ರೀಯ, ಪ್ರಾದೇಶಿಕ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಿಗೆ ವಿಸ್ತರಿಸಿದೆ. ಇಲ್ಲಿಯವರೆಗೆ, ಒಟ್ಟು 117 ರಾಷ್ಟ್ರೀಯ ಸರಸ್ ಮೇಳಗಳು ನಡೆದಿದ್ದು, ₹200 ಕೋಟಿಗೂ ಹೆಚ್ಚಿನ ವಾರ್ಷಿಕ ಮಾರಾಟ ದಾಖಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ವರ್ಷಕ್ಕೆ ಕನಿಷ್ಠ ಎರಡು ರಾಜ್ಯ ಮಟ್ಟದ ಸರಸ್ ಮೇಳಗಳನ್ನು ಆಯೋಜಿಸುತ್ತವೆ, ಇದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ವರ್ಷಕ್ಕೆ ಸರಾಸರಿ ಸುಮಾರು 50 ಕಾರ್ಯಕ್ರಮಗಳು ನಡೆಯುತ್ತವೆ. ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ಸ್ಥಳೀಯ ಉತ್ಪಾದಕರಿಗೆ ಮಾರಾಟದ ಅವಕಾಶಗಳನ್ನು ಹತ್ತಿರ ತರುತ್ತವೆ. ಒಟ್ಟಾರೆಯಾಗಿ, ಈ ಮಾದರಿಯ ಕಾರ್ಯಕ್ರಮಗಳು ಮಾರುಕಟ್ಟೆ ಅನ್ವೇಷಣೆ, ಬ್ರ್ಯಾಂಡಿಂಗ್, ಖರೀದಿದಾರ-ಮಾರಾಟಗಾರರ ಸಂಪರ್ಕ ಹಾಗೂ ಉದ್ಯಮ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ.

ಲಖ್‌ಪತಿ ದೀದಿ: ಜೀವನೋಪಾಯವನ್ನು ಮತ್ತಷ್ಟು ಸುಸ್ಥಿರಗೊಳಿಸುವುದು

'ಲಖ್‌ಪತಿ ದೀದಿ' ಯೋಜನೆಯು 'ಡಿಎವೈ-ಎನ್‌ಆರ್‌ಎಲ್‌ಎಂ' ಅಡಿಯಲ್ಲಿ ಫಲಿತಾಂಶ-ಆಧಾರಿತ ಜೀವನೋಪಾಯದ ಯೋಜನೆಯಾಗಿದೆ. ಇದು ಸ್ವಸಹಾಯ ಗುಂಪುಗಳು ಮತ್ತು ಅವುಗಳ ಒಕ್ಕೂಟಗಳ ಮೂಲಕ ಸಂಘಟಿತರಾದ ಮಹಿಳೆಯರ ಜಾಲವನ್ನು ಆಧರಿಸಿದೆ. ವೈವಿಧ್ಯಮಯ ಜೀವನೋಪಾಯ ಅವಕಾಶಗಳ ಮೂಲಕ ಮಹಿಳೆಯರು ಮತ್ತು ಅವರ ಕುಟುಂಬಗಳು ಸುಸ್ಥಿರ ಆದಾಯವನ್ನು ಗಳಿಸಲು ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಕನಿಷ್ಠ ₹1 ಲಕ್ಷ ವಾರ್ಷಿಕ ಆದಾಯವನ್ನು ಸುಸ್ಥಿರವಾಗಿ ಗಳಿಸುವ ಕುಟುಂಬದ ಸ್ವಸಹಾಯ ಗುಂಪಿನ ಸದಸ್ಯೆಯನ್ನು 'ಲಖ್‌ಪತಿ ದೀದಿ' ಎಂದು ಕರೆಯಲಾಗುತ್ತದೆ. ಈ ಮೌಲ್ಯಮಾಪನವು ಕನಿಷ್ಠ ನಾಲ್ಕು ಕೃಷಿ ಋತುಗಳು ಮತ್ತು/ಅಥವಾ ವ್ಯವಹಾರ ಚಕ್ರಗಳನ್ನು ಒಳಗೊಂಡಿರುತ್ತದೆ. ಆಗಸ್ಟ್ 2023 ರಲ್ಲಿ ಸರ್ಕಾರವು ಎರಡು ಕೋಟಿ ಲಖ್‌ಪತಿ ದೀದಿಯರನ್ನು ರೂಪಿಸುವ ಗುರಿಯನ್ನು ಪ್ರಕಟಿಸಿದಾಗ ಈ ಯೋಜನೆಗೆ ರಾಷ್ಟ್ರೀಯ ವೇಗ ದೊರೆಯಿತು. ಮಧ್ಯಂತರ ಬಜೆಟ್ 2024-25 ರಲ್ಲಿ ಈ ಗುರಿಯನ್ನು ಮೂರು ಕೋಟಿಗೆ ಹೆಚ್ಚಿಸಲಾಯಿತು. ತರುವಾಯ, ಈ ಯೋಜನೆಯು ಡಿಸೆಂಬರ್ 2025 ರ ವೇಳೆಗೆ ಮೂರು ಕೋಟಿಯ ಮೈಲಿಗಲ್ಲನ್ನು ಸಾಧಿಸಿತು.

ಫೆಬ್ರವರಿ 2026 ರಲ್ಲಿ, ಸರ್ಕಾರವು ಆರು ಕೋಟಿ ಲಖ್‌ಪತಿ ದೀದಿಯರ ವರ್ಧಿತ ಗುರಿಯನ್ನು ಪ್ರಕಟಿಸಿತು. ಈ ಮುಂದಿನ ಹಂತವು ಆದಾಯದ ಗಳಿಕೆಯನ್ನು ಕಾಯ್ದುಕೊಳ್ಳುವುದು ಮತ್ತು ಉದ್ಯಮಗಳು ಬೆಳೆಯಲು ಸಹಾಯ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಾರುಕಟ್ಟೆ ಪ್ರವೇಶ, ಉತ್ಪನ್ನಗಳ ಪ್ರದರ್ಶನ, ಬ್ರ್ಯಾಂಡಿಂಗ್ ಮತ್ತು ವಿಶ್ವಾಸಾರ್ಹ ಮಾರಾಟ ಮಾರ್ಗಗಳು ಈ ಪ್ರಯತ್ನಕ್ಕೆ ಪ್ರಮುಖವಾಗಿವೆ. ಸರಸ್ ಮೇಳಗಳು ಜೀವನೋಪಾಯ ಸೃಷ್ಟಿಯಿಂದ ಉದ್ಯಮದ ಬೆಳವಣಿಗೆಯವರೆಗಿನ ಈ ಪರಿವರ್ತನೆಗೆ ಬೆಂಬಲ ನೀಡುತ್ತವೆ. ಅವು ದೊಡ್ಡ ಮಟ್ಟದ ಆರ್ಡರ್‌ಗಳು, ಸಾಂಸ್ಥಿಕ ಮಾರಾಟ ಮತ್ತು ದೀರ್ಘಕಾಲೀನ ಮಾರುಕಟ್ಟೆ ಸಂಪರ್ಕಗಳಿಗೆ ಅವಕಾಶಗಳನ್ನು ಸೃಷ್ಟಿಸಬಹುದು. ವಿಜಯವಾಡ ಮೇಳವು ಯಶಸ್ವಿ ಉದ್ಯಮಿಗಳು, ವ್ಯವಹಾರ ಕಲಿಕೆ ಮತ್ತು ಸಾಂಸ್ಥಿಕ ಬೆಂಬಲಕ್ಕಾಗಿ ಮೀಸಲಾದ ಸ್ಥಳಗಳ ಮೂಲಕ ಈ ಸಂಪರ್ಕಕ್ಕೆ ಜೀವ ತುಂಬುತ್ತದೆ. ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು, ಹೊಸ ಪದ್ಧತಿಗಳನ್ನು ಕಲಿಯಬಹುದು ಮತ್ತು ತಮ್ಮ ಉದ್ಯಮಗಳನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಬಹುದು.

ವಿಜಯವಾಡ: ಪ್ರಾದೇಶಿಕ ವ್ಯಾಪ್ತಿಯೊಂದಿಗೆ ರಾಷ್ಟ್ರೀಯ ಮಾರುಕಟ್ಟೆ

ವಿಜಯವಾಡ ಮೇಳವು ಭಾರತದಾದ್ಯಂತದ ಉತ್ಪನ್ನಗಳು ಮತ್ತು ಸಂಪ್ರದಾಯಗಳನ್ನು ಒಂದೇ ಮಾರುಕಟ್ಟೆಗೆ ತರುತ್ತದೆ. ಭೇಟಿನೀಡುವವರು ಪಂಜಾಬ್‌ನ ಫುಲ್ಕಾರಿ, ಜಮ್ಮು ಮತ್ತು ಕಾಶ್ಮೀರದ ಪಶ್ಮಿನಾ, ತೆಲಂಗಾಣದ ಇಕತ್ ಮತ್ತು ತೆಲಿಯಾ ಜವಳಿ ಹಾಗೂ ಮಿಜೋರಾಂನ ಪೌಂಚೈ ಉತ್ಪನ್ನಗಳನ್ನು ಅನ್ವೇಷಿಸಬಹುದು. ಮಳಿಗೆಗಳಲ್ಲಿ ಮೀನಾಕಾರಿ, ಡೋಕ್ರಾ, ಹಿತ್ತಾಳೆ ಕೆಲಸ, ಮರದ ಕರಕುಶಲ ವಸ್ತುಗಳು ಮತ್ತು ಸಾಂಪ್ರದಾಯಿಕ ವರ್ಣಚಿತ್ರಗಳೂ ಪ್ರದರ್ಶನಗೊಂಡಿವೆ.

.

“ಶಕ್ತಿ - ದ ಸ್ಪಿರಿಟ್ ಆಫ್ ಲಖ್‌ಪತಿ ದೀದಿ” ಶೀರ್ಷಿಕೆಯ 16 ಅಡಿ ಎತ್ತರದ ಕಲಾಕೃತಿಯು ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಇದು ಪಾರಂಪರಿಕ ಕರಕುಶಲತೆಯನ್ನು ಸಂರಕ್ಷಿಸಿ, ತಮ್ಮ ಕೌಶಲ್ಯಗಳನ್ನು ಜೀವನೋಪಾಯ, ಸ್ವಾವಲಂಬನೆ ಮತ್ತು ಸಮೃದ್ಧಿಯಾಗಿ ಪರಿವರ್ತಿಸುವ ಮಹಿಳೆಯರ ಸಾಮೂಹಿಕ ಶಕ್ತಿಯನ್ನು ಸಂಕೇತಿಸುತ್ತದೆ.

ಈ ಮೇಳಕ್ಕೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮತ್ತು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಸೇರಿದಂತೆ ಸರ್ಕಾರಿ ಪಾಲುದಾರರ ಬೆಂಬಲವಿದೆ. ಇದರ ವಿನ್ಯಾಸವು ನೇರ ಮಾರಾಟದ ಜೊತೆಗೆ ಕಲಿಕೆ, ಪ್ರದರ್ಶನಗಳು ಮತ್ತು ಸಂಸ್ಥೆಗಳೊಂದಿಗಿನ ಸಂಪರ್ಕವನ್ನು ಸಂಯೋಜಿಸುತ್ತದೆ. ಈ ಕಾರ್ಯಕ್ರಮವನ್ನು ಕೇವಲ ಭೇಟಿದಾರರಿಗಷ್ಟೇ ಅಲ್ಲದೆ, ಸುಸ್ಥಿರ ಉದ್ಯಮಗಳನ್ನು ಕಟ್ಟಲು ಬಯಸುವ ಉದ್ಯಮಿಗಳಿಗೂ ಉಪಯುಕ್ತವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಉತ್ಪನ್ನಗಳು, ಕೌಶಲ್ಯಗಳು ಮತ್ತು ಅವಕಾಶಗಳನ್ನು ಜೋಡಿಸುವ ಸ್ಥಳಗಳು

ವಿಜಯವಾಡ ರಾಷ್ಟ್ರೀಯ ಸರಸ್ ಮೇಳವು ಸಾಂಪ್ರದಾಯಿಕ ಪ್ರದರ್ಶನ ಮತ್ತು ಚಿಲ್ಲರೆ ಮಾರಾಟ ಮಾದರಿಯನ್ನು ಮೀರಿ, ವಿಷಯಾಧಾರಿತ, ಜ್ಞಾನ ಮತ್ತು ತೊಡಗಿಸಿಕೊಳ್ಳುವಿಕೆಯ ಹಲವು ವಿಶೇಷ ಸ್ಥಳಗಳನ್ನು ಸೃಷ್ಟಿಸುತ್ತಿದೆ. ಈ ಸ್ಥಳಗಳು ಉದ್ಯಮ ಪ್ರದರ್ಶನ, ಸಹಪಠ್ಯ ಕಲಿಕೆ (ಸಹೋದ್ಯೋಗಿಗಳಿಂದ ಕಲಿಕೆ), ಜ್ಞಾನ ವಿನಿಮಯ, ಸರ್ಕಾರಿ ಮತ್ತು ಮಾರುಕಟ್ಟೆ ಪಾಲುದಾರರೊಂದಿಗೆ ಒಗ್ಗೂಡುವಿಕೆ, ಪ್ರಾತ್ಯಕ್ಷಿಕೆಗಳು ಮತ್ತು ಸಂಘಟಿತ ಖರೀದಿದಾರ-ಮಾರಾಟಗಾರರ ಸಂವಾದಗಳಿಗೆ ಅವಕಾಶಗಳನ್ನು ಒದಗಿಸುತ್ತಿವೆ.

ಲಖ್‌ಪತಿ ದೀದಿ ಪೆವಿಲಿಯನ್: ಉದ್ಯಮ ಪಯಣದಿಂದ ಕಲಿಕೆ

'ಲಖ್‌ಪತಿ ದೀದಿ ಪೆವಿಲಿಯನ್' ಯಶಸ್ವಿ ಉದ್ಯಮಗಳನ್ನು ಕಟ್ಟಿದ ಮಹಿಳೆಯರನ್ನು ಪ್ರದರ್ಶಿಸುತ್ತದೆ. ಇದರಲ್ಲಿ ವಾರ್ಷಿಕ ₹10 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಉದ್ಯಮಿಗಳು ಹಾಗೂ ₹1 ಕೋಟಿಗೂ ಹೆಚ್ಚು ಆದಾಯ ಗಳಿಸುವ ಮಹಿಳೆಯರು ಸೇರಿದ್ದಾರೆ. ಈ ಮಹಿಳೆಯರು ತಮ್ಮ ಯಶೋಗಾಥೆ, ಉತ್ಪನ್ನಗಳು, ಉದ್ಯಮ ಮಾದರಿಗಳು ಮತ್ತು ಮಾರುಕಟ್ಟೆ ತಂತ್ರಗಳನ್ನು ಇತರ ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಇವರ ಕಥೆಗಳು ಕೃಷಿ, ಕೃಷಿಯೇತರ ಜೀವನೋಪಾಯ, ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು, ಕೈಮಗ್ಗ ಮತ್ತು ಸೇವೆಗಳು ಸೇರಿದಂತೆ ಉದ್ಯಮ ಬೆಳೆಸುವ ವಿವಿಧ ಮಾರ್ಗಗಳನ್ನು ಎತ್ತಿ ತೋರಿಸುತ್ತವೆ. ಪರಸ್ಪರ ಕಲಿಕೆಯು ಮಹಿಳೆಯರಿಗೆ ತಮ್ಮ ಸ್ವಂತ ಕೌಶಲ್ಯ ಮತ್ತು ಪರಿಸ್ಥಿತಿಗಳಿಗೆ ಸೂಕ್ತವಾದ ಮಾರ್ಗಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಕಲಿಕೆ ಮತ್ತು ಜ್ಞಾನ ಪೆವಿಲಿಯನ್: ಉದ್ಯಮ ಕೌಶಲ್ಯಗಳನ್ನು ಬೆಳೆಸುವುದು

ಉತ್ತಮ ಉತ್ಪನ್ನಗಳಿಗೆ ಅತ್ಯುತ್ತಮ ಉದ್ಯಮ ಪದ್ಧತಿಗಳ ಅಗತ್ಯವಿರುತ್ತದೆ. 'ಕಲಿಕೆ ಮತ್ತು ಜ್ಞಾನ ಪೆವಿಲಿಯನ್' ಅನ್ನು ಸ್ವಸಹಾಯ ಗುಂಪಿನ ಉದ್ಯಮಿಗಳು, ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳು ಖರೀದಿದಾರರು ಮತ್ತು ಇತರ ಪಾಲುದಾರರ ನಡುವೆ ಕಾರ್ಯಾಗಾರಗಳು, ತಜ್ಞರ ಉಪನ್ಯಾಸಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಅನುಭವ ಹಂಚಿಕೆ ಗೋಷ್ಠಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇವು ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಉದ್ಯಮ ಪ್ರಸ್ತಾವನೆಗಳ ಸಿದ್ಧತೆ, ಇ-ಕಾಮರ್ಸ್ ಮತ್ತು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್‌ನಂತಹ ವಿಷಯಗಳನ್ನು ಒಳಗೊಂಡಿವೆ. ಮೇಲಾಗಿ, ಸಾರ್ವಜನಿಕ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲಾಗುತ್ತದೆ. ಇವುಗಳಲ್ಲಿ ನಬಾರ್ಡ್, ಎಫ್‍ಐಸಿಸಿಐ ಸಿಐಐ ಐಟಿಸಿ, ಹಿಂದುಸ್ತಾನ್ ಯೂನಿಲಿವರ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿವೆ. ಇಂತಹ ಸಂವಾದಗಳು ಉದ್ಯಮಿಗಳಿಗೆ ಉತ್ಪನ್ನದ ಪ್ರಸ್ತುತಿಯನ್ನು ಸುಧಾರಿಸಲು ಮತ್ತು ಗ್ರಾಹಕರನ್ನು ತಲುಪಲು ಪ್ರಾಯೋಗಿಕ ಉಪಕರಣಗಳನ್ನು ಪರಿಚಯಿಸುತ್ತವೆ.

ಸಮ್ಮಿಲನ ಪೆವಿಲಿಯನ್ : ಮಹಿಳೆಯರನ್ನು ಬೆಂಬಲದೊಂದಿಗೆ ಜೋಡಿಸುವುದು

ಉದ್ಯಮವನ್ನು ಬೆಳೆಸಲು ಕೇವಲ ಮಾರುಕಟ್ಟೆ ಪ್ರವೇಶಕ್ಕಿಂತ ಹೆಚ್ಚಿನದರ ಅಗತ್ಯವಿರುತ್ತದೆ. ಉದ್ಯಮಿಗಳಿಗೆ ಸಾಲ, ಕೌಶಲ್ಯ, ತಂತ್ರಜ್ಞಾನ, ಗುಣಮಟ್ಟದ ಪ್ರಮಾಣೀಕರಣ ಮತ್ತು ಸರ್ಕಾರದ ಬೆಂಬಲವೂ ಬೇಕಾಗುತ್ತದೆ. 'ಸಮ್ಮಿಲನ ಪೆವಿಲಿಯನ್‌' ಸ್ವಸಹಾಯ ಗುಂಪಿನ ಉದ್ಯಮಿಗಳನ್ನು ಸಂಬಂಧಪಟ್ಟ ಇಲಾಖೆಗಳು, ಹಣಕಾಸು ಸಂಸ್ಥೆಗಳು, ಅಭಿವೃದ್ಧಿ ಸಂಸ್ಥೆಗಳು ಮತ್ತು ತಾಂತ್ರಿಕ ಸಂಸ್ಥೆಗಳೊಂದಿಗೆ ಒಂದೆಡೆ ತರುತ್ತದೆ. ಈ ಸಂಸ್ಥೆಗಳು ಮತ್ತು ವೇದಿಕೆಗಳಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಜವಳಿ ಸಚಿವಾಲಯ, ಒಎನ್‌ಡಿಸಿ, ಸರ್ಕಾರಿ ಇ-ಮಾರುಕಟ್ಟೆ ಮತ್ತು ಟ್ರೈಫೆಡ್ ಸೇರಿವೆ. ಮಹಿಳೆಯರಿಗೆ ಸೂಕ್ತ ಯೋಜನೆಗಳು, ಸೇವೆಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವುದು ಈ ಪೆವಿಲಿಯನ್‌ನ ಉದ್ದೇಶವಾಗಿದೆ.

ಪ್ರಾತ್ಯಕ್ಷಿಕಾ ಪೆವಿಲಿಯನ್: ಉತ್ಪನ್ನಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸುವುದು

ಸಿದ್ಧವಾದ ಉತ್ಪನ್ನವು ಹೆಚ್ಚಾಗಿ ಕೌಶಲ್ಯ, ಸಮಯ ಮತ್ತು ತಂತ್ರದ ಕಥೆಯನ್ನು ಒಳಗೊಂಡಿರುತ್ತದೆ. 'ಪ್ರಾತ್ಯಕ್ಷಿಕಾ ಪೆವಿಲಿಯನ್' ಭೇಟಿದಾರರಿಗೆ ಆ ಪ್ರಕ್ರಿಯೆಯನ್ನು ನೇರವಾಗಿ ನೋಡಲು ಅವಕಾಶ ನೀಡುತ್ತದೆ. ಮಹಿಳಾ ಉದ್ಯಮಿಗಳು ಮತ್ತು ಕುಶಲಕರ್ಮಿಗಳು ಸಾಂಪ್ರದಾಯಿಕ ಮತ್ತು ಆಧುನಿಕ ಉತ್ಪಾದನಾ ವಿಧಾನಗಳ ನೇರ (ಲೈವ್) ಪ್ರಾತ್ಯಕ್ಷಿಕೆಯನ್ನು ನೀಡುತ್ತಿದ್ದಾರೆ. ಈ ಚಟುವಟಿಕೆಗಳಲ್ಲಿ ಮಡಕೆ ತಯಾರಿಕೆ, ಸೂಜಿ ಕೆಲಸ ಮತ್ತು ಕನ್ನಡಿ ಕೆಲಸದ (ಮಿರರ್ ವರ್ಕ್) ಕಸೂತಿ ಸೇರಿವೆ. ಲಖ್‌ಪತಿ ದೀದಿಯರ ನೇರ ಪ್ರಾತ್ಯಕ್ಷಿಕೆಗಳು ಪ್ರಾಯೋಗಿಕ ಕಲಿಕೆ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತವೆ. ಅವು ಭೇಟಿದಾರರಿಗೆ ಹಸ್ತಚಾಲಿತ ಉತ್ಪನ್ನಗಳ ಹಿಂದಿನ ಕರಕುಶಲತೆಯನ್ನು ಮೆಚ್ಚಲು ಸಹಾಯ ಮಾಡುತ್ತವೆ, ಹಾಗೂ ಈ 'ಡೆಮೊ ಮತ್ತು ಲೈವ್ ಲರ್ನಿಂಗ್ ಏರಿಯಾ' ಒಂದು ವಿಶೇಷ ಅನುಭವವನ್ನು ನೀಡುತ್ತದೆ.

.

ಇಂಡಿಯಾ ಫುಡ್ ಕೋರ್ಟ್: ಪ್ರಾದೇಶಿಕ ರುಚಿಗಳು ಮತ್ತು ಮಹಿಳಾ ಉದ್ಯಮ

ಆಹಾರವು ಗ್ರಾಮೀಣ ಉದ್ಯಮಗಳು ಗ್ರಾಹಕರನ್ನು ತಲುಪುವ ಮತ್ತೊಂದು ಮಾರ್ಗವಾಗಿದೆ. 'ಇಂಡಿಯಾ ಫುಡ್ ಕೋರ್ಟ್' 50 ಆಹಾರ ಮಳಿಗೆಗಳನ್ನು ಹೊಂದಿದ್ದು, ಶುದ್ಧ ಮಸಾಲೆಗಳನ್ನು ಬಳಸಿ ಸಾಂಪ್ರದಾಯಿಕ ವಿಧಾನಗಳಲ್ಲಿ ಸಿದ್ಧಪಡಿಸಿದ ಪ್ರಾದೇಶಿಕ ಖಾದ್ಯಗಳನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು 28ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 200ಕ್ಕೂ ಹೆಚ್ಚು ಪ್ರಥಮ ತಲೆಮಾರಿನ ಮಹಿಳಾ ಆಹಾರ ಸೇವಾ ಉದ್ಯಮಿಗಳನ್ನು ಒಂದೆಡೆ ತರುತ್ತದೆ. ಭೇಟಿದಾರರು ಗೋಲ್ ಗಪ್ಪೆ, ಚಾಟ್ ಮತ್ತು ಕಬಾಬ್‌ಗಳಂತಹ ಜನಪ್ರಿಯ ರಸ್ತೆಬದಿ ತಿನಿಸುಗಳನ್ನು ಸವಿಯಬಹುದು. ಪ್ರಾದೇಶಿಕ ಖಾದ್ಯಗಳಲ್ಲಿ ಬಿಹಾರದ ಲಿಟ್ಟಿ ಚೋಖಾ, ಹೈದರಾಬಾದಿ ದಮ್ ಬಿರಿಯಾನಿ, ಅಸ್ಸಾಂನ ಮಶ್ರೂಮ್ ಪಿಠಾ ಮತ್ತು ಪಂಜಾಬ್‌ನ ಮಕ್ಕೆ ದಿ ರೋಟಿ ವಿತ್ ಸಾಗ್ ಸೇರಿವೆ. ಇತರ ಉದಾಹರಣೆಗಳಲ್ಲಿ ಕೇರಳದ ಅಟ್ಟಪ್ಪಾಡಿಯ ವನ ಸುಂದರಿ ಮತ್ತು ಛತ್ತೀಸ್‌ಗಢದ ಚೌಸೆಲಾ ಸೇರಿವೆ. ಈ ಫುಡ್ ಕೋರ್ಟ್ ಮಹಿಳೆಯರಿಗೆ ಪ್ರಾದೇಶಿಕ ಪಾಕಪದ್ಧತಿಯ ಸಂಪ್ರದಾಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಅವಕಾಶವನ್ನು ನೀಡುತ್ತದೆ. ಇದು ಆಹಾರ ತಯಾರಿಕೆ ಮತ್ತು ಸೇವೆಯ ಉದ್ಯಮವನ್ನು ಮಹಿಳಾ ನೇತೃತ್ವದ ಉದ್ಯಮಶೀಲತೆಯ ವಿಶಾಲ ಯಶೋಗಾಥೆಯ ಭಾಗವಾಗಿಸುತ್ತದೆ.

.

ಸಾಂಸ್ಕೃತಿಕ ಪ್ರದರ್ಶನಗಳು: ಭಾರತದ ವೈವಿಧ್ಯತೆಯ ಸಂಭ್ರಮಾಚರಣೆ

ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಗವಹಿಸುವ ಪ್ರದೇಶಗಳ ಸಾಂಪ್ರದಾಯಿಕ ಕಲಾಪ್ರಕಾರಗಳು, ಕರಕುಶಲ ವಸ್ತುಗಳು, ಜವಳಿ, ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿದ್ದು, ಭೇಟಿದಾರರಿಗೆ ಸಮಗ್ರ ರಾಷ್ಟ್ರೀಯ ಅನುಭವವನ್ನು ನೀಡುತ್ತವೆ. ಈ ಪ್ರದರ್ಶನಗಳು ಪ್ರದರ್ಶನದಲ್ಲಿರುವ ಹಲವು ಉತ್ಪನ್ನಗಳ ಹಿಂದಿನ ಪರಂಪರೆಯನ್ನು ಸಂಭ್ರಮಿಸುತ್ತವೆ. ಇವು ಭಾಗವಹಿಸುವ ರಾಜ್ಯಗಳಿಗೆ ತಮ್ಮ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಪ್ರಸ್ತುತಪಡಿಸಲು ನೆರವಾಗುತ್ತವೆ.

ಡಿಜಿಟಲ್ ಸಂಯೋಜನೆ: ಭೌತಿಕ ಮಳಿಗೆಗಳಿಂದ ಡಿಜಿಟಲ್ ಮಾರುಕಟ್ಟೆಗಳವರೆಗೆ

ಸರಸ್ ಮೇಳದಲ್ಲಿ ವ್ಯವಹಾರ ಚಟುವಟಿಕೆಗಳಿಗೆ ಡಿಜಿಟಲ್ ಪಾವತಿಗಳು ಪ್ರಮುಖ ಪ್ರೇರಕಶಕ್ತಿಯಾಗಿವೆ. ಯುಪಿಐ ವಹಿವಾಟುಗಳು ಅನುಕೂಲಕರ ಮತ್ತು ಪಾರದರ್ಶಕ ಪಾವತಿಗಳಿಗೆ ಬೆಂಬಲ ನೀಡುತ್ತವೆ, ಹಾಗೂ ಫುಡ್ ಕೋರ್ಟ್ ಮುಖ್ಯವಾಗಿ ನಗದುರಹಿತ ವಹಿವಾಟುಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅದೇ ಸಮಯದಲ್ಲಿ, ಹಿರಿಯ ನಾಗರಿಕರು ಮತ್ತು ನಗದು ಪಾವತಿಯನ್ನು ಬಯಸುವ ಭೇಟಿದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಕೂಪನ್-ಆಧಾರಿತ ನಗದು ಪಾವತಿ ಸೌಲಭ್ಯವನ್ನೂ ಒದಗಿಸಲಾಗಿದೆ. ಇದು ಎಲ್ಲರಿಗೂ ಸುಗಮ ಮತ್ತು ಒಳಗೊಳ್ಳುವಿಕೆಯ ಅನುಭವವನ್ನು ಖಚಿತಪಡಿಸುತ್ತದೆ.

.

ಮತ್ತೊಂದೆಡೆ, ಮೇಳ ಮುಗಿದ ತಕ್ಷಣ ಮಾರುಕಟ್ಟೆ ಅವಕಾಶವು ಕೊನೆಗೊಳ್ಳಬಾರದು. ಡಿಜಿಟಲ್ ಮಾರ್ಗಗಳು ಉದ್ಯಮಗಳು ಕಾರ್ಯಕ್ರಮವನ್ನು ಮೀರಿ ಮತ್ತು ಭೌಗೋಳಿಕ ಗಡಿಗಳನ್ನು ದಾಟಿ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತವೆ. ಆದ್ದರಿಂದ, 'ಸರಸ್' ವ್ಯವಸ್ಥೆಯು ಭೌತಿಕ ಮೇಳಗಳನ್ನು 'ಸರಸ್ ಗ್ಯಾಲರಿ' ಮತ್ತು ಇ-ಕಾಮರ್ಸ್ ಮಾರ್ಗಗಳೊಂದಿಗೆ ಸಂಯೋಜಿಸುತ್ತದೆ. 'ಇ-ಸರಸ್' ವೇದಿಕೆಯು ಗ್ರಾಹಕರಿಗೆ ಸ್ವಸಹಾಯ ಗುಂಪಿನ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಕಂಡುಕೊಳ್ಳಲು ಮತ್ತು ಖರೀದಿಸಲು ಆನ್‌ಲೈನ್ ಮಾರ್ಗವನ್ನು ಒದಗಿಸುತ್ತದೆ. ಇದು ನೇರ ಮಾರಾಟವನ್ನು ಮೀರಿ ಮಾರುಕಟ್ಟೆ ಪ್ರವೇಶದ ವಿಧಾನವನ್ನು ವಿಸ್ತರಿಸುತ್ತದೆ ಹಾಗೂ ಮೇಳದ ನಂತರವೂ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ಉಳಿಯಲು ನೆರವಾಗುತ್ತದೆ.

2025 ರಲ್ಲಿ 'ಸರಸ್ ಮೇಳ ಡಿಜಿಟಲ್ ಆ್ಯಪ್' ಎಂಬ ವಿಶೇಷ ಆ್ಯಪ್ ಅನ್ನು ಪರಿಚಯಿಸಲಾಯಿತು. ಇದು ಸ್ವಸಹಾಯ ಗುಂಪುಗಳ ನಾಮನಿರ್ದೇಶನಗಳು, ಹಾಜರಾತಿ ನಿರ್ವಹಣೆ ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಬೆಂಬಲ ನೀಡುತ್ತದೆ. ಭೌತಿಕ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಮಾರ್ಗಗಳು ಒಟ್ಟಾಗಿ ಮಾರುಕಟ್ಟೆಗೆ ಪೂರಕ ಹಾದಿಗಳನ್ನು ಒದಗಿಸುತ್ತವೆ. ಸರಸ್ ಮೇಳವು ಗ್ರಾಹಕರು ಮತ್ತು ಖರೀದಿದಾರರೊಂದಿಗೆ ನೇರ ಸಂಪರ್ಕವನ್ನು ಸೃಷ್ಟಿಸುತ್ತದೆ. ಆನ್‌ಲೈನ್ ಮಾರ್ಗಗಳು ಕಾರ್ಯಕ್ರಮ ಮುಗಿದ ನಂತರವೂ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ವಿಸ್ತರಿಸಲು ಸಹಾಯ ಮಾಡುತ್ತವೆ.

ರಾಷ್ಟ್ರೀಯ ಮಾರುಕಟ್ಟೆ ಪ್ರವೇಶವನ್ನು ಪ್ರಾಂತ್ಯಗಳಿಗೆ ಕೊಂಡೊಯ್ಯುವುದು

ವಿಜಯವಾಡ ರಾಷ್ಟ್ರೀಯ ಸರಸ್ ಮೇಳವು ಮಾರುಕಟ್ಟೆ ಪ್ರವೇಶ ವೇದಿಕೆಯನ್ನು ಹೊಸ ಪ್ರದೇಶಕ್ಕೆ ವಿಸ್ತರಿಸುವುದನ್ನು ಪ್ರತಿನಿಧಿಸುತ್ತದೆ. ವಿವಿಧ ಸ್ಥಳಗಳಲ್ಲಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಸ್ಥಳೀಯ ಗ್ರಾಹಕರು, ಖರೀದಿದಾರರು ಮತ್ತು ಸಾಂಸ್ಥಿಕ ಪಾಲುದಾರರಿಗೆ ಅವುಗಳನ್ನು ಹತ್ತಿರ ತರಬಹುದು. ಇದು ವಿವಿಧ ರಾಜ್ಯಗಳ ಉತ್ಪಾದಕರಿಗೆ ವಿಶಾಲ ಮಾರುಕಟ್ಟೆಗಳನ್ನು ಪರಿಚಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ವಿಧಾನವು 'ಡಿಎವೈ-ಎನ್‌ಆರ್‌ಎಲ್‌ಎಂ' ಮತ್ತು 'ಲಖ್‌ಪತಿ ದೀದಿ' ಯೋಜನೆಯ ವಿಶಾಲ ಉದ್ದೇಶಗಳಿಗೆ ಬೆಂಬಲ ನೀಡುತ್ತದೆ. ಮಹಿಳೆಯರಿಗೆ ಸುಸ್ಥಿರ ಜೀವನೋಪಾಯದ ಅಗತ್ಯವಿದೆ, ಆದರೆ ಉತ್ಪನ್ನದ ಮೌಲ್ಯವನ್ನು ಸುಧಾರಿಸಲು ಮತ್ತು ಮಾರಾಟವನ್ನು ವಿಸ್ತರಿಸಲು ಮಾರ್ಗಗಳ ಅಗತ್ಯವೂ ಇದೆ. ಮಾರಾಟ, ಕಲಿಕೆ ಮತ್ತು ಸಾಂಸ್ಥಿಕ ಸಂಪರ್ಕಗಳನ್ನು ಸಂಯೋಜಿಸುವ ವೇದಿಕೆಗಳು ಆ ಪ್ರಕ್ರಿಯೆಗೆ ಕೊಡುಗೆ ನೀಡುತ್ತವೆ.

(ದೆಹಲಿ ಎನ್‌ಸಿಆರ್ ಪ್ರದೇಶದ ಹೊರಗೆ ನಡೆಯುತ್ತಿರುವ) ಈ ರಾಷ್ಟ್ರೀಯ ಸರಸ್ ಮೇಳವು 2026 ರ ಅಕ್ಟೋಬರ್ 2 ರಿಂದ ಪ್ರಾರಂಭವಾದ 'ಸೇವಾ ಪಖ್ವಾಡಾ'  ಸಂದರ್ಭದಲ್ಲಿ ಸರ್ಕಾರವು ಕೈಗೊಂಡ ಒಂದು ಮೈಲಿಗಲ್ಲಿನ ಉಪಕ್ರಮವಾಗಿದೆ. ಸರಸ್ ಮೇಳಗಳು 'ವೋಕಲ್ ಫಾರ್ ಲೋಕಲ್' ಮತ್ತು 'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಯನ್ನೂ ಉತ್ತೇಜಿಸುತ್ತವೆ. ಇವು ಗ್ರಾಹಕರಿಗೆ ಗ್ರಾಮೀಣ ಉತ್ಪನ್ನಗಳನ್ನು ಕಂಡುಕೊಳ್ಳಲು ಮತ್ತು ಅವುಗಳ ಹಿಂದಿರುವ ಮಹಿಳಾ ಉದ್ಯಮಿಗಳನ್ನು ಭೇಟಿಯಾಗಲು ನೇರ ಮಾರ್ಗವನ್ನು ಒದಗಿಸುತ್ತವೆ. ಪಾರಂಪರಿಕ ಕೌಶಲ್ಯಗಳನ್ನು ರಕ್ಷಿಸುತ್ತಾ ಮಹಿಳಾ ನೇತೃತ್ವದ ಉದ್ಯಮಗಳನ್ನು ಬಲಪಡಿಸಲು ಇವು ಅವಕಾಶಗಳನ್ನು ಸೃಷ್ಟಿಸುತ್ತವೆ. ಮೂಲತಃ, ರಾಷ್ಟ್ರೀಯ ಸರಸ್ ಮೇಳವು ಪ್ರತಿಯೊಂದು ಉತ್ಪನ್ನ, ಕರಕುಶಲತೆ ಮತ್ತು ಉದ್ಯಮದ ಹಿಂದಿರುವ ಮಹಿಳೆಯರ ಬಗ್ಗೆ ಹಾಗೂ ಕೌಶಲ್ಯದಿಂದ ಉದ್ಯಮ, ಉದ್ಯಮದಿಂದ ಮಾರುಕಟ್ಟೆ ಮತ್ತು ಮಾರುಕಟ್ಟೆಯಿಂದ ಸುಸ್ಥಿರ ಜೀವನೋಪಾಯದವರೆಗಿನ ಪಯಣದ ಕುರಿತಾಗಿದೆ.

References

Ministry of Rural Development

https://www.esaras.in/

https://x.com/esarasaajeevika?lang=en

https://www.pib.gov.in/PressReleaseDetail.aspx?PRID=2322458&reg=48&lang=1

Ministry of Electronics & Information Technology

https://play.google.com/store/apps/details?id=com.esaras&hl=en_IN

President’s Secretariat

https://www.pib.gov.in/PressReleaseIframePage.aspx?PRID=2323813&reg=48&lang=2

Government of Telangana

https://www.efms.serp.telangana.gov.in/Livelihoods/SARAS/Views/SarasHome.aspx

 

Click to see pdf

 

*****

 

 

(Explainer ID: 160521) आगंतुक पटल : 10
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी